ನಿಸರ್ಗ: ಪ್ರಾದೇಶಿಕ ಪರಿಸರದ ದಟ್ಟ ಚಿತ್ರಣ

Date: 27-01-2022

Location: ಬೆಂಗಳೂರು


ನಿಸರ್ಗ” ಪ್ರಾದೇಶಿಕ ಕಾದಂಬರಿಯೆಂದೇ ಪ್ರಸಿದ್ಧವಾಗಿದೆ. ಪ್ರಾದೇಶಿಕತೆಗೆ ಅನುಗುಣವಾಗಿ ಇಲ್ಲಿಯ ಪಾತ್ರಪ್ರಪಂಚವೂ ರೂಪುಗೊಂಡಿದೆ ಎನ್ನುತ್ತಾರೆ ಲೇಖಕ ಶ್ರೀಧರ ಹೆಗಡೆ ಭದ್ರನ್. ಅವರು ತಮ್ಮ ಬದುಕಿನ ಬುತ್ತಿ ಅಂಕಣದಲ್ಲಿ ಮಿರ್ಜಿ ಅಣ್ಣಾರಾಯರ ಪ್ರಸಿದ್ಧ ಕಾದಂಬರಿ ‘ನಿಸರ್ಗ’ದ ಕುರಿತು ವಿಶ್ಲೇಷಿಸಿದ್ದಾರೆ. 

‘ಕನ್ನಡ ಕಾದಂಬರಿ ಪ್ರಪಂಚದಲ್ಲಿ ಸಂಭವಿಸಿದ ಒಂದು ಅತ್ಯಂತ ಕುತೂಹಲಕಾರಿ ಘಟನೆ’ ಎಂಬ ಅಭಿದಾನಕ್ಕೆ ಪಾತ್ರವಾದ ಕಾದಂಬರಿ ‘ನಿಸರ್ಗ’. 1945ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಇದು ಮಿರ್ಜಿ ಅಣ್ಣಾರಾಯರ ಮೊದಲನೆಯ ಕಾದಂಬರಿ. ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಮಿರ್ಜಿಯವರು ಅನಂತರ ರಾಷ್ಟ್ರಪುರುಷ, ರಾಮಣ್ಣ ಮಾಸ್ತರು, ಅಶೋಕ ಚಕ್ರ, ಭಸ್ಮಾಸುರ ಮುಂತಾದ ಹಲವು ಕಾದಂಬರಿಗಳನ್ನು ರಚಿಸಿದರು. ಆದರೆ ಅವು ಯಾವುವೂ ‘ನಿಸರ್ಗ’ದ ಮಟ್ಟಕ್ಕೆ ಏರಲಿಲ್ಲ ಎಂಬುದು ಆ ಕೃತಿಯ ಅನನ್ಯತೆಯಾಗಿದೆ. ಕನ್ನಡ ಪ್ರಾದೇಶಿಕ ಕಾದಂಬರಿಗಳ ಸಾಲಿನಲ್ಲಿ ಪ್ರಮುಖ ಕೃತಿ ಎಂದು ದಾಖಲಾಗಿರುವ ‘ನಿಸರ್ಗ’ ಹಲವು ಬಗೆಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ. ಪ್ರಾದೇಶಿಕ ಕಾದಂಬರಿಗಳ ಗುಣಲಕ್ಷಣಗಳನ್ನೇನೂ ಅಧ್ಯಯನ ಮಾಡದೆ ಮಿರ್ಜಿಯವರು ರಚಿಸಿದ ಈ ಕೃತಿ ಇಂದಿಗೂ ತನ್ನ ಭಾಷೆ ಹಾಗೂ ಸಂವೇದನೆಯ ಪ್ರಾಮಾಣಿಕತೆಯಿಂದ ತಾಜಾ ಅನಿಸುತ್ತದೆ. ಇದನ್ನೇ ಡಾ. ಶಾಂತಿನಾಥ ದೇಸಾಯಿಯವರು; “ಇಂಗ್ಲಿಷ್ ವಿದ್ಯಾಭ್ಯಾಸದ ಪ್ರಭಾವದಿಂದ ದೂರವುಳಿದು, ಬರೀ ಮರಾಠಿ ಸಾಹಿತ್ಯವನ್ನೋದಿಕೊಂಡು, ಸ್ವಂತ ಜೀವನದ ಸಾಮಗ್ರಿಯನ್ನು ಉಪಯೋಗಿಸಿಕೊಂಡು ಬರೆದಂಥ ತಮ್ಮ ಮೊದಲ ಕಾದಂಬರಿ ಇಷ್ಟೊಂದು ಪ್ರಸಿದ್ಧಿಯನ್ನು ಪಡೆದು ಬಹುಮಾನ ಇತ್ಯಾದಿಗಳನ್ನು ಗಳಿಸೀತೆಂದು ಸ್ವತಃ ಅಣ್ಣಾರಾಯರಿಗೇ ಅನಿಸಿರಲಿಕ್ಕಿಲ್ಲ”. ಎನ್ನುವ ಮೂಲಕ ಮಿರ್ಜಿಯವರ ಬರವಣಿಗೆಗೆ ಸುವರ್ಣದ ಚೌಕಟ್ಟನ್ನಿಟ್ಟಿದ್ದಾರೆ.

ಮದುವೆಯ ಮನೆಯಿಂದ ಆರಂಭವಾಗಿ ಮಸಣದಲ್ಲಿ ಕೊನೆಗೊಳ್ಳುವ ಕಾದಂಬರಿಯ ವಸ್ತು; ಅನಂತ-ತಾರೆಯರ ದುರಂತ ಪ್ರೇಮದ ಕಥನ. ಇದು ಇಬ್ಬರ ಕಥೆಯನ್ನು ಮಾತ್ರ ಒಳಗೊಳ್ಳದೇ ಸಾರ್ವತ್ರಿಕಗೊಳ್ಳುವುದು ಕೃತಿಯ ಯಶಸ್ಸಾಗಿದೆ. ಹಳ್ಳಿಯಲ್ಲೇ ಹುಟ್ಟಿ, ಬೆಳೆದ, ಬದುಕಿದ ಮಿರ್ಜಿಯವರು ಅಲ್ಲಿಯ ಬದುಕಿನ ಒಳನೇಯ್ಗೆಯನ್ನು ಅರಿತವರು. ಅದೂ ತಮ್ಮ ಸಮುದಾಯವಾದ ಜೈನ ಬದುಕಿನ ಅಧಿಕೃತ ತಿಳಿವಳಿಕೆಯಿದ್ದವರು. ಅಲ್ಲಿಯ ಸಂಪ್ರದಾಯಗಳು, ಮದುವೆಯ ಸಂಭ್ರಮಗಳು, ಗಂಡನ ಮನೆಗೆ ಕಳಿಸಿಕೊಡುವಾಗ, ಸೊಸೆಯನ್ನು ಮನೆ ತುಂಬಿಸಿಕೊಳ್ಳುವಾಗ ಮಾಡುವ ಶಾಸ್ತ್ರಗಳು; ದೇವತೆಗಳ ಪೂಜೆ, ಹಬ್ಬ, ವ್ರತಾಚರಣೆ –ಇಂತಹ ಸಂದರ್ಭಗಳಲ್ಲಿ ತನ್ನ ದರ್ಪ ತೋರಿಸುವ ಪಂಡಿತ ಅಂದರೆ ಪುರೋಹಿತ; ಉಡಿಕೆ ಪದ್ಧತಿ, ಜಾತ್ರೆ, ಪೂಜಾರಿಯ ಮೈಮೇಲೆ ಬರುವ ದೇವರು, ಭವಿಷ್ಯವಾಣಿ ಇಂತಹ ಹಲವು ಹದಿನೆಂಟು ಆಚಾರಗಳ ನೈಜ ನಿರೂಪಣೆಯ ಮೂಲಕ ಕಾದಂಬರಿಗೆ ಅವರು ಕಸುವು ತುಂಬಿದ್ದಾರೆ. ಈ ಕುರಿತು ಹಿರಿಯ ವಿಮರ್ಶಕ ರಂ. ಶ್ರೀ. ಮುಗಳಿಯವರು; “ಪ್ರಾದೇಶಿಕ ಕಾದಂಬರಿಗಳಲ್ಲಿ ನಿಸರ್ಗ ಗಣ್ಯವಾದ ಸ್ಥಾನವನ್ನು ಪಡೆಯುತ್ತದೆ. ಕಥೆಯ ಓಟಕ್ಕೆ ಬಾಧೆ ಬಾರದಂತೆ, ವರ್ಣನೆ ಮಿತಿ ಮೀರದಂತೆ, ಆಯಾ ಪ್ರದೇಶದ ರೀತಿ, ನಡತೆಗಳನ್ನು ಅಣ್ಣಾರಾಯರು ಚೆನ್ನಾಗಿ ಬಣ್ಣಿಸಿದ್ದಾರೆ. ಜೈನ ಸಮಾಜದ ಕುಟುಂಬಗಳು ನೆಲೆಸಿದ ಹಳ್ಳಿಗಳ ಹಿನ್ನೆಲೆಯಿರುವ ಈ ಕಾದಂಬರಿಯು ಬೆಳಗಾವಿ ಜಿಲ್ಲೆಯ ಉತ್ತರತುದಿಯ ಹಳ್ಳಿಗಳಲ್ಲಿಯ ಜನಜೀವನ, ಅದರಲ್ಲಿಯೂ ಜೈನ ಸಮಾಜದ ಚಿತ್ರ ಈ ಕಾದಂಬರಿಯಲ್ಲಿ ಮೊದಲನೆಯ ಸಲ ಬಂದಿದ್ದು ಇದರ ಹೆಚ್ಚಿನ ವೈಶಿಷ್ಟ್ಯವಾಗಿದೆ” ಎಂದಿದ್ದಾರೆ. – ಇಲ್ಲಿ ನಿಸರ್ಗ ಕಾದಂಬರಿಯ ಪ್ರಾದೇಶಿಕ ವೈಶಿಷ್ಟ್ಯದ ಮೇಲೆಯೇ ಒತ್ತು ಬಿದ್ದಿದೆ.

ಇಲ್ಲಿಯ ಪ್ರಾದೇಶಿಕ ಚೌಕಟ್ಟು ಅಥಣಿ ತಾಲೂಕನ್ನು ಮೀರಿ ಹೋಗುವುದಿಲ್ಲ. ಕಾದಂಬರಿಯ ಮುಖ್ಯ ಕಥೆ ನಡೆಯುವುದು ಅಥಣಿ ತಾಲೂಕಿನ ‘ಚಂದೂರಿ’ನಲ್ಲಿ. ಮುಂದೆ ಕಾದಂಬರಿ; ಹಾರೂಗೇರಿ, ಐನಾಪುರ, ತೇರದಾಳ, ಕುರಂದವಾಡ, ಕುಡಚಿ, ಮಂಗಸೂಳಿ, ಪರಮಾನಟ್ಟಿ ಹೀಗೆ ಅದೇ ತಾಲೂಕಿನ ಸುತ್ತಲ ಊರುಗಳಲ್ಲೇ ಬೆಳೆಯುತ್ತದೆ. ಸೇಡಬಾಳದ ಸುತ್ತಲಿನ ಪ್ರದೇಶದ ಆಡುಭಾಷೆ ಬಳಕೆಯಾಗಿದೆ. 

ಅನಂತ ಕಾದಂಬರಿಯ ನಾಯಕ. ಅವನು ಜೈನ ಮನೆತನದ ಹುಡುಗ. ಶಾಲೆಯಲ್ಲಿ ಕಲಿಯಲು ಜಾಣ, ಮೃದು ಹೃದಯದವನು. ನಾಯಕಿ ತಾರಾ. ಅವನ ಸಮೀಪದ ಬಂಧುಗಳ ಮನೆಯ ಹುಡುಗಿ. ಚುರುಕಾದ, ತಕ್ಕಮಟ್ಟಿಗೆ ಗಟ್ಟಿಮನಸ್ಸಿನ ಹುಡುಗಿ. ಇವರಿಬ್ಬರ ಮಧ್ಯೆ ಅರಿವಿಲ್ಲದಂತೆ ಒಲವು ಬೆಳೆಯುತ್ತದೆ. ನಿಸರ್ಗಸಿದ್ಧವಾದ ಪ್ರೇಮವಾದರೂ ನಿಯಮ ವಿರುದ್ಧವಾದ ಪ್ರೇಮದ ಸುಳಿಯಲ್ಲಿ ಸಿಕ್ಕಿಕೊಂಡ ಪ್ರೇಮಿಗಳು ತಮ್ಮ ಪ್ರೇಮವನ್ನು ಬಹಿರಂಗವಾಗಿ ವ್ಯಕ್ತಪಡಿಸಲಾಗುವುದಿಲ್ಲ. ಹೀಗಾಗಿ ತಾರೆಯ ಮದುವೆ ಭರಮನೆಂಬ ಬೇರೊಬ್ಬ ಯುವಕನೊಂದಿಗೆ ನಡೆದು ಹೋಗುತ್ತದೆ. ಭರಮನೊಂದಿಗೆ ಮದುವೆಯಾದರೂ ತಾರೆಗೆ ಸಾಂಸಾರಿಕ ನೆಮ್ಮದಿ ದೊರೆಯುವುದಿಲ್ಲ. ಇದಕ್ಕೆ ತಾರೆಯ ಅತ್ತೆ ಚಿಮ್ಮವ್ವನ ದುಷ್ಟತನ ಹಾಗೂ ಭರಮನ ಪುಕ್ಕಲುತನ ಕಾರಣ.  ಹಲವು ರೀತಿಯಲ್ಲಿ ಸೊಸೆಯನ್ನು ಕಾಡುವ ಅತ್ತೆ ಚಿಮ್ಮವ್ವ ಮಗನಿಗೆ ಬೇರೆ ಮದುವೆ ಮಾಡುತ್ತಾಳೆ. ಇದನ್ನು ವಿರೋಧಿಸುವ ಧೈರ್ಯವೂ ಭರಮನಿಗಿಲ್ಲ. 

ಈ ಸಮಯಕ್ಕಾಗಲೇ ಕಾಲೇಜು ಕಲಿತಿರುವ ತರುಣ ಅನಂತ ಈಗಲೂ ತಾರೆಯನ್ನು ಮದುವೆಯಾಗುವ ಧೈರ್ಯ ತೋರುವುದಿಲ್ಲ. ಅವಳ ಸ್ಥಿತಿಗಾಗಿ ಒಳಗೊಳಗೇ ಮರುಗುತ್ತಾನೆ. ಆದರೆ ತಾರೆ ಬದುಕಿಗೆ ಬೇಕಾದ ಧೈರ್ಯ ಒಗ್ಗೂಡಿಸಿಕೊಂಡಿದ್ದಾಳೆ. ಅನಂತನೊಂದಿಗೆ ಬಾಳುವೆ ಮಾಡಲು ಅವಳು ಸಿದ್ಧಳು. ಆತನೊಂದಿಗೆ ಓಡಿಹೋಗಲೂ ಅವಳು ತಯಾರು. ಆದರೆ ಅನಂತನಿಗೆ ಬಳಗಕ್ಕೆದುರಾಗಿ ತಾರೆಯನ್ನು ಸ್ವೀಕರಿಸುವ ಶಕ್ತಿಯಿಲ್ಲ. ಕೊನೆಗೆ ತಾರೆಯನ್ನು ಅಪ್ಪಣ್ಣ ಎಂಬಾತನೊಂದಿಗೆ ಉಡಿಕೆ ಮಾಡಲಾಗುತ್ತದೆ. ಈ ಕುಟುಂಬ ಅನಂತನನ್ನು ವಾತ್ಸಲ್ಯದಿಂದ ನೋಡುತ್ತದೆ. ಅನಂತನಿಗೂ ತೃಪ್ತಿಕರವಾಗಿ ಸಾಂಸಾರಿಕ ಜೀವನ ಸಾಗಿಸಲು ಸಾಧ್ಯವಾಗುವುದಿಲ್ಲ. ವೇಶ್ಯೆಯರ ಸಹವಾಸ ಮಾಡುತ್ತಾನೆ. ಇತ್ತ ತಾರೆಯ ಬದುಕೂ ಶುದ್ಧವಾಗುವುದಿಲ್ಲ. ಅವಳ ಗಂಡನೂ ಅದೇ ಕೆಲಸ ಮಾಡುತ್ತಾನೆ. 

ಬದುಕಿನಲ್ಲಿ ಹಲವು ಹೊಡೆತಗಳನ್ನು ತಿಂದು ಬಳಲಿ ಹೋದ ತಾರೆಯ ಆರೋಗ್ಯ ಹದಗೆಡುತ್ತದೆ. ತೀರಾ ಬಡಕಲು ಹಾಗೂ ಅಶಕ್ತಳಾಗಿದ್ದಾಳೆ. ತನ್ನ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕೆಂಬ ಆಸಕ್ತಿಯೂ ಈಗ ಅವಳಲ್ಲಿ ಉಳಿದಿಲ್ಲ. ಅನಂತ ಕ್ಷಯ ರೋಗಿಯಾಗಿ ಎತ್ತಲೋ ಹೋಗಿಬಿಟ್ಟಿರುತ್ತಾನೆ. ಅವನು ತಾರೆಯ ಭೇಟಿಗೆ ಬರುತ್ತಾನೆ ಎಂದಿದ್ದರಿಂದ ಅವನನ್ನು ಹುಡುಕಿಕೊಂಡು ಒಬ್ಬ ಆಳು ಹಾರೂಗೇರಿಗೆ ಬರುತ್ತಾನೆ. ಅನಂತ ಇಲ್ಲಿಗೆ ಬರುತ್ತೇನೆಂದು ಹೇಳಿದವನ ಪತ್ತೆಯೇ ಇಲ್ಲ ಎಂದು ಆತ ಹೇಳಿದಾಗ ಅದನ್ನು ಕೇಳಿದ ತಾರಾ; “ಆಂ! ನನ್ನ ನನ್ನ ಕಡೆ ಬತ್ಯಾನ ಅಂದಿದ್ದಾ! ಖರೇಯಾನ? ಇಲ್ಲಿ ಬರತ್ಯಾನ ಅಂದಾ!” ಎನ್ನುತ್ತಲೇ ಕಟ್ಟೆಯ ಮೇಲಿಂದ ಕೆಳಗುರುಳುತ್ತಾಳೆ. ಮುಂದೆರಡು ದಿನಗಳಲ್ಲೇ ಅವಳಿಗೆ ಗರ್ಭಸ್ರಾವವಾಗುತ್ತದೆ. ಅತ್ತೆ ಅಮ್ಮವ್ವ ಅವಳನ್ನು ಹಂಗಿಸುತ್ತಾಳೆ, ಹಿಂಸೆ ನೀಡುತ್ತಾಳೆ.

ಗಂಡನ ಮನೆಯಲ್ಲಿ ತೀವ್ರತರವಾದ ಹಿಂಸೆಯನ್ನು ಅನುಭವಿಸುವ ತಾರಾ ಗಂಡ ಅಪ್ಪಣ್ಣನ ದೈಹಿಕ ಹಿಂಸೆಯನ್ನು ತಾಳಲಾರದೆ ಜ್ವರದಿಂದ ಪ್ರಜ್ಞೆ ಕಳೆದುಕೊಳ್ಳುತ್ತಾಳೆ. ನಾಲ್ಕು ದಿನ ಕಳೆದರೂ ಜ್ವರ ಇಳಿಯುವುದಿಲ್ಲ. ಅವಳ ತಂದೆ-ತಾಯಿ ತಾರಾಳನ್ನು ಚಂದೂರಿಗೆ ಕರೆತರುತ್ತಾರೆ. ಅನಂತನನ್ನು ನೋಡುವ ನಿರೀಕ್ಷೆಯಲ್ಲಿಯೇ ತಾರಾ ಕೊನೆಯುಸಿರೆಳೆಯುತ್ತಾಳೆ. ತಾರೆಯನ್ನು ಒಮ್ಮೆ ನೋಡಬೇಕೆನ್ನಿಸಿ ಅನಂತ ಬಡಕಲಾದ ಶರೀರದೊಂದಿಗೆ ಹಳ್ಳಿಗೆ ಬರುತ್ತಾನೆ. ಆ ವೇಳೆಗೆ ಅವಳ ಶವವನ್ನು ಸ್ಮಶಾನಕ್ಕೆ ಒಯ್ದಿರುತ್ತಾರೆ. ಅನಂತ ಅಲ್ಲಿಗೆ ಹೋಗುವ ಸಮಯಕ್ಕೆ ಚಿತೆ ಧಗಧಗಿಸಿ ಉರಿಯುತ್ತಿರುತ್ತದೆ. ಸೇರಿದವರಿಗೆ ಏನಾಗುತ್ತಿದೆ ಎಂಬುದು ಅರಿವಾಗುವುದರೊಳಗೆ ಅನಂತ ನೇರವಾಗಿ ಆ ಚಿತೆಯ ಬೆಂಕಿಯಲ್ಲಿ ಪ್ರವೇಶಿಸಿಬಿಟ್ಟಿರುತ್ತಾನೆ. ತಾನೂ ತಾರೆಯೊಂದಿಗೆ ಸುಟ್ಟು ಬೂದಿಯಾಗುತ್ತಾನೆ. 

***
ನಿಸರ್ಗ ಪ್ರಾದೇಶಿಕ ಕಾದಂಬರಿಯೆಂದೇ ಪ್ರಸಿದ್ಧವಾಗಿದೆ. ಪ್ರಾದೇಶಿಕತೆಗೆ ಅನುಗುಣವಾಗಿ ಇಲ್ಲಿಯ ಪಾತ್ರಪ್ರಪಂಚವೂ ರೂಪುಗೊಂಡಿದೆ. ಶಿಕ್ಷಣ ವಂಚಿತ, ಒರಟು ವ್ಯಕ್ತಿತ್ವದ ಸಹಜ ಪಾತ್ರಗಳೇ ಕಾಡಿನಲ್ಲಿ ಸಹಜವಾಗಿ ಇರುವ ಮರಗಳಂತೆ ಬೆಳೆದುಕೊಂಡಿವೆ. ಮುಗ್ಧ ಪ್ರೇಮದ ಚಿತ್ರಣದೊಂದಿಗೆ ಕೆಡುಕಿನ ಮೂರ್ತ ರೂಪವಾಗಿ ಮಿರ್ಜಿಯವರು ತಾರೆಯ ಅತ್ತೆ ಚಿಮ್ಮವ್ವನ ಪಾತ್ರವನ್ನು ರೂಪಿಸಿದ್ದಾರೆ. ಎಂತಹ ಸಂದರ್ಭದಲ್ಲಿಯೂ ಅವಳಲ್ಲಿ ಮಾನವೀಯತೆಯ ಸೆಲೆ ಒಸರುವುದೇ ಇಲ್ಲ. ಅವಳೆಷ್ಟು ಜೀವವಿರೋಧಿಯೆಂದರೆ ತನ್ನ ಮನಸ್ಸಿನ ಹಟ ಸಾಧನೆಗಾಗಿ ಸೊಸೆ ತಾರಾ ಐದಾರು ವರ್ಷ ಗಂಡನ ಮನೆಯಲ್ಲಿ ಇದ್ದರೂ ಅವರಿಬ್ಬರನ್ನು ಒಂದು ಮಾಡದೇ ತನ್ನ ಕ್ರೌರ್ಯವನ್ನು ಮೆರೆಯುತ್ತಾಳೆ. ತನ್ನ ಅಹಂಕಾರ, ಹಟಗಳಿಂದಾಗಿ ತನ್ನ ಮನೆಯನ್ನೂ ಒಡೆಯುತ್ತಾಳೆ, ಮಗ ಸೊಸೆಯನ್ನೂ ಅಸುಖಿಯನ್ನಾಗಿಸುತ್ತಾಳೆ, ಕೊನೆಗೆ ಎಲ್ಲರಿಗೂ ಬೇಡವಾಗಿ ನವೆಯುತ್ತಾಳೆ. ಅವಳ ನಾಲಗೆ ಖಡ್ಗದಷ್ಟು ಹರಿತ. ಎಂತಹ ಎದುರಾಳಿಗಳನ್ನೂ ಸೋಲಿಸಬಲ್ಲ ಶಕ್ತಿ ಅವಳ ನಾಲಗೆಯದು. ಇಡೀ ಕಾದಂಬರಿಯ ಕೆಡುಕಿನ ಪ್ರತೀಕವಾಗಿ ಚಿಮ್ಮವ್ವ ಇದ್ದಾಳೆ. 

ತಾರಾಳ ಅವ್ವ ರತ್ನವ್ವ ಜಾಣ ಹೆಣ್ಣು. ಗಂಡನ ಮಾತು ಕೇಳುವ ಅತಿಯಿಂದಾಗಿ ಮಗಳನ್ನು ಸೋದರಳಿಯ ಭರಮನಿಗೆ ಕೊಡಲು ಸಮ್ಮತಿಸುತ್ತಾಳೆ. ಮಗಳ ಅಭ್ಯುದಯಕ್ಕಾಗಿ ಅವಳು ಮಾಡಿದ್ದೆಲ್ಲ ಹೊಳೆಯಲ್ಲಿ ಹುಣಸೀ ಹಣ್ಣು ತೊಳೆದಂತೆ ಆಗುತ್ತದೆ. ಅವಳು ನಿರ್ವಿಣ್ಣಳಾಗಿದ್ದಾಳೆ. ಅಳಿಯ ಭರಮ ಸ್ವಂತ ಬುದ್ಧಿಯೇ ಇಲ್ಲದವನು. ತಾಯಿಯ ಸೆರಗು ಹಿಡಿದು ತಾರೆಯ ಬದುಕಿಗೆ ಬೆಂಕಿಯಿಡುತ್ತಾನೆ. ಕಾದಂಬರಿಯುದ್ದಕ್ಕೂ ಕಾಣಿಸಿಕೊಳ್ಳುವ ಭರಮ ಬುದ್ಧಿಯಿಲ್ಲದ ಎಬಡ. ತಾರಾಳನ್ನು ಕಳೆದುಕೊಂಡ ನಂತರ ಇನ್ನೊಂದು ಮದುವೆಯಾದ ಮೇಲೆ ಸ್ವಲ್ಪ ಎಚ್ಚರಗೊಳ್ಳುತ್ತಾನೆ. 

ಕಾದಂಬರಿಯ ಕೇಂದ್ರ ಪಾತ್ರಗಳಾದ ಅನಂತ-ತಾರೆಯರನ್ನು ತೂಗಿದರೆ ತಾರಾಳ ತೂಕವೇ ಹೆಚ್ಚಾಗುತ್ತದೆ. ಅವಳು ಅನಂತನನ್ನು ಕೊನೆಯವರೆಗೂ ಮರೆಯುವುದಿಲ್ಲ. ಆತನನ್ನು ಮನಃಪೂರ್ವಕವಾಗಿ ಪ್ರೀತಿಸುತ್ತಾಳೆ, ಅವನ ಅಭ್ಯುದಯಕ್ಕಾಗಿ ಹಂಬಲಿಸುತ್ತಾಳೆ. ಉಡಿಕೆ ಮಾಡಿಕೊಂಡ ಗಂಡ ಅಪ್ಪಣ್ಣನ ಬಗ್ಗೆ ಒಂದು ರೀತಿಯ ತಿರಸ್ಕಾರವಿದ್ದರೂ ಅವನನ್ನು ಅಲಕ್ಷ್ಯ ಮಾಡುವುದಿಲ್ಲ. ಅವಳ ಪ್ರೀತಿ ನಿರ್ವ್ಯಾಜವಾದುದು. ಅಪ್ಪಣ್ಣನ ವೇಶ್ಯೆಯ ಮಗಳು ಚಂಪಾಳನ್ನು ಹೊಟ್ಟೆಯಲ್ಲಿ ಹುಟ್ಟಿದ ಮಗಳಂತೆ ನೋಡಿಕೊಳ್ಳುತ್ತಾಳೆ. ಎಲ್ಲರೂ ಬೆರಗಾಗುವಂತೆ ತನ್ನ ಕಿವಿಯಲ್ಲಿಯ ಓಲೆಗಳನ್ನೇ ಅವಳಿಗಿತ್ತು ನಿಜವಾದ ತಾಯಿಯಾಗುತ್ತಾಳೆ. ಪ್ರೇಮದ ಅಗ್ನಿದಿವ್ಯದಲ್ಲಿ ಅವಳು ಗೆದ್ದರೆ ಅನಂತ ಸೋತು ಹೋಗುತ್ತಾನೆ. 

ಆರಂಭದಲ್ಲಿ ವೈಚಾರಿಕ ಶಕ್ತಿಯುಳ್ಳ ಪಾತ್ರದಂತೆ ಕಂಡರೂ ಮುಂದೆ ಸ್ವಂತ ನಿರ್ಧಾರ ಕೈಗೊಳ್ಳಲಾಗದ ವ್ಯಕ್ತಿಯಾಗಿ ಕೈಚೆಲ್ಲುತ್ತಾನೆ. ಅವನಿಗುಂಟಾದ ನಿರಾಸೆ ಅವನನ್ನು ಗಟ್ಟಿಗೊಳಿಸದೇ ದೌರ್ಬಲ್ಯಕ್ಕೊಳಗಾಗಿಸುತ್ತದೆ. ಇಸ್ಪೀಟಿನ ಆಟ ಚಟವಾಗುತ್ತದೆ. ಬಂಗಾರಿಯ ಮೋಹದಲ್ಲಿ ಬಿದ್ದು ಆಸ್ತಿಯನ್ನೆಲ್ಲ ಹಾಳು ಮಾಡಿಕೊಂಡು ಹೆಂಡಿರು ಮಕ್ಕಳನ್ನು ಬೀದಿಯಲ್ಲಿ ಹಾಕುತ್ತಾನೆ. ಮದುವೆಯಾದ ಹೆಂಡತಿಗೂ ಮನಮೆಚ್ಚಿದ ಪ್ರೇಮಿಗೂ ನ್ಯಾಯ ಒದಗಿಸದೆ ತ್ರಿಶಂಕುವಾಗುತ್ತಾನೆ. ಮುಂದೆ ಕ್ಷಯರೋಗಪೀಡಿತನಾಗಿ ನರಳುತ್ತಾನೆ. ವಿಧಿ ತಾರಾಳನ್ನು ವಂಚಿಸಿದರೆ ದೌರ್ಬಲ್ಯಗಳು ಅನಂತನನ್ನು ಬಲಿ ತೆಗೆದುಕೊಳ್ಳುತ್ತವೆ. 

ಕಾದಂಬರಿಯನ್ನು ಕಟ್ಟಿರುವ ಉಳಿದ ಪಾತ್ರಗಳು ಗ್ರಾಮೀಣ ಬದುಕಿನ ಸಹಜ ಮಾದರಿಗಳಾಗಿವೆ. ಅವು ಪ್ರಾದೇಶಿಕ ಬದುಕಿನ, ಜೀವನದ ವೈವಿಧ್ಯ, ವೈರುಧ್ಯಗಳನ್ನು ಅನಾಯಾಸವಾಗಿ ತೋರಿಸುತ್ತವೆ. ಬದುಕಿನ ತಾಪತ್ರಯಗಳು, ನೋವು ನಲಿವುಗಳು, ಗಾಯಗಳು, ಆಗುಹೋಗುಗಳ ಸಮೇತ ಪಾತ್ರಗಳು ಅಭಿನಯಿಸುತ್ತವೆ. ಎಲ್ಲಿಯೂ ಅವಾಸ್ತವಿಕ ಎನಿಸದಂತೆ ನಿರೂಪಣೆಯಿದೆ. 

ಸಂಯಮದ ನಿರೂಪಣೆ, ಸುಪುಷ್ಟವಾದ ಪಾತ್ರ ಚಿತ್ರಣದ ಜೊತೆಗೆ ಕತೆಯು ಪ್ರಾದೇಶಿಕ ಪರಿಸರವನ್ನು ಅನ್ಯಾದೃಶವಾಗಿ ಕಾದಂಬರಿ ಕಟ್ಟಿಕೊಡುತ್ತದೆ. ಇದಕ್ಕೆ ಪೂರಕವಾಗಿ ದುಡಿದಿರುವ ಇನ್ನೊಂದು ಮಹತ್ವದ ಅಂಗವೆಂದರೆ ಭಾಷೆ. ಕತೆ ನಡೆಯುವ ಪರಿಸರವನ್ನು ನಮ್ಮ ಎದೆಯಂಗಳಕ್ಕೆ ತಂದು ನಿಲ್ಲಿಸುವ ಭಾಷೆ ಮರಾಠಿಮಯವಾಗಿದ್ದರೂ ಸಂವಹನಕ್ಕೆ ತೊಡಕೆನಿಸುವುದಿಲ್ಲ. “ನಿಸರ್ಗ ಪರಿಪೂರ್ಣವಾದ ಕೃತಿಯಾಗಲಿಕ್ಕೆ ಮುಖ್ಯವಾದ ಕಾರಣವೆಂದರೆ ಅಣ್ಣಾರಾಯರು ಬಳಕೆ ನುಡಿಯ ಮುಖಾಂತರ ಸೃಷ್ಟಿಸಿದ ಜೀವಂತವಾದ ಪರಿಸರ” ಎಂಬುದು ಕುರ್ತಕೋಟಿಯವರು ನೀಡಿರುವ ಶಿಫಾರಸು. 

ಸಂಭಾಷಣೆಯಲ್ಲಿಯ ಭಾಷಾ ಬಳಕೆಯ ಪಲುಕುಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ತಾರಾ ಮೈನೆರೆದಿದ್ದಾಳೆ ಎಂಬ ಸಂತಸದ ಸುದ್ದಿ ತಾರಾಳ ಮಾವ ಹೂವಣ್ಣನ ಕಿವಿಗೆ ಬಿದ್ದಾಗ ಆತ; “ಪೋರಿ ನೆರದಂಗ ಕಾಣಸ್ತೇತಿ” ಧ್ವನಿಯಲ್ಲಿ ಉತ್ಸಾಹವಿತ್ತು. ಚಿಮ್ಮವ್ವ; “ಯಾವಾಗ? ನಮಗ್ಯಾನ ಗೊತ್ತ ಇಲ್ಲಲಾ...ಗೊತ್ತಿದ್ದರ ನಾವ್ಯಾರ ಕರೀಕ ಹೋಗತಿದ್ದೆವು” ಎಂದಳು.

ಚಿಮ್ಮವ್ವ ಅಳಿಯನನ್ನು ಮಂಟಪದಲ್ಲಿ ಕೂಡ್ರಿಸಲಿ, ಬಂಗಾರ ಹಾಕಲಿ ಎಂದು ಆಗ್ರಹ ಮಾಡಿದಾಗ ಹೂವಣ್ಣ ‘ಅವರೇ ಹರತಾಟದಲ್ಲಿದ್ದಾರೆಂದು’ ಹೇಳಿದ್ದೇ ತಡ; ಚಿಮ್ಮವ್ವ; “ಯಾಗ ಸಿಗೋದ ಈಗ ಸಿಗೋದ...ಮುಂದ ಯಾಗ ಯಾನ ಸಿಗತೇತಿ? ನಿನಗೂ ಚಂದ ಕಾಣಕ ಹತ್ತೇತಿ. ಮನ್ಯಾಗ ಸೋಸಿನಾ ತಂದ ಕೂಡಸ...ಮಕರಾಕಟ್ಟಿ ಬಾರಸಲಾಕ ಹಚ್ಚ. ಊರಿಗೆಲ್ಲ ಊಟ ಹಾಕಲ್ಲ ನಂದ್ಯಾನ ಹೋಗತೇತಿ?”

ಹೂವಣ್ಣ; “ನಮ್ಮ ಮನ್ಯಾಗರ ಈಗೆಲ್ಲಿ ಕಾರಣ ಆಗಿದಾವು ಬ್ಯಾಸರಲಾಕ? ಬರೀ ಜನ್ಮದಾಗ ದುಡದ ದುಡದ ದುಡ್ಡ ಗೊಳೇ ಮಾಡೋದ ಆತೆಲ್ಲ, ಹೆಗ್ಗಣ ಮಣ್ಣ ಗೊಳೇ ಮಾಡಿದಂಗ. ಒಮ್ಮಿ ನಾಲ್ಕು ಮಂದಿ ಬಾಯಾಗ ಅನ್ನಾ ಹಾಕೂನಲ್ಲ...ಸತ್ತರ ಯಾನ ಒಯ್ಯೂದೋತಿ? ಅಷ್ಟ್ ಬಡಕೋತಿ”. ಇದೇ ‘ನಿಸರ್ಗ’ ಕಾದಂಬರಿಯ ಧನಾತ್ಮಕ ಶಕ್ತಿಯಾಗಿ ದುಡಿದಿರುವ ಭಾಷೆ.
***
‘ನಿಸರ್ಗ’ದ ಮೊದಲ ಓದುಗರು ಇದಕ್ಕೆ ಮುನ್ನುಡಿ ಬರೆದಿರುವ ರಂ. ಶ್ರೀ. ಮುಗಳಿಯವರು. ಇದಕ್ಕೆ ಕಾರಣವಾದ ಘಟನೆಯೂ ತುಂಬಾ ಕುತೂಹಲಕರವಾದುದು. ನಿಸರ್ಗ ಹಸ್ತಪ್ರತಿ ಸಿದ್ಧವಾದ ಮೇಲೆ ಮಿರ್ಜಿಯವರು ಸಾಂಗ್ಲಿಗೆ ಹೋಗಿ ಮುಗಳಿಯವರಿಗೆ ಅದನ್ನು ನೀಡಿ; ಓದಿ, ಪರಿಶೀಲಿಸುವಂತೆ ಕೇಳಿಕೊಳ್ಳುತ್ತಾರೆ. ಅಂದು ರಾತ್ರಿಯೇ ಮುಗಳಿಯವರು ರೈಲಿನಲ್ಲಿ ಎಲ್ಲಿಗೋ ಪ್ರಯಾಣಿಸುವವರಿದ್ದರು. ಜೊತೆಗೆ ಒಯ್ದಿದ್ದ ನಿಸರ್ಗ ಹಸ್ತಪ್ರತಿಯ ಮೇಲೆ ಕಣ್ಣಾಡಿಸಬೇಕೆಂದು ಹೊರತೆಗೆದರು. ಓದುತ್ತ ಹೋದಂತೆ ನಿದ್ರೆ ದೂರವಾಗಿ, ಬೆಳಕು ಹರಿಯುವಾಗ ಕಾದಂಬರಿಯನ್ನು ಓದಿ ಮುಗಿಸಿದ್ದರು. ಆ ದಿನವೇ ‘ನಿಸರ್ಗ’ ಒಂದು ಮಹತ್ವದ ಕಲಾಕೃತಿ ಎಂಬುದನ್ನು ಮುಗಳಿಯವರು ಗುರುತಿಸಿದ್ದರು. ಹಸ್ತಪ್ರತಿಯನ್ನು ಓದಿ ಪ್ರಶಂಸೆ ಮಾಡಿ ಮುಗಳಿಯವರು ಸುಮ್ಮನಾಗಲಿಲ್ಲ. ಅದರ ಪ್ರಕಟಣೆಯ ಜವಾಬ್ದಾರಿಯನ್ನೂ ಹೊತ್ತರು. ಫಲವಾಗಿ; ಮನೋಹರ ಗ್ರಂಥಮಾಲೆಯ ಪುಷ್ಪವಾಗಿ ಇದು ಪ್ರಕಟವಾಯಿತು. ಕಾದಂಬರಿಗೆ ಮುನ್ನುಡಿಯನ್ನೂ ಮುಗಳಿಯವರೇ ಬರೆದರು. 1945ರಲ್ಲಿ ಶೇಡಬಾಳದಲ್ಲಿ ನಡೆದ ಸಮಾರಂಭದಲ್ಲಿ ಆಗ ಮುನ್ಸಿಫ್ ಆಗಿದ್ದ ಟಿ. ಕೆ. ತುಕೋಳ ಅವರು ಬಿಡುಗಡೆ ಮಾಡಿದರು. ಅಲ್ಲಿಂದ ಮುಂದೆ ‘ನಿಸರ್ಗ’ ಓದುಗರ ತುಂಬು ಪ್ರೀತಿಯನ್ನು ಪಡೆದುಕೊಂಡಿತು, ವಿಮರ್ಶಕರ ಗಮನ ಸೆಳೆಯಿತು.

ನಿಸರ್ಗ ಪುಸ್ತಕದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಈ ಅಂಕಣದ ಹಿಂದಿನ ಬರೆಹಗಳು:
ಚಂದ್ರಶೇಖರ ಕಂಬಾರರ ಚಕೋರಿ: ಕನಸುಗಳು ಕಾವ್ಯವಾಗುವ ಪರಿ
ದೇವನೂರರ ಒಡಲಾಳ: ದಲಿತ ಬದುಕಿನ ದರ್ಶನ
ವಾಸ್ತವ–ವಿಕಾಸಗಳ ನಡುವಿನ ಜೀಕುವಿಕೆ: ತೇಜಸ್ವಿಯವರ ಕರ್ವಾಲೊ
ಅನಂತಮೂರ್ತಿಯವರ ‘ಸಂಸ್ಕಾರ’ : ಬದುಕಿನ ಭಿನ್ನ ಮುಖಗಳ ಅನಾವರಣ
ಕಾರ್ನಾಡರ ತುಘಲಕ್: ವರ್ತಮಾನವಾಗುವ ಇತಿಹಾಸದ ತುಣುಕು
ಎಂದಿಗೂ ಮುಪ್ಪಾಗದ ’ಹಸಿರು ಹೊನ್ನು’
ಪ್ರಾದೇಶಿಕತೆಯ ದಟ್ಟ ವಿವರಗಳ-ಮಲೆಗಳಲ್ಲಿ ಮದುಮಗಳು
ಗ್ರಾಮಾಯಣ ಎಂಬ ಸಮಕಾಲೀನ ಪುರಾಣ
ಬದುಕಿನ ದಿವ್ಯದರ್ಶನ ಮೂಡಿಸುವ `ಮರಳಿ ಮಣ್ಣಿಗೆ’
ಮಾಸ್ತಿಯವರ ಕತೆಗಾರಿಕೆಗೆ ಹೊಸ ಆಯಾಮ ದಕ್ಕಿಸಿಕೊಟ್ಟ ಕೃತಿ ‘ಸುಬ್ಬಣ್ಣ’
ಮೈಸೂರ ಮಲ್ಲಿಗೆ ಎಂಬ ಅಮರ ಕಾವ್ಯ
ಪುಸ್ತಕ ಲೋಕವೆಂಬ ಬದುಕಿನ ಬುತ್ತಿ
ಎ.ಆರ್. ಕೃಷ್ಣಶಾಸ್ತ್ರಿಯವರ 'ವಚನ ಭಾರತ'
ಅಂಬಿಕಾತನಯದತ್ತರ ಸಖೀಗೀತ
ಡಿ. ವಿ. ಜಿ.ಯವರ ಮಂಕುತಿಮ್ಮನ ಕಗ್ಗ

 

 

 

MORE NEWS

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...

ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ

14-11-2024 ಬೆಂಗಳೂರು

"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...