Date: 01-04-2022
Location: ಬೆಂಗಳೂರು
'ಇಡಿಯ ದಕ್ಶಿಣ ಏಸಿಯಾದಲ್ಲಿ ಸಂಸ್ಕ್ರುತದ ನಂತರ ತನ್ನದೆ ಆದ ದ್ವನಿವಿಗ್ನಾನ ಬೆಳೆಸಿಕೊಂಡ ಮೊದಲ ಬಾಶೆ ಕನ್ನಡ, ಇಡಿಯ ದಕ್ಶಿಣ ಏಸಿಯಾದಲ್ಲಿ ಪಾಲಿಯ ನಂತರ ತನ್ನದೆ ಆದ ಲಿಪಿ ಬೆಳೆಸಿಕೊಂಡ ಮೊದಲ ಬಾಶೆ ಕನ್ನಡ' ಎನ್ನುತ್ತಾರೆ ಲೇಖಕ, ಭಾಷಾ ವಿಶ್ಲೇಷಣಾಕಾರ ಡಾ.ಬಸವರಾಜ ಕೋಡಗುಂಟಿ ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣದ ಕುರಿತು ವಿಶ್ಲೇಷಿಸಿದ್ದಾರೆ.
ಉತ್ತರ-ಪೂರ‍್ವ ಬಾರತದಲ್ಲಿ ಇದ್ದ ಅಸೋಕನಿಗೆ ಇತರೇತರ ಕಾರಣಗಳಿಗೆ ದಕ್ಶಿಣ, ಮುಕ್ಯವಾಗಿ ಇಂದಿನ ಸುಮಾರಾದ ಹಯ್ದರಾಬಾದ ಕರ‍್ನಾಟಕ ಪ್ರದೇಶ ಹೆಚ್ಚಿನ ಸೆಳೆತವನ್ನು ಹೊಂದಿದ್ದಿತು. ಇಲ್ಲಿಯ ಕನಗನ ಹಳ್ಳಿ-ಸನ್ನತಿ-ಮಸ್ಕಿ ಪರಿಸರದಲ್ಲಿ ಹೆಚ್ಚಿನ ಬವುದ್ದ ಚಟುವಟಿಕೆಗಳು ಮತ್ತು ಬವುದ್ದಿಕ ಚಟುವಟಿಕೆಗಳು ನಡೆಯುತ್ತಿದ್ದವು. ಇದಕ್ಕೆ ಈ ಪರಿಸರದಲ್ಲಿ ದೊರೆಯುವ ಅಸೋಕನ ಇಡಿಕಿರಿದ ಕಲ್ಬರಹಗಳು, ಬವುದ್ದ ಕೇಂದ್ರಗಳು, ಕನಗನಹಳ್ಳಿಯ ಬವುದ್ದ ಸ್ತೂಪ, ಇಡಿಯ ಸ್ತೂಪದ ತುಂಬ ತುಂಬಿಕೊಂಡಿರುವ ನೂರಾರು ಬಿಡಿಬಿಡಿ ಬರಹಗಳು, ಇಲ್ಲಿ ಸಿಗುವ ಅಸೋಕನ ಕೆತ್ತನೆ, ಅಸೋಕ ಇಲ್ಲಿಗೆ ಬಂದಿರುವುದರ ಮತ್ತು ಅವನು ಇಲ್ಲಿಯೆ ಕೊನೆಯುಸಿರೆಳೆದಿರುವ ಅನುಮಾನ, ಇಂದಿಗೂ ಉಳಿದ ಹಲವಾರು ಬವುದ್ದ ವಿಬಿನ್ನ ಅವಶೇಶಗಳು ಇದನ್ನು ಎತ್ತಿ ಹಿಡಿಯುತ್ತವೆ.
ಈ ಪ್ರದೇಶ ಕ್ರಿಶ್ಣಾ ನದಿಯ ಕೊಳ್ಳವಾಗಿದ್ದಿತು. ಕ್ರಿಶ್ಣಾ, ತುಂಗಬದ್ರ, ಬೀಮಾ ಇಂತಾ ದೊಡ್ಡ ತೊರೆಗಳು, ಇವುಗಳ ಜೊತೆಗೆ ಈ ದೊಡ್ಡ ತೊರೆಗಳನ್ನು ಸೇರುವ ಇನ್ನೂ ಹಲವು ಸಣ್ಣ ಸಣ್ಣ ತೊರೆಗಳು ಈ ನೆಲದ ಪಲವಂತಿಕೆಗೆ ಕಾರಣವಾಗಿದ್ದವು. ಕೋಟ್ಯಂತರ ವರುಶಗಳ ಹಿಂದೆ ನೆಲದೊಳಗೆ ನಡೆದ ಹಲವು ಬೆಳವಣಿಗೆಗಳಿಂದಾಗಿ ಈ ಪ್ರದೇಶದಲ್ಲಿ ಹಲವಾರು ಗುಡ್ಡಸಾಲುಗಳು, ಅವುಗಳ ನಡುವೆ ಈ ತೊರೆಗಳು, ಕನಿಜಯುಕ್ತ ಮಣ್ಣು, ಬಂಗಾರ ಮೊದಲಾದ ಕನಿಜಗಳು ಬೆಳೆದಿರುತ್ತವೆ. ತುಸು ಬೇಗ ವ್ಯವಸ್ತಿತವಾಗಿ ರಾಜ್ಯಸ್ತಾಪನೆ ಆಗಿದ್ದ ಉತ್ತರಕ್ಕೆ ಈ ಕ್ರಿಶ್ಣಾಕೊಳ್ಳ ಸೆಳೆಯುತ್ತದೆ. ಹೀಗೆ ಅಸೋಕನು ಈ ಬಾಗದ ಮೇಲೆ ವಿಶೇಶ ಆಸಕ್ತಿ ಬೆಳೆಸಿಕೊಳ್ಳುತ್ತಾನೆ. ಹೀಗೆ ಈ ಪ್ರದೇಶವು ತನ್ನ ರಾಜ್ಯಕ್ಕೆ ಆರ‍್ತಿಕ ಆದಾಯಕೇಂದ್ರವಾಗಿ ಕಾಣಿಸಿತು. ಅದರೊಟ್ಟಿಗೆ ಈ ಪ್ರದೇಶದಲ್ಲಿ ಅದಾಗಲೆ ಊರುಗಳು, ಸಾಮಾಜಿಕ ಬದುಕು, ಉತ್ತರದಲ್ಲಿ ಅದಾಗಲೆ ಮತಪಂತಗಳೆಂದು ಗುರುತಿಸಿಕೊಂಡಿದ್ದಂತ ನಂಬಿಕೆ, ಆಚರಣೆಗಳು ಬೆಳೆದಿರುತ್ತವೆ. ಈ ಪ್ರದೇಶ ಬುದ್ದ ಮತದ ಪ್ರಚಾರಕ್ಕೆ ಸೂಕ್ತ ಪ್ರದೇಶವಾಗುತ್ತದೆ. ಹೀಗೆ ಇಂದು ಸುಮಾರಾಗಿ ಹಯ್ದರಾಬಾದ ಕರ‍್ನಾಟಕ ಎಂದು ಕರೆಯಬಹುದಾದ ಪ್ರದೇಶದಲ್ಲಿ ಅಸೋಕನು ಹೆಚ್ಚು ನೆಲೆಯೂರುತ್ತಾನೆ. ಅಸೋಕನ ಮಗ ರಾಹುಲನು ಇಲ್ಲಿಂದಲೆ ಶ್ರೀಲಂಕಾಕ್ಕೆ ಹೋಗಿರಬಹುದು ಎನ್ನಲಾಗುತ್ತದೆ.
ಅಸೋಕನ ಶಿಲ್ಪಗಳು ಇಲ್ಲಿ ಹೆಚ್ಚು ಕಾಣಿಸುತ್ತವೆ. ಇದೆಲ್ಲವು ಅಸೋಕ ಈ ಪ್ರದೇಶಕ್ಕೆ ಹೆಚ್ಚು ಒತ್ತು ಕೊಟ್ಟಿರುವುದನ್ನು ಎತ್ತಿ ಹೇಳುತ್ತವೆ. ಈ ಕಾರಣದಿಂದ ಕನಗನಹಳ್ಳಿ, ಸನ್ನತಿ, ಮಸ್ಕಿ ಮೊದಲಾದ ಪ್ರದೇಶಗಳು ಬವುದ್ದ ಮತದ ಕೇಂದ್ರಗಳಾಗಿ ಬೆಳೆಯುವುದು ಮಾತ್ರವಲ್ಲದೆ ಹೆಚ್ಚು ಬವುದ್ದಿಕ ಚಟುವಟಿಕೆಗಳು ಇಲ್ಲಿ ಬೆಳೆಯುತ್ತವೆ. ಈ ಊರುಗಳು ನೀರಿನ ಮೂಲಕ ಸುಲಬವಾಗಿ ಬೆಸೆದುಕೊಂಡಿದ್ದ ಪ್ರದೇಶಗಳಾಗಿದ್ದವು. ಕನಗಕನಹಳ್ಳಿಯಲ್ಲಿ ಬಹುದೊಡ್ಡ ಬವುದ್ದ ಸ್ತೂಪ ಸ್ತಾಪನೆಯಾಗುತ್ತದೆ. ಇಲ್ಲಿ ಎರಡುನೂರಕ್ಕೂ ಹೆಚ್ಚು ಬಿಡಿಬಿಡಿ ಬರಹಗಳು ಸಿಗುತ್ತವೆ. ಈ ಎಲ್ಲವೂ ಈ ಪರಿಸರದಲ್ಲಿ ಲಿಪಿ ಹೆಚ್ಚು ಪ್ರಚುರಗೊಳ್ಳಲು ಕಾರಣವಾದವು. ಕನಗನಹಳ್ಳಿ, ಸನ್ನತಿ, ಮಸ್ಕಿ, ಕೊಪ್ಪಳ ಪರಿಸರದಲ್ಲಿ ಹೆಚ್ಚಿನ ದಾರ‍್ಮಿಕ, ಬವುದ್ದಿಕ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ವಿಸ್ತಾರಗೊಳ್ಳುತ್ತವೆ. ಈ ಚಟುವಟಿಕೆಗಳಿಗೆ ಲಿಪಿಯ ಅನಿವಾರ‍್ಯತೆ ಹೆಚ್ಚಿದ್ದಿತು. ಹಾಗಾಗಿ ಪಾಲಿ ಬಾಶೆಗೆಂದು ಬೆಳೆಸಿದ್ದ ಲಿಪಿಯನ್ನು ಇಲ್ಲಿ ಬಳಸಲು ಮೊದಲು ಮಾಡಿರಬೇಕು. ಸಹಜವಾಗಿಯೆ ಇಲ್ಲಿನ ಚಟುವಟಿಕೆಗಳಲ್ಲಿ ಸ್ತಳೀಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿದ್ದಿರಬೇಕು. ಪಾಲಿ ಬಾಶೆಯ ಬರಹ ಮತ್ತು ಈ ನೆಲದ ಮಂದಿಯ ತೊಡಗುವಿಕೆ, ಈ ಮಂದಿಯ ಬಾಶೆ, ಈ ಬಾಶೆಯ ರಚನೆ ಈ ಎಲ್ಲ ಅಂಶಗಳು ಪರಸ್ಪರ ತಾಳೆಯಾಗದಾಗ ಈ ನೆಲದ ಬಾಶೆಯಾಗಿದ್ದ ಕನ್ನಡಕ್ಕೆ ಲಿಪಿಯ ಸಂಯೋಜನೆ ಮಾಡುವ ವಿಚಾರ ಮುನ್ನೆಲೆಗೆ ಬರುತ್ತದೆ. ಆಗ ಸಹಜವಾಗಿಯೆ ಕನ್ನಡ ಬಾಶೆಯ ದ್ವನಿಗಳ ಅವಲೋಕನೆ ಶುರುವಾಗುತ್ತದೆ. ಪಾಲಿ ಬಾಶೆಗೆ ಲಿಪಿ ಸಂಯೋಜನೆಗೆ ಮೂಲವಾಗಿದ್ದ ಸಂಸ್ಕ್ರುತದ ಮಾಹೇಶ್ವರ ಸೂತ್ರಗಳು ಕೊಡುವ ಸಿದ್ದಾಂತವನ್ನು ಅನುಸರಿಸಿ ಕನ್ನಡ ಬಾಶೆಯ ದ್ವನಿಗಳನ್ನು ಅವಲೋಕಿಸಲಾಗುತ್ತದೆ.
ಸಂಸ್ಕ್ರುತವನ್ನು ಕೇಂದ್ರವಾಗಿಟ್ಟುಕೊಂಡು ಬೆಳೆದಿದ್ದ ಮಾಹೇಶ್ವರ ಸೂತ್ರಗಳು ಮನುಶ್ಯರು ಸಂಸ್ಕ್ರುತ ಬಾಶೆಯನ್ನು ಆಡುವಾಗ ಹೇಗೆ ದ್ವನಿಗಳನ್ನು ಉಚ್ಚರಿಸುತ್ತಾರೆ ಎಂಬುದನ್ನು ವಿವರಿಸಿದ್ದವು. ಸ್ವರ, ವ್ಯಂಜನಗಳ ಬಗೆಗೆ ಸ್ಪಶ್ಟನೆ ಇದ್ದಿತು. ದ್ವನಿಗಳ ಉಚ್ಚರಣೆ ಸ್ತಾನ, ಮತ್ತು ರೀತಿ, ದ್ವನಿಗಳ ನಡುವಿನ ವ್ಯತ್ಯಾಸಗಳ ತಿಳುವಳಿಕೆ ಸ್ಪಶ್ಟವಾಗಿದ್ದವು. ಅಲ್ಲದೆ ಒಂದು ದ್ವನಿ ಉಚ್ಚಾರವಾಗುವಾಗ ಆಗುವ ಸಣ್ಣ ವ್ಯತ್ಯಾಸಗಳನ್ನು ಕೂಡ ಗುರುತಿಸಲು ಸಾದ್ಯವಿತ್ತು. ಇದೆ ಅರಿವನ್ನು ಇಟ್ಟುಕೊಂಡು ಕನ್ನಡ ಬಾಶೆಯ ಉಚ್ಚರಣೆಯನ್ನು ಅರಿಯುವ ಪ್ರಯತ್ನಗಳು ಮೊದಲಾದವು. ಹೀಗೆ ಕನ್ನಡ ದ್ವನಿವಿಗ್ನಾನ ಕ್ರಿಸ್ತಶಕದ ತುಸು ಮೊದಲೆ ಬೆಳೆಯಿತು, ಕನ್ನಡಕ್ಕೆ ಲಿಪಿಯ ಸಂಯೋಜನೆಯೂ ಆವಾಗಲೆ ಆಯಿತು.
ಕನ್ನಡವನ್ನು ‘ಪ್ರಾಕ್ರುತ’ ಎಂದು ಪರಿಗಣಿಸದ ಬವುದ್ದ ಕನ್ನಡಕ್ಕೆ ಲಿಪಿಯನ್ನು ಸಂಯೋಜಿಸಬೇಕಾದ ಅವಶ್ಯಕತೆ ಅಂದಿನ ಕಾಲಕ್ಕೆ ಬೆಳೆದಿರುವುದು ಬಹು ಮಹತ್ವದ ವಿಚಾರ. ಇದಕ್ಕೆ ಕನ್ನಡವನ್ನು ‘ಪ್ರಾಕ್ರುತ’ ಎಂದು ಪರಿಗಣಿಸುವ ಜಯ್ನ ಪಂತದ ಕೊಡುಗೆಯೂ ಕಂಡಿತ ಇರುತ್ತದೆ.
ಉತ್ತರಪೂರ‍್ವದಲ್ಲಿ ಹುಟ್ಟಿದ ಲಿಪಿಯು ಅಸೋಕನ ಕಲ್ಬರಹಗಳಿಂದ ದಕ್ಶಿಣಕ್ಕೆ ಬಂದು, ಇಂದಿನ ಸುಮಾರಾದ ಹಯ್ದರಾಬಾದ ಕರ‍್ನಾಟಕ ಪ್ರದೇಶದ ಹಳ್ಳಕೊಳ್ಳಗಳ ನಡುವೆ ಹರಿದು ಗುಡ್ಡಕಲ್ಲುಗಳಲ್ಲಿ ನೆಲೆಗೊಂಡು, ಪಲವತ್ತಾದ ನೆಲದೊಳಗೆ ಬೀಜವಾಗಿ ಇದೆ ತೊರೆಗಳ ನೀರನುಂಡು ಬೆಳೆದು ಪಲ ಕೊಡುತ್ತವೆ. ಕನ್ನಡ ಲಿಪಿಯಾಗಿ ಬೆಳೆಯುತ್ತದೆ. ಹೀಗೆ ಪೂರ‍್ವದಲ್ಲಿ ಹುಟ್ಟಿದ ಲಿಪಿ ದಕ್ಶಿಣದೆಡೆಗೆ ಪಯಣ ಬೆಳೆಸುತ್ತದೆ. ಮುಂದೆ ಕರ‍್ಣಾಟವನ್ನು, ರಾಶ್ಟ್ರವನ್ನು ಬರೆಯುತ್ತದೆ. ಇಡಿಯ ದಕ್ಶಿಣ ಏಸಿಯಾದಲ್ಲಿ ಸಂಸ್ಕ್ರುತದ ನಂತರ ತನ್ನದೆ ಆದ ದ್ವನಿವಿಗ್ನಾನ ಬೆಳೆಸಿಕೊಂಡ ಮೊದಲ ಬಾಶೆ ಕನ್ನಡ, ಇಡಿಯ ದಕ್ಶಿಣ ಏಸಿಯಾದಲ್ಲಿ ಪಾಲಿಯ ನಂತರ ತನ್ನದೆ ಆದ ಲಿಪಿ ಬೆಳೆಸಿಕೊಂಡ ಮೊದಲ ಬಾಶೆ ಕನ್ನಡ.
ಈ ಅಂಕಣದ ಹಿಂದಿನ ಬರೆಹ:
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.