Date: 15-10-2022
Location: ಬೆಂಗಳೂರು
ಅವನು ಊರಲ್ಲಿ ಕಳೆದ ಸಮಯಕ್ಕಿಂತ ಹೊಲದಲ್ಲಿ ಕಳೆವುದೇ ಅಧಿಕವಾಗಿತ್ತು. ಅದಕ್ಕಾಗಿ ಹೊಲದಲ್ಲಿ ಗುಡಿಸಲು ಕಟ್ಟಿಕೊಂಡಿದ್ದ. ಅಲಾಯಿ ಹಬ್ಬದಲ್ಲಿ ಮಾತ್ರ ಊರಲ್ಲಿರುತ್ತಿದ್ದ ಎನ್ನುತ್ತಾರೆ ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, ಸಭ್ಯಸಂಸ್ಕೃತಿಯ ಕೊಂಡಿಯಂತಿದ್ದ ಗೂಡೇಸಾ ಬಗ್ಗೆ ಬರೆದಿದ್ದಾರೆ.
ಅಷ್ಟಕ್ಕೂ ನಮ್ಮೂರಲ್ಲಿ ಮುಸ್ಲಿಮರ ಮನೆಗಳಿರೋದೆ ಆರೇಳು. ಅದರಲ್ಲೊಂದು ಪಿಂಜಾರ ಗೂಡುಸಾಹೇಬರ ಮನೆ. ಅವರ ಮನೆಯೆಂದರೆ ಅವರ ಕುಟುಂಬ. ನಮ್ಮ ಕಡೆಗೆ ಕುಟುಂಬ ಎಂದರೆ ಗಂಡನಾದವನು ತನ್ನ ಹೆಂಡತಿಯನ್ನು ತನ್ನ ಕುಟುಂಬವೆಂದೇ ಸಂಬೋಧಿಸುವುದು ವಾಡಿಕೆ. ಗಂಡನ ಪ್ರಕಾರ ಕುಟುಂಬವೆಂದರೆ ಹೆಂಡತಿ ಎಂದರ್ಥವೇ ಆಗಿದ್ದರೂ ಇಲ್ಲಿ ಅದು ಗೂಡುಸಾಹೇಬರ ಮನೆ ಮತ್ತು ಮನೆತನವೆಂತಲೂ ಅರ್ಥ.
ಗೂಡುಸಾಹೇಬನನ್ನು ಊರಿನ ಎಲ್ಲರೂ ಆಡುಭಾಷೆಯಲ್ಲಿ ಗೂಡೇಸಾ ಅಂತಲೇ ಕರೆಯುತ್ತಿದ್ದ ನನ್ನ ನೆನಪು ಇನ್ನೂ ಮಾಸಿಲ್ಲ. ಸಭ್ಯತೆ, ಸಾತ್ವಿಕತೆ, ಸಜ್ಜನಿಕೆ, ಸಂಭಾವಿತತನವನ್ನೆಲ್ಲ ಹಾಳತವಾಗಿ ಒಟ್ಟುಗೂಡಿಸಿ ಮಾಡಿದ ವ್ಯಕ್ತಿತ್ವಕ್ಕೆ ಮತ್ತೊಂದು ಹೆಸರೇ ಗೂಡೇಸಾ ಮುತ್ಯಾ. ಮುತ್ಯಾ ಯಾಕಂದ್ರೇ ಅವನ ಮೈಯಲ್ಲಿ ಅಲೈ ದೇವರು ಬರ್ತಿದ್ದ. ದೇವರ ಸವಾರಿ ಬರುತ್ತಿದ್ದುದಕ್ಕೆ ಎಲ್ಲರೂ ಆತನನ್ನು ಮುತ್ಯಾ ಅಂತಲೇ ಕರೆಯೋದು ರೂಢಿಯಾಗಿತ್ತು. ಅಷ್ಟೇ ಅಲ್ಲದೇ ವಯಸ್ಸಾದವರನ್ನೆಲ್ಲಾ ನಮ್ಮೂರ ಕಡೆ ಮುತ್ಯಾ ಅರ್ಥಾತ್ ಅಜ್ಜಾ ಅಂತಲೇ ಕರೀತಾರೆ. ಅವನ ಹೆಂಡತಿಯ ಹೆಸರು ಮಾಬೂಮಾ. ಆಕೆ ಹೆಸರು ಮಾಬವ್ವ ಅಂತಲೇ ನಮ್ಮೂರಲ್ಲಿ ಜಗಜ್ಜಾಹೀರು.
ದೇವರಂತಾ ಈ ಮುತ್ಯಾ ಗೂಡೇಸಾ ಕಟ್ಟಾ ರೈತಾಪಿ ಮನುಷ್ಯನಾಗಿದ್ದ. ಅವನು ಅಂತಿಂತಾ ರೈತನಲ್ಲ. ಅಕ್ಷರಶಃ ಮೊಗಲಾಯಿ ಮಾದರಿಯ ರೈತನಾಗಿದ್ದ. ಸಾವಯವ ಕೃಷಿ, ಸಿರಿಧಾನ್ಯಗಳ ಕುರಿತು ಇವತ್ತು ನಾವೆಲ್ಲಾ ಬಹುದೊಡ್ಡ ಗಂಭೀರ ಚರ್ಚೆ, ಪ್ರಬುದ್ಧ ಮಾತುಗಳನ್ನಾಡುತ್ತೇವೆ. ಇದನ್ನೆಲ್ಲ ನಮ್ಮೂರ ಗೂಡೇಸಾ ಈಗ್ಗೇ ನಾಕಿಪ್ಪತ್ತು ವರ್ಷಗಳ ಹಿಂದೆಯೇ ಬದುಕಿ ತೋರಿದ್ದ. ಸಿರಿಧಾನ್ಯದ ಸದೃಢ ಬೆಳೆಗಳ ಸಾವಯವ ಕೃಷಿಕ. ಅಷ್ಟಕ್ಕೂ ಆ ಕಾಲದ ನಮ್ಮ ಭಾಗದ ರೈತರಿಗೆ ರಾಸಾಯನಿಕ ಗೊಬ್ಬರ, ಹೈಬ್ರಿಡ್ ಬೀಜ ಸಂಕುಲಗಳ ಬಿಲ್ಕುಲ್ ಪರಿಚಯವೇ ಇರಲಿಲ್ಲ.
ಬೆಂಡೆಬೀಜದಂತಹ ಬಿಳಿಜೋಳ, ಸಜ್ಜೆ, ಸಾವೆ, ಸಾಸಿವೆ, ಕುಸುಬಿ, ನವಣೆ... ಹೀಗೆ ನಾನಾ ಬಗೆಯ ಸಿರಿಧಾನ್ಯ ಬಿತ್ತಿ ಬೆಳೆಯುವ ಅವನೊಬ್ಬ ಬೋಳೆತನದ ಒಕ್ಕಲಿಗನಾಗಿದ್ದ. ಹೆಸರು, ಕೀರ್ತಿ, ಪ್ರಶಸ್ತಿ ಪದಗಳ ಎಳ್ಳರ್ಧ ಕಾಳಿನಷ್ಟೂ ಪರಿಚಯವಿರದ ಯಥಾರ್ಥಜೀವ ಗೂಡೇಸಾ ಮುತ್ಯಾನದು. ಆತನ ನಿತ್ಯದ ಸಹಜ ಬದುಕೇ ಬೇಸಾಯ ಮತ್ತೆ ಮತ್ತೆ ಕಟ್ಟಾ ಬೇಸಾಯ. ಸಾಧಾರಣ ಎತ್ತರದ ಗೋಧಿ ಬಣ್ಣದ ಎರಡು ಎತ್ತುಗಳು. ಮರೆತಿದ್ದೇನೆ ಆ ಎತ್ತುಗಳಿಗೆ ಅದೇನೋ ಹೆಸರಿಟ್ಟು ಕರೆಯುತ್ತಿದ್ದ. ಹಾಗೆ ಅವುಗಳ ಹೆಸರು ಹಿಡಿದು ಗೂಡೇಸಾ ಕರೆದ ಕೂಡಲೇ ಅವು ಆತನತ್ತ ಗೋಣು ಎತ್ತಿ ನೋಡುತ್ತಿದ್ದವು. ಎತ್ತುಗಳ ಜತೆಗೆರಡು ಆಡುಗಳು ಮತ್ತು ಒಂದು ಕರಿನಾಯಿ ಖಾಯಂ. ಮುತ್ತಾತನಿಂದ ಬಂದ ಒಂದೆರಡು ಕೂರಿಗೆ ಹೊಲವಿತ್ತು. ಎಲ್ಲ ಬಗೆಯ ದವಸ ಧಾನ್ಯಗಳನ್ನು ಬಿತ್ತಿ ಬೆಳೆಯುವ ಭೂಮ್ತಾಯಿಯನ್ನೇ ಅಕ್ಷರಶಃ ನಂಬಿದಾತ. ನೈಸರ್ಗಿಕ ರೈತಾಪಿತನಕ್ಕೆ ಪರ್ಯಾಯ ಹೆಸರೇ ಗೂಡೇಸಾ ಎನ್ನುವಷ್ಟು ಅಪ್ಪಟ ಜವಾರಿ ಜೀವನ ಆತನದು.
ಅದು ನಮ್ಮೂರ ದೈವವೇ ಆಗಿರುವ ಅನುಭಾವಿ ಕವಿ ಮಡಿವಾಳಪ್ಪನವರು ಬಾಳಿ ಬದುಕಿದ ನೆಲವಾದ್ದರಿಂದ ಪ್ರಾಯಶಃ ಅದೆಲ್ಲ ಆತನಿಗೆ ಸಾಧ್ಯವಾಗಿತ್ತು. ಲೋಕವಂದ್ಯರಾದ ಕಡಕೋಳ ಮಡಿವಾಳಪ್ಪ ಬರೀ ತತ್ವಪದಕಾರ ಆಗಿರಲಿಲ್ಲ. ಕೃಷಿಋಷಿಯೂ ಆಗಿದ್ದರು. ಅಂತೆಯೇ ಅವರು ಬಾಳಿ ಬದುಕಿದ ನೇಗಿಲಯೋಗಿ ಬದುಕಿನ ಹತ್ತಾರು ಚಾರಿತ್ರಿಕ ದಾಖಲೆಗಳು ಈಗಲೂ ನಮ್ಮೂರಲ್ಲಿವೆ. ಮಡಿವಾಳಪ್ಪನವರೇ ಖುದ್ದಾಗಿ ತೋಡಿದ ಬೆಂಚಿಯೊಳಗಿನ ಬಾವಿ. ತೋಟಪಟ್ಟಿ ಅವರೇ ಮಾಡಿದ ತರಕಾರಿ ಮಡಿಗಳು. ಅವರೇ ಖುದ್ದು ಬೀಜ ಊರಿ ಬೃಹತ್ತಾಗಿ ಬೆಳೆಸಿರುವ ನೂರಾರು ಸಂಖ್ಯೆಯ ಹುಣಸೆ, ರೇವಡಿ, ಬಿಲ್ವಪತ್ರಿ, ಬೇವಿನ ಮರಗಳು ಇವತ್ತಿಗೂ ಹಸಿರಾಗಿವೆ ಜನರಿಗೆ ಉಸಿರಾಗಿವೆ. ಸುರಪುರ ದೊರೆಗಳು ನೀಡಿದ ಐವತ್ತೆಕರೆ ಹೊಲದಲ್ಲಿ ಮಡಿವಾಳಪ್ಪ ದುಡಿದು ಮಾಡಿದ ಒಕ್ಕಲುತನ. ಅದಕ್ಕೆಲ್ಲ ಮಠದ ಭೂಮಿಯೇ ಸಾಕ್ಷಿ.
ಅಂಥದೊಂದು ನೆಲಧರ್ಮ ಪರಂಪರೆಯ ಮುಂದುವರಿಕೆಯಂತೆ ಬದುಕಿದ್ದು ನಮ್ಮ ಗೂಡೇಸಾ. ಬಿಳಿಯ ಮಾಸಲು ರುಮಾಲು, ಅಂಥದೇ ಬಿಳಿ ಮಾಸಲಿನ ತುಂಡು ತೋಳುಗಳ ಅಂಗಿ, ಸದಾ ಕಚ್ಚೆ ಹಾಕಿದ ಕಮಟು ನಾತದ ಧೋತರ. ಇದು ಆತನ ಸರಳ ಉಡುಪು. ವಾರಕ್ಕೆರಡು ಸಾರಿ ಜಳಕ ಮಾಡಿದರೂ ಅದೇ ಉಡುಪು. ಆದರೆ ಅವನ ಬಳಿ ಸದಾ ಎರೆಹೊಲದ ಕುಸುಬೆಯ ಸೊಗಡು. ಅದೊಂದು ಬಗೆಯ ಪರಾತ್ಪರ ಪರಿಮಳದ ಘಾಟು. ಇಡೀ ದಿನವು ಸೇರಿ ಅವನಾಡುತ್ತಿದ್ದುದು ಹೆಚ್ಚೆಂದ್ರೆ ನಾಕೈದು ಮಾತುಗಳು. ಅಷ್ಟಕ್ಕೂ ಆ ಮಾತುಗಳು ಸಹಿತ ಅವನ ನೆಚ್ಚಿನ ಎತ್ತು ನಾಯಿಗಳ ಜತೆಗೆ ಇರುತ್ತಿತ್ತು. ಇನ್ನೊಂದೆರಡು ಹೆಚ್ಚಿನ ಮಾತುಗಳಿದ್ರೆ ಅವು ಅರ್ಧಾಂಗಿ ಮಾಬವ್ವಳ ಜತೆ. ಅವನು ಊರಲ್ಲಿ ಕಳೆದ ಸಮಯಕ್ಕಿಂತ ಹೊಲದಲ್ಲಿ ಕಳೆವುದೇ ಅಧಿಕವಾಗಿತ್ತು. ಅದಕ್ಕಾಗಿ ಹೊಲದಲ್ಲಿ ಗುಡಿಸಲು ಕಟ್ಟಿಕೊಂಡಿದ್ದ. ಅಲಾಯಿ ಹಬ್ಬದಲ್ಲಿ ಮಾತ್ರ ಊರಲ್ಲಿರುತ್ತಿದ್ದ.
ಸರ್ವಜನಾಂಗದ ದೈವಪೀರರೆಂಬಂತೆ ಹಸೇನ ಹುಸೇನರ ಕರ್ಬಲ ಕಾಳಗದ ಸ್ಮರಣಾರ್ಥ ನಮ್ಮೂರಲ್ಲಿ ವಾರವೊಪ್ಪತ್ತು ಜರುಗುವ ಮೊಹರಮ್ಮಿನ ಅಲಾಯಿ ಹಬ್ಬ. ಆ ಹಬ್ಬದ ಸಂದರ್ಭದಲ್ಲಿ ತುಂಬಾ ಭಾವುಕನಾಗಿ ಗೂಡೇಸಾ ಉಪವಾಸ ಮಾಡುತ್ತಿದ್ದುದು ನೆನಪಿದೆ. ದಪ್ಪ ದಪ್ಪನೆಯ ಮಡಿದಟ್ಟಿಯುಟ್ಟ ಪೀರ್ಲ್ ಪಂಜೆಗಳನ್ನು ಸೊಂಟಕ್ಕೆ ಕಟ್ಟಿಕೊಂಡರೆ ಸಾಕು ಮೈಯೊಳಗೆ ಅಲೈ ದೇವರ ಸವಾರಿ ಬರುತ್ತಿತ್ತು. ಅವರ ಕಿರಿಯ ಮಗ ಹಾಜೀ ಕರೀಮ ಆಗ ಸವಾರಿ ಬಂದ ಅಲೈ ದೇವರ ಮುಂದೆ ಉದಾನಿ ಹಿಡಿತಿದ್ದ.
ಮೊಹರಮ್ಮಿನ ಗುದ್ಲಿಪೂಜೆ, ಕತಲ್ರಾತ್ರಿ, ದಫನುಗಳ ಆಚರಣೆ, ಅದಕ್ಕೆಲ್ಲ ಮುಲ್ಲಾಸಾಹೇಬರ ತದೇಕ ಚಿತ್ತದ ಫಾತೇ ಕಲಮು. ನಮ್ಮ ಕೊರಳಿಗೆಲ್ಲ ಅಲೈ ದೇವರ ಲಾಡಿ ತೊಡಿಸಿ, ಅಲೈ ದೇವರ ಪಂಜೆ ತಲೆ ಮೇಲಿರಿಸಿ ನಮ್ಮನ್ನೆಲ್ಲ ಫಕೀರರನ್ನಾಗಿಸುತ್ತಿದ್ದ ಸನ್ನಿವೇಶ ಅವಿಸ್ಮರಣೀಯ. ಸುತ್ಮುತ್ತ ಹಳ್ಳಿಗೆಲ್ಲ ನಮ್ಮೂರ ಪೀರಲ್ಹಬ್ಬ ಎಂದರೆ ಭಾಳ ಫೇಮಸ್. ಹಿಂದು ಮುಸ್ಲಿಮ್ ಬಾಂಧವ್ಯಕ್ಕೆ ಬಹುದೊಡ್ಡ ಸಾಕ್ಷಿ. ಅಸಲೀ ಭಾವೈಕ್ಯತೆಯ ದಿವಿನಾದ ನಿದರ್ಶನ.
ದಟ್ಟಿ ಉಡುಗೆಯ ಪಂಜೆಗಳ ಅಲೈ ದೇವರಿಗೆ ಸಕ್ಕರೆ ಸಲ್ಲಿಸಿ, ಕವಡೆ ಲೋಬಾನದ ಧೂಪದ ಹೊಗೆಯ ನಡುವೆ ಬಿಸ್ಮಿಲ್ಲಾ ಇರ್ರಹಿಮಾ ನಿರ್ರಹೀಮ್ ಅಂತಾ ಫಾತೆ ಕಲಮು ಉಸುರುವ ಪರಿ ಖುಷಿ ಕೊಡುತ್ತಿತ್ತು. ದಫನ್ ಸಂಜೆಗೆ ಅಲೈ ದೇವರು ಹೊಳೆಗೆ ಹೋಗುವ ಸಮಯ. ಹಿರೇಹಳ್ಳದ ಗಂಗಸ್ಥಳ ಪೂಜೆಯಾದ ಮೇಲೆ ಮರಳಿ ಮಸೂತಿಗೆ ಬರುವಾಗ ಖಾಜಾನ ದರಗಾದ ದಾರಿಯುದ್ದಕ್ಕೂ ಹೇ ಹುಸೇನಿ ಹಲ್ಬಿದಾ... ಪ್ಯಾಥೋ ಗೀತೆಗಳನ್ನು ಹಾಡುತ್ತಾ ಬರುವ ದೃಶ್ಯ ಅಕ್ಷರಶಃ ಮರೆಯಲಾಗದು.
ಆಗ ಗೂಡೇಸಾ ಮುತ್ಯಾನ ಜತೆಯಲ್ಲಿ ಬಡಿಗೇರ ಇಮ್ಮಣ್ಣ ಮತ್ತು ಮಾಬಣ್ಣ ಸೋದರರು, ಹುಡೇದ ಸಿದ್ದಪ್ಪ, ನೂರೊಂದಪ್ಪ, ಮಾಲೀ ಮಾಂತಪ್ಪಗೌಡ...ಇನ್ನೂ ಮೊದಲಾದವರು ವಿದಾಯದ ಗೀತೆಗಳನ್ನು ಹಾಡುತ್ತಿದ್ದರು. ಅದಕ್ಕೆ ಮೊದಲು ಗುದ್ಲಿ ಹಾಕಿದ ಮೊದಲರಾತ್ರಿ ನಂತರದ ಕತಲ್ರಾತ್ರಿ, ದಫನ್ ದಿನದ ಸಂಜೆವರೆಗೂ ಅಲಾಯಿ ಹಬ್ಬದ ಹಾಡುಗಳು ಅದ್ಯಾವುದೋ ಕರುಣಾರಸ ಲೋಕಕ್ಕೆ ನಮ್ಮನ್ನೆಲ್ಲ ಕರೆದುಕೊಂಡು ಹೋಗುತ್ತಿದ್ದವು. ಕತಲ್ರಾತ್ರಿಯಂದು ಅವ್ವ ಮಾಡುತ್ತಿದ್ದ ಚೋಂಗೆ ನೈವೇದ್ಯ ಮತ್ತು ಮಸೂತಿಯಲ್ಲಿ ನಾವು ಹಾಕುತ್ತಿದ್ದ ಹಸೇನ ಹುಸೇನಕೀ ದೋಸ್ತರಾ ಹೋದ್ದೀನ್ ಜೈಕಾರಗಳು ಬಣ್ಣಿಸಲಸದಳ.
ಮೊಹರಮ್ಮಿನ ಅಲಾಯಿ ಹೆಜ್ಜೆಕುಣಿತ, ಕರ್ಬಲ ಕಾಳಗದ ರಿವಾಯತ ಪದಗಳ ಕಥನ ಕೇಳುವುದೆಂದರೆ ನನ್ನ ತಾಯಿಗೆ ಬಹಳೇ ಆಸಕ್ತಿ. ನಮ್ಮವ್ವ ಗೂಡೇಸಾ ಮುತ್ಯಾನಿಗೆ ಕಾಕಾ ಅಂತಲೇ ಕರಿತಿದ್ಳು. ಗೂಡೇಸಾ ಮುತ್ಯಾನ ಮೈಯಲ್ಲಿ ಅವತರಿಸುತ್ತಿದ್ದ ಅಲಾಯಿ ದೇವರ ಕಾರ್ಣೀಕದ ಮಾತು ಕೇಳಲು ಖುದ್ದು ಊರ ಗೌಡ ಕುಲಕರ್ಣಿಯರೇ ಇರಬೇಕಿತ್ತು. ಹೀಗೆ ಒಂದೇ ಎರಡೇ ಹತ್ತಾರು, ನೂರಾರು ಬಗೆಯ ಹಾಡು ಕುಣಿತಗಳ ನುಡಿಹಬ್ಬವೇ ಆಗಿದ್ದರು ಗೂಡೇಸಾ. ಅವನ ಹಿರೀ ಮಗನ ಹೆಸರು ದಾವಲಸಾ. ಅಪ್ಪನಂತೆ ಆಕಳದಂತಹ ಮನಸಿನವ ದಾವಲಸಾ.
ಅಲಾಯಿ ಹಬ್ಬ ಮುಗಿದ ಮರುದಿನ ಗೂಡೇಸಾ ಅವರ ಮಗ ದಾವಲಸಾ ಹಾಕುತ್ತಿದ್ದ ಹಗಲುವೇಷದ ಹೆಣ್ಣುಕುಣಿತ ನಮಗೆಲ್ಲ ಭರಪೂರ ಮನರಂಜನೆ. ಅದು ಕಿರುಅಲಾಯಿ ಹಬ್ಬವೇ ಆಗಿರ್ತಿತ್ತು. ಕಿರುಅಲಾಯಿ ಹಬ್ಬದಂದು ನಮ್ಮೂರ ಕರೀಮಸಾನದು ಅರ್ಧನಾರೀಶ್ವರನ ವೇಷ. ಹತ್ತಾರು ಸೀರೆಗಳನ್ನು ಮೈತುಂಬಾ ತುಂಡುತುಂಡಾಗಿ ಸಿಕ್ಕಿಸಿಕೊಂಡ ಅವನ ಮುಖಕ್ಕೆಲ್ಲ ಕೆಂಪು ಹಳದಿ ಬಣ್ಣ. ಮುಖದ ಅರ್ಧಭಾಗ ಮೀಸೆ, ನೇರ ಮೂಗಿನರ್ಧದ ಎಡ ಭಾಗಕ್ಕೆ ನತ್ತು ಹಾಕಿಕೊಂಡು ಅವನ ಒಂದು ಕೈಗೆ ಬಳೆ, ಮತ್ತೊಂದು ಕೈಗೆ ಕಡಗ. ಕಡಗದ ಕೈಯಲ್ಲಿ ಒಣಕೆ ಹಿಡಿದು ಮಾದರ ಸೈಬಣ್ಣನ ರಣಹಲಗೆ ನಾದಕ್ಕೆ ಅವರು ಸೊಗಸಾಗಿ ಕುಣಿಯುವುದೇ ಸೊಬಗು. ಆ ಕಾಲದ ಎಲ್ಲರಿಗೂ ಕೋಟಿ, ಕೋಟಿ ಪುಗಸಟ್ಟೆ ಮನರಂಜನೆ. ಪೂರ್ಣ ಸ್ತ್ರೀ ವೇಷದಲ್ಲಿ ದಾವಲಸಾ ಲಯಬದ್ಧವಾಗಿ ನೃತ್ಯ ಮಾಡುವುದನ್ನು ನೋಡುವುದೇ ನಮಗೆಲ್ಲ ಬಲು ಮೋಜು ಮಸ್ತಿ. ಕರೀಮಸಾ ಮತ್ತು ದಾವಲಸಾ ಅವರಿಬ್ಬರೂ ಆಗಿನ ನಮ್ಮಪಾಲಿನ ಮಹಾನ್ ಡ್ಯಾನ್ಸರ್ಸ್. ಇವತ್ತಿನ ಟೀವಿಗಳ ಯಾವುದೇ ಡ್ಯಾನ್ಸ್ ಸ್ಪರ್ಧಿಗಳಿಗೆ ಅವರು ಖಂಡಿತಾ ಕಮ್ಮಿ ಇರಲಿಲ್ಲ.
ಗೂಡೇಸಾ ಮುತ್ಯಾನ ಮಗ ದಾವಲಸಾ ಭಜನೆ ಹಾಡು ಹಾಡುವುದರಲ್ಲೂ ಎತ್ತಿದ ಕೈ. ಮುತ್ಯಾ ಮಡಿವಾಳಪ್ಪನವರ ಹತ್ತಾರು ತತ್ವಪದಗಳನ್ನು ದೇಸಿಯ ಮಟ್ಟುಗಳಲ್ಲಿ ಹಾಡುತ್ತಿದ್ದ. ಹಾಡಿಗೆ ಮೊದಲು ಅವನು ಒಂದಷ್ಟು 'ತೀರ್ಥ'ಸೇವನೆ ಮಾಡಿದ್ದರೆ ಹಾಡಿಕೆಯ ಮೋಜು ಮಸ್ತಿಯೇ ದಿಲ್ ಖುಷ್ ಆಗಿರುತ್ತಿತ್ತು.
ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನೇ// ಮತ್ತು ದೇವಿಯ ನೆನೆಯರಿ ಭಾವ ಶುದ್ಧದಲಿ/ ಆವ ಕಾಲದೊಳು ಹರನನು ಜಪಿಸುತ ಪಾವನ ಚರಿತೆ ಪಾರ್ವತಿಯೋ//
ಎಂಬ ತತ್ವಪದಗಳನ್ನು ಅತ್ಯಂತ ಭಾವತುಂಬಿ ಶಕ್ತಿ ದೇವತೆಗಳ ಆವಾಹಿಸಿಕೊಂಡಂತೆ ಹಾಡುತ್ತಿದ್ದ.
ಇಂತಹ ದೇಶೀಯ ದರುವಿನ ಹಾಡುಗಾರ ದಾವಲಸಾ ಇತ್ತೀಚಿಗೆ ತನ್ನ ಎಂಬತ್ತೈದರ ವೃದ್ಧಾಪ್ಯದಲ್ಲಿ ತೀರಿಕೊಂಡ ಸುದ್ದಿ ನನಗೆ ತುಸು ತಡವಾಗಿ ಬಂದಿದೆ. ನಾನು ಕಳೆದ ಸಾರಿ ನಮ್ಮೂರ ಜಾತ್ರೆಗೆ ಹೋದಾಗ ನಡೂರ ಲಕ್ಕಮ್ಮನ ಕಟ್ಟೆಯ ಮೂಲೆಯಲ್ಲಿ ದಾವಲಸಾ ಕೈಯಲ್ಲೊಂದು ಕೋಲು ಹಿಡಕೊಂಡು ಕುಂತಿದ್ದ. ಆತನ ಹತ್ತಿರಕ್ಕೆ ಹೋಗಿ ಆತನನ್ನು ಮಾತಾಡಿಸಿ ಅವನ ಕೈಯಲ್ಲಿ ಒಂದಷ್ಟು ಕಾಸು ಕೊಟ್ಟೆ. ನಾನು ಕೊಟ್ಟ ರೂಪಾಯಿಗಳನ್ನು ಕಣ್ಣಿಗೊತ್ತಿಕೊಂಡು ಪುಳಕಿತನಾದಂತೆ ಆತ ನನಗೆ " ಮುದುಕಣ್ಣ ಗಂಭೀರಾಗಿ ಮೆರೆಯಪೋ " ಎಂದು ಹಿರೀಕನ ದನಿಯಲಿ ಹಾರೈಸಿ ಖುಷಿಪಟ್ಟಿದ್ದ.
" ಅವನಿಗ್ಯಾಕ ಅಷ್ಟೊಂದು ರುಪಾಯಿ ಕೊಡ್ತಿದೀ. ದಾರೂ ಕುಡ್ದು ಕುಡ್ಡು ಹಾಳ ಮಾಡ್ತಾನ ಹುಚಖೋಡಿ ಅಂತ " ಅವನನ್ನು ಹುಟ್ಟಾ ಕುಡುಕನೆಂಬ ಕೆಡಕಿನ ಧ್ವನಿಯಲ್ಲಿ ಜತೆಯಲಿದ್ದ ನಮ್ಮೂರಿನ ಗೆಳೆಯನೊಬ್ಬ ತಕರಾರು ಮಾಡಿದ್ದ.
" ಸಾಯೋ ವಯಸ್ಸು ಇರ್ಲಿ ಬಿಡ್ರಿ ಕುಡೀಲಿ " ಅಂದಿದ್ದೆ. ಅರ್ಧ ಆಯಸ್ಸನ್ನೇ ಮುಂಬಯಿಯಲ್ಲಿ ಕೂಲಿ ಮಾಡಿ ಕಳೆದಿದ್ದ ದಾವಲಸಾ ಎಲ್ಲರಂತೆ ತಾನು ಸಾಯುವ ಕಾಲಕ್ಕೆ ಊರು ಸೇರಿದ್ದ. ಅದೇಕೋ ನಮ್ಮಕಡೆಯ ಬಹುಪಾಲು ಹಿರೀಕರ ಬದುಕಿನ ಸಂಧ್ಯಾಕಾಲಗಳು ಹೆಚ್ಚು ಸುಖಕರ ಆಗಿರುವುದಿಲ್ಲ. ಅದಕ್ಕೆ ಬಡತನದಷ್ಟೇ ಕೌಟುಂಬಿಕ ಕೆಲ ಕಾರಣಗಳು ಹೆಚ್ಚು ಕಾರಣ. ಅವು ಕುಟುಂಬದ ಖಾಸಗಿತನಗಳಾದ್ದರಿಂದ ಹೇಳಲಾಗದ ಮತ್ತು ಹೇಳದಿರಲಾಗದ ಮುಜುಗರ.
ಬೇಗ ಕಣ್ಮುಚ್ಚಿದರೆ ಸಾಕು ಭಗವಂತಾ ಎಂದು ಆ ಹಿರೀಕರು ಗೋಳಿಡುವುದನ್ನು ನಾನು ಅನೇಕ ಬಾರಿ ಕೇಳಿಸಿ ಕೊಂಡಿದ್ದೇನೆ. ಅಂತದರಲ್ಲಿಯೂ ನಮ್ಮ ಗ್ರಾಮೀಣರು ತಾವು ಹುಟ್ಟಿದ ನೆಲದ ಹೊಸ್ತಿಲಿಗೆ ತಲೆಯಿಟ್ಟು ಮರಣವನ್ನಪ್ಪುವ ವಾಂಛಲ್ಯ ಹೊಂದಿರುತ್ತಾರೆ. ಅದು ಮತ್ತೆ ಹುಟ್ಟಿದ ಮಣ್ಣಿಗೆ ಮರಳುವ ಕಾಂಕ್ಷೆ. ಅಂತೆಯೇ ದಾವಲಸಾ ತನ್ನ ಬದುಕಿನ ಅಂತಿಮ ದಿನಗಳನ್ನು ತನ್ನ ಹುಟ್ಟೂರಲ್ಲೇ ಕಳೆದ. ತನ್ಮೂಲಕ ಮರಣದ ಹೆಬ್ಬಯಕೆಗಳನ್ನು ಈಡೇರಿಸಿಕೊಂಡಿರಬಹುದು.
ಅವನ ಸಾವಿನ ಮೂಲಕ ಸಂಭಾವಿತ ಕೊಂಡಿಯೊಂದು ಕಳಚಿಕೊಂಡಿದೆ. ಹೀಗೆ ನನ್ನೂರಿನ ಸಭ್ಯಸಂಸ್ಕೃತಿಯ ಕೊನೆಯ ಕೊಂಡಿಗಳು ಒಂದೊಂದಾಗಿ ಕಳಚುತ್ತಿರುವ ಯಾತನೆಗಳು ಮತ್ತೆ ಮತ್ತೆ ನನ್ನಲ್ಲಿ ಒಂದೇ ಸಮನೆ ಕಾಡತೊಡಗಿವೆ. ಸಭ್ಯತೆಯ ಸಂಸ್ಕೃತಿಯೇ ಕಣ್ಮರೆಯಾಗುತ್ತಿರುವ ವರ್ತಮಾನದಲ್ಲಿ ಅಂತಹ ಸಾವುಗಳು ನಮ್ಮ ಬದುಕಿನ ಅಗತ್ಯ ಭಾಗವಾಗಬೇಕಿದೆ. ಅಷ್ಟಲ್ಲದೇ ಗೂಡೇಸಾನಂತಹ ನಿಷ್ಕಪಟ, ನಿಷ್ಕಲ್ಮಶ ಮನದ ವ್ಯಕ್ತಿತ್ವಗಳು ಗ್ರಾಮಭಾರತದ ಅಸ್ಮಿತೆ ಮತ್ತು ಆತ್ಮಗೌರವದ ಪ್ರತೀಕ.
-ಮಲ್ಲಿಕಾರ್ಜುನ ಕಡಕೋಳ
ಈ ಅಂಕಣದ ಹಿಂದಿನ ಬರಹಗಳು
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.