ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ

Date: 15-12-2021

Location: ಬೆಂಗಳೂರು


‘ಕಾಟ್ರಹಳ್ಳಿ ತೀರಿಹೋಗಿ ಆರು ವರ್ಷಗಳು. ಅವನ ತೊರೆದು ಜೀವಿಸಿರುವ ಅವನದೇ ಅಕ್ಷರ ಲೋಕದ ವಿಸ್ಮಯಗಳಿಗೆ ಸಾವಿಲ್ಲ’ ಎನ್ನುತ್ತಾರೆ ಲೇಖಕ ಹಾಗೂ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ. ಪತ್ರಕರ್ತ, ಸಾಹಿತಿ, ಸಂಸ್ಕೃತಿ ಚಿಂತಕ ಕಾಟ್ರಹಳ್ಳಿ ಮಹಾಬಲೇಶ್ವರ್ ಅವರ ಒಡನಾಟ ಮತ್ತು ವ್ಯಕ್ತಿತ್ವದ ಹಲವು ಮಜಲುಗಳನ್ನು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ ವಿವರಿಸಿದ್ದಾರೆ.

ಹಾಗೆ ನೋಡಿದರೆ ಕಾಟ್ರಹಳ್ಳಿ ಮಹಾಬಲೇಶ್ ನನಗೆ ನಿರಂತರ ಒಡನಾಟವಿದ್ದ ಬಹುಕಾಲದ ಗೆಳೆಯನೇನಲ್ಲ. ಆದರೆ ಅವನು ನನಗೆ ಕಳೆದ ಶತಮಾನದ ಸ್ನೇಹಿತ ಎನ್ನುವ ಖಂಡುಗ ಖುಷಿ ಮತ್ತು ಉಮೇದು ನನ್ನದು. ಅವನ ಗೆಳೆತನ ಎಷ್ಟು ಕಾಲದ್ದು ಎನ್ನುವುದಕ್ಕಿಂತ ಇದ್ದಷ್ಟು ಕಾಲವೂ ಬಹುಳ ಪ್ರೀತಿಯಿಂದ ಕೂಡಿದ್ದಾಗಿತ್ತು. ಮಹಾಬಲೇಶ ಬಹುಳ ಪ್ರೀತಿಯ ಗೆಳೆಯ. ಅಷ್ಟಕ್ಕೂ ಅವನದು ನನ್ನೊಂದಿಗೆ ಏಕವಚನದ ಸಂಪ್ರೀತಿ, ಸಲುಗೆಯ ಸಮೃದ್ಧ ಸ್ನೇಹ. ಅಂಥದೊಂದು ಜವಾರಿ ಗೆಣೆತನದ ಕುರುಕಲು ನೆನಪುಗಳ ಮೆಲುಕು ಈ ಬರಹ.

ಬೆರಳುಗಳಿಂದ ಹಂಚಿದಂತೆ ಇದೊಂದು ಬಗೆಯ ಅಂಗೈಪ್ರಸಾದ. ಒಡಲು ತುಂಬಿಸುವ ಸಂತೃಪ್ತಿಯ ಭೋಜನವಲ್ಲ. ಅಷ್ಟಕ್ಕೂ ಅವನದು ಒಡಲಿಗಿಂತ ಕರುಳಿನ ಮೇಲೆ ಅಗಾಧ ಪ್ರೀತಿ. ಅಂತೆಯೇ " ನಾನು ಅಮರ ಗಣಂಗಳ ಮಹಾಪ್ರಸಾದಿ ಅಲ್ಲ ಕಣಯ್ಯ, ಕರುಳ ಪ್ರೀತಿಯ ಮಹಾತೀರ್ಥಂಕರನೆಂದು " ತನಗೆ ತಾನೇ ಚ್ಯಾಷ್ಟಿ ಮಾಡಿಕೊಳ್ಳುತ್ತಿದ್ದ.

ಡಾವಣಗೇರಿಯಲ್ಲೊಬ್ಬ ಅವನಿಗೆ ತದ್ರೂಪಿಯಾದ ಆಪ್ತಮಿತ್ರನಿದ್ದ. ಅವನ ಹೆಸರು ಈಶ್ವರ ಪ್ರಸಾದ. ಅವನನ್ನು ಮಹಾಬಲೇಶ 'ಈಶಣ್ಣ' ಅಂತ ಕರೀತಿದ್ದ. ಈಶಣ್ಣ ಪ್ಲಸ್ ಮಾಬಲೇಶಣ್ಣ ಇಬ್ಬರೂ ಎರಡು ಶರೀರ, ಒಂದೇ ಶಾರೀರ ಎಂಬ ಸಮಪ್ರಾಯ ಮತ್ತು ಅಭಿಪ್ರಾಯವೇ ಆಗಿದ್ದರು. ಸಂಸ್ಕೃತಿ ಚಿಂತನೆಯ ಆ ಎರಡು ಸಹೃದಯ ವ್ಯಕ್ತಿತ್ವಗಳೊಂದಿಗೆ ಒಡನಾಡಿದ ಸಂಪ್ರೀತಿ ನನ್ನದು. ಇಬ್ಬರೊಂದಿಗೆ ಸಹಸ್ರ ಸಹಸ್ರ ಸಂವಾದಗಳನ್ನು ಸವಿದಿದ್ದೇನೆ. ಹಗಲಿಗಿಂತ ಅವರ ''ಮದ್ಯರಾತ್ರಿ''ಯ ಸಂಸ್ಕೃತಿ ಮೀಮಾಂಸೆ ಕೇಳುವುದೇ ಆಹ್ಲಾದಕರ. ಅದೊಂದು ಬಗೆಯ ಬಗೆ ಬಗೆದು ತುಂಬುವ ಘಮಲು. ಅನುಭಾವದೊರತೆಯ ಅಂಬಲಿ.
* * *
ಅವರಿಬ್ಬರೂ ಬಳ್ಳಾರಿಯ ಬಿಸಿಲ ನಾಡಿನವರು. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯ, ರಾಜಕೀಯ, ದರ್ಶನ, ತತ್ವಶಾಸ್ತ್ರಗಳ ಅಧ್ಯಯನಶೀಲರು. ಅಬ್ಬಾ ಅವರ ಓದಿನ ಹರವು ಸಮುದ್ರ ಸದೃಶ. ಕುಮಾರವ್ಯಾಸನಿಂದ ಹಿಡಿದು ನಮ್ಮಕಾಲದ ದೇವನೂರವರೆಗೆ ಅವರದು ಅಧಿಕೃತ ಓದು ಮತ್ತು ಅನುಭವಗಳ ಆಡುಂಬೊಲ. ಅವರ ಬಹುಪಾಲು ಸಂವಾದಗಳಿಗೆ ನಾನು ಕಿವಿಯಾಗಿರುತ್ತಿದ್ದೆ. ಅವರ ಸಂವಾದ ತೂರ್ಯಾವಸ್ಥೆ ತಲುಪಿದಾಗ ನಾನು ನಾಲಗೆಯಾಗುತ್ತಿದ್ದೆ. ಆದರೆ ಅವರು ನನ್ನ ಮಾತು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರುತ್ತಿರಲಿಲ್ಲ. ಅದು ಉಪರಾಟಿ ಕೆಲಸವೆಂದು ಅವರ ಸಂವಾದಗಳಿಗೆ ಸಂವಾದಿಯಾಗದೇ ಮತ್ತೆ ಕಿವಿಯಾಗುತ್ತಿದ್ದೆ.

ಆಗಿನ್ನೂ ಮೊಬೈಲುಗಳಿರಲಿಲ್ಲ. ಕಾಟ್ರಳ್ಳಿ ಡಾವಣಗೇರಿ ಬಸ್ ನಿಲ್ದಾಣದ ಕಾಯಿನ್ ಬೂತ್ ನಿಂದ ನನಗೆ ಫೋನ್‌ ಮಾಡಿ " ಇನ್ನರ್ಧ ಅರ್ಧಗಂಟೆಯಲ್ಲಿ ನೂರಿಪ್ಪತ್ತು ರುಪಾಯಿಯೊಂದಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟ್ಯಾಂಡಿನ ಕಾಯಿನ್ ಬೂತಲ್ಲಿ ಹಾಜರಿರಬೇಕೆಂದು " ಮೆಲ್ಲಗಿನ ದನಿಯಲ್ಲೇ ದಬಾಯಿಸುತ್ತಿದ್ದ. ಒಮ್ಮೊಮ್ಮೆ ನಟ್ಟ ನಡುರಾತ್ರಿ, ನಸುಕಿನ ಜಾವದಲ್ಲೂ ಅಪವೇಳೆಯ ಇಂತಹ ಕರೆಗಳು. ಆತ ಅಂತಹ ಅಪರಾತ್ರಿಯ ಕರೆಗಳನ್ನು ಕೂಡಾ ನಾನು ಅಟೆಂಡ್ ಮಾಡುತ್ತಿದ್ದೆ. ಒಮ್ಮೊಮ್ಮೆ ತಡಮಾಡಿ ಹೋದರೆ ಕೆಲಕಾಲ ಫೋನ್ ಬೂತ್ ಬಿಟ್ಟು ದೂರದಲ್ಲಿ ಕುಂತಿದ್ದು ನನ್ನನ್ನು ಸತಾಯಿಸುತ್ತಿದ್ದ. ಇದೇನು ಒಂದೆರಡು ಬಾರಿಯ ಪ್ರಸಂಗವಲ್ಲ. ಲೆಕ್ಕವಿಲ್ಲದಷ್ಟು ಬಾರಿ ಜರುಗುತ್ತಿತ್ತು. ಅಷ್ಟಕ್ಕೂ ಅವೆಲ್ಲವನ್ನು ಲೆಕ್ಕವಿಡಬೇಕೆಂಬುದು ನಮಗನಿಸುತ್ತಿರಲಿಲ್ಲ. ಅವು ನಮ್ಮ ಗೆಳೆತನದ ನಿಸರ್ಗಸುಬಗ ವಾಂಛಲ್ಯದ ಸಹಜ ನಡವಳಿಕೆಯೇ ಆಗಿದ್ದವು.

ಅದಕ್ಕೆ ಮುನ್ನದ ದಿನಮಾನಗಳಲ್ಲಿ ಅವನು ಹರಪನಹಳ್ಳಿಯಿಂದ "ದಿನಬಿಟ್ಟುದಿನ" ಎಂಬ ಹೆಸರಿನ ಒಂದಿನ ಬಿಟ್ಟು ಮರುದಿನ ಪ್ರಕಟವಾಗುವ ಪತ್ರಿಕೆ ಹೊರಡಿಸುತ್ತಿದ್ದ. ನಿನಗೂ ಒಂದು 'ಕಾಲಂ' ಕೊಡ್ತೀನಿ ನೀನೂ ಬರೀ ಅಂತ ಲಿಬರಲ್ಲಾಗಿ ಅಲವತ್ತುಗೊಳ್ತಿದ್ದ. ಅವನು ಹಾಗೆ ಕೇಳುವ ಸಲುಗೆಯ ಸ್ವರದಲ್ಲಿ " ನಿನಗೆ ಪುಗಸಟ್ಟೆ ಸೈಟ್ ಕೊಡ್ತೀನಿ ಮನೆ ಕಟ್ಟಿಕೋ " ಅನ್ನುವಂತೆ ನನಗೆ ಕೇಳಿಸುತ್ತಿತ್ತು. ನಾನೇನು ಸುಮ್ನಿರೋ ಪೈಕಿಯಲ್ಲ. ಬರಿತೀನಿ ದುಡ್ಡೆಷ್ಟು ಕೊಡ್ತಿಯ ಅಂತಿದ್ದೆ. 'ದಿನಬಿಟ್ಟುದಿನ' ಬರಬರುತ್ತಾ ವಾರಬಿಟ್ಟು ವಾರ ಬರತೊಡಗಿತು. ಟೈಟಲ್ ಚೇಂಜ್ ಮಾಡಿ ಅದಕ್ಕೆ ''ವಾರಬಿಟ್ಟುವಾರ'' ಎಂದು ಹೆಸರಿಡು ಅಂತ ನಾನು ಚ್ಯಾಷ್ಟಿ ಮಾಡ್ತಿದ್ದೆ.

ದಿನಬಿಟ್ಟು ದಿನಕ್ಕೆ ನಾನು ಒಂದಷ್ಟು ಲೇಖನಗಳನ್ನು ಬರೆದ ನೆನಪಿದೆ. ಕೃಷಿ, ಜಾನಪದ, ನಾಟಕ, ಹಳ್ಳಿಗಳ ಅಭಿವೃದ್ಧಿ ಹೀಗೆ ಗ್ರಾಮಭಾರತದ ಸಮೃದ್ಧಿಯ ಕನಸುಗಳು ದಿನಬಿಟ್ಟುದಿನದ ಆಶಯಗಳಾಗಿದ್ದವು. "ಬಾ ಗಿಳಿಯೇ ಬಾಗಳಿಗೆ" ಇದು ಬಾಗಳಿಯ ಗ್ರಾಮ ಬದುಕಿನ ಕಳ್ಳುಬಳ್ಳಿಯ ಮೇಲೆ ಚೆಂಬೆಳಕು ಚೆಲ್ಲುವ‌ ಆತನ ಪುಸ್ತಕ. ಕರ್ನಾಟಕ ಸಾಹಿತ್ಯ ಅಕಾಡೆಮಿ ಆತನಿಂದ ಬರೆಸಿದ ಅವನ ಪ್ರಥಮ ಪುಸ್ತಕ.
* * *
ಕೆ. ಎಚ್. ರಂಗನಾಥ, ಕೆ. ಎಚ್. ಪಾಟೀಲ, ಜ್ಞಾನದೇವ ದೊಡ್ಡಮೇಟಿ, ಕೊಂಡಜ್ಜಿ ಮೋಹನ ಅವರಂತಹ ಪ್ರಬುದ್ಧ ರಾಜಕಾರಣಿಗಳ ಒಡನಾಟ ಅವನಿಗೆ ಪ್ರಾಪ್ತಿಯಾಗಿತ್ತು. ಹೀಂಗಾಗಿ ಅವನು ಪ್ರಭುತ್ವಕ್ಕೆ ಹೆಚ್ಚು ಹತ್ತಿರದಲ್ಲಿರುತ್ತಿದ್ದ. ಇಂತಹ ಅನೇಕಾನೇಕ ಚಿಂತನಶೀಲರ ಸಾಹಚರ್ಯದಿಂದ ಆತ ತನಗಾಗಿ, ತನ್ನ ಕುಟುಂಬಕ್ಕಾಗಿ ಏನನ್ನೂ ಮಾಡಿಕೊಳ್ಳಲಿಲ್ಲ.

ಬೆಂಗಳೂರಿನ ರಾಜಕೀಯ, ಸಾಂಸ್ಕೃತಿಕ ಲೋಕದ ಹೊಕ್ಕು ಬಳಕೆಯಿಂದಾಗಿ ಒಂದೇ ಪಟ್ಟಿಗೆ ತನ್ನ ಹನ್ನೆರಡು ಪುಸ್ತಕಗಳನ್ನು ಬಿಡುಗಡೆ ಮಾಡಿ ನಮಗೆಲ್ಲ ಅಚ್ಚರಿ ಉಂಟುಮಾಡಿದ್ದ. ಅದು ಅವನ ತಿಕ್ಕಲುತನಕ್ಕೆ ಸಿಕ್ಕ ಉಡುಗೊರೆಯೆಂದು ನಾನು‌ ಅಂತಃಕರಣ ತುಂಬಿ ಅಡಸ್ಯಾಡಿದ್ದೆ. ತದನಂತರ ಅನೇಕ ಕೌತುಕಗಳ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ.

ವಿಸ್ಮಯ ಎಂಬುದು ಅವನಿಗೆ ಆಪ್ತಪದ. ಅದರ ಆರ್ದ್ರತೆ, ಜೀವಬನಿ ಅವನ ಅನೇಕ ಪುಸ್ತಕಗಳಿಗೆ ಪ್ರೇರಣೆ ಆಯಿತು. ಅಜಮಾಸು ನಲವತ್ತು ಪುಸ್ತಕಗಳನ್ನು ದೈತ್ಯನಂತೆ ಬರೆದು ಮುಗಿಸಿದ. ಮಾನವಿಕ‌ ಅಧ್ಯಯನಗಳಿಗೆ ಆಕರವೆನಿಸುವ ಕೃತಿಗಳು ಅದರಲ್ಲಿದ್ದವು. ಅಂತಹದ್ದೇ ಜಾಡಿನಗುಂಟ ಬರೆಯುವ ಬೆಳಗೆರೆ ರವಿಯೆಂಬ ಆಪ್ತಮಿತ್ರನ ಪತ್ರಿಕೆಗಳಲ್ಲಿ ತಾನು ಬರೆಯಬೇಕೆಂಬುದನ್ನು ಕೆಲವು ಬಾರಿ ತೋಡಿಕೊಂಡಿದ್ದ. ಅಷ್ಟೊತ್ತಿಗಾಗಲೇ ನಾನು ಬೆಳಗೆರೆ ಪತ್ರಿಕೆಗೆ ಬರೆಯುತ್ತಿದ್ದೆ. ಬೆಳಗೆರೆಯ ಯಡವಟ್ಟು, ಅಡಮುಟ್ಟುತನ ಮತ್ತು ಕಠಿಣಶ್ರಮ ಕುರಿತು, ಅವನ ಜನಪ್ರಿಯತೆಯ ಆರ್ಭಟ ಕುರಿತು ಸಮಾಧಾನದ ಪ್ರೀತಿ ತೋರುತ್ತಿದ್ದ.

ಅದಾದ ಕೆಲವು ತಿಂಗಳುಗಳಲ್ಲೇ ಆತ "ವಿಸ್ಮಯ" ಎಂಬ ಪಾಕ್ಷಿಕವನ್ನೇ ಶುರುಮಾಡಿದ. ಅದಕ್ಕೂ ನಾನು ಬರಿಬೇಕಂತ ಫರ್ಮಾನು ಹೊರಡಿಸಿದ. ಅದಕ್ಕೂ ಕೆಲವು ಲೇಖನಗಳನ್ನು ಬರೆದೆ. ಅಂಚೆ ಮೂಲಕ ನನಗೆ ಪತ್ರಿಕೆ ಕಳಿಸುತ್ತಿದ್ದ. ಬರವಣಿಗೆಯಲ್ಲಿ ಕಾಟ್ರಹಳ್ಳಿಗೆ ಶಿಸ್ತು ಮತ್ತು ಬದ್ಧತೆಗಳಿದ್ದವು. ಓದಿನಲ್ಲೂ ಅದನ್ನು ಅಳವಡಿಸಿಕೊಂಡಿದ್ದ. ನಾನು ಬೆಂಗಳೂರಿಗೆ ಹೋದಾಗ ಅವನು ನನಗೆ ಸಿಕ್ಕಾಗ ನಾನು ಕೇಳುವ ಮೊದಲ ಪ್ರಶ್ನೆಯೆಂದರೆ ಈಗ ಯಾವ ಪತ್ರಿಕೆ ಬಿಟ್ಟು ಇನ್ಯಾವ ಪತ್ರಿಕೆ ಸೇರಿಕೊಂಡೆ ಅನ್ನುವುದೇ ಆಗಿರ್ತಿತ್ತು. ಯಾಕೆಂದರೆ ನಾನು ಹೋದಾಗೆಲ್ಲ ಯಾವುದಾದರೂ ಪತ್ರಿಕೆಯಿಂದ ಹೊರಬಂದ ಇಲ್ಲವೇ ಯಾವುದಾದರೂ ಪತ್ರಿಕೆ ಸೇರಿಕೊಂಡ ವರ್ತಮಾನಗಳಿರುತ್ತಿದ್ದವು. ಪತ್ರಿಕೆ ಇಲ್ಲಾಂದ್ರೆ ಟೀವಿಗಳಿಗೆ ದಾಳಿ ಇಡುತ್ತಿದ್ದ.

ವಿಶ್ವವಾಣಿಯ ಪಾಟೀಲ ಪುಟ್ಟಪ್ಪನವರ 'ಪ್ರಪಂಚ'ದಿಂದ ಹಿಡಿದು ಧಾರವಾಡದಿಂದ ಹೊರಡುತ್ತಿದ್ದ ಅಂದಿನ ಆಂದೋಲನದವರೆಗೆ., ಪ್ರಜಾವಾಣಿ, ಇಂಡಿಯನ್ ಎಕ್ಸಪ್ರೆಸ್ ಬಳಗದ ಪತ್ರಿಕೆಗಳು, ಕೆ. ಎನ್ನೆನ್ ಬಾತ್ಮೀದಾರ, ದಿ ಏಷಿಯನ್ ಏಜ್, ಬೆಳಗಾವಿಯ ಕನ್ನಡಮ್ಮ, ಮುಂಗಾರು, ಸುದ್ದಿಸಂಗಾತಿ, ವಿಜಯ ಕರ್ನಾಟಕ, ಸರ್ಕಾರದ ದೂರದರ್ಶನ, ಸಾಹುಕಾರರ ದೂರದರ್ಶನಗಳಲ್ಲಿ ಕೆಲಸ ಮಾಡಿದ. ಒಂದೇ ಎರಡೇ ಬಹುಮಾಧ್ಯಮದ ಬಹುಬಗೆಯ ಆಯಾಮಗಳ ದಟ್ಟ ಅನುಭವ ಮಹಾಬಲೇಶನದು. ಹುಬ್ಬಳ್ಳಿ ಧಾರವಾಡಗಳಲ್ಲಿ ತನ್ನ ಸ್ವಭಾವದ ಗೆಳೆಯರ ಗುಂಪು ಕಟ್ಟಿಕೊಂಡಿದ್ದರು.‌ ಅದರ ಹೆಸರು "ವಿಕ್ಷಿಪ್ತ ಗೆಳೆಯರ ಬಳಗ" ಎಂದಿತ್ತು. ಅವನ ಮನೋಧರ್ಮಕ್ಕೆ ಹೇಳಿ‌ ಮಾಡಿಸಿದ ಹೆಸರು ಅದಾಗಿತ್ತೆಂದು ಒಡನಾಡಿ ಗಣೇಶ ಜೋಷಿ ಇವತ್ತಿಗೂ ದ್ಯಾಸವಿಟ್ಟು ಕೊಂಡಿದ್ದಾರೆ.

ಗಾಂಧಿ, ಲೋಹಿಯಾವಾದಿ ಚಿಂತನೆಗಳಿಂದ ಪ್ರಭಾವಿತನಾಗಿದ್ದ ಕಾಟ್ರಹಳ್ಳಿಗೆ ಶಾಸಕನಾಗುವ ವಿಕ್ಷಿಪ್ತ ಹುಚ್ಚಿತ್ತು. ಸಾಂಸ್ಕೃತಿಕವಾಗಿ ನಮಗೆಲ್ಲ ಪ್ರಿಯರಾಗಿದ್ದ ಎಂ.ಪಿ. ಪ್ರಕಾಶರೆಂದರೆ ಅವನಿಗೆ ಅಷ್ಟಕಷ್ಟೇ. ಪ್ರಕಾಶ್ ಚುನಾವಣೆಯಲ್ಲಿ ಸೋಲಬೇಕೆಂದು ಒಮ್ಮೊಮ್ಮೆ ಜಿದ್ದಿಗೆ ಬೀಳ್ತಿದ್ದ. ತನಗೆ ಕಾಂಗ್ರೆಸ್‌ ಪಾರ್ಟಿ ಟಿಕೆಟ್ ಕೊಡಲಿಲ್ಲಾಂತ ಸಿಟ್ಟಿಗೆದ್ದು ಸ್ವತಂತ್ರವಾಗೇ ಎಂ.ಪಿ. ಪ್ರಕಾಶ್ ವಿರುದ್ದ ಒಂದೆರಡು ಬಾರಿ ಕಾಟ್ರಹಳ್ಳಿ ಕಂಟೆಸ್ಟ್ ಮಾಡಿದ್ದ. ಅಚ್ಚರಿಯೆಂದರೆ ಮಂತ್ರಿ ಎಂ. ಪಿ. ಪ್ರಕಾಶರ ಆಪ್ತ ಕಾರ್ಯದರ್ಶಿ ಆಗಿದ್ದ ಕನ್ನೆಳ್ಳಿ ಕೊಟ್ರಪ್ಪನವರ ಮಗಳ(ಲಲಿತಾ)ನ್ನೇ ಮಹಾಬಲೇಶ ಮದುವೆಯಾಗಿದ್ದ. ಅಪೂರ್ವ ಮತ್ತು ಅಮೋಘ ಇಬ್ಬರು ಮಕ್ಕಳು.
* * ‌‌ *
ನಮ್ಮಿಬ್ಬರದು ಗುಲಗಂಜಿಯಷ್ಟೂ ನಂಜಿಲ್ಲದ ಗೆಳೆತನ. ನಿಷ್ಕಲ್ಮಶ ಮನದ ನಗಿಚ್ಯಾಟಿಕೆ ಮಾತುಗಳು. ಮಹಾಬಲೇಶ ತನ್ನ ಬಾಯೊಳಗಿನ ಜರ್ದಾಪಾನ್ ಬೀಡಾದ ವಾಸನೆಯೂ ಹೊರಬಾರದ ಮಿತಭಾಷಿ. ಅಷ್ಟೇ ಹಿತವಾದ ಬರಹಗಾರ. ಅದನ್ನು ಕಾಟ್ರಹಳ್ಳಿ ಸಾಯುವ ಕಡೇ ಗಳಿಗೆವರೆಗೂ ಕಾಪಾಡಿಕೊಂಡಿದ್ದ. ಸಾಯುವುದು ಇನ್ನೇನು ಒಂದೆರಡು ದಿನಗಳಿರಬಹುದು. ನನಗೆ ಫೋನ್ ಮಾಡಿ ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ತನ್ನನ್ನು ಸೇರಿಸು ಅಂದಿದ್ದ. ಆಯ್ತು ಬಂದುಬಿಡು ಅಂದಿದ್ದೆ. ನಾನು ನೌಕರಿ ಬಿಟ್ಟು ನಿನ್ ಜತೆ ಇರಕ್ಕಾಗಲ್ಲ ನಿನ್ ಜತೆ ಯಾರನ್ನಾದರೂ ಕರ್ಕೊಂಬಾ ಅಂದಿದ್ದೆ.

ಅದಾದ ಒಂದೆರಡು ದಿನದಲ್ಲೇ (02-11-2015) ಅವನ ಸಾವಿನ ಸುದ್ದಿ ಕೇಳಿದೆ. ನಾನೇ ಅವನನ್ನು ಕರಕೊಂಡು ಬಂದು ಬಾಪೂಜಿ ಆಸ್ಪತ್ರೆಗೆ ಸೇರಿಸಬೇಕಿತ್ತೆಂದು ಕಂಡಾಪಟಿ ಹಳಹಳಿ ಮಾಡಿಕೊಂಡೆ. ಅವನ ಅಂತಿಮ ದರ್ಶನ ಪಡೆಯಲು ಉತ್ತಂಗಿಗೆ ಹೋದೆ. ಉತ್ತಂಗಿಯ ಸಣ್ಣದೊಂದು ಮನೆಯಲ್ಲಿ ಮಹಾಬಲೇಶ ಸುಮ್ಮನೆ ಮಲಗಿದಂತಿತ್ತು. ಅಂದಹಾಗೆ ಆ ಪುಟ್ಟಮನೆಗೆ ಅವನಿಟ್ಟಿದ್ದ ಹೆಸರು ಸುಮ್ಮನೆ.

ಸರ್ವಜ್ಞನ ತ್ರಿಪದಿಗಳ ಪಿತಾಮಹ ರೆವೆರೆಂಡ್ ಚನ್ನಪ್ಪನವರ ಊರು ಉತ್ತಂಗಿ. ಅದೇ ಊರಿನವನಾದ ಮಹಾಬಲೇಶ ತನ್ನ ಹುಟ್ಟೂರಿನಲ್ಲೇ ಪ್ರಾಣಬಿಟ್ಟ. ಕನ್ನಡ ಪತ್ರಿಕೋದ್ಯಮ, ಸಾಹಿತ್ಯ, ಸಂಸ್ಕೃತಿ ಚಿಂತಕನಾಗಿ ಸಾರಸ್ವತ ಲೋಕದ ಧೀಮಂತನಂತೆ ಕುಟುಂಬದ ಬದುಕಿಗಿಂತ ಅಕ್ಷರಗಳನ್ನೇ ಅನನ್ಯವಾಗಿ ಪ್ರೀತಿಸಿ ಬದುಕಿದ. ಅವನ ಬಳಿ ಯಾವುದೇ ಪ್ರಶಸ್ತಿ ಪುರಸ್ಕಾರಗಳು ಸುಳಿಯದಂತೆ ಕಟ್ಟುನಿಟ್ಟಾಗಿದ್ದ. ಕಾಟ್ರಹಳ್ಳಿ ತೀರಿಹೋಗಿ ಆರು ವರ್ಷಗಳು. ಅವನ ತೊರೆದು ಜೀವಿಸಿರುವ ಅವನದೇ ಅಕ್ಷರ ಲೋಕದ ವಿಸ್ಮಯಗಳಿಗೆ ಸಾವಿಲ್ಲ.

ಮಲ್ಲಿಕಾರ್ಜುನ ಕಡಕೋಳ
9341010712
ಮಲ್ಲಿಕಾರ್ಜುನ ಕಡಕೋಳ ಅವರ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಕಾಟ್ರಹಳ್ಳಿ ಮಹಾಬಲೇಶ್ವರ್ ಅವರ ಕೆಲವು ನೆನಪುಗಳು:

ಈ ಅಂಕಣದ ಹಿಂದಿನ ಬರಹಗಳು:
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ

MORE NEWS

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...

ಬಹುತ್ವ, ಬಹುಬಾಶಿಕತೆ ಮತ್ತು ತಾಯ್ಮಾತಿನ ಶಿಕ್ಶಣ

01-12-2024 ಬೆಂಗಳೂರು

"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...

‘ನಾಲ್ಕು ಮೊಳ ಭೂಮಿ’ ಕತೆಯ ನೈತಿಕಪ್ರಜ್ಞೆ

27-11-2024 ಬೆಂಗಳೂರು

"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...