ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

Date: 15-12-2020

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಇಂಗ್ಲೆಂಡ್ ನ ಇನ್ಸ್ಟಾಲೇಷನ್ ಆರ್ಟ್ ಮತ್ತು ಸ್ಟ್ರೀಟ್ ಆರ್ಟ್ ಕಲಾವಿದ ಬಾಂಕ್ಸಿ ಅವರ ಕಲೆಯ ಕುರಿತು ಬರೆದಿದ್ದಾರೆ.

ಕಲಾವಿದ: ಬಾಂಕ್ಸಿ (Banksy)
ಜನನ: ?
ಶಿಕ್ಷಣ: ?
ವಾಸ: ಲಂಡನ್, ಇಂಗ್ಲೆಂಡ್
ಕವಲು: ಬೀದಿಯ ಗೋಡೆ ಚಿತ್ರಗಳು, ಪೇಂಟಿಂಗ್, ಕಿರುಚಿತ್ರ
ವ್ಯವಸಾಯ: ಇನ್ಸ್ಟಾಲೇಷನ್ ಆರ್ಟ್, ಸ್ಟ್ರೀಟ್ ಆರ್ಟ್

ಬಾಂಕ್ಸಿ ಅವರ ಇನ್ಸ್ಟಾಗ್ರಾಂ ಖಾತೆ ಇಲ್ಲಿದೆ:

ಹೆಚ್ಚಿನಂಶ ಕಲಾವಿದ ಬಾಂಕ್ಸಿಯ ವಿಕ್ಷಿಪ್ತತೆಯನ್ನು ಈ ಘಟನೆಗಿಂತ ಚೆನ್ನಾಗಿ ವಿವರಿಸಲು ಸಾಧ್ಯವಿಲ್ಲ. 2018ರ ಅಕ್ಟೋಬರ್ ನಲ್ಲಿ ಬಾಂಕ್ಸಿ ಅವರ Girl with Balloon ಚಿತ್ರ 9.8 ಕೋಟಿ ರೂ. ಗಳಿಗೆ ಹರಾಜಾಗುತ್ತದೆ. ಹರಾಜುಕಟ್ಟೆಯಲ್ಲಿ ಹರಾಜಾಗಿರುವುದನ್ನು ಪ್ರಕಟಿಸುತ್ತಲೇ ಆ ಚಿತ್ರದ ಫ್ರೇಮಿನಲ್ಲಿ ಹುದುಗಿಸಿ ಇಡಲಾಗಿದ್ದ ಕಾಗದ ಹರಿಯುವ ಯಂತ್ರ (ಶ್ರೆಡರ್) ಆ ಚಿತ್ರವನ್ನು ಚೂರುಚೂರು ಮಾಡುತ್ತದೆ. ಅದನ್ನು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ ಕಲಾವಿದ ಬಾಂಕ್ಸಿ: “the urge to destroy is also a creative urge.” ಎನ್ನುತ್ತಾರೆ!

1993ರಿಂದೀಚೆಗೆ ಬ್ರಿಟನ್ ನ ಬ್ರಿಸ್ಟಲ್ ನಗರದಲ್ಲಿ ಆರಂಭಿಸಿ ಈವತ್ತಿನ ತನಕ ಜಗತ್ತಿನ ಹಲವೆಡೆಗಳಲ್ಲಿ ಗೋಡೆಚಿತ್ರ (ಗ್ರಾಫಿಟಿ) ಬಿಡಿಸುತ್ತಿರುವ “ಬಾಂಕ್ಸಿ” ಯಾರೆಂಬುದು ಈ 30 ವರ್ಷಗಳಲ್ಲಿ ಈವತ್ತಿನ ತನಕವೂ ಕಲಾಜಗತ್ತಿಗೆ ಗೊತ್ತಿಲ್ಲ. ಆದರೆ ಆತನ ಚಿತ್ರಗಳು, ಹರಿತವಾದ ರಾಜಕೀಯ ವ್ಯಂಗ್ಯ ಜಗತ್ತಿನ ಗಮನವನ್ನು ಸೆಳೆಯುತ್ತಿದೆ. ಈ ಅನಾಮಧೇಯ ಕಲಾವಿದ ಯಾರೆಂಬುದರಿಂದ ಆರಂಭಿಸಿ, ಆತನದು ಚಿತ್ರವೋ ಅಥವಾ ಸಾರ್ವಜನಿಕ ಆಸ್ತಿಯನ್ನು ವಿರೂಪಗೊಳಿಸುವ ಪ್ರಯತ್ನವೋ ಎಂಬಲ್ಲಿನ ತನಕ ಬಾಂಕ್ಸಿ ಕುರಿತು ಕಲಾಜಗತ್ತಿನಲ್ಲಿ ಚರ್ಚೆ ನಡೆದಿದೆ. ಆದರೆ ಒಂದಂತೂ ಸತ್ಯ – ಕಲಾಜಗತ್ತು ಬಾಂಕ್ಸಿಯನ್ನು ನಿರ್ಲಕ್ಷಿಸುವ ಸ್ಥಿತಿಯಲ್ಲಿಲ್ಲ!

ತನ್ನ 18ನೇ ವಯಸ್ಸಿನಲ್ಲೇ DryBreadZ Crew ಎಂಬ ಹೆಸರಿನ ತಂಡದೊಂದಿಗೆ ರಸ್ತೆಗಳಲ್ಲಿ ಚಿತ್ರ ಬಿಡಿಸುತ್ತ ಓಡಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಬಾಂಕ್ಸಿ, ಸುಲಭವಾಗಿ, ಕ್ಷಿಪ್ರವಾಗಿ ರಸ್ತೆ ಚಿತ್ರಗಳನ್ನು ಬಿಡಿಸಲು ಕಂಡುಕೊಂಡದ್ದು ಸ್ಟೆನ್ಸಿಲ್ ಬಳಸುವ ಹಾದಿ. 2000ದ ಹೊತ್ತಿಗೆ ಬ್ರಿಸ್ಟಲ್ ನಗರದಿಂದ ಲಂಡನ್ ಗೆ ಬಂದ ಬಾಂಕ್ಸಿ, ಅಂತಾರಾಷ್ಟ್ರೀಯವಾಗಿ ಕೂಡ ಗುರುತಿಸಿಕೊಳ್ಳುತ್ತಾ ಹೋದರು. ಪ್ಯಾಲಸ್ತೀನ್, ವೆಸ್ಟ್ ಬ್ಯಾಂಕ್, ಬೆತ್ಲಹೇಂ ನಗರದ ಗೋಡೆಗಳಲ್ಲಿ ಅವರು ರಚಿಸಿದ ಬೀದಿ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಜಗತ್ಪ್ರಸಿದ್ಧಗೊಂಡವು. ಅವರ ಸ್ಕ್ರೀನ್ ಪ್ರಿಂಟ್ ಗಳು, ಸ್ಟೆನ್ಸಿಲ್ ಪೇಂಟಿಂಗ್ ಗಳಿಗೆ ದೊಡ್ಡ ಮಾರುಕಟ್ಟೆ ಕೂಡ ಇದ್ದು, ಹರಾಜುಕಟ್ಟೆಗಳಲ್ಲೂ ದಾಖಲೆ ಬರೆದಿದ್ದಾರವರು. ಈ ಬಾಂಕ್ಸಿ ನಿಜಕ್ಕೂ ಯಾರೆಂಬುದರ ಕುರಿತು ಕೂಡಾ ಚರ್ಚೆ ಇದ್ದು, ಬ್ರಿಸ್ಟಲ್ ನಲ್ಲಿ ಶಾಲೆಯಲ್ಲಿ ಕಲಿಯುತ್ತಿದ್ದಾಗ ಕಾರ್ಟೂನುಗಳನ್ನು ಬಿಡಿಸುತ್ತಿದ್ದ ರಾಬರ್ಟ್ ಗನಿನ್‌ಹ್ಯಾಮ್ ಅಥವಾ 3Dಹೆಸರಲ್ಲಿ ರಸ್ತೆ ಚಿತ್ರಗಳನ್ನು ಬರೆಯುತ್ತಿರುವ ರಾಬರ್ಟ್ ಡೆಲ್ ನೇಝ್ ಅವರಲ್ಲೊಬ್ಬರು “ಬಾಂಕ್ಸಿ” ಹೆಸರಲ್ಲಿ ಚಿತ್ರಗಳನ್ನು ರಚಿಸುತ್ತಿರಬಹುದೆಂದು ಮಾಧ್ಯಮಗಳಲ್ಲಿ ಸಂಶಯ ವ್ಯಕ್ತವಾದದ್ದಿದೆ.

2013ರಲ್ಲಿ ನ್ಯೂಯಾರ್ಕ್ ನಲ್ಲಿ ರೆಸಿಡೆನ್ಸಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಬಾಂಕ್ಸಿ, ಮಾರುವೇಷದಲ್ಲಿ ರಸ್ತೆಯಲ್ಲಿ ನಿಂತು ತನ್ನ ಎಂಟು ಕಪ್ಪು-ಬಿಳುಪು ಒರಿಜಿನಲ್ ಚಿತ್ರಗಳನ್ನು ತಲಾ $60 (ಅಂದಾಜು 400ರೂ.) ಗೆ ಮಾರಿದ್ದರು. ಮರುದಿನ ಅದು ತನ್ನವೇ ಎಂದು ಪ್ರಕಟಿಸಿದ್ದರು. ಮರುವರ್ಷ ಹಾಗೆ ಮಾರಿದ ಚಿತ್ರಗಳಲ್ಲೊಂದಾದ “ವಿನಿ ದ ಪೂ” ಲಂಡನ್ನಿನ ಬಾನಾಮ್ಸ್ ಹರಾಜುಕಟ್ಟೆಯಲ್ಲಿ 56,250 ಪೌಂಡ್ (ಅಂದಾಜು 57ಲಕ್ಷ ರೂ. ಗಳಿಸಿತ್ತು). 2017ರಲ್ಲಿ ಬೆತ್ಲಹೇಂ ನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆಂದು ತನ್ನ ಮೂರು ಚಿತ್ರಗಳನ್ನು ಹರಾಜು ಹಾಕಿ ಹಣ ಸಂಗ್ರಹಿಸಿಕೊಟ್ಟಿದ್ದ ಬಾಂಕ್ಸಿ, 2019ರ ಅಕ್ಟೋಬರ್ ನಲ್ಲಿ ಇಂಗ್ಲೆಂಡ್ ಯುರೋಪಿಯನ್ ಒಕ್ಕೂಟದಿಂದ ಹೊರಬರುವ ಬ್ರೆಕ್ಸಿಟ್ ಪ್ರಕ್ರಿಯೆಗೆ ಪ್ರತಿಕ್ರಿಯಿಸಿ ರಚಿಸಿದ “ಡೆವಾಲ್ವಡ್ ಪಾರ್ಲಿಮೆಂಟ್” ಪೇಂಟಿಂಗ್ ವಿವಾದದ ಅಲೆಯನ್ನೇ ಎಬ್ಬಿಸಿತ್ತು. ಇಂಗ್ಲಂಡಿನ ಪಾರ್ಲಿಮೆಂಟನ್ನು ಕೋತಿಗಳು ವಶಪಡಿಸಿಕೊಂಡಂತೆ ಬಿಂಬಿಸುವ ಈ ಚಿತ್ರ ಸೂದ್ ಬಿ ಹರಾಜುಕಟ್ಟೆಯಲ್ಲಿ $9.9ಮಿಲಿಯ (ಅಂದಾಜು 70ಕೋಟಿ ರೂ.)ಗಳಿಗೆ ಹರಾಜಾಯಿತು.

ಆಸ್ಟ್ರೇಲಿಯಾ, ಫ್ರಾನ್ಸ್, ಇಟಲಿ, ಅಮೆರಿಕ, ಕೆನಡಾ, ಜಮೈಕಾ, ಇಸ್ರೇಲ್ ಗಳಲ್ಲಿ ಅವರು ರಸ್ತೆ ಕಲಾಕೃತಿಗಳನ್ನು ರಚಿಸಿದ್ದಾರೆ. ಅಮೆರಿಕದ ಡಿಸ್ನಿಲ್ಯಾಂಡನ್ನು ಗೇಲಿ ಮಾಡುವ “Dismaland” ಕೂಡ ಅವರ ಸುಪ್ರಸಿದ್ಧ ಕಲಾ ಇನ್ಸ್ಟಾಲೇಷನ್ ಗಳಲ್ಲಿ ಒಂದು. ಆ ಯೋಜನೆಯ ಜೊತೆ ಜಗತ್ತಿನ ಹಲವು ಪ್ರಮುಖ ಕಲಾವಿದರೂ ಕೈ ಜೋಡಿಸಿದ್ದರು. 2010ರಲ್ಲಿ ಟೈಮ್ ಪತ್ರಿಕೆ ಆರಿಸಿದ ಜಗತ್ತಿನ 100ಮಂದಿ ಪವರ್ ಫುಲ್ ವ್ಯಕ್ತಿಗಳ ಪಟ್ಟಿಯಲ್ಲಿ ಒಬಾಮಾ, ಸ್ಟೀವ್ ಜಾಬ್ಸ್, ಲೇಡಿ ಗಾಗಾ ಜೊತೆ ಬಾಂಕ್ಸಿ ಹೆಸರೂ ಇತ್ತು. ಅವರು ನಿರ್ಮಿಸಿದ ಡಾಕ್ಯುಮೆಂಟರಿ Exit Through the Gift Shop ಅಕಾಡಮಿ ಅವಾರ್ಡಿಗೆ ನಾಮಿನೇಟ್ ಕೂಡ ಆಗಿತ್ತು. ಬಾಂಕ್ಸಿ ನಡೆಸುವ ಮಾರ್ಕೆಟಿಂಗ್ ಸಂಸ್ಥೆ Pest Control ಅವರ ಪರಿಚಯ ಸಾರ್ವಜನಿಕರ ಗಮನಕ್ಕೆ ಬರದಂತೆ ಅಡ್ಡಲಾಗಿದ್ದು, ಅವರ ಎಲ್ಲ ಸಾರ್ವಜನಿಕ ವ್ಯವಹಾರಗಳನ್ನು ನಿರ್ವಹಿಸುತ್ತದೆ.

ಕೋತಿಗಳು, ಮನುಷ್ಯರು ಮತ್ತು ಇಲಿಗಳನ್ನು ಹೆಚ್ಚಾಗಿ ತನ್ನ ಚಿತ್ರಗಳಲ್ಲಿ ಬಿಂಬಿಸುವ ಬಾಂಕ್ಸಿ ಈಗ ಕೊರೊನಾ ಕಾಲದಲ್ಲಿ ಕ್ವಾರಾಂಟೈನ್ ಇದ್ದು ರಚಿಸಿದ ತನ್ನ ಶೌಚಾಲಯದಲ್ಲಿ ಇಲಿಗಳ ಚಿತ್ರ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಸೂದ್ ಬಿ ಹರಾಜುಕಟ್ಟೆಯಲ್ಲಿ ಹರಾಜಾದ ಬಾಂಕ್ಸಿ ಚಿತ್ರವನ್ನು ಆತ ಶ್ರೆಡರ್ ನಲ್ಲಿ ಹರಿದು ಹಾಕಿದ ವೀಡಿಯೊ:

ಬಾಂಕ್ಸಿ ತಯಾರಿಸಿದ ಡಾಕ್ಯುಮೆಂಟರಿ ಚಿತ್ರ ಎಕ್ಸಿಟ್ ಥ್ರೂ ತಿ ಗಿಫ್ಟ್ ಶಾಪ್ ಇಲ್ಲಿದೆ.

ಚಿತ್ರ ಶೀರ್ಷಿಕೆಗಳು

ಬಾಂಕ್ಸಿ ಅವರ . A mural by Banksy at Dismaland, Weston-super-Mare, England, (2015)

ಬಾಂಕ್ಸಿ ಅವರ ಬೆತ್ಲಹೇಂ ಗೋಡೆ ಚಿತ್ರ

ಬಾಂಕ್ಸಿ ಅವರ Basquiat being stopped and frisked outside the Barbican Centre (2017)

ಬಾಂಕ್ಸಿ ಅವರ devolved parliament (2018)

ಬಾಂಕ್ಸಿ ಅವರ dismaland ಶಿಲ್ಪ (2015)

ಬಾಂಕ್ಸಿ ಅವರ Girl with Balloon (2002), stenciled mural by Banksy formerly on Waterloo Bridge in London; the work was later removed

ಬಾಂಕ್ಸಿ ಅವರ Naplam Stowe Gallery, (2004)

ಬಾಂಕ್ಸಿ ಅವರ ಕ್ವಾರಂತೈನ್ ಕಾಲದ ವರ್ಕ್ ಫ್ರಂ ಹೋಂ (2020)

ಬಾಂಕ್ಸಿ ಅವರ ವೆಬ್ ಸೈಟಿನಲ್ಲಿರುವ ಏಕೈಕ ಚಿತ್ರ (2020)

ಬಾಂಕ್ಸಿ ಅವರ Well Hung Lover mural by Banksy in Bristol, England; the blue paint was added by vandals (2006)

ಬಾಂಕ್ಸಿ ಅವರ quarantine art (2020)

ಈ ಅಂಕಣದ ಹಿಂದಿನ ಬರೆಹಗಳು:

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...

ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ

14-11-2024 ಬೆಂಗಳೂರು

"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...