Date: 07-11-2024
Location: ಬೆಂಗಳೂರು
"ಲೋಕದೊಂದಿಗೆ ಅನುಸಂಧಾನ ಮಾಡುವ ಇಲ್ಲಿಯ ಕವಿತೆಗಳು ಹೊಸ ಕಾವ್ಯರೂಪಕದ ಬದುಕನ್ನು ನೋಡುತ್ತವೆ. ಇದೊಂದು ಕಾವ್ಯ ಪರಂಪರೆಯಲ್ಲಿ ವಿಭಿನ್ನ ನಡಿಗೆ. ಎಲ್ಲಿಯೂ ಕಾವ್ಯ ಲಯ ತಪ್ಪದಂತೆ ಬದುಕನ್ನು ಕಾವ್ಯದಲ್ಲಿ ತುಂಬುತ್ತಾ ಇಲ್ಲಿಯ ಕವಿತೆಗಳು ಪಯಣಿಸುತ್ತವೆ," ಎನ್ನುತ್ತಾರೆ ಹಳೆಮನೆ ರಾಜಶೇಖರ. ಅವರು ತಮ್ಮ, ‘ಓದಿನ ಹಂಗು’ ಅಂಕಣದಲ್ಲಿ ಕುಮಾರ ಚಲ್ಯ ಅವರ ‘ಹಿಂದಣ ಹೆಜ್ಜೆಯನರಿಯದೆ’ ಕೃತಿ ಕುರಿತು ಬರೆದ ಲೇಖನ.
ಮನುಷ್ಯನೊಳಗಿನ ಕೇಡುಗಳು ಮಾನವೀಯ ಸಂವೇದನೆಗಳ ಮೇಲೆ ಸವಾರಿ ಮಾಡುತ್ತಲೇ ಇರುತ್ತವೆ. ಎಲ್ಲಾ ಕಾಲದಲ್ಲೂ ಈ ಪ್ರಕ್ರಿಯೆಯನ್ನು ಕಾಣುತ್ತೇವೆ. ಇಂತಹ ಕಾಲಕ್ಕೆ ಕಾವ್ಯ ಹೊಸ ಪರಿಭಾಷೆಯನ್ನು ಸೃಷ್ಟಿಸಿಕೊಂಡು ಕೇಡುಗಳಿಗೆ ಎದುರಾಗುವ ಧ್ವನಿಗಳನ್ನು ಅಭಿವ್ಯಕ್ತಿಸುತ್ತದೆ. ಕನ್ನಡದಲ್ಲಿ ಕಾವ್ಯ ಪರಂಪರೆ ಹೊಸ ಅಭಿವ್ಯಕ್ತಿಯಲ್ಲಿ ರೂಪವನ್ನು ಪಡೆಯುತ್ತಲೇ ಬಂದಿದೆ. ಬದಲಾಗುವ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿ ಕಾವ್ಯ ಹೊಸ ರೂಪವನ್ನು ಪಡೆಯುತ್ತದೆ. ಕಾಲದ ಪಲ್ಲಟಗಳಿಗೆ ಸ್ಪಂದಿಸುವ ಮನಸ್ಸು ಸೂಕ್ಷ್ಮವಾಗಿ ಲೋಕವನ್ನು ಗ್ರಹಿಸುತ್ತದೆ. ಆ ಗ್ರಹಿಕೆಯು ಕಾವ್ಯ ರೂಪ ಪಡೆಯುವಾಗ ಹೊಸ ಕಾವ್ಯ ಭಾಷೆಯೊಂದನ್ನು ರೂಪಸಿಕೊಳ್ಳಬೇಕಾಗುತ್ತದೆ. ಲೋಕದೊಂದಿಗೆ ಅನುಸಂಧಾನ ಮಾಡುವ ಇಲ್ಲಿಯ ಕವಿತೆಗಳು ಹೊಸ ಕಾವ್ಯರೂಪಕದ ಬದುಕನ್ನು ನೋಡುತ್ತವೆ. ಇದೊಂದು ಕಾವ್ಯ ಪರಂಪರೆಯಲ್ಲಿ ವಿಭಿನ್ನ ನಡಿಗೆ. ಎಲ್ಲಿಯೂ ಕಾವ್ಯ ಲಯ ತಪ್ಪದಂತೆ ಬದುಕನ್ನು ಕಾವ್ಯದಲ್ಲಿ ತುಂಬುತ್ತಾ ಇಲ್ಲಿಯ ಕವಿತೆಗಳು ಪಯಣಿಸುತ್ತವೆ.
ಮುವತ್ತೈದು ಕವಿತೆಗಳನ್ನು ಒಳಗೊಂಡ ಡಾ. ಲಕ್ಷ್ಮಣ ವಿ. ಎ. ಅವರ ಕವನ ಸಂಕಲನ ಭಾಷಿಕ ಲಯ, ಚಿತ್ರಕ ಕಾವ್ಯ ಕಥನದಿಂದ ಕನ್ನಡದಲ್ಲಿ ಮುಖ್ಯ ಕವಿತೆಗಳಾಗಿ ನಿಲ್ಲುತ್ತವೆ. ಇಲ್ಲಿಯ ಪ್ರತಿಯೊಂದು ಕವಿತೆಯು ವಿಭಿನ್ನವಾಗಿವೆ. ಮನುಷ್ಯನ ಅಸಹಾಯಕತೆ, ಬಡತನ, ಹಸಿವು, ನೋವು, ಸಂಕಟ, ಅಪಮಾನ, ಶೋಷಣೆಯನ್ನು ಚಿತ್ರಕ ವಿನ್ಯಾಸದಿಂದ ಕಟ್ಟಿಕೊಡುತ್ತವೆ. ಕುಸಿಯುತ್ತಿರುವ ಮಾನವೀಯ ಸಂಬಂಧಗಳ ನೆಲೆಯನ್ನು ಹುಡುಕುತ್ತವೆ. ಸಹಜವಾಗಿ ಪ್ರತಿಮೆ, ರೂಪಕಗಳು ಕವಿತೆಗಳಲ್ಲಿ ಮೈ ಪಡೆದಿವೆ. ಸಂಕೀರ್ಣ ಭಾಷೆಯ ಭಾರದಿಂದ ಕವಿತೆಗಳು ನರಳುವುದಿಲ್ಲ. ಕಾಲದ ಎಲ್ಲಾ ದಂದುಗಗಳನ್ನು ಎದುರಿಸಿ, ಬದುಕಿನ ಉತ್ಸಾಹದ ನೆಲೆಗಳನ್ನು ಕಂಡುಕೊಳ್ಳುತ್ತವೆ. ಯಾಂತ್ರೀಕೃತ ವಿದ್ಯಮಾನಗಳು ಸೃಷ್ಟಿಸುತ್ತಿರುವ ನಿರ್ವಾತ ಸ್ಥಿತಿಯನ್ನು ಕವಿತೆಗಳು ವಿಷಾದದಿಂದ ನೋಡುತ್ತವೆ. ಆ ವಿಷಾದದಿಂದ ವಿಮುಖನಾಗಿ ಮುನ್ನಡೆಯಲು ತನ್ನ ಬಾಲ್ಯದ ಬೇರುಗಳಿಗೆ ಮರಳಿ ಸಮಧಾನ ಹೊಂದುತ್ತವೆ. ಈ ಕವಿತೆಗಳಲ್ಲಿ ಬರುವ ಬಾಲ್ಯವೇನು ಸಂಭ್ರಮದ್ದಲ್ಲ. ಅಲ್ಲಿಯೂ ಅನೇಕ ಬಗೆಯ ಅಪಮಾನ, ನೋವು, ಸಂಕಟ, ಇದೆ. ಅದೆಲ್ಲವೂ ಕಣ್ಣಿಗೆ ಕಾಣುತ್ತದೆ. ಆದರೆ ಇಂದಿನ ವಾಸ್ತವದ ಕ್ರೌರ್ಯಕ್ಕೆ ರೂಪವೇ ಇಲ್ಲ. ಕಣ್ಣಿಗೆ ಕಾಣುವುದಿಲ್ಲ. ಅದರೊಂದಿಗೆ ಮುಖಾಮುಖಿಯಾಗುವುದು ಸವಾಲು. ಈ ಸವಾಲಿಗೆ ಎದುರಾಗುವ ಬಗೆಯನ್ನು ಈ ಕವಿತೆಗಳು ಶೋಧಿಸುತ್ತವೆ. ವಾಸ್ತವದ ಕುದಿ ಬಿಕ್ಕಟ್ಟುಗಳಿಗೆ ಧ್ವನಿಯಾಗುತ್ತವೆ. ಆಧುನಿಕ ಭೌತಿಕ ಪ್ರಪಂಚ ವಿಕಾಸಗೊಂಡಿದೆ. ಆದರೆ ವಿಕಾಸವೂ ದೊಡ್ಡ ಹಿಂಸೆ, ಕ್ರೌರ್ಯವನ್ನು ಸೃಷ್ಟಿಸಿದೆ. ಅಮಾನವೀಯಗೊಳ್ಳುತ್ತಿರುವ ಜಗತ್ತು ಕವಿಯನ್ನು ತಲ್ಲಣಗೊಳಿದೆ. ಈ ತಲ್ಲಣದ ವಿಕಾರಗಳನ್ನು ಕವಿತೆಗಳು ಅನಾವರಣಗೊಳಿಸುತ್ತವೆ. ಅದಕ್ಕೆ ಹೊಸ ರೂಪಕಗಳನ್ನು ಸೃಷ್ಟಿಸಿಕೊಂಡಿದೆ. ಆ ರೂಪಕಗಳು ಕಥನ ಮಾದರಿಯಲ್ಲಿವೆ. ಅವು ಕೃತಕವಾಗಿ ಕಾಣುವುದಿಲ್ಲ. ಸಮರ್ಥವಾಗಿ ಕಾಲದ ದ್ವಂದ್ವಗಳನ್ನು ನಿರೂಪಿಸುತ್ತವೆ. ಯಾವ ಮುಖವಾಡಗಳಿಲ್ಲದೆ ಸಹಜವಾಗಿ ಕವಿತೆಗಳು ವಾಸ್ತವದ ಉರಿಗೆ ಮುಖಾಮುಖಾಯಾಗುತ್ತವೆ.
ನಿನ್ನೆ ರಾತ್ರಿ ಅವ್ವ ಬಂದಿದ್ದಳು
ಕನಸಿಗೆ ಎಂದಿನಂತೆ
ಬೆಂಗಳೂರಿನಲಿ ನಾನು ಕಟ್ಟಿಸಿದ
ಮನೆಗೆ ಮೊಟ್ಟ ಮೊದಲ ಬಾರಿ
ಮೆಟ್ಟಲು ಹತ್ತಲಾಗದೆ ಒಳ ಮನೆಗೂ
ಬಾರದೆ ವಾಪಸಾಗಿ ಬಿಟ್ಟಳು ( ಕನಸಿನಲಿ ಅವ್ವ)
ಭೌತಿಕ ವಿಕಾಸವೂ ಪರಂಪರೆಯ ಬೇರುಗಳನ್ನು ಘಾಸಿಗೊಳಿಸುತ್ತಿರುವ ವಿಷಾದವೊಂದನ್ನು ಕವಿತೆ ಮುಂದಿಡುತ್ತದೆ. ಮಗನ ವಿಕಾಸ ಅವ್ವನಿಗೆ ಆತಂಕ ಒಡ್ಡುತ್ತದೆ. ಬಡತನ ಹಾಸಿ ಉಂಡು ಬೆಳೆದ ಅವ್ವನಿಗೆ ಬಡತನ ಮೀರಿದ ಭೌತಿಕ ಸುಖ ಆಕೆಯಲ್ಲಿ ಸಂಭ್ರಮವನ್ನುಂಟು ಮಾಡುವುದಿಲ್ಲ. ಕಳವಳವನ್ನುಂಟು ಮಾಡುತ್ತದೆ. ಈ ವಿಕಾಸದ ವೇಗ ಅವ್ವನನ್ನು ಒಂಟಿಯಾಗಿಸಿದೆ. ಅವ್ವನ ಕುಟುಂಬದ ಬೇರುಗಳು ಗ್ರಾಮದಲ್ಲಿಯೇ ಇದೆ. ಹೊಸ ತಲೆಮಾರಿಗೆ ನಗರ ಬಿಡುಗಡೆಯಾಗಿ ಕಂಡರೆ ಹಳೆ ತಲೆಮಾರಿಗೆ ಅದು ಭಯವನ್ನುಂಟುಮಾಡುತ್ತದೆ. ಏನೋ ಕಳೆದುಕೊಂಡ ಭಾವ ಮೂಡಿಸುತ್ತದೆ. ಅಥವಾ ಹೊಸ ಜೀವನ ಲಯಕ್ಕೆ ಹೊಂದಿಕೆಯಾಗದೆ ಅವರೊಂದಿಗೆ ಬದುಕಲು ಹಿಂಜರೆಯುತ್ತದೆ.
ವಯಸ್ಸಾದ ಅವ್ವನಿಗೆ ಈಗ
ಅರಳು ಮರಳು ಕುಂತಲ್ಲಿ ಕೂರದೆ
ನಿಂತಲ್ಲಿ ನಿಲ್ಲದೆ ಮರೆತ
ಜೋಗುಳ ಮತ್ತೆ ಮತ್ತೆ ಹಾಡುತ್ತಾಳೆ
ಲಯ ತಪ್ಪದೆ
ಯಾರೂ ಕೇಳದಿದ್ದರೂ
ಗ್ರಾಮದಲ್ಲಿನ ಹಳೆ ತಲೆಮಾರು ತನ್ನ ನೆಲದೊಂದಿಗೆ ಅವಿನಾಭಾವ ಸಂಬಂಧದಿಂದ ಬದುಕಲು ಬಯಸುತ್ತದೆ. ಯಾರ ಹಂಗಿಲ್ಲದೆ ತನ್ನ ಹಾಡುಗಳನ್ನು ತಾನೇ ಗುನಿಗಿಕೊಳ್ಳುತ್ತಾ, ಜೀವನ ಪ್ರೀತಿಯಲ್ಲಿ ಉಸಿರಾಡುತ್ತದೆ.
ಕೆಲವೇ ಕ್ಷಣಗಳ ಹಿಂದೆ ಎಲ್ಲೋ
ಕಳೆದು ಹೋದ ಕುರುಡು ಸೂಜಿಗೀಗ
ಕಣ್ಣು ಮೂಡಿ
ಬರಡು ದಾರಕೂ ಜೀವದ ಜೀವ ಕೂಡಿ
ಕಂಪಿಸುವ ಕೈಗಳಲ್ಲೂ ದಾರಿ ತಪ್ಪುವುದಿಲ್ಲ
ಈಗ ಈ ಸೂಜಿ ದಾರ
ಹರಿತ ಮೊನೆಯ ಸಣ್ಣ ಬಿಂದು ಇನ್ನು
ಹೊಲಿಯುತ್ತದೆ
ಅಖಂಡ ಭೂಖಂಡಗಳ ಗಾಯ (ಕೌದಿ)
ಹಳೆಯ ಚಿಂದಿ ಬಟ್ಟೆಗಳನ್ನು ಕೂಡಿಸಿ ಹೊಲೆದು ಹೊಸ ಹಾಸಿಗೆಯನ್ನು ಮಾಡುವ ಕಲೆ ನಮ್ಮ ತಾಯಂದರಿಗೆ ಇದೆ. ಇದನ್ನೇ ರೂಪಕವಾಗಿಟ್ಟುಕೊಂಡು ಮಾನವೀಯ ಸಂಬಂಧಗಳನ್ನು ಹೊಲೆಯುವ ಹೊಸ ಜೀವನವನ್ನು ಬೆಸೆಯುವ ಸಿದ್ದಾಂತವೊಂದನ್ನು `ಕೌದಿ’ ರೂಪಕ ಸೃಷ್ಟಿಸುತ್ತದೆ. ಗಾಯಗೊಂಡ ಲೋಕದ ಮನಸ್ಸುಗಳನ್ನು ಈ ಕೌದಿಯಲ್ಲಿ ಚಿತ್ತಾರ ಮಾಡಲಾಗುತ್ತದೆ. ಒಡೆದ ಕುಟುಂಬದ ಎಲ್ಲಾ ಸಂಬಂಧಗಳನ್ನು ಒಂದು ದಾರದಲ್ಲಿ ಪೋಣಿಸಿ ನವ ಜೀವನದ ಕನಸು ಕಾಣುತ್ತದೆ.
ಗಾಂಧೀಜಿ ಎಲ್ಲಾ ಸೃಜನಶೀಲ ಮನಸ್ಸುಗಳನ್ನು ನಿರಂತರ ಕಾಡುವ ಜೀವ ಸಂಕುಲದ ಸಂಜಾತ. ಅನೇಕ ಬಗೆಯಲ್ಲಿ ಕವಿಗಳು ಆತನ ವ್ಯಕ್ತಿತ್ವವನ್ನು ತಮ್ಮ ಕವಿತೆಗಳಲ್ಲಿ ತಂದಿದ್ದಾರೆ. ಈ ಕವಿ ಕಾಣುವ ಗಾಂಧಿ ಮೂರು ಸರಳ ರೇಖೆಯಲ್ಲಿ ಬಿಡಿಸಿಡಬಹುದು. ಯಾವ ಅಲಂಕಾರ ಬಣ್ಣವಿಲ್ಲದೆ ರೂಪ ಕೊಡಬುಹುದು. ಆದರೆ ಆತನನ್ನು ಕಾಣಲು ಗುಡಸಲಿಗೆ ಬರಬೇಕು ಎಂಬ ಚಿಂತನೆ ಗಾಂಧೀಜಿಯ ನಿಜ ಕಾಳಜಿಯನ್ನು, ದೇಶದ ವಾಸ್ತವವನ್ನು ಮನಗಾಣಿಸುತ್ತದೆ.
ಚಿತ್ರ ನೀವೇ
ಬಿಡಿಸಿದ್ದರೂ
ಗಾಂಧಿ ಖುದ್ದು ನಿಮಗೇ ಸಿಗಲಾರರು
ನೋಡಬೇಕೆಂದರೆ
ನೀವು ಅಲ್ಲೇ ಬರಬೇಕು ಊರ
ಹೊರಗಿನ ಕಟ್ಟ ಕಡೆಯ ಬಡ ಮುದುಕಿಯ
ಗುಡುಸುಲಿನ ಆಸುಪಾಸಿನ ಕಡೆಗೆ (ಮೂರು ಸರಳ ರೇಖೆಗಳು)
ದೈನಂದಿನ ಬದುಕಿನ ಲಯಗಳು ಸಹಜವಾಗಿ ಕವಿತೆಗಳಲ್ಲಿ ಒಡಮೂಡುತ್ತವೆ. ಬದುಕಿನ ಬೆರಗನ್ನು ಅನುಭವಿಸುತ್ತಾ, ಜೀವ ಪ್ರೀತಿಯನ್ನು ಉಕ್ಕಿಸುತ್ತವೆ. ಅನುಕ್ಷಣವೂ ಬದುಕನ್ನು ಪ್ರೀತಿಯಿಂದ ಕಾಣುವಂತೆ ಮಾಡುವ ಸಂಗತಿಗಳನ್ನು ಒಂದು ತಾತ್ವಿಕ ನೆಲೆಗೆ ಒಯ್ಯುತ್ತವೆ.
ಹಳಿ ಬದಲಿಸುವಾಗಲೆಲ್ಲಾ
ಹೊಯ್ದಾಡುವ ದೇಹ
ಚೆಲುವಿಯ ಓಲಾಡುವ ಮುಂಗುರುಳು
ಚಾಚಿದ ದೇಹಕೆ ತಾಕುವ ಯಾರದೋ ಕಾಲು
ಬೆನ್ನ ಹಿಂದಿನ ಸೀಟಿನ ಮೇಲೆ ಯಾರೋ ಗೀಚಿದ ಕಲೆ
ಅಳುವ ಕೂಸಿಗೆ ಹರಿದ ಸೆರಗಿನ ಮರೆಯಲಿ ಮೊಲೆಯೂಡಿಸುವ
ತಾಯಿ
ಬೆವರಿ ಬಸವಳೆದು ಬಂದ ಜಗದ
ಪ್ರತಿ ಜೀವಿಗೂ
ಸಿಗಲಿ ಸರಾಗ ಉಸಿರಿಗೆ
ಬೇಕೆಂದಾಗ ತೆರೆಯುವ ಬೇಡವೆಂದಾಗ
ಮುಚ್ಚುವ ಆತ್ಮದಂತಹ ಕಿಡಕಿ (ವಿಂಡೋ ಸೀಟು)
ರೈಲಿನ ಕಿಡಕಿಯನ್ನು ಕೇಂದ್ರವಾಗಿಟ್ಟುಕೊಂಡು ಕವಿತೆ ಚಲಿಸುತ್ತದೆ. ರೈಲೇ ಹಲವು ಬದುಕುಗಳ ಸಂಗಮ. ಅಲ್ಲಿ ಬರುವ ಪ್ರತಿಯೊಂದು ಜೀವಿಯನ್ನು ಗಮನಿಸುತ್ತಾ ಅವರೊಂದಿಗೆ ಒಂದಾಗುವ ಬಗೆ ಜೀವಂತಿಕೆಯನ್ನು ತರುತ್ತದೆ. ಕಿಡಕಿಯ ಆಚೆ ಕಾಣುವ ಜಗತ್ತು ಕೂಡ ಮನಸ್ಸಿನಲ್ಲಿ ಅನೇಕ ನೆನಪುಗಳನ್ನು ಮೂಡಿಸುತ್ತದೆ. ಕಾಲ, ಧೇಶದೊಂದಿಗೆ ಮನಸ್ಸು ಬೆರೆಯುವ ಹಾಗೆ ಮಾಡುತ್ತದೆ. ಇದೊಂದು ಮೂರು ಕಾಲಗಳ ಪಯಣ. ಇದನ್ನು ಕವಿತೆ ಸಮರ್ಥವಾಗಿ ರೂಪಕೊಳಿಸಿದೆ. ಕೊನೆಗೆ ಕಿಡಕಿ ಆತ್ಮದ ಸ್ಥಿತಿಯನ್ನು ಪಡೆದುಕೊಂಡು ಅನುಭಾವದ ನೆಲೆಯನ್ನು ಮುಟ್ಟುತ್ತದೆ. ``ಹೀಗೊಂದು ರೈಲಿ ಬೋಗಿ’’ ಕವಿತೆ ಕೂಡ ಈ ಬಗೆಯ ಧ್ವನಿಯನ್ನು ಹೊರಡಿಸುತ್ತದೆ.
ತೇವ ಕಾಯುವ ಬೇರು
ಕತ್ತಲೆ ಕಾಯುವ ಎಚ್ಚರದ ದೀಪ
ಬೆರಗಿನ ಲೋಕ ಜಗವ ಕಾಯುವ ಒಲವ ಕಣ್ಣು
ಗೊತ್ತು ಗುರಿಯಿಲ್ಲದೆ ಸುಖಾ ಸುಮ್ಮನೆ ಸುತ್ತುವ ಋಣದ ಚಕ್ರದಲಿ ಹಗಲು ಇರುಳು
ಸುತ್ತುವ ಚುಕ್ಕಿ ಚಂದ್ರಮ ಸೂರ್ಯ
ಬಸವಳಿದ ನೆತ್ತಿಯ ಮೇಲೆ ಒಲವ ಸುರಿವ ಬೆಳದಿಂಗಳು (ಋಣ ಭಾರ )
ನೆಲ, ಭಾನು ಸೂರ್ಯ ,ಚಂದ್ರ, ಹೂ- ಬೇರು, ದೀಪ-ಎಣ್ಣೆ, ಬಣ್ಣ, ಹಸಿರು, ಪರಾಗ, ದುಂಬಿ, ರೆಕ್ಕೆ, ಹುತ್ತ, ಹಾವು, ರೆಕ್ಕೆ ಬೆಳಕು-ಕತ್ತಲು ಎಲ್ಲವನ್ನು ಸಂಯೋಗಸಿ ಋಣ ಭಾರದ ಚಿತ್ರವನ್ನು ಈ ಕವಿತೆ ನೀಡುತ್ತದೆ. ಬದುಕಿನ ನೈಸರ್ಗಿಕ ಸಂಬಂಧವನ್ನು ಶೋಧಿಸುತ್ತದೆ.
ಮೈಗಂಟಿದ ಬಿಳಿನೂಲಿನಂಗಿಯಲಿ
ಕಿಸೆಗಳ ಹಂಗಿಲ್ಲ
ಅರಮನೆ ಎದುರಿನ ಮಹಾಮನೆಯ
ಅನುಭವ ಮಂಟಪದ ರಾಜನಾದರೂ
ನಿನಗಿಂತ ದೀನ ದಯಾಳು ಇನ್ಯಾರು ಇಲ್ಲ
ಕುದುರೆ ಕಾಲಾಳು ಪದ ಪದಾತಿ ದಳ
ಪದ್ಮಶ್ರೀ
ಬೇಡ
ಪಲ್ಲಕ್ಕಿ ಪದವಿ ಪಾದುಕೆ ಕಾಲ್ದಳ ಕೂಡ
ಹಸಿದು ಬಂದವರಿಗೆ ಹಿಡಿಯವಲಕ್ಕಿ
ಗುಟುಕು ನೀರು ಭರಪೂರ ಪ್ರೀತಿ ದಣಿದ
ಕತ್ತಲ ದಾರಿಗೆ ಜ್ಞಾನ ಭಕ್ತಿ ಯೋಗದ
ಬೆಳಕಿನದೊಂದಿ
ನಿತ್ಯ ನಿರಂತರ ತೂಗುವ ಮಮತೆಯ ತೊಟ್ಟಿಲು
ಭಯ ಭಕ್ತಿಯ ಅಭಯ ಅಕ್ಷಯ ಜೋಳಿಗೆ (ಸಂತರ ಬದುಕು ನಿತ್ಯ ನಿರಂತರ)
ಈ ಸಾಲುಗಳು ಶತಮಾನದ ಸಂತ ಸಿದ್ದೇಶ್ವರ ಸ್ವಾಮಿಯ ಸಂತತನದ ಬಗ್ಗೆ ಹೇಳುತ್ತವೆ. ಜೊತೆಗೆ ಈ ಜಗತ್ತು ಸಾಗಬೇಕಾದ ದಾರಿಯ ಬಗ್ಗೆಯೂ ಚಿಂತಿಸುತ್ತದೆ. ಸರ್ವವನ್ನು ಒಳಗೊಂಡ ಜೀವನ ಸಿದ್ದಾಂತ ನಮ್ಮ ನಡುವೆ ಕುಡಿಯೊಡೆಯಬೇಕಿದೆ. ಸಂತರ ದಾರಿ ಈ ಬದುಕಿಗೆ ದೀಪವಾಗಬೇಕಿದೆ. ಎಲ್ಲವೂ ಒಡಕಲಾಗಿ, ಭೋಗವಾಗಿ ಬೇಯುತ್ತಿರುವ ಬದುಕಿಗೆ ಸಂತರ ಉಸಿರು ಬಡೆಯಬೇಕಾಗಿದೆ.
ಕದ್ದು ಬಸುರಾದ ಪಿಂಡ
ಕರಗಿಸಲು
ಸಣ್ಣ ಮೊಲೆಗಳು ದಪ್ಪವಾಗಲು
ಬೊಜ್ಜಿನ ಕಟಿ
ಜೀರೋ ಸೈಜಿಗೆ ಕರಗಿಸಲು
ಕಣ್ಣ ಕೆಳಗಿನ ಕಪ್ಪು
ಮೈಯ ಬಣ್ಣ ಬಿಳಿಯಾಗಲು
ಕೂದಲು ಬೆಳೆಯಲು ಕೆನ್ನೆಯ ಸುಕ್ಕು
ಮರೆ ಮಾಚಲು
ಕುಡಿ ಮೀಸೆ ಚಿಗುರಲು
ಆಸೆ ಕೆರಳಲು ಅತಿಯಾಯ್ತು ಓ! ಯಯಾತಿ! (ಹಸಿವು)
ಆಧುನಿಕ ಬದುಕು ಪಡೆದುಕೊಳ್ಳುವತ್ತಿರುವ ಸ್ವರೂಪವನ್ನು ಕವಿತೆ ಸರಳವಾಗಿ ಕಟ್ಟಿಕೊಡುತ್ತದೆ. ಸಹಜತೆಯನ್ನು ಕಳೆದುಕೊಂಡು ಕೃತಿಕ ಬದುಕನ್ನು ಉಸಿರಾಡುತ್ತಿರುವ ವಾಸ್ತವದ ವಿದ್ಯಾಮಾನದ ಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ಪ್ರಕೃತಿಯಿಂದ ದೂರವಾಗಿ ಅಸಹಜ ಔಷಧಿಗಳೊಂದಿಗೆ ಬದುಕುವ ಮನಷ್ಯನ ದುರಂತವನ್ನು ಕವಿತೆ ವ್ಯಂಗ್ಯ ಮಾಡುತ್ತದೆ.
ಕಾಯಿನ್ –ಬೂತು, ಕಾವಳದ ರಾತ್ರಿಯ ಒಂದು ದಿನ, ತೋರು ಗಂಬದ ಬೆಳಕು, ಒಲವ ಕರೆ, ಒಂದು ಕನ್ನಡಕ, ಕವರ್ ಪೇಜ್, ಕವಿಯ ಹೆಂಡತಿ, ಒಳ ಪ್ರವೇಶ, ಹೊಸ ವರ್ಷದ ಬೆಳಗು, ಉಳಿದ ಕವಿತೆ, ಆಷಾಢದ ಒಂದು ದಿನ, ಒಂದು ಇನ್ಸ್ಟಂಟ್ ಕವಿತೆ, ಇಂಗ್ಲೀಷ್ ಕ್ಯಾಲೆಂಡರ್ ಕವಿತೆಗಳು ಆಧುನಿಕ ಜೀವನದ ದ್ವಂದ್ವಗಳನ್ನು ಬಿಡಿಸಿಡುತ್ತವೆ. ಬದುಕು ಬೆಳೆದಂತೆ ತನ್ನೊಳಗಿನ ಆತ್ಮರತಿಯೊಳಗೆ ಬಂದಿಯಾಗುವ ವಾಸ್ತವವನ್ನು ತೆರೆದಿಡುತ್ತವೆ. ಸಹಜವಾದ ಭಾಷಿಕ ಲಯದೊಂದಿಗೆ ದೈನಂದಿನ ಬದುಕಿನ ವಿನ್ಯಾಸವನ್ನು ಯಾವ ಸೈದ್ಧಾಂತಿಕ ಭಾರವಿಲ್ಲದೆ ಕಟ್ಟಿಕೊಡುತ್ತವೆ. ಪರಂಪರೆಯ ಹಂಗನ್ನು ಮೀರಿ ವಾಸ್ತವವನ್ನು ಮಾತ್ರ ಕವಿತೆಗಳು ನಂಬಿವೆ. ಹೀಗಾಗಿ ಅಪ್ಪಟ ವಾಸ್ತವದ ಬಿಂಬಗಳನ್ನು ಮನಗಾಣಿಸುತ್ತವೆ. ಬಾಲ್ಯದ ಸಂದರ್ಭಗಳು ಕವಿತೆಗಳಲ್ಲಿ ಬಂದಾಗ ಕವಿತೆಗಳು ಆರ್ದ್ರತೆಯನ್ನು ಪಡೆಯುತ್ತವೆ. ಆಧುನಿಕ ಜೀವನ ಬಂದಾಗ ವ್ಯಂಗ್ಯದ, ವಿಡಂಬನೆಯ ದಾರಿಯನ್ನು ಹಿಡಿಯುತ್ತವೆ.
ಇಡೀ ಬದುಕಿನ ಪ್ರಕ್ರಿಯೆಯನ್ನು ಹೊಸ ರೂಪಕಗಳ ಮೂಲಕ ಕವಿತೆಗಳು ಕಟ್ಟಿಕೊಡಲು ಹವಣಿಸುತ್ತವೆ. ಚಿತ್ರಕಗುಣ, ಭಾಷಿಕ ಕಥನದ ಲಯ, ಬದುಕಿನ ಹಂಬಲದ ಆಶಯದಿಂದ ಈ ಕವಿತೆಗಳು ಭಿನ್ನವಾಗಿ ನಿಲ್ಲುತ್ತವೆ.
ಹಳೆಮನೆ ರಾಜಶೇಖರ,
ಕನ್ನಡ ವಿಭಾಗ, ಶ್ರೀ ಧ. ಮಂ. ಕಾಲೇಜು (ಸ್ವಾಯತ್ತ),
ಉಜಿರೆ- 574240
“ವಿಮರ್ಶಾ ಶಿಸ್ತಿಗೆ ಗ್ರಂಥ ಸಂಪಾದನಾಶಾಸ್ತ್ರದ ಒಂದು ಮುಖ್ಯ ಕೊಡುಗೆ ಈ ಸಂಶೋಧನಾ ವಿಮರ್ಶೆ,” ಎನ್ನುತ್ತಾರ...
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
©2024 Book Brahma Private Limited.