ಈ ಕೃತಿಯಲ್ಲಿ ಭಾವನೆಗಳ ಸ್ವಚ್ಛವಾದ ನಿವೇದನೆಯಿದೆ….

Date: 22-10-2024

Location: ಬೆಂಗಳೂರು


“ಒಂದು ಮಠ ದೊಡ್ಡ ಧಾರ್ಮಿಕ ಶ್ರದ್ಧಾಕೇಂದ್ರವಾದರೂ, ಆರ್ಥಿಕವಾಗಿ ಮಠವನ್ನು ನಡೆಸುವುದು ಎಷ್ಟು ಸವಾಲಿನ ಕೆಲಸ ಎಂಬುದು ಈ ಕೃತಿಯಿಂದ ತಿಳಿಯುತ್ತದೆ” ಎನ್ನುತ್ತಾರೆ ನಾಗೇಂದ್ರ ಎ.ಆರ್. ಅವರು ವಿದ್ಯಾಭೂಷಣ ಅವರ ‘ನೆನಪೇ ಸಂಗೀತ’ ಕೃತಿ ಕರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

ನಾನು ಅದಮಾರಿನ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ದಿನಗಳವು. ಉಡುಪಿ-ಮಂಗಳೂರು ಹೆದ್ದಾರಿಯಲ್ಲಿ ಎರ್ಮಾಳಿನಿಂದ ಮೂರುವರೆ ಕಿಲೋಮೀಟರ್ ಒಳಗಿರುವ ಅದಮಾರು ಆಗ ಒಂದು ಪುಟ್ಟಹಳ್ಳಿಯಾಗಿತ್ತು. ನಾಲ್ಕಾರು ಮನೆಗಳು, ಎರಡೋ ಮೂರೋ ಅಂಗಡಿಗಳು, ಒಂದು ಮಠ, ಒಂದು ಕಾಲೇಜು, ಹಚ್ಚಹಸುರಿನ ತಣ್ಣನೆಯ ಪ್ರಕೃತಿ. ನಾನೂ ಸೇರಿದಂತೆ, ಏಳೆಂಟು ಹುಡುಗರಿಗೆ ಅದಮಾರು ಶ್ರೀಗಳ ಕಾರುಣ್ಯದಿಂದ ಮಠದಲ್ಲೇ ಇದ್ದು ಅಲ್ಲಿಂದ ಕಾಲೇಜಿಗೆ ಹೋಗಿಬರುವ ವ್ಯವಸ್ಥೆಯಾಗಿತ್ತು. ಕೆಲತಿಂಗಳ ನಂತರ 'ಶ್ರೀಶ ಶೀರೂರು' ಎನ್ನುವ ಯುವಕರೊಬ್ಬರು ಯಾವುದೋ ಅಧ್ಯಯನದ ಕಾರಣಕ್ಕೆ ಮಠವನ್ನು ಸೇರಿ, ನಮ್ಮೊಂದಿಗೆ ವಾಸಿಸತೊಡಗಿದರು. ಆಗವರು ವಯಸ್ಸಿನಲ್ಲಿ ಇಪ್ಪತ್ತೈದರ ಆಸುಪಾಸಿನವರು ಎಂದು ಭಾವಿಸುವೆ. ಅದಾಗಲೇ ಸ್ವಲ್ಪ ಸಮಯ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಕಂಪನಿಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದ ಅವರನ್ನು ಕಾಣುವಾಗೆಲ್ಲಾ ನಮಗೂ ಒಂದು ಖುಷಿ. ನಮ್ಮೊಡನೆ ಹಿರಿಯಣ್ಣನಂತೆ ಆಪ್ತತೆಯಿಂದ ಅವರು ನನಗೆ 'ಶ್ರೀಶಣ್ಣ'ನೇ ಆದರು. ಪಿಯುಸಿ ಮುಗಿದ ನಂತರ ನಾನು ಅದಮಾರಿನಿಂದ ಹೊರಟೆ. ನಂತರದ ದಿನಗಳಲ್ಲಿ ಚಿಕ್ಕಮಗಳೂರಿನಲ್ಲಿ ಪದವಿ ವ್ಯಾಸಂಗದಲ್ಲಿ ತೊಡಗಿಕೊಂಡ ಕಾರಣ, ಅವರೊಂದಿಗೆ ಸರಿಯಾಗಿ ಸಂಪರ್ಕವನ್ನು ಕಾಯ್ದುಕೊಳ್ಳಲಾಗಲಿಲ್ಲ. ಕೆಲವರ್ಷಗಳ ನಂತರ, ಅದೇ ಶ್ರೀಶಣ್ಣ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಉತ್ತರಾಧಿಕಾರಿಯಾಗಿ, ' ಶ್ರೀ ಈಶಪ್ರಿಯ ತೀರ್ಥ'ರೆಂಬ ಹೆಸರಿನಲ್ಲಿ ಸನ್ಯಾಸ ಸ್ವೀಕರಿಸಿದರೆಂದು ದಿನಪತ್ರಿಕೆಯೊಂದರ ಮೂಲಕ ತಿಳಿಯಿತು. ಓದಿ ಆಶ್ಚರ್ಯವಾಯಿತು. ತುಸು ಆಘಾತವೂ ಆಯಿತು. ಆದರೆ ಆ ಬಗ್ಗೆ ಹೆಚ್ಚು ಯೋಚಿಸಲು ನನಗೇನೂ ತೋಚಲಿಲ್ಲ. ನನ್ನ ಮದುವೆಯ ಸಮಯದಲ್ಲಿ ತಂದೆ ತಾಯಿಯರೊಂದಿಗೆ ತೆರಳಿ, ಸಂತೋಷದಿಂದ ಅವರ ದರ್ಶನ ಪಡೆದು ಬಂದೆ.

ಶ್ರೀ ವಿದ್ಯಾಭೂಷಣರ 'ನೆನಪೇ ಸಂಗೀತ' ಓದುವಾಗ, ಅದಮಾರಿನ ಆ ಎರಡು ವರ್ಷಗಳ ನನ್ನೆಲ್ಲ ನೆನಪುಗಳ ಬುತ್ತಿ, ಮತ್ತೆ ಮನದೊಳಗೆ ತೆರೆದುಕೊಂಡಿತ್ತು. ವಾಸುದೇವನ ಪರಮಮಂಗಳಕರ ಸಾನಿಧ್ಯ, ನಾನು ಅಲ್ಲಿದ್ದ ಸಮಯದಲ್ಲೇ ಹಿರಿಯ ಸ್ವಾಮೀಜಿಯವರಾದ ಶ್ರೀ ವಿಬುಧೇಶ ತೀರ್ಥರು ಪರಂಧಾಮಗೈದದ್ದು, ಅವರ ಆರಾಧನೆಯ ದಿನಗಳು, ಒಮ್ಮೆ ಅನಾರೋಗ್ಯದಿಂದ ಭಾದಿತನಾದಾಗ ಮಠದ ಎಲ್ಲರೂ ನನ್ನೆಡೆಗೆ ತೋರಿದ ಕಾಳಜಿ, ಅಲ್ಲಿ ಸದಾ ಕಿವಿಗೆ ಇಂಪೆರೆಯುತ್ತಿದ್ದ ಲಕ್ಷ್ಮೀ ಶೋಭಾನೆ, ಪ್ರೀಣಯಾಮೋ ವಾಸುದೇವಂ, ಎಷ್ಟೆಲ್ಲ ಚೆಂದದ ದಾಸರ ಕೀರ್ತನೆಗಳು....ಒಂದೆರಡೇ....ಆಹಾ....ಹೌದೇ ಹೌದು.... ನಿಜಕ್ಕೂ 'ನೆನಪೇ ಸಂಗೀತ' !!

ಈ ಕೃತಿ ತೆರೆದುಕೊಳ್ಳುವುದು ವಿದ್ಯಾಭೂಷಣರ ಬಾಲ್ಯದ ನೆನಪುಗಳಿಂದ. ಅವರ ಬಾಲ್ಯದ ಕೆಲ ಅವಧಿಯನ್ನು, ಜೊತೆಗೆ ಪ್ರೌಢಶಿಕ್ಷಣದ ಸಮಯವನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ನರಸಿಂಹರಾಜಪುರ ಭಾಗಗಳಲ್ಲಿ ಕಳೆದಿದ್ದರು ಎಂಬ ಮಾಹಿತಿ ನನಗೆ ಅಚ್ಚರಿಯನ್ನು ತಂದಿತ್ತು. ಇವು ನನ್ನ ಊರಾದ ಶೃಂಗೇರಿಯ ಪಕ್ಕದ ತಾಲೂಕುಗಳೇ. ಆ ಬಾಲ್ಯದ ಗುಂಗಿನಲ್ಲಿ ಇನ್ನೂ ಹಾಯಾಗಿ ಸುತ್ತುವಾಗಲೇ ಧಿಡೀರನೆ ಸನ್ಯಾಸ.....ಕೇವಲ ಹದಿನೈದರ ವಯಸ್ಸಿನಲ್ಲಿ !! ಆ ಕ್ಷಣ ನನಗೆ ಕಂಡಿದ್ದು, ಹದಿನೈದರ ವಯಸ್ಸಿನಲ್ಲಿ ನಾನು ಹೇಗಿದ್ದೆ ಎಂದು !! ಊಹಿಸಿಕೊಳ್ಳಲೂ ಸಾಧ್ಯವಿಲ್ಲ.... ಆ ಸಣ್ಣ ವಯಸ್ಸಿನಲ್ಲಿ ಸನ್ಯಾಸ, ಆತ್ಮಶ್ರಾದ್ಧ, ಪೀಠವೊಂದರ ಉತ್ತರಾಧಿಕಾರ. ಸನ್ಯಾಸ ಎಂದರೆ ಕೇವಲ ನಿತ್ಯವಿಧಿಗಳನ್ನು ಮಾಡಿಕೊಂಡು ಪೀಠಾಧಿಪತಿಗಳಾಗಿರುವುದು ಮಾತ್ರವಲ್ಲ ತಾನೇ....ಸನ್ಯಾಸವೆಂದರೆ ವೈರಾಗ್ಯ. ಸನ್ಯಾಸಿಯ ನಡೆ, ನುಡಿ, ಆಹಾರ, ದಿನಚರಿ ಯಾವುವೂ ಸಾಮಾನ್ಯರಂತಲ್ಲ. ಸದಾ ನಿರ್ವಿಕಾರರಾಗಿ, ನಿರ್ಲಿಪ್ತರಾಗಿ, ಸ್ಥಿತಪೃಜ್ಞರಾಗಿರಬೇಕಾದವರು ಸನ್ಯಾಸಿಗಳು. ಆ ಬದುಕೇ ಒಂದು ತಪಸ್ಸು....ಅಂತಹ ಸನ್ಯಾಸ ಅರಸಿಕೊಂಡು ಬಂದಿದ್ದು ಹದಿನೈದನೆಯ ವಯಸ್ಸಿನಲ್ಲಿ!! ಸಾಮಾನ್ಯನ ಪಾಲಿಗೆ ಬಾಲ್ಯ ಮತ್ತು ವೈರಾಗ್ಯ ಬದುಕಿನ ಎರಡು ಧ್ರುವಗಳು. ಒಂದು ಆರಂಭವಾದರೆ, ಮತ್ತೊಂದು ಅಂತ್ಯ. ಆದರೆ ಆರಂಭವೇ ಅಂತ್ಯವಾದರೆ??!! ಬಾಲ್ಯ ಸನ್ಯಾಸ ಎಂದರೆ ಹಾಗೆಯೇ ಇರಬಹುದೇನೋ ಎನಿಸಿತು. ಈ ಹಂತದಲ್ಲಿ ನನಗೆ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರನ್ನು ಉಡುಪಿಯಲ್ಲಿ ಮೊದಲ ಬಾರಿ ನೋಡಿದ್ದು ನೆನಪಾಯಿತು. ಅವರು ತಮ್ಮ ಶಾಲಾ ದಿನಗಳಲ್ಲಿ ಉಡುಪಿಯಲ್ಲಿ ಶಿಕ್ಷಕಿಯಾಗಿರುವ ನನ್ನತ್ತೆಯ ವಿದ್ಯಾರ್ಥಿಯಾಗಿದ್ದರಂತೆ !!

ಬಾಲ್ಯದಲ್ಲಿ ಒಲ್ಲದ ಸನ್ಯಾಸ, ನಂತರ ಹೆಚ್ಚುತ್ತಲೇ ಹೋದ ಜವಾಬ್ದಾರಿಗಳು, ಜೊತೆಗೆ ಬೆಸೆದುಕೊಳ್ಳುತ್ತಾ ಸಾಗಿದ ಸಂಗೀತ... ತಮ್ಮ ಸನ್ಯಾಸದ ಅವಧಿಯಲ್ಲಿ ತಾವು ಮಾಡಿದ ಸಾಮಾಜಿಕ ಕಾರ್ಯಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ವಿದ್ಯಾಭೂಷಣರು ಸೊಗಸಾಗಿ ಉಲ್ಲೇಖಿಸಿದ್ದಾರೆ. ಪಕ್ಕದ ಹಳ್ಳಿಯೊಂದರಲ್ಲಿ ಮಠದ ವತಿಯಿಂದ ಪ್ರೌಢಶಾಲೆಯನ್ನಾರಂಭಿಸಿದ ಕತೆ, ಮಠದಲ್ಲಿ ಅದ್ಧೂರಿಯಾಗಿ ನರಸಿಂಹ ಜಯಂತಿಯನ್ನು ವರ್ಷವೂ ಆಚರಿಸಿಕೊಂಡು ಬಂದ ಕತೆ, ಕಲೋಪಾಸನೆಗಾಗಿ ಹಲವು ವೇದಿಕೆಗಳನ್ನು ಮಠದ ವತಿಯಿಂದ ಹುಟ್ಟುಹಾಕಿದ ಕತೆ ಎಲ್ಲವೂ ಹೃದ್ಯವಾಗಿ ನಿರೂಪಿಸಲ್ಪಟ್ಟಿವೆ. ಒಂದು ಮಠ ದೊಡ್ಡ ಧಾರ್ಮಿಕ ಶ್ರದ್ಧಾಕೇಂದ್ರವಾದರೂ, ಆರ್ಥಿಕವಾಗಿ ಮಠವನ್ನು ನಡೆಸುವುದು ಎಷ್ಟು ಸವಾಲಿನ ಕೆಲಸ ಎಂಬುದು ಈ ಕೃತಿಯಿಂದ ತಿಳಿಯುತ್ತದೆ. ಜೊತೆಗೆ ಇಲ್ಲಿ ಉಲ್ಲೇಖಾರ್ಹವಾದ ಮತ್ತೊಂದು ಸಂಗತಿ 'ಪೂರ್ವಾಶ್ರಮ ಸಂಬಂಧಗಳು'. ವಿದ್ಯಾಭೂಷಣರೇ ಈ ಕೃತಿಯಲ್ಲಿ ಉಲ್ಲೇಖಿಸುತ್ತಾರೆ "ಪೂರ್ವಾಶ್ರಮವೆಂಬುದು ನಾಡಿನ ಹಲವು ಮಠಗಳಿಗಂಟಿದ ಶಾಪ". ಕಾರಣ, ಹಲವು ಮಠಗಳಲ್ಲಿ ಈಗಲೂ ಯತಿಗಳ ಪೂರ್ವಾಶ್ರಮದ ಕುಟುಂಬಸ್ಥರೇ ಮಠದ ಆಡಳಿತ, ಅಧಿಕಾರ, ನಿರ್ವಹಣೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ಆದರೆ ಹಿಂದೆಲ್ಲಾ ಈ ಕ್ರಮ ಯಾವುದೋ ಸಕಾರಣವಾಗಿಯೇ ಅಥವಾ ಕಾಣದ ಅನಿವಾರ್ಯತೆಗಳಿಂದಲೇ ಅನುಸರಿಸಲ್ಪಟ್ಟಿತ್ತೇನೋ !! ಕಾರಣ, ಈ ಕೃತಿಯನ್ನು ಓದಿದಾಗ ವಿದ್ಯಾಭೂಷಣರ ತಂದೆ ತಾಯಿಯರು ತಮ್ಮ ಸಮಸ್ತ ಜೀವನವನ್ನೇ ಮಠಕ್ಕಾಗಿ ಸಮರ್ಪಿಸಿಕೊಂಡಿದ್ದು ತಿಳಿಯುತ್ತದೆ. ತಮ್ಮ ತಂದೆಯ ಕೊನೆಯ ದಿನಗಳನ್ನು ನೆನೆಸಿಕೊಂಡು ಬರೆದ ಎರಡು ಬರಹಗಳು ಬಹಳ ಕಾಡಿದವು.

ಒಮ್ಮೆ ಸ್ವೀಕರಿಸಿದ ಸನ್ಯಾಸವನ್ನು ತೊರೆದು ಪೀಠತ್ಯಾಗ ಮಾಡಿದವರಲ್ಲಿ ವಿದ್ಯಾಭೂಷಣರು ಮೊದಲಿನವರೇನಲ್ಲ. ಆದರೂ ಉಳಿದವರಿಗಿಂತ ವಿದ್ಯಾಭೂಷಣರ ಪ್ರಸಂಗವೇ ಹೆಚ್ಚು ಜನಪ್ರಿಯವಾಗಲು ಕಾರಣ ಅವರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆ ಮತ್ತು ಗಳಿಸಿದ ಅಪಾರ ಜನಮನ್ನಣೆ. ಆಶ್ರಮಾಂತರದ ಆ ದಿನಗಳಲ್ಲಿ ತಾವು ಎದುರಿಸಿದ ಒತ್ತಡ, ತುಮುಲಗಳು, ಸವಾಲುಗಳು ಎಲ್ಲವನ್ನೂ ಇಲ್ಲಿ ವಿದ್ಯಾಭೂಷಣರು ತೆರೆದಿಟ್ಟಿದ್ದಾರೆ. ಮಾತ್ರವಲ್ಲ, ಆ ಸಮಯದಲ್ಲಿ ಅವರು ಮದುವೆಯಾಗ ಬಯಸಿದ್ದ 'ರಮಾ' ಅವರೂ ತಮ್ಮ ಕುಟುಂಬದಿಂದ, ಸಮಾಜದಿಂದ, ಅನ್ಯ ಮಠಾಧೀಶರಿಂದ ಎದುರಿಸಿದ ಒತ್ತಡಗಳ ವಿವರಗಳೂ ಇಲ್ಲಿದೆ. ಪ್ರಾಯಶಃ 'ಎದುರಿಸಿದ ಒತ್ತಡಗಳು' ಎನ್ನುವುದಕ್ಕಿಂತ 'ಬಂದ ಬೆದರಿಕೆಗಳು' ಎಂದು ಹೇಳುವುದೇ ಸೂಕ್ತ ಎನಿಸುತ್ತದೆ. ಅಂತೂ ದೇವರು ದೊಡ್ಡವನು. ಎಲ್ಲವೂ ಸುಖಾಂತ್ಯವನ್ನೇ ಕಂಡಿತು !!

ಈ ಕೃತಿಯಲ್ಲಿ ನನ್ನನ್ನು ಸೆಳೆದ, ಮತ್ತೆ ಮತ್ತೆ ಓದಿಸಿಕೊಂಡ ಸಾಲುಗಳು ಹೀಗಿವೆ ... "ಬದುಕಿಗೆ ಆಧಾರವೆನಿಸುವ ಸದ್ವಿಚಾರಗಳು, ಮೌಲ್ಯಗಳು, ನುಡಿ ನಡೆಗಳು ಮೂಲ ಸ್ವರೂಪದಲ್ಲೇ ಇರಬೇಕು. ಆದರ್ಶಗಳು ಸಂಸ್ಥೆಯ ರೂಪ ತೆಳೆದಾಗಲೇ ಎಲ್ಲ ಅನಾರೋಗ್ಯಕರ ಬೆಳವಣಿಗೆ. ಆಶ್ಚರ್ಯವೆಂದರೆ, ಎಲ್ಲ ಬಿಟ್ಟ ಸನ್ಯಾಸಿಗಳು ಮಠ ಕಟ್ಟಿದರು ! ಇಲ್ಲಿದ್ದು ಈಸಿ ಜೈಸಬೇಕೆಂದ ಶರಣರು, ಸಂತರು, ಹರಿದಾಸರು ಮಠ ಕಟ್ಟಲಿಲ್ಲ. ಸಂಸ್ಥೆ ಸ್ಥಾಪಿಸಲಿಲ್ಲ ! ಸದ್ವಿಚಾರಗಳ, ಸನ್ನಡತೆಯ ಜೀವಂತ ಉದಾಹರಣೆಗಳಾಗಿ ಮನೆಮನೆಗೆ, ಮನಮನಗಳಿಗೆ ಜ್ಞಾನ, ಭಕ್ತಿ, ವೈರಾಗ್ಯಗಳ, ಜೀವನ ಮೌಲ್ಯಗಳ ಹರಿಕಾರರಾದರು.

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ !"

ಎಷ್ಟು ಸತ್ಯವಾದ ಸಾಲುಗಳಲ್ವಾ !!

'ಗುಣ ಪರಿಪೂರ್ಣ' , 'ದೋಷ ವಿದೂರ' ಎನಿಸಿಕೊಂಡವನು ಆ ಭಗವಂತ ಮಾತ್ರ !! ಮನುಷ್ಯರ ಪೈಕಿ, ಯಾರೇ ಆಗಲಿ ತಾವು ಪರಿಪೂರ್ಣ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಸದಾ ತನ್ನನ್ನು ತಾನು ತರ್ಕಕ್ಕೆ ಒಡ್ಡಿಕೊಂಡು, ಸತತವಾದ ಆತ್ಮವಿಮರ್ಶೆಯ ಮೂಲಕ ಪೂರ್ಣತೆಯತ್ತ ತುಡಿಯುವ ಮನುಷ್ಯ ಶ್ರೇಷ್ಠನೆನಿಸುತ್ತಾನೆ. ಈ ಪುಸ್ತಕವನ್ನು ಪೂರ್ಣ ಓದಿದ ನಂತರ ವಿದ್ಯಾಭೂಷಣರೆಡೆಗೆ ನನಗೆ ಅಂತದೇ ಅಭಿಪ್ರಾಯ ಮೂಡಿತು.

ಈ ಬರಹಗಳಲ್ಲಿ ಕೆಲವೆಡೆ ವಿಷಾದವಿದೆ, ಕೆಲವೆಡೆ ಸಮಾಧಾನವಿದೆ, ಕೆಲವೆಡೆ ವಿನೋದವಿದೆ, ಕೆಲವೆಡೆ ಪಶ್ಚಾತ್ತಾಪದ ಛಾಯೆಯೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಭಾವನೆಗಳ ಸ್ವಚ್ಛವಾದ ನಿವೇದನೆಯಿದೆ. ನನ್ನ ಮಟ್ಟಿಗೆ, ಈ ಕೃತಿಯ ನಿಜವಾದ ಆಕರ್ಷಣೆಯೆಂದರೆ ಅದು 'ಭಾಷೆ' !! ಹೃದಯದ ಭಾಷೆಯದು.... ತೀರಾ ಆಪ್ತಮಿತ್ರನೊಬ್ಬ ಏಕಾಂತದಲ್ಲಿ, ಎಷ್ಟೋ ದಿನಗಳ ಮೌನಕ್ಕೆ ಮಾತಿನ ರೂಪ ನೀಡುತ್ತಿರುವಂತೆ!!

ಇನ್ನೊಂದು ವಿಷಯ... ಇಲ್ಲಿ ವಿದ್ಯಾಭೂಷಣರು ದಾಖಲಿಸಿರುವ ಅನೇಕ ಜೀವನಾನುಭವಗಳಲ್ಲಿ ಒಂದೆಡೆ ಶತಮಾನದ ಕಲಾವಿದೆಯಾದ ಎಂ.ಎಸ್.ಸುಬ್ಬಲಕ್ಷ್ಮಿಯವರು, ಮತ್ತೊಂದೆಡೆ ಮಾಸ್ತಿಯವರು, ಮಗದೊಂದೆಡೆ ಕಾರಂತರು ಕಾಣುತ್ತಾರೆ. ಇನ್ನೂ ಸಾಲದೆಂಬಂತೆ, ಕಾರಂತರ ಮೇರುಕೃತಿಯಾದ 'ಬೆಟ್ಟದ ಜೀವ'ದ ಗೋಪಾಲಯ್ಯ ಪಾತ್ರ.... ನಿಜ ಜೀವನದಲ್ಲಿ ಅವರ ಹೆಸರು ಗೋವಿಂದಯ್ಯ ಎಂದು. ಅವರೂ ಒಂದು ಲೇಖನದಲ್ಲಿ ಕಾಣಸಿಗುತ್ತಾರೆ. ಕೂತಹಲ ಹೆಚ್ಚಿತಲ್ವಾ ?? ತಣಿಸಿಕೊಳ್ಳಲು ಪುಸ್ತಕ ಕೊಂಡು ಓದಿ. ಆಪ್ತವೆನಿಸುವ ಓದಿನ ಅನುಭವ ನಿಮಗಾಗುತ್ತದೆ.

- ನಾಗೇಂದ್ರ ಎ.ಆರ್.

MORE NEWS

ಬರಹವೆಂದರೆ ಭಾಷೆ, ಭಾಷೆ ಎಂದರೆ ಬರಹ: ಪೂರ್ಣಿಮಾ ಮಾಳಗಿಮನಿ

22-10-2024 ಬೆಂಗಳೂರು

“ನಿಯುಕ್ತಿ ಪುರಾಣ ಅಸಲಿಗೆ, ಹದಿನೈದನೇ ಶತಮಾನದ (1576 ರಿಂದ 1617) ಕಾಲಘಟ್ಟದಲ್ಲಿ ನಡೆಯುವ ಮಹಿಷೂರು ಅರಸರ ಕತೆ&...

ಈ ಕಥಾ ಸಂಕಲನದಲ್ಲಿ ದಟ್ಟ ಕಾಡಿನ ರೌದ್ರ ವರ್ಣನೆ ಓದುಗರನ್ನು ಮೋಹಗೊಳಿಸುತ್ತದೆ‌

22-10-2024 ಬೆಂಗಳೂರು

“ಈ ಸಂಕಲನ ಮಲೆಯ ಮಹದೇಶ್ವರದ ತಪ್ಪಲಿನ ಗುಡ್ಡಗಾಡು ಜನರ ಬದುಕುಗಳ ಚಿತ್ರಣಗಳನ್ನು ಬಲು ನಿಖರವಾಗಿ ಕೊಡುತ್ತದೆ&rdqu...

ಈ ಕೃತಿ ಶ್ರೀಧರ ನಾಯಕ್ ಅವರ ಆತ್ಮಚರಿತ್ರೆಯ ಆಯ್ದ ಭಾಗವಿದ್ದಂತೆ

15-10-2024 ಬೆಂಗಳೂರು

“ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಎನ್ನುವುದು ವಾಸ್ತವಾಂಶಗಳನ್ನು ಜಾಗರೂಕವಾಗಿ, ನಿಖರವಾಗಿ ಮರು ಸೃಷ್ಟಿಸುವ ಕಲೆ&...