ಕರ್ನಾಟಕದ ಸಮಾಜದ ಕಣ್ಣು ತೆರೆಸಿದರು ಲಂಕೇಶ್; ಸುಬ್ಬು ಹೊಲೆಯಾರ್

Date: 12-11-2024

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ನಂ. 11, 12 ಮತ್ತು 13 ರಂದು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಲಂಕೇಶ್ ಬಹುತ್ವಗಳ ಶೋಧ: ಅಧ್ಯಯನ ಶಿಬಿರದ ಎರಡನೇ ದಿನದ ಕಾರ್ಯಕ್ರಮವು ನಂ.12ರಂದು ನಗರದ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ನಡೆಯಿತು.

ಶಿಬಿರದ ನಿರ್ದೇಶಕಿ ಡಾ. ಆಶಾದೇವಿ ಎಂ.ಎಸ್ ಮಾತನಾಡಿ, "ಲಂಕೇಶ್ ನಿಧನವಾದಾಗ ವೈದೇಹಿ ಅವರು, ‘ಒಬ್ಬ ತಾಯಿಯನ್ನು ಕಳೆದುಕೊಂಡೆ’ ಎಂದು ಬರೆದ ಮಾತು, ನಿಜವಾಗಿಯೂ ಇಂದು ನಾವು ಹೆಣ್ಣುಮಕ್ಕಳು ಕಳೆದುಕೊಂಡ ನೈತಿಕ ಬಲ ಏನು ಎಂಬುವುದನ್ನು ತಿಳಿಸುತ್ತದೆ. ಲಂಕೇಶ್ ತನ್ನ ಜೊತೆಗಿದ್ದ ಲೇಖಕ ಹಾಗೂ ಲೇಖಕಿಯರಿಗೆ ನೈತಿಕ ಬಲವನ್ನು ತುಂಬುತ್ತಿದ್ದರು. ಅವರ ನೈತಿಕತೆ ಇಂದಿನ ತಲೆಮಾರಿನ ಹೆಣ್ಣುಮಕ್ಕಳಿಗೂ ಹಬ್ಬಿದೆ. ಅವರ ಬರಹಗಳು ಹೆಣ್ಣು ಮಕ್ಕಳ ಶಕ್ತಿಯಾಗಿದೆ," ಎಂದು ತಿಳಿಸಿದರು.

ಲೇಖಕ ಸುಬ್ಬು ಹೊಲೆಯಾರ್ ಮಾತನಾಡಿ, "ಲಂಕೇಶ್ ಪತ್ರಿಕೆ ದಲಿತ ಸಂಘರ್ಷಕ್ಕೆ ಕೊಟ್ಟ ವಿಶ್ವಾಸ ಬಹಳ ದೊಡ್ಡದು. ಕರ್ನಾಟಕದ ಸಮಾಜದ ಕಣ್ಣು ತೆರೆಸಿದರು. ಅಷ್ಟೇಅಲ್ಲದೆ ಕುವೆಂಪು ನಂತರ ಕನ್ನಡವನ್ನು ಹಾಗೂ ಕನ್ನಡದ ಮನಸ್ಸನ್ನು ಒಳಗಿನಿಂದ ದೊಡ್ಡ ರೀತಿಯಲ್ಲಿ ಪ್ರೇರೆಪಿಸಿ, ವಿಶಾಲವಾಗಿ ಯೋಚನೆ ಮಾಡುವ ರೀತಿಯಲ್ಲಿ ನಮ್ಮನ್ನೆಲ್ಲಾ ಪ್ರೇರೆಪಸಿದರು. ಆದರೆ ಕನ್ನಡ ಸಾಹಿತ್ಯ ಮಾತ್ರ ಮತ್ತೆ ಮತ್ತೆ ಇಂತವರನ್ನು ದೂರವಿಟ್ಟೆ ಮಾತನಾಡುತ್ತದೆ. ಅದು ಯಾಕೆ ಎಂಬವುದು ಇವತ್ತಿಗೂ ಕೂಡ ನನ್ನಂತವನಿಗೆ ದೊಡ್ಡ ಪ್ರಶ್ನೆಯಾಗಿ ಕಾಡಿದೆ. ಒಂದು ಸಮುದಾಯವನ್ನು ಮೀರಿ ಸವಾಲೆಸೆದು ಹಿಮಾಲಯದಂತೆ ನಿಲ್ಲುವುದು ಸುಲಭದ ಮಾತಲ್ಲ. ಕುವೆಂಪು ಹಾಗೂ ಲಂಕೇಶ್ ಅವರು ಇಡೀ ವೈದಿಕ ಪರಂಪರೆಯ ವಿರುದ್ಧ ಮಾಡಿದ ಹೋರಾಟ ಬಹುಮುಖ್ಯವಾದುದು. ಅದು ಇಂದಿಗೂ ಕೂಡ ದಲಿತ ಸಮಿತಿಯ ಶಕ್ತಿಯಾಗಿ ಹೊರಹೊಮ್ಮಿದೆ," ಎಂದರು.

ಲೇಖಕ ಸಿ. ಬಸವಲಿಂಗಯ್ಯ ಮಾತನಾಡಿ, "ರಂಗಭೂಮಿಯ ಮುಖ್ಯ ಕೆಲಸ ತರ್ಕಬದ್ಧವಾಗಿ ಒಂದು ವಿಷಯವನ್ನು ಜನಗಳ ಮುಂದಿಡುವುದು. ಅಂತಹ ಕೆಲಸವನ್ನು ಲಂಕೇಶ್ ಅವರು ತಮ್ಮ ನಾಟಕಗಳಲ್ಲಿ ಮಾಡುತ್ತಿದ್ದರು. ಇನ್ನು ಕನ್ನಡದಲ್ಲಿ ಹಲವಾರು ಅನುವಾದಗಳು ಬಂದಿವೆ. ಅದರಲ್ಲಿ ಬಹುಮುಖ್ಯವಾದದ್ದು ಲಂಕೇಶ್ ಅವರ ಅನುವಾದಿತ ಕೃತಿಗಳು. ಎಲ್ಲ ಕಾಲಕ್ಕೂ ಕೂಡ ಸಲ್ಲುವಂತಹ ವಿಶೇಷವಾದ ಕೃತಿಗಳನ್ನು ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ," ಎಂದರು.

ಶಿಬಿರದಲ್ಲಿ ಮಾತನಾಡಿದ ಲೇಖಕ ದಿನೇಶ್ ಅಮೀನ್ ಮಟ್ಟು ಮಾತನಾಡಿ, "ಲಂಕೇಶ್ ಅವರ ಟೀಕೆ ಟಿಪ್ಪಣಿಗಳನ್ನು ಓದುವರಿಂದ ನಮ್ಮನ್ನು ನಾವು ಬುದ್ಧಿವಂತರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಲಂಕೇಶ್ ಅವರು ಪತ್ರಿಕೋದ್ಯಮವನ್ನು ಬಹಳಷ್ಟು ಇಷ್ಟ ಪಡುತ್ತಿದ್ದರು. ಅದಕ್ಕೆ ಸಂಬಂಧಪಟ್ಟಂತಹ ಹಲವು ಟೀಕೆ ಟಿಪ್ಪಣಿಗಳನ್ನು ನಾವು ಕಾಣಬಹುದು. ಲಂಕೇಶ್ ಬಂಡಾಯ ಚಳುವಳಿಯ ಕಾಲದಲ್ಲಿ ಏಕಾಂಗಿಯಾಗಿ ಮಾಧ್ಯಮ ಲೋಕದ ಬಂಡಾಯವನ್ನು ಮುನ್ನಡೆಸಿದರು. ಜಾಹಿರಾತು ಇಲ್ಲದ ಪತ್ರಿಕೆ, ತಿಳಿದು ಬಂದಿದೆ, ಗೊತ್ತಾಗಿದೆ, ಮೂಲಗಳು ತಿಳಿಸಿವೆ ಎನ್ನುವ ಸಾಲಿನ ಪತ್ರಿಕೋದ್ಯಮ ಏನಿತ್ತು ಅದನ್ನು ನೇರವಾಗಿ, ಸ್ಪಷ್ಟವಾಗಿ, ಸರಳವಾಗಿ ಹೇಳುವ ಒಂದು ಪತ್ರಿಕೋದ್ಯಮವನ್ನು ಅವರು ತಂದರು. ಆದರಿಂದ ನನ್ನ ವಿದ್ಯಾರ್ಥಿ ಜೀವನದಲ್ಲಿ ಲಂಕೇಶ್ ಒಂದು ತೆರನಾದ ಗೂಗಲ್ ಸರ್ಚ್ ಇಂಜಿನ್ ಆಗಿದ್ದರು. ಇವತ್ತಿನ ದಿನ ನಿಮಗೇನಾದರೂ ಅನುಮಾನ ಗೊಂದಲ ಬಂದರೆ ನೀವು ಅದನ್ನು ಗೂಗಲ್ ಹಾಕಿ ಸರ್ಚ್ ಮಾಡುತ್ತೀರಿ. ನಾನು ಇವತ್ತಿಗೂ ಕೂಡ ನನಗೆ ಅಂತಹ ಗೊಂದಲಗಳು ಬಂದರೆ ನಾನು ಮತ್ತೆ ಲಂಕೇಶ್ ಅವರ ಟೀಕೆ ಟಿಪ್ಪಣಿಗೆ ಹೋಗುತ್ತೇನೆ. ಲಂಕೇಶ್ ಬೇರೆ ಬೇರೆ ಜನವರ್ಗವನ್ನು ಬೇರೆ ಬೇರೆ ರೀತಿಯಲ್ಲಿ ಪ್ರಭಾವಿಸಿದ್ದಾರೆ," ಎಂದರು.

ಶಿಬಿರದಲ್ಲಿ ಹಲವಾರು ಶಿಬಿರಾರ್ಥಿಗಳು ಭಾಗವಹಿಸಿದ್ದರು.

MORE NEWS

ಸಿನಿಮಾ ಸಂಸ್ಕೃತಿಯನ್ನು ಬೆಳೆಸುವುದೇ ಶೇಷಾದ್ರಿ ಅವರ ಕನಸು; ಗಿರೀಶ್‌ ಕಾಸರವಳ್ಳಿ

24-11-2024 ಬೆಂಗಳೂರು

ಬೆಂಗಳೂರು: ಅಂಕಿತ ಪ್ರಕಾಶನದ ವತಿಯಿಂದ ಚಿತ್ರಸಮೂಹ ಸಹಯೋಗದಲ್ಲಿ ಸುಚಿತ್ರಾ ಫಿಲಂ ಸೊಸೈಟಿ ಹಾಗೂ ವಾರ್ತಾ ಮತ್ತು ಸಾರ್ವಜನ...

ಬದಲಾವಣೆಯ ಸೂಕ್ಷ್ಮ ಅರಿತರೆ ಮಾತ್ರ ಆಡಳಿತ ಸುಸೂತ್ರವಾಗಿ ನಡೆಯಲು ಸಾಧ್ಯ : ಅನಿಲ್ ಗೋಕಾಕ್

23-11-2024 ಬೆಂಗಳೂರು

ಬೆಂಗಳೂರು: 'ವಿನಯ ಮತ್ತು ಅಧಿಕಾರ ಒಟ್ಟಿಗೆ ಹೋಗುವುದಿಲ್ಲ. ಅಧಿಕಾರ ಬಂದರೆ ಅಹಂಕಾರ ಒಟ್ಟೊಟ್ಟಿಗೆ ಬರುತ್ತದೆ. ಕೇಂದ...

ಬೇಲೂರು ರಘುನಂದನ್ ಅವರಿಗೆ `ಬಿಸ್ಮಿಲ್ಲಾ ಖಾನ್ ಪುರಸ್ಕಾರ-2022’ ಪ್ರಶಸ್ತಿ ಪ್ರದಾನ

22-11-2024 ಬೆಂಗಳೂರು

ಬೆಂಗಳೂರು: ದೆಹಲಿಯ ಸಂಗೀತ ನಾಟಕ ಅಕಾಡೆಮಿಯಿಂದ ನೀಡುವ ಬಿಸ್ಮಿಲ್ಲಾ ಖಾನ್ ಪುರಸ್ಕಾರ-2022ಕ್ಕೆ ಕವಿ, ನಾಟಕಕಾರ ಬೇಲೂರು ...