Date: 16-07-2022
Location: ಬೆಂಗಳೂರು
“ಪೂರ್ವದ ಹಳಗನ್ನಡವನ್ನು ಪರಿಗಣಿಸುವಲ್ಲಿ ಆರಂಬದಿಂದ ಎಂದರೆ ಎಲ್ಲಿಂದ ಎಂಬುದು ಸ್ಪಶ್ಟವಾಗುವುದಿಲ್ಲ. ಕನ್ನಡದ ಆರಂಬ ಎನ್ನುವಾಗ ಬಿನ್ನರು ವಿವಿದ ಕಾಲವನ್ನು ಬಳಸುತ್ತಾರೆ” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಕನ್ನಡ ಭಾಷೆ ಬೆಳೆದುಬಂದ ಕಾಲಘಟ್ಟಗಳ ಬಗ್ಗೆ ಮರುಚರ್ಚೆಯ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.
ಕನ್ನಡ ಅದ್ಯಯನದ ಸಂದರ್ಬದಲ್ಲಿ ಸಾಮಾನ್ಯವಾಗಿ ನಾಲ್ಕು ಗಟ್ಟಗಳನ್ನು ಹೇಳಲಾಗುತ್ತದೆ. ಅಂದರೆ ಬಾಶೆಯು ಬೆಳೆದು ಬಂದ ಇತಿಹಾಸವನ್ನು ವಿವರಿಸುವಾಗ ಅದು ನಾಲ್ಕು ಬಿನ್ನ ಕಾಲಗಟ್ಟಗಳಲ್ಲಿ ಬೆಳೆದು ಬಂದಿದೆ ಎಂದು ಹೇಳಲಾಗುತ್ತದೆ. ಅವುಗಳೆಂದರೆ ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ. ಇಪ್ಪತ್ತನೆ ಶತಮಾನದ ಕೊನೆಕೊನೆಗೆ ಮತ್ತು ಇಪ್ಪತ್ತೊಂದನೆ ಶತಮಾನದ ಮೊದಮೊದಲಲ್ಲಿ ಎಶ್ಟು ಗಟ್ಟಗಳು ಮತ್ತು ಯಾವುವು ಎಂಬುದರ ಬಗೆಗೆ ತುಸು ಚರ್ಚೆ ನಡೆದು ಆನಂತರ ಹೆಚ್ಚಿನವರು ಈ ನಾಲ್ಕು ಗಟ್ಟಗಳನ್ನು ಒಪ್ಪಿಕೊಂಡರು. ಹಾಗಾಗಿ ಈ ಗಟ್ಟಗಳನ್ನು ಇದುವರೆಗೆ ವಿಶ್ವವಿದ್ಯಾಲಯಗಳಲ್ಲಿ ಪಾಟ ಮಾಡಿಕೊಂಡು ಬರಲಾಗಿದೆ. ಗಟ್ಟಗಳು ಎಂದರೆ ಒಂದು ನಿರ್ದಿಶ್ಟ ಕಾಲಾವದಿಯವರೆಗೆ ಕನ್ನಡವು ಒಂದು ರೀತಿಯಲ್ಲಿ ಬಳಕೆಯಲ್ಲಿದ್ದು ತಕ್ಶಣಕ್ಕೆ ಇಡಿಯ ಬಾಶೆಯು ಬದಲಾಗುವುದು ಎಂದು ಅರ್ತ ಅಲ್ಲ. ಬದಲಾವಣೆ ಎನ್ನುವುದು ನಿರಂತರ ಪ್ರಕ್ರಿಯೆ. ಕೆಲವು ಮಹತ್ವದ ಪಲ್ಲಟಗಳನ್ನು ಒಂದು ನಿರ್ದಿಶ್ಟ ಕಾಲಾವದಿಯಲ್ಲಿ ಗುರುತಿಸಲು ಸಾದ್ಯವಾದರೆ ಅದನ್ನು ಕಾಲಗಟ್ಟ ಎಂದು ಹೇಳಬಹುದು. ಹೀಗೆ ಅಂದಾಜು ಬೆಳವಣಿಗೆಯನ್ನು ವಿಬಾಗಿಸಿ ನೋಡುವ ಪ್ರಯತ್ನ ಇದು ಎಂದೆನ್ನಬಹುದು. ಹೀಗೆ ಗುಂಪಿಸುವುದು ಅದ್ಯಯನಕ್ಕೆ ಹೆಚ್ಚು ಅನುಕೂಲವಾಗುವುದರಿಂದ ಇದು ಅವಶ್ಯ. ಬಾಶೆಯ ಗಟ್ಟಗಳನ್ನು ಪ್ರಸ್ತಾಪಿಸಿದ ವಿದ್ವಾಂಸರು ಬಹುತೇಕ ಸಾಹಿತ್ಯದ ವಿದ್ವಾಂಸರು. ಹಾಗಾಗಿ ಬಾಶೆಯ ಗಟ್ಟಗಳು ಸಾಹಿತ್ಯದ ಗಟ್ಟಗಳನ್ನು ಕನ್ನಡಿಸುವಂತೆ ಇವೆ. ಒಂದು ಬಾಶೆಯ ಇತಿಹಾಸ ಎನ್ನುವುದನ್ನು ಸುಲಬವಾಗಿ ದೊರೆತ ಸಾಹಿತ್ಯದ ಮೇಲೆ ಹೇಳುವುದು ಸಾದ್ಯವಾದರೂ ಅದನ್ನು ಮಾತ್ರವೆ ಇಟ್ಟುಕೊಂಡು ಹೇಳುವುದು ಕಶ್ಟದ ಕೆಲಸ. ಇಲ್ಲಿ ಕೆಲವು ವಿಚಾರಗಳನ್ನು ಮಾತಿಗೆ ತೆಗೆದುಕೊಳ್ಳಬಹುದು.
ಈ ನಾಲ್ಕು ಗಟ್ಟಗಳನ್ನು ಅರಿತುಕೊಳ್ಳುವಲ್ಲಿ ಹಲವು ಸಮಸ್ಯೆಗಳು ಇವೆ. ಈ ಗುಂಪಿಸುವಿಕೆಯಲ್ಲಿ ತಾತ್ವಿಕ ಸೂತ್ರತೆ ಕಂಡುಬರುವುದಿಲ್ಲ. ಕಿಟೆಲ್, ರಯಿಸ್ ಮೊದಲಾದವರು ಈ ಗುಂಪಿಕೆಯನ್ನು ಅಂದಾಜಾಗಿ ಮಾತಾಡಿದರು. ಮುಂದೆ ನರಸಿಂಹಾಚಾರ್, ನರಸಿಂಹಯ್ಯ ಮತ್ತು ಗಾಯಿ ಇವರ ಕೆಲವು ಬರವಣಿಗೆಗಳು ಇವುಗಳೊಂದಿಗೆ ಕನ್ನಡ ಕಯ್ಪಿಡಿ ಈ ಗಟ್ಟಗಳನ್ನು ನಿರ್ದಿಶ್ಟಪಡಿಸಿದವು. ಇವು ಸಾಮಾನ್ಯ ಇಪ್ಪತ್ತನೆ ಶತಮಾನದ ಮೂರು-ನಾಲ್ಕನೆ ದಶಕಗಳಲ್ಲಿ ಬಂದ ಅದ್ಯಯನಗಳು, ಆರಂಬ ಕಾಲದ ಶಾಸನಗಳ ಬಾಶೆಯ ಕಾಲಾಂತರದ ರಾಚನಿಕ ವಿವರಣೆಯನ್ನು ತೋರಿಸಿದಂತವು. ಆನಂತರ ಬಂದ ಅದ್ಯಯನಗಳು ಈ ವರ್ಗೀಕರಣವನ್ನು ಇನ್ನಶ್ಟು ಇನ್ನಶ್ಟು ಉದಾಹರಣೆಗಳೊಂದಿಗೆ ವಿವರಿಸುತ್ತ, ಬೆಂಬಲಿಸುತ್ತ ಬಂದವು, ಬದಲಿಗೆ ಅವುಗಳನ್ನು ಸಮಸ್ಯೀಕರಿಸುವ, ಮವುಲ್ಯಮಾಪನ ಮಾಡುವ ಪ್ರಯತ್ನವನ್ನು ಮಾಡಲಿಲ್ಲ. ಕುತೂಹಲದ ವಿಚಾರವೆಂದರೆ ಈ ಎಲ್ಲ ಪ್ರಯತ್ನಗಳು ಅದ್ಯಯನಕ್ಕೆ ಬಳಸಿಕೊಂಡ ಒಟ್ಟು ಶಾಸನಗಳು ಸುಮಾರು ಮೂರು ನೂರನ್ನು ದಾಟುವುದಿಲ್ಲ. ಇಂದಿಗೆ ಕನ್ನಡದಾಗ ಸುಮಾರು ಮೂವತ್ತು ಸಾವಿರದಶ್ಟು ಶಾಸನಗಳು ಇವೆ. ಈ ಶಾಸನಗಳ ಅದ್ಯಯನವು ಕನ್ನಡ ಬಾಶೆಯ ಗಟ್ಟಗಳನ್ನು ಅರಿತುಕೊಳ್ಳುವಲ್ಲಿ ಸಹಾಯಕವಾಗಬೇಕು. ಕನ್ನಡದಲ್ಲಿ ತುಂಬಾ ಹಳೆಯ ಶಾಸನಗಳು ಮಾತ್ರವಲ್ಲದೆ ಸಾಮಾನ್ಯವಾಗಿ ಶಾಸನಗಳ ಬಾಶಿಕ ಅದ್ಯಯನವೂ ತುಂಬಾ ಕಡಿಮೆ. ವ್ಯವಸ್ತಿತವಾಗಿ ಇದುವರೆಗೆ ಅದ್ಯಯನ ಮಾಡಿದ ಶಾಸನಗಳ ಸಂಕೆ ಬಹುಶಾ ಸಾವಿರವೆರಡು ಇರಬೇಕು ಮಾತ್ರ.
ಶಾಸನಗಳಲ್ಲಿ ಬಾಶೆಯ ಬಳಕೆ ಸಹಜವಾಗಿಯೆ ಹಲವು ತೆರನಾಗಿ ವಿಬಿನ್ನತೆಯೊಂದಿಗೆ ಕಂಡುಬರುತ್ತದೆ. ಕಾಲಾಂತರದಲ್ಲಿ ಹಾಗೆಯೆ ಬಿನ್ನ ಅರಸುಮನೆತನಗಳು ಆಡಳಿತಕ್ಕೆ ಬಂದಾಗ, ಪ್ರಾದೇಶಿಕವಾಗಿ, ಹಳೆಯ ಪಟ್ಯಗಳನ್ನು ಮರುರೂಪಿಸಿದಾಗ, ಕೂಟಶಾಸನಗಳನ್ನು ಹಾಕಿಸಿದಾಗ ಹೀಗೆ ವಿಬಿನ್ನ ಹಿನ್ನೆಲೆಯ ಶಾಸನಗಳ ಬಾಶೆ ಬಿನ್ನವಾಗಿ ಇದೆ.
ಇದುವರೆಗೆ ಕನ್ನಡದಲ್ಲಿ ನಾಲ್ಕು ಗಟ್ಟಗಳನ್ನು ಹೇಳಿರುವುದು ನಂಬುವಂತ ವಿಚಾರವೆ ಎಂಬ ಅನುಮಾನ ಬರದಿರದು. ಈ ಮುಂದಿನ ಕೆಲವು ಮಹತ್ವದ ವಿಚಾರಗಳನ್ನು ಅವಲೋಕಿಸಬಹುದು. ಈ ಕನ್ನಡದ ಅವಸ್ತೆಗಳು ಪಸರಿಸಿಕೊಂಡಿರುವ ಕಾಲಗಟ್ಟವನ್ನು ಗಮನಿಸಿದಾಗ ಕುತೂಹಲವೊಂದು ಕಾಣಿಸುತ್ತದೆ.
ಪೂರ್ವದ ಹಳಗನ್ನಡ | ಆರಂಬದಿಂದ - ೯ನೆ ಶತಮಾನ |
ಹಳಗನ್ನಡ | ೧೦ರಿಂದ ೧೧ನೆ ಶತಮಾನ |
ನಡುಗನ್ನಡ | ೧೨ರಿಂದ ೧೭/೧೯ನೆ ಶತಮಾನ |
ಹೊಸಗನ್ನಡ | ೧೭/೧೯ರಿಂದ ಇಂದಿನವರೆಗೆ |
ಈ ಕಾಲವಿಂಗಡಣೆಯೆ ಅನುಮಾನಾಸ್ಪದವಾಗಿ ಕಾಣಿಸುತ್ತದೆ. ಇಲ್ಲಿ, ಪೂರ್ವದ ಹಳಗನ್ನಡವನ್ನು ಪರಿಗಣಿಸುವಲ್ಲಿ ಆರಂಬದಿಂದ ಎಂದರೆ ಎಲ್ಲಿಂದ ಎಂಬುದು ಸ್ಪಶ್ಟವಾಗುವುದಿಲ್ಲ. ಕನ್ನಡದ ಆರಂಬ ಎನ್ನುವಾಗ ಬಿನ್ನರು ವಿವಿದ ಕಾಲವನ್ನು ಬಳಸುತ್ತಾರೆ. ಕೆಲವರು ದೊರೆತ ಹಳೆಯ ಕ್ರುತಿಯಾದ ಕವಿರಾಜಮಾರ್ಗದಿಂದ ಹೇಳಿದರೆ ಇನ್ನು ಕೆಲವರು ದೊರೆತ ಹಳೆಯ ಶಾಸನವಾದ ಹಲ್ಮಿಡಿ ಶಾಸನದಿಂದ ಹೇಳುತ್ತಾರೆ. ಇನ್ನು ಕೆಲವರು ಕನ್ನಡದ ದೊರೆತ ಹಳೆಯ ಶಬ್ದವಾದ ಇಸಿಲ ಇದನ್ನು ಪರಿಗಣಿಸಿ ಆ ಪದ ಬಳಕೆಯಾಗಿರುವ ಅಸೋಕನ ಶಾಸನಗಳ ಕಾಲದಿಂದ ಕನ್ನಡದ ಆರಂಬವನ್ನು ಹೇಳುತ್ತಾರೆ. ಇಸಿಲ ಇದನ್ನು ಇತ್ತೀಚೆಗೆ ಕನ್ನಡದ ಪದ ಅಲ್ಲ ಎಂದು ತೋರಿಸಿರುವುದರಿಂದ ಅದಕ್ಕಿಂತ ತುಸು ಈಚಿಗಿನದಾಗಿರಬಹುದಾದ ಇತರ ಪದಗಳಿಂದ ಆರಂಬ ಎಂದುಕೊಳ್ಳಬಹುದು. ವಾಸ್ತವದಲ್ಲಿ ಆರಂಬದಿಂದ ಎಂದರೆ ಮೂಲಕನ್ನಡದ ಹಂತದಿಂದ ಎಂದು ಹೇಳಬೇಕು. ಆದರೆ ಮೂಲಕನ್ನಡ ಎಂಬ ಪರಿಕಲ್ಪನೆಯು ಕನ್ನಡ ಸಂಶೋದನೆಯಲ್ಲಿ ಎಲ್ಲೂ ಬಳಕೆಯಾಗಿಲ್ಲದಿರುವುದರಿಂದ ಅಂತದೊಂದು ವಿಚಾರ ಅಶ್ಟಾಗಿ ಇಲ್ಲ. ಇರಲಿ, ಈಗ ಒಟ್ಟು ಪೂರ್ವದ ಹಳಗನ್ನಡದ ಕಾಲಾವದಿಯನ್ನು ಗಮನಿಸಿದರೆ ಹಲ್ಮಿಡಿ ಶಾಸನವನ್ನು ಲೆಕ್ಕಿಸಿದರೆ ಸುಮಾರು ಅಯ್ದು ನೂರು ವರುಶ, ಅಸೋಕನ ಶಾಸನದಿಂದ ಲೆಕ್ಕಿಸಿದರೆ ಎಂಟು ನೂರು ವರುಶ ಮತ್ತು ಮೂಲಕನ್ನಡದಿಂದ ಲೆಕ್ಕಿಸಿದರೆ ಕನಿಶ್ಟವೆಂದರೂ ಎರಡು-ಮೂರು ಸಾವಿರ ವರುಶವೆಂದಾಗುತ್ತದೆ.
ಇನ್ನು ಆನಂತರದ ಹಳಗನ್ನಡ ಕಾಲವು ಕೇವಲ ಎರಡು ನೂರು ವರುಶಗಳು ಮಾತ್ರ ಎಂದು ವಿವರಿಸಿದೆ. ಆನಂತರ ನಡುಗನ್ನಡ ಕಾಲಾವದಿಯನ್ನು ಗಮನಿಸಿದಾಗ ಕೆಲವರು ೧೭ನೆ ಶತಮಾನದವರೆಗೆ ಗಮನಿಸಿದರೆ ಇನ್ನು ಕೆಲವರು ೧೯ನೆ ಶತಮಾನದವರೆಗೆ ಲೆಕ್ಕಿಸುತ್ತಾರೆ. ೧೭ನೆ ಶತಮಾನದವರೆಗೆ ಲೆಕ್ಕಿಸಿದರೆ ಅಯ್ದು ನೂರು ವರುಶಗಳ ಕಾಲಾವದಿಯಾದರೆ ೧೯ನೆ ಶತಮಾನದವರೆಗೆ ಲೆಕ್ಕಿಸಿದರೆ ಏಳು ನೂರು ವರುಶಗಳ ಕಾಲಾವಾದಿ ಆಗುತ್ತದೆ. ಆನಂತರದ ಕಾಲವು ಹೊಸಗನ್ನಡದ ಕಾಲ.
ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಪೂರ್ವದ ಹಳಗನ್ನಡದ ಬಗೆಗೆ ನಮಗೆ ಯಾವುದೆ ಸ್ಪಶ್ಟನೆ ಇಲ್ಲ. ಹಲ್ಮಿಡಿಯಿಂದಲೊ, ಅಸೋಕನ ಶಾಸನಗಳ ಕಾಲದಿಂದಲೊ ಪೂರ್ವದ ಹಳಗನ್ನಡದ ಕಾಲದ ಲೆಕ್ಕ ಹಿಡಿದರೂ ಹಲವು ಶತಮಾನಗಳ ಕಾಲ ಇದು ವ್ಯಾಪಿಸಿಕೊಂಡಿದ್ದಿತು ಎಂಬುದು ಸ್ಪಶ್ಟವಿದೆ. ಇನ್ನೊಂದೆಡೆ ನಡುಗನ್ನಡದ ಕಾಲದ ಬಗೆಗೆ ಇರುವ ಎರಡೂ ಲೆಕ್ಕಗಳನ್ನು ಗಮನಿಸಿದರೂ ಹಲವು ಶತಮಾನಗಳು ಆಗುತ್ತದೆ. ಹಳಗನ್ನಡ ಕಾಲಾವದಿ ಮಾತ್ರ ಹೆಚ್ಚು ನಿರ್ದಿಶ್ಟವಾಗಿದೆ ಮತ್ತು ತುಂಬಾ ಕಡಿಮೆ ಇದೆ. ಕೇವಲ ಎರಡು ನೂರು ವರುಶ ಮಾತ್ರ. ಇದು ಹೇಗೆ ಸಾದ್ಯ? ಒಂದು ವೇಳೆ ಇದು ಸಾದ್ಯ ಎಂದಾದರೆ ಹೇಗೆ ಸಾದ್ಯ ಎಂಬುದನ್ನು ವಿಚಾರಿಸಬೇಕು.
ಈ ಅಂಕಣದ ಹಿಂದಿನ ಬರೆಹ:
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.