Date: 04-06-2022
Location: ಬೆಂಗಳೂರು
'ದ್ರಾವಿಡ ಬಾಶೆಗಳಿಗೆ ಅತಿ ಹಳೆಯ ದಾಕಲೆಗಳೆಂದರೆ ತಮಿಳು ಮತ್ತು ಕನ್ನಡ ಬಾಶೆಯ ಹಳೆಯ ಶಾಸನಗಳು. ಇದರಲ್ಲಿ ಕನ್ನಡಕ್ಕೆ ನಾಲ್ಕಯ್ದನೆ ಶತಮಾನಗಳಿಂದ ಶಾಸನಗಳು ದೊರೆಯುತ್ತವೆ ಮತ್ತು ತಮಿಳಿಗೆ ಕ್ರಿಸ್ತಪೂರ‍್ವದ ಕೆಲವು ಶತಮಾನಗಳ ಕಾಲದಿಂದ ಶಾಸನಗಳು ದೊರೆಯುತ್ತವೆ ಎನ್ನಲಾಗುತ್ತದೆ' ಎನ್ನುತ್ತಾರೆ ಭಾಷಾ ವಿಶ್ಲೇಷಣಾಕಾರ ಡಾ.ಬಸವರಾಜ ಕೋಡಗುಂಟಿ ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ದ್ರಾವಿಡ ಬಾಶಾ ಮನೆತನದ ಕುರಿತು ವಿವರಿಸಿದ್ದಾರೆ.
ದ್ರಾವಿಡ ಬಾಶೆಗಳು ಜಗತ್ತಿನ ಪ್ರಮುಕ ಬಾಶಾ ಮನೆತನಗಳಲ್ಲಿ ಒಂದು. ಇದು ಮುಕ್ಯವಾಗಿ ದಕ್ಶಿಣ ಏಸಿಯಾ ಪರಿಸರದಲ್ಲಿ ಕಂಡುಬರುತ್ತದೆ. ದ್ರಾವಿಡ ಬಾಶೆಗಳಿಗೆ ಅತಿ ಹಳೆಯ ದಾಕಲೆಗಳೆಂದರೆ ತಮಿಳು ಮತ್ತು ಕನ್ನಡ ಬಾಶೆಯ ಹಳೆಯ ಶಾಸನಗಳು. ಇದರಲ್ಲಿ ಕನ್ನಡಕ್ಕೆ ನಾಲ್ಕಯ್ದನೆ ಶತಮಾನಗಳಿಂದ ಶಾಸನಗಳು ದೊರೆಯುತ್ತವೆ ಮತ್ತು ತಮಿಳಿಗೆ ಕ್ರಿಸ್ತಪೂರ‍್ವದ ಕೆಲವು ಶತಮಾನಗಳ ಕಾಲದಿಂದ ಶಾಸನಗಳು ದೊರೆಯುತ್ತವೆ ಎನ್ನಲಾಗುತ್ತದೆ. ಅದಕ್ಕಿಂತ ಹಳೆಯ ದಾಕಲೆಗಳು ಎಂದರೆ ಸಂಸ್ಕ್ರುತ ಮತ್ತು ಕೆಲವು ಮುಂಡ ಬಾಶೆಗಳ ಜೊತೆಗಿನ ಸಂಬಂದ-ಸಂಪರ‍್ಕಗಳು. ಎರಡು ಸಾವಿರ ವರುಶಗಳಿಗೂ ಹಿಂದೆಯೆ ದ್ರಾವಿಡ ಬಾಶೆಗಳು ಇಂಡೊ-ಆರ‍್ಯನ್ ಬಾಶೆಯಾದ ಸಂಸ್ಕ್ರುತದೊಂದಿಗೆ ಮತ್ತು ಮುಂಡ ಬಾಶೆಗಳೊಂದಿಗೆ ಸಂಬಂದವನ್ನು ಹೊಂದಿದ್ದಿತು. ಹಲವಾರು ಪದಗಳು ಮತ್ತು ವ್ಯಾಕರಣದ ವಿಚಾರಗಳ ಕೊಡುಪಡೆಯುವಿಕೆ ಆಗಿದೆ. ಈ ಕೊಡುತೆಗೆದುಕೊಳ್ಳುವ ಸಂಬಂದ ಕನಿಶ್ಟ ಮೂರು-ನಾಲ್ಕು ಸಾವಿರ ವರುಶಗಳಿಂದಲೂ ಆಗಿರಬಹುದು ಎನ್ನುವುದಕ್ಕೆ ಹಲವಾರು ಆದಾರಗಳನ್ನು ಅದ್ಯಯನಗಳು ತೋರಿಸಿಕೊಡುತ್ತವೆ. ಅಂತ ಒಂದು ವಿಚಾರವನ್ನು ಇಲ್ಲ ಮಾತನಾಡಬಹುದು.
ಸಂಸ್ಕ್ರುತ ಇಂಡೊ-ಯುರೋಪಿಯನ್ ಬಾಶಾ ಮನೆತನಕ್ಕೆ ಸೇರುವ ಇಂಡೊ-ಆರ‍್ಯನ್ ಗುಂಪಿನ ಪ್ರದಾನ ಸದಸ್ಯ ಬಾಶೆ. ಇಂಡೊ-ಯುರೋಪಿಯನ್ ಬಾಶೆಗಳಲ್ಲಿ ವಾಕ್ಯವನ್ನು ಮಾಡುವಾಗ ಮೊದಲಿಗೆ ಕರ‍್ತ್ರು ಆನಂತರ ಕ್ರಿಯೆ ಆನಂತರ ಕರ‍್ಮ ಪದಗಳು ಬರುತ್ತವೆ. ಇಂಗ್ಲೀಶಿನ ವಾಕ್ಯವನ್ನು ಗಮನಿಸಬಹುದು, ಅಯ್ ಆ್ಯಮ್ ಗೋಯಿಂಗ್ ಹೋಮ್. ಆದರೆ, ಕನ್ನಡದಾಗ ಕರ‍್ತ್ರು, ಕರ‍್ಮ ಮತ್ತು ಕ್ರಿಯೆ ಈ ಅನುಕ್ರಮದಲ್ಲಿ ಬರುತ್ತವೆ. ಇಂಡೊ-ಯುರೋಪಿಯನ್ ಮನೆತನದ ಸದಸ್ಯ ಬಾಶೆಯಾಗಿರುವ ಸಂಸ್ಕ್ರುತ ಮತ್ತು ಅದರಿಂದ ಬೆಳೆದ ಇತರೆಲ್ಲ ಆದುನಿಕ ಬಾರತೀಯ ಬಾಶೆಗಳಲ್ಲಿ ಕನ್ನಡದಲ್ಲಿ ಇರುವಂತ ಅನುಕ್ರಮ ಕಾಣಿಸುತ್ತದೆ. ಆದರೆ, ಸಂಸ್ಕ್ರುತದ ಇತರ ಸೋದರ ಬಾಶೆಗಳಾದ ಇಂಗ್ಲೀಶು, ಜರ‍್ಮನಿ, ಪ್ರೆಂಚು, ಗ್ರೀಕು ಮೊದಲಾದ ಬಾಶೆಗಳಂತೆ ಇಲ್ಲ. ಇದಕ್ಕೆ ಕಾರಣ ಸಂಸ್ಕ್ರುತಕ್ಕೆ ಒದಗಿದ ದ್ರಾವಿಡ ಬಾಶೆಗಳ ಸಂಪರ‍್ಕ ಮತ್ತು ದ್ರಾವಿಡ ಬಾಶೆಗಳ ವಿಪರೀತ ಪ್ರಬಾವ ಕಾರಣ. ಸಂಸ್ಕ್ರುತದ ಹಳೆಯ ಪಟ್ಯವಾದ ರುಗ್ವೇದದ ಕಾಲಕ್ಕಾಗಲೆ ಈ ಮತ್ತು ಇಂತ ಹಲವಾರು ದ್ರಾವಿಡ ಬಾಶೆಗಳ ಪ್ರಬಾವವನ್ನು ಕಾಣಬಹುದು. ಅಂದರೆ ರುಗ್ವೇದಕ್ಕಿಂತ ಮೊದಲೆ ಸಂಸ್ಕ್ರುತ ಬಾಶೆಯನ್ನು ದ್ರಾವಿಡವು ಬಹಳಶ್ಟು ಪ್ರಬಾವಿಸಿದೆ ಎಂದಾಯಿತು. ಅಂದರೆ, ಅದಕ್ಕಿಂತ ತುಸು ಮೊದಲು ದ್ರಾವಿಡ ಬಾಶೆಗಳ ಸಂಪರ‍್ಕಕ್ಕೆ ಸಂಸ್ಕ್ರುತ ಬಂದಿರಬೇಕು. ಇದು ಕನಿಶ್ಟವೆಂದರೂ ಅಯ್ದು ಸಾವಿರ ವರುಶಗಳ ಆಚೆಗೆ ವಿಚಾರಿಸಬೇಕಾದ ವಿಶಯ. ಹೀಗೆ ದ್ರಾವಿಡದ ಪಳಮೆ ಅಯ್ದಾರು ಸಾವಿರ ವರುಶಗಳಶ್ಟು ಹಿಂದಕ್ಕೆ ಹೋಗುತ್ತದೆ.
ಇನ್ನು, ದ್ರಾವಿಡ ಬಾಶೆಗಳ ಇತಿಹಾಸಿಕ ಮತ್ತು ತುಲನಾತ್ಮಕ ಅದ್ಯಯನಗಳು ಸಾಕಶ್ಟು ಬಂದಿವೆ. ಈ ಅದ್ಯಯನಗಳ ವಿವಿದ ದ್ರಾವಿಡ ಬಾಶಾ ಗುಂಪುಗಳ ಒಡೆತ, ಅದರೊಳಗೆ ಬಾಶೆಗಳ ಒಡೆತ, ಆ ಬಾಶೆಗಳಲ್ಲಿ ಬಹುದೊಡ್ಡ ಪ್ರಮಾಣದ ಒಳೊಡೆತಗಳು ಹೀಗೆ ಹಲವು ವಿಚಾರಗಳು ದ್ರಾವಿಡ ಬಾಶೆಗೆ ಕನಿಶ್ಟ ಏಳೆಂಟು, ಎಂಟತ್ತು ಸಾವಿರ ವರುಶಗಳ ಇತಿಹಾಸವನ್ನು ವಿವರಣೆಗೆ ಬಯಸುತ್ತವೆ. ಅಂದರೆ ಕನಿಶ್ಟ ಎಂಟತ್ತು ಸಾವಿರ ವರುಶಗಳಿಂದ ದ್ರಾವಿಡ ಬಾಶೆಗಳು ಬಾರತದಲ್ಲಿ ಬದುಕಿದ್ದವು, ಬಳಕೆಯಲ್ಲಿದ್ದವು ಎಂದು ಹೇಳುವುದಕ್ಕೆ ಸಾದ್ಯ. ಅದಕ್ಕಿಂತ ಹಿಂದೆ? ಸದ್ಯ ಗೊತ್ತಿಲ್ಲ.
ಈ ನಡುವೆ ಇತರ ಕೆಲವು ವಿಚಾರಗಳನ್ನೂ ಮಾತಾಬೇಕು. ಹರಪ್ಪಾ ನಾಗರಿಕತೆಯಲ್ಲಿ ಬಳಕೆಯಲ್ಲಿದ್ದ ಬಾಶೆ ದ್ರಾವಿಡ ಇರಬಹುದು ಎಂಬ ವಾದ ಒಂದೆರಡು ದಶಕಗಳ ಹಿಂದೆ ತುಸು ಹೆಚ್ಚಾಗಿ ಇದ್ದಿತು. ಆದರೆ, ಇಂದು ಹೆಚ್ಚಿನ ವಿದ್ವಾಂಸರು ಹರಪ್ಪಾದಲ್ಲಿ ಬಳಕೆಯಲ್ಲಿದ್ದ ಬಾಶೆ ಮತ್ತು ಸಮುದಾಯಗಳಿಗೆ ದ್ರಾವಿಡದ ನಂಟು ತೋರಿಸುವುದಕ್ಕೆ ಗಟ್ಟಿಯಾದ ಆದಾರಗಳು ಇಲ್ಲ ಎಂಬುದನ್ನು ಹೇಳುತ್ತಿದ್ದಾರೆ. ಹರಪ್ಪದಲ್ಲಿ ಸಿಕ್ಕಿರುವ ಚಿತ್ರಲಿಪಿಗಳು ಯಾವುದೆ ಬಾಶೆಯೊಂದಿಗೆ ನಂಟಿಸಿ ತೋರಿಸಲು ಸಾದ್ಯವಾಗಿಲ್ಲ. ಆದರೆ, ಕೆಲಕೆಲ ಪ್ರಯತ್ನಗಳು ಇವು ದ್ರಾವಿಡ ಬಾಶೆಗೆ ಸಂಬಂದಿಸುತ್ತವೆ ಎಂಬ ವಾದವನ್ನು ಮಂಡಿಸಿದ್ದುಂಟು.
ದಕ್ಶಿಣ ಬಾರತದಲ್ಲಿಯೆ ಬಹು ಹಿಂದಿನಿಂದ ದ್ರಾವಿಡ ಮಾತಾಡುವವರು ಇದ್ದಾರೆ ಎಂಬ ವಾದವೂ ಇದೆ. ಹರಪ್ಪ ಸಮಕಾಲೀನ ಹಲವು ನಾಗರಿಕತೆ ನೆಲೆಗಳು ದಕ್ಶಿಣ ಬಾರತದಾದ್ಯಂತ ದೊರೆತಿರುವುದು ಇದಕ್ಕೆ ಇನ್ನಶ್ಟು ಪೂರಕವಾಗಿದೆ. ದಕ್ಶಿಣ ಬಾರತ ದ್ರಾವಿಡರು ಬಹುಕಾಲದಿಂದ ಇರುವ ಪ್ರದೇಶ ಎನ್ನುವವರಲ್ಲಿ ಇನ್ನೆರಡು ವಾದಗಳನ್ನು ನಂಬುವವರು ಇದ್ದಾರೆ. ಕೆಲವರು ಆಪ್ರಿಕಾ ಮತ್ತು ದಕ್ಶಿಣ ಬಾರತ ಬೂಪ್ರದೇಶಗಳು ಒಂದೆ ಆಗಿದ್ದವು ಮತ್ತು ಅವು ಬೂಮಂಡಲಗಳ ಒಡೆದುಕೊಳ್ಳುವಿಕೆ ಪ್ರಕ್ರಿಯೆಯಲ್ಲಿ ದೂರವಾಗುತ್ತಿವೆ ಎಂಬ ವಾದವನ್ನು ಹೇಳುತ್ತಾರೆ. ಅದಕ್ಕೆ ಪೂರಕವಾಗಿ ಆಪ್ರಿಕಾದ ಕೆಲ ದೇಶ, ಬಾಶೆಗಳಲ್ಲಿ ದ್ರಾವಿಡಕ್ಕೆ ಮತ್ತು ದಕ್ಶಿಣ ಬಾರತಕ್ಕೆ ಸಮನಾಗಿ, ಸಂವಾದಿಯಾಗಿ ಕಾಣಿಸುವ ಕೆಲವು ಅಂಶಗಳನ್ನು ತೋರಿಸುತ್ತಾರೆ. ಆದರೆ, ಬೂಮಂಡಲಗಳ ವಿಗಟನೆ ಕಾಲ ಹಲವು ಲಕ್ಶ ವರುಶಗಳ ಹಿಂದಿನದು. ಬಾಶೆಗಳ ಬೆಳವಣಿಗೆಯನ್ನು ಅಶ್ಟು ಹಿಂದಕ್ಕೆ ತೆಗೆದುಕೊಂಡು ಹೋಗಲು ಸಾದ್ಯವಿಲ್ಲ. ಇನ್ನು ಕೆಲವರು ಸಮುದ್ರದಾಳದಲ್ಲಿ ಮುಳುಗಿ ಹೋದ ಬೂಕಂಡವೊಂದರ ಶೋದದ ನಂತರ ಅದು ದಕ್ಶಿಣ ಬಾರತದ ಕೆಳತುದಿಗೆ ಅಂಟಿಕೊಂಡಿದ್ದಿತು ಮತ್ತು ಅದು ಕ್ರಮೇಣ ದೂರ ಸರಿದು ನೀರೋಳಗೆ ಮುಳುಗಿದೆ ಎಂದು ಹೇಳುತ್ತಾರೆ. ಮುಕ್ಯವಾಗಿ ಇದನ್ನು ತಮಿಳರು ಹೆಚ್ಚು ವಾದಿಸುತ್ತಾರೆ. ಹೀಗೆ ಮುಳುಗಿದ ನೆಲವನ್ನು ಇಲೆಮೂರಿಯಾ ಎಂದೆನ್ನುತ್ತಾರೆ. ಇದಕ್ಕೆ ಪೂರಕವಾಗಿ ನೀರಲ್ಲಿ ಮುಳುಗಿದ ನೆಲದ ಉಲ್ಲೇಕ ಹಳೆಯ ತಮಿಳಿನ ಸಾಹಿತ್ಯದಲ್ಲಿ ಬರುವುದನ್ನೂ ಬಳಸಿಕೊಳ್ಳುತ್ತಾರೆ. ಆದರೆ, ಇಲೆಮೂರಿಯ ನಿಕರವಾಗಿ ಇಲ್ಲಿಯೆ ಗಟಿಸಿರಬಹುದು ಎಂದು ಹೇಳುವುದೂ ಸಾದ್ಯವಾಗಿಲ್ಲ ಮತ್ತು ಹಾಗೆ ನೆಲವು ನೀರಲ್ಲಿ ಮುಳುಗಿದ್ದರೆ ಸಹಜವಾಗಿ ಅದೂ ಕೂಡ ಲಕ್ಶಾಂತರ ವರುಶಗಳ ಹಿಮದೆಯೆ ಆಗಿದ್ದಿರಬೇಕು. ತಮಿಳಿನ ಸಾಹಿತ್ಯದ ದಾಕಲೆಗಳಲ್ಲಿ ದೊರೆಯುವ ಉಲ್ಲೇಕಗಳು ತೀರಾ ಇತ್ತಿಚಿನವು, ಅಂದರೆ ಕೆಲವೆರಡು ಸಾವಿರ ವರುಶಗಳವು ಆಗಿರಬಹುದು.
ಹಾಗಾದರೆ ಸದ್ಯ ಇರುವ ಅದ್ಯಯನಗಳು ಅಂದಾಜಿಸಿರುವಂತೆ ಎಂಟತ್ತು ಸಾವಿರ ವರುಶಗಳಿಂದ ದ್ರಾವಿಡದ ಪಳಮೆಯನ್ನು ಗುರುತಿಸಬಹುದು. ಅದಕ್ಕೂ ಹಿಂದೆ ಹೋಗಬಹುದು, ಆದರೆ ಇನ್ನೂ ಹೆಚ್ಚಿನ ಅದ್ಯಯನಗಳು ಬೇಕು. ಮುಕ್ಯವಾಗಿ ಒಕ್ಕಲುತನ, ಮೀನುಗಾರಿಕೆ ಇಂತ ಕಸುಬುಗಳಿಗೆ ಸಂಬಂದಿಸಿದ, ಸಂಬಂದವಾಚಕ, ಸಂಕ್ಯಾವಾಚಕ, ಸರ‍್ವನಾಮದಂತ ಪದಗಳ ಅದ್ಯಯನ, ವ್ಯಾಕರಣ ರಚನೆಯ ಅದ್ಯಯನ ಈ ಮೊದಲಾದವು ಹೆಚ್ಚು ತಿಳುವಳಿಕೆಯನ್ನು ಕೊಡುತ್ತವೆ.
ಈ ಅಂಕಣದ ಹಿಂದಿನ ಬರೆಹ:
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.