Date: 08-01-2023
Location: ಹಾವೇರಿ
ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವೇದಿಕೆಯಲ್ಲಿ ಬಸವರಾಜ ಬೊಮ್ಮಾಯಿ ಅವರ ಗೌರವ ಉಪಸ್ಥಿತಿಯಲ್ಲಿ ನಡೆಯಿತು. ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಸಾಹಿತ್ಯ ಪರಂಪರೆಯ ಕುರಿತ ಹಲವಾರು ವಿಚಾರಗಳಿಗೆ ವೇದಿಕೆಯು ಸಾಕ್ಷಿಯಾಯಿತು.
ಸಾಹಿತ್ಯ ಅನ್ನುವುದು ರೋಗಗ್ರಸ್ತ ಮನಸ್ಸುಗಳಿಗೆ ಚೈತನ್ಯ ನೀಡುತ್ತದೆ: ಸಾಹಿತಿ ದೊಡ್ಡರಂಗೇಗೌಡ, “ಕನ್ನಡ ಮನಸ್ಸುಗಳು ನಿರಂತರವಾಗಿ ಹಾವೇರಿ ಸಮ್ಮೇಳನಕ್ಕೆ ದುಡಿದಿದ್ದೀರಿ. ಸಾಹಿತ್ಯ ಅನ್ನುವುದು ರೋಗಗ್ರಸ್ತ ಮನಸ್ಸುಗಳಿಗೆ ಕಾಯಕಲ್ಪದ ಹುಮ್ಮಸ್ಸು, ಚೈತನ್ಯವನ್ನು ನೀಡುತ್ತದೆ. ಸಾಹಿತ್ಯ ಕೇವಲ ಅಧ್ಯಯನವನ್ನು ಮಾತ್ರ ಕಲಿಸುವುದಿಲ್ಲ, ನಮ್ಮ ವ್ಯಕ್ತಿತ್ವದ ನಿರ್ಮಾಣವನ್ನು ಕೂಡ ಮಾಡುತ್ತದೆ. ಶಿಕ್ಷಣದಲ್ಲಿನ ಸಾಹಿತ್ಯದ ಅಧ್ಯಯನ ಪರಿಪೂರ್ಣತೆಯೆಡೆಗೆ ಕರೆದೊಯ್ಯುತ್ತದೆ. ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ. ಸಾಹಿತ್ಯ ಸಮ್ಮೇಳನಗಳು ಇನ್ನಷ್ಟು ಎತ್ತರಕ್ಕೆ ಕನ್ನಡ ಸಾಹಿತ್ಯವನ್ನು ಬೆಳೆಸುತ್ತಿದೆ. ಜನರಲ್ಲಿ ಸಾಹಿತ್ಯದ ಅರಿವನ್ನು ಮೊಳಗಿಸುವ ಕೆಲಸವನ್ನು ಮಾಡುತ್ತಿದೆ”.
ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಸಾಹಿತಿಗಳ ಭಾಷೆ ಕನ್ನಡ: ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಕನ್ನಡದ ಬಳಗ ಇಡೀ ವಿಶ್ವ ಮಾನ್ಯವಿರುವಂತಹ ಬಳಗ. ನಾವೆಲ್ಲರೂ ಸೇರಿದರೆ ಕನ್ನಡ. ಒಬ್ಬರಿಂದ ಕನ್ನಡವಾಗುವುದಿಲ್ಲ. ಜನಸಾಮಾನ್ಯರೆಲ್ಲರೂ ಕನ್ನಡಕ್ಕೆ ಕೈ ಎತ್ತಿದಾಗ ಕನ್ನಡ ಬಳಗವಾಗುತ್ತದೆ, ಕನ್ನಡದ ಬೆಳಕು ಸಿಗುತ್ತದೆ. ಕರ್ನಾಟಕದ ಸಾಹಿತ್ಯ ಪರಿಷತ್ತಿನ ಉದ್ದೇಶವೇ ಅದು. ಕನ್ನಡದ ಸಾಹಿತ್ಯ ಲೋಕ ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಉತ್ಕೃಷ್ಟವಾದ ಸಾಹಿತ್ಯವನ್ನು ರಚನೆ ಮಾಡಿದೆ. ಕನ್ನಡ ಭಾಷೆಗೆ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಇಡೀ ಭಾರತ ದೇಶ ಗುರುತಿಸಿದೆ. ಜನಸಾಮಾನ್ಯರ ಚಿಂತನೆ ಅತ್ಯಂತ ಶ್ರೇಷ್ಠ ಸಾಹಿತ್ಯವಾಗಿ ಕನ್ನಡನಾಡಿನಲ್ಲಿ ವಿಜೃಂಭಿಸುತ್ತಿದೆ. ಶ್ರೇಷ್ಠ ಸಾಹಿತ್ಯ ಚಿಂತನೆಗಳು ಜನಸಾಮಾನ್ಯರಿಗೆ ಮುಟ್ಟುತ್ತಿದೆ. ಕನ್ನಡ ಭಾಷೆಯು ಸ್ಪಷ್ಟತೆ, ನಿಖರತೆ ಹಾಗೂ ಪ್ರಖರತೆಯಿಂದ ಕೂಡಿದೆ. ಸಾಹಿತ್ಯಯೆಂದರೇ ಮನಸ್ಸು ಭಾವನೆಗಳ ಅಭಿವ್ಯಕ್ತಿ. ಅದು ಸತ್ಯದ ದರ್ಶನವನ್ನು ಮಾಡುತ್ತದೆ. ಜ್ಞಾನ, ವಿಜ್ಞಾನ, ಕಲೆ, ಸಂಸ್ಕೃತಿ ಹಾಗೂ ಬದುಕಿನ ಅನುಭವಗಳೊಂದಿಗೆ ಕೂಡಿದ ಕನ್ನಡ ಸಾಹಿತ್ಯ ಸತ್ಯದ ದರ್ಶನ.”
ಜಾತಿ, ಧರ್ಮ ಆಧಾರಿತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತಿಲ್ಲ: ಮಹೇಶ ಜೋಶಿ: “ಸಂತ ಶಿಶುನಾಳ ಶರೀಫರ ಊರಿನಲ್ಲಿ ನಾನು ನಿಂತಿದ್ದೇನೆ. ಮಸೀದಿ, ಮಂದಿರ, ಪುರಾಣ, ಕುರಾಣ ಸಮನ್ವಯತೆಯನ್ನು ಸಮಚಿತ್ತದಿಂದ ನೋಡಿದಂತಹ ಮಹಾನ್ ಸಂತರು ಹುಟ್ಟಿದ ಊರಿದು. ಇಂತಹ ಊರಿನಲ್ಲಿ ಸಮ್ಮೇಳನ ನಡೆಯುತ್ತಿರುವುದೇ ನನಗೆ ವಿಶೇಷ. ಇದೇ ಸಮ್ಮೇಳನದಲ್ಲಿ ಅತೀ ಹೆಚ್ಚು ಮುಸ್ಲೀಮರಿಗೂ ನಾವು ವೇದಿಕೆಯನ್ನು ಕೊಟ್ಟಿದ್ದೇವೆ. ನಾವು ಜಾತಿ, ಧರ್ಮ ಆಧಾರಿತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತಿಲ್ಲ. ಇಲ್ಲಿ ಕನ್ನಡವೇ ಎಲ್ಲ. ಹಾಗಾಗಿ ಮೊದಲು ಕನ್ನಡಿಗನಾಗು ಎನ್ನುವುದೇ ನನ್ನ ಆಶಯ”.
ನೈತಿಕ ಮೌಲ್ಯ ಹೆಚ್ಚುವಂತಹ ಸಾಹಿತ್ಯ ಬೇಕು: ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, “ಕರ್ನಾಟಕದಲ್ಲಿ ನಡೆಯುವ ಸಮ್ಮೇಳನಗಳಿಗೆ ಉದಾಹರಣೆಯಾಗಿ ಹಾವೇರಿಯ ಸಮ್ಮೇಳನ ಬಹಳ ಉತ್ತಮವಾಗಿ ನಡೆಯುತ್ತಿದೆ. ಯಾವುದೇ ರೀತಿಯ ವಿವಾದಗಳು ನಡೆಯದೇ, ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಯಲು ಕಾರಣಿಕರ್ತರಾದವರು ದೊಡ್ಡರಂಗೇಗೌಡರು. ದೊಡ್ಡರಂಗೇಗೌಡರ ಸಾಹಿತ್ಯದ ಕೊಡುಗೆ, ಪ್ರಾಧ್ಯಾಪಕರಾಗಿ ಮಾಡಿದ ಕೆಲಸ ಕಾರ್ಯ ನಮಗೆಲ್ಲಾ ಮಾದರಿಯಾಗಿದೆ. ಹಾವೇರಿಯ ಸಮ್ಮೇಳನ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಸಮ್ಮೇಳನವಾಗಿ ಮೂಡಿಬಂದಿದೆ”.
“ಸಾಹಿತ್ಯ ಮಾತ್ರ ಸದಾ ಕಾಲ ಜಗತ್ತಿನಲ್ಲಿ ಶಾಶ್ವತವಾಗಿದೆ. ನಮ್ಮನ್ನು ಉತ್ತಮ ಮಾರ್ಗಕ್ಕೆ ಕೊಂಡೊಯ್ಯಬಲ್ಲ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯ ಇರುವಂತಹದ್ದು ನಾಡು, ಮನುಕುಲ ಒಂದಾಗಿಸುವುದಕ್ಕೆ ಹೊರತು ಮನುಷ್ಯನ ಬೇರನ್ನು ಕಡಿದು ಹಾಕುವುದಕ್ಕಲ್ಲ. ನಾವು ಬಳಸುವ ಭಾಷೆ, ನಮ್ಮ ಹಾವ ಭಾವಗಳಿಂದ ಸಮಾಜದಲ್ಲಿ ಮಾನಸಿಕ ಕ್ಷೋಭೆ ಉಂಟಾಗುವುದನ್ನು ನೋಡಬಹುದು. ಸಾಹಿತ್ಯ ಕನ್ನಡ ನಾಡು, ನೆಲ, ಜಲ ಹಾಗೂ ಐತಿಹಾಸಿಕ ವಿಚಾರವನ್ನು ತಿಳಿಸುವಂತೆ ಬೆಳೆಯಲಿ. ನೈತಿಕ ಮೌಲ್ಯ ಜವಾಬ್ಧಾರಿ ಹೆಚ್ಚುವಂತೆ ಪ್ರತೀ ವ್ಯಕ್ತಿಯಲ್ಲಿ ಸಾಹಿತ್ಯವಿರಬೇಕು. ಮನುಷ್ಯನನ್ನು ಸರಿ ದಾರಿಗೆ ಕೊಂಡೊಯ್ಯಬಲ್ಲ ಸಾಹಿತ್ಯದ ಅಗತ್ಯತೆ ಭಾರತಕ್ಕಿದೆ".
ವಿದೇಶಿ ವ್ಯಾಮೋಹಕ್ಕೆ ಬಲಿಯಾಗುತ್ತಿದೆ ನಮ್ಮ ದೇಶ: ಕೇಂದ್ರ ಇಂಧನ ಇಲಾಖೆ ಸಚಿವ ಪ್ರಹ್ಲಾದ ಜೋಶಿ, “ಹಾವೇರಿ ಪುಣ್ಯದ ನೆಲ. ಇಲ್ಲಿ ಮಹಾನ್ ಸಂತರು ಜನ್ಮ ತಾಳಿದ್ದಾರೆ. ಪ್ರಸ್ತುತ ದಿನಗಳಲ್ಲಿ ದಶಕಗಳ ಇತಿಹಾಸವಿರುವ ಕನ್ನಡವನ್ನು ಮರೆತು ವಿದೇಶಿ ವ್ಯಾಮೋಹದಲ್ಲಿ ನಮ್ಮ ದೇಶದ ವ್ಯವಸ್ಥೆ ನಡೆಯುತ್ತಿದೆ. ಸ್ಥಳೀಯ ಭಾಷೆಯಲ್ಲಿ ಮೆಡಿಕಲ್ ಎಜುಕೇಶನ್ನು ಅನ್ನು ಕೊಡುವ ಚರ್ಚೆ ನಡೆದಾಗ ಇದರ ಕುರಿತು ಬಹಳಷ್ಟು ವಿರೋಧ ಚರ್ಚೆಗಳು ನಡೆದವು. ಇದರಿಂದ ನಮ್ಮ ದೇಶ ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗುತ್ತಿರುವುದನ್ನು ನಾವು ಗಮನಿಸಬಹುದು. ನಮ್ಮ ಮಾನಸಿಕತೆಯ ಗುಲಾಮಿತನವನ್ನು ನಾವು ಇದರಿಂದಲೇ ಅರಿಯಬಹುದು. ಬೇರೆ ಭಾಷೆಗಳ ಕಲಿಕೆಯ ಕುರಿತು ನನ್ನ ವಿರೋಧವಿಲ್ಲ. ಆದರೆ ಕನ್ನಡ ಭಾಷೆಯ ಕುರಿತು ಅಭಿಮಾನ ಇರಲಿ. ನಾನೊಬ್ಬ ಕನ್ನಡ ಶಾಲೆಯಿಂದ ಬಂದಿದ್ದೇನೆ ಎಂಬ ಹೆಮ್ಮೆ ನನಗಿದೆ”.
ರಾಜಕೀಯ ವ್ಯಕ್ತಿಗಳು ಸಾಹಿತಿಗಳಾದರೆ ಕಷ್ಟ: ವಿರೋಧ ಪಕ್ಷದ ಸದಸ್ಯ ಬಿ. ಕೆ. ಹರಿಪ್ರಸಾದ್ ಮಾತನಾಡಿ, “ಸಾಹಿತಿಗಳು, ಚಿಂತಕರು, ಜನರು ತಪ್ಪು ಮಾಡಿದ ರಾಜಕಾರಣಿಗಳನ್ನು ತಿದ್ದಿ ಬುದ್ಧಿ ಹೇಳುವ ಕೆಲಸವನ್ನು ಮಾಡಬೇಕಿದೆ. ಕನ್ನಡ ಭಾಷೆ, ಸಾಹಿತ್ಯ ಹಲವಾರು ದಶಕಗಳ ಪರಂಪರೆಯನ್ನು ಒಳಗೊಂಡಿದೆ. ರಾಜಕೀಯ ಪಕ್ಷದ ಕೆಲಸವನ್ನು ಸಾಹಿತಿಗಳು, ಚಿಂತಕರು, ಬುದ್ಧಿಜೀವಿಗಳು ಮಾಡಬೇಕು. ಅವರೇ ರಾಜಕಾರಣಿಗಳಾದರೆ ಗತಿ ಏನು ಎಂಬುದನ್ನು ನಾವು ಯೋಚಿಸಬೇಕು. ಜಾತಿ, ಧರ್ಮ ತಾರತಮ್ಯ ಮಾಡುವ ಸಮಾಜದ ಮಧ್ಯೆ ನಾವಿದ್ದೇವೆ. ಒಂದು ಜಾತಿ, ಧರ್ಮದ ಮತಗಳನ್ನು ರಾಜಕೀಯ ವ್ಯಕ್ತಿಯೊಬ್ಬ ಬೇಡವೆಂದು ಹೇಳಬಹುದು. ಆದರೆ ಸಾಹಿತ್ಯ , ಸಂಸ್ಕೃತಿ, ಸಂಘಟನೆಗಳು ಹಾಗೆ ಹೇಳಲು ಸಾಧ್ಯವಿಲ್ಲ. ರಾಜಕಾರಣವನ್ನು ರಾಜಕಾರಣಕ್ಕೆ ಬಿಟ್ಟು ಬಿಡಿ. ರಾಜಕೀಯ ವ್ಯಕ್ತಿಗಳು ಸಾಹಿತಿಗಳಾದರೆ ಕಷ್ಟ. ಕನ್ನಡ ಸಾಹಿತ್ಯವು ಇಂತಹ ಕ್ಷುಲ್ಲಕ ವ್ಯವಸ್ಥೆಗೆ ಒಳಪಡಬಾರದು. ನೆಲ, ಜಲ, ಭಾಷೆ ಹಾಗೂ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆ ಆಗುವಂತಹ ಒಂದು ವೇದಿಕೆಯಾಗಬೇಕು. ಹಲವು ರೀತಿಯ ಬೆದರಿಕೆಗಳನ್ನು ಅನುಭವಿಸುತ್ತಿರುವ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದರು ಕೂಡ, ಕೇಂದ್ರ ಸರಕಾರ ನ್ಯಾಯಬದ್ಧವಾದ ಅನುದಾನವನ್ನು ನೀಡದೆ ನಿರ್ಲಕ್ಷ್ಯ ಮಾಡುತ್ತಿದೆ.”
ಕನ್ನಡ ಸಾಹಿತ್ಯವನ್ನು ಉಳಿಸಿದವರು ಜನಸಾಮಾನ್ಯರು: ವಿಶ್ರಾಂತ ಕುಲಪತಿ ಬಿ.ಎ. ವಿವೇಕ ರೈ ಮಾತನಾಡಿ, “ಕನ್ನಡಕ್ಕೆ ಎಂದಿಗೂ ನಾಶವಿಲ್ಲ. ಕನ್ನಡವನ್ನು ಉಳಿಸಿದವರು ಸಾಹಿತಿಗಳಲ್ಲ, ಜನಸಾಮಾನ್ಯರು. ಸಾವಿರಾರು ವರ್ಷಗಳಿಂದ ಕನ್ನಡವನ್ನು ಮಾತನಾಡುತ್ತ ಕನ್ನಡದ ಕಾಯಕವನ್ನು ಮಾಡಿದ ನೀವು ಕನ್ನಡದ ಬೆಳವಣಿಗೆಗೆ ಕಾರಣರಾದವರು. ಸಮ್ಮೇಳನದಲ್ಲಿ ಬರುವಂತಹ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಅವುಗಳನ್ನು ಹೇಗೆ ಕಾರ್ಯರೂಪಕ್ಕೆ ತರಬೇಕು ಎಂಬುದರ ಕಡೆಗೆ ನಮ್ಮ ಚಿತ್ತವಿರಬೇಕು. ಆಗ ಕನ್ನಡದ ಬೆಳವಣಿಗೆ ಸಾಧ್ಯವಾಗುತ್ತದೆ. ಕಾಲ ಕಾಲಕ್ಕೆ ಹೊಸತನವನ್ನು ಕಾಣುವ ಶಕ್ತಿ ಕನ್ನಡಕ್ಕಿದ್ದು, ಕನ್ನಡವೆಂದರೆ ಶಾಂತಿಯ ಸ್ವರೂಪವೆಂದೇ ಹೇಳಬಹುದು”.
ಅರೆಬೈಲ್ ಶಿವರಾಮ ಹೆಬ್ಬಾರ್ ಆಶಯ ನುಡಿಗಳನ್ನಾಡಿ, “ಪಕ್ಷಾತೀತವಾಗಿ ಹಾವೇರಿ ಸಮ್ಮೇಳನದಲ್ಲಿ ಸೇರಿ ಕನ್ನಡ ಸಾಹಿತ್ಯ, ಭಾಷೆಯ ತೇರನ್ನು ಎಳೆದಿದ್ದೇವೆ. ಇದೇ ಈ ಕಾರ್ಯಕ್ರಮದ ಯಶಸ್ಸು ಕೂಡ ಆಗಿದೆ. ಕನ್ನಡದ ರಥ ಮುಂದಿನ ದಿನಗಳಲ್ಲಿ ಕೂಡ ಕರ್ನಾಟಕದುದ್ದಕ್ಕೂ ಪಸರಿಸಿ, ಇನ್ನಷ್ಟು ಸಮ್ಮೇಳನಗಳು ನಡೆಯಲಿ ಎಂಬುದೇ ನನ್ನ ಆಶಯ”.
- ರಂಜಿತಾ ಸಿದ್ಧಕಟ್ಟೆ
ಕಾರ್ಯಕ್ರಮದ ಫೊಟೋಗಳು...
ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...
ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...
ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇಯ ದಿನದ ಒಂಭತ್ತನೇ ಗೋಷ್ಠಿಯು ಕನಕ ಶರೀಫ-ಸರ್ವಜ್ಞ ಪ್ರದಾನ...
©2024 Book Brahma Private Limited.