ಬರಹವೆಂದರೆ ಭಾಷೆ, ಭಾಷೆ ಎಂದರೆ ಬರಹ: ಪೂರ್ಣಿಮಾ ಮಾಳಗಿಮನಿ

Date: 22-10-2024

Location: ಬೆಂಗಳೂರು


“ನಿಯುಕ್ತಿ ಪುರಾಣ ಅಸಲಿಗೆ, ಹದಿನೈದನೇ ಶತಮಾನದ (1576 ರಿಂದ 1617) ಕಾಲಘಟ್ಟದಲ್ಲಿ ನಡೆಯುವ ಮಹಿಷೂರು ಅರಸರ ಕತೆ” ಎನ್ನುತ್ತಾರೆ ಪೂರ್ಣಿಮಾ ಮಾಳಗಿಮನಿ. ಅವರು ನಾಗರಾಜ ವಸ್ತಾರೆ ಅವರ ‘ನಿಯುಕ್ತಿ ಪುರಾಣ’ ಐತಿಹಾಸಿಕ ಕಾದಂಬರಿ ಕುರಿತು ಬರೆದ ವಿಮರ್ಶೆ.

ಕನ್ನಡ ಸಾಹಿತ್ಯ ಲೋಕದಲ್ಲಿ ಈಗ ಐತಿಹಾಸಿಕ ಮತ್ತು ಪೌರಾಣಿಕ ಕೃತಿಗಳ ಸುಗ್ಗಿ. ಯಾವುದೇ ಕಲೆಯ ರಚನೆಯ ಶೈಲಿ, ವಸ್ತು ಯಾವುದೂ ಸಾರ್ವಕಾಲಿಕವಲ್ಲ. ಆದರೆ ಕಲೆಯನ್ನು ಆಸ್ವಾದಿಸುವವರ ಅಭಿರುಚಿಯೂ ಹೊಸದನ್ನು ಹುಡುಕುತ್ತಾ, ಮತ್ತೆ ಹಳೆಯದಕ್ಕೆ ತೆರೆದುಕೊಳ್ಳುವುದು, ಈ ಕಾಲ ಚಕ್ರದಲ್ಲಿ ಸಹಜವೇ ಆಗಿದೆ.

ಕೆಲವರು ಪೌರಾಣಿಕ, ಐತಿಹಾಸಿಕ ಕೃತಿಗಳನ್ನಷ್ಟೇ ರಚಿಸಿದವರಿದ್ದಾರೆ. ಆದರೆ ಕೆಲವು ಕರ್ತೃಗಳಿಗೆ ಇಂಥವು ತಮ್ಮ ಬರಹದ ಬದುಕಿನಲ್ಲೇ ಒಂದು ಮಹತ್ವಾಕಾಂಕ್ಷೆಯ, ಪ್ರಯೋಗಾತ್ಮಕವಾದ, ಸಾಹಸಮಯವಾದ ಮತ್ತು ವೈವಿಧ್ಯತೆಯನ್ನು ತರುವ ಮೈಲಿಗಲ್ಲುಗಳೂ ಆಗಿರುತ್ತವೆ. ಆದ್ದರಿಂದಲೇ ಇಂಥ ಕೃತಿಗಳ ರಚನೆ ಸುಲಭವಲ್ಲ. ವರ್ಷಗಟ್ಟಲೆ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು, ಎಲ್ಲಾ ರೀತಿಯ ಬಾಹ್ಯ ಆಕರ್ಷಣೆಗಳು, ಚಿತ್ತ ಚಾಂಚಲ್ಯಗಳನ್ನೂ, ವೈಯಕ್ತಿಕ ಆಧ್ಯತೆಗಳನ್ನು ಬದಿಗಿರಿಸಿ ಬರಹದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಸೃಜನಶೀಲ ಲೇಖಕನ ಪ್ರತಿಭೆಯ ಜೊತೆಗೆ ಒಂದು ಶಿಸ್ತು, ಪರಿಶ್ರಮ ಮತ್ತು ಶ್ರದ್ಧೆ ಸೇರಿದರೆ ಇಂಥ ಒಂದು ಅದ್ಭುತ ಕೃತಿಯ ರಚನೆ ಸಾಧ್ಯ ಅನ್ನಿಸಿತು. ಆದ್ದರಿಂದ ಈ ಪ್ರಕಾರದ ಕೃತಿಕಾರರ ಬಗ್ಗೆ ನನಗೆ ಹೆಮ್ಮೆ ಮತ್ತು ಗೌರವಾಭಿಮಾನಗಳಿವೆ.

ಪುರಾಣವನ್ನಾಗಲೀ, ಚರಿತ್ರೆಯನ್ನಾಗಲೀ ಓದುವುದೂ ಸಹ ಸುಲಭವಲ್ಲ. ನಾನೂರು, ಐನೂರು ಪುಟಗಳ ಪುಸ್ತಕಗಳನ್ನು ಒಂದೇ ಗುಕ್ಕಿಗೆ ಓದುವುದು ಕಷ್ಟ. ಹಾಗಂತ ಆಗಾಗ ಬಿಟ್ಟು ಬಿಟ್ಟು ಓದಿದರೆ, ಒಂದು ಓಘಕ್ಕೆ ತೊಡಕಾಗಿ, ಅರ್ಥೈಸಿಕೊಳ್ಳುವಿಕೆ ಮತ್ತು ನೆನಪಿಟ್ಟುಕೊಳ್ಳುವುದು ಕಷ್ಟವಾಗಿ, ಮತ್ತೆ ಕೆಲವು ಪುಟಗಳಾದರೂ ಹಿಂದೆ ಹೋಗಬೇಕಾಗುತ್ತದೆ. ಏಕೆಂದರೆ ಇಂಥ ದೊಡ್ಡ ಕೃತಿಗಳಲ್ಲಿ ಕಥೆಯು ತೆಂಗಿನ ಮರದಂತೆ ಒಂದೇ ದಿಕ್ಕಿನಲ್ಲಿ ಸಾಗುವುದು ಅಪರೂಪ; ಆಲದ ಮರದಂತೆ ಹತ್ತಾರು ದಿಕ್ಕಿನಲ್ಲಿ ಹರಡಿಕೊಳ್ಳುತ್ತದೆ. ಇಷ್ಟೆಲ್ಲಾ ಕಷ್ಟಪಟ್ಟು ಓದಿದ ಮೇಲೆ ಸಿಗುವ ಒಂದು ಸಂತೃಪ್ತಿಯನ್ನು ವರ್ಣಿಸಲಾಗದು, ಅನುಭವಿಸಿಯೇ ನೋಡಬೇಕು.

ನಿಯುಕ್ತಿ ಪುರಾಣ ಅಸಲಿಗೆ, ಹದಿನೈದನೇ ಶತಮಾನದ (1576 ರಿಂದ 1617) ಕಾಲಘಟ್ಟದಲ್ಲಿ ನಡೆಯುವ ಮಹಿಷೂರು ಅರಸರ ಕತೆ. ಆದರೆ ಇದರ ಕ್ಯಾನ್ವಾಸ್ ಮಾತ್ರ ಅಷ್ಟೇ ಅಲ್ಲ, ಇಡೀ ದಕ್ಷಿಣ ಭಾರತದ ಪುರಾಣ/ ಚರಿತ್ರೆ ಇಲ್ಲಿ ಸಿಗುತ್ತದೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ತಲೆ ಎತ್ತಿದ ಹಲವು ಅರಸರ ಕತೆ. ಒಂದು ಕಡೆ ಹುಟ್ಟಿದರೂ, ಒಂದೇ ದಿಕ್ಕಿನಲ್ಲಿ ಹರಿಯದೆ ಹತ್ತಾರು ಕವಲುಗಳಾಗಿ, ಉತ್ತರ ಕಾವೇರಿ, ದಕ್ಷಿಣ ಕಾವೇರಿ, ಪಶ್ಚಿಮ ವಾಹಿನಿಯರಾಗಿ ಹರಿಯುವ, ಹರಿದು, ಪೊರೆದು, ದಣಿದು, ಲೋಕಪಾವನಿ, ಕಪಿಲೆಯರನ್ನು ಕೂಡಿಕೊಂಡು ಸಾಗರ ಸೇರುವ ಕಾವೇರಿ ನದಿಯ ಕಥೆ. (ಪುಸ್ತಕದ ಕೊನೆಗೆ ಕೊಟ್ಟಿರುವ ವಂಶ ವೃಕ್ಷಗಳು ಮತ್ತು ಭೂಮಿಯ ನಕ್ಷೆಗಳು ಬಹಳ ಸಹಾಯಕಾರಿಯಾಗಿವೆ.) ಇಲ್ಲಿನ ಹರಿವು ಬರಿ ನೀರಿನದಲ್ಲ; ರಕ್ತ, ವಿರಕ್ತಿ, ಹಾಲು, ಜೇನು, ಸಂಸ್ಕೃತಿ, ಸಂಪ್ರದಾಯ, ವ್ಯವಸ್ಥೆ, ಧನ- ಕನಕ, ಭಾಷೆ, ಭಾವನೆ, ಭಕ್ತಿ, ಭಯ, ಪ್ರೇಮ, ವಿರಹ, ಶೌರ್ಯ, ಸಾಹಸ ಎಲ್ಲವೂ!

ಯಾವ ದಾರಿಯಲ್ಲಿ ಹರಿದರೂ ಗಮ್ಯವೊಂದೇ ನದಿಗೆ. ತಗ್ಗಿದ್ದ ಕಡೆ ನುಗ್ಗಿ ಹರಿಯುವುದೇ ನದಿಯ ಧರ್ಮ. ಹಾಗೇ, ಇಲ್ಲಿನ ಕಥೆಗಳಿಗೆ ದಾಖಲೆಗಳನ್ನು, ಸಾಕ್ಷಿಗಳನ್ನು, ಆಧಾರಗಳನ್ನು ಹುಡುಕುವ ಪುರುಸೊತ್ತು, ಹುಕಿ ಅಥವಾ ಜರೂರತ್ತು ಓದುಗನಿಗೆ ಬರದೇ ಇರುವಷ್ಟು ವೇಗವಾಗಿ, ಧುಮ್ಮಿಕ್ಕಿ ಹರಿಯುತ್ತದೆ ಈ ಪುರಾಣದ ಕಥೆಯು.

ಸಾಮಾನ್ಯವಾಗಿ ರಾಜರುಗಳ ಕಾಲದ ಕಥೆಗಳೆಂದರೆ ಒಂದು ಸಿಂಹಾಸನಕ್ಕೆ, ಅಧಿಕಾರಕ್ಕೆ, ಐಶ್ವರ್ಯಕ್ಕೆ, ಐಷಾರಾಮಕ್ಕೆ, ದರ್ಪಕ್ಕೆ ಹಪಹಪಿಸುವ, ಗೆಲ್ಲುತ್ತಾ, ಸೋಲುತ್ತಾ, ಪ್ರತಿ ಯುದ್ಧವನ್ನೂ ಮತ್ತೊಂದು ಯುದ್ಧದ ಉಗಮವಾಗಿಸುತ್ತಾ ಸಾಗುವ ಪಾತ್ರಗಳ ಸುತ್ತಲೇ ಗಿರಕಿ ಹೊಡೆಯುತ್ತವೆ. ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಎನ್ನುವ ಇಂದಿನ ಸತ್ಯವನ್ನೇ ಮತ್ತೆ ಮತ್ತೆ ನಿರೂಪಿಸುತ್ತವೆ. ವಾಸ್ತವದ ಜೊತೆ ಜೊತೆಗೆ, ಮಾಂತ್ರಿಕತೆಯ, ಭ್ರಮೆಗಳ, ನಂಬಿಕೆಗಳ, ಪ್ರತೀತಿಗಳ, ರೀತಿ ರಿವಾಜುಗಳ ಪರಿಚಯಿಸುತ್ತಾ, ವರ ಕೊಡುವ ಕುಲದೈವಗಳು, ಶಾಪ ಕೊಡುವ ಮುನಿಗಳು, ಮುನಿದ ನಾರಿಯರನ್ನೂ ಕಾಣಿಸುತ್ತವೆ. ನಿಯುಕ್ತಿ ಪುರಾಣ ಇದಕ್ಕೆ ಹೊರತಾಗಿಲ್ಲ. ಆದರೂ ಗೊತ್ತಿರುವ ಕಥೆಗಳನ್ನೇ ಮತ್ತೆ ಮತ್ತೆ ಹೊಸ ಬೆರಗಿನಿಂದ ಓದುವಂತೆ, ಸವಿಯುವಂತೆ ಮಾಡುವ ಶಕ್ತಿ ನನಗೆ ಕಂಡಿತು. ಅದಕ್ಕೆ ಮುಖ್ಯವಾಗಿ ವಸ್ತಾರೆಯವರ ಭಾಷೆಯ ಬಳಕೆಯನ್ನೇ ನಾನಾದರೂ ನೆಚ್ಚಿಕೊಂಡು ಓದಿದೆ.

ವೃತ್ತಿಯಿಂದ ಒಬ್ಬ ಆರ್ಕಿಟೆಕ್ಟ್ ಆಗಿರುವ ವಸ್ತಾರೆ ಸರ್ ಅವರ ಭಾಷೆಯ ಮೇಲಿನ ಹಿಡಿತ, ಅಚ್ಚರಿಯಾಗುವಂತೆ ಮಾಡುತ್ತದೆ. ಬರಹವೆಂದರೆ ಭಾಷೆ, ಭಾಷೆ ಎಂದರೆ ಬರಹ ಅಂತ ಈ ಕೃತಿಯಲ್ಲಿ ನನಗೆ ಅನ್ನಿಸಿಬಿಟ್ಟಿತು. ನಮ್ಮ ಕನ್ನಡ ಇಷ್ಟು ಸೊಗಸಾಗಿದೆಯೇ, ಇಂಥ ಲಾಲಿತ್ಯ, ಈ ಪರಿಯ ಪ್ರಯೋಗಗಳು, ಅಲಂಕಾರದೊಂದಿಗೆ ತರ್ಕ, ಮೌಲ್ಯಗಳನ್ನೂ ಈ ರೀತಿಯಾಗಿಯೂ ಹೆಚ್ಚಿಸಬಹುದೇ ಎಂದು ಕೇಳಿಕೊಳ್ಳುವಂತಾಯಿತು. ಪ್ರಿಯೆ ಚಾರು ಶೀಲೆ ಮತ್ತು ಅವರ ಹಲವಾರು ಕವಿತೆಗಳನ್ನು ಓದಿ, ಅದರಲ್ಲಿನ ಭಾಷೆಯ ಸೊಗಸನ್ನು ಕಂಡಿದ್ದ ನನಗೆ ಈ ಕೃತಿ ಭಾಷೆಯಲ್ಲಿಯೂ ಅವರು ತೋರಿರುವ ವೈವಿದ್ಯತೆಯನ್ನು ಪರಿಚಯಿಸಿತು. ಇದರ ಮುಂದಿನ ಭಾಗಗಳಾದ 'ಪ್ರಯುಕ್ತಿ ಪುರಾಣ' ಮತ್ತು 'ಸಂಯುಕ್ತಿ ಪುರಾಣ' ಗಳನ್ನೂ ಓದುವ ಆಸೆಯಿದೆ. ಇಂಥ ಚೆಂದದ ಕೃತಿಯನ್ನು ರಚಿಸಿದ ವಸ್ತಾರೆ ಸರ್ ಮತ್ತು ಪ್ರಕಟಿಸಿದ ಸಾಹಿತ್ಯ ಲೋಕ ಪಬ್ಲಿಕೇಷನ್ಸ್ ನ ರಘು ಅವರಿಗೂ ಅಭಿನಂದನೆಗಳು!

- ಪೂರ್ಣಿಮಾ ಮಾಳಗಿಮನಿ

MORE NEWS

ಈ ಕೃತಿಯಲ್ಲಿ ಭಾವನೆಗಳ ಸ್ವಚ್ಛವಾದ ನಿವೇದನೆಯಿದೆ….

22-10-2024 ಬೆಂಗಳೂರು

“ಒಂದು ಮಠ ದೊಡ್ಡ ಧಾರ್ಮಿಕ ಶ್ರದ್ಧಾಕೇಂದ್ರವಾದರೂ, ಆರ್ಥಿಕವಾಗಿ ಮಠವನ್ನು ನಡೆಸುವುದು ಎಷ್ಟು ಸವಾಲಿನ ಕೆಲಸ ಎಂಬು...

ಈ ಕಥಾ ಸಂಕಲನದಲ್ಲಿ ದಟ್ಟ ಕಾಡಿನ ರೌದ್ರ ವರ್ಣನೆ ಓದುಗರನ್ನು ಮೋಹಗೊಳಿಸುತ್ತದೆ‌

22-10-2024 ಬೆಂಗಳೂರು

“ಈ ಸಂಕಲನ ಮಲೆಯ ಮಹದೇಶ್ವರದ ತಪ್ಪಲಿನ ಗುಡ್ಡಗಾಡು ಜನರ ಬದುಕುಗಳ ಚಿತ್ರಣಗಳನ್ನು ಬಲು ನಿಖರವಾಗಿ ಕೊಡುತ್ತದೆ&rdqu...

ಈ ಕೃತಿ ಶ್ರೀಧರ ನಾಯಕ್ ಅವರ ಆತ್ಮಚರಿತ್ರೆಯ ಆಯ್ದ ಭಾಗವಿದ್ದಂತೆ

15-10-2024 ಬೆಂಗಳೂರು

“ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಎನ್ನುವುದು ವಾಸ್ತವಾಂಶಗಳನ್ನು ಜಾಗರೂಕವಾಗಿ, ನಿಖರವಾಗಿ ಮರು ಸೃಷ್ಟಿಸುವ ಕಲೆ&...