Date: 31-05-2021
Location: ಬೆಂಗಳೂರು
ಸಸ್ಯವಿಜ್ಞಾನಿ ಮತ್ತು ಲೇಖಕ ಬಿಜಿಎಲ್ ಸ್ವಾಮಿ ಅವರ ಮಹತ್ವದ ಮತ್ತು ಜನಪ್ರಿಯ ಕೃತಿ ’ಹಸುರು ಹೊನ್ನು’. ತಮ್ಮ ನವಿರಾದ ಹಾಸ್ಯದ ಮೂಲಕ ಸಸ್ಯವಿಜ್ಞಾನದ ವಿಷಯವನ್ನೂ ಕಟ್ಟಿಕೊಡುವ ಕನ್ನಡ ಸಾಹಿತ್ಯದ ಅನನ್ಯ ಪುಸ್ತಕ. ಈ ಕೃತಿಯ ಕುರಿತು ಲೇಖಕ- ವಿಮರ್ಶಕ ಶ್ರೀಧರ ಹೆಗಡೆ ಭದ್ರನ್ ಅವರು ತಮ್ಮ ‘ಬದುಕಿನ ಬುತ್ತಿ’ ಅಂಕಣದಲ್ಲಿ ವಿವರಿಸಿದ್ದಾರೆ.
ಹುಳಿಮಾವು ಸಿಹಿಯಾದ ಬಗೆಯನ್ನು ತಿಳಿಸಿ, ಮಾವಿನ ಭೇದ, ಪ್ರಭೇದಗಳನ್ನು ಗಮನಿಸಿ, ಶಿಲ್ಪಗಳಲ್ಲಿ, ಶುಭಕಾರ್ಯಗಳಲ್ಲಿ, ಹಬ್ಬ ಹುಣ್ಣಿಮೆಗಳಲ್ಲಿ ಅದರ ಅನಿವಾರ್ಯತೆಯನ್ನು ನಿರೂಪಿಸಿ, ಔಷಧಿಯಲ್ಲಿ ಅದರ ಪಾತ್ರ ತಿಳಿಸಿ, ಸಂಸ್ಕೃತ ಕವಿಗಳು ಅದರ ಪ್ರಭಾವಕ್ಕೊಳಗಾದರೇ? ಅದನ್ನು ಕುರಿತು ಕವಿತೆಗಳನ್ನು ಬರೆದಿರುವರೇ? ಎಂದು ಪ್ರಶ್ನಿಸಿ, ತಮಿಳು ಕವಿಗಳು ಅದಕ್ಕೆ ಮಾರುಹೋದ ಬಗೆಯನ್ನು ವರ್ಣಿಸಿ, ಕನ್ನಡ ಕವಿಗಳು- ಪಂಪನಿಂದ ಈಹೊತ್ತಿನವರೆಗೆ ಅದರಿಂದ ಹೇಗೆ ಪ್ರಭಾವಿತರಾದರೆಂಬುದನ್ನು ನಿದರ್ಶಿಸುವ ವೇಳೆಗೆ ನಾವು ಸಂಪೂರ್ಣವಾಗಿ ಕಾವ್ಯ ಪ್ರಪಂಚದಲ್ಲಿ ತಲ್ಲೀನರಾಗುತ್ತೇವೆ. ಸಾಹಿತ್ಯವೂ ವಿಜ್ಞಾನವೂ ಸಮಕೈಯಾಗಿ ಸಾಗುವ ಇಂಥ ಪ್ರಕರಣಗಳು ಇದರಲ್ಲಿ ಹಲವಾರಿವೆ - ಇದೊಂದು ಪುಸ್ತಕದ ರಕ್ಷಾಪತ್ರದ ಮೆಲೆ ಮುದ್ರಿತವಾಗಿರುವ ಒಂದು ಪರಿಚಯಾತ್ಮಕ ವಾಕ್ಯ ಪುಂಜ. ಪುಸ್ತಕವನ್ನು ಸಾರವತ್ತಾಗಿ ಪರಿಚಯಿಸುವ ಈ ಮಾತುಗಳು ಯಾವ ಪುಸ್ತಕದ ಬಗೆಗಿನದು ಎಂಬುದು ಆಧುನಿಕ ಕನ್ನಡದ ಚಿರಕೃತಿಗಳನ್ನು ಓದಿ ಬಲ್ಲವರಿಗೆ ಈಗಾಗಲೇ ತಿಳಿದಿರುತ್ತದೆ. ಹೌದು ನಿಮ್ಮ ಊಹೆ ಸರಿ. ಇದು ಡಾ. ಬಿ. ಜಿ. ಎಲ್. ಸ್ವಾಮಿಯವರ ’ಹಸಿರು ಹೊನ್ನು’ ಪುಸ್ತಕದ ಪರಿಚಯ. 1976ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಪುಸ್ತಕ ಇದುವರೆಗೆ ಹತ್ತಾರು ಮರುಮುದ್ರಣಗಳನ್ನು ಕಂಡಿದೆ.
ಬೆಂಗಳೂರು ಗುಂಡಪ್ಪನವರ ಲಕ್ಷ್ಮೀನಾರಾಯಣ ಸ್ವಾಮಿ (1918-1980) ಎಂದರೆ ಇವರು ಯಾರು ಎಂದು ಕ್ಷಣ ಯೋಚಿಸಬೇಕಾಗಬಹುದು. ಆದರೆ ’ಬಿ. ಜಿ. ಎಲ್. ಸ್ವಾಮಿ’ ಅಂದ ತಕ್ಷಣ ಸಾಹಿತ್ಯಪ್ರೇಮಿಗಳ ಮುಂದೆ ಒಂದು ಅಪರೂಪದ ವ್ಯಕ್ತಿಯ ಚಿತ್ರ ಮೂಡುತ್ತದೆ. ಇನ್ನೂ ಹತ್ತಿರದವರಿಗೆ ಅವರು ಬರಿಯ ’ಸ್ವಾಮಿ’ಯಾಗಿದ್ದರು. ತಂದೆ ಕನ್ನಡದ ಸುಪ್ರಸಿದ್ಧ ದಿಗ್ಗಜ ಲೇಖಕ ಡಿ. ವಿ. ಗುಂಡಪ್ಪನವರು. ದೊಡ್ಡವರ ಮಕ್ಕಳಾಗಿ ಹುಟ್ಟಿ, ಅವರ ಕೀರ್ತಿಯ ಪ್ರಭಾವಳಿಯಲ್ಲಿ ಆರಾಮವಾಗಿ ಬದುಕುವುದು ಸುಲಭ. ಆದರೆ ಅಂತಹ ತಂದೆಗೆ ತಕ್ಕ ಮಗನಾಗಿ ಉಳಿಯುವುದು ಕಠಿಣ. ಅಂತಹ ವಿರಳರ ಸಾಲಿಗೆ ಸೇರುವವರು ಬಿಜಿಎಲ್ ಸ್ವಾಮಿ.
’ಹಸಿರು ಹೊನ್ನು’ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭಕ್ಕೇ ಒಂದು ವಿಶೇಷ ಪುಸ್ತಕ. ಪ್ರವಾಸ ಕಥನದಂತೆಯೂ ಸಸ್ಯಶಾಸ್ತ್ರದಂತೆಯೂ ಪ್ರಬಂಧ ಗುಚ್ಚದಂತೆಯೂ ಕಾಣಿಸುವ ಸಂಮಿಶ್ರ ಸ್ವರೂಪದ ಈ ಪುಸ್ತಕ ಇವೆಲ್ಲ ಪ್ರಕಾರಗಳನ್ನೂ ಧಾರಣ ಮಾಡಿದೆ. ಆಧುನಿಕ ಕನ್ನಡ ಸಾಹಿತ್ಯದ ಸೃಜನಶೀಲ-ಸೃಜನೇತರ ಎಂಬ ಸುಲಭ ವರ್ಗೀಕರಣಕ್ಕೆ ಸಿಲುಕದ ಅನೇಕ ಪುಸ್ತಕಗಳನ್ನು ಸ್ವಾಮಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ಹಸಿರು ಹೊನ್ನು ಒಂದು ಮುಖ್ಯ ಕೃತಿ. ತಾವು ಕೆಲಸ ಮಾಡುತ್ತಿದ್ದ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಗಳನ್ನು ಕ್ಷೇತ್ರ ಕಾರ್ಯಕ್ಕೆ ಕರೆದೊಯ್ಯುವ ಮತ್ತು ಆ ಸಂದರ್ಭದಲ್ಲಿ ವಿವಿಧ ಸಸ್ಯಗಳನ್ನು ಸಂಗ್ರಹಿಸುವ ಸರಳ ಉದ್ದೇಶದ ಹಿನ್ನೆಲೆ ಈ ಕೃತಿಯದು. ಆದರೆ ಅದು ಸಾಧಿಸುವ ಯಶಸ್ಸು ಹಲವು ಮುಖಗಳದು.
ಜಾಗತಿಕ ಮಟ್ಟದ ಸಸ್ಯಶಾಸ್ತ್ರಜ್ಞರಾಗಿದ್ದ ಬಿಜಿಎಲ್ ಸ್ವಾಮಿಯವರು ತಮ್ಮ ಸಸ್ಯಶಾಸ್ತ್ರ ಜ್ಞಾನದ ಪ್ರದರ್ಶನದಿಂದ ಪುಸ್ತಕವನ್ನು ಪ್ರಾರಂಭಿಸುವುದಿಲ್ಲ. ಬದಲಿಗೆ ಇದು ಪ್ರಾರಂಭವಾಗುವುದು; ಸಸ್ಯ ಪ್ರಪಂಚದ ಪರಿಚಯ ಮಾಡಿಕೊಳ್ಳಲು ಹೊರಟ ವಿದ್ಯಾರ್ಥಿ-ವಿದ್ಯಾರ್ಥಿನಿ-ಅಧ್ಯಾಪಕರ ತಂಡದ ಪ್ರವಾಸ ಕಥನದ ರೂಪದಲ್ಲಿ. ಪ್ರವಾಸ ಹೊರಡುವ ಮೊದಲು ಸಿದ್ಧತೆ ಆರಂಭಿಸಿದಾಗ ಮೇಲಧಿಕಾರಿಯಾಗಿದ್ದ ಪ್ರಿನ್ಸಿಪಾಲ ಮೆಮೊ ಕಳಿಸಿ ಸೃಷ್ಟಿಸುವ ಉಪದ್ರವಗಳಿಂದ ಓದುಗನ ಮುಖದಲ್ಲಿ ಕಿರುನಗೆ ಅರಳುತ್ತದೆ. ತಮ್ಮ ಕಾಲೇಜು ರಂಗ, ಕಾಲೇಜು ತರಂಗ ಪುಸ್ತಕಗಳಲ್ಲಿ ತಂದ ಪ್ರಿನ್ಸಿಪಾಲರನ್ನೇ ಸ್ವಾಮಿಯವರು ಇಲ್ಲಿಯೂ ತಂದಿದ್ದಾರೆ.
ಇಲ್ಲಿಯ ಪ್ರಿನ್ಸಿಪಾಲ್ ಸ್ವಪ್ರತಿಷ್ಠಾ ಗೀಳಿನವನು. ಅವನನ್ನು ಸ್ವಾಮಿಯವರು ವಿವರಿಸುವ ರೀತಿ ಇದು: ಅವನು ಯಾವ ಒಳ್ಳೆಯ ಕೆಲಸಕ್ಕೂ ಅಡ್ಡ ಬರುತ್ತಾನೆ, ಕಿರುಕುಳ ಕೊಡುತ್ತಾನೆ, ಗೋಳಿಗೆ ಸಿಕ್ಕಿಸುತ್ತಾನೆ, ಮುರಿದು ಬಾಯಿಗೆ ಹಾಕಿಕೊಳ್ಳುತ್ತಾನೆ. ಪ್ರಿನ್ಸಿಪಾಲ್ ಎತ್ತಿದ ಆಕ್ಷೇಪಗಳಿಗೆ ಸ್ವಾಮಿಯವರು ಕೊಡುವ ಸಮಾಧಾನಗಳು ಏಟಿಗೆ ಎದಿರೇಟಿನಂಥವು. ಇದು ಪುಸ್ತಕದ ಆರಂಭದಲ್ಲಿಯ ಸ್ವಾರಸ್ಯಕರ ಭಾಗ. ಕಾಡಿನಲ್ಲಿ ಗೊತ್ತು ಮಾಡಿದ ಕೂಲಿಗಳಿಗೆ ಕೊಡಲಾಗುತ್ತಿರುವ ದಿನಗೂಲಿ ಹೆಚ್ಚೆಂದು ಅವನಿಂದ ಆಕ್ಷೇಪ ಬಂದಾಗ; ಸ್ವಾಮಿಯವರು ’ಒಂದು ಜೊತೆ ಕತ್ತೆಗಳನ್ನು ಕೊಂಡಿಟ್ಟುಕೊಳ್ಳಿ’ ಎಂದು ಸಲಹೆ ನೀಡುತ್ತಾರೆ. ಏಕೆಂದರೆ; ’ಕತ್ತೆಗಳು ಸದ್ದಿಲ್ಲದೆ ಹೊರೆ ಹೊರುತ್ತವೆ, ದಿನಗೂಲಿಯನ್ನು ಕೇಳುವುದಿಲ್ಲ’. ಇದೇ ಮುಂದೆ ’ಗಾರ್ದಭ ಪುರಾಣ’ವಾಗಿ ಬೆಳೆಯುತ್ತದೆ. ತನ್ನ ಕೈಕೆಳಗಿನ ಸಹೋದ್ಯೋಗಿಯೊಬ್ಬನ ಯಶಸ್ಸಿಗೆ ಹೊಟ್ಟೆಯುರಿ ಪಡುವ, ಪೀಡಿಸುವ ಮೇಲಧಿಕಾರಿಗಳು ಈಗಲೂ ಕಾಣಸಿಗುತ್ತಾರೆ. ಇಂದಿಗೂ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಇರುವ ಇಂತಹ ದರ್ಪಿಷ್ಠ ಅಧಿಕಾರಿ, ಆಡಳಿತಗಾರರಿಗೆ ನಗುವಿನೊಂದಿಗೇ ಸ್ವಾಮಿಯವರು ಕಪಾಳಮೋಕ್ಷ ಮಾಡಿದ್ದಾರೆ. ಸರ್ಕಾರೀ ನೌಕರರೆಂದರೆ ಹೇಗೆ ’ಹುಲಿಯ ಬಾಲವನ್ನು ಹಿಡಿದು ನಿಂತವರು’ ಎಂಬ ವಿವರವನ್ನು ಫಾರೆಸ್ಟರ್ ಹೇಳುವುದನ್ನು ಓದಿಯೇ ಅನುಭವಿಸಬೇಕು.
ಅಧ್ಯಯನ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರನ್ನು ಹಾಸ್ಯ ಮಾಡುವುದು ಸ್ವಾಮಿಯವರಿಗೆ ಇಷ್ಟದ ಕೆಲಸ. ಆ ಹುಡುಗಿಯರ ಹಾವಭಾವಗಳು, ಅಲಂಕಾರ ವಿಶೇಷಗಳು, ವರ್ತನಾ ವಿಶೇಷಗಳು ಪುಸ್ತಕದ ಉದ್ದಕ್ಕೂ ಗಮನ ಸೆಳೆಯುತ್ತವೆ. ಅವರು ಚಿತ್ರಿಸಿರುವ ಡೈಸಿ, ಕಲ್ಪಕಂ ಇತರರು ಚಿರ ಯೌವ್ವನೆಯರಾಗಿ ಶೋಭಿಸುತ್ತಾರೆ. ನಾಪತ್ತೆಯಾದ ಪಂಚಕನ್ಯೆಯರು, ಪ್ರಭಾವತಿ ದರ್ಬಾರು ಇಂಥ ಪ್ರಸಂಗಗಳಲ್ಲಿ ಸ್ವಾರಸ್ಯ ತುಂಬಿ ತುಳುಕುತ್ತದೆ. ಪ್ರಭಾವತಿ ದರ್ಬಾರಿನ ದೃಶ್ಯದ ತುಣುಕೊಂದು ಹೀಗಿದೆ; ಕಲ್ಪಕಂ ಮಂಚದ ಮೇಲೆ ಸುತ್ತಿದ ಹಾಸಿಗೆಯನ್ನೊರಗಿಕೊಂಡು ಕಾಲು ಚಾಚಿ ಪವಡಿಸಿದ್ದಾಳೆ. ಬಿರಿಹಾಕಿದ ತಲೆಕೂದಲನ್ನು ವನಜ ಬಾಚುತ್ತಿದ್ದಾಳೆ. ಜಾನಕಿ ಅವಳ ಭುಜದ ಹತ್ತಿರ ಟ್ರಂಕೊಂದರ ಮೇಲೆ ಕುಳಿತು ಕಾಗದದ ಚೀಲದಿಂದ ಬಿಸ್ಕತ್ತುಗಳನ್ನು ತೆಗೆದು ಕಲ್ಪಕಂನ ಬಾಯಲ್ಲಿ ಇರಿಸುತ್ತಿದ್ದಾಳೆ. ಮಧ್ಯೆ ಮಧ್ಯೆ ತಾನೂ ತಿನ್ನುತ್ತಿದ್ದಾಳೆ.... ಸಸ್ಯಯಾತ್ರೆಯಲ್ಲಿ ತಂಡಕ್ಕೆ ಉಂಟಾಗುವ ಸುಖ-ದುಃಖದ ನೂರಾರು ಅನುಭವಗಳು, ಅನಿರೀಕ್ಷಿತ ಅಚ್ಚರಿಗಳು, ಪ್ರಕೃತಿಯ ವಿವಿಧ ಭಂಗಿಯ ಆಪ್ತ ದೃಶ್ಯಗಳು, ತಂಡದ ವಿದ್ಯಾರ್ಥಿಗಳು ಒಂದು ಮನೆಯವರಂತೆ ಕಚ್ಚಾಡುವ ವಿನೋದ ಪ್ರಸಂಗಗಳು- ಇವೆಲ್ಲವೂ ಸೇರಿ ನೀರಸವಾಗಬಹುದಾದ ಶಾಸ್ತ್ರ ವಿಚಾರದ ವಿಷಯವನ್ನು ರಸಪಾಕವನ್ನಾಗಿಸಿವೆ. ಸಂಚು ಬಯಲಾಯಿತು, ಮಾಂಸಾಹಾರಿಯ ಗೋಳು, ಚಿಪ್ಪಿನಲ್ಲಿ ಟೀ, ಆನೇ ಹಳ್ಳದಲ್ಲಿ ಹುಡುಗಿಯರು, ಸಾಹೇಬರ ಸೆಣಸಾಟ ಈ ಉಪಶೀರ್ಷಿಕೆಗಳ ಲವಲವಿಕೆಯನ್ನು ಓದಿಯೇ ಚಪ್ಪರಿಸಬೇಕು.
ನವಿರಾದ ಘಟನೆಯ ನಿರೂಪಣೆಯ ಮೂಲಕ ಓದುಗರ ಮನಸ್ಸನ್ನು ಒಲಿಸಿಕೊಂಡು ಮೆಲ್ಲನೆ ತಾವು ಹೇಳಬೇಕಾದ ವಿಚಾರಗಳ ಸುರುಳಿಯನ್ನು ಸ್ವಾಮಿಯವರು ಬಿಚ್ಚುತ್ತಾರೆ. ತೆಕ್ಕಡಿ ಕಾಡಿನಲ್ಲಿ ಪ್ರವಾಸ ಮಾಡುವಾಗ ’ಸರ್ಪಗಂಧಿ’ಯ ಪ್ರಸ್ತಾಪ ಬರುತ್ತದೆ. ಈ ಗಿಡದ ಬೇರುಗಳ ಚಿಕಿತ್ಸಾಗುಣ ಚರಕಸಂಹಿತೆಯಲ್ಲೇ ಪ್ರಸಿದ್ಧವಾಗಿತ್ತು. ಈ ಬೇರಿನಲ್ಲಿರುವ ಯಾವುದೋ ಅಂಶದಿಂದ ಮನಸ್ಸಿನ ತಳಮಳ ನಿಲ್ಲುತ್ತಿದ್ದುದನ್ನು ಕಂಡು ಹಿಡಿದ ಬಗೆ; 1931ರಲ್ಲಿ ಭಾರತದ ಇಬ್ಬರು ವಿಜ್ಞಾನಿಗಳು ಸರ್ಪಗಂಧಿ ಬೇರಿನಿಂದ ಎರಡು ಬಗೆಯ ಹರಳುಗಳನ್ನು ಬೇರ್ಪಡಿಸಿದ್ದು, ಆ ಬೇರಿನ ಪುಡಿ ಸೇವನೆಯಿಂದ ಹುಚ್ಚು ಗುಣವಾಗುತ್ತಿದ್ದುದು, ಗಿಡದಿಂದ ಪ್ರತ್ಯೇಕಿಸಿದ ಹರಳುಗಳಿಂದ ರಕ್ತದ ಒತ್ತಡ ಹತೋಟಿಗೆ ಬಂದಿದ್ದು, ಪಾಶ್ಚಾತ್ಯರಿಗೆ ಈ ಮೂಲಿಕೆಯ ಗುಣ ತಿಳಿದುಬಂದದ್ದು, ಮೂಲಿಕೆಯಿಂದ ರಿಸರ್ಪಿನ್ ದ್ರವವನ್ನು ಅವರು ಪ್ರತ್ಯೇಕಿಸಿದ್ದು, ಇದು ತಿಳಿದ ಮೇಲೆ ವಿವೇಕಶೂನ್ಯರಾಗಿ ನಮ್ಮವರು ಮಣಗಟ್ಟಲೆ ಬೇರನ್ನು ಅಮೆರಿಕಕ್ಕೆ ರಫ್ತು ಮಾಡಲು ತೊಡಗಿ ಕಾಡನ್ನು ಖಾಲಿ ಮಾಡಿದ್ದು-ಹೀಗೆ ಒಂದು ಸಸ್ಯದ ಪೂರ್ವಾಪರಗಳೆಲ್ಲವನ್ನೂ ಸ್ವಾಮಿ ವಿವರಿಸುತ್ತಾ ಸಾಗುತ್ತಾರೆ. ಇದೇ ರೀತಿ ತಾಪಿಯೋಕ, ಮಾಧವೀಲತೆ, ಅನಿಮೋನ್, ಅಶ್ವತ್ಥ, ಗ್ಲೋರಿಯೋಸ, ಬಕುಲ, ಮಜ್ಜಿಗೆ ಹುಲ್ಲು, ಮೆಣಸು, ಅಶೋಕ, ನಾಗಸಂಪಿಗೆ, ಶ್ರಿತಾಲ, ಕೇದಗೆ, ಬಿದಿರು, ಆನೆಹುಲ್ಲು ಮೊದಲಾದ ನೂರಾರು ಜಾತಿಯ ಸಸ್ಯಗಳ ಪರಿಚಯ ನಿರಾಯಾಸವಾಗಿ ಓದುಗನಿಗೆ ಆಗುತ್ತದೆ.
ಸ್ವಾಮಿಯವರು ವಿಜ್ಞಾನಿ ಮಾತ್ರವಲ್ಲ. ಕಲಾಪ್ರಿಯರು, ಸಾಹಿತ್ಯ ಸಂಸ್ಕೃತಿ ಕಲೆಗಳ ವಿದ್ಯಾರ್ಥಿ. ಸಂಸ್ಕೃತ, ಕನ್ನಡ, ತಮಿಳು, ಮಲೆಯಾಳಂ, ಇಂಗ್ಲಿಶ್ ಹೀಗೆ ಬಹುಭಾಷೆಗಳ ಪಂಡಿತರು, ಫ್ರೆಂಚ್ ಹಾಗೂ ಜರ್ಮನ್ ಭಾಷೆಗಳಲ್ಲೂ ಲೇಖನ ಬರೆದವರು; ಲ್ಯಾಟಿನ್, ಸ್ಪ್ಯಾನಿಷ್ ಭಾಷೆಗಳನ್ನೂ ಬಲ್ಲವರು. ಹೀಗಾಗಿ ಮತ್ತೆ ಮತ್ತೆ ವಿಜ್ಞಾನ ಪ್ರಪಂಚದಿಂದ ಸಾಹಿತ್ಯ - ಕಲೆಗಳ ಪ್ರಪಂಚಕ್ಕೆ ಜಾರಿಕೊಳ್ಳುತ್ತೇವೆ. ಸಸ್ಯಗಳನ್ನು, ಮರಗಳನ್ನು ನಮ್ಮ ಕಾವ್ಯ ಕಲೆಗಳ ಪ್ರಪಂಚದ ಭಾಗವಾಗಿ, ಭಾಗ್ಯವಾಗಿ ಕಾಣುತ್ತೇವೆ. ಇದಕ್ಕೊಂದು ಸಾಕ್ಷಿ; ಭಾರತದಾದ್ಯಂತ ಬಹು ಕಾಲದಿಂದಲೂ ನಮ್ಮ ಸಂಸ್ಕೃತಿಯೊಂದಿಗೆ ಬೆಳೆದು ಬಂದಿರುವ ಕದಂಬ ವೃಕ್ಷ (Anthoce phallus cadamba) ಇದು. ಹಿಮಾಚಲದ ತಪ್ಪಲು ಕಾಡುಗಳಲ್ಲಿ ಬಳುಕಾಡುತ್ತಿದ್ದ ಈ ಮರಗಳನ್ನು ಸೌಂದರನಂದ ಕಾವ್ಯ ವರ್ಣಿಸಿದೆ... ಉತ್ತರ ಭಾರತದ ಪುರಾಣಗಳ ಪ್ರಕಾರ ಕೃಷ್ಣನ ಬಾಲಲೀಲೆಗಳೊಡನೆ ನಿಕಟ ಸಂಬಂಧ ಪಡೆದಿದ್ದ ಮರ ಕದಂಬ. ತಾಳಗುಂದ ಶಾಸನದ ಪ್ರಕಾರ ಕದಂಬ ವಂಶಕ್ಕೆ ಹೆಸರಿತ್ತ ಮರ ಕದಂಬ. ಶಿವಪಾರ್ವತಿಯರ ಸರಸ ಸಲ್ಲಾಪಕ್ಕೆ ಎಡೆಕೊಟ್ಟು ಪುತ್ರೋತ್ಸವ ಸಮಯದಲ್ಲಿ ಛತ್ರದಂತೆ ಆಶ್ರಯವಿತ್ತಿದ್ದು ಕದಂಬ. ಹೀಗೆ ಕದಂಬ ವೃಕ್ಷದ ಬಗ್ಗೆ ಈ ಮೊದಲೇ; ಅಂದರೆ ಎ. ಆರ್. ಕೃಷ್ಣಶಾಸ್ತ್ರಿಗಳ ಪ್ರೋತ್ಸಾಹದಿಂದ ಪ್ರಬುದ್ಧ ಕರ್ಣಾಟಕಕ್ಕೆ ಬರೆದ ತಮ್ಮ ಮೊದಲ ಲೇಖನದ ಮೂಲಕ ಮಾಡಿದ್ದ ಬರೆವಣಿಗೆ ಇನ್ನೂ ಸುಸ್ಪಷ್ಟಗೊಂಡಿದೆ. ಅದಕ್ಕಾಗಿಯೇ ಕದಂಬದ ಕುರಿತ ವಿವರ ಇಲ್ಲಿಗೇ ನಿಲ್ಲುವುದಿಲ್ಲ. ಕವಿಗಳು ಕದಂಬಕ್ಕೆ ಕೊಟ್ಟಿರುವ ಹೆಸರುಗಳು, ತಮಿಳು ಸಾಹಿತ್ಯ ಹಾಗೂ ಇತಿಹಾಸದ ಬರಹಗಳಲ್ಲಿ ಬಂದಿರುವ ಕದಂಬದ ಎಲ್ಲ ವಿವರಗಳು ಹೀಗೆ ಸಮಗ್ರ, ಪರಿಪೂರ್ಣ ಚಿತ್ರಣ ನಮಗೆ ಇಲ್ಲಿ ಲಭ್ಯವಾಗುತ್ತದೆ.
ಪಕ್ಕದ ಪೊದರುಗಳ ಕೆಳಗೆ ಒಂದು ಬಗೆಯ ಪರಾವಲಂಬಿ (Parasite) ಬೆಳೆಯುತ್ತಿತ್ತು. ಮೊದಲೇ ಮಸುಕು. ಪೊದೆಗಳ ಕೆಳಗೆ ಇನ್ನೂ ಕತ್ತಲೆ. ಪರಾವಲಂಬಿಯ ಬಣ್ಣ ಕಪ್ಪು ಮಿಶ್ರಿತವಾದ ಊದ. ಗಿಡಕ್ಕೆ ಕಾಂಡವಿಲ್ಲ, ಎಲೆಯಿಲ್ಲ. ನೆಲದಿಂದ ನೇರವಾಗಿ ಉದ್ಭವಿಸಿದ ಹೂಗೊಂಚಲು ಚೆಂಡಿನಂತೆ ಕಾಣುತ್ತದೆ- ಈ ಗಿಡಕ್ಕೆ ಬಲನಾಫೊರ್ (Balanaphora) ಎನ್ನುತ್ತೇವೆ. ಈ ಜಾತಿಯಲ್ಲಿ ಗಂಡು ಗಿಡ ಬೇರೆ, ಹೆಣ್ಣು ಗಿಡ ಬೇರೆ. ಬಣ್ಣದಲ್ಲಾಗಲಿ ರೂಪದಲ್ಲಾಗಲಿ ವ್ಯತ್ಯಾಸವೇನೂ ಇಲ್ಲ. ಹೂ ಅರಳಿದ ಮೇಲೆ ಲಿಂಗ ವ್ಯತ್ಯಾಸ ವ್ಯಕ್ತವಾಗುತ್ತದೆ...
ಮರಗಳಲ್ಲೆಲ್ಲ ಅತಿ ದೊಡ್ಡದು ಶಾಲ್ಮಲಿ ಎಂಬುದನ್ನು ವೇದಕಾಲದ ಋಷಿಗಳು ಅರಿತಿದ್ದರು. (ತೈತ್ತರೀಯ, ವಾಜಸನೇಯೀ ಸಂಹಿತೆಗಳು, ಶತಪಥ, ಪಂಚವಿಂಶ ಬ್ರಾಹ್ಮಣಗಳು); ವಧೂವರರನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವ ರಥವನ್ನು ಶಾಲ್ಮಲೀ ಮರದಿಂದ ತಯಾರಿಸುವುದು ಋಗ್ವೇದ ಕಾಲದ ಸಂಪ್ರದಾಯವಾಗಿತ್ತು. ಇದರ ಹಣ್ಣು ವಿಷಮಿಳಿತವಾದದ್ದೆಂಬ ಪ್ರತೀತಿಯೂ ಅವರಲ್ಲಿತ್ತು. ಅರ್ಥಶಾಸ್ತ್ರದ ಕಾಲದಲ್ಲಿ ಹಳ್ಳಿಗಳ ಮೇರೆಯನ್ನು ಸೂಚಿಸುವುದಕ್ಕಾಗಿ ಶಾಲ್ಮಲೀ ಮರಗಳನ್ನು ನೆಡುತ್ತಿದ್ದರು. ದಿಂಬುಗಳಿಗೆ ಇದರ ಹತ್ತಿಯನ್ನು ತುಂಬುವುದು ಶಿಲಪ್ಪದಿಗಾರಂ ಕಾಲದಿಂದಲೂ ತಿಳಿದುಬಂದಿರುವ ಸಂಗತಿಯೇ. ಅಣಲು ಕೆಂಪು ಬಣ್ಣದ ಹೂಗಳು ದೇವಿಯ ಬಲಿ ಪೀಠದ ಮೇಲೆ ರಾಶಿ ಬೀಳುತ್ತಿದ್ದ ದೃಶ್ಯವನ್ನೂ ಇದೇ ಗ್ರಂಥ ತಿಳಿಸುತ್ತದೆ. ಈಗಲೂ ಅಷ್ಟೆ, ಹೂ ತಳೆದ ಮರದಡಿ ಒಂದಷ್ಟು ಹೊತ್ತು ನಿಂತರೆ ನಮಗಾಗುವ ಅನುಭವವೂ ಇದೇ.... ಹೀಗೆ ಸಸ್ಯ-ವೃಕ್ಷ ಜಗತ್ತಿನ ಬಗ್ಗೆ ಇನ್ನೇನೂ ಸೇರಿಸಲು ಸಾಧ್ಯವಿಲ್ಲ ಎಂಬಷ್ಟು ಸಂಗತಿಗಳನ್ನು ಸ್ವಾಮಿಯವರು ನೀಡುತ್ತಾ ಹೋಗುತ್ತಾರೆ. ಇವುಗಳಲ್ಲಿ ವಿಜ್ಞಾನದೊಂದಿಗೆ; ವೇದ, ಪುರಾಣ, ಜಾನಪದ, ಭಾಷಾ ವಿಜ್ಞಾನ, ಸಮಾಜಶಾಸ್ತ್ರ, ಸಾಹಿತ್ಯ, ಚರಿತ್ರೆ ಹೀಗೆ ಎಲ್ಲ ಶಿಸ್ತುಗಳ ವಿಚಾರಗಳೂ ಸಮ್ಮಿಲಿತಗೊಂಡಿರುತ್ತವೆ. ಇಲ್ಲೆಲ್ಲ ಅವರ ಆಸಕ್ತಿಯ ಕ್ಷೇತ್ರಗಳ ವ್ಯಾಪ್ತಿ, ಅವರ ಬಹುಶ್ರುತ ವ್ಯಕ್ತಿತ್ವದ ಸಹಜ ದರ್ಶನವಾಗುತ್ತದೆ. ಈಗ ವಿಜ್ಞಾನ ಇಷ್ಟು ಮುಂದುವರಿದಿರುವ ಹೊಸಕಾಲದಲ್ಲೂ ’ಹಸಿರು ಹೊನ್ನು’ ಪುಸ್ತಕ ಓದುವ ಯಾವ ತಜ್ಞ ಓದುಗನೂ ತಬ್ಬಿಬ್ಬಾಗುವಂತಹ ಬರವಣಿಗೆ ಇಲ್ಲಿದೆ.
’ಹಸಿರು ಹೊನ್ನು’ ಸಸ್ಯ ಜಗತ್ತಿನ ಶ್ರೀಮಂತಿಕೆ, ಸೊಗಸು, ವೈವಿಧ್ಯ, ಮಾನವ ಬದುಕಿಗೆ ಅದು ನೀಡುವ ಕೊಡುಗೆ ಎಲ್ಲವನ್ನೂ ಸ್ವಾರಸ್ಯಕರವಾಗಿ ವಿವರಿಸುತ್ತದೆ. ಪ್ರತಿ ಗಿಡವೂ ಬೆಳೆಯುವ ಆವರಣ ನಮ್ಮ ಕಣ್ಣೆದುರು ಬರುತ್ತದೆ. ನಮ್ಮನ್ನು ಕಾಡಿಗೆ ಕರೆದೊಯ್ದು ಆ ಜಗತ್ತಿನ ಭಾಗವೇ ನಾವಾಗುವಂತೆ ದರ್ಶಿಸುತ್ತದೆ. ಹೀಗೆ ಸಸ್ಯ ಜಗತ್ತಿಗೆ ಸಂಬಂಧಿಸಿದ ಕೃತಿಯಾದರೂ ಇದು ಮಾನವ ಜಗತ್ತಿಗೂ ಅಷ್ಟೇ ಪ್ರಾಶಸ್ತ್ಯ ನೀಡಿದೆ. ಪ್ರವಾಸದ ತಂಡದವರೆಲ್ಲಾ ಪ್ರತ್ಯೇಕ ವ್ಯಕ್ತಿತ್ವದ ಸ್ತ್ರೀ ಪುರುಷರಾಗಿ ಶೋಭಿಸುತ್ತಾರೆ. ಜ್ಞಾನದ ದೈತ್ಯ ಹಸಿವಿನ ಪ್ರಾಧ್ಯಾಪಕ, ಆಗಷ್ಟೇ ತಾರುಣ್ಯಕ್ಕೆ ಕಾಲಿಟ್ಟಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಅವರ ಹುಡುಗಾಟ - ಚೇಷ್ಟೆ, ಹುಡುಗಿಯರ ಬೆಡಗು ಬಿನ್ನಾಣಗಳು, ಹೊರಗೆ ಧೈರ್ಯದ ಪ್ರದರ್ಶನವಿದ್ದರೂ ಒಳಗೆ ಹೆದರಿಕೆ, ಅವರನ್ನು ಗೋಳುಹೊಯ್ದುಕೊಳ್ಳುವ ಹುಡುಗರು, ಕಾಡಿನ ಪ್ರವಾಸದಲ್ಲಿ ಇವರ ಜೀವನ ಇವೆಲ್ಲವನ್ನೂ ಕಹಿಯಿಲ್ಲದ ಹಾಸ್ಯದ ಲೇಪನದೊಂದಿಗೆ ಸ್ವಾಮಿ ಚಿತ್ರಿಸುತ್ತಾ ಸಾಗುತ್ತಾರೆ. ಪ್ರವಾಸಕ್ಕೆ ಸಂಬಂಧಿಸಿದ ಒಂದು ಮೋಜಿನ ಪ್ರಸಂಗದಲ್ಲಿ ಮುಳುಗಿರುವಾಗ ಸದ್ದಿಲ್ಲದೇ ಮುಂದಿನ ಅಧ್ಯಾಯದಲ್ಲಿ ಒಂದು ಸಸ್ಯ ಜಾತಿಯ ಪರಿಚಯವನ್ನೋ ಮರದ ಪ್ರವರವನ್ನೋ ಶುರು ಮಾಡುತ್ತಾರೆ. ಹೀಗಾಗಿ ಓದುಗ ಒಣ ಶಾಸ್ತ್ರ ಗ್ರಂಥದ ಓದಿನ ಭಾರದಿಂದ ಕಳಚಿಕೊಳ್ಳುತ್ತಾನೆ.
ಅಧ್ಯಯನ ಪ್ರವಾಸಕ್ಕೆ ಸ್ವಾಮಿಯವರು ಆರಿಸಿಕೊಂಡಿರುವ ಪ್ರದೇಶಗಳೂ ಅಷ್ಟೇ ಸೊಗಸಿನವು. ’ಮಾತ ಮೂದಲಿಸುವ ಮಹಾರಣ್ಯ ಸರಣಿ’; ಕೇರಳದ ತೆಕ್ಕಡಿ ಅರಣ್ಯ ’ಮರಕತಮಯ ಸಿಂಗರ’; ಆಗುಂಬೆಯ ಸಹ್ಯಾದ್ರಿ ’ಪ್ರಕೃತಿಯ ನರ್ತನ ರಂಗ’; ’ಪಸುರ್ ಕಡಲ್’ ತಿರುವಾಂಕೂರು ಕಾಡು ಪ್ರದೇಶ. ಮೊದಲನೆಯ ಪ್ರವಾಸ ಸಂದರ್ಭದಲ್ಲಿ ಶುರುವಾದ ’ಕತ್ತೆ ಪುರಾಣ’ ಪ್ರತಿಯೊಂದು ಪ್ರವಾಸದ ಆರಂಭದಲ್ಲಿಯೂ ಬಂದು ಕಚಗುಳಿಯಿಡುತ್ತದೆ. ನಮ್ಮ ಆಡಳಿತ ವ್ಯವಸ್ಥೆಯ ಪೊಳ್ಳುತನವನ್ನು ಜಾಲಾಡುತ್ತದೆ.
ಹೊಸ ಸಸ್ಯಗಳನ್ನು ಹುಡುಕುವುದರಲ್ಲಿ ಸ್ವಾಮಿಯವರಿಗಿರುವ ಆಸಕ್ತಿ, ಅಂಥದೊಂದು ಸಸ್ಯ ಸಿಕ್ಕಾಗ ಅನುಭವಿಸುತ್ತಿದ್ದ ಆನಂದ-ಸಂಭ್ರಮ, ಅದರ ವೈಜ್ಞಾನಿಕ ವರ್ಗೀಕರಣದ ಬಗ್ಗೆ ಉತ್ಸಾಹ, ಸಸ್ಯಕ್ಕೆ ಪ್ರಭೇದಕ್ಕೆ ಹೆಸರಿಡುವ ಸಂದರ್ಭದಲ್ಲಿ ಅನುಸರಿಸುವ ವಿಧಾನ ಹೀಗೆ ಶೈಕ್ಷಣಿಕ ತಪಸ್ವಿಯೊಬ್ಬನ ನಿತಾಂತ ತುಡಿತಗಳನ್ನು ಹಸಿರು ಹೊನ್ನು ಅಪೂರ್ವವಾಗಿ ಹಿಡಿದಿಟ್ಟಿದೆ. ಇವಕ್ಕೆ ಕುಂದಣವಿಟ್ಟಂತೆ ಸಸ್ಯಗಳ ಛಾಯಾ ಚಿತ್ರಗಳೊಂದಿಗೆ; ಸ್ವತಃ ಸ್ವಾಮಿಯವರೇ ಬಿಡಿಸಿರುವ ನೂರಾರು ರೇಖಾಚಿತ್ರಗಳು, ವ್ಯಂಗ್ಯ ಚಿತ್ರಗಳು ಪುಸ್ತಕದ ಓದಿಗೆ ಇಂಬುಕೊಡುತ್ತವೆ.
ಹಿರಿಯ ಸಾಹಿತಿ ಎಸ್. ದಿವಾಕರ್ ಅವರಿಗೆ ನೀಡಿದ್ದ ಒಂದು ಸಂದರ್ಶನದಲ್ಲಿ ಸ್ವಾಮಿಯವರು ಈ ಪುಸ್ತಕ ರಚನೆಯ ಹಿಂದಿನ ಉದ್ದೇಶವನ್ನು ಹೀಗೆ ಸ್ಪಷ್ಟಪಡಿಸಿದ್ದರು; ನಮ್ಮ ದೇಶದ ಸಸ್ಯ ಪ್ರಪಂಚಕ್ಕೆ ಸಂಬಂಧಿಸಿದ ಕೆಲವು ಮೂಲಭೂತ ವಿಷಯಗಳನ್ನು ಸರಳವಾಗಿ, ಸಾಹಿತ್ಯಾತ್ಮಕವಾಗಿ ಹೇಳಲು ಮಾಡಿದ ಒಂದು ನಮ್ರ ಪ್ರಯತ್ನ ’ಹಸಿರು ಹೊನ್ನು’. ಸಾಮಾನ್ಯನಿಗೂ ಸಸ್ಯಲೋಕದ ಒಂದು ಸ್ಥೂಲ ಪರಿಚಯವನ್ನು ಮಾಡಿಕೊಡುವುದೇ ಈ ಕೃತಿಯ ಉದ್ದೇಶ. ಇತ್ತೀಚೆಗೆ ’ಬುಕ್ ಬ್ರಹ್ಮ’ ಏರ್ಪಡಿಸಿದ್ದ ಮುಖಾಮುಖಿ’ಯಲ್ಲ್ಲೂ ದಿವಾಕರ್ ಅವರು ಸ್ವಾಮಿಯವರ ಹಲವು ನೆನಪುಗಳನ್ನು ಹಂಚಿಕೊಂಡಿದ್ದನ್ನು ನೆನೆಯಬಹುದು. ಬಿಜಿಎಲ್ ಸ್ವಾಮಿಯವರು ಹೊಸ ತಲೆಮಾರಿಗೆ ಹಲವು ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಜೀವನ-ಸಾಧನೆಯನ್ನು ಕುರಿತು ಬರೆದಿರುವ ಶಿವರಾಮ ಕಾರಂತ, ಬಿ.ಪಿ.ರಾಧಾಕೃಷ್ಣ, ಚಿದಾನಂದಮೂರ್ತಿ, ಹಾಮಾನಾ, ಜಿ.ಎಚ್.ನಾಯಕ, ಎಸ್. ಎಲ್. ಭೈರಪ್ಪ, ಎಚ್ಚೆಸ್ಕೆ ಮುಂತಾದ ಹಿರಿಯರು ತುಂಬಾ ಗೌರವಾದರದ ಭಾವವನ್ನು ಸೃಷ್ಟಿಸಿದ್ದಾರೆ.
***
ಬಿಜಿಎಲ್ ಸ್ವಾಮಿಯವರ ವ್ಯಕ್ತಿಚಿತ್ರವನ್ನು ಎಚ್ಚೆಸ್ಕೆ ಬಿಡಿಸಿರುವುದು ಹೀಗೆ; ಖಾಕಿ ನಿಕ್ಕರ್. ಬಿಳಿ ಷರಟು. ದಪ್ಪ ಅಟ್ಟೆಯ ಪರಂಗಿ ಟೊಪ್ಪಿಗೆ. ಹಳೆಯ ಕಾಲದ ಓವರ್ಸಿಯರ ಹಾಗೆ. ಎತ್ತರದ ಕಟ್ಟಾಳು. ಅಪಾಲೊ ಹಣೆ. ಪ್ರಮುಖವಾದ ಮೂಗು. ಮಿನುಗುವ ಕಣ್ಣು. ಬಿಳುಪೆನಿಸದ ಬಣ್ಣ. ಬಿಚ್ಚು ನುಡಿಯ, ನೇರ ನಡೆಯ ಸ್ನೇಹಪ್ರಿಯ. ಬಾಳಿನ ಆಳವನ್ನೂ ವಿಸ್ತಾರವನ್ನೂ ಕಂಡವರು, ಅನುಭವಿಸಿದವರು. ಹಾಮಾನಾ; ವಿಶಿಷ್ಟ ವ್ಯಕ್ತಿತ್ವ, ಬಹುಮುಖ ಪ್ರತಿಭೆ ಎಂದಿದ್ದಾರೆ. ಸ್ವಾಮಿಯವರ ಶೈಕ್ಷಣಿಕ ತಪಸ್ಸು ಎಂಥದ್ದಾಗಿತ್ತು ಎಂಬುದಕ್ಕೆ ಇಲ್ಲೊಂದು ಉದಾಹರಣೆಯಿದೆ. ಚಿತ್ರಸಹಿತ ಲೇಖನ ಕೋರಿ ಪತ್ರ ಬರೆದಿದ್ದ ಹೆರಿಯ ವಿದ್ವಾಂಸ ಟಿ. ವಿ. ವೆಂಕಟಾಚಲಶಾಸ್ತ್ರಿಯವರಿಗೆ 1974ರಲ್ಲಿ ಸ್ವಾಮಿಯವರು ಬರೆದ ಉತ್ತರದಲ್ಲಿ; ಶಾಸ್ತ್ರಾಧ್ಯಯನಸಣ್ಬಂಧವಾದ ಗಂಟುಗಳಲ್ಲಿ ಸಿಕ್ಕಿಹಾಕಿಕೊಂಡುಬಿಟ್ಟಿದ್ದೇನೆ. ಕಳೆದ ಎರಡು ತಿಂಗಳಿಂದ 24 ಗಂಟೆಗಳಲ್ಲಿ 20 ಗಂಟೆಗಳನ್ನು ಲ್ಯಾಬೊರೆಟರಿಯಲ್ಲಿ ಕಳೆಯುತ್ತಿದ್ದೇನೆ ಎಂದು ಬರೆದಿದ್ದಾರೆ. ಇದು ಬಿಜಿಎಲ್ ಸ್ವಾಮಿ.
ಬಿಜಿಎಲ್ ಸ್ವಾಮಿಯವರು ಬರೆವಣಿಗೆ ಪ್ರಾರಂಭಿಸುವಾಗಿನ ಒಂದು ಘಟನೆ ಉಲ್ಲೇಖನೀಯ; ತಂದೆ ಕನ್ನಡದ ಸುಪ್ರಸಿದ್ಧ ಲೇಖಕ ಡಿ. ವಿ. ಜಿ. ಮಗನೂ ಬರಹಗಾರನಾಗುತ್ತಾನೆಂದು ತಿಳಿದು; ನೀನು ಕನ್ನಡದಲ್ಲಿ ಬರೆಯುವುದು ಬೇಡ. ಮನೆಗೊಬ್ಬನಿದ್ದೇನಲ್ಲ, ನಾನು, ಸಾಕು... ಎಂದಿದ್ದರಂತೆ. ಆದರೆ ’ಹಸಿರು ಹೊನ್ನು’ ಹಸ್ತಪ್ರತಿಯನ್ನು ಓದಿಸಿ ಕೇಳಿದ ಮೇಲೆ ಹುರಿದುಂಬಿಸುವ ಮಾತುಗಳನ್ನಾಡಿ; ಕನ್ನಡದಲ್ಲಿ ಇಂಥ ಪುಸ್ತಕಗಳು ಬೇಕು ಎನ್ನುತ್ತಾರೆ. ಆದರೆ ಪುಸ್ತಕ ಮುದ್ರಣವಾಗುವಾಗ ಅವರಿರುವುದಿಲ್ಲ. ’ಹಸಿರು ಹೊನ್ನು’ ತಂದೆ ಡಿವಿಜಿ ಯವರಿಗೇ ಅರ್ಪಣೆಯಾಗಿದೆ.
ಸ್ವಾಮಿಯವರು ನಿಧನರಾದಾಗ ಹಾ. ಮಾ. ನಾಯಕರು ತಮ್ಮ ಅಂಕಣ ಬರೆಹದಲ್ಲಿ ಒಂದು ವಿಚಾರವನ್ನು ಹಂಚಿಕೊಂಡಿದ್ದಾರೆ; ಕುವೆಂಪು ಅವರಿಗೆ ಕೇಂದ ಸಾಹಿತ್ಯ ಅಕಾಡೆಮಿಯ ಗೌರವ ಸದಸ್ಯತ್ವವನ್ನು ಕೊಡಮಾಡುವ ಒಂದು ಕಾರ್ಯಕ್ರಮ ಮೈಸೂರಿನಲ್ಲಿ ಏರ್ಪಾಟಾಗಿತ್ತು. ಬಹಳ ದಿನಗಳಿಂದ ಸ್ವಾಮಿಯವರು ಸ್ವೀಕರಿಸದಿದ್ದ, ’ಹಸಿರು ಹೊನ್ನು’ ಪುಸ್ತಕಕ್ಕೆ ದೊರೆತ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನೂ ಅಂದೇ ಕೊಡಲು ಅಕಾಡೆಮಿ ನಿರ್ಧರಿಸಿತು. ಸ್ವಾಮಿ ಬಡಪೆಟ್ಟಿಗೆ ಒಪ್ಪಲಿಲ್ಲವಂತೆ. ಕೊನೆಗೆ ಅಂತೂ ಒಪ್ಪಿಸಿ ಕಾರ್ಯಕ್ರಮ ಏರ್ಪಡಿಸಿದಾಗ, ಅಕಾಡೆಮಿಯ ಅಧ್ಯಕ್ಷ ಉಮಾಶಂಕರ ಜೋಶಿಯವರು ಆ ಹೊತ್ತು ಸ್ವಾಮಿಯವರನ್ನು ವರ್ಣಿಸಿದ್ದು; ಪ್ರಖ್ಯಾತ ತಂದೆಯ ಪ್ರಖ್ಯಾತ ಮಗ. ಇದಾದ ಮೇಲೆ ಸ್ವಾಮಿಯವರು ನಾಯಕರ ಬಳಿ ಹೇಳಿದರಂತೆ; ನಮ್ಮ ತಂದೆ ಬದುಕಿದ್ದಿದ್ದರೆ ಖಂಡಿತ ಈ ಪ್ರಶಸ್ತಿಯನ್ನು ಸ್ವೀಕರಿಸಲು ಬಿಡುತ್ತಿರಲಿಲ್ಲ. ನೀನು ಮಾಡಿದ್ದು ಏನು ಮಹಾ ಎನ್ನುತ್ತಿದ್ದರು ಇದು ತಂದೆ - ಮಗನ ನಿಸ್ಪೃಹತೆಯ ಒಂದು ಮಾದರಿ.
1979ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಪಡೆದ ಪುಸ್ತಕ; ಸ್ವಾಮಿಯವರ ಶಿಷ್ಯ ನಾಗೇಂದ್ರ ಅವರಿಂದ ಇಂಗ್ಲಿಷ್‌ಗೆ ಭಾಷಾಂತರವಾಗಿದೆ. ಜೊತೆಗೆ ಎನ್. ಬಿ. ಟಿ. ದೇಶದ ಎಲ್ಲ ಭಾಷೆಗಳಿಗೂ ಈ ಪುಸ್ತಕವನ್ನು ಅನುವಾದಿಸಿ ಪ್ರಕಟಿಸಿದೆ ಎನ್ನುವುದು ’ಹಸಿರು ಹೊನ್ನು’ ಪಡೆದಿರುವ ಜನಪ್ರಿಯತೆ ಹಾಗೂ ಜನಪ್ರೀತಿಯ ದ್ಯೋತಕ.
ಚಿತ್ರಗಳ ಕೃಪೆ: https://bglswamy.com/ ಮತ್ತು http://www.kamat.com/
“ವಿಮರ್ಶಾ ಶಿಸ್ತಿಗೆ ಗ್ರಂಥ ಸಂಪಾದನಾಶಾಸ್ತ್ರದ ಒಂದು ಮುಖ್ಯ ಕೊಡುಗೆ ಈ ಸಂಶೋಧನಾ ವಿಮರ್ಶೆ,” ಎನ್ನುತ್ತಾರ...
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
©2024 Book Brahma Private Limited.