ಸಾಹಿತ್ಯದಲ್ಲಿ ಪತ್ತೇದಾರಿ ಕಥೆ-ಕಾದಂಬರಿಗಳ ಪ್ರಸ್ತುತತೆ ಏನು?

Date: 02-12-2024

Location: ಬೆಂಗಳೂರು


“ಈ ಕಾದಂಬರಿ ತನ್ನ ೧೦೩ ಪುಟಗಳ ಉದ್ದಕ್ಕೂ ಕುತೂಹಲ ಮೂಡಿಸಿಕೊಂಡು ಹೋಗುತ್ತದೆ. ಇಲ್ಲಿ ಪತ್ತೇದಾರಿ ಕಥೆ ಮಾತ್ರವಲ್ಲದೆ ಸಮಾಜದಲ್ಲಿ ಕಂಡು ಬರುವ ಇತರ ಹುಳುಕುಗಳ ಬಗೆಗೂ ಓದುಗರ ಗಮನ ಸೆಳೆಯಲಾಗಿದೆ,“ ಎನ್ನುತ್ತಾರೆ ಡಾ. ಪಾರ್ವತಿ ಜಿ.ಐತಾಳ್. ಅವರು ನರೇಂದ್ರ ಎಸ್. ಗಂಗೊಳ್ಳಿ ಅವರ "ನಿಭೃತ" ಕೃತಿ ಕುರಿತು ಬರೆದ ವಿಮರ್ಶೆ.

ಸಾಹಿತ್ಯದಲ್ಲಿ ಪತ್ತೇದಾರಿ ಕಥೆ-ಕಾದಂಬರಿಗಳ ಪ್ರಸ್ತುತತೆ ಏನು? ಓದುಗರ ಕುತೂಹಲ ಹೆಚ್ಚಿಸುತ್ತ ಅವರಿಗೆ ಮನೋರಂಜನೆ ನೀಡುವುದೆ? ಸಮಾಜದಲ್ಲಿ ನಡೆಯುವ ಅಪರಾಧಗಳ ಕುರಿತು ಮಾಹಿತಿ ನೀಡುವುದೆ? ಪತ್ತೇದಾರರ ಜಾಣ್ಮೆಯ ಬಹುಸಾಧ್ಯತೆಗಳ ಪ್ರದರ್ಶನಕ್ಕೊಂದು ವೇದಿಕೆ ಕಲ್ಪಿಸುವುದೆ? ಅಥವಾ ಜನಪ್ರಿಯ ಸಾಹಿತ್ಯ ಜಗತ್ತಿನಲ್ಲಿ ಒಪ್ಪಿತ ರೂಢಿಗತ ಸಂಪ್ರದಾಯವಾಗಿ ಬೆಳೆದು ಬಂದಿರುವ ಬರೇ ಒಂದು ಕಥಾ ಕಾಲಕ್ಷೇಪವೆ? ಈ ಬಗ್ಗೆ ಚಿಂತನೆ ನಡೆಸುತ್ತಿದ್ದಂತೆ ನನಗನ್ನಿಸಿದ್ದು ಸಾಹಿತ್ಯದ ಈ ಒಂದು ಪ್ರಕಾರ ದಿನೇ ದಿನೇ ಅಪರಾಧಗಳು ಹೆಚ್ಚುತ್ತಿರುವ ನಮ್ಮ ಇಂದಿನ ಸಂದರ್ಭದಲ್ಲಿ ಅತ್ಯಗತ್ಯ ಎಂದು. ಅಪರಾಧಿಗಳನ್ನು ಪತ್ತೆ ಹಚ್ಚುವುದರ ಕುರಿತಾದ ಕಥೆಗಳು ನಮ್ಮ ಪಾರಂಪರಿಕ ಸಾಹಿತ್ಯದಲ್ಲೂ ಇದ್ದವು. ಆದರೆ ಅದು ಒಂದು ಪ್ರಕಾರವಾಗಿ ಬೆಳೆದಿರಲಿಲ್ಲ. ೧೯ ನೆಯ ಶತಮಾನದ ಪಾಶ್ಚಾತ್ಯ ಸಾಹಿತ್ಯದಲ್ಲಿ ಎಡ್ಗರ್ ಅಲನ್ ಪೋ, ಜಿ.ಕೆ.ಚೆಸ್ಟರ್ ಟನ್, ಆರ್ಥರ್ ಕಾನನ್ ಡಾಯ್ಲ್ ಮೊದಲಾದವರ ಮೂಲಕ ಅದು ಒಂದು ಶಿಸ್ತಾಗಿ ಬೆಳೆಯಿತು. ಅವರ ಎಲ್ಲರ ಕಥೆಗಳಲ್ಲಿ ಡಿಟೆಕ್ಟಿವ್‌ ಅನ್ನುವವನು ಬಹಳ ಮುಖ್ಯವಾದ ಒಂದು ಪಾತ್ರ. ಮತ್ತು ಒಬ್ಬ ಲೇಖಕನ ಎಲ್ಲ ಕಥೆಗಳಲ್ಲಿ ಆ ಪಾತ್ರ ಒಬ್ಬನದೇ ಆಗಿರುತ್ತಿತ್ತು.‌ ಉದಾಹರಣೆಗೆ ಷರ್ಲಾಕ್‌ ಹೋಮ್ಸ್ ಅರ್ಥರ್ ಕಾನನ್ ಡಾಯ್ಲ್ ಬರೆದ ಎಲ್ಲಾ ಕಥೆಗಳಲ್ಲಿ ಬರುವ ಒಂದು ಅದ್ಭುತ ಪಾತ್ರ. ಕನ್ನಡದಲ್ಲೂ ೨೦ನೆಯ ಶತಮಾನದಲ್ಲಿ ದ್ವಿತೀಯ ಭಾಗದಲ್ಲಿ ಒಂದಷ್ಟು ಪತ್ತೇದಾರಿ ಕಾದಂಬರಿಗಳು ಬಂದವು. ಪತ್ತೇದಾರ ಮಧುಸೂದನ, ಪತ್ತೇದಾರ ಪುರುಷೋತ್ತಮ ಮೊದಲಾದ ಪಾತ್ರಗಳು ಕನ್ನಡದ ಓದುಗರಿಗೆ ಚಿರಪರಿಚಿತ.

ಇತ್ತೀಚಿಗೆ ಬಿಡುಗಡೆಯಾದ ಲೇಖಕ ನರೇಂದ್ರ ಎಸ್. ಗಂಗೊಳ್ಳಿಯವರ ' ನಿಭೃತ' ಎಂಬ ಪತ್ತೇದಾರಿ ಕಾದಂಬರಿಯಲ್ಲಿ ಪತ್ತೇದಾರನಾಗಿ ಕೆಲಸ ಮಾಡುವವನು ಅಮಿತ್ ಕೋಡಿ ಎಂಬ ಆ ಊರಿನ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನೇ ಆಗಿರುತ್ತಾನೆ. ಅವನ ಪದನಾಮ ಡಿಟೆಕ್ಟಿವ್‌ ಅಲ್ಲದಿದ್ದರೂ ಇತರ ಎಲ್ಲ ಪತ್ತೇದಾರರಂತೆ ಅವನು ಪ್ರಕರಣಗಳ ವಿಚಾರಣೆ ನಡೆಸಿ ಅಪರಾಧಿಗಳ ಹಿಂದಿನ ನಿಭೃತ(ರಹಸ್ಯ)ಗಳನ್ನು ಬಯಲು ಮಾಡುತ್ತಾನೆ. ಕಾದಂಬರಿಯ ವಸ್ತು ಪೂರ್ತಿಯಾಗಿ ಪ್ರಸ್ತುತ ಕಾಲಕ್ಕೆ ಸಂಬಂಧಿಸಿದ್ದೇ ಅಗಿದೆ. ಮನಸ್ವಿನಿ ಎಂಬ ಮುಗ್ಧ ಹೆಣ್ಣಿನ ಅನಿರೀಕ್ಷಿತ ಸಾವಿನಿಂದ ಆರಂಭವಾಗುವ ಕಾದಂಬರಿಯಲ್ಲಿ ಒಂದರ ಹಿಂದೆ ಇನ್ನೊಂದು ಸಾವುಗಳು - ಕೊಲೆಗಳು ಸಂಭವಿಸುತ್ತ ಒಂದು ಭಯಾನಕ ವಾತಾವರಣವನ್ನು ಸೃಷ್ಟಿಸುತ್ತವೆ.

ನಮ್ಮ ಕಣ್ಣಿಗೆ ಕಾಣಿಸುವ ಮೊದಲ ಪಾತ್ರ ಮನಸ್ವಿನಿ ಎಂಬ ಸುಂದರ ಕಾಲೇಜು ಯುವತಿ. ತಾನಾಯಿತು ತನ್ನ ಓದಾಯಿತು ಎಂದು ಗಂಭೀರಳಾಗಿದ್ದ ಆಕೆ ಸಮಾಜ ಕಂಟಕ ರೋಹಿತನ ಬಣ್ಣದ ಮಾತಿಗೆ ಮರುಳಾಗಿ ಅವನ ಜತೆಗೆ ಹೋಗುತ್ತಾಳೆ. ಅವನಿಗೆ ತನ್ನನ್ನು ಕೊಟ್ಟುಕೊಂಡ ನಂತರ ಅವನು ವಂಚಕ ಎನ್ನುವುದು ಗೊತ್ತಾಗಿ ಅವಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅದು ಆತ್ಮಹತ್ಯೆಯೇ ಕೊಲೆಯೇ ಎಂಬ ವಿಷಯದ ಕುರಿತು ಅಮಿತ್ ಕೋಡಿ ತನಿಖೆ ನಡೆಸುತ್ತಾನೆ. ಮುಂದೆ ಒಂದಾದ ಮೇಲೊಂದರಂತೆ ಸಾವುಗಳು ಸಂಭವಿಸುತ್ತವೆ. ವಿಚಾರಣೆಯ ಭಾರವೂ ಹೆಚ್ಚಾಗುತ್ತದೆ.

ತನ್ನ ಮಗ ಸುಮಿತ್ ಆತ್ಮಹತ್ಯೆ ಮಾಡಿಕೊಂಡಾಗ ಅವನ ರಹಸ್ಯವನ್ನು ತಕ್ಷಣವೇ ತಿಳಿದರೂ ಅದು ಸಾರ್ವಜನಿಕರಿಗೆ ಗೊತ್ತಾದರೆ ಎಂಬ ಭಯದಿಂದ ಅವನು ಹೃದಯಾಘಾತದಿಂದ ಸತ್ತನೆಂದು ಹೇಳಿ ಯಾವುದೇ ತನಿಖೆಗೆ ಒಳಪಡಿಸದೆ ಅವನ ಶವವನ್ನು ಸುಟ್ಟ ನಂತರ ಅಪರಾಧಿ ಭಾವವು ಅಮಿತ್ ನ ಮನಸ್ಸನ್ನು ಕ್ಷಣ ಕ್ಷಣವೂ ಚುಚ್ಚುತ್ತಿರಲಾಗಿ ಅಮಿತ್ ಕೊನೆಯಲ್ಲಿ ತನ್ನ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಒಂದು ಶಾಲೆಯಲ್ಲಿ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸುವ ಒಬ್ಬ ಅಧ್ಯಾಪಕನಾಗುವ ನಿರ್ಧಾರ ತೆಗೆದುಕೊಳ್ಳುವುದು ಒಂದು ಅನಿರೀಕ್ಷಿತ ತಿರುವು. ವೃತ್ತಿಯಲ್ಲಿ ಪರಿಣತನಾಗಿದ್ದು ಪ್ರಾಮಾಣಿಕನಾಗಿ ದುಡಿದು ಒಳ್ಳೆಯ ಹೆಸರು ಪಡೆದರೂ ಮಗನನ್ನು ಒಬ್ಬ ಸಭ್ಯ ಪ್ರಜೆಯಾಗಿ ಬೆಳೆಸದಿದ್ದುದು ತನ್ನ ವೈಫಲ್ಯವೂ ಹೌದು ಎಂಬುದನ್ನು ಅವನು ಅರ್ಥಮಾಡಿಕೊಳ್ಳುತ್ತಾನೆ. ಇನ್ನು ಮುಂದೆ ಆ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸುವವರಿಗೆ ಇದು ಒಂದು ಪಾಠ.

'ನಿಭೃತ' ಕಾದಂಬರಿ ತನ್ನ ೧೦೩ ಪುಟಗಳ ಉದ್ದಕ್ಕೂ ಕುತೂಹಲ ಮೂಡಿಸಿಕೊಂಡು ಹೋಗುತ್ತದೆ. ಇಲ್ಲಿ ಪತ್ತೇದಾರಿ ಕಥೆ ಮಾತ್ರವಲ್ಲದೆ ಸಮಾಜದಲ್ಲಿ ಕಂಡು ಬರುವ ಇತರ ಹುಳುಕುಗಳ ಬಗೆಗೂ ಓದುಗರ ಗಮನ ಸೆಳೆಯಲಾಗಿದೆ. ತಮ್ಮ ಅಧಿಕಾರ ಪ್ರಭಾವಗಳನ್ನು ಬಳಸಿ ಅಮಲು ಪದಾರ್ಥಗಳ ಅಧೋಲೋಕದತ್ತ ಯುವ ಜನತೆಯನ್ನು ತಳ್ಳುವ ಸ್ವಾರ್ಥಿ ರಾಜಕಾರಣಿಗಳು, ಅಪರಾಧ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳಿಗೆ ಅವರು ನೀಡುವ ಕುಮ್ಮಕ್ಕು ,ಅಪರಾಧ ಜಗತ್ತಿನೊಳಗಿನ ಮನುಷ್ಯರ ಸ್ವಭಾವ-ವರ್ತನೆ-ದುರಾಲೋಚನೆ-ಕುಟಿಲೋಪಾಯಗಳು ಮತ್ತು ಅವೆಲ್ಲವನ್ನೂ ಭೇದಿಸಲು ಪೋಲಿಸ್ ಡಿಪಾರ್ಟ್ ಮೆಂಟಿನವರು ಜಾಣ್ಮೆಯಿಂದ ಮತ್ತು ತಮ್ಮ ಸೂಕ್ಷ್ಮ ಅವಲೋಕನದಿಂದ ತೆಗೆದುಕೊಳ್ಳುವ ಹೆಜ್ಜೆಗಳು-ಇವೆಲ್ಲದರ ಸರಿಯಾದ ಕಲ್ಪನೆ ಲೇಖಕನಿಗೆ ಇರಬೇಕಾಗುತ್ತದೆ.‌ ಅನೇಕ ವಿಷಯಗಳ - ವಿಜ್ಞಾನ, ಆರೋಗ್ಯ ಶಾಸ್ತ್ರ, ಔಷಧ ಶಾಸ್ತ್ರ, ಮನಶ್ಶಾಸ್ತ್ರ, ಅಪರಾಧ ಶಾಸ್ತ್ರ-ಇತ್ಯಾದಿಗಳ ಕುರಿತು ಜ್ಞಾನವಿರಬೇಕಾಗುತ್ತದೆ. ಮಾಹಿತಿ ಸಂಗ್ರಹಣೆ ಮಾಡಬೇಕಾಗುತ್ತದೆ. ಯಾಕೆಂದರೆ ಅಪರಾಧ ಮತ್ತು ಪತ್ತೆಗಳ ವೃತ್ತ ಪೂರ್ಣವಾಗುವುದು ಒಂದು ನಿರ್ದಿಷ್ಟ ಲೆಕ್ಕಾಚಾರದ ಮೇಲೆ. ಅಲ್ಲಿ ಸ್ವಲ್ಪವೂ ಲೋಪವಾಗುವಂತಿಲ್ಲ. ಲೇಖಕ ಗುಣಾಕಾರ-ಭಾಗಾಕಾರ ಹಾಕಿ ಎಲ್ಲವನ್ನೂ ಎಚ್ಚರಿಕೆಯಿಂದ ಗಮನದಲ್ಲಿ ಇಟ್ಟುಕೊಳ್ಳ ಬೇಕಾಗುತ್ತದೆ. ಈ ಕೆಲಸವನ್ನು ನರೇಂದ್ರ ಗಂಗೊಳ್ಳಿಯವರು ಬಹಳ ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಆರಂಭದಲ್ಲಿ ಅವರು ಸೃಷ್ಟಿಸಿದ ಕನಸಿನ ಭಯಾನಕ ವಾತಾವರಣವು ಮುಂದೆ ನಡೆಯುವ ದುರಂತಕ್ಕೆ ಪೂರ್ವಭಾವಿಯಾಗಿ ಪ್ರವರ್ತಿಸುತ್ತದೆ. ಇದು ಒಂದು ಒಳ್ಳೆಯ ತಂತ್ರವೂ ಹೌದು. ನಿರೂಪಣೆಗೆ ಅವರು ಬಳಸಿದ ಭಾಷೆ ಚೆನ್ನಾಗಿದೆ. ಅಲ್ಲಲ್ಲಿ ಬಳಸಿದ ಹಾವು, ಕಾಗೆ ಕೊನೆಗೆ ಹಂಸಗಳ ಸಂಕೇತಗಳು ಕಥೆಯ ಸಂದರ್ಭಗಳಿಗೆ ಪೂರಕವಾಗಿವೆ. ಒಟ್ಟಿನಲ್ಲಿ ಕನ್ನಡ ಪತ್ತೇದಾರಿ ಸಾಹಿತ್ಯಕ್ಕೆ ಇದು ಒಂದು ಒಳ್ಳೆಯ ಕೊಡುಗೆಯೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.

(ಇದು ಕೃತಿಕಾರರು ಹೇಳಿಕೊಂಡಿರುವಂತೆ ಕಿರು ಕಾದಂಬರಿಯಲ್ಲ. ಪೂರ್ಣ ಪ್ರಮಾಣದ ಕಾದಂಬರಿ.‌ ಅದನ್ನು ನಿರ್ಧರಿಸುವುದು ಪುಟಸಂಖ್ಯೆಗಳಲ್ಲ. ಅದಕ್ಕೆ ಬೇರೆಯೇ ಆದ ಮಾನದಂಡಗಳಿವೆ.)

- ಡಾ. ಪಾರ್ವತಿ ಜಿ.ಐತಾಳ್

MORE NEWS

ಇದು ಕಾದಂಬರಿಯೇ ಹೊರತು, ಚರಿತ್ರೆಯ ಮಾಹಿತಿ ಕೋಶವಲ್ಲ

16-11-2024 ಬೆಂಗಳೂರು

“ಚರಿತ್ರೆಯ ವಿವರಗಳು ಭಿತ್ತಿಯಾಗಿದ್ದು, ಅದರ ಮೇಲೆ ಮಹಾನ್ ಚಕ್ರವರ್ತಿ ಕೃಷ್ಣದೇವರಾಯನ ಚಾರಿತ್ರ್ಯ, ಅವನ ಪರಿವಾರದ...

ಈ ಕಥಾ ಸಂಕಲನದಲ್ಲಿ ದಟ್ಟ ಕಾಡಿನ ರೌದ್ರ ವರ್ಣನೆ ಓದುಗರನ್ನು ಮೋಹಗೊಳಿಸುತ್ತದೆ‌

22-10-2024 ಬೆಂಗಳೂರು

“ಈ ಸಂಕಲನ ಮಲೆಯ ಮಹದೇಶ್ವರದ ತಪ್ಪಲಿನ ಗುಡ್ಡಗಾಡು ಜನರ ಬದುಕುಗಳ ಚಿತ್ರಣಗಳನ್ನು ಬಲು ನಿಖರವಾಗಿ ಕೊಡುತ್ತದೆ&rdqu...

ಈ ಕೃತಿ ಶ್ರೀಧರ ನಾಯಕ್ ಅವರ ಆತ್ಮಚರಿತ್ರೆಯ ಆಯ್ದ ಭಾಗವಿದ್ದಂತೆ

15-10-2024 ಬೆಂಗಳೂರು

“ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಎನ್ನುವುದು ವಾಸ್ತವಾಂಶಗಳನ್ನು ಜಾಗರೂಕವಾಗಿ, ನಿಖರವಾಗಿ ಮರು ಸೃಷ್ಟಿಸುವ ಕಲೆ&...