Date: 29-04-2022
Location: ಬೆಂಗಳೂರು
'ಮಡಿವಾಳಪ್ಪ ನಡೆದಾಡಿದ ನೆಲದಲ್ಲಿ ಹುಟ್ಟಿದ ನನಗೆ ಆ ನೆಲದ ನೆನಪುಗಳ ಪುಸ್ತಕ ಬಿಡುಗಡೆಗೆ ಉಂಟಾದ ಘೋರ ಅಡ್ಡಿಗಳನ್ನು ಹೇಗೆ ಜೀರ್ಣಿಸಿಕೊಳ್ಳಬೇಕೆಂದು ನನಗೀಗಲೂ ಗೊತ್ತಾಗುತ್ತಿಲ್ಲ' ಎನ್ನುತ್ತಾರೆ ಹಿರಿಯ ರಂಗಕರ್ಮಿ ಹಾಗೂ ಲೇಖಕ ಮಲ್ಲಿಕಾರ್ಜುನ ಕಡಕೋಳ ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ ಅವರ ಕಡಕೋಳ ನೆಲದ ನೆನಪುಗಳು ಕೃತಿ ಬಿಡುಗಡೆಯಾಗದಂತೆ ತಡೆದ ಘಟನೆಯ ಕುರಿತು ವಿವರಿಸಿದ್ದಾರೆ.
ಪುಸ್ತಕ ಬಿಡುಗಡೆ ಆಗಲಿಲ್ಲ ಅಂತ ತಿಳಿದು ತುಂಬಾ ಬೇಸರವಾಯಿತು. ಕೆಲವು ಜನರು ತಮಗೆ ಬೇಕಾದ ಚರಿತ್ರೆಯನ್ನು ಲೇಖಕ ಬರೆಯಬೇಕೆಂದು ಬಯಸುತ್ತಾರೆ. ಲೇಖಕನ ಅಧ್ಯಯನ, ಸಂಶೋಧನೆಗೆ ಬೆಲೆ ಇಲ್ಲ. ನೀವು ಹೆದರುವ ಅಗತ್ಯವಿಲ್ಲ, ನಿಮ್ಮೊಂದಿಗಿದ್ದೇವೆ. ಇದು ದೂರದ ದಿಲ್ಲಿಯಿಂದ ಸನ್ಮಿತ್ರರಾದ ಪ್ರೊ. ಪುರುಷೋತ್ತಮ ಬಿಳಿಮಲೆ ನನಗೆ ಕಳಿಸಿದ ಮೆಸೆಜ್. ಅಂತಹದ್ದೇ ಪ್ರತಿಕ್ರಿಯೆಗಳನ್ನು ಅನೇಕರು ತೋರಿದ್ದಾರೆ. ನಿಮ್ಮ ಪುಸ್ತಕ ಬಿಡುಗಡೆ ಆಗದಿರುವ ಮೂಲಕ " ಅಕ್ಷರ ಸಂಭ್ರಮಕ್ಕೆ ಅಡ್ಡಿಪಡಿಸುವವರ ಮನಸ್ಥಿತಿ ಎಂತಹದ್ದೆಂಬುದು "ಅರ್ಥವಾಗುತ್ತದೆ. ಕಲಬುರಗಿ, ಬೆಂಗಳೂರು, ಶಹಾಪುರ, ದಾವಣಗೆರೆಯಲ್ಲಿ ಪುಸ್ತಕ ಬಿಡುಗಡೆ ಮಾಡೋಣ. ಮಡಿವಾಳಪ್ಪನಿಗೇ ಕಲ್ಲು ಹೊರೆಸಿದವರು ನಿಮ್ಮ ಪ್ರಗತಿಪರ ವಿಚಾರಗಳನ್ನು ಸಹಿಸಿಕೊಳ್ಳುವುದುಂಟೇ ? ಸಂತರು, ಮಹಂತರು ಇರುವಲ್ಲಿ ರಕ್ಕಸರೂ ಇರುತ್ತಾರೆ.
ನಿಮ್ಮನ್ನು ಎಳೆದಾಡಿ, ಕೆಟ್ಟ ಕೆಟ್ಟ ಬೈಗುಳಗಳಿಂದ ನಿಂದಿಸುತ್ತಿರುವಾಗ ಪೋಲಿಸರೇನು ಮಾಡುತ್ತಿದ್ದರು.? ಕಾರ್ಯಕ್ರಮದ ಆಯೋಜಕರು, ಪುಸ್ತಕದ ಪ್ರಕಾಶಕರು ಸುಮ್ಮನಿದ್ದರೇಕೆ.? ನಿಮ್ಮ ಮೇಲಿನ ದೌರ್ಜನ್ಯ ಕಂಡು ಸುಮ್ಮನಿದ್ದವರು ಸಹಿತ ಅದರ ಪಾಲುದಾರರೆಂದೇ ಕರೆಯಬೇಕು. ಮಡಿವಾಳಪ್ಪನ ನೆಲದ ಬಗ್ಗೆ ಬರೆದುದನ್ನು ಮಡಿವಾಳಪ್ಪನ ದ್ವಿಶತಮಾನೋತ್ಸವ ಸಂದರ್ಭದಲ್ಲಿ ಅರ್ಥೈಸುವ ಸಹನೆ ಕಳಕೊಂಡ ಅವರಿಗೆ ಧಿಕ್ಕಾರವಿರಲಿ. ಘಟನೆ ಖಂಡನೀಯ. This is too much. Intolarence at it's peak. Is Hitlers days are coming.?
ನಿಮ್ಮ ಪುಸ್ತಕ ಬಿಡುಗಡೆಗೆ ಅಡ್ಡಿ ಪಡಿಸಿರುವುದು ಕೇವಲ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾತ್ರವಲ್ಲ, ಅಸಹಿಷ್ಣುತೆಯ ಪರಮಾವಧಿಗೆ ಹಿಡಿದ ಕನ್ನಡಿ. ಅದು ರಣಹೇಡಿಗಳ ಮೂರ್ಖತನದ ಮೇಲೋಗರ. ಇದು ನಿಮ್ಮ ಬರಹದ ಬಾಳಿನ ಪರೀಕ್ಷಾ ಸಮಯ. ಅಕ್ಷರ ಸಂಸ್ಕೃತಿ ಮೇಲಿನ ಕ್ರೂರ ಹಲ್ಲೆ. ಮಾನಸಿಕ ಆಘಾತದಿಂದ ಬೇಗ ಹೊರಬಂದು ಅಲ್ಲಿ ನಡೆದುದನ್ನು ನಾಡಿಗೆಲ್ಲ ತಿಳಿಸಿರಿ. ನಿಮ್ಮ ಮೇಲೆ ದೌರ್ಜನ್ಯ ಎಸಗಿದ ಸಣ್ಣಗುಂಪಿನ ಹಿನ್ನೆಲೆಯ ಕುತಂತ್ರಿಗಳು ಯಾರು.? ಅವರ ವಿರುದ್ದ ಧ್ವನಿ ಎತ್ತಲು ಪುಸ್ತಕ ಅಲ್ಲಿ ಬಿಡುಗಡೆ ಮಾಡದಿದ್ದರೇನಂತೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಬಿಡುಗಡೆ ಮಾಡೋಣ. ಅದಕ್ಕೆ ತಗಲುವ ಎಲ್ಲ ರೀತಿಯ ನೆರವು ನೀಡಲು ಸಿದ್ದರಿದ್ದೇವೆ.
ಹೀಗಂತ ಬಗೆ ಬಗೆಯಲಿ ಬೆಂಬಲಕ್ಕೆ ನಿಂತವರು ರಮೇಶ ಸುಳಿಕುಂಟೆ, ಬಿ. ಎಲ್. ವೇಣು, ಸನತ್ ಕುಮಾರ ಬೆಳಗಲಿ, ಮಹಾಂತೇಶ ನವಲಕಲ್, ಬರಗೂರು, ನಾ. ದಿವಾಕರ್, ರುದ್ರಪ್ಪ ಹನಗವಾಡಿ, ಕೆ. ಎಸ್. ಪ್ರಭಾಕರ, ಕೆ. ಶರೀಫಾ, ಜಯಕುಮಾರ್, ದೊಡ್ಡಿಪಾಳ್ಯ, ಪ್ರಸನ್ನ ರೇವನ್, ಎಲ್. ಎನ್. ಮುಕುಂದರಾಜ, ಭಕ್ತರಹಳ್ಳಿ, ಟಿ. ಎನ್. ಷಣ್ಮುಖ, ಗೋಪಾಲ ತ್ರಾಸಿ, ಚನ್ನಪ್ಪ ಕಟ್ಟಿ, ಸತ್ಯಂಪೇಟೆ ಸಹೋದರರು, ಪ್ರಭುರಾಜ ಅರಣಕಲ್, ಹಾದಿಮನಿ, ರಾಘವೇಂದ್ರ ಪಾಟೀಲ, ಸುಕನ್ಯಾ ಕಳಸ, ಚಿದಂಬರರಾವ್ ಜಂಬೆ, ಸೂರ್ಯಕಾಂತ ಪಾಟೀಲ, ಕಾಳೇಗೌಡ ನಾಗವಾರ, ಪ್ರೊ. ಹರಿಶಂಕರ್, ಜಿ. ಎನ್. ಉಪಾಧ್ಯ, ನಂದೀಶ ದಂಡೆ, ಪಲ್ಲವ ವೆಂಕಟೇಶ, ಮೀನಾ ಸದಾನಂದ, ಜಿ. ಎನ್. ಮೋಹನ್, ಲಿಂಗಾರೆಡ್ಡಿ ಶೇರಿ, ರಮೇಶ ದಾಸರ, ಸಿದ್ದರಾಜು, ಬಿ.ಸಿ. ಶೈಲಾ, ಮಂಜುಳ ಶಿವಮೊಗ್ಗ, ಅಕ್ಷತಾ ಹುಂಚದಕಟ್ಟೆ, ಗಜಾನನ ಮಹಾಲೆ, ಮನು ಪತ್ತಾರ, ಗುರು ಪಿ. ಎಸ್., ಸುನಿಲ್ ಮಾನ್ಪಡೆ, ಲಕ್ಷ್ಮಣ ಕೌಂಟೆ, ನಿಡಸಾಲೆ ಪುಟ್ಟಸ್ವಾಮಯ್ಯ, ಉಪ್ಪಿನ ಶಿವಕುಮಾರ್, ಅಮರಪ್ರಿಯ, ನಾ. ರೇವನ್, ಇಮ್ತಿಯಾಜ್ ಹುಸೇನ್, ಪಾಪುಗುರು, ರವೀಂದ್ರ ರೇಷ್ಮೆ, ನದಾಫ್, ಹಳೇಬೀಡು ಕೃಷ್ಣಮೂರ್ತಿ, ನಾಗರಾಜ ಬಡದಾಳ, ಟಿ. ನಾಗೇಂದ್ರ, ಮಲ್ಲಿಕಾರ್ಜುನ ಹುಲಗಬಾಳಿ, ರವಿಹಂಜ್ ಚಿಕಾಗೊ, ಬಿ. ಎನ್. ಮಲ್ಲೇಶ್, ಎಂ.ಟಿ. ಸುಭಾಷ್, ರೇಣುಕಾ ನಿಡಗುಂದಿ, ಮೀನಾಕ್ಷಿ ಬಾಳಿ, ಕೆ. ನೀಲಾ, ಶಿವರಾಜ ಪಾಟೀಲ, ಮಾಲತಿ ಭಟ್, ಎಚ್. ಎನ್. ಆರತಿ ಸೇರಿದಂತೆ ಅನೇಕರು( ಕ್ಷಮೆ ಇರಲಿ ಎಲ್ಲರ ಹೆಸರು ಬರೆಯಲಾಗಿಲ್ಲ) ನನಗೆ ಬರೆದು ಮತ್ತು ಫೋನ್ ಮೂಲಕ " ಧೃತಿಗೆಡಬೇಡಿ, ನಿಮ್ಮೊಂದಿಗಿದ್ದೇವೆಂದು " ಅಂತಃಕರಣ ತುಂಬಿ ಮಾತಾಡಿದ್ದಾರೆ.
ಅಷ್ಟು ಮಾತ್ರವಲ್ಲದೇ ನಾಡಿನಾದ್ಯಂತ ಪರಿಚಿತರಲ್ಲದ ಅನೇಕರು ಪ್ರೀತಿ, ಧೈರ್ಯದ ಹೊಳೆಯನ್ನೇ ನನ್ನೂರಿನ ಹಿರೇಹಳ್ಳದಂತೆ ಹರಿಸಿದ್ದಾರೆ. ಅವರೆಲ್ಲರ ಪ್ರೀತಿ, ಕಾಳಜಿ, ಕಕ್ಕುಲತೆಗಳ ಮಳೆಯಿಂದ ನಲವತ್ನಾಲ್ಕು ಡಿಗ್ರಿ ಬೆಂಕಿ ಬಿಸಿಲಲಿ ಬೆಂದ ಮನಕೆ ತಂಪಿನ ಸಾಂತ್ವನ ಸಿಕ್ಕಿದೆ. "ಕಡಕೋಳ ನೆಲದ ನೆನಪುಗಳು" ಬಿಡುಗಡೆ ಆಗಲೇಬೇಕೆಂದು ಎಲ್ಲರೂ ಹಂಬಲಿಸಿದ್ದಾರೆ. ಕಡಲಾಚೆಯ ಅಮೇರಿಕೆಯಿಂದಲೂ ಮೂವರು ಸಂಸ್ಕೃತಿ ಚಿಂತಕರು ಪುಸ್ತಕದ ಬಿಡುಗಡೆಯ ಬೆಂಬಲಕ್ಕೆ ಬಂದಿದ್ದಾರೆ.
ಕಡಕೋಳ ನೆಲದ ನೆನಪುಗಳು ಕುರಿತು ನೀವು ಬರೆಯದೇ ಇನ್ನಾರು ಬರೆದಾರು.? ನೀವು ಅದೇ ನೆಲದಲ್ಲಿ ಹುಟ್ಟಿದವರಾಗಿ ಆ ನೆಲದ ನಿಖರ ನಾಡಿಮಿಡಿತ ನಿಮಗಿದೆ. ತಪ್ಪು ಗ್ರಹಿಕೆಗಳಿದ್ದರೆ ಅದನ್ನು ಸ್ವಾಸ್ಥ್ಯ ಸಂವಾದದ ಮೂಲಕ ಸರಿಪಡಿಸಿಕೊಳ್ಳಲಿ. ಬಿಡುಗಡೆಗೆ ಅಡ್ಡಿ ಮಾಡಿದವರು ಅದಕ್ಕೆ ಸವಾಲಿನಂತೆ ಬೇಕಾದರೆ ಇನ್ನೊಂದು ಪುಸ್ತಕ ಬರೆಯಲಿ. ಈಗೀಗ ಹಳ್ಳಿಗಳು, ಅವುಗಳ ಮನಸ್ಥಿತಿಗಳು ಆರೋಗ್ಯಕರವಾಗಿ ಉಳಿದಿಲ್ಲ. ಅಲ್ಲೆಲ್ಲ ವಿಚಿತ್ರ ಮತ್ತು ಕೊಳಕು ರಾಜಕೀಯ. ಸೋಜಿಗವೆಂದರೆ ಸಾಂಸ್ಕೃತಿಕ ಮನಸುಳ್ಳ ಕೆಲವರದು ಅಸಹಾಯಕ ಪರಿಸ್ಥಿತಿ.
ನೆಲದ ಸಂಸ್ಕೃತಿ ಕುರಿತು ಬರೆಯುವ ನಿಮ್ಮಂಥವರನ್ನು ನಮ್ಮ ಹಳ್ಳಿಗಳು ಗುರುತಿಸಿ ಗೌರವಿಸಬೇಕು. ದುರಂತವೆಂದರೆ ನೆಲಧರ್ಮದ ನೆನಪುಗಳ ಪುಸ್ತಕ ಬಿಡುಗಡೆಗೇ ಘೋರ ಅಡ್ಡಿ. ಇದು ಖಂಡನೀಯ. ಪ್ರೀತಿಯ ಕಡಕೋಳರೇ ನೀವು ಹೆದರುವವರಲ್ಲ, ಅದನ್ನೆಲ್ಲ ದಾಟಿ ನಡೆವವರು. ನಿಮ್ಮ ಕೃತಿಯನ್ನು ಎಲ್ಲಿ ಬೇಕಾದರೂ ಬಿಡುಗಡೆ ಮಾಡಬಹುದು. ಆದರೆ ಮಾನವೀಯ ಸೆಲೆಯನ್ನು ಅಲ್ಲಲ್ಲಿನೇ ಕಾಣಿಸಬೇಕು. ಕಡಕೋಳ ನೆಲದ ನೆನಪುಗಳನ್ನು ಓದುವ ಕುತೂಹಲ, ದಯವಿಟ್ಟು ಪುಸ್ತಕ ಕಳಿಸಿರಿ. ಹೀಗೆ ಇದನ್ನು ಬರೆದು ಹಂಚಿ ಕೊಂಡವರು ಧಾರವಾಡದ ಡಾ. ಮುದೇನೂರು ನಿಂಗಪ್ಪ.
ಮೊನ್ನೆ ಎಪ್ರಿಲ್ ಇಪ್ಪತ್ಮೂರರಂದು ಕಡಕೋಳದಲ್ಲಿ ಮಡಿವಾಳಪ್ಪನವರ ದ್ವಿಶತಮಾನೋತ್ಸವ ಸಮಾರಂಭದ ಆರಂಭದ ದಿನ. ಬೃಹತ್ತಾದ ವೇದಿಕೆ ಮೇಲೆ ಅಂದು ಮುಂಜಾನೆ "ಕಡಕೋಳ ನೆಲದ ನೆನಪುಗಳು" ಪುಸ್ತಕದ ಕಟ್ಟು ಇನ್ನೇನು ಲೋಕಾರ್ಪಣೆಗೆ ಸಜ್ಜುಗೊಂಡಿತ್ತು. ಬಿಡುಗಡೆಗೆ ಮುರ್ನಾಲ್ಕು ದಿನ ಮುನ್ನವೇ ಮುನ್ನೂರಕ್ಕೂ ಹೆಚ್ಚು ಅದೇ ಪುಸ್ತಕಗಳು ಮಾರಾಟವಾಗಿವೆ. ಬಿಡುಗಡೆ ಮಾಡಲು ಕಲಬುರ್ಗಿಯಿಂದ ಅತಿಥಿಗಳು ಆಗಮಿಸಿದ್ದರು. ತತ್ವಪದಗಳ ಅನನ್ಯತೆಯ ಜೇನುಮಳೆ ಸುರಿಸಲು ಎದೆತುಂಬಿ ಹಾಡುವೆನು ಖ್ಯಾತಿಯ ಗಝಲ್ ಗಾಯಕ ಸೂರ್ಯಕಾಂತನ ತಂಡ ಬೆಂಗಳೂರಿಂದ ಬಂದಿತ್ತು. ಸೂರ್ಯಕಾಂತನ ತಂಡ ತೀವ್ರ ನೋವಿನಿಂದ ನಿರ್ಗಮಿಸಿತು. ಬಾಗಲಕೋಟ, ವಿಜಯಪುರ ಮುಂತಾದ ಊರುಗಳಿಂದ ಬಾಡಿಗೆ ವಾಹನಗಳಲ್ಲಿ ಬಂದಿದ್ದ ಅನೇಕ ಗೆಳೆಯರು ನಿರಾಸೆಯಿಂದ ಹೊರಟು ಹೋದರು.
ವೇದಿಕೆ ಮುಂದೆ ಸಹಸ್ರಾರು ಮಹಿಳೆಯರಿಗೆ ಉಡಿ ತುಂಬುವ ಸಡಗರ. ಮೈಕುಗಳಲ್ಲಿ ಜೋರಾಗಿ ಕೇಳಿ ಬರುವ ಹಾಡಿನ ಸಪ್ಪಳಗಳು. ವೇದಿಕೆಯ ಮೇಲೆ ಏನು ಜರುಗುತ್ತಿದೆಯೆಂದು ಯಾರಿಗೂ ಕೇಳಿಸದಂತಹ ಮೈಕಿನ ಅಬ್ಬರದ ಅವಾಜು. ನಾನು ಪುಸ್ತಕ ಬಿಡುಗಡೆ ಸಮಾರಂಭದ ನಿರೂಪಕರಿಗೆ ವಿವರಗಳನ್ನು ಒದಗಿಸಲು ವೇದಿಕೆ ಮೇಲೆ ಬಲಭಾಗದ ಕುರ್ಚಿಯಲ್ಲಿ ಕುಳಿತಿದ್ದೆ.
ಏಕಾಏಕಿ ಮುಗಿಲಿಂದ ಬರಸಿಡಿಲು ಬಂದೆರಗಿದಂತೆ ನಾನು ಕುಳಿತ ಕುರ್ಚಿಯ ಸುತ್ತಲೂ ಆರೇಳು ಮಂದಿಯ ಗುಂಪು ಸುತ್ತುವರೆದು ನನ್ನ ಮೇಲೆರಗಿದರು. ಅಕ್ಷರಗಳಲ್ಲಿ ಬರೆಯಲಾಗದ ಕೆಟ್ಟ ಕೆಟ್ಟ ಅಶ್ಲೀಲ ಮಾತುಗಳಲ್ಲಿ ಬೈಯ್ದು ನನ್ನ ಜಾತಿಯನ್ನು ನಿಂದಿಸುತ್ತಾ " ಪುಸ್ತಕ ಬಿಡುಗಡೆ ಮಾಡಲು ಬಿಡುವುದಿಲ್ಲ" ಎಂದು ಅಬ್ಬರಿಸ ತೊಡಗಿದರು. ಕುಡಿದ ನಿಶೆಯಲ್ಲಿದ್ದ ಕೆಲವರ ಅಶ್ಲೀಲ ಬೈಗುಳಗಳಿಗೆ ಪ್ರತಿಕ್ರಿಯೆ ತೋರಿದರೆ ಅವರು ಇನ್ನಷ್ಟು ಕ್ರುದ್ಧರಾಗಬಹುದೆಂದು ನಾನು ಮೂಕನಾಗಿ ಕುಂತೆ. ಅದನ್ನೇ ಅವರು ನನ್ನ ಸೋಲೆಂದು ಭಾವಿಸಿದರು. ಅವರೊಂದಿಗೆ ಮತ್ತೆ ಕೆಲವರು ಸೇರಿಕೊಂಡು 'ಹಿಡಿರಿ, ಹೊಡಿರಿ' ಎನ್ನುತ್ತಾ ನಿನ್ನನ್ನು, ನಿನ್ನ ಪುಸ್ತಕವನ್ನು ತುಳಿದು ಹಾಕ್ತೀವಿ. ಇಲ್ಲೇ ಬೆಂಕಿ ಹಚ್ಚಿ ಸುಡ್ತೀವಿ ಎಂದು ಒಂದೇಸಮನೆ ಎಗರೆಗರಿ ಮೈ ಮೇಲೆ ಎರಗ ತೊಡಗಿದರು.
ಪುಸ್ತಕದ ಯಾವ ಪುಟದ ಯಾವ ಸಾಲಲ್ಲಿ ನಿಮಗೆ ದೋಷ ಕಂಡಿದೆ ಅದನ್ನು ತೋರಿಸಿದರೆ ನಿಮಗೆ ಸಾಷ್ಟಾಂಗ ಹಾಕುವೆ ಎಂದು ನಾನು ಪ್ರತಿಕ್ರಿಯೆ ತೋರುತ್ತಿದ್ದಂತೆ "ಅದೆಲ್ಲ ಬೇಕಿಲ್ಲ; ಪುಸ್ತಕ ಬಿಡುಗಡೆ ಮಾಡಲು ಬಿಡಲ್ಲ" ಎಂದು ಹಿಂದುಗಡೆಯಿದ್ದ ಒಂದಿಬ್ಬರು ನನ್ನ ಕೊರಳ ಪಟ್ಟಿಗೆ ಕೈ ಹಾಕಿದರು. ಅವರ ಬಾಯಿಯಿಂದ ಕೊಳಕು ಬೈಗುಳಗಳ ಕೆಂಡದ ಮಳೆಯೇ ಸುರಿಯುತ್ತಿತ್ತು. ಅದ್ಯಾರೋ ಅಪರಿಚಿತರು "ಆಯ್ತು ಪುಸ್ತಕ ಬಿಡುಗಡೆ ಮಾಡಲ್ಲ ಅವರನ್ನು ಬಿಟ್ಟುಬಿಡ್ರಿ" ಅಂತ ಹೇಳಿದ್ದು ಕೇಳಿಸಿತು. ಅದ್ಯಾರು ನೀವು ಹೇಳೊದಕ್ಕೆ, ಮಠದ ಸ್ವಾಮೀಜಿ ಅದರ ಪ್ರಕಾಶಕರು. ಅವರು ಕಾರ್ಯಕ್ರಮ ಆಯೋಜಿಸಿದ್ದು ಅವರು ಹೇಳಲಿ ಅಂತ ನಾನು ಪ್ರತಿಕ್ರಿಯೆ ತೋರುತ್ತಿದ್ದಂತೆ ನನ್ನನ್ನು ನಾಕೈದು ಮಂದಿ ರಭಸವಾಗಿ ಎಳೆದು ವೇದಿಕೆಯಿಂದ ಕೆಳಗಿಳಿಸಿದರು.
ಅಸಹಾಯಕಳಾಗಿ ಕೆಳಗೆ ನಿಂತಿದ್ದ ನನ್ನ ಹೆಂಡತಿ ಅವರ ವಿರುದ್ಧ ಪ್ರತಿಭಟನೆ ತೋರಿದಳು. ಅವಳಿಗೂ ನಿಂದನೆಯ ಮಾತಾಡಿದರು. ಅವಳು ರೋದಿಸ ತೊಡಗಿದಳು. ಅಲ್ಲಿರುವುದು ಉಚಿತವಲ್ಲವೆಂದು ನಾವು ಉಳಿದುಕೊಂಡ ಮಠದ ಕಲ್ಯಾಣ ಮಂಟಪದ ಕಡೆಗೆ ಹೊರಟೆವು. ಮಠಾಧ್ಯಕ್ಷರಾದ ಡಾ. ರುದ್ರಮುನಿ ಶಿವಾಚಾರ್ಯ ಅವರ ಕಾರು ಎದುರಿಗೆ ಬಂತು. ಅವರು ನನ್ನನ್ನು ಕರೆದು ತಮ್ಮ ಕಾರಲ್ಲಿ ಕೂರಿಸಿಕೊಂಡು ಸಮಾಧಾನ ಪಡಿಸುತ್ತಾ ಪುನಃ ವೇದಿಕೆಗೆ ಕರೆದೊಯ್ದರು. ಆ ಗುಂಪು ಇನ್ನೂ ವೇದಿಕೆಯಲ್ಲೇ ಇತ್ತು. ಸ್ವಾಮೀಜಿ ಅವರ ಮನವಿಗೂ ಅವರು ಸೊಪ್ಪು ಹಾಕಲಿಲ್ಲ. ಯಾವುದೇ ಕಾರಣಕ್ಕು ಬೇಕಾದ್ದಾಗಲಿ ಪುಸ್ತಕ ಬಿಡುಗಡೆ ಮಾಡಲು ಬಿಡಲ್ಲ ಎಂದು ಮತ್ತೆ ನೀಚ ಬೈಗುಳಗಳ ಅಬ್ಬರ. ನಾನು ವೇದಿಕೆಯಲ್ಲಿ ಇರಕೂಡದೆಂದು ಕೂಗಾಟ.
ಕೆಲವು ಹಿರಿಯರು, ಮಠದ ಶ್ರೀಗಳು ಮನವಿ ಮಾಡಿಕೊಂಡರೂ ಬಿಡುಗಡೆಗೆ ಒಪ್ಪದೇ ದೌರ್ಜನ್ಯ ಧ್ವನಿಯ ಬೆದರಿಕೆ ಹಾಕಿ ನನ್ನನ್ನು ಪುನಃ ವೇದಿಕೆಯಿಂದ ಕೆಳಗಿಳಿಸಿದರು. ನಾನು ಅಸಹಾಯಕನಾಗಿ ನಲುಗುತ್ತಾ ಹೊರ ನಡೆದೆ. ನನ್ನ ಸಹಾಯಕ್ಕೆ ಬರುವವರನ್ನೂ ಆ ಗುಂಪು ಹೆದರಿಸುತ್ತಿತ್ತು. ಪುಸ್ತಕದ ದೋಷ ಕುರಿತು ಹೇಳಿ ಅಂತ ಕೇಳಿದರೆ ಅದೆಲ್ಲ ಗೊತ್ತಿಲ್ಲ ಪುಸ್ತಕ ಬಿಡುಗಡೆ ಮಾಡಲು ಬಿಡುವುದಿಲ್ಲ ಎನ್ನುತ್ತಾ ಮತ್ತೆ ಮತ್ತೆ ನನ್ನ ಮೇಲೆ ಕೊಳಕು ಬೈಗುಳಗಳ ಬೆಂಕಿಮಳೆ. ಮಡಿವಾಳಪ್ಪ ನಡೆದಾಡಿದ ನೆಲದಲ್ಲಿ ಹುಟ್ಟಿದ ನನಗೆ ಆ ನೆಲದ ನೆನಪುಗಳ ಪುಸ್ತಕ ಬಿಡುಗಡೆಗೆ ಉಂಟಾದ ಘೋರ ಅಡ್ಡಿಗಳನ್ನು ಹೇಗೆ ಜೀರ್ಣಿಸಿಕೊಳ್ಳಬೇಕೆಂದು ನನಗೀಗಲೂ ಗೊತ್ತಾಗುತ್ತಿಲ್ಲ.
ಪುಸ್ತಕ ಬಿಡುಗಡೆಗೆ ಆಗಮಿಸಿ ಮಠದೊಳಗಿದ್ದ ಅತಿಥಿಗಳ ಬಳಿಗೆ ಬಂದೆ. ಕಲಬುರ್ಗಿ ಕೇಂದ್ರೀಯ ವಿ. ವಿ. ಯ ಪ್ರೊ. ಬಸವರಾಜ ಕೋಡಗುಂಟಿ, ಗೌಡಪ್ಪ ಸಾಧುಗಳ ಕಾಲದ ಹಿರಿಯ ಸಾಹಿತಿ ಎ. ಕೆ. ರಾಮೇಶ್ವರ, ಹಿರಿಯ ಕತೆಗಾರ್ತಿ ಸಂಧ್ಯಾ ಹೊನಗುಂಟಿಕರ್ ಮತ್ತು ಪೋಷ್ಟ್ ಡಾಕ್ಟರಲ್ ಸಂಶೋಧನಾ ವಿದ್ಯಾರ್ಥಿ ಡಾ. ಸಂಗನಗೌಡ ಹಿರೇಗೌಡರ ಇವರನ್ನು ಕಂಡು ಕಾರ್ಯಕ್ರಮ ರದ್ದಾದ ವಿವರಗಳನ್ನು ಹೇಳುತ್ತಿದ್ದೆ. ಗ್ರಂಥ ದಾಸೋಹಿಗಳಾದ ರುದ್ರಗೌಡ ಪಾಟೀಲ ನನ್ನ ಜತೆಗಿದ್ದರು. ವೇದಿಕೆ ಮೇಲೆ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬ ಅತಿಥಿಗಳೊಂದಿಗೆ ನಾನು ಮಾತಾಡುತ್ತಿದ್ದ ಅಲ್ಲಿಗೂ ಬಂದು ಮತ್ತೆ ಜಗಳವಾಡ ತೊಡಗಿದ. " ಮಡಿವಾಳಪ್ಪನ ತಾಯಿ ಗಾಣಿಗರ ಗಂಗಮ್ಮ ಅಂತ ನೀನು ಬರ್ದಿದ್ದೀಯ ಅವಳು ನಮ್ಮ ಕಬ್ಬಲಿಗರ ಕುಲದವಳು, ನಿನ್ನನ್ನು ಸುಮ್ನೇ ಬಿಡಲ್ಲ. ನಿನಗೆ ಏನ್ ಮಾಡಬೇಕಂತ ನಮಗ ಗೊತ್ತದ " ಅಂತ ಒದರಾಡ ತೊಡಗಿದ. ಇದಿಷ್ಟು ಘಟನೆಯ ಸಂಕ್ಷೇಪ.
ಪತ್ರಿಕೆಗಳಲ್ಲಿ ಪ್ರಕಟಗೊಂಡ ಪುಸ್ತಕ ಬಿಡುಗಡೆಯಾಗದ ಸುದ್ದಿ ಓದಿ ನನಗೆ ಅನೇಕರು ಫೋನ್ ಮಾಡಿ ಏನಾದರೂ ಆಗಲಿ ಇನ್ನೂ ಎರಡು ದಿವಸಗಳ ಕಾರ್ಯಕ್ರಮದಲ್ಲಿ ಪುಸ್ತಕ ಲೋಕಾರ್ಪಣೆಯ ಅಪೇಕ್ಷೆ ತೋರಿದರು. ಆ ಕುರಿತು ನಮ್ಮ ಶಾಸಕ ಡಾ. ಅಜಯಸಿಂಗ್ ನನ್ನೊಂದಿಗೆ ಎರಡು ಬಾರಿ ಫೋನಲ್ಲಿ ಮಾತಾಡಿ ಪುಸ್ತಕ ಬಿಡುಗಡೆಗೆ ಪ್ರಯತ್ನಿಸುವೆ, ನೋಡೋಣ ಮುಂತಾಗಿ ಭರವಸೆ ರಾಜಕಾರಣದ ಮಾತಾಡಿದರು. ಎಲ್ಲಿ ತನ್ನ ಮತ ಪೆಟ್ಟಿಗೆಗೆ ಪೆಟ್ಟು ಬೀಳುವದೆಂಬ ಸಂದೇಹದ ಸ್ವರ ಅವರದಾಗಿತ್ತು. ಮೂರು ದಿನಗಳ ಕಾಲ ನೂರಾರು ಸ್ವಾಮೀಜಿಗಳ ಸಮಾವೇಶವೇ ಅದಾಗಿತ್ತು.
ಘಟನೆ ಜರುಗಿದ ದಿನದಂದು ಕಡಕೋಳ ಶ್ರೀಗಳೊಬ್ಬರು ಮಾತ್ರ ಪುಸ್ತಕ ಬಿಡುಗಡೆ ಆಗದಿರುವ ಕುರಿತು ಮಾತಾಡಿ " ಅದು ಮಲ್ಲಿಕಾರ್ಜುನ ಕಡಕೋಳ ಅವರಿಗೆ ಆದ ಅವಮಾನವಲ್ಲ, ಮಡಿವಾಳಪ್ಪನಿಗೆ ಮಾಡಿದ ಮತ್ತು ತಮಗೆ ಮಾಡಿದ ಅವಮಾನ " ಎಂದು ಆಕ್ರೋಶದಿಂದ ವಿಷಾದ ವ್ಯಕ್ತಪಡಿಸಿದರು. ಮೂರು ದಿನಗಳ ಕಾಲ ಜರುಗಿದ ರಿಲಿಜಿಯಸ್ ಹಿಪಾಕ್ರಸಿಯಲ್ಲಿ "ಮಡಿವಾಳಪ್ಪನ ನೆಲದ ನೆನಪುಗಳು" ಕುತ್ಸಿತ ಸಂಚಿಗೆ ಬಲಿಯಾದುದು ಮಾತ್ರ ನೇಪಥ್ಯದ ಸತ್ಯ.
ಮಡಿವಾಳಪ್ಪ ಮತ್ತು ಅವನ ತಾಯಿಯನ್ನು ಹೈಜಾಕ್ ಮಾಡುತ್ತಿರುವ ಸಂಕಟ. ಈ ಎಲ್ಲ ಸಂಕಟಗಳ ನಡುವೆ ದುರಿತ ನಿವಾರಕ ಸಂಗತಿಯೆಂದರೆ ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪುಸ್ತಕ ಬಿಡುಗಡೆಗೆ ಮುಂದಾಗಿದೆ. ಅದನ್ನು ಜಿಲ್ಲಾ ಕಸಾಪ ಅಧ್ಯಕ್ಷರಾದ ವಿಜಯಕುಮಾರ ತೇಗಲತಿಪ್ಪಿ ಅವರೇ ಖುದ್ದಾಗಿ ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಕಡಕೋಳ ನೆಲದ ನೆನಪುಗಳಿಗೆ ಬಿಡುಗಡೆಯ ಭಾಗ್ಯ ದೊರಕಲಿದೆ.
-ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.