ಒಂದು ಅದ್ಭುತ ದೃಶ್ಯ ಕಾವ್ಯ `ಮಹಾಮಹಿಮ ಶ್ರೀ ಜಡೇ ಸಿದ್ಧ ಶಿವಯೋಗಿಗಳ ಲೀಲಾಮೃತ'


"ಅವರ ಬರಹದ ಚುಂಬಕ ಶಕ್ತಿಯೇ ಹಾಗೆ, ಅವರ ಕಥೆಗಳಾಗಲೀ, ಕಾವ್ಯವಾಗಲೀ, ಲೇಖನಗಳಾಗಲೀ ಓದಲು ಆರಂಭಿಸಿದರೆ ಮುಗಿಯುವವರೆಗೂ ಬಿಡುವಂತಿರಲ್ಲ. ಅಷ್ಟು ಆಕರ್ಷಕ ವಾಗಿರುತ್ತೆ ಅವರ ಬರಹ," ಎನ್ನುತ್ತಾರೆ ಆದಪ್ಪ ಹೆಂಬಾ. ಅವರು ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಅವರ ‘ಮಹಾಮಹಿಮ ಶ್ರೀ ಜಡೇ ಸಿದ್ಧ ಶಿವಯೋಗಿಗಳ ಲೀಲಾಮೃತ’ ಕೃತಿ ಕುರಿತು ಬರೆದಿರುವ ಅನಿಸಿಕೆ.

ಅದ್ಭುತ ಬರಹಗಾರರು, ನಾ ಕಂಡ ಸರಳ ಸಜ್ಜನಿಕೆಯ ಅಧಿಕಾರಿಗಳು, ಸದ್ಯ ವಿಶ್ರಾಂತ ಜೀವನ ನಡೆಸುತ್ತಿರುವ ಗೌರವಾನ್ವಿತ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಡಯಟ್ ರಾಯಚೂರಿನ ನಿವೃತ್ತ ಪ್ರಾಚಾರ್ಯರು (ಮಹಿಮ) ,ಅವರು ರಚಿಸಿದ ಒಂದು ಅದ್ಭುತ ಕೃತಿ. ಇದನ್ನು ಬರೀ ಒಂದು ಕೃತಿ, ಪುಸ್ತಕ, ಅನ್ನುವ ಬದಲು ಅದನ್ನೊಂದು ದೃಶ್ಯ ಕಾವ್ಯ ಎನ್ನುವುದು ಸೂಕ್ತ ಎಂಬುದು ನನ್ನ ಅಭಿಮತ.

ಸರ್ ತಮ್ಮ ವಂಶಜರೇ ಆದ ಜಡೇಸಿದ್ಧ ಶಿವಯೋಗಿಗಳ ಬಗ್ಗೆ ಬರೆಯುತ್ತಿದ್ದಾರೆಂದು ಅವರ ಅತ್ಮೀಯ ವಲಯದಲ್ಲಿರುವ ನನಗೆ ತಿಳಿದಿರುವ ವಿಷಯವಾಗಿತ್ತು. ಅವರ ಓದುಗ ತಾನು ಓದುವುದನ್ನು ಮುಗಿಸುವವರೆಗೂ ಬಿಡದೇ ಹಿಡಿದಿಟ್ಟುಕೊಳ್ಳುವ ಕಾಂತೀಯ ಶಕ್ತಿ ಅವರ ಬರಹಕ್ಕಿದೆ.

ಇಲ್ಲಿಯವರೆಗೆ ಫೇಸ್ ಬುಕ್ ನಲ್ಲಿ, ವಾಟ್ಸಪ್ ನಲ್ಲಿ, ಇತರೆ ಸೋಸಿಯಲ್ ಮೀಡಿಯಾಗಳಲ್ಲಿ ಅವರನ್ನು ಓದಿರುವ ನಾನು ಅವರ ಅಭಿಮಾನಿಯಾಗಿರುವುದಂತೂ ದಿಟ. ಅವರ ಬರಹದ ಚುಂಬಕ ಶಕ್ತಿಯೇ ಹಾಗೆ, ಅವರ ಕಥೆಗಳಾಗಲೀ, ಕಾವ್ಯವಾಗಲೀ, ಲೇಖನಗಳಾಗಲೀ ಓದಲು ಆರಂಭಿಸಿದರೆ ಮುಗಿಯುವವರೆಗೂ ಬಿಡುವಂತಿರಲ್ಲ. ಅಷ್ಟು ಆಕರ್ಷಕ ವಾಗಿರುತ್ತೆ ಅವರ ಬರಹ. (ಎಲ್ಲೋ ಕೆಲವೊಮ್ಮೆ ತಮ್ಮ ಹಿರಿತನವನ್ನು ಮರೆತು ತುಂಟ ಹುಡುಗನಂತಾಗಿ ಬರೆಯುವುದಕ್ಕೆ ಒಬ್ಬ ಅಭಿಮಾನಿಯಾಗಿ ನನ್ನ ಆಕ್ಷೇಪವಿದೆ ಬಿಡಿ ಈಗ ಆ ಮಾತಿನ ಅವಶ್ಯಕತೆಯಿಲ್ಲ).ಅದರ ಸಾಲಿಗೆ ಮತ್ತೊಂದು ಸೇರ್ಪಡೆ -ಮಹಾಮಹಿಮ ಶ್ರೀ ಜಡೇ ಸಿದ್ಧ ಶಿವಯೋಗಿಗಳ ಲೀಲಾಮೃತ ಎನ್ನುವ ಅಮೃತದಂತಹ ಪುಸ್ತಕ.

ಒಬ್ಬ ಸಂತನಂತೆ ಬದುಕಿದ, ಅವಧೂತ, ಮಹಾಶರಣ ಜಡೆಯ್ಯನವರ ಪವಾಡಗಳ ಸಂಕಲನ ಈ ಪುಸ್ತಕ ವಾದರೂ...... ಆ ಪವಾಡಗಳನ್ನು ನನ್ನಂತಹ ಆಸ್ತಿಕನೂ ಅಲ್ಲದ ಅತ್ಲಾಗ ನಾಸ್ತಿಕನೂ ಅಲ್ಲದ ಎಡಬಿಡಂಗಿಗಳಿಗೂ ಮನಮುಟ್ಟುವಂತೆ ಹೇಳುವ ಪರಿ ಇದೆಯಲ್ಲ? ಅಲ್ಲಿಯೇ ನಮ್ಮ ಮಹಿಮ ಸರು ಗೆಲ್ಲೋದು. ನಾವೆಲ್ಲ ಬಹುಶಃ, ಮಂತ್ರಾಲಯದ ಗುರುರಾಯರನ್ನು, ಶಿರಡಿ ಸಾಯಿನಾಥನನ್ನು, ಪಂಡಿತ ಪಂಚಾಕ್ಷರಿ ಗವಾಯಿಗಳಂತ ಮಹಿಮರನ್ನೂ ಓದಿದವರೇನಲ್ಲ. ಆದರೆ ಅವರ ಲೀಲಾಮೃತಗಳನ್ನು ತೋರಿಸಿದ ಸಿನೆಮಾಗಳನ್ನು ನೋಡಿ ಅವರ ಮೇಲೆ ಭಕ್ತಿಯನ್ನು ಹೆಚ್ವಿಸಿಕೊಂಡವರು. ಆದರೆ ಸರು ಬರೆದಿರುವ ಈ "ಮಹಾಮಹಿಮ ಶ್ರೀ ಜಡೇ ಸಿದ್ಧ ಶಿವಯೋಗಿಗಳ ಲೀಲಾಮೃತ" ಎನ್ನುವ ಪುಸ್ತಕ ವಿದೆಯಲ್ಲ ಇದು ಮೂರು ತಾಸು ಅವರ ಪವಾಡಗಳನ್ನೆಲ್ಲ ಒಂದು ಸಿನೆಮಾದಂತೆ, ಒಂದೊಂದೇ ದೃಶ್ಯಗಳನ್ನು ನಮ್ಮ ಕಣ್ಣ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುತ್ತಾ ಹೋಗುತ್ತದೆ. ನಿಜ ಈ ಪುಸ್ತಕ ಇವತ್ತು ಪೋಸ್ಟ್ ಮೂಲಕ ನನ್ನ ಕೈ ಸೇರಿತು. ನನಗೆ ಗೊತ್ತಿತ್ತು ಹಿಡಿದರೆ ಬಿಡುವವರಲ್ಲ ಎಂದು ಅದಕ್ಕೇ ಮದ್ಯಾಹ್ನ ಉಂಡು, ಮಲಗಿ ಎದ್ದ ಮೇಲೇ ಪುಸ್ತಕ ಕೈಗಿಡಿದೆ. ಮೂರು ತಾಸಾಯಿತು ಈಗ ಪುಸ್ತಕ ಮುಚ್ಚಿ ಪೆನ್ನು ಕೈಗಿಡಿದಿದ್ದೇನೆ. ನನಗೆ ಮತ್ತೊಂದು, ಸಾಯಿನಾಥನ ಸಿನೆಮಾ, ರಾಯರ ಸಿನೆಮಾ ನೋಡಿದ ಅನುಭವವಾಯಿತು. ಅದಕ್ಕೇ ನಾನು ಹೇಳಿದ್ದು ಇದೊಂದು ದೃಶ್ಯಕಾವ್ಯ ಅಂತ.

ಬಳ್ಳಾರಿ ಜಿಲ್ಲೆಯ ಹಂದ್ಯಾಳ ಗ್ರಾಮ ಸಂಜಾತ ಜಡೆಯ್ಯನವರು ಮೊದಲೇ ಬೇಡವಾಗಿದ್ದ ಸಂಸಾರ ಬಂಧನವನ್ನು ತೊರೆದು, ಫಕೀರನಂತೆ ಊರೂರುಗಳನ್ನು ಅಲೆದು, ಮೂಢರ ಕಣ್ಣಿಗೆ ಅರೆಹುಚ್ಚನಂತೆ, ಇನ್ನೂ ಕೆಲವರಿಗೆ ಹುಚ್ಚನಂತೆ ಕಂಡ ಶರಣರು. ಈ ಜಡೆಯ್ಯ ತಾತನವರ ಪವಾಡಗಳ, ಲೀಲೆಗಳ ಹೂರಣ ತುಂಬಿದ ಹೋಳಿಗೆ ಈ ಸವಿಯಾದ ಪುಸ್ತಕ.

ಅರೆಬರೆ ಬಟ್ಟೆ ತೊಡುತ್ತಿದ್ದ ಅಲೆಮಾರಿ ಫಕೀರ, ಒಮ್ಮೊಮ್ಮೆ ನಗ್ನವಾಗಿಯೇ ತಿರುಗುತ್ತಿದ್ದ ನಿಜ ಶರಣನ ಅದ್ಭುತ ಪವಾಡಗಳನ್ನಾಗಲೀ ಲೀಲೆಗಳನ್ನಾಗಲೀ ನಾನಿಲ್ಲಿ ಉಲ್ಲೇಖಿಸಲಾರೆ. ಕಾರಣ ಈ ಪುಸ್ತಕವನ್ನು ನೀವೂ ಓದಿ ನಿಜಾನಂದವನ್ನು ಅನುಭವಿಸಲಿ ಅನ್ನುವುದು ನನ್ನ ಅಭಿಲಾಷೆ ಅಷ್ಟೆ. ಆದರೆ ಅವರ ಪವಾಡಗಳು ಕೃತಿಕಾರರ ಸಮೂಹ ಸನ್ನಿಯಂಥ ಬರವವಣಿಗೆಯಿಂದ ದೃಶ್ಯಗಳು ನಮ್ಮ ಕಣ್ಣ ಮುಂದೆ ಬರುತ್ತಾ ಹೋದಂತೆ ನಾನು ಥ್ರಿಲ್ಲಾಗಿರುವುದಂತೂ ಸತ್ಯ. ಕಾರಣ ಆ ಮಹಾ ಶರಣರು ನಾಗರಬೆಂಚಿ ಗ್ರಾಮಕ್ಕೆ ಬಂದು ಕೆಲ ದಿನ ನೆಲೆಸಿ ಹಲವಾರು ಪವಾಡಗಳನ್ನು ಮಾಡುತ್ತಾರೆ. ಆ ನಾಗರಬೆಂಚಿ ನನ್ನೂರು ಮಸ್ಕಿಗೆ ಹತ್ತಿದ ಊರು ನನ್ನ ಪರಮ ಗುರು ಅಮರಯ್ಯ ಮೇಷ್ಟ್ರ ಊರು. ಈಗ ನಾನು ಮೆಟ್ಟುತ್ತಿರುವ ಮಣ್ಣಿನಲ್ಲೇ ಆ ಮಹಾ ಮಹಿಮನೂ ನಡೆದಾಡಿರಬಹುದಲ್ಲವೇ .... ನಾ ಮೆಟ್ಟುವ ನೆಲ ಅದೆಂತ ಪುಣ್ಯ ಭೂಮಿಯಲ್ಲವೇ.... ಥ್ರಿಲ್ ಆಗದಿರುತ್ತದೆಯೇ.... ನೀವೇ ಹೇಳಿ. ಮುಂದೆ ಆ ಮಹಾ ವಿರಾಗಿ ಸಂಚರಿಸುತ್ತಾ ಸಂಚರಿಸುತ್ತಾ ನಮ್ಮ ಮೆಣೇದಾಳ ಗ್ರಾಮಕ್ಕೂ ಬಂದು ನೆಲೆಸುತ್ತಾರಂತೆ. ಮೆಣೇದಾಳ ನನ್ನ ತಂದೆಯ ಹುಟ್ಟೂರು. ಹೀಗಾಗಿ ನನ್ನ ತಂದೆಯ ಮನೆ, ಅಂಗಳ ನೆನಪಾಗಿ ನನ್ನ ಕಂಣಂಚು ವದ್ದೆಯಾಗಿದ್ದು ಸುಳ್ಳಲ್ಲ. ಮುಂದೆ ಗುರು ಸಿದ್ಧಾರೂಢರ ನೆಲೆ ಹುಬ್ಬಳ್ಳಿಗೂ ಬರುತ್ತಾರೆ. ನನಗೆ ವಿದ್ಯೆ, ಬುದ್ದಿ ಕಲಿಸಿದ ನಾಡು ಈ ಹುಬ್ಬಳ್ಳಿ-ಧಾರವಾಡ ಹೀಗಾಗಿ ಈ ಕೃತಿ ನನಗೆ ತುಂಬಾ ತುಂಬಾ ಕನೆಕ್ಟ್ ಆಯ್ತು. ಕೃತಿಯ ಅಂತ್ಯದಲ್ಲಿ ಮಹಾಮಹಿಮರ ಅಂತಿಮ ದಿನಗಳನ್ನು ವಿವರಿಸುವಲ್ಲಿ ಲೇಖಕರು ಬರೀ ಲೇಖಕರಾಗಿಲ್ಲ. ಬಹುಶಃ ಆ ಜಡೇ ಶಿವಯೋಗಿಗಳೇ ಅವರೊಳಗೆ ಆವಾಹನೆಯಾಗಿ ಬರೆಸಿದಂತಿದೆ ಆ ದೃಶ್ಯಗಳು. ಅವರ ಮಹಿಮೆಗಳನ್ನು ಪವಾಡಗಳನ್ನು ಕಣ್ಣಿಗೆ ರಾಚುವಂತೆ ದೃಶ್ಯಗಳನ್ನಾಗಿ ಪರಿವರ್ತಿಸುವಲ್ಲಿ ಲೇಖಕರು ಗೆದ್ದಿದ್ದಾರೆ. ಕೊನೆಯ ಹದಿನೆಂಟಿಪ್ಪತ್ತು ಪೇಜುಗಳಂತೂ....ಯೋಗಿಗಳು ಲಿಂಗದಲ್ಲಿ ಲೀನವಾಗುವ ದೃಶ್ಯಗಳೇ ಇವೆ. ಅಲ್ಲಿ ಹಾನಗಲ್ಲ ಕುಮಾರಸ್ವಾಮಿಗಳೂ ಸೇರಿದಂತೆ ನೂರಾರು ಶರಣರ ಕಣ್ಣಾಲೆಗಳು ಒದ್ದೆಯಾಗಿರುತ್ತವೆ‌ ಜೊತೆಗೆ ನಮ್ಮವೂ ಕೂಡ. ಇಲ್ಲಿ ಲೇಖಕರ ಮೂಲಕ ಆ ಅವಧೂತ ಹೇಳಿಸಿರುವ ಕೆಲ ಮಾತುಗಳನ್ನು ನಾನು ಉಲ್ಲೇಖಿಸಲೇ ಬೇಕು

• ಸಮಾಧಿಯೇ ಸಮಾಧಾನ
•ಇವನ ನಿರ್ಗಮನ ಆನಂದದಾಯಕವಾದುದು, ಆನಂದದಿಂದ ಕಳಿಸಬೇಕು, ಶಿವನಿಗದೇ ಪ್ರೀತಿ,
•ಆನಂದವೇ ಶಿವ
•ಕಾಯಕದೊಳನ್ನವ ಹುಡುಕಿ ಪಡೆಯಬೇಕು
•ಶಿವ ಅಕ್ಕರದಿ ಅಪ್ಪಿಕೊಳ್ಳುವ ಮನೋ ಸೌಂದರ್ಯ ನಮ್ಮದಾಗಬೇಕು ಹೀಗೆ

ಆಧ್ಯಾತ್ಮ ಶಿಖರದ ತುತ್ತ ತುದಿಯಲ್ಲಿ ಸದಾ ಆನಂದತುಂದಿಲರಾಗಿ ವಿಹರಿಸುವ ಶ್ರೇಷ್ಠ ಆತ್ಮಗಳಿಂದ ಮಾತ್ರ ಹೊರಬರಬಹುದಾದ ಮಾತುಗಳಿವು.

ಕೃತಿಯ ಕೊನೆಯಲ್ಲಿ ಇಂತಹ ನೂರೆಂಟು ಪದ ಪುಂಜಗಳಿವೆ. ಶ್ರೀಶೈಲ ವನ್ನು ಲೇಖಕರು ಶ್ರೀಗಿರಿ ಎಂದು ಉಲ್ಲೇಖಿಸಿ ಓದುಗರ ಒಂದು ವಿಶಿಷ್ಟ ಪ್ರೀತಿ ಗಳಿಸುತ್ತಾರೆ. ಹೀಗೆ ಈ ಕೃತಿ ಓದಿದ ಮೇಲೆ, ಬಹುದಿನಗಳ ನಂತರ, ತುಂಬಾ ದಿನಗಳ ಹಿಂದೆ ನಡೆದ ಪವಾಡ ಪುರಷನೊಬ್ಬನ ಲೀಲೆಗಳ ಸವಿಯೂಟ ಉಂಡ ಅನುಭವವಾಗುವದಂತೂ ನಿಶ್ಚಿತ. ಅದನ್ನು ಸಾಧ್ಯವಾಗಿಸಿದ 'ಮಹಿಮ' ಸರ್ರಿಗೆ ಶರಣು ಶರಣಾರ್ಥಿ ಹೇಳುತ್ತಾ ನೀವೂ ಒಮ್ಮೆ ಈ ಕೃತಿಯನ್ನು ಓದಿ ಎಂದು ಬಿನ್ನಹಿಸಿಕೊಳ್ಳುತ್ತೇನೆ

ಮುಗಿಸುವ ಮುನ್ನ:- ಕೃತಿಯಲ್ಲಿ ಬರುವ ಒಂದು ಪ್ರಸಂಗದಲ್ಲಿ ಅಲ್ಪಮತಿಯಾದ ನನಗೆ ತಿಳಿಯದ್ದರ ಕುರಿತು, ಇಲ್ಲಿ ಹಾನಗಲ್ಲ ಕುಮಾರ ಸ್ವಾಮಿಗಳಿಗೆ -"ಈ ದೇಹವೇ ದೇಗುಲವಾಗಿರುವಾಗ, ಲಿಂಗವಾಗಿರುವಾಗ ಕಣ್ಣಿಗೆ ಕಾಣುವಂತೆ ಕೊರಳಲ್ಲಿ ಲಿಂಗವನ್ನು ಧರಿಸಬೇಕೆ? ಎಂಬ ಜಿಜ್ಞಾಸೆ ಮೂಡುತ್ತದೆ. ಅದಕ್ಕೆ ಪರಿಹಾರ ಕಂಡುಕೊಳ್ಳಲು ಅವರು ಅವಧೂತ ಶ್ರೀ ಜಡೇ ಸಿದ್ಧಶಿವಯೋಗಿಗಳ ಹತ್ತಿರ ಬರುತ್ತಾರೆ. ಆಗ ಅವಧೂತರು ಕುಮಾರ ಸ್ವಾಮಿಗಳಿಗೆ "ಈಶ್ವರ ಸತ್ಯ, ಜಗನ್ಮಿಥ್ಯ ಕುಮಾರೇಶ, ದೇಹ ಲಿಂಗವಾಗುವವರೆಗೆ ಲಿಂಗ ಬೇಕೇ ಬೇಕು‌ ಆಮೇಲೆ ಬಟಾ ಬಯುಲು ನೀನು ಅವನು ಒಂದಾ" ಎನ್ನುವ ಮಾತಿನ ಉಲ್ಲೇಖವಿದೆ. ಈ ಮಾತಿನ ಒಳಾರ್ಥವನ್ನ ಅರಗಿಸಿಕೊಳ್ಳುವ ಶಕ್ತಿ ಅಲ್ಪ ಮತಿಯಾದ ನನ್ನಂಥವನಿಗಿಲ್ಲ.

- ಆದಪ್ಪ ಹೆಂಬಾ

MORE FEATURES

ಅಜ್ಞಾತವೆಂಬುದು ಬಗೆದಷ್ಟೂ ಹಿರಿದಾಗುವ, ಅರಿತಷ್ಟೂ ಆಳವಾಗುವ ಕ್ರಿಯೆ

23-09-2024 ಬೆಂಗಳೂರು

“ಅಜ್ಞಾತವೆಂಬುದು ಬಗೆದಷ್ಟೂ ಹಿರಿದಾಗುವ, ಅರಿತಷ್ಟೂ ಆಳವಾಗುವ, ಒಳಗೆ ಹೊಕ್ಕಷ್ಟೂ ವಿಸ್ತಾರವಾಗುವ ಅಚ್ಚರಿ ಎನ್ನುತ...

ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ: ರಾಜಕುಮಾರ ಮಾಳಗೆ

23-09-2024 ಬೆಂಗಳೂರು

“ಜಿ.ಬಿ.ವಿಸಾಜಿ ಅವರು ಸಾಹಿತ್ಯದ ಜೊತೆಗೆ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಭಾಲ್ಕಿ ತಾಲೂಕು ವರದಿಗಾರ...

ಸಾವು ಯಾವಾಗಲೂ ಕಂಡ ಅನುಭವವೇ ಹೊರತು ಉಂಡ ಅನುಭವ ಅಲ್ಲ!

22-09-2024 ಬೆಂಗಳೂರು

“ಸಾವನ್ನು ಹಲವು ದಿಕ್ಕುಗಳಿಂದ ನೋಡಲು ಸಾಧ್ಯ. ಸ್ವಂತ ಸಾವಿನ ಆಚೆಗೂ ಹಲವು ಬಗೆಯ ಸಾವುಗಳಿವೆ. ಈ ಸಂಕಲನ ಅಂತಹ ಬಹು...