ಲೌಕಿಕ ಹಾಗೂ ಅಧ್ಯಾತ್ಮ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ

Date: 14-10-2024

Location: ಬೆಂಗಳೂರು


“ದೇವತಾಸ್ತೋತ್ರಗಳ ಸಂಕಲನ ರೂಪವಾದ 'ಸ್ತೋತ್ರಸಂಗಮ' ಸಂಪುಟವು ಹೇಗೆ ಸಂಗತ ಎನ್ನಿಸೀತು ಎಂಬುದು ಸಹಜವಾದ ಪ್ರಶ್ನೆ” ಎನ್ನುತ್ತಾರೆ ವ್ಯಾಸನಕೆರೆ ಪ್ರಭಂಜನಾಚಾರ್ಯ. ಅವರು ಶೋಭಾ ವೆಂಕಟ್ ಅವರ ‘ಸ್ತೋತ್ರ ಸಂಗಮ’ (ಸಂಸ್ಕೃತ ಶ್ಲೋಕಗಳು) ಕ್ಕೆ ಬರೆದ ಮುನ್ನುಡಿ.

ಸ್ತೋತ್ರಸಂಗಮ (ವಿಷ್ಣುಸಹಸ್ರನಾಮ ಮೊದಲಾದ ಸ್ತೋತ್ರಗಳ ಸಂಕಲನ). ಇದು ಪ್ರಕಾಶನಗೊಳ್ಳುತ್ತಿರುವ ಕಾಲ 21ನೆಯ ಶತಮಾನ. ಮನೆಮನೆಗಳಲ್ಲೂ ನಾಸ್ತಿಕ್ಯದ ವಾತಾವರಣ. ಮೌಲ್ಯಗಳೆಲ್ಲ ಮೂಲೆಗುಂಪಾಗಿರುವ ಕಾಲ. ಸಂಬಂಧಗಳು ಗೌಣವಾಗಿ ಹಣಕಾಸುಗಳೇ ಪ್ರಧಾನವೆನ್ನಿಸಿರುವ ವಿಚಿತ್ರವಾದ ಕಾಲ. ದೇವಸ್ಥಾನಗಳಿಗಿಂತ ಹೆಚ್ಚಾಗಿ ಮಧು-ಮದ್ಯಗಳಿಗೆ ಆದ್ಯತೆ ದೊರಕಿರುವ ಕಾಲ, ಯಂತ್ರಗಳೇ ವಿಜೃಂಭಿಸುತ್ತಿರುವ ಕಾಲದಲ್ಲಿ ಮಂತ್ರಗಳಿಗೇನು ಕೆಲಸ ಎಂಬ ಭ್ರಮೆಯಲ್ಲಿ ಜನ ಮೈಮರೆತಿರುವ ಕಾಲ.

ಇಂತಹ ಕಾಲದಲ್ಲಿ ದೇವತಾಸ್ತೋತ್ರಗಳ ಸಂಕಲನ ರೂಪವಾದ 'ಸ್ತೋತ್ರಸಂಗಮ' ಸಂಪುಟವು ಹೇಗೆ ಸಂಗತ ಎನ್ನಿಸೀತು ಎಂಬುದು ಸಹಜವಾದ ಪ್ರಶ್ನೆ. ಅದೂ ಸಹ ದೇಶವಿದೇಶಗಳಲ್ಲಿ ವಿಖ್ಯಾತಿ ಪಡೆದ ವೈದ್ಯದಂಪತಿಯಿಂದ ಎಂಬುದು ಮೇಲ್ನೋಟಕ್ಕೇ ಅಚ್ಚರಿ ಹುಟ್ಟಿಸುವ ಸಂಗತಿ. ಎಲ್ಲಿಯ ಅಧ್ಯಾತ್ಮ. ಎಲ್ಲಿಯ ಲೌಕಿಕ, ಎಲ್ಲಿಯ ವೈದ್ಯವೃತ್ತಿ, ಎಲ್ಲಿಯ ಅಧ್ಯಾತ್ಮಪ್ರವೃತ್ತಿ ಎನ್ನಿಸುವುದು ಸಹಜ. ಅಧ್ಯಾತ್ಮ ತೊರೆದವರಷ್ಟೇ ವಿವೇಕಿಗಳು ಎನ್ನುವಂತಹ ಅವಿವೇಕದ ವರ್ತನೆಯ ಕಾಲ ಇದು. ಅದು ಹೇಗೆ ಸಂಗತ? ಸರಿಯಾಗಿ ಚಿಂತಿಸಿದಾಗ ಜನತೆಗೆ ಅನ್ನ ನೀರು ಗಾಳಿಗಳಷ್ಟೇ ಮುಖ್ಯವಾದುದು ಅಧ್ಯಾತ್ಮ ಎಂಬುದು ಅರ್ಥವಾಗುವುದು. ಇನ್ನೂ ಹೆಚ್ಚು ವಿಚಾರ ಮಾಡಿದರೆ, ಒಂದರ್ಥದಲ್ಲಿ ಅವುಗಳಿಗಿಂತಲೂ ಮಿಗಿಲು ಎನ್ನುವುದು ಸಹ.

ಅಧ್ಯಾತ್ಮದ ಮಹತ್ವ:

ಲೌಕಿಕ ಹಾಗೂ ಅಧ್ಯಾತ್ಮ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಲೌಕಿಕ ಹೊರಗಿನ ಪ್ರಪಂಚವಾದರೆ, ಅಧ್ಯಾಹ್ನ ಒಳಗಿಳ ಪ್ರಪಂಚ. ದೇಹಕ್ಕೆ ಒಳಗೆ ಹೊರಗೆ ಹೇಗೋ, ಹಾಗೇ ಜೀವಕ್ಕೆ ಲೌಕಿಕ ಹಾಗೂ ಪ್ರಪಂಚಗಳು. ಇದರಲ್ಲಿ ಯಾವುದನ್ನು ತೊರೆದರೂ ಅದು ಏಕಮುದ ನಾಣ್ಯದಂತೆ ಅಮಾನ್ಯವಾಗುವುದು.

ಆತ್ಮವಿದ್ದವರಿಗೆಲ್ಲ ಅಧ್ಯಾತ್ಮ ಅತ್ಯಗತ್ಯ. ವಿದ್ಯೆಯ ಇತರ ಭಾಗಗಳು ವೃತ್ತದ ಕಂಬಗಳಿದ್ದಂತೆ; ಅಧ್ಯಾತ್ಮ ಅದರ ಬೇರು. ದೇಹದೊಳಗಿನ ಆತ್ಮ ಕಾಣದು. ಕಾಣುವುದು ದೇಹ ಮಾತ್ರ. ವೃಕ್ಷದ ಬೇರು ಕಾಣದೆ, ಮೇಲಿನ ಭಾಗ ಮಾತ್ರ ಕಾಣುವುದು ಹೇಗೋ, ಹಾಗೇ ಇದನ್ನು ತಿಳಿಯಬೇಕು. ದೇಹದ ಒಳಗಿನದ್ದು ಪ್ರಾಣಶಕ್ತಿಯಾದರೆ, ಹೊರಗಿನದ್ದು ಬೀಸುವ ಗಾಳಿಯದು. ಪ್ರಾಣವಿಲ್ಲದಾಗ ಅದು ಬರೀ ದೇಹ ಮಾತ್ರ. ಹೊರಗಿನ ಗಾಳಿಯಿಲ್ಲದೆ ಪ್ರಾಣಶಕ್ತಿ ಉಳಿಯದು. ಪ್ರಾಣಶಕ್ತಿಯಿಲ್ಲದ ದೇಹವನ್ನು ಹೊರಗಿನ ಗಾಳಿ ಬದುಕಿಸಲಾರದು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಅಧ್ಯಾತ್ಮವಿಲ್ಲದ ಬದುಕು ಇಂಜಿನ್ ಇಲ್ಲದ ವಾಹನದಂತೆ. ಆಗ ಅದು ತಳ್ಳುವ ಗಾಡಿಯಾದೀತೇ ಹೊರತು ವಾಹನವೆನ್ನಿಸದು. ವಿದ್ಯುತ್ ಇಲ್ಲದ ವಿದ್ಯುದುಪಕರಣದಂತೆ ಕೇವಲ ಶ್ರಮ ಮಾತ್ರ ವಿದ್ಯುತ್ ಇಲ್ಲದಾಗ ಮಿಕ್ಸರನ್ನು ಬೆರಳಿನಿಂದ ತಿರುಗಿಸುವ ಹುಂಬ ಪ್ರಯತ್ನದಂತೆ ಹಾಸ್ಯಾಸ್ಪದವೆನ್ನಿಸುವುದು. ಅದಕ್ಕೆಂದೇ ಭಗವದ್ಗೀತೆ ಅಧ್ಯಾತ್ಮವಿದ್ಯೆಯನ್ನು ವಿದ್ಯೆಗಳ ರಾಜ ಎಂದು ಕರೆದಿದೆ: "ಅಧ್ಯಾತ್ಮವಿದ್ಯಾ ವಿದ್ಯಾನಾಮ್”.

ದೈವಪ್ರಜ್ಞೆ ಅಧ್ಯಾತ್ಮದ ಉತ್ತುಂಗ. ದೈವವನ್ನು ಮರೆತಾಗ ಅಧ್ಯಾತ್ಮದ ಪರಿಕಲ್ಪನೆಯೇ ಕುಸಿದುಹೋಗುವುದು. ಅದರ ಆಸರೆಯಲ್ಲೇ ಜೀವನ. ಇವೆರಡರ ಮಧ್ಯೆ ಇರುವುದು ಉಳಿದವುಗಳು. ತಳಹದಿಯಿಲ್ಲದ ಕಟ್ಟಡ ಹೇಗೋ, ಹಾಗೆ. ಇಂದು ನಡೆದಿರುವುದು, ನಡೆಯುತ್ತಿರುವುದೂ ಅದೇ. ಅದರಿಂದಾಗಿಯೇ ನಿರೀಕ್ಷಿತವಾದ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನಬಹುದು.

ಯಂತ್ರ ಹಾಗೂ ಮಂತ್ರ ಎರಡಕ್ಕೂ ಇರುವ ವ್ಯತ್ಯಾಸವೂ ಇದೇ ಆಗಿದೆ. ಯಂತ್ರದ ಸಾಧನೆಗೆ ಒಂದು ಮಿತಿ ಇದೆ. ಕಾಲ ಕಳೆದಂತೆ ಅದು ಶಕ್ತಿಹೀನವಾಗುವುದರೊಂದಿಗೆ ಸತ್ಯಹೀನವೂ ಇದೆಕಾಲ ನಂತರ ಅದರ ಬೆಲೆ ತ್ಯಾಜ್ಯಕ್ಕಿಂತ ಹೆಚ್ಚು ಎನ್ನಿಸದು. ಆದರೆ ಮಂತ್ರದ್ದು ಹಾಗಲ್ಲ. ಕಾಲದೊಂದಿಗೆ ಅದರ ಮಹತ್ತ್ವ ಹೆಚ್ಚುತ್ತಾ ಹೋಗುತ್ತದೆ. ಚಿನ್ನದ ಬೆಲೆ ಹೇಗೋ, ಹಾಗೆ. ಕೊನೆಗೆ ಅದರ ಬೆಲೆ ಊಹೆಗೂ ಮೀರಿದ ಮಟ್ಟವನ್ನು ಮುಟ್ಟುವುದು.

ಅಧ್ಯಾತ್ಮವಿಲ್ಲದ ಉಳಿದ ವಿದ್ಯೆಗಳು ಒಂದು ಹಂತದಲ್ಲಿ ಸೀಮಿತವೂ, ನಶ್ವರವೂ ಆಗಿ ನಿರುಪಯುಕ್ತವಾಗುವುದು ನಿಶ್ಚಿತ. ಆದರೆ ಅಧ್ಯಾತ್ಮ ಹಾಗಲ್ಲ. ಅದು ಎಂದೂ ಅಳಿವಿಲ್ಲದ ಶಾಶ್ವತವಾದ ವಿದ್ಯೆ, ಪರಿಪೂರ್ಣವಾದ ವಿದ್ಯೆ. ಅದರ ಹಿನ್ನೆಲೆಯಲ್ಲಿ ಸಾಗುವ ಜೀವನ ಸೂರ್ಯನ ಬೆಳಕಿನಲ್ಲಿ ನಡೆಯುವ ಪ್ರಯಾಣದಂತೆ ಆಹ್ಲಾದಕರ. ಉಳಿದ ವಿದ್ಯೆಯ ಜೀವನ ರಾತ್ರಿಯ ಬದುಕು ಹೇಗೋ, ಹಾಗೆ. ನಕ್ಷತ್ರಗಳ ಬೆಳಕಿನಲ್ಲಿ ಸುಗಮ ಸಂಚಾರ ಮೊದಲಾದವುಗಳು ಸಾಧ್ಯವಾಗುವುದುಂಟೇ? ಅದರಂತೆ ದೀಪಗಳ ಬೆಳಕಿನಲ್ಲಿ ಸಹ.

ಈ ಅಧ್ಯಾತ್ಮದ ಪರಿಕಲ್ಪನೆ ಸಮಸ್ತಜೀವರಾಶಿಗೆ ಸಂಬಂಧಿಸಿದ್ದೇ ಹೊರತು, ಜಾತಿ- ಕೋಮುಗಳಿಗೆ ಅಲ್ಲ. ಅದನ್ನು ಜಾತಿ-ಕೋಮುಗಳಿಗೆ ಅನ್ವಯಿಸುವ ಕೆಲವರ ಪ್ರಯತ್ನ ಗಾಳಿ, ನೀರು, ಗಗನಗಳಿಗೆ ಜಾತಿಯ ಹೊದಿಕೆಯನ್ನು ಹೊದಿಸುವ ಪ್ರಯತ್ನದಂತೆ ವ್ಯರ್ಥ ಹಾಗೂ ಹಾಸ್ಯಾಸ್ಪದ. ಇಂತಹ ಪ್ರಯತ್ನ ನಡೆಯುತ್ತಿರುವುದೇ ವಿಶ್ವದಲ್ಲಿನ ಇಂದಿನ ಸಕಲ ಸಮಸ್ಯೆಗಳ ಮೂಲ. ಇದೆಲ್ಲದರಿಂದ ಹೊರತಾದ ಆಧ್ಯಾತ್ಮಿಕ ಪರಿಕಲ್ಪನೆಯೇ ರಾಮರಾಜ್ಯ ಎನ್ನಿಸುವುದು.

ಸಾಮಾನ್ಯಜ್ಞಾನಕ್ಕೆ ನಿಲುಕದ್ದನ್ನು ಸಾಧಿಸಿ ತೋರಿಸಿದ್ದು ವಿಜ್ಞಾನ. ವಿಜ್ಞಾನದ ಸಾಧನೆಯನ್ನೂ ಮೀರಿ ನಿಂತದ್ದು ತತ್ತ್ವಜ್ಞಾನ. ತತ್ತ್ವಜ್ಞಾನದ ಕೇಂದ್ರಬಿಂದುವೇ ಭಗವಂತ. ಅವನಿಲ್ಲದ ಬದುಕು ಸೂರ್ಯನಿಲ್ಲದ ಬದುಕು ಎಂದರೆ ರಾತ್ರಿಯಂತಾಗುವುದು. ಸಾವಿರಾರು ದೀಪಗಳಿರಲಿ ಕೋಟಿಕೋಟಿ ನಕ್ಷತ್ರಗಳೂ ಒಬ್ಬ ಸೂರ್ಯನಿಗೆ ಸಾಟಿ ಎನಿಸಲಾರವು ಅಲ್ಲವೇ?

ವೈದಿಕ ಪರಿಕಲ್ಪನೆಯಲ್ಲಿ ಇಪ್ಪತ್ತನಾಲ್ಕು ತತ್ತ್ವಗಳು ನಿರೂಪಿತವಾಗಿದ್ದು, ಪರಮಾತ್ಮ ಪರತತ್ತ್ವವೆನ್ನಿಸಿದೆ. ಮಂತ್ರಿಮಂಡಲಕ್ಕೆ ಪ್ರಧಾನಮಂತ್ರಿ, ಮುಖ್ಯಮಂತ್ರಿ ಹೇಗೋ, ಹಾಗೆ. ಏಕದೇವವಾದದ ಪರಿಕಲ್ಪನೆ ಇಂತಹುದು. ಇತರದೇವತೆಗಳೆಲ್ಲ ಒಂದು ಎಂಬುದು ಇದರ ಅರ್ಥವಲ್ಲ. ಪರದೇವತೆ ಮಾತ್ರ ಒಂದೇ ಎಂಬುದು ಇದರ ಮುಖ್ಯಭಾವ.

ಸ್ವತಂತ್ರಖಾತೆಯನ್ನು ನಿರ್ವಹಿಸುವ ಮಂತ್ರಿಗಳೂ ಪ್ರಧಾನಮಂತ್ರಿ, ಮುಖ್ಯಮಂತ್ರಿಯ ಆಧೀನ್ಯಕ್ಕೆ ಒಳಪಟ್ಟಂತೆ, ಇತರ ತಾತ್ತಿತ್ವದೇವತೆಗಳು ಸಹ ಪರದೇವತೆಯ ಆಧೀನ್ಯಕ್ಕೆ ಒಳಪಟ್ಟಿರುವರು ಎಂಬುದು ಸನಾತನಧರ್ಮದ ತಿರುಳು.

ಹೀಗಾಗಿ ವೈದ್ಯಕೀಯ, ತಾಂತ್ರಿಕ ಮೊದಲಾದ ಸಕಲವಿದ್ಯೆಗಳಿಗೂ ಅಧ್ಯಾತ್ಮವೇ ಮೂಲ. ಅದರ ಬೆಳಕಿನಲ್ಲಿ ಇತರವಿದ್ಯೆಗಳೆಲ್ಲ ಸಾರ್ಥಕವೆನ್ನಿಸುವವು. ಈ ವಿವೇಚನೆಯನ್ನು ನೀಡಿರುವ ಅಪೂರ್ವಸಾಧನೆ ತತ್ತ್ವಜ್ಞಾನದ್ದು. ಸಂತರು ಮಾತ್ರವಲ್ಲದೆ, ರಾಜಮಹಾರಾಜರೂ ಇದರ ಹಿನ್ನೆಲೆಯಲ್ಲಿಯೇ ಅಸಾಮಾನ್ಯವಾದ ಕಾರ್ಯಗಳನ್ನು ಸಾಧಿಸಿದ ಹಿರಿಮೆಯನ್ನು ಹೊಂದಿರುವರು. ಸಾಮಾನ್ಯವಾಗಿ ಯಾವುದೇ ವಿದ್ಯೆಯೂ ಮತ್ತೊಂದಕ್ಕೆ ಪೂರಕ. ಆದರೆ ಅಧ್ಯಾತ್ಮವಿದ್ಯೆಯು ಇತರ ಸಕಲ ವಿದ್ಯೆಗಳಿಗೂ ಪೂರಕ. ಅದರಿಂದಾಗಿ ಇತರೆ ವಿದ್ಯೆಗಳು ಯಥೋಚಿತವಾಗಿ ತಾರಕ ಎನಿಸಬಲ್ಲವು.

- ವ್ಯಾಸನಕೆರೆ ಪ್ರಭಂಜನಾಚಾರ್ಯ

MORE NEWS

ಈ ಕೃತಿ ಶ್ರೀಧರ ನಾಯಕ್ ಅವರ ಆತ್ಮಚರಿತ್ರೆಯ ಆಯ್ದ ಭಾಗವಿದ್ದಂತೆ

15-10-2024 ಬೆಂಗಳೂರು

“ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಎನ್ನುವುದು ವಾಸ್ತವಾಂಶಗಳನ್ನು ಜಾಗರೂಕವಾಗಿ, ನಿಖರವಾಗಿ ಮರು ಸೃಷ್ಟಿಸುವ ಕಲೆ&...

ಈ ಕವನ ಸಂಕಲನದಲ್ಲಿ ಬೇರೆ ಬೇರೆ ಆಸಕ್ತಿಯ ವಿಚಾರಗಳನ್ನು ಕಾಣಬಹುದು

15-10-2024 ಬೆಂಗಳೂರು

“ಭೂತಾಯಿಯ ಹೊರತಾಗಿ ಬಂದ ಕವನಗಳನ್ನೆಲ್ಲಾ ಸೇರಿಸಿ ಪ್ರತ್ಯೇಕವಾದ ಒಂದು ಕವನ ಸಂಕಲನವನ್ನು ಹೊರ ತರುವ ಆಲೋಚನೆ ಮನಸ್...

ಈ ಪುಸ್ತಕ ಮಾಹಿತಿ ಕೈಪಿಡಿ ಅಲ್ಲ: ಲಕ್ಷ್ಮೀ ಮಚ್ಚಿನ

14-10-2024 ಬೆಂಗಳೂರು

“ಸಮಾಜದಲ್ಲಿ ಗೌರವಯುತವಾಗಿ, ಸುಸಂಸ್ಕೃತವಾಗಿ ಬದುಕುವುದು ಹೇಗೆ ಎಂದು ಕಲಿಯಲು ಬಹಳಷ್ಟಿರುತ್ತದೆ. ಇದನ್ನು ಕಲಿಸಿಕ...