Date: 22-10-2021
Location: ಬೆಂಗಳೂರು
‘ಒಡಲಾಳ ಸಾಕವ್ವನ ಕತೆಯಾಗುವುದರೊಂದಿಗೆ; ಒಂದು ದಲಿತ ಕುಟುಂಬದ ಎರಡು ಅವಸ್ಥೆಗಳನ್ನು ಅನಾವರಣ ಮಾಡುತ್ತದೆ. ಈ ಅವಸ್ಥೆಗಳ ಸ್ವರೂಪ ಹಾಗೂ ಅಂತರಂಗದಲ್ಲಿ ಕೃತಿ ಅರ್ಥಪೂರ್ಣವಾಗುತ್ತದೆ’ ಎನ್ನುತ್ತಾರೆ ಲೇಖಕ ಶ್ರೀಧರ ಹೆಗಡೆ ಭದ್ರನ್. ಅವರು ತಮ್ಮ ಬದುಕಿನ ಬುತ್ತಿ ಅಂಕಣದಲ್ಲಿ ದೇವನೂರು ಮಹಾದೇವ ಅವರ ಒಡಲಾಳ ಕೃತಿಯ ಕುರಿತು ವಿಶ್ಲೇಷಿದ್ದಾರೆ.
“ನಾನು ಬಹಳವಾಗಿ ಬರೆದಿರುವೆ ಅಂದುಕೊಂಡಿದ್ದೆ. ನಾನು 1968ರಿಂದ ಇದುವರೆಗೆ ಬರೆದಿರುವುದೆಲ್ಲ ಒಟ್ಟಾಗಿ ಪ್ರಕಟಿಸಿದಾಗ 169 ಪುಟಗಳಷ್ಟೇ ಆಗಿರುವುದು ನನ್ನನ್ನೇ ಚಕಿತಗೊಳಿಸಿದೆ”- ಇವು; ತಮ್ಮ ಸಮಗ್ರ ಕತೆ, ಕಾದಂಬರಿಗಳು ಪುಸ್ತಕದ ‘ನೆನಕೆ’ಯಲ್ಲಿ ಖ್ಯಾತ ಲೇಖಕ ದೇವನೂರ ಮಹಾದೇವ ಅವರು ಬರೆದಿರುವ ಮಾತುಗಳು. ಹಾಗೆ ನೋಡಿದರೆ ದೇವನೂರರು ಬರೆದದ್ದು ಕಡಿಮೆಯೇ. ದ್ಯಾವನೂರು ಸಂಗ್ರಹದ ಏಳು ಕತೆಗಳು, ಒಡಲಾಳ ಮತ್ತು ಕುಸುಮಬಾಲೆ ಎರಡು ಕಾದಂಬರಿಗಳು ಹಾಗೂ ಇತ್ತೀಚೆಗೆ ಇಪ್ಪತ್ತೈದಕ್ಕೂ ಹೆಚ್ಚು ಮುದ್ರಣಗಳನ್ನು ಕಂಡಿರುವ ಸಮ್ಮಿಶ್ರ ಸ್ವರೂಪದ ಬರೆಹಗಳ ಸಂಕಲನ ಎದೆಗೆ ಬಿದ್ದ ಅಕ್ಷರ. ಇದಕ್ಕಾಗಿಯೇ ಹಾ. ಮಾ. ನಾಯಕರು; “ಮಹಾದೇವರಷ್ಟು ಕಡಿಮೆ ಬರೆದು, ಅವರಷ್ಟು ಪ್ರಸಿದ್ಧಿ ಪಡೆದ ಇನ್ನೊಬ್ಬರನ್ನು ನಾನು ಕಾಣೆ” ಎಂದು 1985ರಲ್ಲಿ ಉದ್ಘರಿಸಿದ ಮಾತು ಇಂದಿಗೂ ಪ್ರಸ್ತುತ. ಈ ಪ್ರಸಿದ್ಧಿಗೆ ಹಾಗೂ ನವ್ಯೋತ್ತರ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ದೇವನೂರ ಮಹಾದೇವ ಬೀರಿರುವ ಪ್ರಭಾವಕ್ಕೆ ಇರುವ ಮುಖ್ಯ ಕಾರಣಗಳು ಎರಡು. ಈಗಾಗಲೇ ಕನ್ನಡ ಮನಸ್ಸುಗಳು ಕಂಡಿರುವಂತೆ; ಒಂದು- ಸಂವೇದನೆಯಲ್ಲಿ ಅಭಿವ್ಯಕ್ತವಾದ ದಲಿತ ಅನುಭವಗಳು, ಆಕಾಂಕ್ಷೆಗಳ ಸೂಕ್ಷ್ಮ ಗ್ರಹಿಕೆಯಾದರೆ, ಇನ್ನೊಂದು- ಅಭಿವ್ಯಕ್ತಿ ಕ್ರಮದ ಅನನ್ಯತೆ.
ಒಡಲಾಳ ರಚನೆಯಾದುದು 1979ರಲ್ಲಿ. ಪ್ರಕಟವಾದುದು 1981ರಲ್ಲಿ. ಇದು ಕಿರುಕಾದಂಬರಿಯೋ ನೀಳ್ಗತೆಯೋ ಎಂಬ ಚರ್ಚೆ ಇನ್ನೂ ನಿಲುಗಡೆಗೆ ಬಂದಿಲ್ಲ. ಆದರೆ ಇದರ ಪ್ರಕಟಣೆಯ ಬಳಿಕ ದೇವನೂರ ಮಹಾದೇವ ಅವರ ಸ್ಥಾನ ಕನ್ನಡ ಅಷ್ಟೇ ಅಲ್ಲ ಭಾರತೀಯ ಸಾಹಿತ್ಯ ಸಂದರ್ಭದಲ್ಲೇ ವಿಶೇಷವಾಗಿ ದಾಖಲಾಗಿದೆ. ಒಡಲಾಳ ದಲಿತ ಕುಟುಂಬವೊಂದರ ಆಂತರಿಕ ಬಿಕ್ಕಟ್ಟಿನ ಕಥೆಯಾದರೂ ಇಲ್ಲಿ; ಶತಮಾನದ ಶೋಷಣೆಯ ಬಗೆಗಿನ ಕೂಗಾಟದ ಘೋಷಣೆಗಳಿಲ್ಲ, ಬಡಬಡಿಸುವ ಮಾತುಗಳಿಲ್ಲ. ದಲಿತರ ಬದುಕನ್ನು ವಸ್ತುನಿಷ್ಠವಾಗಿ ಕಟ್ಟಿಕೊಡುವ ಪ್ರಾಮಾಣಿಕತೆಯ ಜೊತೆಗೆ ಸಾಹಿತ್ಯಕ್ಕೆ ಬೇಕಾದ ಕಲಾತ್ಮಕತೆಯೂ ಮಿಳಿತವಾಗಿರುವುದರಿಂದ ಅದ್ಭುತವಾದ ಪರಿಣಾಮವನ್ನು ಇದು ಉಂಟುಮಾಡುತ್ತದೆ.
ಒಡಲಾಳದ ಕೇಂದ್ರ ಪಾತ್ರ ಸಾಕವ್ವ. ಅವಳು ದೇವರಿಗೆ ಬಿಟ್ಟ ಹುಂಜವನ್ನು ಕಳೆದುಕೊಂಡು ಅದನ್ನು ಹುಡುಕುವಲ್ಲಿಂದ ಶುರುವಾಗುವ ಕಥೆ ಮತ್ತೊಂದು ಹುಂಜವನ್ನು ಕಣ್ಣು ಮುಂದೆಯೇ ಕಳೆದುಕೊಳ್ಳುವುದರೊಂದಿಗೆ ಮುಕ್ತಾಯವಾಗುತ್ತದೆ. ಸಾಕವ್ವನ ಕತೆಯಾದ ಒಡಲಾಳದಲ್ಲಿ ಈಗ ಅವಳು ‘ಗಾಳಿ ಅಲ್ಲಾಡಿದರೆ ತಾನೂ ಅಲ್ಲಾಡುವಂತಾಗಿದ್ದಾಳೆ’. ಆದರೆ ಪ್ರಾಯದಲ್ಲಿ ‘ಹುಟ್ಟುದ್ದು ಹೆಣ್ಣೆಂಗ್ಸಾದರೂ ಗಂಡ್ಸ ಮೀರಿ ಕಚ್ಚ ಕಟ್ಟಿಕೊಂಡು ಗೇದು’ ಗಂಡುಗಳ ಸಾಕಿದವಳು, ನಾಕು ಕಂಬದ ತೊಟ್ಟಿ ಹಟ್ಟಿ ಕಟ್ಟಿದವಳು. ಈ ತಾಕತ್ತಿನೊಂದಿಗೆ; ‘ಸ್ವಾರ್ಜವಾದ ‘ಮಕ್ಕ, ಮೊಮ್ಮಕ್ಕ, ಸೊಸೇರು, ಆಡು-ಕೋಳಿಗಳು, ದೇವರು-ದಿಂಡರು ಇವೆಲ್ಲ ಸಾಕವ್ವನ ಪ್ರಪಂಚ. ಆ ಪ್ರಪಂಚದಲ್ಲಿ ಬದುಕುವ ವ್ಯಕ್ತಿತ್ವಗಳು ಒಂದಕ್ಕಿಂತ ಒಂದು ಭಿನ್ನವಾದವು. ಹೀಗಾಗಿ ಅವಳ ಕೌಟುಂಬಿಕ ಬಿಕ್ಕಟ್ಟು ಆಂತರಿಕ ಸಂಗತಿಯಾದರೂ ಒಂದು ಸಮುದಾಯದ ಸಂಗತಿಯೂ ಆಗಿ ವ್ಯಾಪಿಸಿಕೊಳ್ಳುತ್ತದೆ.
ಸಾಕವ್ವನ ಗಂಡು ಮಕ್ಕಳಾದ ಕಾಳಯ್ಯ, ಗುರುಸಿದ್ಧ, ಸಣ್ಣಯ್ಯ ಮೂವರೂ ಭಿನ್ನ ಭಿನ್ನ ಸ್ವಭಾವದವರು.‘ನಾಕು ಗ್ರಾಮಕ್ಕೆ ತಿಳುವಳಿಕೆ ಹೇಳುವ’ ದೊಡ್ಡ ಘಟದ ಹಿರಿಯ ಮಗ ಕಾಳಣ್ಣ ಸಾಕವ್ವನ ಮುಂದೆ ‘ಹಿಡಿ’ಯಾಗಿ ‘ಕ್ಯಾಬಿನೈ’ ಆದವನು. ಇವನ ಹೆಂಡತಿಗೆ ಸಂತಾನವೇ ಇಲ್ಲವಾದುದರಿಂದ ಅವಳಿಗೆ ಹೆಸರೇ ಇಲ್ಲ. ಎರಡನೆಯ ಮಗ ಸಣ್ಣಯ್ಯ ‘ರಾವುಳಾಸುರ’ನಂಥವನು. ಇವನ ಹೆಂಡತಿ ಚೆಲುವಮ್ಮ ತವರುಮನೆಯಲ್ಲಿ ಸಿರಿವಂತಿಕೆಯಿದೆಯೆಂದು ಧಿಮಾಕು ತೋರಿಸುವವಳು. ಇವರಿಗೆ ನಾಲ್ವರು ಮಕ್ಕಳು. ಮೂರನೆಯ ಮಗ ಅಭಿಮನ್ಯು ಪಾತ್ರ ಮಾಡುವ ಪರಾಕ್ರಮಿ ಗುರುಸಿದ್ದು. ಈತ ಮನೆಬಿಟ್ಟು ಮಾರಿಗುಡಿಯಲ್ಲೇ ಮಲಗುತ್ತಾನೆ. ಸಾಕವ್ವನ ಮಗಳು ಗೌರಮ್ಮ ಬೇಜವಾಬ್ದಾರಿಯ ಗಂಡನಿಂದಾಗಿ ತವರಿನಲ್ಲಿಯೇ ಬಂದಿದ್ದಾಳೆ. ಅವಳ ಮೊದಲ ಮಗ ರೋಗಿಷ್ಠ. ಯಾವಾಗಲೂ ದುಪ್ಪಟಿಯನ್ನು ಹೊದ್ದು ಮಲಗುವ ‘ದುಪ್ಟಿ ಕಮೀಷನರ್’. ಇನ್ನೊಬ್ಬ ಮಗ ಚಿಕ್ಕವನು-ಶಿವು. ಎರಡನೆಯ ಮಗಳು ಪುಟ್ಟಗೌರಿ ಅವಿವಾಹಿತೆ. ಇವಿಷ್ಟು ಸಾಕವ್ವನ ಸಂಸಾರದ ಸಾಗರ.
ಇಂತಹ ಏರುಪೇರಿನ ಸಂಸಾರದಲ್ಲಿ ಸಣ್ಣಯ್ಯ ಸಮಸ್ತ ಆಸ್ತಿಯ ಮೇಲೆ ಕಣ್ಣು ಮಡಗಿರುವ ಆಸಾಮಿ. ಹಿರಿಯನಾದ ಕಾಳಣ್ಣನಿಗೆ ಸಂತಾನವಿಲ್ಲದಿರುವುದು ಇವನ ಆಸೆಗೆ ಪೋಷಣೆಯನ್ನು ನೀಡಿತ್ತು. ಆದರೆ ಮಗಳು ಗೌರಮ್ಮ ತನ್ನ ಮೇಲೆ ತೊರುವ ಕಾಳಜಿ, ಪ್ರೀತಿಗೆ ಕರಗಿದ ಸಾಕವ್ವ “ನೀನು ತಣ್ಣಗಿರು ಕಂದ. ಕಡೆಗಾಲ್ಕು ನೀನೆ ನನಗಾಗೋಳು. ನನ್ನ ಇರೋ ಆಸ್ತಿನೆಲ್ಲ ನಿನ್ನ ಕಿರಿ ಮಗನಿಗೆ ಬರೆದು ಸತ್ತೋಯ್ತೀನಿ” ಅಂದಾಗ ಜಗಳ ಪ್ರಾರಂಭವಾಗುತ್ತದೆ. ಪೀಚಲಾಗಿ ಒಣಗಿಕೊಂಡಿದ್ದ ಸಣ್ಣಯ್ಯನಲ್ಲಿ ಇದರಿಂದ ಆವೇಶ ಉಂಟಾಗುತ್ತದೆ. ಸಣ್ಣಯ್ಯನಿಗೆ ಅವನ ಹೆಂಡತಿ ಚೆಲುವಮ್ಮ ಬೆಂಬಲ ತೋರುತ್ತಾಳೆ. ಉದ್ರಿಕ್ತನಾದ ಸಣ್ಣಯ್ಯ ಆಸ್ತಿ ಬಗ್ಗೆ ಕ್ಯಾತೆ ತೆಗೆದಾಗ; ‘ಗಡುಗೇಲಿ ನಾಕು ನೀರು ಕುಡುದು ಮಗನ ದಿಕ್ಕ ಕಣ್ಣ ಮೆಡರಿಸಿ “ಕೇಳವ್ನು ನೀ ಯಾರ?” ಅಂದಳು. ಸಣ್ಣ ಕಡ್ಡಿ ಮುರುದಂತೆ “ನಾ ಅಕ್ಕುದಾರ” ಅಂದ. ಸಾಕವ್ವಗೂ ಕಮ್ಮಿ ಕಾನೂನು ಗೊತ್ತಿರಲಿಲ್ಲ. “ಏನಂದೆ ಇನ್ನೊಂದ್ಸಲ ಅನ್ನು...ಅಕ್ಕುದಾರನಾ ನೀನು? ಹುಟ್ಟುದ್ದು ಹೆಣ್ಣೆಂಗ್ಸಾದರೂ ಗಂಡ್ಸ ಮೀರ್ಸಿ ಕಚ್ಚಕಟಗೊಂಡು ಗೇದು, ಸಂಪಾದಿಸಿವ್ನಿ ಕನೊ ಭೂಪತಿ, ಆಸ್ತಿ ನನ್ನ ಸ್ವಾರ್ಜತ ಸ್ವಾರ್ಜತ...” ಅಂದಳು’. ಸಣ್ಣಯ್ಯನ ಹೆಂಡತಿ ಚೆಲುವಮ್ಮ ಅತ್ತೆಯ ವಿರುದ್ಧ ಹಲ್ಲುಮಸೆಯ ತೊಡಗುತ್ತಾಳೆ. ಇಲ್ಲೆಲ್ಲ ಸಿಟ್ಟಿಗೆ ವೈಮನಸ್ಸಿಗೆ, ಜಗಳಕ್ಕೆ ಬಡತನವೇ ಕಾರಣವೆಂಬ ಸೂಕ್ಷ್ಮವನ್ನು ಲೇಖಕರು ಚಿತ್ರಿಸಿದ್ದಾರೆ. ಆರ್ಥಿಕ ಅಸಮಾನತೆಯಿಂದಾಗಿ ಬಡತನ, ಮೌಢ್ಯ, ಅಜ್ಞಾನಗಳೇ ಹೇಗೆ ದಲಿತ ಸಮುದಾಯವನ್ನು ಆಳಿದವು ಎಂಬ ವಾಸ್ತವದ ದರ್ಶನ ಇಲ್ಲಿ ಸಾಧ್ಯವಾಗುತ್ತದೆ. ಈ ಘಟನೆಗಳಿಂದ ಸಾಕವ್ವ ‘ದುಕ್ಕವೇ ಬಾಯಿಬುಟಗೊಂಡು ಕುಂತಥರ ಕೂತಿದ್ದಳು’. ಅತ್ತೆಯ ಮಾತಿಗೆ ಸಿಟ್ಟಿಗೆದ್ದು ತವರಿಗೆ ಹೊರಟಿದ್ದ ಚೆಲುವಮ್ಮನನ್ನು ಭಾವ ಕಾಳಣ್ಣ ಕಿರುಮನೆಯೊಳಗೆ ಕಳಿಸುವ ಮೂಲಕ ಈ ಸಂಘರ್ಷಕ್ಕೆ ಸಣ್ಣ ತೆರೆ ಬೀಳುತ್ತದೆ.
ಇಂತಹ ಹಲವು ತಲ್ಲಣಗಳ ನಡುವೆಯೂ ಸಿರಿವಂತ ಎತ್ತಪ್ಪನೋರ ಮಗಳ ಮದುವೆಯ ಹಾಗೆ ವಿಜೃಂಭಣೆಯಿಂದ ಪುಟ್ಟಗೌರಿಯ ಮದುವೆಯನ್ನೂ ಮಾಡಬೇಕೆಂದು ಕನಸು ಕಾಣುವ ಕಾಳಣ್ಣನ ಹೆಂಡತಿಯ ವಾತ್ಸಲ್ಯ, ‘ಈಚಲ ಕಡ್ಡೀಗೆ ನೀಲಿ ಅಜ್ಜುಕೊಂಡು’ ಗೋಡೆಯ ಮೇಲೆ ನವುಲಿನ ಚಿತ್ರ ಬಿಡಿಸುವ ಪುಟ್ಟಗೌರಿ ಹಾಗೂ ಅದನ್ನು ಸಂಭ್ರಮಿಸುವ ಶಿವೂ ಇವೆಲ್ಲ ದಲಿತರ ಜೀವನಪ್ರೀತಿಯ ಸಂಕೇತಗಳಾಗಿ ಮೂಡಿಬಂದಿವೆ.
ಸಾಕವ್ವ ಹೇಳಿದಂತೆ ಹೆಣ್ಣೆಂಗ್ಸಾದರೂ ಗಂಡಿನಂತೆ ಮನೆ ಮಾಡಿಕೊಂಡು ಬಂದಿರುವ ಅವಳ ಸ್ವಾಭಿಮಾನಕ್ಕೆ ಈ ಮುಪ್ಪಿನಲ್ಲಿ ಒದಗುತ್ತಿರುವ ಆಘಾತಗಳಿಂದ ಅವಳ ಚಹರೆಯೇ ಭಿನ್ನವಾಗುತ್ತದೆ. ಮೊಮ್ಮಗ ಶಿವೂ ಹಾಗೂ ಅವಳ ಮಧ್ಯೆ ನಡೆಯುವ ‘ಯಮದವರ’ ಚರ್ಚೆಯ ಸಂದರ್ಭದಲ್ಲಿ ಶಿವೂ ಕಾಣುವ ಅಜ್ಜಿ ಹೀಗಿದ್ದಾಳೆ; “ಅವಳ ಸುಕ್ಕಿಂದ ಮೂಡಿದ ಅಳ್ಳಾಡುವ ಚರ್ಮ; ಅವಳ ಮುಖದ ಹಲ್ಲಿಲ್ಲದ ಬಾಯಿ ತಲೇಯ ನರಕೂದಲು ಮಾಯವಾದವು. ಸಾಕವ್ವನೊಳಗೆ ಪುಟಗೌರಿ ಚಿಕ್ಕಿ ಮೂಡಿದಳು. ಪುಟಗೌರಿ ಚಿಕ್ಕಿಯಾಗಿದ್ದ ಸಾಕವ್ವ ಈಗ ಬಿಳಿಸೀರೆ ಉಟ್ಟು ಹಾರಾಡುವ ಕೂದಲು ಗಾಳೀಗೆ ಬಿಟ್ಟು ಬಳುಕುವ ದೇವಕನ್ನಿಕ ಆದಳು” ಹೀಗೆ ಸಾಕವ್ವ ಬಾಳಿನ ಬೇಗೆಯಲ್ಲಿ ಕಾಯಕದ ಕುದಿಯಲ್ಲಿ ಜೀವದ ಮೂಲಧಾತುಗಳ ನವೀಕರಣದ ಮೂಲಕ ಕಾಲದೇಶಗಳನ್ನು ಮೀರಿದ ಶಕ್ತಿಯಾಗುತ್ತಾಳೆ. ‘ಯಮದವರನ್ನೂ’ ಓಡಿಸುವ ತಾಕತ್ತು ಪಡೆಯುತ್ತಾಳೆ. ಇಂತಲ್ಲಿ ಕಥನ ವಾಸ್ತವದ ನೆಲೆಯಿಂದ ಪೌರಾಣಿಕ ನೆಲೆಗೆ ಏರುತ್ತದೆ.
ಒಡಲಾಳ ಸಾಕವ್ವನ ಕತೆಯಾಗುವುದರೊಂದಿಗೆ; ಒಂದು ದಲಿತ ಕುಟುಂಬದ ಎರಡು ಅವಸ್ಥೆಗಳನ್ನು ಅನಾವರಣ ಮಾಡುತ್ತದೆ. ಈ ಅವಸ್ಥೆಗಳ ಸ್ವರೂಪ ಹಾಗೂ ಅಂತರಂಗದಲ್ಲಿ ಕೃತಿ ಅರ್ಥಪೂರ್ಣವಾಗುತ್ತದೆ. ಮೊದಲ ಐದು ಭಾಗಗಳಲ್ಲಿ ಸಾಕವ್ವನ ಪರಿವಾರದ ಸಂಕಟಗಳು ಅಭಿವ್ಯಕ್ತವಾಗಿವೆ. ಕಾದಂಬರಿಯ ಇನ್ನೊಂದು ಮಹತ್ವದ ಘಟನೆ ‘ಕಡಲೆಕಾಯಿ ಯಜ್ಞ’ ನಡೆಯುವುದೂ ಇದೇ ಐದನೆಯ ಭಾಗದಲ್ಲಿ. ಸಾಹುಕಾರ ಎತ್ತಪ್ಪನ ಎಮ್ಮಿ ವರ್ಣನೆ ಬಂದಾಗ ಸಾಕವ್ವ; “ಅಂಥ ಒಂದು ಎಮ್ಮಿ ಸತ್ರೀಗಪ್ಪ ನಮ್ಮ ಕೆರಿ ದರಿದ್ರನಾರೂ ಒಂಜಿನ ಹಿಂಗ್ತದೆ” ಎನ್ನುತ್ತಾಳೆ. ಶತಮಾನದ ಹಸಿವಿನ ಕ್ರೌರ್ಯದಿಂದ ಬಳಲುವ ಸಮುದಾಯಕ್ಕೆ ಒಂದು ಜೀವದ ಸಾವು ಜೀವ ಉಳಿಸಿಕೊಳ್ಳುವ, ಹಸಿವು ಇಂಗಿಸಿಕೊಳ್ಳುವ ಸಾಧನವಾಗುತ್ತದೆ. ಇಂತಹ ಸ್ಥಿತಿಯಲ್ಲೇ ಕಾಳಣ್ಣ ಎತ್ತಪ್ಪನ ಒಂದು ಮೂಟೆ ಕಡಲೆ ಕಾಯಿ ಕದ್ದು ಹೊತ್ತು ತರುತ್ತಾನೆ. ನಡುಮನೆಯಲ್ಲಿ ಸುರಿದ ಕಡಲೆ ಕಾಯಿ, ನಡುವೆ ಉರಿಯುತ್ತಿದ್ದ ಬೆಂಕಿ, ಸುತ್ತಲೂ ಮನೆಯ ಎಲ್ಲರೂ ಸೇರಿ ಕಡಲೆ ಕಾಯಿ ಸಹಭೋಜನ ಆರಂಭಿಸುತ್ತಾರೆ. ಈ ಮೊದಲು ನಡೆದಿದ್ದ ಆಸ್ತಿ ಕುರಿತ ಕಾಳಗ, ವೈಮನಸ್ಸು ಎಲ್ಲವನ್ನೂ ಈ ಸಂದರ್ಭ ಮರೆಸಿಬಿಟ್ಟಿದೆ. ಹಟ್ಟಿ ಒಂದಾಗಿದೆ. ಜೋಳದ ತರಗಿನ ಬೆಂಕಿ ಉರಿಯುತ್ತಾ ಕಡಲೆಕಾಯಿ ಸಿಪ್ಪೆಗಳು ಬೀಳುತ್ತಿದ್ದಂತೆ ಜಾಜ್ವಲ್ಯಮಾನವಾಗುತ್ತಾ ಹಟ್ಟಿಯ ದಟ್ಟ ಕತ್ತಲೆಯನ್ನು ಹೊಡೆದೋಡಿಸಿ ಎಲ್ಲರ ಮುಖದ ಮೇಲೂ ಬೆಳಕಿನ ನರ್ತನ ನಡೆದಿತ್ತು. ಆ ಬೆಳಕು ನೆರೆ ಹೊರಕೆಯನ್ನೂ ಒಳಗೊಂಡು ಪಕ್ಕದ ಮನೆ ಕಾಳಕ್ಕನ “ಅಸ್ಕಂಡು ಅತ್ತು ಮಲಗಿದ” ಮಗುವಿನ ಆಹಾರವಾಗೂ ಕಡಲೆಕಾಯಿ ತಲಪುತ್ತದೆ. ಹೀಗೆ ಬೆಂಕಿ - ಬೆಳಕಿನ ಸಂಕೇತ ಜೀವ ಪ್ರೇಮದ ಅಭಿವ್ಯಕ್ತಿಯಾಗುತ್ತದೆ.
ಈ ಕೌಟುಂಬಿಕ ಸಹಭೋಜನದಲ್ಲಿ ಪಾಲ್ಗೊಳ್ಳಲು ಸರಿರಾತ್ರಿಯಲ್ಲಿ ಆಗಮಿಸಿದ ಗುರುಸಿದ್ದೂ ಕೈಗೆ ಕಟ್ಟಿದ್ದ ಗಂಡುತನದ ವೀರಬಳೆ ವಾಚು ಬೆಂಕಿಯ ಬೆಳಕಿಗೆ ಫಳಾರೆಂದು ಹೊಳೆಯುತ್ತದೆ. ಅದು ಅವನ ಸ್ವತಂತ್ರ ಸ್ವಾವಲಂಬನೆಯ ಸ್ವಾರ್ಜಿತ ಸ್ವತ್ತಾಗಿರುತ್ತದೆ. ಜೊತೆಗೆ ಅವನಲ್ಲಿ ಸ್ವಾಭಿಮಾನದ ಕುಡಿಯೂ ಮೂಡಿಕೊಂಡಿದೆ. ಆ ಘಟನೆಯನ್ನು ಅವನೇ ವಿವರಿಸುತ್ತಾನೆ. “ಅಣ್ಣೊ ನಿನ್ನ ತಗಡೂರ್ಗ ವೋಗಿದ್ದಿ. ಅಲ್ಲಿ ನಮ್ಮವರು ಸಿವಬಸಪ್ನ ಹೋಟಲ್ಗ ನುಗ್ಗುದ್ದೊ ಅಂದ್ರ ...ಸಿವ ಸಿವಾ ಆಪಾಟಿ ಜನ...ನಾವೇನ ಕಾಸ ಕೊಟ್ಟವೊ ಕಲ್ಲ ಕೊಟ್ಟವೊ ಕಾಫಿ ತಿಂಡಿ ಕೊಡ್ರಿ ಅನ್ನೋರು. ಸಿವಬಸಪ್ಪ ಅನ್ನೋವ ಬೆವುತೋದ. ಆಮೇಲ ಪೊಲೀಸ್ನವರು ಇಳುದ್ರು. ನಾವು ಕೊಡ್ಸತೀವಿ ಸುಮ್ನಿರಿ ಸುಮ್ನಿರಿ ಅನ್ನೋರು. ...ತಕ್ಕಳಪ್ಪ, ನಾನ್ಯಾಕ ಸುಮ್ಕಿರೋದು ಅಂದುಬುಟ್ಟು ನಾನೂವಿ ಕಾಸ ಬಿಸಾಕಿ ‘ದೋಸಾ ಟೀ ಕೊಡ್ರಿ’ ಅಂದೆ. ಸಿವಬಸಪ್ಪ ಅನ್ನೋನು ನನ್ನೇ ದುರಗುಟ್ಕುಂಡು ನೋಡ್ತ ತಂದ್ಕೊಡನು...” ಇದೊಂದು ಕ್ರಾಂತಿಕಾರಿ ಘಟನೆಯೆಂಬಂತೆ ಹಟ್ಟಿಯ ಎಲ್ಲರೂ ಕೇಳಿಸಿಕೊಳ್ಳುತ್ತಾರೆ.
ಪೊಲೀಸರ ಆಗಮನದಿಂದ ಸಾಕವ್ವನ ಪರಿವಾರದ ಸ್ಥಿತಿ ಗಂಭೀರವಾಗುತ್ತದೆ. ಈವರೆಗೆ ಶಕ್ತಿ ಕೇಂದ್ರವಾಗಿದ್ದ ಸಾಕವ್ವನ ವ್ಯಕ್ತಿತ್ವ ಕುಗ್ಗಿಹೋಗುತ್ತದೆ. ಇಡೀ ಪರಿವಾರದ ಕುಗ್ಗುವಿಕೆಯನ್ನು ದೇವನೂರರು ಹೀಗೆ ಚಿತ್ರಿಸಿದ್ದಾರೆ; “ಒಳುಗೆ ಕಾಳಣ್ಣ ಕಣ್ಣು ಪಿಳಿಪಿಳಿ ಬುಡ್ತ ದೇಹವ ಕುಗ್ಗಿಸಿ ಕುಂತಿದ್ದನು. ಅವನ ಹೆಡ್ತಿ ಮಂಕ ಅಂಟಿಸಿಕೊಂಡು ಕೂತಿದ್ದಳು. ಸಣ್ಣಯ್ಯ ಭೂಮಿಗೆ ನೆಟ್ಟ ಒಣಕಲ ಕಡ್ಡಿಯಂತೆ ನಿಂತಿದ್ದನು. ಬಲೆಗೆ ಸಿಕ್ಕ ಶಿವು ಮಿಲಮಿಲ ಅಂತಿತ್ತು. ಸಾಕವ್ವ ಕುಗ್ಗಿ ಕುಂತಿದ್ದ ಮಗನ ದಿಕ್ಕ ಉಸಿರಾಟದೊಡನೆ ಇಂಚಿಂಚು ತವುಯುತ್ತಿದ್ದಳು. ಕಾಳಣ್ಣನ ನೆರುಕೆ ತಡಬಡಾಯಿಸುತ್ತಿತ್ತು. ಹೊರಗೆ ಜನ ಹೆಚ್ಚಿದಂತೆ ಪೊಲೀಸನ ಕುಣಿತವೂ ಹೆಚ್ಚುತ್ತಿತ್ತು”. ಪಿ. ಸಿ. ರೇವಣ್ಣನ ಪೊಲೀಸ್ಗಿರಿಯನ್ನು ವರ್ಣಿಸುವಲ್ಲಿ ವ್ಯಂಗ್ಯ ಕಂಡರೆ; ಪೊಲೀಸ್ ಇನ್ಸ್ ಪೆಕ್ಟರ್ ಬಂದಮೇಲಿನ ಕಥನದಲ್ಲಿ ಶೈಲಿಯ ಹಾಸ್ಯ, ಗಾಂಭೀರ್ಯಗಳೆರಡೂ ಇಣುಕಿವೆ. ಕಡಲೆಕಾಯಿ ಮೂಟೆಯನ್ನು ಹಟ್ಟಿಯೆಲ್ಲಾ ತಲೆಕೆಳಗುಮಾಡಿ ಹುಡುಕಿಯೂ ಪತ್ತೆಹಚ್ಚಲಾಗದ ಪೊಲೀಸರ ಅಸಹಾಯಕತೆ ಹಾಸ್ಯಕ್ಕೆ ಗುರಿಯಾಗುತ್ತದೆ. ಪೊಲೀಸರ ಸಹಜ ಕ್ರೌರ್ಯಕ್ಕೆ ಬಲಿಯಾಗುವ ಪುಟ್ಟಗೌರಿಯ ಅವಸ್ಥೆಯನ್ನು ಗಂಭೀರವಾಗಿ ಚಿತ್ರಿಸಿದ್ದಾರೆ. ಮನೆಯವರೆಲ್ಲರೂ ಸೇರಿ ಒಂದಕ್ಕೆರಡು ಅಂತ ತಿಂದ್ರೂನೂವೆ ಮೂಟೆ ಮುಗಿತದೇನಯ್ಯ!” ಎಂದು ಪ್ರಶ್ನಿಸುವ ಇನ್ಸ್ ಪೆಕ್ಟರ್ನಿಗೆ ಬಡವರ ಒಡಲಾಳದ ಹಸಿವಿನ ಕಲ್ಪನೆಯೇ ಇಲ್ಲ. ಹೀಗಾಗಿ ಸಾಕವ್ವನ ಕುಟುಂಬ ಒಂದು ಮೂಟೆ ಕಡಲೆಕಾಯಿ ತಿಂದು ಮುಗಿಸಿರಬಹುದಾದ ಸಾಧ್ಯತೆಯನ್ನೇ ಒಪ್ಪಲು ಅವರು ತಯಾರಿಲ್ಲ.
ಕಡಲೆಕಾಯಿ ತಿನ್ನುವಾಗ ನಂದನವನವಾಗಿದ್ದ ಸಾಕವ್ವನ ಹಟ್ಟಿ ಈಗ ಪೊಲೀಸರ ಬೂಟುಗಾಲಿನ ತುಳಿತಕ್ಕೆ ಸಿಕ್ಕು ಭ್ರಷ್ಟವಾಗುತ್ತದೆ. ದೇವರಿಗೆ ಬಿಟ್ಟ ಕೋಳಿ ಕಳೆದುಕೊಂಡ ‘ಅಪಶಕುನ’ದ ಶಂಕೆ ನಿಜವಾಗಿ ಸಾಕವ್ವನ ಹಟ್ಟಿ ಅನೂಹ್ಯ ಕ್ಷೋಭೆಗೆ ತುತ್ತಾಗುತ್ತದೆ. ಯಮದೂತರನ್ನೂ ಹಿಂದಟ್ಟುತ್ತೇನೆ ಎಂದು ಶಿವೂನ ಎದುರು ಪ್ರತಾಪ ಕೊಚ್ಚಿಕೊಂಡಿದ್ದ ಸಾಕವ್ವ ಯಮದೂತರಿಗಿಂತ ಮಿಗಿಲಾದ ಪೊಲೀಸರ ದೌರ್ಜನ್ಯದಿಂದ ಆರ್ತಳಾಗುತ್ತಾಳೆ. ಅವರ ಬೂಟುಗಾಲಿನ ದಾಳಿ ಸಾಕವ್ವನ ಆಂತರ್ಯದ ಪಾವಿತ್ರ್ಯದ ಜೊತೆಗೆ ದೇವರ ಮನೆಯ ದೈವಿಕತೆಯನ್ನೂ ಭಗ್ನಗೊಳಿಸುತ್ತದೆ. ಈ ಬೂಟುಗಾಲಿನ ತುಳಿತ ಹಟ್ಟಿಯ ಗುಟ್ಟನ್ನು, ಆಪ್ತತೆಯನ್ನು, ಹಟ್ಟಿಯ ಪೂರ್ವವಿಶೇಷಗಳಾದ; ಸವಕಲು ಕಾಸು, ಧರ್ಮರಕ್ಷೆಗಳನ್ನು ಭ್ರಷ್ಟಗೊಳಿಸುತ್ತವೆ. ‘ಸಾಕವ್ವ ಜೀವ ಕೈಲಿ ಹಿಡಿದುಕೊಂಡು “ಸ್ವಾಮ್ಗಳೋ ...ದೇವರ ಮನೆ ಬುದ್ಯೋ...ಬೂಟ್ಗಾಲಲ್ಲಿ...ಎಂದು ಕೈ ನೀಡಿದಳು. ಪೊಲೀಸರ ಜಪ್ತಿಯಲ್ಲಿ ಸಾಕವ್ವನ ಹಟ್ಟಿಯಲ್ಲಿ ಕಾಣಬರುವ ಅವಶೇಷಗಳು ಈ ಮೊದಲು ಅದು ತಕ್ಕ ಮಟ್ಟಿಗಿನ ಅನುಕೂಲ ಸ್ಥಿತಿಯಲ್ಲಿತ್ತು ಎಂಬುದಕ್ಕೆ ಪುರಾವೆಯೊದಗಿಸುತ್ತವೆ. ಉದಾಹರಣೆಗೆ; ಎಣ್ಣೆ ಇಲ್ಲದ ಎಣ್ಣೆ ಗಡಿಗೆ, ತುಪ್ಪ ಇಲ್ಲದ ತುಪ್ಪದ ಗಡಿಗೆ, ಆ ಕಡೆಗೊಂದು ಗಿಣಿ ಈ ಕಡೆಗೊಂದು ಗಿಣಿ ನಡುಮಧ್ಯ ಕುಂತ ಕೃಷ್ಣಪರಮಾತ್ನ ಗೊಂಬೆ, ಮಲೆ ಮಾದೇಶ್ವರ ಸ್ವಾಮಿಯ ಫೋಟೋ, ಕೆಳಗೆ ವಿಭೂತಿ ಹಲಗೆಯಲ್ಲಿ ವಿಭೂತಿ ಉಂಡೆ, ರಾಗಿಕಲ್ಲು, ಖಾಲಿಪುಟ್ಟಿ, ಊಟದ ಹರಿವಾಣ, ಗ್ಲಾಸು ಮುಂತಾದವು ಮುಖ ತೋರಿಸುತ್ತವೆ. ಯಾರ ಜಪ್ತಿಗೂ ಸಿಗದ ನವಿಲುಗಳು ಮಾತ್ರ ಹಟ್ಟಿಯ ಗೋಡೆಯ ಮೇಲೆ ನರ್ತಿಸುತ್ತಿವೆ. ಕುಟುಂಬದ ಜೀವ ಶಕ್ತಿಯಾದ ಸಾಕವ್ವನ ಮುಪ್ಪು, ಇರುವ ನಾಕೆಕರೆ ಭೂಮಿ ಮಳೆಯನ್ನೇ ಕಾಣದೆ ಬರಡಾಗಿರುವುದು, ಎಷ್ಟೇ ಅಲೆದರೂ ಸಿಗದ ಕೂಲಿ ಇವೆಲ್ಲವೂ ಆ ಕುಟುಂಬದ ಬಡತನ ಹಾಗೂ ಹಸಿವಿಗೆ ಮತ್ತು ಇಂದಿನ ಪರಿಸ್ಥಿತಿಗೆ ಕಾರಣ ಎಂಬುದನ್ನು ಕಥನ ಸೂಕ್ಷ್ಮವಾಗಿ ವಿವರಿಸಿದೆ.
ಕಥನದ ಕೊನೆಯ ದುರಂತ ಘಟಿಸುವುದು ಸಾಕವ್ವ ಯಾವ ಹುಂಜವನ್ನು ಕಳೆದುಕೊಂಡು ದಿಕ್ಕೆಟ್ಟಿದ್ದಳೋ ಅದರ ಜೊತೆ ಹುಂಜವನ್ನು ಕಣ್ಣಾರೆ ಕಳೆದುಕೊಳ್ಳುವಲ್ಲಿ. ಪೊಲೀಸರಲ್ಲಿ ನನ್ನ ಹುಂಜ ಹುಡುಕಿಕೊಡಿ ಎಂದು ಅವಳು ಗೋಗರೆಯುತ್ತಾಳೆ. ಅದು ಹೇಗಿತ್ತು ಎಂದು ತಮಾಷೆ ಮಾಡಿದ ಇನ್ಸ್ ಪೆಕ್ಟರ್ಗೆ ಗೂಡಿನಲ್ಲಿದ್ದ ಇನ್ನೊಂದು ಹುಂಜವನ್ನು ತೋರಿಸುತ್ತಾಳೆ. ಪೊಲೀಸರು ಅದನ್ನು ಹೊತ್ತೊಯ್ಯುತ್ತಾರೆ. ಕಾಯಬೇಕಾದ ವ್ಯವಸ್ಥೆಯೇ ಬಡವರ ಪಾಲಿಗೆ ಕೊಲ್ಲುವ ವ್ಯವಸ್ಥೆಯಾಗುವ ದುರಂತ ವ್ಯಂಗ್ಯ ಇಲ್ಲಿ ಕಾಣಿಸುತ್ತದೆ.
ಒಡಲಾಳ ಯಾವ ವೈಚಾರಿಕತೆಯ ಸೋಗನ್ನೂ ತತ್ವ ಚಿಂತನೆಯ ಭಾರವನ್ನೂ ಹೊರಿಸದೇ ಸಹಜವಾಗಿ ದಲಿತ ಜೀವನವನ್ನು ಅದೇ ಭಾಷೆಯಲ್ಲಿ ಚಿತ್ರಿಸಿರುವ ಅಪೂರ್ವ ಕೃತಿ. ದೈನಂದಿನ ಬದುಕಿನಲ್ಲಿ ಅರಳಿದ ಲೋಕಾನುಭವಗಳೇ ಕಥನವಾಗಿ ರೂಪುಗೊಂಡಿವೆ. ಇಲ್ಲಿಯ ಕೇಂದ್ರ ಶಕ್ತಿ ‘ಸಾಕವ್ವ’. ಅವಳ ಜೀವನವೇ ಶೋಷಣೆಗೊಳಗಾದ ದಲಿತ ಜೀವನ. ಸಾಮಾಜಿಕ ವ್ಯವಸ್ಥೆ ಹೇಗೆ ಆ ಜೀವನದ ದಲಿತತ್ವವನ್ನು ಅನಿವಾರ್ಯವಾಗಿಸುತ್ತದೆ, ಅದರ ಮೇಲೆ ದಾಳಿ, ಜಪ್ತಿ ಹೇಗೆ ಸಹಜವಾಗಿ ನಡೆಯುತ್ತವೆ, ಹೇಗೆ ಈ ವ್ಯವಸ್ಥೆಯ ವಿರುದ್ಧ ಗುರುಸಿದ್ದೂನಂತಹ ದಲಿತ ಯುವಕರು ಹೋರಾಡುವ ಚಿಹ್ನೆಗಳನ್ನು ತೋರಿಸುತ್ತಾರೆ ಇವೆಲ್ಲ ದಲಿತ ಬದುಕಿನ ಆನುಷಂಗಿಕ ಘಟನೆಗಳಾಗಿ ನಡೆಯುತ್ತವೆ. ಆದರೆ ಶತಮಾನಗಳಿಂದ ಬಿಡುಗಡೆಗಾಗಿ ಹಂಬಲಿಸುತ್ತಿರುವ ದಲಿತ ಪರಂಪರೆ ಹೇಗೆ ಅಂತಹ ಒತ್ತಡದ ನಡುವೆಯೂ ಸ್ವಂತಿಕೆಯನ್ನು ಕಾಪಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ ಎಂಬುದೇ ಕಥನದ ಶಕ್ತಿಯಾಗಿದೆ. ಜೀರ್ಣವಾದ ಹಟ್ಟಿಯ ಗೋಡೆಗಳ ಮೇಲೆ ನವಿಲುಗಳನ್ನು ಕುಣಿಸಬಲ್ಲ ಪುಟ್ಟಗೌರಿಯ ಕಲಾತ್ಮಕತೆ ದಲಿತರ ಸೃಜನಶೀಲತೆಗೆ ಪ್ರತೀಕವಾದರೆ; ಯಾವಾಗಲೂ ಹೊದ್ದು ಮಲಗಿರುವ ಗುಣವಾಗಲಾರದ ರೊಗಿಷ್ಠನಾಗಿದ್ದ ‘ದುಪ್ಟಿ ಕಮೀಷನರ್’ ಎಂದೇ ಹೆಸರು ಪಡೆದಿದ್ದ ಗೌರಮ್ಮನ ಹಿರಿಯ ಮಗ ದಲಿತರು ಎದುರಿಸುತ್ತಿರುವ ರೋಗಿಷ್ಠ ವ್ಯವಸ್ಥೆಯ ಪ್ರತೀಕವಾಗಿದ್ದಾನೆ.
ಕಡಲೇಕಾಯಿ ಪ್ರಸಂಗದ ಚಿತ್ರಣ:
ಒಡಲಾಳ ಪ್ರಕಟವಾದಾಗಿನಿಂದ ಇದುವರೆಗೆ ಹಲವು ರೀತಿಯ ಚರ್ಚೆ – ವಿಮರ್ಶೆಗಳಿಗೆ ಒಳಗಾಗಿದೆ. ಸರ್ವಶ್ರೀ ರಾಜೇಂದ್ರ ಚೆನ್ನಿ, ಪೊಲಾಂಕಿ ರಾಮಮೂರ್ತಿ, ಜಿ. ಎಸ್. ಆಮೂರ, ಟಿ. ಪಿ. ಅಶೋಕ, ಬಸವರಾಜ ಸಬರದ, ಆರ್ಕೆ ಮಣಿಪಾಲ ಮುಂತಾದ ವಿಮರ್ಶಕರು ಕೃತಿಯ ಅಂತರಾಳವನ್ನು ಬಿಚ್ಚಿನೋಡುವ ಪ್ರಯತ್ನವನ್ನು ಮಾಡಿದ್ದಾರೆ. ಒಡಲಾಳವನ್ನು ಕೇಂದ್ರವಾಗಿಸಿಕೊಂಡು ದೇವನೂರರ ಬರೆವಣಿಗೆಯ ಸ್ವರೂಪವನ್ನು ವಿವರಿಸುವ ಅನಂತಮೂರ್ತಿಯವರು: “ಪಾಲನೆಯಿಂದ ದೈನಿಕವನ್ನೂ ವಿಶೇಷವಾಗಿಸಿಕೊಂಡ ಸಾಕವ್ವನ ಹಟ್ಟಿ ಪೊಲೀಸರಿಂದ ತಪಾಸಣೆಗೆ ಒಳಗಾಗುತ್ತದೆ. ಇದು ಇಡೀ ಹಟ್ಟಿಯ ಜಗತ್ತನ್ನು ನಾಶಮಾಡುವಂತೆ ದೇವನೂರರು ಚಿತ್ರಿಸಬಹುದಿತ್ತು. ಹೈಮೈಮೆಟಿಕ್ ಮಾದರಿಯ ಕಥೆಯಾಗಿದ್ದಲ್ಲಿ ಒಡಲಾಳದ ಪಾತ್ರಗಳು ಈ ಪೊಲೀಸ್ ತಪಾಸಣೆಯನ್ನು ಒಂದೋ ಗೆಲ್ಲಬೇಕಾಗಿತ್ತು; ಅಥವಾ ಅದರಿಂದ ಕರುಣಾಜನಕವೆಂಬಂತೆ ನಾಶವಾಗಬೇಕಾಗಿತ್ತು. ಚಾಪ್ಲಿನ್ನನ ಬೌಲರ್ ಹ್ಯಾಟ್ ಧರಿಸಿದ ಪುಟ್ಟ ಮನುಷ್ಯನಿಗೆ ನಾಶವಾಗದಂತೆ ಹೇಗೆ ಬಾಳುವುದು ಗೊತ್ತು. ಅಂಥ ಕಾಮೆಡಿಯ ಶಕ್ತಿಯನ್ನು ಪಡೆದ ಕಥೆ ಒಡಲಾಳ...ಹೀಗಾಗಿ ಭಾರತದ ಕಥಾ ಸಾಹಿತ್ಯದಲ್ಲೇ ನಾನು ತಿಳಿದಂತೆ ದೇವನೂರ ಮಹಾದೇವರ ಒಡಲಾಳ ಒಂದು ಅಪೂರ್ವ ಶೋಭೆಯ ಕೃತಿ ಎನ್ನಬಹುದು” ಎಂದಿದ್ದಾರೆ.
ಕೆ. ಸತ್ಯನಾರಾಯಣ ಅವರು ತಮ್ಮ ಲೇಖನದಲ್ಲಿ; “ಒಡಲಾಳ ಕಥಾನಕವನ್ನು ಈಗಾಗಲೇ ಕನ್ನಡ ಸಾಹಿತ್ಯಲೋಕ ಕ್ಲಾಸಿಕ್ ಎಂದು ಗುರುತಿಸಿಬಿಟ್ಟಿದೆ...ಸಾಕವ್ವನ ಪರಿವಾರದ ಸದಸ್ಯರೆಲ್ಲ ಒಟ್ಟಿಗೇ ಕುಳಿತು ಕದ್ದ ಕಡ್ಲೆಕಾಯಿ ತಿನ್ನುವುದು, ಪುಟ್ಟಗೌರಿ ನವಿಲು ಬಿಡಿಸುವುದು ಇಂತಹ ಪ್ರಕರಣಗಳೆಲ್ಲ ಈಗಾಗಲೇ ಕನ್ನಡ ಓದುಗರ ಸಂವೇದನೆಯಲ್ಲಿ ಶಾಶ್ವತ ಸ್ಥಾನ ಪಡೆದಿವೆ” ಎನ್ನುವ ಮೂಲಕ ಒಡಲಾಳ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಪಡೆದುಕೊಂಡ ಸ್ಥಾನವನ್ನು ಗುರ್ತಿಸಿದ್ದಾರೆ.
ಹತ್ತಾರು ಮುದ್ರಣಗಳನ್ನು ಕಾಣುವುದರೊಂದಿಗೆ ಒಡಲಾಳ 1984ರಲ್ಲೇ ಕೊಲ್ಕತ್ತದ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದರ ನಾಟಕ ರೂಪ ಅತ್ಯಂತ ಜನಪ್ರಿಯವಾಗಿ ಕನ್ನಡ ಜನರನ್ನು ತಲಪಿದೆ. ಸಾಕವ್ವನ ಪಾತ್ರದಿಂದ ನಟಿ ಉಮಾಶ್ರೀ ರಸಿಕರ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ.
ಈ ಅಂಕಣದ ಹಿಂದಿನ ಬರೆಹಗಳು:
ವಾಸ್ತವ–ವಿಕಾಸಗಳ ನಡುವಿನ ಜೀಕುವಿಕೆ: ತೇಜಸ್ವಿಯವರ ಕರ್ವಾಲೊ
ಅನಂತಮೂರ್ತಿಯವರ ‘ಸಂಸ್ಕಾರ’ : ಬದುಕಿನ ಭಿನ್ನ ಮುಖಗಳ ಅನಾವರಣ
ಕಾರ್ನಾಡರ ತುಘಲಕ್: ವರ್ತಮಾನವಾಗುವ ಇತಿಹಾಸದ ತುಣುಕು
ಎಂದಿಗೂ ಮುಪ್ಪಾಗದ ’ಹಸಿರು ಹೊನ್ನು’
ಪ್ರಾದೇಶಿಕತೆಯ ದಟ್ಟ ವಿವರಗಳ-ಮಲೆಗಳಲ್ಲಿ ಮದುಮಗಳು
ಗ್ರಾಮಾಯಣ ಎಂಬ ಸಮಕಾಲೀನ ಪುರಾಣ
ಬದುಕಿನ ದಿವ್ಯದರ್ಶನ ಮೂಡಿಸುವ `ಮರಳಿ ಮಣ್ಣಿಗೆ’
ಮಾಸ್ತಿಯವರ ಕತೆಗಾರಿಕೆಗೆ ಹೊಸ ಆಯಾಮ ದಕ್ಕಿಸಿಕೊಟ್ಟ ಕೃತಿ ‘ಸುಬ್ಬಣ್ಣ’
ಮೈಸೂರ ಮಲ್ಲಿಗೆ ಎಂಬ ಅಮರ ಕಾವ್ಯ
ಪುಸ್ತಕ ಲೋಕವೆಂಬ ಬದುಕಿನ ಬುತ್ತಿ
ಎ.ಆರ್. ಕೃಷ್ಣಶಾಸ್ತ್ರಿಯವರ 'ವಚನ ಭಾರತ'
ಅಂಬಿಕಾತನಯದತ್ತರ ಸಖೀಗೀತ
ಡಿ. ವಿ. ಜಿ.ಯವರ ಮಂಕುತಿಮ್ಮನ ಕಗ್ಗ
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.