ಜನಪದ ಕತೆಗಳ ಒಡಲನ್ನು ಒಳಗೊಂಡ ನಾಟಕ : ಕೋಟಿಗಾನಹಳ್ಳಿ ರಾಮಯ್ಯ            


‘ನಾಯಿತಿಪ್ಪ' ರಂಗಾಯಣದ ಮೊದಲ ಚಿಣ್ಣರ ಮೇಳಕ್ಕಾಗಿ ಬರೆದ ಆರು ನಾಟಕಗಳಲ್ಲಿ ಒಂದು. ಇದುವರೆಗೂ ನೂರಾರು ಪ್ರದರ್ಶನಗಳನ್ನು ಕಂಡಿದೆ. ಹೆಸರಾಂತ ನಾಟಕಕಾರ ಇಕ್ಬಾಲ್ ಅಹ್ಮದ್ ಈ ನಾಟಕದ ಸ್ಫೂರ್ತಿ ಎನ್ನುತ್ತಾರೆ ಲೇಖಕ ಕೋಟಿಗಾನಹಳ್ಳಿ ರಾಮಯ್ಯ. ಅವರ “ನಾಯಿತಿಪ್ಪ" ಕೃತಿಗೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ...

‘ನಾಯಿತಿಪ್ಪ' ರಂಗಾಯಣದ ಮೊದಲ ಚಿಣ್ಣರ ಮೇಳಕ್ಕಾಗಿ ಬರೆದ ಆರು ನಾಟಕಗಳಲ್ಲಿ ಒಂದು. ಇದುವರೆಗೂ ನೂರಾರು ಪ್ರದರ್ಶನಗಳನ್ನು ಕಂಡಿದೆ. ಹೆಸರಾಂತ ನಾಟಕಕಾರ ಇಕ್ಬಾಲ್ ಅಹ್ಮದ್ ಈ ನಾಟಕದ ಸ್ಫೂರ್ತಿ. ಬಹುಶಃ ಇಕ್ಬಾಲ್ ನಿಂದಾಗಿಯೇ ನಾನು ಮಕ್ಕಳ ನಾಟಕ ರಚನೆಗೆ ದುಮುಕಿದ್ದು, ಆನಂತರ ಬೆಲ್ಲೂರು ರಾಮಕೃಷ್ಣ, ಹಾಲ್ಕುರಿಕೆ ಸೋಮಶೇಖರ್, ಕೆ.ಆರ್ ದಿಶಾ, ಮುಖ್ಯವಾಗಿ ಶಂಕರಯ್ಯ ಘಂಟಿ ನೆನಪು ಮಾಸಿದೆಯಾದ್ದರಿಂದ ಈ ಯಾದಿಗೆ ಸೇರಬೇಕಾದ ಹಲವು ನಿರ್ದೇಶಕರ ಹೆಸರು ಬಿಟ್ಟಿರಬಹುದು. ಅವರಲ್ಲಿ ಕ್ಷಮೆ ಕೋರುತ್ತೇನೆ. ತಿಪ್ಪನನ್ನು ಭಾರತದಾದ್ಯಂತ ತಿರುಗಾಡಿಸಿದವರು ಮಂಡ್ಯ ರಮೇಶ್ ಮತ್ತು ಗೆಳೆಯರು.

ಒಂದೇ ಮಾತಿನಲ್ಲಿ ಹೇಳುವುದಾದರೆ ನೆನ್ನೆಲ್ಲ ಮುಂದಿನ ನಾಟಕಗಳ ಕೇಂದ್ರ ಪಾತ್ರವೇ ತಿಪ್ಪ. the Hope. ಚಿಗುರು ಇನ್ನೊಂದು ಪಾತ್ರವಾದ ಅಜ್ಜಿ: ಅನಾದಿ ಬೇರು, ರತ್ನಪಕ್ಷಿ, ಕಾಗೆಕಣ್ಣು ಇರುವೆ ಬಲ, ದ್ಯಾವರಪ್ಪನ ದಾರಿ.. ಹೀಗೆ ಹಲವು ಮಜಲುಗಳಲ್ಲಿ ಜೀವಿಸತೊಡಗಿದ ತಿಪ್ಪ, ನನ್ನ “ಲೆಟ್ ಪಾಲಿಡ್ರೈವ್' ಹೊತ್ತಿಗೆ ಚಿಗುರು ಮೀಸೆಯ ಕಿಶೋರನಾಗಿ ಬಿಟ್ಟ. ಆ ನಂತರ ನನಗೆ ಆ ಬಾಲ್ಯದ Idiosity ಯನ್ನು ಅವನಲ್ಲಿ ಕಂಡುಕೊಳ್ಳುವುದು ಕಷ್ಟವಾಗಿ ತಿಪ್ಪನನ್ನು ಕೈಬಿಟ್ಟೆ.. 'ಕಣ್ಣಾಸ್ಪತ್ರೆಯ ಕ್ಯೂನಲ್ಲಿ ಜಗದಂಬೆ'ಯಲ್ಲೇ ಸೈಡ್‌ ವಿಂಗ್‌ಗೆ ಸರಿದು ಬಿಟ್ಟ.

ಈ ತಿಪ್ಪ ಯಾರು? ಯಾಕೆ ನಾಯಿತಿಪ್ಪನಾಗಿ ನನ್ನ ಮನೋ ಪಾತಳಿಯಲ್ಲಿ ನೆಟ್ಟುಕೊಂಡ..? ಇವನು ನನ್ನೊಳಗೇ ಇದ್ದನಾ? ಅಥವಾ ಅವನೇ ನಾನಾ? ಬಿಡಿಸಲಾರದ ಗಂಟು. ಇದು ಸಾಸಲಮ್ಮ ಹೇಳಿದ ನುಡಿಗುರುತುಗಳಲ್ಲಿರುವ ಉಳಿವಿನ ಬೀಜಗಳ (Survival Seeds) ಗೂಢ ಅರಿಯುವ ಪಯಣವೇ ಆಗಿದೆ. ಕಾಲು ಶತಮಾನದ ನಂತರ ಈ ನಾಟಕ ನ್ಯಾಷನಲ್ ಕಾಲೇಜಿನ ಪದವಿ ತರಗತಿಗೆ ಪಠ್ಯವಾಗಿರುವುದು ನನಗೆ ಬಲು ಅಚ್ಚರಿಯನ್ನೂ ಅಂತೆಯೇ ಆಯ್ಕೆ ಮಾಡಿರುವ ಹೃದಯವಂತರ ತೆರೆದ ಕಣ್ಣನ್ನೂ ಕಾಣಿಸಿದೆ.

***
ಕತೆಯೂ ದುಂಡಯ್ಯ ಕಲಿಸಿದ್ದಾ? ನರಸೇಗೌಡರಾ... ಗೊತ್ತಿಲ್ಲ... ನೆನೆಪು ಕೊರೆ. ಅಂತೂ ಆ ಜನಪದ ಕತೆಯಲ್ಲಿ ಮೊಮ್ಮಗನೊಬ್ಬ ಅಜ್ಜಿ ಕೊಟ್ಟ ದೋಸೆಗಳನ್ನು ನಾಯಿಗಳಿಗೆ ಸಾಲ ಕೊಡುತ್ತಾನೆ. ಬೆಟ್ಟದ ಕಳ್ಳರು ದೋಚಿ ತಂದ ನಿಧಿ ಹೊತ್ತು ತರುತ್ತಾನೆ. ಆಲಿಬಾಬ.. ಕಳ್ಳರ ಗುಹೆಯಿಂದ ಗುಟ್ಟು ಅರಿತು ಅಪಹರಿಸಿ ತರುವಂಥ ಮಾದರಿಯದಲ್ಲ ಇದು. ಅವನ ಮುಗ್ಧತೆಗೆ ಸಲ್ಲುವ ಸೆಲ್ಯೂಟ್, ಅದಕ್ಕೆಂದೇ ನಾನು ಮುಂದೆ 'ಮರ್ಜಿನಾ ಮತ್ತು 40 ಜನ ಕಳ್ಳರು' ಬರೆದು ಕಾವ್ಯನ್ಯಾಯ ದಕ್ಕಿಸಿದೆ. ಇದೀಗ 'ನಾಯಿತಿಪ್ಪ' ಹೆಸರು ಮತ್ತು ಚಹರೆ... ವಿಶ್ವ ನಿರ್ಗತಿಕ ತಿಪ್ಪ ಚಾರ್ಲಿ ಚಾಪ್ಲಿನ್‌ನ ಒಂದಂಶ ಈ ನೆಲದ ತಿರಸ್ಕೃತ (under dog) ತಿಪ್ಪ, ಅವನ ಮುಖಾಮುಖಿ ಅಥವಾ ಹಲವು ಮಜಲುಗಳ ಸಮರ ಆಧುನಿಕೋತ್ತರ ಸಂರಚನೆಗಳ ಜೊತೆಗೆ, ತಿಪ್ಪನನ್ನು Incubate ಮಾಡುವ ಇಂಥ ಅಂತಃಕರಣ ಕವಚವಾಗಿ ಅಜ್ಜಿ ಮತ್ತು ನ್ಯಾಯಾಧೀಶರ ಪಾತ್ರಗಳು ಮೂಡಿ ಬಂದಿವೆ. ನ್ಯಾಯಾಧೀಶನ ಪಾತ್ರದ ಸೂಲನ್ನು ನಾನು ಬ್ರೆಕ್ಟ್‌ನ 'ಕಕೇಷಿಯನ್ ಚಾಕ್ ಸರ್ಕಲ್‌'ನ ಅಜ್ಜಾಕ್‌ ಪಾತ್ರದಿಂದ ನೇರಾನೇರವೇ ಎತ್ತಿಕೊಂಡಿದ್ದೇನೆ. ಈ ಕುರಿತು ನನಗೆ ಯಾವ ನಾಚಿಕೆಯೂ ಇಲ್ಲ. ಅಂತೆಯೇ ಈ ನಾಟಕ ನಮ್ಮ ನೆಲದ ಇನ್ನೂ ಎರಡು ಜನಪದ ಕತೆಗಳ ಒಡಲನ್ನು ಒಳಗೊಂಡಿದೆ. ಜನಪದ ವಿವೇಕಕ್ಕಿಂತ ಜೀವಪರವಾದದ್ದು ಇನ್ನೊಂದಿಲ್ಲ. ಆ ಕಾರಣಕ್ಕಾಗಿಯೇ ಅಜ್ಜಿಯ ಪಾತ್ರ ಈ ನಾಟಕದ ಬೇರು. ತಿಪ್ಪ ಚಿಗುರು. ಆ ಬೇರು ಉಳಿಯಲೆಂಬ ಏಕೈಕ ಉದ್ದೇಶಕ್ಕಾಗಿ ಅಜ್ಜಿ ತನ್ನ ಮಾಂತ್ರಿಕ ಕ್ರಿಯಾ ಜಗತ್ತನ್ನು ಮರು ಸೃಷ್ಟಿಸುತ್ತಾಳೆ. ಇನ್ನುಳಿದಂತೆ ನಾಟಕವೇ ಮಾತಾಡುತ್ತದೆಯಾದ್ದರಿಂದ ಹಾಗೂ ಈ ನಾಟಕವನ್ನು ಮಕ್ಕಳ ಭಾಷಾ ಕಲಿಕೆ, ಸಾಮಾಜಿಕ ತಿಳುವಳಿಕೆ ಮತ್ತು ವಿವೇಕ ವಿಸ್ತಾರಕ್ಕೆಂದೇ ಬರೆದಿರುವೆನಾದ್ದರಿಂದ, ನನ್ನ ಉದ್ದೇಶದ ಈಡೇರಿಕೆ ಓದುವ ಯಾ ಆಡುವವವರ ಮೇಲೆ ಅವಲಂಬಿತ.

- ಕೋಟಿಗಾನಹಳ್ಳಿ ರಾಮಯ್ಯ

ಕೋಟಿಗಾನಹಳ್ಳಿ ರಾಮಯ್ಯ ಅವರ ಲೇಖಕ ಪರಿಚಯಕ್ಕಾಗಿ

MORE FEATURES

ನವೋದಯ ಲೇಖಕರ ಜೀವನಾಡಿಯಾಗಿಯೇ ಠಾಕೂರರ ಸಾಹಿತ್ಯ ಪ್ರಭಾವಿಸಿದೆ

05-10-2024 ಬೆಂಗಳೂರು

“ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಠಾಕೂರರ ಕೃತಿಗಳ ಅನುವಾದಗಳು ಅದರ ಹಿಂದಿನ ಸಾಂಸ್ಕೃತಿಕ ರಾಜಕಾರಣ ಹಾಗೂ ಅನುವಾ...

ಹೊಟ್ಟೆ ತುಂಬಿದ ಮೇಲೆಯೇ ಆಚಾರ ವಿಚಾರಗಳು ಹುಟ್ಟುವುದು

05-10-2024 ಬೆಂಗಳೂರು

"“ಅನುಭಾವ ಎನ್ನುವುದು ಅನುಭವವನ್ನು ಮೀರಿದ ಸಂಗತಿ. ತನ್ನದಲ್ಲದ ಜಗತ್ತಿನ ಸತ್ಯಗಳನ್ನು ಸುಲಭವಾಗಿ ತನ್ನದಾಗಿ...

ಅವರು ಏನೇ ಬರೆಯಲಿ, ಮಾತನಾಡಲಿ ತಲಸ್ಪರ್ಶಿಯಾಗಿ ಚಿಂತನೆ ಮಾಡುತ್ತಾರೆ; ಶರಣಬಸಪ್ಪ

04-10-2024 ಬೆಂಗಳೂರು

“ಭಾಲಚಂದ್ರ ಜಯಶೆಟ್ಟಿಯವರು ಒಬ್ಬ ಅತ್ಯುತ್ತಮ ಉಪನ್ಯಾಸಕರು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ನಿರರ್ಗಳವಾಗಿ ಓದಬ...