ಕನಕದಾಸರ ನೆಲೆಬೀಡು ಕಾಗಿನೆಲೆಯ ನೋಟ...

Date: 04-01-2023

Location: ಬೆಂಗಳೂರು


''ಕರುನಾಡಿನ ಹರಿದಾಸರಲ್ಲಿ ಕನಕದಾಸರು ಅಗ್ರಗಣ್ಯರು. ಅವರ ಜನ್ಮ ಮತ್ತು ಕರ್ಮಭೂಮಿ ‘ಕಾಗಿನೆಲೆ-ಬಾಡ’ ಪ್ರದೇಶವು ಪುರಾಣದ ಹಲವು ಮಜಲುಗಳನ್ನು ಪಡೆದುಕೊಂಡು, ಪ್ರಸ್ತುತ ಸಂತ ಕನಕದಾಸರ ಪುಣ್ಯಭೂಮಿಯೆಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ”. ‘ಕಾಗಿನೆಲೆ-ಬಾಡದ’ ಕಿರುಮಾಹಿತಿ ನಿಮ್ಮ ಓದಿಗಾಗಿ...

ಕಾಗಿನೆಲೆ - ಬಾಡ:
ಹಾವೇರಿಯ ಬಾಡ ಮತ್ತು ಕಾಗಿನೆಲೆ ದಾಸವರೇಣ್ಯ ಕನಕದಾಸರ ಜನ್ಮ ಮತ್ತು ಕರ್ಮಭೂಮಿ. ಜಿಲ್ಲೆಯಿಂದ ಸುಮಾರು 12 ಕಿ.ಮೀ ಅಂತರದಲ್ಲಿದೆ ಕಾಗಿನೆಲೆ. ಕನಕದಾಸರ ಆರಾಧ್ಯ ದೈವ ಚೆನ್ನಕೇಶವನ ನೆಲೆಬೀಡ. ಕನಕದಾಸರ ಬದುಕು- ಬರಹದ ಸಮ್ಮಿಲನವನ್ನು 134 ಎಕರೆ ಪ್ರದೇಶದ ಉದ್ಯಾನವನದಲ್ಲಿ ಕಾಣಬಹುದು. ಜತೆಗೆ ಕನಕರ ‘ಮೋಹನ ತರಂಗಿಣಿ’ ಯನ್ನು 238 ಎಕರೆಯ ದೊಡ್ಡಕೆರೆಯನ್ನು ಕಾಣಬಹುದು.

ಸ್ಥಳ ಪುರಾಣ:

ಪುರಾಣದ ಪ್ರಕಾರ ಕಾಗಿನೆಲೆ ಪ್ರದೇಶವು ‘ಕಾಗಿನೆಲ್ಲಿ’ ಎಂದಾಗಿತ್ತು. ಬಂಗಾರದ ಕಾಗೆಯೊಂದು ಇಲ್ಲಿನ ಗುಡ್ಡದಿಂದ ನೆಲ್ಲಿಕಾಯನ್ನು ಕಚ್ಚಿಕೊಂಡು ಬಂದು ತಿನ್ನುತ್ತಿತ್ತು. ಇದನ್ನ ಕಂಡ ಜನರು ಕಾಗೆಯನ್ನು ಹಿಡಿಯಲು ಹೋದಾಗ, ಕಾಗೆ ಗುಹೆಯೊಳಗೆ ಹಾರಿತು. ಕಾಗೆಯನ್ನು ಹಿಂಬಾಲಿಸಿದ ಜನರಿಗೆ ಗುಹೆಯೊಳಗೆ ಲಕ್ಷ್ಮಿ ಮತ್ತು ನರಸಿಂಹ ಉದ್ಭವ ಮೂರ್ತಿಗಳು ಕಾಣಿಸಿದವು. ವಿಗ್ರಹಗಳನ್ನು ತಂದು ಪ್ರತಿಷ್ಠಾಪಿಸಿದ ಜನರು ಮುಂದೆ ಈ ಊರನ್ನು ‘ಕಾಗಿನೆಲ್ಲಿ’ ಎಂದು ಕರೆದರು.

ನಂತರದಲ್ಲಿ ಬಾಡದ ಕನಕದಾಸರಿಗೆ ಕನಸಿನಲ್ಲಿ ಬಂದ ಉದ್ಭವ ಮೂರ್ತಿ ಆದಿಕೇಶವನು ಕಾಗಿನೆಲೆಯಲ್ಲಿ ಪ್ರತಿಷ್ಠಾಪನೆ ಮಾಡು ಎಂದು ಹೇಳಿದಾಗ, ಕನಕದಾಸರು ಇಲ್ಲಿಗೆ ತಂದು ಪ್ರತಿಷ್ಠಾಪಿಸಿದರು.

ಅಪೂರ್ವ ಪುಸ್ತಕ ಭಂಡಾರ : ಕನಕ ಸಾಹಿತ್ಯ ಮತ್ತು ಭಕ್ತಿಪಂಥದ ವಿವಿಧ ಭಾಷಿಕ ಸಾಹಿತ್ಯ ಕೃತಿಗಳ ಬೃಹತ್ ಪುಸ್ತಕ ಭಂಡಾರವನ್ನು ಒಳಗೊಂಡಿದೆ. ವಿವಿಧ ವಿಶ್ವವಿದ್ಯಾಲಯಗಳಿಂದ ಸಂಶೋಧನಾಸಕ್ತ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.

ಗದ್ದುಗೆ ಮಂದಿರ : ಕನಕದಾಸರು ತಮ್ಮ ಜೀವಿತದ ಕೊನೆಯ ದಿನಗಳನ್ನು ಕಳೆದು, ದೇಹ ತ್ಯಾಗ ಮಾಡಿದ ಮಂದಿರವಿದು. ಭಕ್ತರು ದೊಡ್ಡಕೆರೆಯ ಪಕ್ಕದಲ್ಲಿ ನಿರ್ಮಿಸಿರುವ ಗದ್ದುಗೆಯನ್ನು ಇಲ್ಲಿ ಕಾಣಬಹುದು. ಅಭಿವೃದ್ಧಿ ಪ್ರಾಧಿಕಾರವು ವಿಜಯನಗರ ಶೈಲಿಯ ಸುಂದರವಾದ ಕನಕ ಗದ್ದುಗೆ ಮಂದಿರವನ್ನು ಇಲ್ಲಿ ನಿರ್ಮಿಸಿದೆ. ಕಾಗಿನೆಲೆಗೆ, ಕನಕಗುರುಪೀಠಕ್ಕೆ ಬರುವ ಭಕ್ತರಿಗೆ, ಪ್ರವಾಸಿಗರಿಗಾಗಿ ಸುಸಜ್ಜಿತವಾದ ಕನಕ ಯಾತ್ರಿನಿವಾಸ ಸೌಲಭ್ಯ ಇಲ್ಲಿದೆ.

ಪರಿಸರ ಸ್ನೇಹಿ ಉದ್ಯಾನ: ಕನಕ ಪರಿಸರ ಸ್ನೇಹಿ ಉದ್ಯಾನವನವನ್ನು 138 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. 30 ಎಕರೆ ಪ್ರದೇಶದಲ್ಲಿ ಹುಲ್ಲಿನ ಹಾಸು, ವಿವಿಧ ಬಗೆಯ ಆಲಂಕಾರಿಕ ಹೂಗಳಿಂದ ಕಂಗೊಳಿಸುತ್ತಿರುವ ಸಸ್ಯರಾಶಿ, ಔಷಧ ವನ, ದೈವೀವನಗಳಲ್ಲದೆ ಮಕ್ಕಳಿಗೆ ಆಟವಾಡಲು ಪರಿಕರಗಳನ್ನು ಸ್ಥಾಪಿಸಲಾಗಿದೆ. ಕನಕ ಸರೋವರ ಇಲ್ಲಿಯ ಪ್ರಮುಖ ಆಕರ್ಷಣೆ.

ಆಂಜನೇಯ ದೇವಸ್ಥಾನ; ಕನಕದಾಸರು ಪೂಜಿಸುತ್ತಿದ್ದ ಆಂಜನೇಯ ದೇವಸ್ಥಾನವಿದೆ.ಕಾಗಿನೆಲೆಯಿಂದ 3 ಕಿ.ಮೀ. ದೂರದಲ್ಲಿರುವ ದಾಸನಕೊಪ್ಪ ಗ್ರಾಮವು, ಆನೆಗೊಂದಿ ಅರಸರಿಂದ ಕನಕದಾಸರಿಗೆ ಉಡುಗೊರೆಯಾಗಿ ಬಂದ ಪ್ರದೇಶವಾಗಿದೆ.

ತಿಮ್ಮಕೇಶವ ದೇವಸ್ಥಾನ : ಕಾಗಿನೆಲೆಯಿಂದ 5 ಕಿ.ಮೀ.ದೂರ‌ದಲ್ಲಿ ಕುಮ್ಮೂರು ಗ್ರಾಮದ ಗುಡ್ಡದ ಮೇಲೆ ಈ ಮಂದಿರವಿದೆ. ಈ ದೇವಸ್ಥಾನದಲ್ಲಿ ಸುಂದರವಾದ ಉದ್ಭವ ಮೂರ್ತಿ ಇದೆ. ಇದೇ ಪರಿಸರದಲ್ಲಿ ಕನಕದಾಸರ ಹೂದೋಟ, ಕನಕನಾಯಕನ ಕಾಲುವೆಗಳಿವೆ.

ಹೂದೋಟದ ತಿಮ್ಮಪ್ಪ : ಕದರಮಂಡಲಗಿ ಹೊರವಲಯದಲ್ಲಿ ಈ ದೇವಸ್ಥಾನವಿದೆ. ತಿರುಪತಿ ತಿಮ್ಮಪ್ಪನ ಸ್ಮರಣೆಯಲ್ಲಿಯೇ ಸದಾ ಕಾಲಕಳೆಯುತ್ತಿದ್ದ ಕನಕದಾಸರಿಗೆ ಕನಸಿನಲ್ಲಿ ತಿಮ್ಮಪ್ಪನ ದರ್ಶನವಾಗಿತ್ತು ಎಂಬ ಮಾತಿದೆ.

ಚೆನ್ನಕೇಶವ ದೇವಸ್ಥಾನ ಕಾಗಿನೆಲೆ: ಕನಕರ ವರ್ಣರಂಜಿತ ಜೀವನದ ನಾನಾ ಸಂಗತಿಗಳನ್ನು ಪ್ರತಿಬಿಂಬಿಸುವ 46 ಶಿಲ್ಪಕಲಾಮೂರ್ತಿಗಳನ್ನು ಈ ದೇವಾಲಯದಲ್ಲಿ ನೋಡಬಹದು. ಎತ್ತರವಾದ ಆಧಾರಪೀಠದ ಮೇಲೆ ಕನಕ ವರ್ಣದ ಕನಕದಾಸರ ಮೂರ್ತಿ ಇದ್ದು, ಕೈಯಲ್ಲಿ ತಂಬೂರಿ ಮತ್ತು ತಾಳಗಳು, ಭುಜದ ಮೇಲೆ ಕಂಬಳಿ ಹಾಗೂ ಜೋಳಿಗೆಯಿದೆ.

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ: ಜನ್ಮ-ಕರ್ಮ ಭೂಮಿಗಳಲ್ಲಿ ಕನಕನ ಜೀವನ ಶೈಲಿ, ಕನಕನ ತತ್ವ, ಅವರು ಭಿತ್ತಿರುವ ಆದರ್ಶ ಹಾಗೂ ಅವರ ಹೆಜ್ಜೆ ಗುರುತುಗಳನ್ನು ಸಂರಕ್ಷಿಸುವ ಮತ್ತು ಜಗತ್ತಿಗೇ ಸಾರುವ ಕೆಲಸವನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಮಾಡುತ್ತಿದೆ. 2007–08ರಲ್ಲಿ ರಚನೆಯಾದ ಪ್ರಾಧಿಕಾರ ಸುಮಾರು ₹ 100 ಕೋಟಿ ವೆಚ್ಚದಲ್ಲಿ ಕನಕ ಕ್ಷೇತ್ರಗಳನ್ನು ಅಧ್ಯಾತ್ಮದ ಜೊತೆಗೆ ಪ್ರವಾಸಿಗರ ನೆಲೆಯಾಗಿಸುತ್ತಿದೆ.

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...