ಕಥೆಗಳು ನಮ್ಮನ್ನು ಕಾಡಿ ಆವರಿಸುವಷ್ಟು ಗಾಢವಾಗಿವೆ


“ಈ ಸ್ಕೂಲ ಚೌಕಟ್ಟಿನಲ್ಲಿಟ್ಟು ಇಲ್ಲಿನ ಕಥೆಗಳನ್ನು ಅರ್ಥೈಸುತ್ತಿರುವಾಗಲೇ ಇದನ್ನು ದಾಟಿ ಚಿಮ್ಮುವ ಕೆಲವು ಕತೆಗಳೂ ಇಲ್ಲಿವೆ. ಯಾವ ಕಾಲಕ್ಕೂ ಉಳಿದೇ ಇರುವ ಮನುಷ್ಯರ ಕೆಲವು ಗುಣಗಳು ದೇಶಕಾಲಾತೀತವಾಗಿ ಪ್ರತ್ಯಕ್ಷವಾಗಿ ಸ್ವತಃ ಕಥೆಗಾರರನ್ನೇ ಬೆರಗುಗೊಳಿಸಿದ ಹಾಗೂ ಕಾಣಿಸುತ್ತದೆ,” ಎನ್ನುತ್ತಾರೆ ಎಂ ಎಸ್‌ ಆಶಾದೇವಿ ಅವರು ಶ್ರೀಧರ ಬಳಗಾರ ಅವರ “ಮಾರ ಮಿಂದನು” ಕೃತಿ ಕುರಿತು ಬರೆದ ಮುನ್ನುಡಿ.

ಕಳೆದ ಮೂರು ದಶಕಗಳಲ್ಲಿ ಶ್ರೀಧರ ಬಳಗಾರರು ಸಾಗಿ ಬಂದಿರುವ ಹಾದಿಯನ್ನು, ನಿಶ್ಯಬ್ದವಾಗಿಯೇ ಇವರು ಏರುತ್ತಿರುವ ಎತ್ತರವನ್ನು ಗಮನಿಸುವುದು ಒಂದು ಕುತೂಹಲಕಾರಿಯಾದ ಸಂಗತಿ. ನಿಶ್ಯಬ್ದ ಎನ್ನುತ್ತೇನೆ ಏಕೆಂದರೆ ಇವರ ಬರವಣಿಗೆ ಸದ್ದು ಮಾಡಿದ್ದು ಕಡಿಮೆ. ಆದರೆ ಎಲ್ಲ ಕನ್ನಡ ಸಾಹಿತ್ಯಾಸಕ್ತರಿಗೂ ಇವರು ಮೆಚ್ಚಿನ ಬರೆಹಗಾರರೂ ಆಗಿದ್ದಾರೆ. ಇವರ ಒಟ್ಟೂ ಬರೆಹಗಳು ಗಂಭೀರವಾದ ಅಧ್ಯಯನಕ್ಕೆ ಕಾದಿವೆ. ನವೋತ್ತರ ಕಾಲಘಟ್ಟದ ಮುಖ್ಯ ಬರೆಹಗಾರರಾದ ಶ್ರೀಧರ ಅವರು ಹಿಡಿದಿರುವ ದಾರಿ ಸ್ವತಃ ಇವರೇ ಕಟ್ಟುತ್ತಿರುವ ದಾರಿಯಾಗಿದೆ. ಸಮುದಾಯವನ್ನು ಪ್ರಭಾವಿಸುತ್ತಿರುವ ಸಾಹಿತ್ಯಕ ತಾತ್ವಿಕತೆಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದೆ ಬರವಣಗೆಯು ತನ್ನೊಳಗನ್ನು ಬಗೆಯುವ ಏಕೈಕ ತಾಣ ಎನ್ನುವ ಧ್ಯಾನಶೀಲತೆಯಲ್ಲಿ ಶ್ರೀಧರರು ಕುಮಟೆಯನ್ನು ತಮ್ಮ ಗವಿಯಾಗಿಸಿಕೊಂಡಿದ್ದಾರೆ. (ಚಿತ್ತಾಲರ ಕುಮಟೆ, ಅವರ ಪಾತ್ರಗಳಲ್ಲಿ ಶ್ರೀಧರರೂ ಒಬ್ಬರು ಎಂದು ಅದು ಯಾಕೋ ಯಾವಾಗಲೂ ನನಗೆ ಅನ್ನಿಸುತ್ತಲೇ ಇರುತ್ತದೆ!)

ಪ್ರಸ್ತುತ ಸಂಕಲನದ ಕಥೆಗಳು ನಮ್ಮನ್ನು ಕಾಡಿ ಆವರಿಸುವಷ್ಟು ಗಾಢವಾಗಿವೆ. ಅವರ ಹಿಂದಿನ ಕಾದಂಬರಿ, ಅದು ಮನುಷ್ಯನೊಳಗಿನ ಹಿಂಸೆಯನ್ನು ಅದೆಷ್ಟು ತೀವ್ರವಾಗಿ ಚಿತ್ರಿಸುತ್ತದೆ ಎಂದರೆ ಓದುವ ಪ್ರತಿಯೊಬ್ಬರಿಗೂ ನಮ್ಮೊಳಗುಡಿ ಇಂಥ ಹಿಂಸೆಯ ಧಾತುಗಳೂ ಇದ್ದೇ ಇರಬಹುದಲ್ಲವೆ. ಅದು ಯಾವಾಗಲಾದರೂ ಹೊರಬಂದುಬಿಡಬಹುದೆ. ಅದು ಬಾರದೇ ಇರುವ ಹಾಗೆ ಮಾಡುವುದು ಹೇಗೆ ಎಂದು ಕಾಣದ, ನಂಬಿ ನಂಬದ ದೈವವನ್ನು ಬೇಡಿಕೊಳ್ಳುವಷ್ಟು ನಮ್ಮನ್ನು ಆಧೀರರನ್ನಾಗಿಸಿಬಿಡುತ್ತದೆ. ಇದರ ಗುಂಗಿನಿಂದ ಹೊರಬರಲು ನನಗೆ ಕೆಲವು ದಿನಗಳೇ ಹಿಡಿದವು. ಮನುಷ್ಯ ಹೀನವಾದ ಹಿಂಸೆ ಪಶು ಎನ್ನುವುದನ್ನು ಕಾಣಿಸಿದ ಆ ಕಾದಂಬರಿಗೆ ವಿರುದ್ಧ ದಿಕ್ಕಿನಲ್ಲಿ ಇಲ್ಲಿನ ಕಥೆಗಳಿವೆ. ತಾತ್ವಿಕವಾಗಿಯೇ ಈ ಹರಹನ್ನು ಗುರುತಿಸಬಹುದಾದರೆ, ಸ್ಥಳೀಯತೆ ಮತ್ತು ವಿಶ್ವಾತ್ಮಕತೆಯ ಜುಗಲ್ ಬಂದಿಯಂತೆ ಇಲ್ಲಿನ ಅನೇಕ ಕತೆಗಳು ಕಾಣಿಸುತ್ತವೆ. ಉತ್ತರ ಕನ್ನಡದ ಹಳ್ಳಿಗಳು ಮತ್ತು ಲಂಡನ್‌ನ ನಡುವೆ ಹೊಯ್ದಾಡುವ ಇಲ್ಲಿನ ಅನೇಕ ಪಾತ್ರಗಳು ನಿಜಕ್ಕೂ ಎಲ್ಲಿಗೆ ಸೇರಿದವು ಮತ್ತು ಎಲ್ಲಿಗೆ ಸೇರಲು ಹವಣಸುತ್ತಿವೆ ಎನ್ನುವುದು ಆ ಪಾತ್ರಗಳಿಗೂ ಸ್ಪಷ್ಟವಾಗದೇ ಇರುವ ಅವಸ್ಥೆಯನ್ನು ಅರ್ಥಮಾಡಿಕೊಳ್ಳಲು ಯತ್ನಿಸುವ ಈ ಕಥೆಗಳು ಈ ಕಾರಣಕ್ಕಾಗಿ ಅಪ್ಪಟ ವರ್ತಮಾನದ ಕಥೆಗಳೂ ಆಗಿವೆ. ಈ ಸ್ಕೂಲ ಚೌಕಟ್ಟಿನಲ್ಲಿಟ್ಟು ಇಲ್ಲಿನ ಕಥೆಗಳನ್ನು ಅರ್ಥೈಸುತ್ತಿರುವಾಗಲೇ ಇದನ್ನು ದಾಟಿ ಚಿಮ್ಮುವ ಕೆಲವು ಕತೆಗಳೂ ಇಲ್ಲಿವೆ. ಯಾವ ಕಾಲಕ್ಕೂ ಉಳಿದೇ ಇರುವ ಮನುಷ್ಯರ ಕೆಲವು ಗುಣಗಳು ದೇಶಕಾಲಾತೀತವಾಗಿ ಪ್ರತ್ಯಕ್ಷವಾಗಿ ಸ್ವತಃ ಕಥೆಗಾರರನ್ನೇ ಬೆರಗುಗೊಳಿಸಿದ ಹಾಗೂ ಕಾಣಿಸುತ್ತದೆ.

ಶ್ರೀಧರ ಬಳಗಾರರ ಕಥನದ ಬಹುದೊಡ್ಡ ಶಕ್ತಿಯೆಂದರೆ ಪಾತ್ರಗಳ ಮೇಲಿನ, ವಸ್ತುವಿನ ಮೇಲಿನ ಹಿಡಿತವನ್ನು ಅನಾಯಾಸವಾಗಿ ಎಂಬಂತೆ ಬಿಟ್ಟುಕೊಡುವುದು, ಪಾತ್ರಗಳಿಗೆ ಬಳಗಾರರು ಸ್ವಯಂಧುಗಳಾಗಲು ಬೇಕಾದ ಜಾಗವನ್ನು ಬಿಟ್ಟುಕೊಡುತ್ತಾರೆ. ಲೇಖಕರಾಗಿ ಇದು ದೊಡ್ಡ ಸವಾಲು. ಲಿಪಿಕಾರರು ಮಾತ್ರವಾಗುವುದಕ್ಕೆ ಅಪಾರ ಸಂಯಮ ಬೇಕು.

'ರಂಭಾ ವಿವಾಹ' ಎನ್ನುವ ಕಥೆ ತನ್ನ ವಸ್ತುವಿನ ಕಾರಣಕ್ಕಾಗಿ ಇಲಭವಾಗಿ ನಾಯಕ ಪರಮಯ್ಯನನ್ನು ಆರಾಧಿತ ನಾಯಕನಾಗಿಯೋ ಮುಗ್ಧತೆಗೂ ಒಳ್ಳೆಯತನಕ್ಕೂ ಸಾಕಾರ ರೂಪದಂತಹ ವ್ಯಕ್ತಿಯನ್ನಾಗಿ ಚಿತ್ರಿಸಿಬಿಡಬಹುದಿತ್ತು. ಆದರೆ, ಹಾಗಾಗದೆ ಒಳ್ಳೆಯತನ ಸಹಜವೂ ಅಲ್ಲ, ಒಳ್ಳೆಯತನ ಅಸಹಜವೂ ಅಲ್ಲ ಎನ್ನುವ ವ್ಯಾಖ್ಯಾನಕ್ಕೂ ಒಳಗಾಗುವುದಿಲ್ಲ. ನಿಜವೆಂದರೆ ತನ್ನ ಹಂಡತಿ ಇಷ್ಟಪಟ್ಟವನ ಬಳಿ ತಾನೇ ಹೋಗಿ ಮೂರನೆಯ ಮದುವೆಯ ಅಪಶಕುನವನ್ನು ದೂರಮಾಡಲು ಬಾಳೆಯ ಮರಕ್ಕೆ ಮದುವೆ ಮಾಡಿಸಿ ಅಮೇಲೆ ನಿಮ್ಮಿಬ್ಬರ ಮದುವೆ ಮಾಡಿಸೋಣ ಎಂದು ಹೇಳಿ ಹೋಗುತ್ತಾನೆ. ಹೆಂಡತಿ ದಮಯಂತಿಗೂ ಈ ವಿಷಯ ಹೇಳುವುದಿಲ್ಲ. ಕತೆಯ ಕೊನೆಗೆ ನೀನು ವೀಟಿಯನ್ನು ಭೇಟಿ ಮಾಡಲು ಹೋಗುವುದನ್ನು ನನಗೆ ಹೇಳಿ ಹೋಗುವ ಅವಶ್ಯಕತೆ ಇಲ್ಲ ಎಂದೂ ಹೇಳುತ್ತಾನೆ. ಶುದ್ಧ ಲೌಕಿಕ ನೆಲೆಯಲ್ಲಿ ಬೆಪ್ಪುತಕ್ಕಡಿ ಭೋಳೇಶಂಕರನಂತೆ ಕಾಣಿಸುವ ಪರಮಯ್ಯನನ್ನು ಈ ಕತೆ ಮಾತ್ರ ಬೇರೆಯದೇ ಬಣ್ಣ. ಗುಣ. ಚಹರೆಗಳಲ್ಲಿ ಕಾಣಿಸುವಲ್ಲಿ ಯಶಸ್ಸು ಪಡೆದಿದೆ. ಹೆಂಡತಿಯನ್ನು ಅವಳ ಈ ವಾಸ್ತವದಲ್ಲಿ ಒಪ್ಪಲು ತನಗೂ ಯಾವುದೋ ಹೇತು ಇದೆ ಎನ್ನುವಂತೆಯೇ ಅವನ ವರ್ತನೆಯಿದೆ, ಗಂಡನನ್ನು ಹಲವು ಹೆಂಗಸರ ಜೊತೆಯೇ ಒಪ್ಪುವ ಹೆಂಡತಿಯರ ಅಸಹಾಯಕತೆಯಂತೆಯೇ ಇವನಿಗೂ ಇದೆಯೇನೋ ಎನ್ನುವ ಅನುಮಾನವೂ ನಮ್ಮ ಮನಸ್ಸಿನಲ್ಲಿ ಹಾದು ಹೋಗುತ್ತದೆ. ಅದರೆ ಪರಮಯ್ಯನ ಮಾತು ಕತೆ ಎಲ್ಲವೂ ದೇವಮಾನವನ ಧರ್ತಿಯೂ ಇಲ್ಲದ, ಅಸಹಾಯಕ ದೈನ್ಯವೂ ಇಲ್ಲದ ವಿಭಿನ್ನತೆಯಲ್ಲಿಯೇ ಕಾಣಿಸಿಕೊಳ್ಳುತ್ತದೆ. ತಾನು ಮಾಡುವ ಈ ಕೆಲಸದಿಂದ ಎಲ್ಲರೂ ಸುಖವಾಗಿರಬಹುದು ಎನ್ನುವ ನಿಲುವೊಂದು ಇಲ್ಲಿದೆ. ಗಂಡು ಹೆಣ್ಣಿನ ಸಂಬಂಧವನ್ನು ಕುರಿತ ಅಪ್ಪಟ ಆಧುನಿಕ ಎನ್ನುವ ಅರಿವು, ಹೆಣ್ಣಿನ ಹಕ್ಕು, ಸಮಾನತೆಯ ನೆಲೆ, ಆಯ್ಕೆಯ ಅವಕಾಶ ಈ ಯಾವುದರ ಅರಿವಿಲ್ಲದ ಪರಮಯ್ಯ ಇದೆಲ್ಲ ಸಹಜ, ಇದು ಹೊಸದೂ ಅಲ್ಲ, ಕೊನೆಯದೂ ಅಲ್ಲ ಎನ್ನುವ ಪ್ರಬುದ್ಧತೆಯಲ್ಲಿ, ತಾನೂ ಬದುಕಿ ಇತರರನ್ನೂ ಬದುಕಗೊಡುವ ಜೀವ ನ್ಯಾಯದ ಹಿನ್ನೆಲೆಯಲ್ಲಿ ನಿಭಾಯಿಸುತ್ತಾ ಹೋಗುತ್ತಾನೆ. ಈ ಬಗೆಯ ವಸ್ತುಗಳನ್ನು ನಿರ್ವಹಿಸುವಾಗ ಸಣ್ಣ ಉದ್ವಿಗ್ನತೆಯೊಂದು ಲೇಖಕರನ್ನು ಕಾಡುತ್ತದೆ. ಆದರೆ ಬಳಗಾರರು ಈ ಉದ್ವಿಗ್ನತೆಯಿಂದಲೂ ಪಾರಾಗಿದ್ದಾರೆ. ಗಂಡನಿಂದ ತನ್ನ ಪೇಮವನ್ನು ಮುಚ್ಚಿಡಲು ದಮಯಂತಿ ನಡೆಸುವುದೂ ಕೂಡ ಮುಜುಗರ ತಪ್ಪಿಸುವ ದೃಷ್ಟಿಯಿಂದಲೇ ಹೊರತು ಪಾಪಪ್ರಜ್ಞೆಯಿಂದಲ್ಲ ಎನ್ನುವುದೂ ಇಲ್ಲಿ ಮುಖ್ಯ. ಸಂವೇದನೆಯಲ್ಲಿಯೇ ಫಟಿಸಬೇಕು ಎಂದು ಸತತವಾಗಿ ನಾವೆಲ್ಲರೂ ಹಂಬಲಿಸುತ್ತಿರುವ ಸಂಗತಿಯೊಂದು ಅಚಾನಕ್ ಆಗಿ ಎನ್ನುವಂತೆ ಈ ಕತೆಯಲ್ಲಿ ಘಟಿಸಿಯೇ ಬಿಡುತ್ತದೆ! ಸೋದ್ದಿಶ್ಯವಾಗಿ ಇಂಥದನ್ನು ಹವಣಿಸಿ ಬರೆದ ಕತೆಗಳೂ ಇವೆ. ಆದರೆ ಅಪವಾದವಾಗಿ ಕಂಡೂ ತನ್ನ ಅಪೂರ್ವ ಸಹಜತೆಯಿಂದ ಈ ಕತೆ ನಮ್ಮನ್ನು ಆವರಿಸುತ್ತದೆ. ಸಣ್ಣ ಆಘಾತವನ್ನು ಉಳಿಸಿಯೂ ಈ ಕತೆ ಜೀವನದಲ್ಲಿ ಯಾವುದು ಎಲ್ಲಿ ಯಾವಾಗ ಹೇಗೆ ನಮ್ಮೆದುರಿಗೆ ಧುತ್ತೆಂದು ನಿಂತು ಬಿಡಬಹುದು ಎನ್ನುವ ಅನಿರೀಕ್ಷಿತತೆಯೇ ಮನುಷ್ಯರಲ್ಲಿನ ನಮ್ಮ ಆಸಕ್ತಿಯನ್ನು ಉಳಿಸುತ್ತದೆಯೇನೋ, ಇಂಥ ಅಪ್ಪಟ ಕತೆಗಳನ್ನು ಓದಿದಾಗಲೆಲ್ಲ ಕ್ರಾಂತಿಯ ವ್ಯಾಖ್ಯಾನವನ್ನೇ ಬದಲಿಸಿಬಿಡಬೇಕೇನೋ ಅನ್ನಿಸಿಬಿಡುತ್ತದೆ.

'ರುದ್ರ' ಕೂಡ ಈ ಸಂಕಲನದ ಮಹತ್ವದ ಕತೆಗಳಲ್ಲೊಂದು. ಮತ್ತೆ ಯಾಕೋ ಇದೂ ಕೂಡ ಚಿತ್ತಾಲರನ್ನು ನೆನಪಿಗೆ ತರುತ್ತದೆ. ಇದನ್ನೊಂದು ಮಿತಿಯಾಗಿ ಖಂಡಿತಾ ನೋಡಕೂಡದು. ಮನುಷ್ಯರ ಅಂತರಂಗದ ವಿಹ್ವಲತೆಯನ್ನು ಏನಿದ್ದೂ ಸಂಕಟದಲ್ಲಿ ಬೇಯುವ ಮನುಷ್ಯರ ಅವಸ್ಥೆಯನ್ನು ಕಾಣಲು ಮತ್ತೆ ಮತ್ತೆ ಉಜ್ಜುಗಿಸಿದವರು ಚಿತ್ತಾಲರು. ಬಳಗಾರರ ಈ ಕತೆ ಈ ಪ್ರಕ್ರಿಯೆಗೆ ಒಂದು ಪ್ರಾಯೋಗಿಕವೆನ್ನಬಹುದಾದ ತಾರ್ಕಿಕ ಅಂತ್ಯವನ್ನೂ ಕಾಣಸುತ್ತದೆ ಎನ್ನುವುದೇ ಈ ಕತೆಯ ಹೆಚ್ಚುಗಾರಿಕೆಯಾಗಿದೆ. ರೌದ್ರತೆ ಎನ್ನುವುದು ಬದುಕಿನ ಕಟೂ ವಾಸ್ತವವೋ? ಬದುಕಲು ಒದ್ದಾಡುವ ಮಾನವರ ಮನೋಸ್ಥಿತಿಯೋ? ಈ ಕತೆಯ ನಾಯಕ ನಾಯಕಿಯರು ಈ ಒದ್ದಾಟದಲ್ಲಿರುವಾಗಲೇ ರೌದ್ರತೆಯನ್ನು, ಹಿಂಸೆಯನ್ನು ತನ್ನ ದಾರಿಯಾಗಿಸಿಕೊಂಡ ರೌಡಿಯೆಂದು ಕರೆಯಬಹುದಾದವನೊಬ್ಬ ಈ ವೃದ್ಧ ದಂಪತಿಗಳಿಗೆ ಇದರಿಂದ ಹೊರಬರಬಹುದಾದ ದಾರಿಯನ್ನು ಕಾಣಿಸಲು ಉತ್ಕಟ ಭಾವುಕ ಹಿಂಸೆಯನ್ನು ಅದರ ಪರಾಕಾಷ್ಠೆಗೆ ಒಯ್ದು ಅಲ್ಲಿಂದ ಇದ್ದಕ್ಕಿದ್ದಂತೆ ಅವರನ್ನು ಬಿಡುಗಡೆಗೊಳಿಸಿ ಅವರನ್ನು ಸ್ವಸ್ಥರನ್ನಾಗಿಸಿಬಿಡುತ್ತಾನೆ. ಬದುಕು ಅಸಹನೀಯವೂ ದಾರುಣವೂ ಆಗಿದೆ ಎಂದುಕೊಂಡಿದ್ದವರು, ಬದುಕನ್ನು ಕೊನೆಗೊಳಿಸಿಕೊಳ್ಳುವುದೇ ಇದಕ್ಕಿರುವ ಪರಿಹಾರ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ತಮ್ಮ ಬಳಿ ಇರುವ ಹಣ ಇತ್ಯಾದಿಗಳನ್ನು ಕೊಟ್ಟು ತಮ್ಮನ್ನು ಮುಗಿಸುವಂತೆ ಕೇಳಿಕೊಳ್ಳುತ್ತಾರೆ. ಕತೆಯ ನೇಯ್ಕೆ ಅದೆಷ್ಟು ಸಾಂಕೇತಿಕವಾದ ವಿವರಗಳಿಂದ ತುಂಬಿದೆ ಎಂದರೆ ಕತೆ ಮುಗಿಯುವ ತನಕವೂ ಓದುಗರು ಉಸಿರು ಬಿಗಿ ಹಿಡಿದು ಓದುವಷ್ಟು ಮುರ್ಗನ್‌ನನ್ನು ಇವರು ಭೇಟಿಯಾಗುವುದು ದೇವಸ್ಥಾನದಲ್ಲಿ, ಇವರಿಬ್ಬರೂ ಸ್ವತಃ ಆತ್ಮಹತ್ಯೆ ಮಾಡಿಕೊಳ್ಳುವ ಧೈರ್ಯ ಇಲ್ಲದವರು. ಇವರಿಗೆ ಸುಪಾರಿ ಕೊಡುವ ತೀರ್ಮಾನಕ್ಕೆ ಬರುವುದಾಗಲೀ, ಕೆಲಸದವಳಿಗೆ ಬಾಗಿನ ಕೊಟ್ಟು ಮರುದಿನ ತಡವಾಗಿ ಬರಲು ಹೇಳುವುದಾಗಲೀ ಇವರ ಸ್ಪಷ್ಟತೆಯನ್ನು ಹೇಳುತ್ತಾ ಹೋಗುತ್ತದೆ. ಕತೆಯ ಕೊನೆಯಲ್ಲಿ ಇಬ್ಬರನ್ನೂ ಬೇರೆ ಬೇರೆ ಕೋಣೆಯಲ್ಲಿ ಸಾಯಿಸುವುದಾಗಿ ಹೇಳಿದವ ಇಬ್ಬರಿಗೂ ಬದುಕಿನ ಸಾಕ್ಷಾತ್ಕಾರ ಮಾಡಿಸುವುದೂ ಭಿನ್ನ ನೆಲೆಗಳಲ್ಲಿಯೇ ಜೀವ ಎಲ್ಲರಿಗೂ ಒಂದೇ ಖರೆ. ಆದರೆ, ಆ ಜೀವ ಮತ್ತು ಜೀವನವನ್ನು ಗಂಡು ಮತ್ತು ಹೆಣ್ಣು ಅರಿವಿಗೆ ತಂದುಕೊಳ್ಳುವುದರಲ್ಲಿನ ಸಣ್ಣ ಸಣ್ಣ ವ್ಯತ್ಯಾಸಗಳನ್ನೂ ಈ ಕತೆ ಕೊನೆಯಲ್ಲಿ ತಪ್ಪದೇ ಗುರುತಿಸುತ್ತದೆ. ಸಾವಿನಿಂದ ಪಾರಾದದ್ದೇ ಹೇಬ್ಬ ಮೊದಲು ಕಾತರಿಸುವುದು ಗಂಡನ ಮತ್ತು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಏನು ಮಾಡಬೇಕು ಎನ್ನುವ ಯೋಚನೆಯನ್ನು ಸಾವಿನ ನಿರೀಕ್ಷೆ ಮತ್ತು ಅಪೇಕ್ಷೆಯ ಬಂಧನವು ಆದರಿಂದ ಪಾರಾಗುವ ಬಿಡುಗಡೆಯಲ್ಲಿರುವುದನ್ನು, ಅದನ್ನು ಉಸಿರಾಟದಷ್ಟೆ ಸಹಜವಾಗಿ ಈ ಮುಪ್ಪಿನ ದಂಪತಿಗಳು ಅರಿಯುವ ಮತ್ತು ಆನಂದಿಸುವ ಪರಿಯನ್ನು ಕತೆ ಚಂದವಾಗಿ ಚಿತ್ರಿಸುತ್ತದೆ. ಕೊನೆಯಿಲ್ಲದ ದೂರುಗಳ ಪಟ್ಟಿಯಾಗಿದ್ದ, ನಿರಾಸೆಯ ಕೂಪವಾಗಿದ್ದ ಬದುಕು ಈಗ ನಿರುಮ್ಮಳವಾದ ಉಲ್ಲಾಸವಾಗಿ ಕಾಣತೊಡಗುತ್ತದೆ. ರುದ್ರ ಎನ್ನುವ ಹೆಸರಿನ ಈ ಕತೆ ಬದುಕಿನ ರುದ್ರರಮಣೀಯತೆಯ ವ್ಯಾಖ್ಯಾನವಾಗಿ ಬಿಡುತ್ತದೆ.

'ಅಕಾಲ' ಕತೆ ಮತ್ತೊಂದು ವಿಲಕ್ಷಣತೆಯನ್ನು ಹೇಳುತ್ತದೆ. ವಿಲಕ್ಷಣವಲ್ಲದ್ದು ಯಾವುದು ಬದುಕಿನಲ್ಲಿ ಎನ್ನುವ ಪ್ರಶ್ನೆಯೊಂದನ್ನು ಈ ಕತೆ ತನ್ನ ಒಡಲಲ್ಲಿ ಇಟ್ಟುಕೊಂಡಂತೆ ಕಾಣಿಸುತ್ತದೆ. ಆರವತ್ತಾದರೂ ಹರೆಯದ ಚೆಲುವನ್ನು ಉಳಿಸಿಕೊಂಡವನ ಮಗ ಆಕಾಲ ಮುಪ್ಪಿಗೆ ಒಳಗಾದ, ಸ್ವತಃ ಇವನ ಹೆಂಡತಿಯನ್ನು ಕಂಡಕ್ಷರನೊಬ್ಬ ಆ ಅಜ್ಜಿಯಾ ಎಂದು ಕೇಳುವುದು, ಇವನ ಸೊಸೆ ಮುಪ್ಪನ್ನು ಮುಂದೂಡುವ ಮಹತ್ವಾಕಾಂಕ್ಷಿಯ ಬ್ಯೂಟಿ ಪಾರ್ಲರನ್ನು ನಡೆಸುವುದು. ಈ ಎಲ್ಲವೂ ಬುಧನ ಎದುರಿಗಿನ ಮೆರವಣಿಗೆಯಂತೆ ಭಾಸವಾಗುತ್ತದೆ. ಇಷ್ಟಕ್ಕೂ ಇದಕ್ಕೆ ಕಾರಣ, ಪರಿಹಾರ ಈ ಎಲ್ಲವನ್ನೂ ಹುಡುಕುತ್ತಾ ಹೋಗಬೇಕೋ ವಾಸ್ತವವನ್ನು ಇದ್ದಂತೆ ಒಪ್ಪಿಕೊಳ್ಳಬೇಕೋ ಎನ್ನುವ ಜಿಜ್ಞಾಸೆಯಲ್ಲಿ ಗಂಡ ಪಾದಣ್ಣ ಹೈರಾಣಾದರೆ ಹೆಂಡತಿ ವನಜ ಮಾತ್ರ ತನ್ನ ಮಗನನ್ನು ಇದರಿಂದ ಪಾರು ಮಾಡಿ ಬದುಕಿನ ಹಳಿಗೆ ಹಚ್ಚುವ ಪ್ರಯತ್ನವನ್ನು ಬಿಡುವುದೇ ಇಲ್ಲ.

ಇತರ ಕತೆಗಳನ್ನು ಕುರಿತು ಕಲವು ಮಾತುಗಳನ್ನು ಹೇಳಬೇಕು. 'ಮಾರ ಮಿಂದನು' ಮತ್ತು 'ಹೆಮ್ಮಾಗಡಿಯ ಹೆಂಗಸರು'. ತನ್ನ ತಪ್ಪಿಲ್ಲದ లనదింద ಸಸ್ಪೆಂಡ್ ಆಗುವ ಅರ್ಕಸಾಲಿಗೆ ನ್ಯಾಯ ಒದಗಿಸಲು ಅವನ ಗೆಳೆಯ ಮಾರ ಜೀವವನ್ನು ಪಣಕ್ಕಿಟ್ಟು ಹೋರಾಟ ನಡೆಸುವುದು, ಸ್ನೇಹಕ್ಕಾಗಿಯೋ ನ್ಯಾಯಕ್ಕಾಗಿಯೋ ಎನ್ನುವುದಕ್ಕೆ ಉತ್ತರ ಹುಡುಕುವ ಇರಾದೆ ಈ ಕತೆಗಿಲ್ಲ. ಅದರ ಉದ್ದೇಶ ಏನಿದ್ದರೂ ಮನುಷ್ಯರನ್ನು ಒಳಹೋಗುವುದು. ಗಲೀಜಾದ ನೀರು ಹಾಸ್ಟೆಲ್‌ನಲ್ಲಿ ಆನಾರೋಗ್ಯಕ್ಕೆ ಕಾರಣವಾಯಿತು ಎನ್ನುವ ತಾನು ಕಂಡು ಹಿಡಿದ ಸತ್ಯವನ್ನು ಒಪ್ಪದ ವ್ಯವಸ್ಥೆಯ ವಿರುದ್ಧ ಸ್ನಾನ ಮಾಡದೆ ಹೊಸಬಗೆಯ ಪ್ರತಿಭಟನೆಗೆ ನಿಂತವನನ್ನು ಕೊನೆಗೂ ಅವನ ಸತ್ಯಕ್ಕಾಗಿ ಒಪ್ಪಿ ಗೌರವಿಸಲಾಗುತ್ತದೆ, ವರ್ಷವಿಡೀ ಸ್ನಾನ ಮಾಡದವ ನ್ಯಾಯ ಸಿಕ್ಕ ಸಮಾಧಾನದಲ್ಲಿ ಸ್ನಾನ ಮಾಡಿದ್ದೆ ವಾರದಲ್ಲಿ ಸಾವನ್ನಪ್ಪುತ್ತಾನೆ. ನಮ್ಮ ಸಾಮಾಜಿಕ ಸನ್ನಿವೇಶದಲ್ಲಿ ಸತ್ಯ ಹೇಳುವವರಿಗೇ ಶಿಕ್ಷೆಯಾಗುವುದು ನಾವೆಲ್ಲರೂ ಒಪ್ಪಿಯೇ ಬಿಟ್ಟಿರುವ ಸಂಗತಿಯೇ ಇರಬಹುದು. ಆದರೆ ಮಾರನ ರೀತಿಯ ಹೋರಾಟ ನಡೆಸುವವರು ಕಡಿಮೆ. ಇವನ ಹೋರಾಟದ ಕೆಚ್ಚಿನ ಮೂಲದಲ್ಲಿ ಜೀವಕಾಳಜಿಯೇ ಹೆಚ್ಚಿರುವಂತೆ ಕಾಣಿಸುತ್ತದೆ. ಆದರೆ ವರ್ಷವಿಡೀ ಲೋಕ ಇದೆ ತನಗೂ ಸಂಬಂಧವೇ ಇಲ್ಲದಂತೆ ನಿತ್ಯ, ಪ್ರತಿ ಘಳಿಗೆಯೂ ನೋಡಿ ನೋಡಿ ತನ್ನ ಪಾಡಿಗೆ ತಾನಿರುವ ಆಮಾನುಷತೆಯನ್ನೋ ನಿರ್ಭಾವುಕತೆಯನ್ನೋ ಹೇಗೆ ಅರ್ಥಮಾಡಿಕೊಳ್ಳಬೇಕು?

'ಹೆಮ್ಮಾಡಿಯ ಹೆಂಗಸರು' ಕತೆಯಲ್ಲಿ ಹೆಣ್ಣಿನ ಜೀವ ಚೈತನ್ಯದೆದುರು ಮಂಕಾಗುವ ಗಂಡಸರನ್ನು, ಹೆಣ್ಣನ್ನು ವಸ್ತುವಾಗಿ ಬಂಡವಾಳವಾಗಿ ಬಳಸಲೇ ಸದಾ ಹೊಂಚುಹಾಕುವ ಗಂಡಸರನ್ನು ಎದುರುಬದುರು ನಿಲ್ಲಿಸಿದ್ದಾರೆ. ಗಂಡಿನ ಎಲ್ಲ ಬಗೆಯ ಅನಾರೋಗ್ಯಕ್ಕೂ ಮದ್ದಾಗಿ ಹೆಣ್ಣು ಇಲ್ಲಿ ಕಾಣಿಸುತ್ತಾಳೆ.

'ಹೋಮ್ ಸ್ಟೇ' ಮನುಷ್ಯರ ಬದಲಾದ ನೋಟಗಳನ್ನು ಹೇಳುತ್ತಿದೆಯೋ ಅಥವಾ ಅವಕಾಶಕ್ಕಾಗಿ ಕಾಯುತ್ತಿದ್ದ ನೆಲೆಗಳು ಮುನ್ನೆಲೆಗೆ ಬರುತ್ತಿವೆಯೋ ಎನ್ನುವ ದ್ವಂದ್ವವನ್ನು ಹುಟ್ಟಿಸುವ ಕಥೆ. ಇದೊಂದು ಆವರ್ತನ ಪ್ರಕ್ರಿಯೆಯನ್ನೂ ಹೇಳುತ್ತಿದೆ. ಹಳ್ಳಿಯಿಂದ ನಗರಕ್ಕೆ ಬದುಕು ಹುಡುಕಿ ಹೊರಟ ತಲೆಮಾರುಗಳು ಮುಂದಿನ ತಲೆಮಾರುಗಳು ಅದೇ ಬದುಕಿನ ಅವಕಾಶಗಳನ್ನು ಹುಡುಕಿ ಮತ್ತೆ ಹಳ್ಳಿಗೆ ಮರಳುವ ವರ್ತುಲಾಕಾರದ ಚಲನೆಯನ್ನು ಈ ಕತೆ ತುಸು ನಾಟಕೀಯವಾಗಿಯೇ ಮಂಡಿಸುತ್ತಿದೆ. ಬದುಕಿನಲ್ಲಿ ಸೋಲು ಗೆಲುವುಗಳ ವ್ಯಾಖ್ಯಾನವನ್ನೂ ಈ ಕತೆ ಮರುವ್ಯಾಖ್ಯಾನಕ್ಕೆ ಒಳಗು ಮಾಡುತ್ತದೆ. ಸೋತ ಎನ್ನುವ ಮುಗಿತಾಯದ ಅಂಚಿನಲ್ಲಿದ್ದ ದಾಕಪ್ಪ ಸಣ್ಣಾತಿಸಣ್ಣ ಅವಕಾಶವೊಂದನ್ನು ಬಳಸಿ ಮತ್ತೆ ಜೀವನ್ಮುಖಿಯಾಗುತ್ತಾನೆ. ತನ್ನ ಕನಸಿನ ಬದುಕೇ ನನಸಾದಷ್ಟು ಸಂತೃಪ್ತಿಯಲ್ಲಿ ಬದುಕುತ್ತಿದ್ದವನು ತಾನೇ ಮಾರಿ ಬಂದಿದ್ದ ತನ್ನ ಹುಟ್ಟೂರಿನ ಮನೆಯೇ ಹೋಮ್ ಸ್ಟೇ ಆಗಿರುವುದನ್ನು ತಿಳಿದು ಅಲ್ಲಿಗೆ ಎಳೆಯ ಗೆಳೆಯರ ಜೊತೆ ಹೋದವನಿಗೆ ಭೂತ ಮತ್ತು ವರ್ತಮಾನಗಳ ಎಳೆಯನ್ನು ಹೇಗೆ ಬೆಸೆಯಬೇಕೆನ್ನುವುದೇ ತಿಳಿಯದೇ ಒದ್ದಾಡಿದರೂ ಅದರೊಂದಿಗೆ ಪರೋಕ್ಷ ಸಂಬಂಧವನ್ನು ತನಗೆ ಮಾತ್ರ ತಿಳಿಯುವಂತೆ ಕಟ್ಟಿಕೊಳ್ಳುತ್ತಾನೆ. ಆದರೆ ತಾನು ಬಿಟ್ಟೆ ಎಂದು ತಿಳಿದ ಮನೆ, ಕಳೆದುಕೊಂಡೆ ಎಂದುಕೂಂಡ ಸಂಬಂಧಗಳು ತಾನೆಷ್ಟೇ ಒತ್ತರಿಸಿದರೂ ಜೀವಂತವಾಗಿರುವುದು ಅವನಿಗೆ ಸಂತೋಷವನ್ನು ತಂದುಕೊಡುತ್ತದೋ ವಿಷಾದವನ್ನು ತಂದುಕೊಡುತ್ತದೋ ಅವನಿಗೇ ಸ್ಪಷ್ಟವಾಗುವುದಿಲ್ಲ. ಮೂಲತಃ ಅಂತಃಕರುಣಿಯಾದ ದಾಕಪ್ಪ ತನ್ನ ಅಂಗಡಿಯನ್ನೇ ಒಂದು ಮುಕ್ತವಾದ ಮನೆಯಾಗಿರಿಸಿಕೊಂಡವನು. ಧಾರವಾಡಕ್ಕೆ ಬಂದ ಹೊಸಬರಿಗೆ, ಅಸಹಾಯಕರಿಗೆ ಸುರಕ್ಷತೆಯ ಭಾವವನ್ನು ಹುಟ್ಟಿಸಿದವನು. ಇದನ್ನು ಅವನು ತಾನೇ ಕಳೆದುಕೊಂಡ ಸುರಕ್ಷತೆಯನ್ನು ಇತರರಿಗೆ ಕೊಡಲು ಹಾತೊರೆಯುವುದು ಎಂದು ನೋಡುವುದೋ? ತನಗೇ ಸುರಕ್ಷತೆಯನ್ನು ಕೊಟ್ಟುಕೊಳ್ಳಲು ನೋಡುತ್ತಿರುವುದು ಎಂದು ಭಾವಿಸುವುದೋ? ತೀರ್ಮಾನ ಕೊಡುವ ಇರಾದೆ ಕತೆಗಾರರಿಗೆ ಇಲ್ಲ. ಮನುಷ್ಯರ ಅವಸ್ಥೆಗಳನ್ನು ಪ್ರಾಂಜಲವಾಗಿ ಚಿತ್ರಿಸುವುದರಲ್ಲಿ ಮಾತ್ರ ಅವರಿಗೆ ಆಸಕ್ತಿ.

'ಯುಗಾದಿ ಪುರುಷ' ಕತೆ ಸಂಕ್ರಾಂತಿ ಪುರುಷನ ವರ್ಣನೆಯಷ್ಟೇ ವಿಲಕ್ಷಣವಾದ ಮನುಷ್ಯರನ್ನು ಚಿತ್ರಿಸುತ್ತದೆ. ಮನುಷ್ಯರ ಒಳಗಿನ ಸ್ವಾರ್ಥವು ವಿಕಾರವಾಗುವಷ್ಟು ಅತಿಯಾಗುವ, ಅದರಲ್ಲೇ ಬದುಕನ್ನು ಕಟ್ಟಿಕೊಳ್ಳಲು ಹೆಣಗುವ ತಂದೆ ಮಗಳು ಮತ್ತು ಮೊಮ್ಮಗನ ಕತೆಯಾಗಿದೆ. ಮತ್ತೊಬ್ಬರನ್ನು ತಾನು ಇಡಿಯಾಗಿ ಅರ್ಥಮಾಡಿಕೊಂಡಿದ್ದೇನೆ ಎಂದು ಬೀಗುವ ಅಜ್ಜನಿಗೂ ಮೊಮ್ಮಗನ ಬದಲಾವಣೆಯ ಅಂದಾಜೇ ಸಿಗುವುದಿಲ್ಲ. ಯುಗಾದಿಯು ಯುಗದ ಆದಿಯನ್ನು ಸಂಕೇತಿಸುವಂತೆ ಅಜ್ಜ ಮತ್ತು ಅಮ್ಮ ಇಬ್ಬರಿಗೂ ಹೊಸ ಯುಗದ ಪರಿಚಯ ಮಾಡಿಸುವ ವಲ್ಲಭ ಮತ್ತವನ ಹೆಂಡತಿ ಭಾರತದ ಹಳ್ಳಿಗಳಲ್ಲಾಗುತ್ತಿರುವ ಆಸ್ಫೋಟದ ಪ್ರತಿನಿಧಿಗಳಂತೆ ಕಾಣಿಸುತ್ತಾರೆ. ಅವನ ಬೃಹದಾಕಾರದ ಬೈಕು ಹುಟ್ಟಿಸುವ ಆಘಾತ ಮತ್ತು ಬೆರಗು ಆಧುನಿಕತೆಯ ಎದುರಿಗೆ ಬಾಯಿ ಕಳೆದುಕೊಂಡಿರುವ, ತತ್ತರಿಸುತ್ತಿರುವ ಹಾಗೇ ಅದರ ಆಕರ್ಷಣೆಗೂ ಪಕ್ಕಾಗಿರುವ ಮನಸ್ಥಿತಿಯ ಪಲಕುಗಳನ್ನು ಈ ಕತೆ ಅನಾವರಣಗೊಳಿಸುತ್ತದೆ.

ಶ್ರೀಧರ ಬಳಗಾರರ ಈ ಸಂಕಲನ ಕನ್ನಡದ ಇತ್ತೀಚಿನ ಮಹತ್ವದ ಕಥಾ ಸಂಕಲನ ಎನ್ನುವುದರಲ್ಲಿ ಅನುಮಾನವಿಲ್ಲ. ಬಹಿರ್ಮುಖಿಯಾಗಿ ತುಸು ಬಳಲಿದಂತೆ

ಕಾಣುತ್ತಿರುವ ಕಥಾಲೋಕಕ್ಕೆ ಈ ಅಂತರಂಗ ಮುಖ ಕತೆಗಳು ಹೊಸ ಚೈತನ್ಯವನ್ನು ಕೊಡುತ್ತವೆ ಎಂದು ನಾನು ನಂಬಿದ್ದೇನೆ. ಬಲು ಸೂಕ್ಷ್ಮವಾದ, ಚಿತ್ರವತ್ತಾದ ವಿವರಗಳು, ಅಷ್ಟೇ ಜೀವಂತವಾದ ಕಾವ್ಯದಂತಹ ಭಾಷೆ. ಅನಗತ್ಯವಾದುದನ್ನು ಹೇಳಬಾರದೆನ್ನುವ ಎಚ್ಚರ, ಲಂಬಿಸಬಹುದಾದ ಅವಕಾಶಗಳಿದ್ದಾಗಲೂ ಅದನ್ನು ಅಲ್ಲೇ ನಿಲ್ಲಿಸುವ ಸಂಯಮ ಈ ಎಲ್ಲವೂ ಬಳಗಾರರನ್ನು ನಮ್ಮ ಕಾಲದ ಅತ್ಯುತ್ತಮ ಮತ್ತು ಮಹತ್ವದ ಕತೆಗಾರರನ್ನಾಗಿಸಿವೆ. ಬಳಗಾರರಿಗೆ ಅಭಿನಂದನೆಗಳು.

- ಎಂ ಎಸ್‌ ಆಶಾದೇವಿ

MORE FEATURES

ಸಾಧಕರು ಪುಸ್ತಕದಲ್ಲಿಲ್ಲ, ಸಿನಿಮಾದಲ್ಲಿಲ್ಲ, ನಮ್ಮ ಮುಂದಿದ್ದಾರೆ

28-12-2024 ಬೆಂಗಳೂರು

“ಈ ಎಲ್ಲ ಯುವಜನಾಂಗದ ಬಗ್ಗೆ ವಿವರವಾಗಿ ತಿಳಿದುಕೊಳ್ಳುವುದರ ಜೊತೆಗೆ ಇತರ ಕ್ಷೇತ್ರದಲ್ಲಿ ಹೆಸರು ಮಾಡಿದ ಸಾಧಕರ ಬಗ...

ಸರಕಾರದ ಅಡೆತಡೆಗಳು ದಕ್ಷಿಣದ ಮೇಲೆ ಹೇಗೆಲ್ಲಾ ಬೀಳ್ತಿದೆ?

28-12-2024 ಬೆಂಗಳೂರು

“ರಾಜ್ಯವಾರು ಜನರ ಬದುಕಿನ ಗುಣಮಟ್ಟ ಹೆಚ್ಚಿಸೋಕೆ, ಮೂಲಭೂತ ಸೇವೆಗಳನ್ನ ಒದಗಿಸೋಕೆ ಕೇಂದ್ರ ಸರಕಾರದ ಅಡೆತಡೆಗಳು ದಕ...

ನಮ್ಮ ಸಮಾಜದ ಶ್ರೇಣೀಕೃತ ವ್ಯವಸ್ಥೆಯ ಗತಿಬಿಂಬ ‘ಜೈಲು ಕತೆಗಳು’

28-12-2024 ಬೆಂಗಳೂರು

"ಶಿಕ್ಷೆಯಲ್ಲಿನ ವೈರುಧ್ಯಗಳ ಅನಾವರಣ: ಸಣ್ಣ ಪುಟ್ಟ ಕಳ್ಳತನ ಮಾಡಿದವರಿಗೆ ಕೈಗೆ ಕೋಳ ಹಾಕಿ ಸಾರ್ವಜನಿಕವಾಗಿ ಎಳೆದುಕ...