Date: 08-01-2023
Location: ಹಾವೇರಿ
ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ಸರಿಯಲ್ಲ. ಕನ್ನಡ ಶಾಲೆ, ಕನ್ನಡ ಉಳಿಸಲು ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ತರಬೇಕು ಎಂದು ರೇವಣಸಿದ್ದಪ್ಪ ಜಲಾದೆ ಒತ್ತಾಯಿಸಿದರು.
ಹಾವೇರಿಯಲ್ಲಿ ನಡೆದ 86 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆಯಲ್ಲಿ “ಗಡಿನಾಡು ಮತ್ತು ಹೊರನಾಡ ಕನ್ನಡಿಗರ ತಳಮಳಗಳು” ಗೋಷ್ಠಿಯಲ್ಲಿ ಗಡಿನಾಡ ಶಾಲೆಗಳ ಅಭಿವೃದ್ಧಿ ಯೋಜನೆಗಳ ಕುರಿತು ಅವರು ಮಾತನಾಡಿದರು. ಗಡಿ ಭಾಗದಲ್ಲಿ ಕೇವಲ 48 ಕನ್ನಡ ಶಾಲೆಗಳು ಮಾತ್ರ ಉಳಿದಿವೆ. ಕನ್ನಡ ಶಾಲೆ ಆರಂಭ ಮಾಡಲು ಇರುವ ಕಠಿಣ ನಿಯಮಗಳನ್ನು ಸಡಿಲಿಸಬೇಕಿದೆ ಎಂದರು. ಕಳೆದ 3 ವರ್ಷದಿಂದ ಬೆಂಗಳೂರಲ್ಲಿ ಒಂದೇ ಒಂದು ಕನ್ನಡ ಶಾಲೆ ಆರಂಭವಾಗಿಲ್ಲ, ಒಂದೇ ವರ್ಷದಲ್ಲಿ 150ಕ್ಕೂ ಅಧಿಕ ಆಂಗ್ಲ ಮಾಧ್ಯಮ ಶಾಲೆಗಳು ಆರಂಭವಾಗಿವೆ. 01 ರಿಂದ 5 ತರಗತಿಗಳು ಕನ್ನಡದಲ್ಲೇ ನಡೆಯಬೇಕು ಎಂಬುದು ಸಮ್ಮೇಳನಾಧ್ಯಕ್ಷರ ಆಶಯ, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
" ಭಾಷೆ, ಸಂಸ್ಕೃತಿಗೆ ಅನುಗುಣವಾಗಿ ರಾಜ್ಯ ವರ್ಗೀಕರಣ ಆಗಿಲ್ಲ " ಸಮ್ಮೇಳನಾಧ್ಯಕ್ಷರಾದ ದೊಡ್ಡರಂಗೇಗೌಡ ಅವರು ಗೋಷ್ಠಿಯಲ್ಲಿ ಪಾಲ್ಗೊಂಡು, ಭಾಷೆ, ಸಂಸ್ಕೃತಿಗೆ ಅನುಗುಣವಾಗಿ ರಾಜ್ಯ ವರ್ಗೀಕರಣ ಆಗಿಲ್ಲ. ಹೀಗಾಗಿ ಕಾಸರಗೋಡು, ಬೆಳಗಾವಿ ಸಮಸ್ಯೆ ತಲೆದೋರಿದೆ. ಬೆಳಗಾವಿ ಗಡಿ ಅಂಚಿನಲ್ಲಿ ಸಂಚರಿಸಿದ್ದೇನೆ ಅಲ್ಲಿ ಶೇ. 90 ರಷ್ಟು ಕನ್ನಡಿಗರೇ ಇದ್ದಾರೆ, ಅವರೆಲ್ಲ ರಾಜ್ಯಕ್ಕೆ ಬರುವ ಬಯಕೆ ಹೊಂದಿದ್ದಾರೆ. ಕೋಲಾರದ ದೊಡ್ಡಪಲ್ಲಾಂಗ ಹಳ್ಳಿಗೆ ಹೋದಾಗ ರೈತನೊಬ್ಬ ತನ್ನ ಅಳಲನ್ನು ಹೇಳಿಕೊಂಡ ರೀತಿ ನಿಜಕ್ಕೂ ವಿಪರ್ಯಾಸ. ರೈತನು ಕಂದಾಯ ಕರ್ನಾಟಕ ರಾಜ್ಯಕ್ಕೆ ಕಟ್ಟಿದರೆ ಜಮೀನಿನ ಪಹಣಿ ದಾಖಲೆಗಳು ಪಕ್ಕದ ರಾಜ್ಯದಿಂದ ಬರುತ್ತಿವೆ. ರೈತನು 3 ರಾಜ್ಯಗಳ ಜೊತೆಗೂ ವ್ಯವಹಾರ ಜೀವನ ಮಾಡಬೇಕು ಎಂದರು. ಕನ್ನಡ -ತೆಲುಗು ಭಾಂದವರು ಎಂದೂ ಜಗಳ ಮಾಡಿಲ್ಲ, ಕೇರಳದ ಮಲೆಯಾಳಿ ಭಾಷೆ ಸಂಪದ್ಭರಿತ ಮಾಡಿದ್ದಾರೆ, ಅಲ್ಲಿನ ಸರಕಾರ ತಮ್ಮ ಮೂಗಿನ ನೇರಕ್ಕೆ ನಡೆಯದೆ ಕನ್ನಡದ ಬಗ್ಗೆ ನಿಲುವು ಬದಲಿಸಿಕೊಳ್ಳಬೇಕು ಎಂದರು.
"ಸಂಸ್ಕೃತಿಯಲ್ಲಿ ದೇಶ ಭಕ್ತಿ, ಪ್ರಜ್ಞೆ ಎಲ್ಲವೂ ಅಡಗಿದೆ " ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದ 63 ತಾಲೂಕುಗಳು, 6 ರಾಜ್ಯದೊಂದಿಗೆ ಅಂಟಿಕೊಂಡಿವೆ. ಶೈಕ್ಷಣಿಕ ಸಾಮಾಜಿಕ ಬದುಕು ಕಟ್ಟಿಕೊಡುವುದು ಪ್ರಾಧಿಕಾರದ ಉದ್ದೇಶ. ಸಂಸ್ಕಂತಿ ಇಲ್ಲದ ಬದುಕಿಲ್ಲ, ಸಂಸ್ಕೃತಿಯಲ್ಲಿ ದೇಶ ಭಕ್ತಿ, ಪ್ರಜ್ಞೆ ಎಲ್ಲವೂ ಅಡಗಿದೆ. ಪ್ರಾಧಿಕಾರ 400 ಸಾಂಸ್ಕೃತಿಕ ಸಮಾರಂಭ ನಡೆಸಲು 5 ಕೋಟಿ ಅನುದಾನ ನೀಡಿದೆ. ಅಧಿಕಾರಿಗಳು ವ್ಯಕ್ತಿಯನ್ನು ಕಡತವಾಗಿ ನೋಡದೇ, ಕಡತಗಳಲ್ಲಿ ವ್ಯಕ್ತಿಯನ್ನು ಹುಡುಕಬೇಕು. ಸರ್ಕಾರ ಕೊಂಕಣಿ, ತುಳು ಅಕಾಡೆಮಿ ರಚಿಸಿ ಭಾಷೆ ಸಾಮರಸ್ಯ ಮೆರೆದಿದೆ. ಕೇರಳ ಸರ್ಕಾರ ಕನ್ನಡ ಅಕಾಡೆಮಿ ರಚಿಸಿದ್ದಾರೆ ಇತರ ರಾಜ್ಯಗಳು ಈ ದಿಸೆಯಲ್ಲಿ ಸಾಗಲಿ ಎಂದರು.
ಆಶಯ ನುಡಿಗಳನ್ನಾಡಿದ ಸೊಲ್ಲಾಪುರ ಅಕ್ಕಲಕೋಟೆ ಬಸವಲಿಂಗ ಮಹಾಸ್ವಾಮಿಗಳು, ಸೊಲ್ಲಾಪುರದ ಅಕ್ಕಲಕೋಟೆ ಭಾಗದಲ್ಲಿ ಶೇ. 90 ರಷ್ಟು ಜನರು ಕನ್ನಡವನ್ನೇ ಆಡುಭಾಷೆ, ವ್ಯವಹಾರಿಕ ಭಾಷೆಯಾಗಿ ಬಳಸುತ್ತಾರೆ. ಇದು ಹೀಗೆಯೇ ಮುಂದುವರೆದರೆ ಬೆಳಗಾವಿ ಕೇಳಿದಂತೆ ಎಲ್ಲ ಪ್ರದೇಶಗಳನ್ನು ಕೇಳುತ್ತಾರೆ, ಈಗಲೇ ಎಚ್ಚೆತ್ತುಕೊಳ್ಳಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರ ಮೊದಲು ಆರ್ಥಿಕ ಅಭಿವೃದ್ಧಿ ಹೊಂದಿ ಇಂದರಿಂದ ಆ ಭಾಗದ ಅಭಿವೃದ್ಧಿಯಾಗಲಿ ಎಂದರು. ಕನ್ನಡ ಮರೆತರೆ ಹೆತ್ತ ತಾಯಿ ಮರೆತಂತೆ, ಕನ್ನಡ ಉಳಿಸುವ ಬೆಳೆಸುವ ಸಂಘ- ಸಂಸ್ಥೆ ಬಲವರ್ಧನೆಯಾಗಲಿ. ನಾವೆಲ್ಲ ಭಾರತೀಯ ಸಂಸ್ಕೃತಿ, ಪಾರಂಪರೆ ಮೈಗೂಡಿಸಿಕೊಂಡ ಭಾರತೀಯ ಸುಪುತ್ರರು ಎಂದು ನುಡಿದರು.
" ದೇಶವೆಂದರೆ ಮಣ್ಣಲ್ಲ ಎಂಬುದನ್ನು ಜನರು ಮೊದಲು ಅರಿಯೋಣ " ಗಡಿಯಲ್ಲಿ ಭಾಷೆ ಸೌಹಾರ್ದ ಸಾದ್ಯತೆಗಳು ವಿಷಯ ಕುರಿತು ಸ. ರಘುನಾಥ್ ಮಾತನಾಡಿ, ದೇಶವೆಂದರೆ ಮಣ್ಣಲ್ಲ ಎಂಬುದನ್ನು ಜನರು ಮೊದಲು ಅರಿಯೋಣ. ಭಾಷೆ ಎಂದಿಗೂ ಜಗಳ ಆಡುವುದಿಲ್ಲ, ಭಾಷೆಯನ್ನಿಟ್ಟುಕೊಂಡು ಜಗಳ ನಡೆದಿದೆ. ಗಡಿ ಭಾಗದಲ್ಲಿ ಆಡುವ ಭಾಷೆಯಲ್ಲಿ ನಾಮಪದ ಕನ್ನಡ, ಕ್ರಿಯಾ ಪದ ಅನ್ಯ ಭಾಷೆಯದ್ದಾಗಿರುತ್ತದೆ. ಅನ್ನವಾಚಾರ್ಯರು ತಮ್ಮ ಕೀರ್ತನೆಯಲ್ಲಿ ಅನೇಕ ಕನ್ನಡ ಪದಗಳ ಬಳಕೆ ಮಾಡಿರುವುದನ್ನು ನಾವೆಲ್ಲ ಕಾಣಬಹುದು. ಕೋಲಾರ ಭಾಗದಲ್ಲಿ ಎಂದು ಸಹ ಭಾಷೆ ಗಲಾಟೆ ನಡೆದಿಲ್ಲ, ಭಾಷೆಗಳು ಮತ್ತು ಜನರ ಮಧ್ಯದಲ್ಲಿ ಸೌಹಾರ್ದ ಅಡಗಿದೆ. ಕನ್ನಡದ ಗಡಿಯೊಳಗಿನ ಅನ್ಯ ಭಾಷೆ ತನ್ನತನವನ್ನು ಕಳೆದುಕೊಳ್ಳುವಂತೆ, ಗಡಿಯಾಚೆ ಇರುವ ಕನ್ನಡ ತನವನ್ನು ಕಳೆದುಕೊಳ್ಳಲಿದೆ. ಇಂದಲ್ಲ ಎಂದೆಂದೂ ಭಾಷೆಗಳ ಅವಸಾನ ಸಾಗಿದೆ. ಭಾಷೆ, ಸಂಸ್ಕೃತಿ ಕುರಿತು ಕಠಿಣ ನಿಲುವು ನಿರ್ಧಾರ ತೆಗೆದುಕೊಳ್ಳಬೇಕಿದೆ. ಬೆಳಗಾವಿಯನ್ನು ರಾಜ್ಯದ ಉಪ ರಾಜಧಾನಿಯಾಗಿಸಬೇಕು ಎಂದರು.
ಕನ್ನಡ ಕಟ್ಟುವಲ್ಲಿ ಹೊರನಾಡ ಕನ್ನಡಿಗರ ಪಾತ್ರ ವಿಷಯ ಕುರಿತು ಡಾ. ಈಶ್ವರ ಅಲೆವೂರು ಮಾತನಾಡಿ, ಅನ್ನ ಕೊಡದ ಭಾಷೆ ಎಂದಿಗೂ ಉಳಿಯದು ಎಂದು ನಾವೆಲ್ಲ ಅರಿಯಬೇಕು. ಹೊರ ರಾಜ್ಯದಲ್ಲಿ ಕನ್ನಡ ಉಳಿದಿರುವುದು ಕೇವಲ ಅಭಿಮಾನಿಗಳಿಂದ. ಹೊರ ರಾಜ್ಯಗಳಲ್ಲಿ ಮಾಹಿತಿ ಕೇಂದ್ರ ತೆರೆಯಬೇಕು. ಹೊರನಾಡ ಸಂಘ ಸಂಸ್ಥೆ ಅಭಿವೃದ್ಧಿಗೆ ಅನುದಾನ ನೀಡಬೇಕು. ಹೊರನಾಡ ಕನ್ನಡ ಅಭಿವೃದ್ದಿ ಪ್ರಾಧಿಕಾರ ರಚನೆಯಾಗಬೇಕು. ಶಿಕ್ಷಣ ಉತ್ತೇಜನಕ್ಕೆ ವಿಶೇಷ ಅನುದಾನ, ಮುಂಬೈ ಕನ್ನಡ ಡಿಪ್ಲೋಮ ಕೋರ್ಸ್ ಅಭಿವೃದ್ದಿ ಸೇರಿ ಎಲ್ಲರೂ ಡಿಪ್ಲೋಮ ಕನ್ನಡಕ್ಕೆ ಉತ್ತೇಜನ ಅತ್ಯಗತ್ಯ ಎಂದು ಹೇಳಿದರು.
ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...
ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...
ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇಯ ದಿನದ ಒಂಭತ್ತನೇ ಗೋಷ್ಠಿಯು ಕನಕ ಶರೀಫ-ಸರ್ವಜ್ಞ ಪ್ರದಾನ...
©2024 Book Brahma Private Limited.