Date: 22-09-2020
Location: ಬೆಂಗಳೂರು
ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ಇದು. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಸರ್ಬಿಯಾದ ಮಾರಿನಾ ಅಬ್ರಾಮೊವಿಚ್ ವರ ಬಗ್ಗೆ ಬರೆದಿದ್ದಾರೆ.
ಕಲಾವಿದ: ಮಾರಿನಾ ಅಬ್ರಾಮೊವಿಚ್ (Marina Abramovic)
ಜನನ: 06 ಮಾರ್ಚ್ 1946 (ಬೆಲ್ಗ್ರೇಡ್, ಸರ್ಬಿಯಾ [ಹಿಂದಿನ ಯುಗೊಸ್ಲಾವಿಯಾ])
ಶಿಕ್ಷಣ: ಅಕಾಡೆಮಿ ಆಫ್ ಫೈನ್ ಆರ್ಟ್ಸ್, ಬೆಲ್ಗ್ರೇಡ್ ಮತ್ತು ರಾದಿಯೊನಿಕಾ ಕ್ರಿಸ್ತಾ ಹೆಜೆದುಸಿಕ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್, ಜಾಗ್ರೆಬ್.
ವಾಸ: ನ್ಯೂಯಾರ್ಕ್, ಅಮೆರಿಕ
ಕವಲು: ಕಾನ್ಸೆಪ್ಚುವಲ್ ಆರ್ಟ್
ವ್ಯವಸಾಯ: ಪರ್ಫಾರ್ಮೆನ್ಸ್ ಆರ್ಟ್, ಬಾಡಿ ಆರ್ಟ್, ಫೆಮಿನಿಸ್ಟ್ ಆರ್ಟ್.
ಮಾರಿನಾ ಅಬ್ರಾಮೊವಿಚ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಮಾರಿನಾ ಅಬ್ರಾಮೊವಿಚ್ ಅವರ ಅಧಿಕೃತ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಮಾರಿನಾ ಅಬ್ರಾಮೊವಿಚ್ ತೀರಾ ಇತ್ತೀಚೆಗೆ ವಿವಾದಕ್ಕೀಡಾದದ್ದು ಮೊನ್ನೆ 2020, ಎಪ್ರಿಲ್ ನಲ್ಲಿ. ಮೈಕ್ರೊಸಾಫ್ಟ್ ಕಂಪನಿ ಅವರ HoloLens 2 ಎಂಬ ಮಿಕ್ಸೆಡ್ ರಿಯಾಲಿಟಿ ತೋರಿಸುವ ಉತ್ಪನ್ನಗಳ ಜಾಹೀರಾತಿಗೆ ಮಾರಿನಾ ಅವರನ್ನು ಬಳಸಿಕೊಂಡಿತ್ತು. ಆದರೆ ಬಲಪಂಥೀಯ ಇಂಟರ್ನೆಟ್ ಟ್ರೋಲ್ಗಳು ದಾಳಿ ಮಾಡಿ, ಆಕೆ ಮಾಟ-ಮಂತ್ರಗಳನ್ನು ಕಲೆ ಎಂದು ಬಿಂಬಿಸುತ್ತಾರೆ ಎಂದು ಆರೋಪಿಸಿ, ಗದ್ದಲ ಮಾಡಿದ್ದರಿಂದ ಆ ಜಾಹೀರಾತನ್ನು ಮೈಕ್ರೊಸಾಫ್ಟ್ ಹಿಂದೆಗೆದುಕೊಳ್ಳಬೇಕಾಯಿತು.
ದೇಹವನ್ನೇ ಕಲಾಕೃತಿಯಾಗಿರಿಸಿಕೊಂಡು ಪ್ರದರ್ಶಿಸುವ “ಪರ್ಫಾರ್ಮೆನ್ಸ್ ಆರ್ಟ್” ಕಲಾವಿದೆ ಮಾರಿನಾ ಅಬ್ರಾಮೊವಿಚ್, ಈ ಕಾರಣಕ್ಕಾಗಿಯೇ ಆರಂಭದಿಂದಲೂ ವಿವಾದಗಳೊಂದಿಗೇ ಬೆಳೆದುಬಂದವರು. ಯುಗೊಸ್ಲಾವಿಯಾದ ಕಮ್ಯುನಿಸ್ಟ್ ಮಿಲಿಟರಿ ಸರ್ವಾಧಿಕಾರಿ ಮಾರ್ಷಲ್ ಟಿಟೊ ಅವರ ಆಡಳಿತ ಕಾಲದಲ್ಲಿ ಮಾರಿನಾ ಅವರ ತಂದೆ ಟಿಟೊ ಅವರ ಇಲೈಟ್ ಗಾರ್ಡ್ಸ್ ಸೇನೆಯಲ್ಲಿದ್ದರೆ, ತಾಯಿ ಕಲಾಚರಿತ್ರಜ್ಞರಾಗಿದ್ದರು.
ಸರ್ಕಾರದ ಮಿಲಿಟರಿ ಶಿಸ್ತು ಮತ್ತು ತಂದೆ ಬೇಗನೆ ತೀರಿಕೊಂಡ ಬಳಿಕ ತಾಯಿಯ ಅತಿಯಾದ ಶಿಸ್ತುಗಳ ನಡುವೆ ಬೆಳೆದುಬಂದ ಮಾರಿನಾ, ತನ್ನ ಕಲಾಶಿಕ್ಷಣ ಮುಗಿದ ಬಳಿಕ ಅಂತಹ ಅತಿಶಿಸ್ತಿನ ವಾತಾವರಣಕ್ಕೆ ಪ್ರತಿರೋಧ ತೋರಿಸತೊಡಗಿದ್ದು, ಮೊದಲಿಗೆ ಶಬ್ದಗಳನ್ನು ಬಳಸಿ ಮತ್ತು ಬಳಿಕ ದೇಹವನ್ನೇ ಬಳಸಿ “ಪರ್ಫಾರ್ಮೆನ್ಸ್”ಗಳನ್ನು ಪ್ರದರ್ಶಿಸುವ ಮೂಲಕ. ಆ ಹೊತ್ತಿಗೆ (1970) ಯುರೋಪಿನಲ್ಲಿ ಕೂಡ ಪರ್ಫಾರ್ಮೆನ್ಸ್ ಆರ್ಟ್ ಆರಂಭದ ಹಂತದಲ್ಲಿತ್ತು. ಅದನ್ನು ಕೇಳಿಯೂ ಗೊತ್ತಿಲ್ಲದ ಮಾರಿನಾ, ಪರ್ಫಾರ್ಮೆನ್ಸ್ ಆರ್ಟನ್ನು ಹೊಸ ಮಜಲಿಗೆ ಒಯ್ದಿದ್ದರು. ಹಾಗಾಗಿ ಅವರನ್ನು ಈ ಕಲಾ ವಿಧದ ಹಿರಿಯಜ್ಜಿ ಎಂದು ಪರಿಗಣಿಸಲಾಗುತ್ತದೆ.
ದೇಹವನ್ನು ದಂಡಿಸುವ, ಜೀವಕ್ಕೆ ಅಪಾಯಕಾರಿ ಆಗಬಹುದಾದ ಹಲವು ಪರ್ಫಾರ್ಮೆನ್ಸ್ ಗಳು (ಉದಾಹರಣೆಗೆ ಮಾನಸಿಕ ಚಿಕಿತ್ಸೆಗೆಂದು ನಿಗದಿಯಾಗಿದ್ದ ಮಾತ್ರೆಗಳನ್ನು ಸೇವಿಸಿ ಅದರ ಪರಿಣಾಮ ಪ್ರದರ್ಶನ, ಹೊಟ್ಟೆಯನ್ನು ಬ್ಲೇಡಿನಲ್ಲಿ ಕತ್ತರಿಸಿಕೊಳ್ಳುವುದು, ಐಸ್ ಮೇಲೆ ದೇಹವನ್ನು ಬಂಧಿಸಿದ್ದು…) ಅವರ ಆರಂಭಿಕ Rhythm (1974) ಸರಣಿಯ ಪ್ರದರ್ಶನಗಳು.
1975ರಲ್ಲಿ ಜರ್ಮನಿಯಲ್ಲಿ ಫ್ರಾಂಕ್ ವು ಲೈಸಿಪೆನ್ (ಉಲಾಯ್ ಎಂದೇ ಪರಿಚಿತ )ಎಂಬ ಪರ್ಫಾರ್ಮೆನ್ಸ್ ಆರ್ಟಿಸ್ಟ್ ಅನ್ನು ಭೇಟಿ ಆದ ಬಳಿಕ ತನ್ನ ಮನೆಯಿಂದ ಸಂಪರ್ಕ ಕಡಿದುಕೊಂಡ ಮಾರಿನಾ, ಮುಂದೆ 12ವರ್ಷಗಳ ಕಾಲ ಅವರೊಂದಿಗೆ ಪರ್ಫಾರ್ಮೆನ್ಸ್ ಕಲೆಗಳನ್ನು ಪ್ರದರ್ಶಿಸುತ್ತಾ ಜಗತ್ತಿನಾದ್ಯಂತ ಸುತ್ತಾಡಿದರು . ಆ ವೇಳೆಯಲ್ಲಿ ಉಲಾಯ್- ಮಾರಿನೊ ಜೋಡಿ ಭಾರತದಲ್ಲಿ ಟಿಬೇಟ್, ರಾಜಸ್ಥಾನಗಳಿಗೂ ಬಂದಿದ್ದರು.
ನಗ್ನರಾಗಿ ಕಿರುಹಾದಿಯೊಂದರಲ್ಲಿ ಎದುರುಬದುರಾಗಿ ನಿಂತದ್ದು Imponderabilia (1977), ಬಾಯಿಯಿಂದ ಬಾಯಿಗೆ ದೀರ್ಘಕಾಲ ಉಸಿರಾಡುವ ಪ್ರಯತ್ನ Breathing In/Breathing Out (1977), ಮೇಜೊಂದರಲ್ಲಿ ದೀರ್ಘಕಾಲ ಎದುರುಬದುರಾಗಿ ಕುಳಿತುಕೊಳ್ಳುವುದು Nightsea Crossing (1981-1987) - ಈ ಕಲಾವಿದ ಜೋಡಿಯ ಮಹತ್ವದ ಪ್ರದರ್ಶನಗಳಾಗಿದ್ದವು. 1988ರಲ್ಲಿ ಅವರು ಸಂಬಂಧ ಕಡಿದುಕೊಂಡದ್ದೂ ಒಂದು ಪರ್ಫಾರ್ಮೆನ್ಸ್. ಚೀನಾದ ಗೋಡೆಯ ಎರಡು ತುದಿಗಳಿಂದ ನಡೆಯಲಾರಂಭಿಸಿ, ಮೂರು ತಿಂಗಳು ಸತತ ನಡೆದು, ಮಧ್ಯದಲ್ಲೆಲ್ಲೋ ಸಂಧಿಸಿ, ಗುಡ್ ಬೈ ಹೇಳಿ ಬೇರಾದ ಈ ಜೋಡಿ, ಆ ಬಳಿಕ ಪ್ರತ್ಯೇಕವಾಗಿಯೇ ಕಲಾವ್ಯವಸಾಯದಲ್ಲಿ ತೊಡಗಿದೆ.
ಹೀಗೆ ಬೇರಾದ ಬಳಿಕ, ವೈಯಕ್ತಿಕ ಪ್ರದರ್ಶನಗಳು ಮತ್ತು ಜರ್ಮನಿಯ ವಿವಿಧ ವಿವಿಗಳಲ್ಲಿ ಕಲಾಶಿಕ್ಷಕಿ ಆಗಿಯೂ ಕೆಲಸ ಮಾಡುತ್ತಿರುವ ಮಾರಿನಾ ಅವರ ಇತ್ತೀಚೆಗಿನ ಮಹತ್ವದ ಪ್ರದರ್ಶನ ಎಂದರೆ, MoMAದಲ್ಲಿ The Artist is Present (2010) ಪ್ರದರ್ಶನದಲ್ಲಿ ತಾನೊಂದು ಮೇಜಿನ ಎದುರು ಕುಳಿತು ತನ್ನೆದುರು ಪ್ರೇಕ್ಷಕರು ಯಾರು ಬೇಕಾದರೂ ಬಂದು ಎಷ್ಟು ಹೊತ್ತು ಬೇಕಾದರೂ ಕುಳಿತು ಹೋಗಬಹುದು ಎಂದು ಆಹ್ವಾನಿಸಿದ್ದು.
ತನ್ನ ಪರ್ಫಾರ್ಮೆನ್ಸ್ ಗಳನ್ನು ಫೆಮಿನಿಸ್ಟ್ ಆರ್ಟ್ ಎಂದು ಸ್ವತಃ ಮಾರಿನಾ ಒಪ್ಪುವುದಿಲ್ಲ. ಆದರೆ ಆಕೆ ತನ್ನದೇ ದೇಹವನ್ನು ದುಡಿಸಿಕೊಂಡ ರೀತಿ, ಫೆಮಿನಿಸ್ಟ್ ಆರ್ಟ್ ರೂಪುಗೊಳ್ಳಲು ದಿಕ್ಸೂಚಿ ಆಯಿತು ಎಂದು ಕಲಾ ಪರಿಣತರು ಅಭಿಪ್ರಾಯಪಡುತ್ತಾರೆ. ಈಗ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಮಾರಿನಾ ಅಲ್ಲಿ ತನ್ನದೇ ಹೆಸರಿನ ಮಾರಿನಾ ಅಬ್ರಾಮೊವಿಚ್ ಇನ್ಸ್ಟಿಟ್ಯೂಟ್ ಫಾರ್ ಪ್ರಿಸರ್ವೇಷನ್ ಆಫ್ ಪರ್ಫಾರ್ಮೆನ್ಸ್ ಆರ್ಟ್ ಸ್ಥಾಪಿಸಿದ್ದಾರೆ (2012) ಈ ಸಂಸ್ಥೆಯ ಕುರಿತು ಅವರು "Performance is fleeting. But this, this place, this is for time. This is what I will leave behind." ಎಂದಿದ್ದಾರೆ. ಅದಕ್ಕಿಂತ ಮೊದಲು ತನ್ನ ಪರ್ಫಾರ್ಮೆನ್ಸ್ ಗಳ ವೀಡಿಯೊಗಳ ಬಗ್ಗೆ ಕೂಡ ತಲೆಕೆಡಿಸಿಕೊಂಡಿರದ ಮಾರಿನಾ, ತನ್ನ ಪರ್ಫಾರ್ಮೆನ್ಸ್ ಗಳನ್ನು ಮರುಪ್ರದರ್ಶಿಸುವುದೇ ಅದರ ದಾಖಲೀಕರಣ ಹೊರತು ಅವುಗಳ ವೀಡಿಯೊ-ಚಿತ್ರಗಳಲ್ಲ ಅನ್ನುತ್ತಿದ್ದರು.
ಮಾರಿನಾ ಅಬ್ರಾಮೊವಿಚ್ ಅವರ ದೇಹ ಬಳಕೆಯ ಕುರಿತಾದ ಉಪನ್ಯಾಸವೊಂದು ಇಲ್ಲಿದೆ:
ಮಾರಿನಾ ಅಬ್ರಾಮೊವಿಚ್ ಮತ್ತು ಉಲಾಯ್ ಅವರು ಚೀನಾ ಗೊಡೆಯಲ್ಲಿ ಸಂಧಿಸಿದ ಪರ್ಫಾರ್ಮೆನ್ ನ ವೀಡಿಯೊ
ಚಿತ್ರಗಳು
ಮಾರಿನೊ ಮತ್ತು ಉಲಾಯ್ (1980)
ಮಾರಿನೊ ಅವರ ನಾಲ್ಕು ಪರ್ಫಾರ್ಮೆನ್ಸ್ ಗಳು
ಮಾರಿನೊ ಮತ್ತು ಉಲಾಯ್ ಚೀನಾ ಮಹಾಗೋಡೆಯ ಮೇಲೆ ನಡೆದು ಸಂಧಿಸಿದ್ದು
ಮಾರಿನೊ ಅವರ ಕ್ಲೀನರ್ (ಪರ್ಫಾರ್ಮೆನ್ಸ್)
2010ರಲ್ಲಿ ಮಾರಿನೊ ಮತ್ತು ಉಲಾಯ್ MoMAದಲ್ಲಿ ಪರ್ಫಾರ್ಮೆನ್ಸ್ ವೇಳೆ ಸಂಧಿಸಿದ್ದು
ಈ ಅಂಕಣದ ಹಿಂದಿನ ಬರೆಹಗಳು
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.