"ಬಾಲ್ಯದಲ್ಲಿ ಶ್ರೀಮಂತಿಕೆಯಲ್ಲಿ ಬೆಳೆದ ಭುಜಂಗಾಚಾರ್ಯರು ತಂದೆಯ ಅಕಾಲಿಕ ಮರಣದಿಂದ ವಿಧಿ ತಂದೆಯನ್ನಲ್ಲದೇ ಶ್ರೀಮಂತಿಕೆಯನ್ನೂ ಕಸಿದುಕೊಂಡಾಗ ತನ್ನ ಮುಂಬರುವ ದಿನಗಳನ್ನು ನೆನೆದು ಅವರಿಗೆ ಭಯವಾಗುತ್ತದೆ, ಆದರೆ ತನಗೆ ಬದುಕಲು ಹಾಗು ಜೀವನವನ್ನು ಸಾಗಿಸಲು ಧೈರ್ಯತುಂಬಿ ಬೆನ್ನೆಲುಬಾಗಿ ನಿಲ್ಲುವ ತಾಯಿ ಸುಂದರಾಬಾಯಿವರ ಪಾತ್ರವು ಅತ್ಯದ್ಭುತ," ಎನ್ನುತ್ತಾರೆ ಕಾರ್ತಿಕೇಯ ಭಟ್. ಅವರು ದೀಪಾ ಜೋಶಿ ಅವರ ‘ತತ್ರಾಣಿ’ ಕೃತಿ ಕುರಿತು ಬರೆದ ವಿಮರ್ಶೆ.
ಇದೊಂದು ತೃಪ್ತಿಯ ಓದು ಕೊಟ್ಟಿದೆ, ರಾಣಿಬೆನ್ನುರಿನ ಸುತ್ತಮುತ್ತಲಿನ ಕಡೆ ನಡೆಯುವ ಕಥೆಯಿದು, ಅದರಲ್ಲೂ ಮಾಧ್ವ ಕುಟುಂಬವೊಂದರ ಬದುಕನ್ನು ಭುಜಂಗಾಚಾರ್ಯರ ಪಾತ್ರದ ಮೂಲಕ ಸುಂದರವಾಗಿ ಚಿತ್ರಿಸಿದ್ದಾರೆ. ಈ ಕಾದಂಬರಿ ಓದಿ ಮುಗಿಸಿದ ನಂತರವೂ ಕಾಡಿದ ಪಾತ್ರವು ಭುಜಂಗಾಚಾರ್ಯರು. ಬಾಲ್ಯದಲ್ಲಿ ಶ್ರೀಮಂತಿಕೆಯಲ್ಲಿ ಬೆಳೆದ ಭುಜಂಗಾಚಾರ್ಯರು ತಂದೆಯ ಅಕಾಲಿಕ ಮರಣದಿಂದ ವಿಧಿ ತಂದೆಯನ್ನಲ್ಲದೇ ಶ್ರೀಮಂತಿಕೆಯನ್ನೂ ಕಸಿದುಕೊಂಡಾಗ ತನ್ನ ಮುಂಬರುವ ದಿನಗಳನ್ನು ನೆನೆದು ಅವರಿಗೆ ಭಯವಾಗುತ್ತದೆ, ಆದರೆ ತನಗೆ ಬದುಕಲು ಹಾಗು ಜೀವನವನ್ನು ಸಾಗಿಸಲು ಧೈರ್ಯತುಂಬಿ ಬೆನ್ನೆಲುಬಾಗಿ ನಿಲ್ಲುವ ತಾಯಿ ಸುಂದರಾಬಾಯಿವರ ಪಾತ್ರವು ಅತ್ಯದ್ಭುತ.
ತಾಯಿ, ತಂಗಿ, ತಮ್ಮಂದಿರ ಜವಾಬ್ದಾರಿಯನ್ನು ಹೊತ್ತು ತಮ್ಮ ಜೀವನವನ್ನು ನಡೆಸಲು ನಾನರೀತಿಯ ಕೆಲಸ ಆಯ್ಕೆ ಮಾಡಿಕೊಂಡು ಆ ಕೆಲಸಕ್ಕೆ ತಕ್ಕಂತೆ ಪಡುವ ಶ್ರಮದಿಂದ ಆಚಾರ್ಯರ ಪಾತ್ರವು ನಮಗೆ ಮಾರ್ಗದರ್ಶನವಾಗುತ್ತದೆ, ಚಿತ್ತಾಲರ ಶಿಕಾರಿ ಕಾದಂಬರಿಯಲ್ಲಿ ಬರುವ ನಾಗಪ್ಪನ ಪಾತ್ರ ಹಾಗು ಪುರುಷೋತ್ತಮ ಕಾದಂಬರಿಯಲ್ಲಿ ಬರುವ ಪುರುಷೋತ್ತಮ ಪಾತ್ರವು ನನಗೆ ಹೆಚ್ಚು ಹಿಡಿಸಿತ್ತು, ಅದಾದ ನಂತರ ಈ ಕಾದಂಬರಿಯ ಭುಜಂಗಾಚಾರ್ಯರ ಪಾತ್ರವೂ inspiration ಆದ ಪಾತ್ರವೇ. ಗೌರವ್ವ ಹಾಗು ಆಚಾರ್ಯರು ತಮಾಷೆಗೆ ಜಗಳವಾಡುವ ಪ್ರಸಂಗಗಳು ಸೊಗಸಾಗಿ ಮೂಡಿ ಬಂದಿವೆ. ಉತ್ತರ ಕರ್ನಾಟಕದ ಕಡೆ ಮದುವೆಯಾಗಿ ಅತ್ತೆಮನೆಗೆ ಹೋಗುವ ಹೆಣ್ಣುಮಕ್ಕಳು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವುದು ಎಲ್ಲೋ ಕೇಳಿದ್ದೆ, ಈ ಕಾದಂಬರಿ ಓದಿದಾಗ ಮತ್ತೆ ನೆನಪುಮಾಡಿದವು. ಮದುವೆ ಹಾಗು ಮುಂಜಿಯಲ್ಲಿ ಬರುವ ಶಾಸ್ತ್ರಗಳು, ಆ ಕಡೆಯ ಆಚಾರ ವಿಚಾರಗಳು, ತಿಂಡಿ ತಿನಿಸುಗಳು, ರೀತಿ ರಿವಾಜುಗಳು ಹಾಗು ಆಚಾರ್ಯರು ದೊಡ್ಡ ದೊಡ್ಡ ಪೆಂಡುಲಮ್ ಗಡಿಯಾರಗಳ ಅಂಗಡಿಯನ್ನು ತೆರೆಯುವುದು, ಮೈಕ್ ಸೆಟ್ ವ್ಯಾಪಾರ ಹಾಗು ಇತರೆ ಕೆಲಸಗಳಲ್ಲಿ ಅವರಿಗಿದ್ದ ಆಸಕ್ತಿಯು ಓದುತ್ತಾ ಹೋದ ಹಾಗೆ ಖುಷಿಯಾಗುತ್ತದೆ. ಇದರಲ್ಲಿ ಬರುವ ಬದರಿ ಹಾಗು ಕೇದಾರ ಯಾತ್ರೆಯಂತೂ ಸೊಗಸಾಗಿ ಮೂಡಿಬಂದಿದೆ, ಆ ಯಾತ್ರೆಯ ಸಮಯದಲ್ಲಿ ಪಡುವ ಕಷ್ಟಗಳು, ಅವರ ಸಾಹಸಗಳು, ಬದರೀನಾಥನ ದರ್ಶನದ ಕ್ಷಣಗಳು ಇಲ್ಲಿ ವರ್ಣಿಸುವುದಕ್ಕಿಂತ ಓದಿದರೆ ಉತ್ತಮ.
ತಮ್ಮಲ್ಲಿದ್ದ ಬೆಳ್ಳಿ ಬಂಗಾರ ಅಪ್ಪನ ಮರಣದಿಂದ ತಮ್ಮಿಂದ ದೂರವಾದದ್ದು, ಅಪ್ಪನ ಸಾವು, ಒಂದು ತುತ್ತು ಊಟಕ್ಕೂ ಪರದಾಡಿದ್ದು, ಮದುವೆಯ ಮನೆಯಲ್ಲಿ ಅಡಿಗೆ ಮಾಡಿದ್ದು, ಕೆಲವು ಸಲ ಎಷ್ಟೋ ಮನೆಗಳಲ್ಲಿ ಸುಣ್ಣ ಬಳಿದದ್ದು, ಗಡಿಯಾರ, ಮೈಕ್ ಸೆಟ್ ವ್ಯಾಪರ, ಇದರ ನಡುವೆ ತಮ್ಮಂದಿರ ಹಾಗು ತಂಗಿಯ ವಿವಾಹ ಮಾಡಲು ಹಣಕ್ಕಾಗಿ ಪರದಾಡಿದ್ದು, ಸ್ವಂತ ಮಕ್ಕಳ ಸಾವು, ತಮ್ಮ ಜೀವನದಲ್ಲಿ ಏರಿಳಿತಗಳನ್ನು ಕಂಡ ಆಚಾರ್ಯರಿಗೆ ಪರವೂರಿನಲ್ಲಿದ್ದುದರ ಕಾರಣ ಸ್ವಂತ ಮಗನ ಮುಖವನ್ನೇ ಕೊನೆಯ ಕ್ಷಣಗಳಲ್ಲಿ ನೋಡಲು ಸಾಧ್ಯವಾಗದಾಗ ತನ್ನ ಜೀವನದ ಉದ್ದೇಶವಾದರೂ ಏನು ಎಂದು ತನ್ನ ಜೀವನದ ಬಗ್ಗೆ ತಮಗೇ ಪ್ರಶ್ನಾರ್ಥಕವಾಗಿ ಉಳಿದುಬಿಡುತ್ತದೆ. ಒಂದು ಕಡೆ ಲೇಖಕರು ಹೀಗೆ ಹೇಳುತ್ತಾರೆ * ಮನುಷ್ಯ ಜೀವನದ ಪೂರ್ವ ಭಾಗದಲ್ಲಿ ಜ್ಞಾನ ಗಳಿಸಿ, ಮಧ್ಯಭಾಗದಲ್ಲಿ ಧನಾರ್ಜನೆ ಮಾಡಿ, ಇಳಿವಯಸ್ಸಿನಲ್ಲಿ ಪುಣ್ಯವನ್ನು ಗಳಿಸಿಕೊಳ್ಳಬೇಕಂತೆ*. ಕಡೆಯಲ್ಲಿ ಭುಜಂಗಾಚಾರ್ಯರು ಪುಣ್ಯವನ್ನು ಗಳಿಸಲು ತಮ್ಮ ಜೀವನವನ್ನು ಮುಡುಪಾಗಿಡುತ್ತಾರ ಎಂದು ಕಾದಂಬರಿ ಓದಿ ತಿಳಿದರೆ ಉತ್ತಮ.
“ಪ್ರೀತಿ, ಪ್ರೇಮಗಳು ,ಜಾತಿ, ಮತ ಧರ್ಮ,ವಿಚಾರಗಳು, ಯುವಕರ ಬಗ್ಗೆ ಆಚರಣೆಗಳು ಹೀಗೆ ಹಲವಾರು ಪ್ರಸ್ತುತ ಬದಲಾದ ಹಳ...
“ಇಸ್ಕೂಲು ಓದಿಸಿಕೊಂಡು ಹೋಯಿತು ಅನ್ನುವುದಕ್ಕಿಂತ ನೆನಪಿನ ಅಲೆಯಲ್ಲಿ ತೇಲಿಸಿಕೊಂಡು ಹೋಯಿತು ಅಂದರೆ ಹೆಚ್ಚು ಸೂಕ್...
“ಪ್ರೀತಿಯ ಕಥಾವಸ್ತುನಿಟ್ಟುಕೊಂಡ ಕೃತಿಗಳಲ್ಲಿ ಸಾಮಾನ್ಯವಾಗಿ ಭಾವುಕತೆಯೇ ವಿಜೃಂಭಿಸುತ್ತದೆ. ಆದರೆ ಈ ಕೃತಿಯು ಮನು...
©2025 Book Brahma Private Limited.