ಅವರು ಏನೇ ಬರೆಯಲಿ, ಮಾತನಾಡಲಿ ತಲಸ್ಪರ್ಶಿಯಾಗಿ ಚಿಂತನೆ ಮಾಡುತ್ತಾರೆ; ಶರಣಬಸಪ್ಪ


“ಭಾಲಚಂದ್ರ ಜಯಶೆಟ್ಟಿಯವರು ಒಬ್ಬ ಅತ್ಯುತ್ತಮ ಉಪನ್ಯಾಸಕರು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ನಿರರ್ಗಳವಾಗಿ ಓದಬಲ್ಲ, ಬರೆಯಬಲ್ಲ, ಮಾತನಾಡಬಲ್ಲ ಬಹುಶ್ರೇಷ್ಠ ವಿದ್ವಾಂಸರು” ಎನ್ನುತ್ತಾರೆ ಡಾ. ಶರಣಬಸಪ್ಪ ವಡ್ಡನಕೇರಿ. ಅವರು ಶಿವರಾಜ ಪಾಟೀಲ ಅವರ ‘ಭಾಲಚಂದ್ರ ಜಯಶೆಟ್ಟಿ’ ವಾಚಿಕೆ 11 ರ ಕುರಿತು ಬರೆದ ಅನಿಸಿಕೆ ನಿಮ್ಮ ಓದಿಗಾಗಿ.

ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರಾರು ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.

ಈ ಸದಿಚ್ಛೆ ನೆರವೇರುವಲ್ಲಿ ಪ್ರೊ. ಶಿವರಾಜ ಪಾಟೀಲರವರು ಪ್ರೊ. ಭಾಲಚಂದ್ರ ಜಯಶೆಟ್ಟಿಯವರ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ . ಪ್ರೊ. ಭಾಲಚಂದ್ರ ಜಯಶೆಟ್ಟಿಯವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಗಳ ಪ್ರಶಸ್ತಿ ಕೂಡಾ ಲಭಿಸಿದೆ. ಇವರೊಬ್ಬ ಶ್ರೇಷ್ಠ ಅನುವಾದಕರಾಗಿದ್ದರು. ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.

ಪ್ರೊ. ಭಾಲಚಂದ್ರ ಜಯಶೆಟ್ಟಿಯವರು ಒಬ್ಬ ಅತ್ಯುತ್ತಮ ಉಪನ್ಯಾಸಕರು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ನಿರರ್ಗಳವಾಗಿ ಓದಬಲ್ಲ, ಬರೆಯಬಲ್ಲ, ಮಾತನಾಡಬಲ್ಲ ಬಹುಶ್ರೇಷ್ಠ ವಿದ್ವಾಂಸರು. ಕನ್ನಡದ ಕೊರತೆಯಿರುವ ಪ್ರದೇಶದಲ್ಲಿ, ಕನ್ನಡವನ್ನು ಎತ್ತಿ ಹಿಡಿದವರು. ಹಿಂದಿ ಕನ್ನಡ ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದ ಇವರು ಹಿಂದಿಯಲ್ಲಿರುವ ಸಾಹಿತ್ಯ ಸಂಪತ್ತು ಕನ್ನಡಕ್ಕೆ ತಂದವರು. ಕನ್ನಡದಲ್ಲಿರುವುದನ್ನು ಹಿಂದಿಗೆ ತೆಗೆದುಕೊಂಡು ಹೋದವರು. ಒಟ್ಟಿನಲ್ಲಿ ಹಿಂದಿ ಕನ್ನಡ ಭಾಷಾ ಸಂಪತ್ತನ್ನು ಬೆಳೆಯಿಸಿದವರು. ಇವರನ್ನು ನಾನು ಭಾಷಾ ಸವ್ಯಸಾಚಿಗಳೆಂದು ಕರೆಯುತ್ತೇನೆ. ಅರ್ಜುನನಿಗೆ ಸವ್ಯಸಾಚಿ ಎಂಬ ಹೆಸರಿದೆ. ಆತ ಬಲಗೈಯಿಂದ ಹೇಗೆ ಶಕ್ತಿಶಾಲಿಯಾಗಿ ಬಾಣ ಪ್ರಯೋಗಿಸುತ್ತಿದ್ದನೋ ಎಡಗೈಯಿಂದಲೂ ಅಷ್ಟೇ ಶಕ್ತಿ ಶಾಲಿಯಾಗಿ ಬಾಣ ಪ್ರಯೋಗ ಮಾಡುತ್ತಿದ್ದ. ಅದಕ್ಕೆಂದೆ ಸವ್ಯಸಾಚಿಯೆಂಬ ಬಿರುದು ಪ್ರಾಪ್ತವಾಗಿತ್ತು. ಹಾಗೆಯೇ ಜಯಶೆಟ್ಟಿಯವರು ಹಿಂದಿ ಪ್ರಾಧ್ಯಾಪಕರಾಗಿ ಎಷ್ಟು ಚೆನ್ನಾಗಿ ಬರೆದು ಮಾತನಾಡುತ್ತಿದ್ದರೋ ಅಷ್ಟೇ ಚೆನ್ನಾಗಿ ಕನ್ನಡದಲ್ಲಿ ಬರೆದು ಮಾತನಾಡುವ ಕಲೆ ಕರಗತ ಮಾಡಿಕೊಂಡಿದ್ದರು. ಹೀಗಾಗಿ ಅವರನ್ನು ಹಿಂದಿ-ಕನ್ನಡ ಭಾಷಾ ಭಾಂದವ್ಯದ ಸವ್ಯಸಾಚಿಯೆಂದು ಕರೆಯುತ್ತಿದ್ದೇನೆ. ಆಶ್ಚರ್ಯಕರವಾದ ಸಂಗತಿಯೆಂದರೆ ಅವರು ಕನ್ನಡದ ಸಾಂಸ್ಕೃತಿಕ ರಾಯಭಾರಿಗಳೆಂದು ಕರೆಯಬಹುದು. ಜೊತೆಗೆ ಹಿಂದಿ-ಮರಾಠಿ ಭಾಷೆಯನ್ನು ಚೆನ್ನಾಗಿ ಬಳಸಿಕೊಂಡು ಬರೆದುದರಿಂದ ಇವರಿಗೆ ಬಹುಶೃತ ಭಾಷಾ ಜ್ಞಾನಿಯೆಂದು ಬಣ್ಣಿಸಬಹುದು. ಮೂರೂ ಭಾಷೆಗಳಲ್ಲಿ ಪ್ರಾವಿಣ್ಯತೆ ಅನುಭವ ಜ್ಞಾನ ಹೊಂದಿ ಅರಿವಿನ ಲೋಕವನ್ನು ಪರಸ್ಪರ ಅನುವಾದದ ಮುಖೇನ ಸೃಷ್ಟಿಸಿ ವಿಸ್ತರಿಸಿದವರು. ಶ್ರೇಷ್ಠ ಅನುವಾದಕ, ನಮ್ಮ ಅನುವಾದಕ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಇವರು ಅನುವಾದಿಸಿದ ಕಾವ್ಯಾರ್ಥ ಚಿಂತನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಅನುವಾದಕ್ಕೆ ಪ್ರಶಸ್ತಿ ಲಭಿಸಿದೆ. ಪ್ರೊ. ಎಸ್‌.ಜಿ. ಸಿದ್ಧರಾಮಯ್ಯನವರು ಹೇಳಿದಂತೆ “ಕೇಂದ್ರ ಸಾಹಿತ್ಯ ಅಕಾಡೆಮಿಯ ಚರಿತ್ರೆಯಲ್ಲಿ ಹಿಂದಿ ಮಾತೃ ಭಾಷೆಯಲ್ಲದ ವ್ಯಕ್ತಿಯೊಬ್ಬ ಮೊದಲಬಾರಿಗೆ ಹಿಂದಿ ಅನುವಾದಕ್ಕಾಗಿ ಪಡೆದ ಪ್ರಶಸ್ತಿ ಇದಾಗಿದೆ ಎಂದು ಹೇಳುವ ಮಾತು ಉಲ್ಲೇಖನೀಯವಾಗಿದೆ. ಇವರೊಬ್ಬ ರಾಷ್ಟ್ರ ಮಟ್ಟದ ಅನುವಾದಕರು ಪಳಗಿದ ಅನುವಾದಕರು. ಕನ್ನಡ-ಹಿಂದಿ ಇವರಿಗೆ ನೀರು ಕುಡಿದಷ್ಟು ಸರಳ-ಸುಲಭ. ಇವರ ಬರವಣಿಗೆ ಬಹು ಆಯಾಮಿಯಾಗಿದೆ.

ಅವರು ಏನೇ ಬರೆಯಲಿ, ಮಾತನಾಡಲಿ ತಲಸ್ಪರ್ಶಿಯಾಗಿ ಚಿಂತನೆ ಮಾಡುತ್ತಾರೆ. ನಂತರ ಬರೆಯುತ್ತಾರೆ. ಮಾತನಾಡುತ್ತಾರೆ. ಕತೆ, ಕಾದಂಬರಿ, ನಾಟಕ, ಚಿಂತನೆ, ಲಲಿತ ಪ್ರಬಂಧ, ವಿಡಂಬನೆ, ಸಮೀಕ್ಷೆ, ಸಂಶೋಧನೆ ಹೀಗೆ ಅನೇಕ ಪ್ರಕಾರಗಳಲ್ಲಿ ಓತ ಪ್ರೋತವಾಗಿ ಬರೆಯುವ ಅವರದೆಯಾದ ವ್ಯಕ್ತಿತ್ವ ರೂಪಿಸಿಕೊಂಡವರು. ಇವರ ಅನುವಾದ ಕಲೆಯನ್ನು ಮೆಚ್ಚಿಕೊಂಡು, ಸ್ಥಳೀಯ ಸಂಸ್ಥೆಗಳಿಂದ ಹಿಡಿದು ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಲಭಿಸಿವೆ. ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಲೋಕದಲ್ಲಿ ತಮ್ಮದೆಯಾದ ವ್ಯಕ್ತಿತ್ವದ ಛಾಪು ಮೂಡಿಸಿದ್ದಾರೆ. ಕಳೆದ ಐದು ದಶಕಗಳಿಂದ ಹಿಂದಿ-ಕನ್ನಡ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಷ್ಟ್ರಮಟ್ಟದ ಪಳಗಿದ ಕರ್ನಾಟಕದ ಅನುವಾದಕರ ಸಾಲಿನಲ್ಲಿ ಇವರ ಹೆಸರಿದೆ. ಕತೆ, ಕಾದಂಬರಿ, ನಾಟಕ, ಲಲಿತ ಪ್ರಬಂಧ, ಸಂಶೋಧನೆ, ಸಮೀಕ್ಷೆ, ಚಿಂತನೆ, ವಿಡಂಬನೆ, ಮುಂತಾದ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಪರಿಣತಿ ಹೊಂದಿದ ಸೃಜನಶೀಲ ಸಾಹಿತಿ ಮತ್ತು ಶ್ರೇಷ್ಠ ಅನುವಾದಕರಾಗಿದ್ದರೆಂಬುದರಲ್ಲಿ ಎರಡು ಮಾತಿಲ್ಲ.

- ಡಾ. ಶರಣಬಸಪ್ಪ ವಡ್ಡನಕೇರಿ

MORE FEATURES

ನವೋದಯ ಲೇಖಕರ ಜೀವನಾಡಿಯಾಗಿಯೇ ಠಾಕೂರರ ಸಾಹಿತ್ಯ ಪ್ರಭಾವಿಸಿದೆ

05-10-2024 ಬೆಂಗಳೂರು

“ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಠಾಕೂರರ ಕೃತಿಗಳ ಅನುವಾದಗಳು ಅದರ ಹಿಂದಿನ ಸಾಂಸ್ಕೃತಿಕ ರಾಜಕಾರಣ ಹಾಗೂ ಅನುವಾ...

ಹೊಟ್ಟೆ ತುಂಬಿದ ಮೇಲೆಯೇ ಆಚಾರ ವಿಚಾರಗಳು ಹುಟ್ಟುವುದು

05-10-2024 ಬೆಂಗಳೂರು

"“ಅನುಭಾವ ಎನ್ನುವುದು ಅನುಭವವನ್ನು ಮೀರಿದ ಸಂಗತಿ. ತನ್ನದಲ್ಲದ ಜಗತ್ತಿನ ಸತ್ಯಗಳನ್ನು ಸುಲಭವಾಗಿ ತನ್ನದಾಗಿ...

ಬರೆದಂತೆ ಬದುಕಿದವರಿಗೆ ಬೆಲೆಯುಂಟು, ಅಂಥವರ ಬದುಕೇ ಒಂದು ಮಾದರಿ

04-10-2024 ಬೆಂಗಳೂರು

"‘ಸುರಧೇನು' ಬೇಡಿದುದನ್ನು ಕೊಡುವ ದೇವಲೋಕದ ಗೋವು ಎಂಬುದು ಪೌರಾಣಿಕ ಕಲ್ಪನೆ. ಆದರೆ ಅದನ್ನು ನಮ್ಮಲ್ಲಿ...