ಲಿಂಗವೆಂದರೆ

Date: 10-04-2023

Location: ಬೆಂಗಳೂರು


''ಜಗತ್ತಿನ ಬಿನ್ನ ಬಾಶೆಗಳಲ್ಲಿ ಲಿಂಗವು ವಿಬಿನ್ನವಾಗಿದೆ. ಹಲವು ಬಾಶೆಗಳಲ್ಲಿ ಲಿಂಗವ್ಯವಸ್ತೆ ಇಲ್ಲ. ಇದು ಒಂದು ಬಾಶೆ ರಚನೆಯನ್ನು ಪಡೆದುಕೊಂಡು ಬೆಳೆಯುವ ಬಲು ಉದ್ದನೆಯ ಇತಿಹಾಸದ ಕಡೆ ನಮ್ಮ ಕರೆದುಕೊಂಡು ಹೋಗಬಹುದು. ಈ ಬೆಳವಣಿಗೆಯಲ್ಲಿ ಮನುಶ್ಯ ಇತಿಹಾಸ, ಮನುಶ್ಯರ ಸಾಮಾಜಿಕ ಬೆಳವಣಿಗೆ ಮೊದಲಾದವೂ ಕಾಲಾಂತರದಲ್ಲಿ ಪ್ರಬಾವ ಬೀರುತ್ತಾ ಬಂದಿರುತ್ತವೆ,''‌ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಲಿಂಗವೆಂದರೆ' ಎಂಬ ವಿಚಾರಗಳ ಕುರಿತು ಬರೆದಿದ್ದಾರೆ.

ಲಿಂಗ ಎಂಬೊಂದು ಪರಿಕಲ್ಪನೆ ವ್ಯಾಕರಣದಲ್ಲಿ ಬರುತ್ತದೆ. ಇದನ್ನು ನಮ್ಮ ಶಾಲಾಕಾಲೇಜುಗಳಲ್ಲಿ ನಿರಂತರವಾಗಿ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಎಂದು ಹೇಳಿಕೊಂಡು ಬಂದಿದ್ದಾರೆ. ಇದಕ್ಕೆ ಪೂರಕವಾಗಿ ಹಳೆಗಾಲದ ಕೇಶಿರಾಜನ ಪುರುಶರೆ ಪುಲ್ಲಿಂಗಂ, ಸ್ತ್ರೀಯರೆ ಸ್ತ್ರೀಲಿಂಗಂ, ಉಳಿದುವೆಲ್ಲ ನಪ್ ಎಂಬ ಸಾಲನ್ನು ಹಿಡಿದುಕೊಳ್ಳುತ್ತಾರೆ. ವಾಸ್ತವದಲ್ಲಿ ಲಿಂಗ ಎಂದರೇನು ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ಬಹುತೇಕರು ಉತ್ತರಿಸುವುದು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಎಂದು. ಇವು ಬಹುಶಾ ವಿವಿದ ಬಗೆಯ ಲಿಂಗಗಳು, ಇಲ್ಲವೆ ಲಿಂಗದ ಗುಂಪಿಕೆ. ಆದರೆ, ಲಿಂಗ ಎಂದರೆ ಏನು? ಜೀವಿಗಳ ಲಿಂಗವನ್ನು, ಜಯಿವಿಕ ಲಿಂಗವನ್ನು ಲಿಂಗ ಎಂದು ಹೇಳುವುದು ಅತ್ಯಂತ ಸಾಮಾನ್ಯ. ಗಂಡಸರು ಪುಲ್ಲಿಂಗ, ಹೆಂಗಸರು ಸ್ತ್ರೀಲಿಂಗ ಎಂದು. ವ್ಯಾಕರಣದಲ್ಲಿ ಇದುವೆ ಲಿಂಗ ಎಂದು ಹೇಳುವುದಕ್ಕೆ ಯಾವುದೆ ರೀತಿಯ ಆದಾರಗಳು ಇಲ್ಲದಿದ್ದರೂ, ಇಲ್ಲವೆ ಈ ವಿವರಣೆಗೆ ಹೆಚ್ಚು ಸಮಸ್ಯೆಗಳು ಇದ್ದರೂ ಈ ಬಗೆಯ ವಿವರಣೆ ಅನಾಮತ್ತಾಗಿ ನಡೆದುಕೊಂಡು ಹೊರಟಿದೆ.

ಸರಿ, ಹಾಗಾದರೆ ಜಗತ್ತಿನ ಬಾಶೆಗಳಲ್ಲಿ ಲಿಂಗವನ್ನು ಯಾವ ಯಾವ ರೀತಿಯಲ್ಲಿ ಗುರುತಿಸುತ್ತಾರೆ ಎಂಬುದನ್ನು ತುಸು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಆ ಮೂಲಕ ಲಿಂಗ ಎಂದರೇನು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸಹಾಯ ದೊರೆಯಬಹುದು.

ಮೂಲಬೂತವಾಗಿ ಲಿಂಗ ಎಂಬುದು ಒಂದು ವ್ಯಾಕರಣ ಪರಿಕಲ್ಪನೆ. ಇದು ನಾಮಪದದ ಗುಣಸ್ವಬಾವವನ್ನು ಸೂಚಿಸುವಂತದ್ದು, ನಾಮಪದಗಳ ಗುಂಪಿಕೆಯನ್ನು ಮಾಡುವಂತದ್ದು. ಹಾಗಾದರೆ, ಲಿಂಗದ ಅಬಿವ್ಯಕ್ತಿ ಹೇಗೆ ಆಗುತ್ತದೆ ಎಂಬುದನ್ನು ತುಸು ಗಮನಿಸೋಣ. ಪದಕೋಶದಲ್ಲಿ ಲಿಂಗವನ್ನು ಸೂಚಿಸುವ ಬಿನ್ನ ಪದಗಳು ಇವೆ. ಕಮಲಿ-ಕಮಲ, ಚೆಲುವಿ-ಚೆಲುವ ಮೊದಲಾದ ರೂಪಗಳಲ್ಲಿ ‘ಇ’ ಇದು ಹೆಣ್ಣನ್ನು ಸೂಚಿಸುವುದಕ್ಕೆ ಮತ್ತು ‘ಅ’ ಇದು ಗಂಡನ್ನು ಸೂಚಿಸುವುದಕ್ಕೆ ಸಹಾಯ ಮಾಡುತ್ತವೆ. ಕಲ್ಲವ್ವ-ಕಲ್ಲಪ್ಪ, ನೀಲವ್ವ-ನೀಲಪ್ಪ ಎಂಬ ಪದಗಳಲ್ಲಿ ‘ಅವ್ವ’, ‘ಅಪ್ಪ’ ಎಂಬ ಲಿಂಗಸೂಚಕ ರೂಪಗಳು ಬಳಕೆಯಾಗಿ ಆ ಪದಗಳ ಲಿಂಗವನ್ನು ಸೂಚಿಸುವುದಕ್ಕೆ ಸಹಾಯಕವಾಗುತ್ತದೆ. ಆದರೆ, ಇವು ಪದಕೋಶದ ಬಾಗವಾಗಿ ಬರುತ್ತವೆ, ವ್ಯಾಕರಣವಾಗಿ ಅಲ್ಲ. ಇದರ ಹೊರತಾಗಿ ಪಾರ್ವತಿ-ಶಿವ, ಲಕ್ಶ್ಮಿ-ವೆಂಕಟ ಇಂತಾ ಪುರಾಣ-ಪಾರಂಪರಿಕ ಹಿನ್ನೆಲೆಯ ಹೆಸರುಗಳು ತಮ್ಮದೆ ಆದ ಕಾರಣದಿಂದಾಗಿ ಲಿಂಗವನ್ನು ಅರ‍್ತದ ಒಳಗೆ ಹೊಲಿದುಕೊಂಡಿರುವಂತೆ ಬಳಕೆಯಾಗಿ ಲಿಂಗವನ್ನು ಸೂಚಿಸುತ್ತವೆ. ಆದರೆ, ಇದು ವ್ಯಾಕರಣ ರಚನೆಯಲ್ಲಿ ಲಿಂಗವೆಂದು ಹೇಳಲಾಗದು. ಪದಕೋಶದ ಗಟಕಗಳಿಗೆ ಅರ‍್ತ ಒದಗುವುದು ಆ ಮಾತುಗ ಸಮುದಾಯದ ವಿಬಿನ್ನ ಕಾರಣ-ಹಿನ್ನೆಲೆಗಳಿಂದ. ಇದು, ವ್ಯಾಕರಣ ನಿಯಮದಶ್ಟು ನಿಯತವೂ, ನಿಯಾಮಕವೂ ಆಗಿರಬೇಕಿಲ್ಲ. ಲಕ್ಶ್ಮಿ ಎಂಬ ಹೆಸರಿನ ಹೆಂಗಸರ ಜೊತೆಗೆ ಗಂಡಸರೂ ಇರುವುದನ್ನು ಕಾಣಬಹುದು. ಅದರಂತೆ, ಸಂಗೀತ, ಮೇಗ ಮೊದಲಾದ ಹೆಸರುಗಳು

ಗಂಡಸರಿಗೂ ಹೆಂಗಸರಿಗೂ ಒಟ್ಟೊಟ್ಟಿಗೆ ಬಳಕೆಯಾಗುವುದನ್ನು ಕಾಣಬಹುದು. ಚುಕ್ಕಿ, ಮದು ಮೊದಲಾದ ಹೆಸರುಗಳು ಗಂಡು-ಹೆಣ್ಣು ಎಂಬ ಬಿನ್ನತೆಯನ್ನು ತೋರಿಸುವುದೆ ಇಲ್ಲ.

ಇವೆಲ್ಲವು ನಾಮಪದಗಳನ್ನು ಗುರುತಿಸುವ ಪದಕೋಶಕ್ಕೆ ಸಂಬಂದಿಸಿದ ವಿದಾನಗಳು ಎಂದಾದರೆ ನಾಮಪದಗಳನ್ನು ಗುರುತಿಸುವುದಕ್ಕೆ ವ್ಯಾಕರಣ ಮಾಡಿಕೊಳ್ಳುವ ವಿಬಿನ್ನ ವಿದಾನಗಳೇನಾದರೂ ಇವೆಯೆ ಎಂಬುದನ್ನು ಗಮನಿಸೋಣ. ಕನ್ನಡದ ಕೆಳಗಿನ ಈ ಒಂದೆರಡು ವಾಕ್ಯಗಳನ್ನು ಗಮನಿಸಿ,

ಅವಳು ಮನೆಗೆ ಬಂದಳು
ಅವನು ಮನೆಗೆ ಬಂದನು
ಅದು ಮನೆಗೆ ಬಂದಿತು
ಅವರು ಮನೆಗೆ ಬಂದರು
ಅವು ಮನೆಗೆ ಬಂದವು

ಇಲ್ಲಿ ಪ್ರತಿ ವಾಕ್ಯದಲ್ಲಿ ನಾಮಪದವು ಬದಲಾಗುತ್ತಿದ್ದಂತೆ ಆ ವಾಕ್ಯದ ಕ್ರಿಯಾಪದದ ರೂಪವೂ ಬದಲಾಗುತ್ತಿದೆ. ಕನ್ನಡದ ವಾಕ್ಯರಚನೆಯ ನಿಯಮದ ಪ್ರಕಾರ ವಾಕ್ಯದ ಕರ‍್ತ್ರುವಿನ ಗುಣಸ್ವಬಾವಗಳನ್ನು ಕ್ರಿಯಾಪದವು ಹೊತ್ತುಕೊಳ್ಳಬೇಕೆಂಬ ಒಪ್ಪಂದವಿದೆ. ಹಾಗಾಗಿ, ಮೇಲಿನ ವಾಕ್ಯಗಳಲ್ಲಿ ಕರ‍್ತ್ರು ಜಾಗದಲ್ಲಿ ಇರುವ ನಾಮಪದವು ಬದಲಾಗುತ್ತಿದ್ದಂತೆ ಅದರ ಗುಣಸ್ವಬಾವವು ಕ್ರಿಯಾಪದದಲ್ಲಿ ಬದಲಾಗುತ್ತಿದೆ. ಇಲ್ಲಿ ಕ್ರಿಯಾಪದದ ರೂಪವು ಕರ‍್ತ್ರುವಿನ ಲಿಂಗ ಮತ್ತು ವಚನ ಎಂಬ ಎರಡು ಬಿನ್ನ ಪರಿಕಲ್ಪನೆಗಳನ್ನು ಹೊತ್ತುಕೊಳ್ಳುತ್ತಿರುತ್ತದೆ. ಈಗ ಈ ವಾಕ್ಯಗಳನ್ನು ಕರ‍್ತ್ರುವನ್ನು ಕಳೆದು ಬಳಸೋಣ.

ಮನೆಗೆ ಬಂದಳು
ಮನೆಗೆ ಬಂದನು
ಮನೆಗೆ ಬಂದಿತು
ಮನೆಗೆ ಬಂದರು
ಮನೆಗೆ ಬಂದವು

ಇಲ್ಲಿ ಕರ‍್ತ್ರುವನ್ನು ಕಳೆದಿದ್ದರೂ ಕರ‍್ತ್ರುವಿನ ಗುಣಸ್ವಬಾವಗಳನ್ನು ತಿಳಿದುಕೊಳ್ಳಲು ಸಾದ್ಯವಿದೆ. ಇಲ್ಲಿ, ಲಿಂಗ ಮತ್ತು ಅದರೊಟ್ಟಿಗೆ ವಚನ ಈ ಎರಡು ಬಗೆಯ ನಾಮಪದದ ಗುಣಸ್ವಬಾವಗಳು ಕ್ರಿಯಾಪದದ ಮೇಲೆ ಪ್ರತ್ಯಯ ರೂಪದಲ್ಲಿ ಸೇರಿಕೊಂಡು ಅಬಿವ್ಯಕ್ತಗೊಳ್ಳುತ್ತವೆ. ಇದು ಕನ್ನಡ ಬಾಶೆಯ ಲಿಂಗ ವ್ಯವಸ್ತೆಯನ್ನು ಅರಿತುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.

ಕನ್ನಡದಲ್ಲಿ ಹೀಗೆ ಲಿಂಗ ಎಂಬ ಪರಿಕಲ್ಪನೆ ಕೊಡುವ ಅಯ್ದು ರೂಪಗಳು ಇವೆ. ಆದರೆ, ಎಲ್ಲ ಬಾಶೆಗಳಲ್ಲಿಯೂ ಹೀಗೆಯೆ ಗುಂಪಿಕೆ ಇರಲಾರದು. ತೆಲುಗಿನಲ್ಲಿ ಇಂತಾ ನಾಲ್ಕು ರೂಪಗಳು ಮಾತ್ರ ಇವೆ. ಅಂದರೆ, ಲಿಂಗಗಳು ಎಶ್ಟು ಬಗೆಯವೊ ಅಶ್ಟು ರೂಪಗಳು. ಹಾಗಾದರೆ, ಬಿನ್ನ ಬಾಶೆಗಳಲ್ಲಿ ಈ ರೂಪಗಳ ಸಂಕೆ ಹೆಚ್ಚೂಕಮ್ಮಿ ಆಗುತ್ತದೆಯೆಂದರೆ ಲಿಂಗ ಬಿನ್ನವಾಗಿರುತ್ತದೆ ಎಂದರ‍್ತ. ಕನ್ನಡದಲ್ಲಿ ಸ್ತ್ರೀಲಿಂಗ, ಪುಲ್ಲಿಂಗ, ನಪುಂಸಕಲಿಂಗ ಎಂಬ ಮೂರು ಲಿಂಗಗಳನ್ನು ವ್ಯಾಕರಣಗಳು ಹೇಳಿದರೆ ಹಿಂದಿಯಲ್ಲಿ ಪುಲ್ಲಿಂಗ-ಸ್ತ್ರೀಲಿಂಗ ಎಂದು ಎರಡು ಲಿಂಗಗಳನ್ನು ಮಾತ್ರ ಹೇಳುತ್ತವೆ.

ಇಲ್ಲಿ ಮುಕ್ಯವಾದ ಅಂಶವೆಂದರೆ, ಯಾವ ಆದಾರದ ಮೇಲೆ ಈ ಗುಂಪಿಕೆ ಆಗಿದೆ? ಕನ್ನಡದಾಗ ಇದು ಜಯಿವಿಕ ಲಿಂಗದ ಆದಾರದ ಮೇಲೆ ಅಂದರೆ ಗಂಡು-ಹೆಣ್ಣು ಎಂಬ ಆದಾರದ ಮೇಲೆ ಗುಂಪಿಸಿದೆ ಎಂದು ಹೇಳಲಾಗುತ್ತದೆ. ಆದರೆ, ಕನ್ನಡದಲ್ಲಿ ಅದು ಹಾಗಿಲ್ಲ ಎನ್ನುವುದನ್ನ ಮುಂದಿನ ಬರವಣಿಗೆಯಲ್ಲಿ ನೋಡುತ್ತೇವೆ. ಲಿಂಗದ ಗುಂಪಿಕೆ ಜಯಿವಿಕ ಲಿಂಗವನ್ನು ಆದರಿಸಿಲ್ಲದೆ ವಿವಿದ ಅಂಶಗಳನ್ನು ಆದರಿಸಿರಬಹುದು. ಅದು ಜೀವ ಇರುವ-ಜೀವ ಇಲ್ಲದ ಎಂಬ ಗುಂಪಿಕೆಯಾಗಿರಬಹುದು, ಮನುಶ್ಯ-ಮನುಶ್ಯರಲ್ಲದ ಎಂಬ ಗುಂಪಿಕೆಯಾಗಿರಬಹುದು, ಗಂಡು-ಹೆಣ್ಣು ಎಂದೂ ಆಗಿರಬಹುದು. ಇನ್ನೂ ಕುತೂಹಲಕರವಾದ ಅಂಶಗಳ ಆದಾರದ ಮೇಲೂ ಈ ಲಿಂಗದ ಗುಂಪಿಕೆ ಇರಬಹುದು.

ಸಂಸ್ಕ್ರುತ ಬಾಶೆಯಲ್ಲಿ ಲಿಂಗದ ಗುರುತಿಕೆ ಹೆಚ್ಚು ಸಂಕೀರ‍್ಣವಾಗಿದೆ. ಲಿಂಗವನ್ನು ಆ ಪದಗಳ ರಚನೆಯನ್ನು ಆದಾರವಾಗಿಟ್ಟುಕೊಂಡು ಮಾಡುವುದನ್ನೂ ಸಂಸ್ಕ್ರುತದಲ್ಲಿ ಕಾಣಬಹುದು. ಪದದ ಕೊನೆಯಲ್ಲಿ ಯಾವ ದ್ವನಿ ಇದೆ, ಯಾವ ಪ್ರತ್ಯಯವನ್ನು ಅದು ಪಡೆದುಕೊಳ್ಳುತ್ತದೆ ಎಂಬುದು ಆ ಪದದ ಲಿಂಗವನ್ನು ನಿರ‍್ದರಿಸುತ್ತದೆ. ಸಂಸ್ಕ್ರುತ ಹಾಗೆಯೆ ಹಿಂದಿ ಮೊದಲಾದ ಬಾಶೆಗಳಲ್ಲಿ ಪದಕೋಶದ ಮೂಲಕ ಒಂದು ನಾಮಪದದ ಲಿಂಗವು ಗಂಡೊ-ಹೆಣ್ಣೊ ಎಂದು ತಿಳಿಯುತ್ತಿದ್ದರೂ ಅದು ವ್ಯಾಕರಣದಲ್ಲಿ ಬಿನ್ನವಾದ ಲಿಂಗವನ್ನು ಪಡೆದುಕೊಳ್ಳಬಹುದು. ಇಂತಾ ವ್ಯವಸ್ತೆಯನ್ನು ವ್ಯಾಕರಣ ಲಿಂಗ ಎಂದು ಕರೆಯುತ್ತಾರೆ.

ಜಗತ್ತಿನ ಹಲವು ಬಾಶೆಗಳಲ್ಲಿ ಲಿಂಗವ್ಯವಸ್ತೆ ಇಲ್ಲ. ಅಂದರೆ ಅಲ್ಲಿ ಲಿಂಗದ ಅಬಿವ್ಯಕ್ತಿ ಆಗುವುದಿಲ್ಲ. ಕರ‍್ನಾಟಕದ ಮಹತ್ವದ ಬುಡಕಟ್ಟು ಬಾಶೆಯಾದ ಕೊರಚದಲ್ಲಿ ಲಿಂಗವ್ಯವಸ್ತೆ ಇಲ್ಲ.

ಹಲವು ಬಾಶೆಗಳಲ್ಲಿ ಲಿಂಗವ್ಯವಸ್ತೆಯು ನಾಮವಾರ‍್ಗಿಕ (ಕ್ಲಾಸಿಪಯರ್) ಎಂಬ ಇನ್ನೊಂದು ವ್ಯಾಕರಣ ರಚನೆಯೊಂದಿಗೆ ನಂಟನ್ನು ಹೊಂದಿರುತ್ತದೆ. ಇಂಡೊ-ಆರ‍್ಯನ್ ಬಾಶೆಗಳಲ್ಲಿ ಇದನ್ನು ಗುರುತಿಸಲಾಗುತ್ತದೆ. ದ್ರಾವಿಡದಲ್ಲಿ ಇದನ್ನು ಗುರುತಿಸಲು ಆಗುವುದಿಲ್ಲ.

ಹೀಗೆ ಜಗತ್ತಿನ ಬಿನ್ನ ಬಾಶೆಗಳಲ್ಲಿ ಲಿಂಗವು ವಿಬಿನ್ನವಾಗಿದೆ. ಹಲವು ಬಾಶೆಗಳಲ್ಲಿ ಲಿಂಗವ್ಯವಸ್ತೆ ಇಲ್ಲ. ಇದು ಒಂದು ಬಾಶೆ ರಚನೆಯನ್ನು ಪಡೆದುಕೊಂಡು ಬೆಳೆಯುವ ಬಲು ಉದ್ದನೆಯ ಇತಿಹಾಸದ ಕಡೆ ನಮ್ಮ ಕರೆದುಕೊಂಡು ಹೋಗಬಹುದು. ಈ ಬೆಳವಣಿಗೆಯಲ್ಲಿ ಮನುಶ್ಯ ಇತಿಹಾಸ, ಮನುಶ್ಯರ ಸಾಮಾಜಿಕ ಬೆಳವಣಿಗೆ ಮೊದಲಾದವೂ ಕಾಲಾಂತರದಲ್ಲಿ ಪ್ರಬಾವ ಬೀರುತ್ತಾ ಬಂದಿರುತ್ತವೆ. ಇವೆಲ್ಲವನ್ನು ತಿಳಿದುಕೊಳ್ಳುವುದಕ್ಕೆ ಲಿಂಗವ್ಯವಸ್ತೆಯ ಅರಿವು ಸಹಾಯ ಕೂಡ ಮಾಡುತ್ತದೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ

02-10-2024 ಬೆಂಗಳೂರು

"ಯಶವಂತ ಚಿತ್ತಾಲರ ಸೆರೆ ಕಥೆಯನ್ನು ಒಂದು ದೃಷ್ಟಾಂತವಾಗಿ ನೋಡಬಹುದಾದದ್ದು. ತಂದೆಯ ಶ್ರಾದ್ಧದ ದಿನದಂದೇ ಮಗನ ಮದುವೆ...

ತಾಯ್ಮಾತು-ತಾಯಿ ಮಾತು-ಗುರ‍್ತಿಕೆ  

28-09-2024 ಬೆಂಗಳೂರು

"ತಾಯ್ಮಾತು ಎಂಬುದು ಸಹಜವಾಗಿಯೆ ತಾಯಿ ಪದವನ್ನು ಒಳಗೊಂಡಿರುವುದರಿAದ ತಾಯಿಯೊಂದಿಗೆ ನಂಟನ್ನು ತೋರಿಸುತ್ತದೆ. ಈ ಪದದ...

ಧರ್ಮಸಿಂಗ್ : ಮರೆಯಲಾಗದ ಕೆಲವು ನೆನಪುಗಳು

26-09-2024 ಬೆಂಗಳೂರು

"ಎನ್. ಧರ್ಮಸಿಂಗ್ ಅವರನ್ನು ಮೊಟ್ಟ ಮೊದಲ ಬಾರಿ ನಾನು ಅತ್ಯಂತ ಹತ್ತಿರದಿಂದ ನೋಡಿದ್ದು 1972ರಲ್ಲಿ. ಆಗ ನಾನು ಹೈಸ್...