ಹೊಟ್ಟೆ ತುಂಬಿದ ಮೇಲೆಯೇ ಆಚಾರ ವಿಚಾರಗಳು ಹುಟ್ಟುವುದು


"“ಅನುಭಾವ ಎನ್ನುವುದು ಅನುಭವವನ್ನು ಮೀರಿದ ಸಂಗತಿ. ತನ್ನದಲ್ಲದ ಜಗತ್ತಿನ ಸತ್ಯಗಳನ್ನು ಸುಲಭವಾಗಿ ತನ್ನದಾಗಿಸಿಕೊಂಡು ನ್ಯಾಯವನ್ನು ಕಾಣಿಸುವ ಚಮತ್ಕಾರ ಹೊಂದಿರುತ್ತದೆ” ಎನ್ನುವ ಸಾಲುಗಳು ಓದುಗನನ್ನು ಚಿಂತನೆಗೆ ಹಚ್ಚುತ್ತವೆ," ಎನ್ನುತ್ತಾರೆ ಮಹೇಶ ಅರಬಳ್ಳಿ. ಅವರು ವಸುಧೇಂದ್ರ ಅವರ ‘ರೇಷ್ಮೆ ಬಟ್ಟೆ’ ಕಾದಂಬರಿ ಕುರಿತು ಬರೆದಿರುವ ವಿಮರ್ಶೆ.

ರೇಷ್ಮೆ ಬಟ್ಟೆ ಕಾದಂಬರಿ ಹಲವು ಆಯಾಮಗಳನ್ನು ಹೊಂದಿದೆ ಹಾಗೂ ಪ್ರಸ್ತುತವಾಗಿಯೂ ಇದೆ. ಜಾಗತೀಕರಣವನ್ನು ಆಧುನಿಕತೆಯ ಸಹಾಯದಿಂದ ವ್ಯಾಖ್ಯಾನಿಸುವ ನಾವು ಎರಡು ಸಾವಿರ ವರ್ಷಗಳ ಹಿಂದೆಯೇ ಪ್ರಾರಂಭವಾದ ಆ ಚಲನೆಯನ್ನು ಗುರುತಿಸಲು, ಗ್ರಹಿಸಲು ಹಿಂಜರಿಯುತ್ತೇವೆ. ಕಾರಣ ಬದಲಾವಣೆಗೆ ಹೊಂದಿಕೊಳ್ಳದ ಮನಸ್ಸು. ನಾಗರೀಕತೆಯನ್ನು ಅಭ್ಯಸಿಸುವಾಗ ಮುಖ್ಯವಾಗಿ ಗಮನಿಸಬೇಕಾದ ಅಂಶ ಬದಲಾವಣೆ ಹಾಗೂ ಆ ಬದಲಾವಣೆಗೆ ಹೊಂದಿಕೊಳ್ಳಲು ಬೇಕಾದ ಮನಸ್ಥಿತಿ.

ಮನುಷ್ಯನ ಪ್ರಕೃತಿ ಸಹಜವಾದ ಈ ಮೂಲ ಭಾವವನ್ನು ಕೇಂದ್ರವಾಗಿಟ್ಟುಕೊಂಡು ಸುಂದರವಾದ ಕಥನಗಳ ಮೂಲಕ ರಚಿಸದ ಕೃತಿಯೇ ರೇಷ್ಮೆ ಬಟ್ಟೆ. ಈ ಕೃತಿಯ ನನಗಿಷ್ಟವಾದ ಅಂಶಗಳನ್ನು ಗುರುತಿಸಿದ್ದೇನೆ.

ಯಿನ್ ಮತ್ತು ಯಾಂಗ್ : ಅಧ್ಯಾಯದ ಸಣ್ಣ ಸಣ್ಣ ಭಾಗದ ಕೊನೆಯಲ್ಲಿ ಬಳಸಿರುವ ಸಂಕೇತ (symbol) ಯಿನ್ ಮತ್ತು ಯಾಂಗ್ ನ ಸೂಚಕವೇ ಆಗಿದೆ. ನನ್ನ ಪ್ರಕಾರ ಈ ಕಥನದ ಮುಖ್ಯವಾದ ಥೀಮ್ ಯಿನ್ ಮತ್ತು ಯಾಂಗ್ ಅಂತಲೇ ಹೇಳಬಹುದು. ಸರಳವಾಗಿ ಹೇಳಬೇಕೆಂದರೆ ಇರುವುದು - ಇಲ್ಲದಿರುವುದು ಎನ್ನುವ ದ್ವಂದ್ವದಲ್ಲಿ ಶೂನ್ಯತೆ ಪೂರ್ಣತೆಯನ್ನು ಹುಡುಕಿದರೆ ಶೂನ್ಯತೆ ಪೂರ್ಣತೆಯನ್ನರಸುವಂತೆ ಇಲ್ಲಿನ ಕಥೆಗಳು, ಉಪಕಥೆಗಳು, ಘಟನೆಗಳು ಸಾಗುತ್ತವೆ.

ಮೂಲಭೂತ ಅವಶ್ಯಕತೆಗಳು : ಹೊಟ್ಟೆ ತುಂಬಿದ ಮೇಲೆಯೇ ಆಚಾರ ವಿಚಾರಗಳು ಹುಟ್ಟುವುದು. ನಾವು ನಂಬುವ ವಿಚಾರಗಳನ್ನು ಸಂಕಷ್ಟದಲ್ಲಿರುವಾಗ ಬಿಡುವುದು ಸಹಜವಾದ, ಅವಶ್ಯಕವಾದ ಆಯ್ಕೆ. ಈ ಪ್ರವೃತ್ತಿಯನ್ನು ಕಾದಂಬರಿಯ ಬಹುತೇಕ ಎಲ್ಲಾ ಪಾತ್ರಗಳು ಹೊಂದಿವೆ.

ವೈವಿಧ್ಯತೆ ಮತ್ತು ಒಳಗೊಳ್ಳುವಿಕೆ (diversity and inclusion) : ಪ್ರಕೃತಿದತ್ತವಾಗಿ ದೊರೆತ ಸಂತೋಷವನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾದ ಸಂಗತಿ. ಆ ಕೊರತೆಯನ್ನು ನೀಗಿಸದೆ ಪಡೆದುಕೊಳ್ಳಲೆತ್ನಿಸುವ ಜ್ಞಾನ ಹಾಗೂ ಆ ಕೊರತೆಯನ್ನು ಅಲ್ಲಗಳೆಯುವ ಧ್ಯಾನವೆಂಬ ಭ್ರಮೆ ಎರಡೂ ಅರ್ಥಹೀನ. ಮಿತ್ರವಂದಕನಷ್ಟೇ ಬದುಕುವ ಹಕ್ಕು ಕುಂಟನಾದ ಓಹ್ಯಾನದ್ದು. ಒಬ್ಬನಿಗೆ ಅದು ಅನುಕೂಲವದರೆ ಇನ್ನೊಬ್ಬನಿಗೆ ಅನಿವಾರ್ಯ.

ಮುಕ್ತವಾದ ಪರಿಕಲ್ಪನೆ : ಧರ್ಮ ಪರಿಪಾಲಕ ಇನ್ನೊಂದು ಧರ್ಮವನ್ನು ಅಚ್ಚರಿಯಿಂದ ನೋಡುವುದು ನಿಜಕ್ಕೂ ಸ್ವಾಗತಾರ್ಹ ವ್ಯಾಖ್ಯಾನ. ಪಾರಸೀಕ, ಕಾಂಗ್ ಫೂಷಿ, ಬೌದ್ಧ, ತುಷಾರ ಬುಡಕಟ್ಟು ಜನರು ತಮ್ಮ ಧರ್ಮವನ್ನು ಪಾಲಿಸುತ್ತಾ ಬೇರೆಯ ಧರ್ಮವನ್ನು ಬೆರಗಿನಿಂದ ನೋಡುವ ಹಲವಾರು ದೃಷ್ಟಾಂತಗಳು ಈ ಕಾದಂಬರಿಯಲ್ಲಿ ವ್ಯಕ್ತವಾಗಿವೆ.

ಬದುಕಿನ ವಿಪರ್ಯಾಸ : ಕಾಡಿನಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿರುವವರಿಗೆ ಕೃಷಿ, ವ್ಯಾಪಾರ ಮಾಡಿ ಬದುಕುವ ಬಯಕೆ. ಆ ಬಯಕೆ ಈಡೇರಿ ಮುಂದೆ ಮರುಭೂಮಿಯಲ್ಲಿ ಬಾಯಾರಿದಾಗ ಹಚ್ಚ ಹಸಿರಿನ ಕಾಡು ಕೇವಲ ನೆನಪಷ್ಟೆ. ಆ ನೆನಪಿನಿಂದಲೇ ಬಳಲಿದವರ ಬಾಯಾರಿದರೆ ಎಷ್ಟು ಚಂದ! ಆಕೆ ತನ್ನನ್ನೇ ಅರ್ಪಿಸಿಕೊಂಡು ಆತನ ಕನಸನ್ನು ಪೂರೈಸಲು ವಿಪರೀತವಾದ ನಿರ್ಧಾರವನ್ನು ಕೈಗೊಂಡರೆ, ಆಕೆಯನ್ನು ತಿರುಗಿ ಪಡೆಯಲು ಆತ ತನ್ನ ಜೀವನವನ್ನೇ ಮುಡಿಪಾಗಿಡುತ್ತಾನೆ. ಸ್ವಾರ್ಥ ಸಾಧನೆಗೆ ಸಾರ್ಥ ಸೇರಬೇಕಾಗುತ್ತದೆ. ಕುಳಿತಿರುವವನಿಗೆ ನಿಲ್ಲುವ ಆಸೆ, ನಿಂತವನಿಗೆ ಓಡುವ ಉಮೇದು, ಓಡಿ ದಣಿದವನಿಗೆ ಸ್ವಲ್ಪ ಕುಳಿತು ದಣಿವಾರಿಸಿಕೊಳ್ಳುವ ಅಗತ್ಯ.

ಇದೆಲ್ಲದರ ಜೊತೆಗೆ ರೇಷ್ಮೆ ಕೃಷಿ, ಪೇಪರ್ ಬಳಕೆಯ ಆರಂಭದ ದಿನಗಳು, ರೇಷ್ಮೆ ಬಟ್ಟೆ, ವ್ಯಾಪಾರ, ಆಧ್ಯಾತ್ಮ ಹೀಗೆ ಹಲವಾರು ಆಸಕ್ತಿಕರ ವಿಷಯಗಳನ್ನು ಈ ಕೃತಿ ಒಳಗೊಂಡಿದೆ.

“ಅನುಭಾವ ಎನ್ನುವುದು ಅನುಭವವನ್ನು ಮೀರಿದ ಸಂಗತಿ. ತನ್ನದಲ್ಲದ ಜಗತ್ತಿನ ಸತ್ಯಗಳನ್ನು ಸುಲಭವಾಗಿ ತನ್ನದಾಗಿಸಿಕೊಂಡು ನ್ಯಾಯವನ್ನು ಕಾಣಿಸುವ ಚಮತ್ಕಾರ ಹೊಂದಿರುತ್ತದೆ” ಎನ್ನುವ ಸಾಲುಗಳು ಓದುಗನನ್ನು ಚಿಂತನೆಗೆ ಹಚ್ಚುತ್ತವೆ.

MORE FEATURES

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...

ಸಮ್ಮೇಳನಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ ಅವರ ಭಾಷಣ

20-12-2024 ಮಂಡ್ಯ

ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...