Date: 18-11-2024
Location: ಬೆಂಗಳೂರು
ಬಸವಕಲ್ಯಾಣ: ‘ಈ ದೇಶದ ಪ್ರತಿಯೊಬ್ಬರೂ ಘನತೆಯಿಂದ ಬದುಕು ನಡೆಸಲು ಸಂವಿಧಾನದ ಅಗತ್ಯವಿದೆ. ಶಿಕ್ಷಣ, ಆಹಾರ, ಆರೋಗ್ಯ ಮತ್ತು ಉದ್ಯೋಗಗಳು ನೀಡುವ ಮೂಲಕ ಈ ದೇಶದ ನಾಗರಿಕರಿಗೆ ಘನತೆಯ ಬದುಕು ನೀಡಬೇಕೆಂದು ಸರ್ಕಾರಗಳಿಗೆ ಸಂವಿಧಾನ ನಿರ್ದೇಶಿಸುತ್ತದೆ,’ ಎಂದು ಸಿಯುಕೆ ಪ್ರಾಧ್ಯಾಪಕ ಡಾ. ಕಿರಣ ಗಾಜನೂರು ಹೇಳಿದರು.
ಅವರು ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಸಂವಿಧಾನ ದಿನದ ಪ್ರಯುಕ್ತ 2024 ನ. 25 ಸೋಮವಾರದಂದು ಹಮ್ಮಿಕೊಂಡಿದ್ದ ‘ಸಂವಿಧಾನದ ಪ್ರಸ್ತುತತೆ’ ಕುರಿತು ವಿಶೇಷ ಉಪನ್ಯಾಸ ನೀಡಿ, ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ ಅವರು ಬರೆದ ‘ಸಂವಿಧಾನ ಓದು’ ಕೃತಿಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
‘ದೇಶ ಸ್ವಾತಂತ್ರ್ಯಗೊಂಡು ಇಷ್ಟು ವರ್ಷಗಳಾದರೂ ನಾವು ಎಷ್ಟು ಪ್ರಮಾಣದಲ್ಲಿ ಸಂವಿಧಾನವನ್ನು ಅನುಷ್ಠಾನಕ್ಕೆ ತಂದಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಮೂಲಭೂತ ಹಕ್ಕುಗಳೇ ಸಿಗದಂತಹ ಸ್ಥಿತಿಯಾಗುವ ವ್ಯವಸ್ಥೆಯಿಂದ ಸಂವಿಧಾನ ಅಪಾಯದಲ್ಲಿದೆ. ಲಿಂಗಾಧಾರಿತವಾಗಿ ಮಹಿಳೆಯನ್ನೂ, ಜಾತಿ ಆಧಾರಿತವಾಗಿ ದಲಿತರನ್ನೂ ಉದ್ಯೋಗ, ಮಾರುಕಟ್ಟೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯ ಬಾಗವಾಗಿಸದಿದ್ದರೆ ದೇಶದ ಅಭಿವೃದ್ಧಿ ಹೇಗೆ ಸಾಧ್ಯ. ಎಲ್ಲರನ್ನೂ ಒಳಗೊಳ್ಳುವಿಕೆಯ ಪರಿಕಲ್ಪನೆ 12ನೇ ಶತಮಾನದಲ್ಲಿಯೇ ಬಸವಾದಿ ಶರಣರು ಈ ದೇಶಕ್ಕೆ ನೀಡಿದ್ದರು. ಸಮಾಜದಲ್ಲಿನ ಎಲ್ಲ ವ್ಯಕ್ತಿಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರಿಗೂ ನೆರವಾಗುವ ರೀತಿಯಲ್ಲಿ ಒಳಗೊಳ್ಳುವಿಕೆಯ ತತ್ವ ಸಂವಿಧಾನ ಬಯಸುತ್ತದೆ,' ಎಂದರು.
`ಸಂವಿಧಾವನ್ನು ಕೇವಲ ಪಠ್ಯವಾಗಿ ನೋಡದೇ ಅದು ನಮ್ಮ ಬದುಕಿನಲ್ಲಿ ಪಾತ್ರವಾಗಿ ಪರಿಗಣಿಸಿದಾಗ ಮಾತ್ರ ಸಂವಿಧಾನ ಅರ್ಥವಾಗುತ್ತದೆ. ಯುವಸಮುದಾಯ ತಮ್ಮ ಹಕ್ಕುಗಳ ಕುರಿತು ಮಾತನಾಡದೇ ಇರುವುದು ಸಂವಿಧಾನಕ್ಕೆ ದೊಡ್ಡ ಸಮಸ್ಯೆಯಾಗಿದೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಅಂಶಗಳು ಎಲ್ಲರಿಗೂ ಒದಗಿಸಿದಾಗಲೇ ಸಂವಿಧಾನದ ಆಶಯ ಪೂರ್ಣಗೊಂಡತೆ,' ಎಂದು ತಿಳಿಸಿದರು.
‘ಎಲ್ಲ ವಲಯಗಳ ಖಾಸಗೀಕರಣದಿಂದಾಗಿ ಘನತೆಯಿಂದ ಜೀವಿಸುವ ಅವಕಾಶ ಅಪಾಯದಲ್ಲಿದೆ. ಮಹಾನಗರಗಳ ಮಾಲ್ನಲ್ಲಿ ಯುವಕ – ಯುವತಿಯರು 11 ಗಂಟೆಗಳ ಕಾಲ ನಿಂತು 5 ವರ್ಷ ಕೆಲಸ ಮಾಡಿದರೆ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಡಾ. ಅಂಬೇಡ್ಕರರು ವೃತ್ತಿ, ಕುಟುಂಬ, ವಿಶ್ರಾಂತಿ ಮತ್ತು ಬೌದ್ಧಿಕ ಚಟುವಟಿಕೆಗಳಾಗಿ ಇಡೀ ದಿನದ 24 ಗಂಟೆಗಳನ್ನು ವರ್ಗಿಕರಿಸಿದ್ದಾರೆ. ಆ ಚೌಕಟ್ಟಿನಲ್ಲಿದ್ದರೆನೇ ಮನುಷ್ಯರಾಗಿ ಬದುಕುತ್ತೇವೆ. ಇಲ್ಲದಿದ್ದರೆ ಯಂತ್ರಗಳಾಗುತ್ತೇವೆ. ಈ ದೇಶವನ್ನು ಕಟ್ಟಲು ಬಯಸುವ ನಾವು, ಎಲ್ಲ ಪ್ರಜೆಗಳಿಗೆ ಅಭಿವ್ಯಕ್ತಿಯ ಮತ್ತು ಜೀವಿಸುವ ಸ್ವಾತಂತ್ರ್ಯ, ನ್ಯಾಯದಲ್ಲಿ, ಶಿಕ್ಷಣದಲ್ಲಿ, ಉದ್ಯೋಗಗಳಲ್ಲಿ ಸಮಾನತೆ ಕೊಟ್ಟರೆ ಭ್ರಾತೃತ್ವ ಬೆಳೆಯುತ್ತದೆ. ಆ ಭ್ರಾತೃತ್ವದ ಮೂಲಕ ದೇಶವನ್ನು ಸದೃಢ ಮಾಡಬಹುದೆಂದು ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಅಡಕವಾಗಿದೆ,' ಎಂದರು.
ಕಲಬುರ್ಗಿ ಎನ್. ವಿ. ಕಾಲೇಜು ಅಧ್ಯಾಪಕ ಡಾ. ಶಿವಾಜಿ ಮೇತ್ರೆ ಅವರು ಮಾತನಾಡಿ, `ಸಂವಿಧಾನದ ತತ್ವಗಳು ಜೀವನದಲ್ಲಿ ಅಳವಡಿಸಿಕೊಳ್ಳವ ಮೂಲಕ ಸಂವಿಧಾನಕ್ಕೆ ಗೌರವಿಸಬೇಕು,' ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟಿ ಅವರು ಮಾತನಾಡಿ , `ಸಂವಿಧಾನದ ಅಧ್ಯಯನದಿಂದ ಪ್ರತಿಯೊಬ್ಬರು ಸಂವಿಧಾನದ ಮಹತ್ವ ಅರಿಯಬೇಕು. ಅದು ನೀಡಿದ ಕರ್ತವ್ಯಗಳ ಪಾಲನೆ ಚಾಚೂ ತಪ್ಪದೇ ನಿರ್ವಹಿಸುವುದು ಅಗತ್ಯವಿದೆ,' ಎಂದರು.
ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, `ಸಂವಿಧಾನದ ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳ ಅಧ್ಯಯನದಿಂದ ನಮ್ಮ ಅರಿವು ಹೆಚ್ಚಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿನದಿದೆ. ಸಂವಿಧಾವನ್ನು ಅರ್ಥೈಸಿಕೊಳ್ಳಲು, ಅನುಸರಿಸಿಕೊಳ್ಳುವಲ್ಲಿ ನಾವು ವಿಫಲರಾದರೆ, ಸಂವಿಧಾನಕ್ಕೆ ಅಪಾಯ ಎದುರಾದಂತೆ. ಶರಣರ ಕನಸಿನ ಲೋಕ, ಸಮ ಸಮಾಜದ ಆಶಯ ಭಾರತೀಯ ಸಂವಿಧಾನದ ತಾತ್ವಿಕತೆಯಾಗಿದೆ,' ಎಂದರು.
ಕಾರ್ಯಕ್ರಮದಲ್ಲಿ ಮಾಧವಮೂರ್ತಿ, ರಮ್ಯಾ ಕೆ. ಗಾಜನೂರು, ವಿವೇಕಾನಂದ ಶಿಂಧೆ, ನಾಗವೇಣಿ ವಟಗೆ, ಅಶೋಕರೆಡ್ಡಿ ಗದಲೇಗಾಂವ, ಬಸವರಾಜ ಗುಂಗೆ, ಕೃಷ್ಣ ಸಸ್ತಾಪುರ ಅವರು ಉಪಸ್ಥಿತರಿದ್ದರು.
ಬೆಂಗಳೂರು: ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಎಸ್. ವಿ. ಶ್ರೀನಿವಾಸರಾವ್ ಅವರು ಸ್ಥಾಪಿಸಲಾದ 2023ನೇ ಸಾಲಿನ ಸಾರಂಗ...
ಬೆಂಗಳೂರು: ಅಂಕಿತ ಪ್ರಕಾಶನದ ವತಿಯಿಂದ ಚಿತ್ರಸಮೂಹ ಸಹಯೋಗದಲ್ಲಿ ಸುಚಿತ್ರಾ ಫಿಲಂ ಸೊಸೈಟಿ ಹಾಗೂ ವಾರ್ತಾ ಮತ್ತು ಸಾರ್ವಜನ...
ಬೆಂಗಳೂರು: 'ವಿನಯ ಮತ್ತು ಅಧಿಕಾರ ಒಟ್ಟಿಗೆ ಹೋಗುವುದಿಲ್ಲ. ಅಧಿಕಾರ ಬಂದರೆ ಅಹಂಕಾರ ಒಟ್ಟೊಟ್ಟಿಗೆ ಬರುತ್ತದೆ. ಕೇಂದ...
©2024 Book Brahma Private Limited.