ಗುರುಗಳ ಮಹಿಮೆ ಕಥೆಯಲ್ಲಿರುವ ತಾರ್ಕಿಕತೆ

Date: 06-11-2024

Location: ಬೆಂಗಳೂರು


"ಬದುಕಿನ ಏಳುಬೀಳುಗಳ ನಡುವೆ ಗುಮಾಸ್ತರಾಗಿ ನೌಕರಿ ಆರಂಭಿಸಿದ ನಂತರ ಕನ್ನಡ ಪ್ರಾಧ್ಯಾಪಕರಾಗಿ ಕನ್ನಡ ಸೇವೆ ಮಾಡಿರುವವರಲ್ಲಿ ಇವರ ಹೆಸರು ಚಿರಸ್ಥಾಯಿ. ಯಾವ ಸವಲತ್ತುಗಳು ಮತ್ತು ಸರಿಯಾದ ಆಧಾರಗಳು ದೊರಕದೆ ಇದ್ದ ಸಂದರ್ಭದಲ್ಲಿ ಸಹ ಇವರು ಗ್ರಂಥ ಸಂಪಾದನೆ ಕಾರ್ಯ ಕೈಗೊಂಡಿರುವುದು ಅಚ್ಚರಿ ಮೂಡಿಸುತ್ತದೆ," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ "ಅಂತರ್ ದೃಷ್ಟಿ" ಅಂಕಣದಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಆಯ್ದ ‘ಗುರುಗಳ ಮಹಿಮೆ ಕಥೆಯಲ್ಲಿರುವ ತಾರ್ಕಿಕತೆ'ಯ ಬಗ್ಗೆ ವಿವರಿಸಿದ್ದಾರೆ.

ಪ್ರೊಫೆಸರ್ ಕೃಷ್ಣ ಶಾಸ್ತ್ರಿ ಅವರ ಪ್ರತಿಭೆ ಬಹುಮುಖವುಳದ್ದು. 19ನೇ ಶತಮಾನದ ಕೊನೆಯಲ್ಲಿ ಜನಿಸಿದ (1890) ಇವರ ಬಹುಮುಖ ಪ್ರತಿಭೆ ಅನನ್ಯವಾಗಿದ್ದು, ಜೀವನ ಮೌಲ್ಯಗಳನ್ನು ಆದರ್ಶವಾಗಿರಿಸಿ ಬಾಳಿದ ಅವರ ಬದುಕು ಕಿರಿಯರಿಗೆ ಮಾರ್ಗದರ್ಶನ ಹಾಗೂ ಸಮಾಜದ ಮೌಲ್ಯಗಳಿಗೂ ನಿದರ್ಶನವಾಗಿ ನಿಂತ ಮೇರು ವ್ಯಕ್ತಿತ್ವ ಇವರದು. ಚಿಕ್ಕ ವಯಸ್ಸಿನಲ್ಲೇ ಸಂಸಾರದ ಭಾರ ಹೊತ್ತವರು. ತನ್ನ ತಂದೆ ರಾಮಕೃಷ್ಣ ಶಾಸ್ತ್ರಿಗಳೇ ಇವರ ವಿದ್ಯಾ ಗುರುಗಳಾದ ಪ್ರಯುಕ್ತ ತಂದೆ ಶಾಲೆಗೆ ತೆರಳುವ ಮುನ್ನ ಮರಳು ಮೇಲೆ ಬರೆದಿಟ್ಟ ಅಕ್ಷರಗಳನ್ನು ತಿದ್ದಿ ಕಲಿತು ತಂದೆಯಿಂದಲೇ ಬಹುಮಾನ ಗಿಟ್ಟಿಸುತ್ತಿದ್ದರು.

ಬದುಕಿನ ಏಳುಬೀಳುಗಳ ನಡುವೆ ಗುಮಾಸ್ತರಾಗಿ ನೌಕರಿ ಆರಂಭಿಸಿದ ನಂತರ ಕನ್ನಡ ಪ್ರಾಧ್ಯಾಪಕರಾಗಿ ಕನ್ನಡ ಸೇವೆ ಮಾಡಿರುವವರಲ್ಲಿ ಇವರ ಹೆಸರು ಚಿರಸ್ಥಾಯಿ. ಯಾವ ಸವಲತ್ತುಗಳು ಮತ್ತು ಸರಿಯಾದ ಆಧಾರಗಳು ದೊರಕದೆ ಇದ್ದ ಸಂದರ್ಭದಲ್ಲಿ ಸಹ ಇವರು ಗ್ರಂಥ ಸಂಪಾದನೆ ಕಾರ್ಯ ಕೈಗೊಂಡಿರುವುದು ಅಚ್ಚರಿ ಮೂಡಿಸುತ್ತದೆ. “ಕೆಳದಿ ನೃಪ ವಿಜಯ”, “ಧರ್ಮಾಮೃತಂ”, ಎರಡು ಕೃತಿಗಳ ಸಂಪಾದನೆಯ ನಂತರ “ಹರಿಶ್ಚಂದ್ರ ಕಾವ್ಯ ಸಂಗ್ರಹ”, ಕವಿಜಿಹ್ವಾ ಬಂಧನ”, ಎಂಬ ಕೃತಿಗಳ ಸಂಪಾದನೆ ಸಹ ಇವರ ಕೊಡುಗೆ. ಇದರ ಜೊತೆಗೆ ಶಾಸ್ತ್ರ, ವಿಮರ್ಶೆ, ಅನುವಾದ, ಕ್ಷೇತ್ರದಲ್ಲಿ ಇವರ ಪಾಂಡಿತ್ಯ ಕಾಣಬಹುದು. “ವಚನ ಭಾರತ” ವಂತು ಇವರ ಪ್ರತಿಭೆಯನ್ನು ಎತ್ತರಿಕ್ಕೇರಿಸಿತು. “ಪ್ರಬುದ್ಧ ಕರ್ನಾಟಕ” ಪತ್ರಿಕೆಯನ್ನು ಪ್ರಾರಂಭಿಸಿ ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಫಿಲಾಸಫಿ ಎಂ.ಎ. ಸೇರಿದ ಕುವೆಂಪು ಅಂತಹ ಶಿಷ್ಯರನ್ನು ಕನ್ನಡಕ್ಕೆ ಎಳೆತಂದ ಹಿರಿಮೆ ಇವರದು. ಇವ “ಶ್ರೀಪತಿ ಕಥೆಗಳು” ಎಂಬ ಸಂಕಲನದಲ್ಲಿ “ಗುರುಗಳ ಮಹಿಮೆ” ಎಂಬ ಕತೆಯನ್ನು ನೋಡಬಹುದು.

ಈ ಕಥೆ ತಾರ್ಕಿಕ ನಿಲುವಿನಲ್ಲಿ ತಾರ್ಕಿಕ ಅಂತ್ಯ ಕಾಣದೆ ಕೊನೆಗೊಳ್ಳುವಂತದ್ದಾಗಿದೆ. ಒಂದು ಸಂಸಾರದಲ್ಲಿ ಬರಿಯ ಹೆಣ್ಣು ಮಕ್ಕಳೇ ಇದ್ದರು. ತಾಯಿಗೆ ಒಂದಾದರೂ ಗಂಡು ಮಗು ಬೇಕೆಂಬ ಬಯಕೆ. ಆದರೆ ಗಂಡು ಮಕ್ಕಳಾಗಲೇ ಇಲ್ಲ. ಆ ಕಾರಣದಿಂದ ಮಗಳ ಗಂಡ ಅಳಿಯನನ್ನೇ ಮಗನಂತೆ ಮನೆಯಲ್ಲಿ ಇರಿಸಿಕೊಂಡಿದ್ದರು. “ಅಲ್ಲಿರುವ ಗುರುಗಳು ಕೋರಿ ಕೊಂಡಿದ್ದನೆಲ್ಲ ಕರುಣಿಸುತ್ತಾರೆ”. ಎಂಬ ಯಾರೋ ಹೇಳಿದ ಮಾತಿಗೆ ಆ ತಾಯಿ ಗುರುಗಳ ಸೇವೆ ಮಾಡಿ ಪುತ್ರ ಸಂತಾನವಾಗಬೇಕೆಂದು ಹಠ ಹಿಡಿಯುತ್ತಾಳೆ. ಆಶ್ರಮಕ್ಕೆ ತೆರಳಿ ಸೇವೆಯಲ್ಲಿ ನಿರತಳಾಗುತ್ತಾಳೆ. ಆ ಗುರುಗಳು ಎಷ್ಟೇ ಬೇಡವೆಂದರು ಕೇಳದೆ, ಆಕೆ ‘ಒಂದು ಮಾಡಲು ಹೋಗಿ ಇನ್ನೊಂದು ಎಡವಟ್ಟು ಆಯಿತು’ ಎಂಬಂತೆ ತನಗೆ ಮಗುವಾಗದೆ ತನ್ನ ಮಗಳಿಗೆ ಗಂಡು ಸಂತಾನವಾಗಿ ಮಗಳು ಸಾಯುತ್ತಾಳೆ. ಆಗ ತಾನೇ ಹುಟ್ಟಿದ ಮಗುವಿನ ಭಾರ ಆ ತಾಯಿ (ಅಜ್ಜಿ) ಯ ಮೇಲೆ ಬೀಳುವ ಕಥಾಹಂದರವೇ ಗುರುಗಳ ಮಹಿಮೆ.

“ಈ ಗುರುಗಳ ಮಹಿಮೆ” ಕಥೆ ಸಹಜವಾಗಿ ಓದುತ್ತಾ ಹೋದಂತೆ ಮಗುವನ್ನು ಹಂಬಲಿಸಿ ಬಂದಂತ ತಾಯಿಯ ವರ್ತನೆ “ಅಡಿಗರ ಕಾವ್ಯ” ನೆನಪಿಗೆ ತರುತ್ತದೆ. “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ”. ಆದರೆ ಮನಸ್ಸು ಸದಾ ಇಲ್ಲದಿರುವುದರ ಕಡೆ ಸೆಳೆಯುವುದು ಸಹಜವೇ ಆದರೂ ಪ್ರಕೃತಿ ಅಸಹಜವಾಗಿರುವುದನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವಂತೆ ಹಾಗೆ ಸಹಜವಾಗಿರುವುದು ಸಹ ಇರುತ್ತದೆ. ಯಾವಾಗಲೂ ಅಸ್ವಾಭಾವಿಕವಾಗಿರುವುದರತ್ತ ಮನುಷ್ಯನ ಚಿತ್ತ ಹರಿಯುತ್ತದೆ. ಪ್ರಕೃತಿ ಎಲ್ಲವನ್ನು ನೀಡುವ ಸಮೃದ್ಧತೆಯನ್ನು ಹೊಂದಿರುವುದು ಸತ್ಯವೇ ಆದರೂ ಕೊಡುವುದನ್ನು ಭರಿಸುವ ಶಕ್ತಿ ಸಾಮರ್ಥ್ಯ ಧೈರ್ಯ ತಾಕತ್ತು ಎಲ್ಲವೂ ಸಹ ಪಡೆದುಕೊಳ್ಳುವ ವ್ಯಕ್ತಿಯಲ್ಲಿ ಇಲ್ಲದಿರುವಾಗ ಅಪೇಕ್ಷೆ ಪಡುವುದು ಸಹ ಅರ್ಥಹೀನ ಅನಿಸುವುದಿಲ್ಲವೇ?. ಅಂತಹ ಬಾಲಿಶ ಅರ್ಥಹೀನ ಪ್ರಶ್ನೆಗಳೊಂದಿಗೆ ಗುರುಗಳ ಆಶ್ರಮಕ್ಕೆ ಬರುವ ತಾಯಿಯ ತಾಕಲಾಟ ತಳಮಳ ಓದುಗರಿಗೆ ಅಸಹನೆಯನ್ನು ತರುತ್ತದೆ.

ಆಕೆಯ ತರ್ಕ ಮಗು ಪಡೆಯಲೇ ಬೇಕೆಂಬುದು. ಆದರೆ ಅದು ಸಾಧ್ಯವಿಲ್ಲ ಎನ್ನುವುದು ಗುರುಗಳಿಗೆ ತಿಳಿದ ವಿಷಯ. ಹಾಗಿದ್ದಲ್ಲಿ ಸೇವೆಯನ್ನೇಕೆ ಮಾಡಬೇಕು ಭಗವಂತನಿಗೆ ಎಂಬುದು ಆಕೆಯ ಪ್ರಶ್ನೆ ಅರ್ಥಾತ್ ಭಗವಂತನ ಸೇವೆ ಮಾಡುವುದೆಂದರೆ ಆತನಿಂದ ಏನನ್ನಾದರೂ ನಿರೀಕ್ಷಿಸಿ ಪಡೆಯುವುದೇ ಎಂಬರ್ಥದ ಯೋಚನೆಯಲ್ಲಿ ಪ್ರಶ್ನೆಗಳ ಸುರಿಮಳೆಗಳು ತಾರ್ಕಿಕ ಅಂತ್ಯಗೊಳ್ಳದೆ ಬೇಸರ ತರಿಸುತ್ತವೆ. ಇಡೀ ಕಥೆ ಕೋಡುಕೊಳ್ಳುವಿಕೆಯ ಚರ್ಚೆಯಲ್ಲಿಯೇ ಸಾಗುವುದು. ತಾನು ಭಗವಂತನಿಗೆ ಸೇವೆ ಮಾಡುತ್ತಿರುವುದೇ ಆತನಿಂದ ಏನ್ನಾನದರೂ ಪಡೆಯಲು ಮತ್ತು ದೇವರು ತನಗೆ ನೀಡಲೇಬೇಕು ಎಂಬ ಆಕೆಯ ಹಠ. ಈಗಾಗಲೇ ಮಗಳನ್ನು ಮದುವೆ ಮಾಡಿ ಅಳಿಯನನ್ನು ಮಗನಂತೆ ಮನೆಯಲ್ಲಿ ಇಟ್ಟು ಕೊಂಡಿದ್ದರೂ ಸಹ ತನ್ನ ಸ್ವಂತದ್ದು ಎಂಬ ವ್ಯಾಮೋಹ ಆಕೆಯನ್ನು ಇನ್ನು ಬಿಟ್ಟು ಹೋಗಿಲ್ಲ.

“ಅತಿಯಾಸೆ ಗತಿಗೇಡು” ಅತಿಯಾದರೆ ಅಮೃತ ಕೂಡ ವಿಷವಾಗುವುದು. ಕನಸುಗಳನ್ನು ಈಡೇರಿಸಿಕೊಳ್ಳಲು ನಾವು ಪ್ರಕೃತಿ ವಿರುದ್ಧ ಹೋಗಲು ಸಾಧ್ಯವಿಲ್ಲ. ಆ ಪ್ರಕೃತಿ ನೀಡುವುದಾದರೂ ಕಾಲ,ದೇಶ ಸ್ಥಳ,ವಯಸ್ಸು,ಎಲ್ಲವನ್ನು ಪರಿಗಣಿಸಿಯೇ ಆ ಭಗವಂತ ನಮಗೆ ನೀಡಿರುತ್ತಾನೆ ಎನ್ನುವುದು ಒಂದೆಡೆಯಾ ಚಿಂತನೆಯಾದರೆ, ಪ್ರಾಕೃತಿಕವಾಗಿ ನೈಸರ್ಗಿಕವಾಗಿ ಕೆಲವನ್ನು ಪಡೆಯಲು ಮಿತಿಗಳು ಇದ್ದೇ ಇರುತ್ತದೆ. ಹೆಣ್ಣು ಮಗುವಾಗಲಿ ಗಂಡಾಗಲಿ, ವಯಸ್ಸಿನ ಮಿತಿಯೊಳಗೆ ನಾವು ಸಂತಾನ ಪಡೆಯುವುದು ಸೂಕ್ತವಾದ ಅಂಶ. ಅವೆಲ್ಲವನ್ನು ಮೀರಿ ಪ್ರಕೃತಿಯ ವಿರುದ್ಧ ಸೆಡ್ಡು ಹೊಡೆದಾಗ ಮನುಷ್ಯ ನರಕ ಸಾದೃಶ್ಯ ಜೀವನವನ್ನು ಅನುಭವಿಸಬೇಕಾಗುತ್ತದೆ. ಪ್ರಕೃತಿ ನಮಗೆ ನೀಡುವ ಪಾಠದ ಒಟ್ಟಾಂಶ ಇದೆ ಆಗಿರುತ್ತದೆ.

ಈ ಕಥೆಯಲ್ಲಿ ಭಗವಂತ ಮತ್ತು ಗುರುಗಳು ಎಂಬ ಕಲ್ಪನೆಯ ಪಾತ್ರಗಳು ಕೇವಲ ನೆಪ ಮಾತ್ರದ ಚಿತ್ರಣಗಳು. ಬಹು ಮುಖ್ಯವಾಗಿ ಆ ತಾಯಿಯ ವ್ಯಾಮೋಹ ಪರವಶತೆಗೆ ಒಳಗಾದ ವ್ಯಕ್ತಿಯ ಚಿತ್ತ ಚಾಂಚಲ್ಯದ ಸೂಕ್ಷ್ಮತೆಯನ್ನು ಶಾಸ್ತ್ರೀಯವರು ಸೂಕ್ಷ್ಮವಾಗಿ ವ್ಯಕ್ತ ಪಡಿಸಿರುತ್ತಾರೆ. ಈ ಕಥೆಯಲ್ಲಿ ಯಾವುದೇ ಭಾವೋದ್ರೇಕದ ಮಾತುಗಳಾಗಲಿ ಅಲಂಕಾರಯುತ ಸಂಭಾಷಣೆಯಾಗಲಿ ಅಥವಾ ರೂಪಕ ಪ್ರತಿಮೆಗಳ ಪ್ರತೀಕಗಳಾಗಲಿ ಯಾವುದು ಗೋಚರಿಸದೆ,ನೇರ ಸರಳ ಅವರ ವ್ಯಕ್ತಿತ್ವದಂತೆ ಎಲ್ಲ ನೇರವಾಗಿದೆ. ಅವರ ಗದ್ಯ ಶೈಲಿಯನ್ನು “ಗದ್ಯ ಶಿಲ್ಪಿ; ಹೊಸ ಪರಂಪರೆಯ ನಿರ್ಮಾಪಕ ಕೃಷ್ಣಶಾಸ್ತ್ರಿಗಳ ಮಾರ್ಗ” ಎಂದೆಲ್ಲ ಗುರುತಿಸಿದೆ. “ಕೃಷ್ಣ ಶಾಸ್ತ್ರಿಗಳ ಗದ್ಯವೆಂದರೆ ಸರಳವಾದ, ನಿರಾಡಂಬರವಾದ, ಸುಲಲಿತವಾದ, ಪದಗಳ ಸುಂದರ ರಚನೆ”.(ಸಾಲು ದೀಪ)

ಇವರ ಶ್ರೀಪತಿ ಕಥೆಗಳಲ್ಲಿ ಗಂಡು ಮಗುವಿಲ್ಲದೆ ಪರಿತಪಿಸುವ ತಾಯಿಯ ತಳಮಳ ತಲ್ಲಣಗಳನ್ನು ನಾವು ಗುರುತಿಸಲು ಸಾಧ್ಯವಿದೆ. ಬಹುಶಃ “ನಾಲ್ಕು ಹೆಣ್ಣು ಮಕ್ಕಳ ತಂದೆಯಾದ ಶಾಸ್ತ್ರಿಗಳು ಒಂದು ಗಂಡು ಮಗುವಿಗೆ ತಂದೆಯಾದರು ಸಹ, ಆ ಮಗು ವರ್ಷದಲ್ಲಿಯೇ ತೀರಿಕೊಳ್ಳುವ ನೋವನ್ನು ಶ್ರೀಪತಿ ಕಥೆಗಳ ಮೂಲಕ ತಾಯಿಯ ತಲ್ಲಣ ಆತಂಕಗಳನ್ನು ಕಾಣಬಹುದಾಗಿದೆ ಎಂಬ ಮಾತನ್ನು ನಾ ಗೀತಾಚಾರ್ಯರು ಉಲ್ಲೇಖಿಸಿರುತ್ತಾರೆ”. ಈ ಎಲ್ಲಾ ಅಂಶಗಳನ್ನು ಕಂಡಾಗ ನೋವುಂಡ ತಾಯಿಯ ತಳಮಳ ಆತಂಕ ತಲ್ಲಣಗಳಿಗೆ ಜೊತೆಯಾಗುವ ಕತೆಯ ಪಥದಲ್ಲಿ ಭಾವೋದ್ವೇಗದ ಪರಿಧಿಯನ್ನು ಬಿಚ್ಚಿಡಬಹುದು. ಆದರೆ ಓದುಗರಿಗೆ ತರ್ಕರಹಿತ ತಾಯಿಯ ಪ್ರಶ್ನೆಗಳಿಂದಾಗಿ ಕಸಿವಿಸಿ ಎನಿಸುವುದು ಸಹಜವೇ. ಮನುಷ್ಯನ ವ್ಯಾಮೋಹದ ಚಿತ್ರಣ ಅದರ ಫಲದಿಂದ ಉಂಟಾಗುವ ವ್ಯಾಕುಲತೆಯ ಪರಿತಪನೆ ಇವೆಲ್ಲವೂ ನಾವು ಸ್ವಾರ್ಥ ಚಿಂತನೆಯಿಂದ ಪ್ರಕೃತಿಗೆ ಸವಾಲು ಹಾಕಿದ ಪರಿಣಾಮವೇ ಎಂಬುವುದರಲ್ಲಿ ಎರಡು ಮಾತಿಲ್ಲ ಎಂಬುದು ಸಹ ಅಷ್ಟೇ ಸತ್ಯ ಸಂಗತಿ. ಹಾಗಂತ ಪಾಲಿಗೆ ಬಂದದ್ದನ್ನೆಲ್ಲ ಪಂಚಾಮೃತವೇ ಎಂದು ಸ್ವೀಕಾರ ಮಾಡಬೇಕು ಎಂಬರ್ಥವಲ್ಲ ಪ್ರತಿಯೊಂದಕ್ಕೂ ಕಾಲಧರ್ಮ ಮತ್ತು ಪ್ರಕೃತಿಧರ್ಮ ಎಂಬ ಎರಡು ಸಂಗತಿಗಳತ್ತ ಮನುಷ್ಯ ಗಮನಹರಿಸಬೇಕು. ಈ ಎರಡು ಹಂತಗಳನ್ನು ಮೀರಿಯೂ ನಾವು ಯಾವುದನ್ನು ಯಾವಾಗಲೂ ಬಯಸಲು ಹೋಗಬಾರದು. ಬೆಳಗಿನ ಉಪಹಾರ ವನ್ನು ಮಧ್ಯಾಹ್ನ ತಿನ್ನಲು ಹಂಬಲಿಸಬಾರದು.ಹಾಗೆ ಮಧ್ಯಾಹ್ನದ ಊಟವನ್ನು ಸಂಜೆ ಐದಕ್ಕೆ ತಿನ್ನಲು ಆಪೇಕ್ಷಿಸಬಾರದು. ಮನುಷ್ಯ ಧರ್ಮ ಎಂಬ ಚಿಂತನೆಯನ್ನು ಗುರುವಿನ ಪಾತ್ರ ನೀಡಿದರೆ ಅದಕ್ಕೆ ವಿರುದ್ಧವಾದ ನಡೆಯನ್ನು ತಾಯಿಯ ಮೋಹದ ಸ್ವಾರ್ಥ ಬಯಸುವುದು ಇಲ್ಲಿ. ಮನುಷ್ಯ ಮತ್ತು ಪ್ರಕೃತಿ ಇವುಗಳ ನಡುವೆ ನಡೆಯುವ ತಲ್ಲಣವೇ ಈ ಕಥೆ. ಪ್ರಕೃತಿ ವಿರುದ್ಧ ಮನುಷ್ಯನ ಹೋರಾಟ ತರ್ಕಸಹಿತವೇ ಅಥವಾ ತರ್ಕರಹಿತವೇ ಯಾವುದೆಂದು ನಾವು ಪರಿಭಾವಿಸಬೇಕಾಗುವುದು.

ಆ ನಿಟ್ಟಿನಲ್ಲಿ ಅಂತ್ಯ ಕಾಣದೆ ಅನರ್ಥಕಾರಿಯಾದ ಕೊನೆಯನ್ನು ಕಾಣುವ ದೃಶ್ಯವನ್ನು ಈ ಕತೆ ಧ್ವನಿಸುತ್ತದೆ. ಪ್ರಕೃತಿ ವಿರುದ್ಧ ಮನುಷ್ಯನ ಹೋರಾಟ ಅಸಫಲತೆಯನ್ನು ಅದರ ಇನ್ನೊಂದು ಮುಖದ ಕ್ರೂರತೆಯನ್ನು ನಿಸರ್ಗ ನೀಡುವುದರ ಚಿತ್ರಣ ಈ ಕಥೆಯ ಮೂಲಕ ನಾವು ಅವಲೋಕಿಸಬಹುದಾದ ಸತ್ಯ. ಒಟ್ಟಾರೆ ಈ ಕತೆ ಬರೀ ಪಶ್ನಾವಳಿಗಳಿಂದನೇ ತುಂಬಿದೆ. ಈ ಹಿನ್ನೆಲೆಯಿಂದ ಇವರ ಎಲ್ಲಾ ಪಾಂಡಿತ್ಯಪೂರ್ಣ ಸಾಹಿತ್ಯ ವೀಕ್ಷಿಸಿದಾಗ ಕಿರಿಯರಿಗೆ ಮಾರ್ಗದರ್ಶಕರಾದವರು. ಕಿಟಲ್ ನ ನಿಘಂಟಿನ ಹೊರತಾಗಿ ಪರಿಷತ್ತು ರೂಪಿಸಿದ ನಿಘಂಟಿನ ಅಧ್ಯಕ್ಷರಾಗಿ ಸಂಪಾದಕರಾಗಿ ಮಾಡಿದ ಇವರ ಕಾರ್ಯ, ಇವರ ಸರಳತೆ ಪ್ರತಿಭೆ ಪ್ರೌಢಮೆ ಇಂದಿಗೂ ಕನ್ನಡ ಸಾಹಿತ್ಯಕ್ಕೆ ಒಂದು ಮೈಲುಗಲ್ಲಾಗಿ ನಿಂತಿದೆ ಎಂದರೆ ಅದು ಅತಿಯಶೋಕ್ತಿಯಾಗಲಾರದು.

- ವಾಣಿ ಭಂಡಾರಿ

ಈ ಅಂಕಣದ ಹಿಂದಿನ ಬರಹಗಳು:
ಯಾರು ಅರಿಯದ ವೀರನ ತ್ಯಾಗ

ಮಾಸ್ತಿಯವರ ಮೊಸರಿನ ಮಂಗಮ್ಮ
ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು
ಧರ್ಮಕೊಂಡದಲ್ಲಿ ಪ್ರಭುತ್ವದ ನೆಲೆ

ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ

MORE NEWS

ಯಾರು ಅರಿಯದ ವೀರನ ತ್ಯಾಗ

31-10-2024 ಬೆಂಗಳೂರು

"ಮಲೆನಾಡಿನ ದಟ್ಟ ಕಾನನದ ನಡುವೆ ತುಂಗೆಯ ತಟದಲ್ಲಿ ಜನಿಸಿದ ಕುವೆಂಪುರವರು ಕುಪ್ಪಳ್ಳಿ ಎಂಬ ಊರಿನಿಂದ ಅಂತಾರಾಷ್ಟ್ರೀ...

ತಾಯ್ಮಾತಿನ ಶಿಕ್ಶಣ: ಎಲ್ಲಿತನಕ

26-10-2024 ಬೆಂಗಳೂರು

"ಸಣ್ಣ ಸಣ್ಣ ಬಾಶೆಗಳ ಮತ್ತು ಬುಡಕಟ್ಟು ಬಾಶೆಗಳ ಪಾಲಕರಲ್ಲಿ ಅವರ ಬಾಶೆಗಳೆ ಅವರನ್ನು ಹಿಂದಿಕ್ಕುತ್ತಿವೆ ಎಂಬುದು ಕಾ...

ಯಡ್ರಾಮಿ ಸಂತೆಯಲಿ ಕಂಡ ರೇಣುಕೆಯ ಮುಖ

25-10-2024 ಬೆಂಗಳೂರು

"ಆ ಮಧುರ ನೆನಪುಗಳು ನನ್ನೊಳಗೆ ನೂರು ತಾಜ್ ಮಹಲುಗಳನ್ನು ನಿರ್ಮಿಸಿವೆ. ನನ್ನೆದೆಯ ತಿದಿಯಲಿ ದೇಹಿ ಉಸಿರಿನ ದೀಪ ಮುಡ...