“ನೀನೂ ಅದನ್ನು ನೋಡುವಿಯಂತೆ ಅಂದ. 'ಸರಿ ಲೊಕೇಶನ್ ಕಳಿಸು' ಅಂದೆ. ಲೊಕೇಶನ್ ಬಂದು ಬಿದ್ದಾಗ ನೋಡಿದರೆ ಅದು ಹನುಮಂತನಗರದ 'ಅಭಿನಯ ತರಂಗ' ತೋರಿಸುತ್ತಿತ್ತು. ಹೋಗಿ ನೋಡಿದರೆ ಅದು 'ಅಡುಗೆ ಮನೆಯಲ್ಲೊಂದು ಹುಲಿ' ನಾಟಕ, ಎನ್ನುತ್ತಾರೆ ಜಿ. ಎನ್. ಮೋಹನ್. ಅವರು ಬಿ. ಸುರೇಶ ಅವರ “ಅಡುಗೆ ಮನೆಯಲ್ಲೊಂದು ಹುಲಿ” ಕೃತಿಗೆ ಬರೆದ ಅನಿಸಿಕೆ.
ಸುರೇಶ ಒಮ್ಮೆ ಫೋನ್ ಮಾಡಿ 'ನನ್ನ ಅಡುಗೆ ಮನೆಗೆ ಹುಲಿ ಹೊಕ್ಕಿದೆ ಮಾರಾಯ’ ಅಂದಾಗ ನಾನು ಗಾಬರಿಯಾದೆ.
ಬೆಂಗಳೂರಿನ ಹಲವು ಹಳ್ಳಿಗಳಿಗೆ ಚಿರತೆ ನುಗ್ಗಿದ. ಹುಲಿ ಕಾಣಿಸಿಕೊಂಡ ಪ್ರಕರಣಗಳ ಆಗ ಹೇರಳವಾಗಿದ್ದವು. ಅಮೇಲಾಮೇಲೆ ನೋಡಿದರೆ ಈ ಹುಲಿ ಚಿರತೆಗಳು ಹಳ್ಳಿಗಳು ಸಾಕಿನ್ನು ಎಂದು ತೀರ್ಮಾನಿಸಿ ಪೇಟೆಯತ್ತ, ಅದರಲ್ಲೂ ರಾಜಧಾನಿಯತ್ತಲೇ ನುಗ್ಗಲು ಆರಂಭಿಸಿದವು, ಇನ್ಫೋಸಿಸ್‌ನಲ್ಲಿ ಚಿರತೆಯಂತೆ, ಇನ್ನೆಲ್ಲೋ ಹುಲಿಯಂತೆ ಅನ್ನುವ ಸುದ್ದಿ ತಲೆಯಲ್ಲಿ ಗಾಢವಾಗಿ ಕೂತಿದ್ದಾಗಲೇ ಸುರೇಶ್ ನನ್ನ ಅಡುಗೆಮನೆಗೆ ಹುಲಿ ಹೊಕ್ಕಿದೆ ಅನ್ನಬೇಕೆ?. ನಾನು ಹೌಹಾರಿ 'ಅದು ಹೇಗೋ ಮಾರಾಯ' ಅಂದೆ.
'ಅಯ್ಯೋ ನನ್ನ ಅಡುಗೆ ಮನೆ ಹೊಕ್ಕಿರುವ ಹುಲಿ ಬೆಂಗಳೂರಿನ ಬೀದಿಗೆ ನುಗ್ಗಿದ ಹುಲಿಗಿಂತ ಡೇಂಜರ್ ಮಾರಾಯ' ಅಂದ, ನಾನು ಇನ್ನೇನು ಸಿಎಂಗೆ ಹೇಳಿಸಿ ಅದರ ಮೇಲೆ ಬಲೆ ಬೀಸಬೇಕೇನೋ ಎಂದುಕೊಂಡಿರುವಾಗಲೇ ಬಾ ನೀನೂ ಅದನ್ನು ನೋಡುವಿಯಂತೆ ಅಂದ. 'ಸರಿ ಲೊಕೇಶನ್ ಕಳಿಸು' ಅಂದೆ. ಲೊಕೇಶನ್ ಬಂದು ಬಿದ್ದಾಗ ನೋಡಿದರೆ ಅದು ಹನುಮಂತನಗರದ 'ಅಭಿನಯ ತರಂಗ' ತೋರಿಸುತ್ತಿತ್ತು. ಹೋಗಿ ನೋಡಿದರೆ ಅದು 'ಅಡುಗೆ ಮನೆಯಲ್ಲೊಂದು ಹುಲಿ' ನಾಟಕ. ಸುರೇಶನಿಗೆ ಏನನ್ನಿಸಿತೋ ಏನೋ ಅದಾದ ಮೇಲೆ ಅದನ್ನು 'ಬಿ. ಸುರೇಶರ ಅಡುಗೆಮನೆಯಲ್ಲೊಂದು ಹುಲಿ' ಎಂದು ಕರೆದುಕೊಂಡ ಈ ಹುಲಿ ಅಂತಿಂತ ಹುಲಿಯಲ್ಲ. ಸುರೇಶನ ಮನೆಯ ಅಡುಗೆ ಮನೆಯೊಳಗೆ ಮಾತ್ರ ನುಗ್ಗಿರುವ ಹುಲಿಯಲ್ಲ. ಇದು ನಮ್ಮ ನಿಮ್ಮೆಲ್ಲರ ಅಡುಗೆ ಮನೆಗೆ ನುಗ್ಗಿರುವ ಹುಲಿ. ಆ ವೇಳೆಗೆ ನನ್ನ ಪುಸ್ತಕ 'ಕಾಫಿ ಕಪ್ಪಿನೊಳಗೆ ಕೊಲಂಬಸ್' ಪ್ರಕಟವಾಗಿತ್ತು. ಎಲ್ಲರೂ ಕಾಫಿ ಕಪ್‌ನೊಳಗೆ ಕೊಲಂಬಸ್? ಅದು ಹೇಗೆ? ಎಂದು ಅಚ್ಚರಿಪಡುತ್ತಿದ್ದರು. ನನಗೂ ಹಾಗೆಯೇ ಸುರೇಶನ ಅಡುಗೆಮನೆಯಲ್ಲೊಂದು ಹುಲಿ ಪರಿಚಯವಾಗಿದ್ದು
ಇದು ಅಂತಿಂತಹ ಹುಲಿಯಲ್ಲ-ಸುದ್ದಿ ಹುಲಿ, ಸುಳ್ಳು ಸುದ್ದಿಯ ಹುಲಿ, ನಮ್ಮ ಬೀದಿ ಹೊಕ್ಕು, ಮನೆ ಹೊಕ್ಕು, ಅಡುಗೆ ಮನೆ ಹೊಕ್ಕು. ನಮ್ಮ ಮನವನ್ನು ಹೊಕ್ಕು ನಮ್ಮನ್ನೇ ಆಪೋಶನ ತೆಗೆದುಕೊಳ್ಳುವ ಹುಲಿ.
ಇಂತಹ ಹುಲಿರಾಯನ ಬಗ್ಗೆ ಬರೆದ ಸುರೇಶ ನನ್ನ ಕಳೆದ ಜನ್ಮದ 'ದೋಸ್ತ'. ನಾನು ಎಂಟನೆಯ ತರಗತಿಗೆಂದು ಆಗಿನ ಕಾಲದ ಅದ್ಭುತ ಶಾಲೆ ಎಂದು ಹೆಸರು ಪಡೆದಿದ್ದ ಬೆಂಗಳೂರು ಹೈಸ್ಕೂಲ್ ಹೊಕ್ಕಾಗ ಎದುರಾದದ್ದು ಬೆಕ್ಕಿನ ಕಣ್ಣಿನ, ಸದಾ ಮುಗುಲ್ನಗುತ್ತಿದ್ದ, ಎಲ್ಲರೆಡೆಗೆ ಪ್ರೀತಿ ನೋಟ ಹರಿಸುತ್ತಿದ್ದ ಹುಡುಗ ಬಿ ಸುರೇಶ್. ಆಗಿನ ಕಾಲಕ್ಕೆ ಆತ ಶಾಲೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ. ನಾನು ನನ್ನ ತರಗತಿಯ ಮುಖ್ಯಸ್ಥ ಸ್ಥಾನಕ್ಕೆ. ಬಿ ಸುರೇಶ್ ಆ ವೇಳೆಗಾಗಳೆ ಸಾಕಷ್ಟು ಹೆಸರಾಗಿದ್ದ, ಎಲ್ಲರೂ ಹಾಗಂತೆ, ಹೀಗಂತೆ, ನಾಟಕದಲ್ಲಿ ಮಾಡ್ತಾನಂತೆ. ಸಿನೆಮಾದಲ್ಲೂ ಪಾರ್ಟ್ ಮಾಡ್ತಾನಂತೆ ಎಲ್ಲರೂ ಇವನಿಗೆ ಗೊತ್ತಂತೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಹಾಗೆ ಶಾಲೆಯ ಚುನಾವಣೆಯಲ್ಲಿ ಕೈ ಕುಲುಕಿದ ನಾವಿಬ್ಬರೂ ಆ 5 ದಶಕದ ನಂತರವೂ ನಮ್ಮ ಗೆಳೆತನವನ್ನು ಜಾರಿಯಲ್ಲಿಟ್ಟಿದ್ದೇವೆ.
ಬರೀ ಅಷ್ಟೇ ಆಗಿದ್ದರೆ ಸುರೇಶ ಹಾಗೂ ನನ್ನ ಗೆಳೆತನ ಆಗ ನಮ್ಮ ಜೊತೆಗೆ ಇದ್ದ ನೂರಾರು ಗೆಳೆಯರು ಎಲ್ಲೋ ಕಳೆದುಹೋದಂತೆ ಕಳೆದುಹೋಗುತ್ತಿತ್ತೇನೋ. ರಂಗಭೂಮಿ, ಚಲನಚಿತ್ರ, ಚರ್ಚಾಪಟುತ್ವ, ನಾಯಕತ್ವ ಗುಣಗಳು ನಮ್ಮಿಬ್ಬರಿಗೂ ಸಾಮಾನ್ಯ ಆಸಕ್ತಿಯ ವಿಷಯವಾದ್ದರಿಂದ ನಾವು ಮೇಲಿಂದ ಮೇಲೆ ಮೀಟ್ ಮಾಡುತ್ತಿದ್ದೆವು.
ಇದಕ್ಕೂ ಹೆಚ್ಚಾಗಿ ಆಗ ಬೆಂಗಳೂರು ಹೈಸ್ಕೂಲ್‌ನಲ್ಲಿ ಎಂ ವಿ ಸುಬ್ಬಣ್ಣ ಎನ್ನುವ ನಾಟಕದ ಮೇಷ್ಟ್ರು ಇದ್ದರು. ಇವತ್ತು ಮಕ್ಕಳ ರಂಗಭೂಮಿ ಏನಾದರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎನ್ನುವ ಕೆಲವು ಹೆಸರಿದ್ದರೆ ಅದರಲ್ಲಿ ಈ ಎಂ ವಿ ಸುಬ್ಬಣ್ಣನವರೂ ಇರಲೇಬೇಕು. ಅವರು ಹಾಸ್ಯ ಎನ್ನುವ ಹೆಸರಿನಲ್ಲಿ ಮಕ್ಕಳಿಗೆ ತುರುಕಲಾಗುತ್ತಿದ್ದ ಅಪಹಾಸ್ಯ ನಾಟಕಗಳಿಂದ ದೂರ ಉಳಿದು ಚಂದ್ರಶೇಖರ ಕಂಬಾರರ 'ಕಿಟ್ಟಿ ಕಥೆ'ಯಂತಹ ಪ್ರಯೋಗ ಕೈಗೆತ್ತಿಕೊಳ್ಳುತ್ತಿದ್ದರು. ಆ ನಾಟಕಗಳು ನಮ್ಮೊಳಗೆ ಅರಿವಿನ ಕದ ತೆರೆಯುತ್ತಿದ್ದವು. ಬಹುಶಃ ಅವು ನಮ್ಮ ನಾಳೆಗಳಿಗೆ ನಮ್ಮನ್ನು ಸಜ್ಜು ಮಾಡುತ್ತಿದ್ದವೋ ಏನೋ. ಅಂತಹ ನಾಟಕಗಳಲ್ಲಿ ನಾನು ಸುರೇಶ ಮತ್ತೆ ಮತ್ತೆ ಎದುರಾಗುತ್ತಿದ್ದೆವು.
ಆ ನಂತರದಲ್ಲಿ ಅವನು ಕಾಲೇಜು ಮೆಟ್ಟಿಲು ಹತ್ತಿ ಹೋದ ಮೇಲೆ ಮತ್ತೆ ಎದುರಾದದ್ದು ಎ ಎಸ್ ಮೂರ್ತಿ ಅವರ ಬೀದಿನಾಟಕಗಳ ಮೂಲಕ. ಆ ಕಾಲಕ್ಕೆ ಬೀದಿ ನಾಟಕಗಳು ವಿಶಿಷ್ಟ ಸಂಚಲನವನ್ನು ಉಂಟುಮಾಡಿತ್ತು. ಕೇವಲ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದ ನಾಟಕವನ್ನು ಎ ಎಸ್ ಮೂರ್ತಿ ಬಳಗ ಬಿಡಿಸಿಕೊಂಡು ಬೀದಿಗೆ ತಂದಿದ್ದರು. ಬೀದಿಯಲ್ಲಿದ್ದವರಿಗೆ ಅವರ ಸಮಸ್ಯೆಯನ್ನು ಬೀದಿಯಲ್ಲಿಯೇ ಆಡಿ ತೋರಿಸುತ್ತಿದ್ದರು. ಎಚ್ಚರ ಮೂಡಿಸುತ್ತಿದ್ದರು. ಯೋಚಿಸುವಂತೆ ಮಾಡುತ್ತಿದ್ದರು, ಬದಲಾವಣೆಗೆ ಕಾರಣವಾಗುವಂತೆ ಮಾಡುತ್ತಿದ್ದರು. ಇದರಲ್ಲಿ ಕಂಡದ್ದು ಬಿ ಸುರೇಶ್.
80ರ ದಶಕ ಎನ್ನುವುದು ನಮ್ಮ ಪ್ರಜ್ಞೆಯನ್ನು ರೂಪಿಸಿದ ದಶಕ. ರೈತ, ಸಾಹಿತ್ಯ, ಮಹಿಳಾ, ದಲಿತ ಚಳವಳಿಗಳು ಹುಟ್ಟುಪಡೆದ, ಊಹಿಸಲಾಗದ ಬದಲಾವಣೆಗಳನ್ನು ತಂದ ದಶಕ. ಆ ದಶಕದಲ್ಲಿಯೇ ನಮ್ಮ ನೋಟ ಸಾಕಷ್ಟು ಹರಿತವಾಗಿ ರೂಪುಗೊಂಡಿತೇನೋ., ಬಿ ಸುರೇಶ ರಂಗಭೂಮಿಯ ಚಳವಳಿಯ ಭಾಗವಾದ. ನಾನು 'ಸಮುದಾಯ'ದ ಮೂಲಕ ರಂಗ ಚಳವಳಿಗೆ ಇಳಿದರೂ ವಿದ್ಯಾರ್ಥಿ ಚಳವಳಿ ನನ್ನನ್ನು ಆ ಕಡೆಗೆ ಸೆಳೆದುಕೊಂಡಿತು.
ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಈಗಲೂ ಅಷ್ಟೇ ಗೂಗಲ್‌ನಲ್ಲಿ ಯಾವುದಾದರೂ ಚಿತ್ರ ಹುಡುಕುವಾಗ ಈ ಸುರೇಶ ಪುಟಕ್ಕನೆ ನೆಗೆದು ಬರುತ್ತಾನೆ. ಅದು 'ಘಟಶ್ರಾದ್ಧ' ಸಿನೆಮಾದ ದೃಶ್ಯ. ಬಾಲ ಸನ್ಯಾಸಿಯ ಪಾತ್ರದಲ್ಲಿ ಇರುವ ಈ ಸುರೇಶನ ಫೋಟೋ ನೋಡಿದರೆ ಈತನ ತನ್ಮಯತೆ ಕಾಡುತ್ತದೆ. ಶಂಕರ್‌ನಾಗ್‌ಗೂ ಹೀಗೆ ಕಾಡಿತ್ತೇನೋ, ಹಾಗಾಗಿಯೇ ಅವರ ಅನೇಕ ಸಿನೆಮಾಗಳಿಗೆ ಅದರಲ್ಲೂ 'ಆಕ್ಸಿಡೆಂಟ್ ಹಾಗೂ ಮಾಲ್ಗುಡಿ ಡೇಸ್'ಗೆ ಸುರೇಶ ಕೆಲಸ ಮಾಡಿದ್ದ.
ಸುರೇಶ ತೊಡಗಿಸಿಕೊಂಡ ಪ್ರತೀ ಕೆಲಸವನ್ನೂ ಗಮನಿಸಿ. ಅದು ಚಳವಳಿ, ರಂಗಭೂಮಿ, ಚಲನಚಿತ್ರ ಯಾವುದೇ ಇರಲಿ ಅವನ ಆಯ್ಕೆಯ ಅಭಿರುಚಿಯನ್ನು ಎತ್ತಿ ತೋರಿಸುತ್ತದೆ. ಅಷ್ಟೇ ಮಾತ್ರವಲ್ಲ ಅವನ ನಿಲುವನ್ನೂ ಸಾರಿ ಹೇಳುತ್ತದೆ. ಅವನು 'ಚಿರಸ್ಮರಣೆ'ಯನ್ನು ದೂರದರ್ಶನಕ್ಕೆ ನಿರ್ದೇಶಿಸಿದಾಗ, ನಿರಂಜನರ 'ಮೃತ್ಯುಂಜಯ' ನಾಟಕವನ್ನು ಕೈಗೆತ್ತಿಕೊಂಡಾಗ, ಸರ್ಕಾರದ ನಿಲುವುಗಳಿಗೆ ಸಂಬಂಧಿಸಿದಂತೆ ಮಾತನಾಡುವಾಗ, 'ಪುಟ್ಟಕ್ಕನ ಹೈವೇ' ನಿರ್ದೇಶಿಸಿದಾಗ ಇವನೊಳಗಾಡುವ ಆ ಸಮಾಜಮುಖಿ ಕಕ್ಕುಲಾತಿ ಅರಿವಿಗೆ ಬರುತ್ತದೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಎಷ್ಟು ಬಾರಿ ಸುರೇಶ್ ಕಾಣಿಸಿಕೊಂಡಿದ್ದಾನೋ ಅಷ್ಟೇ ಪುರಭವನದ ಮೆಟ್ಟಿಲ ಮೇಲೂ ಧರಣಿ ಕುಳಿತಿದ್ದಾನೆ, ಫ್ರೀಡಂ ಪಾರ್ಕ್‌ಗೆ ಈತ ಅಪರಿಚಿತನೇನಲ್ಲ, ಬೀದಿಯಲ್ಲಿ ಮಲಗುವ ಅಂಗನವಾಡಿ ಅಮ್ಮಂದಿರು ಸಹಾ ಈತನಿಗೆ ಜೊತೆಗಾರರೇ. ಚಳವಳಿಯನ್ನು ತನ್ನ ಸಿನೆಮಾ, ನಾಟಕ, ಬರಹಕ್ಕೆ ಜೋಡಿಸಿಕೊಂಡ ಕಾರಣಕ್ಕಾಗಿ ಬಿ ಸುರೇಶ್ ಅಂದರೆ ನಂಗಿಷ್ಟ, ನಮಗಿಷ್ಟ
“ಕಥಾ ಬರಹವನ್ನು ಧ್ಯಾನದಂತೆ ತಾಳ್ಮೆ ಮತ್ತು ಶ್ರದ್ಧೆಯಿಂದ ಮಾಡಿ ಮಹತ್ವದ ಕಥೆಗಳನ್ನು ರಚಿಸಿದ ನಾಯಕ ಅವರ ಕಥೆಗಳಲ...
“ಸಂಪನ್ಮೂಲ ಮತ್ತು ಸಂಪರ್ಕಗಳ ಮಿತಿಯ ಕಾರಣದಿಂದ ಕೇವಲ ಇಪ್ಪತ್ತೊಂದು ಬರೆಹಗಳನ್ನು ಮಾತ್ರ ಈ ಪುಸ್ತಕದಲ್ಲಿ ಸಂಕಲಿಸ...
“ಒಂದೊಳ್ಳೆ ಹೋಳಿಗೆ ಊಟ ಮಾಡಿದ ಅನುಭವ. ಮಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ, ಹಸಿ ಬಾಣಂತಿಯ ಎಡಗೈ ತಿಂದಷ್ಟೇ ತೃಪ...
©2025 Book Brahma Private Limited.