"ಬಹುತೇಕ ಲೇಖನಗಳು ನನ್ನ ಶಾಲಾದಿನಗಳನ್ನು ನೆನಪಿಸಿತು; ಮುದ ನೀಡಿತು; ಆರ್ದ್ರಗೊಳಿಸಿತು. ಪುಸ್ತಕದ ಪ್ರತಿಯೊಂದು ಲೇಖನವೂ ಸಹ ಶಾಲೆ, ಮಕ್ಕಳು ಮತ್ತು ಶಿಕ್ಷಣದ ಹಲವು ಆಯಾಮಗಳನ್ನು ಪರಿಚಯಿಸುವ ಸರಳ ರೀತಿಗೆ ಎಲ್ಲರೂ ವಾಹ್ ಎನ್ನಲೇಬೇಕು. ಗ್ರಾಮ್ಯ ಪರಿಸರದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಒದಗಿಬರುವ ಸವಾಲುಗಳು ಮತ್ತು ಅದನ್ನು ನಿಭಾಯಿಸಿದ ಈ ಟೀಚರಮ್ಮನ ತಾಳ್ಮೆ ಮತ್ತು ಅಂತಃಕರಣಕ್ಕೆ ಶರಣು," ಎನ್ನುತ್ತಾರೆ ಮಂಜುನಾಥ್ ಕುಣಿಗಲ್. ಅವರು ಅನುಸೂಯ ಯತೀಶ್ ಅವರ ‘ಹಲೋ ಟೀಚರ್’ ಕೃತಿ ಕುರಿತು ಬರೆದ ವಿಮರ್ಶೆ.
ಪುಸ್ತಕ: ಹಲೋ ಟೀಚರ್
ಅವ್ವ ಪ್ರಕಾಶನ
ಪುಟ: 164 ಬೆಲೆ: 200ರೂ.
80-90ರ ದಶಕದಲ್ಲಿ ಸಣ್ಣದೊಂದು ಊರಿನ ಸರ್ಕಾರಿ ಶಾಲೆಗಳಲ್ಲಿ ಕಲಿತ ನನ್ನ ಬಾಲ್ಯ ಸಮೃದ್ಧವಾಗಿತ್ತು ಮತ್ತು ಅಷ್ಟೇ ವರ್ಣಮಯವಾಗಿತ್ತು. ಶಾಲೆಗಳಲ್ಲಿ ಪಾಠ ಹೇಳಿಕೊಟ್ಟ ಗುರುಗಳು ಇಂದಿಗೂ ನನಗೆ ಪೂಜ್ಯರು. ನನ್ನ ಪಾಲಿಗೆ ದೊರಕಿದ್ದು ಬಹುತೇಕ ಒಳ್ಳೆಯ ಶಿಕ್ಷಕ-ಶಿಕ್ಷಕಿಯರೇ. ಕೆಲವರಂತೂ ಶಾಲೆಯನ್ನು ಕಟ್ಟಿ, ಮಕ್ಕಳನ್ನು ಎಳೆದುತಂದು ಸೇರಿಸಿ, ಕಲಿಸಿ, ತಿದ್ದಿ-ತೀಡಿ ಸಮಾಜಕ್ಕೆ ಆದರ್ಶಪ್ರಾಯರಾದವರು. ಅಲ್ಲಲ್ಲಿ ಕೆಲವರು ಕೆಟ್ಟ ಶಿಕ್ಷಕರೂ ಇದ್ದರೆನ್ನಿ. ಅವರಿಂದ ಕಲಿತ ಒಂದಷ್ಟು ಮಕ್ಕಳ ಭವಿಷ್ಯವೇ ಹಾಳಾಯ್ತು. ಅದು ಬೇರೆಯದೇ ಕಥೆ! ಅಂದಿನ ಶಾಲೆ, ಶಿಕ್ಷಣ, ಗುರುಗಳ ಚಿತ್ರಣವನ್ನು ನನ್ನ ‘ಶಿವಾಜಿ ಟೆಂಟ್’ ಕಥಾಸಂಕಲನದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನೂ ಸಹ ಮಾಡಿದ್ದೇನೆ.
ಇದನ್ನೆಲ್ಲಾ ಇಲ್ಲಿ ಹೇಳಬೇಕಾಗಿ ಬಂದದ್ದು ಇತ್ತೀಚೆಗೆ ನಾನು ಓದಿದ ‘ಹಲೋ ಟೀಚರ್’ ಕೃತಿಯಿಂದಾಗಿ. ಅನುಸೂಯ ಯತೀಶ್ ಮೇಡಂ ವೃತ್ತಿಯಿಂದ ಶಾಲಾ ಶಿಕ್ಷಕಿ. ಪ್ರವೃತ್ತಿಯಿಂದ ಅತ್ಯುತ್ತಮ ವಿಮರ್ಶಕಿ, ಲೇಖಕಿ ಮತ್ತು ಅಗಾಧ ಓದಿನ ಪ್ರಾಜ್ಞೆ. ಶಿಕ್ಷಕಿಯೊಬ್ಬರ ಆತ್ಮದನಿ ಇವರ ‘ಹಲೋ ಟೀಚರ್’ ಕೃತಿಯಲ್ಲಿ ಸೊಗಸಾಗಿ ಮೂಡಿಬಂದಿದೆ ಎಂದರೆ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ. ತನ್ನ ಶಾಲಾ ದಿನಗಳಿಂದ ಶುರುವಾಗುವ ಲೇಖಕಿಯ ಅನುಭವವು, ಸಮಾಜದಲ್ಲಿ ಸಾಧಕ ಶಿಷ್ಯರನ್ನು ಒಡಮೂಡಿಸುವವರೆಗೆ ಸರಾಗವಾಗಿ ಹರಿದುಬಂದಿದೆ. ಹಾಗಾಗಿ ಇದೊಂದು ಸಾರ್ಥಕ ಕೃತಿ; ಸಾಧಕಿಯ ಕೃತಿ.
ಬಹುತೇಕ ಲೇಖನಗಳು ನನ್ನ ಶಾಲಾದಿನಗಳನ್ನು ನೆನಪಿಸಿತು; ಮುದ ನೀಡಿತು; ಆರ್ದ್ರಗೊಳಿಸಿತು. ಪುಸ್ತಕದ ಪ್ರತಿಯೊಂದು ಲೇಖನವೂ ಸಹ ಶಾಲೆ, ಮಕ್ಕಳು ಮತ್ತು ಶಿಕ್ಷಣದ ಹಲವು ಆಯಾಮಗಳನ್ನು ಪರಿಚಯಿಸುವ ಸರಳ ರೀತಿಗೆ ಎಲ್ಲರೂ ವಾಹ್ ಎನ್ನಲೇಬೇಕು. ಗ್ರಾಮ್ಯ ಪರಿಸರದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಒದಗಿಬರುವ ಸವಾಲುಗಳು ಮತ್ತು ಅದನ್ನು ನಿಭಾಯಿಸಿದ ಈ ಟೀಚರಮ್ಮನ ತಾಳ್ಮೆ ಮತ್ತು ಅಂತಃಕರಣಕ್ಕೆ ಶರಣು. ಪ್ರತಿಯೊಬ್ಬ ಮಕ್ಕಳ ಕಲಿಕೆ ಮತ್ತು ಗ್ರಹಿಕೆಯ ವೇಗ ವಿಭಿನ್ನ, ಅವರ ಮನೆಯ ಪರಿಸರ ವಿಭಿನ್ನ. ಇವರೆಲ್ಲರನ್ನೂ ಅವರವರ ಸ್ತರದಲ್ಲೇ ಅಚ್ಚುಕಟ್ಟಾಗಿ ನಿರ್ವಹಿಸುವ ಕೆಲಸ ಸವಾಲಿನದ್ದೇ. ಈ ಸವಾಲನ್ನು ನಮ್ಮ ಟೀಚರಮ್ಮ ಯಶಸ್ವಿಯಾಗಿ ಗೆದ್ದಿದ್ದಾರೆ ಎಂಬ ಷರಾ ಬರೆಯಬಹುದು.
ಈ ಪುಸ್ತಕದಲ್ಲಿ ಇಂದಿನ ನಗರದ ಮಕ್ಕಳು ಊಹಿಸಿಕೊಳ್ಳಲಾಗದ ಹಲವಾರು ಆಶ್ಚರ್ಯಗಳಿವೆ. ಸಾಕುಪ್ರಾಣಿಗಳನ್ನು ಮಕ್ಕಳು ತರಗತಿಗೆ ಕೊಂಡೊಯ್ಯುವ ಪ್ರಸಂಗ ಮತ್ತೆ ನನ್ನ ಬಾಲ್ಯವನ್ನು ನೆನಪಿಸಿಕೊಳ್ಳುವಂತೆ ಮಾಡಿತು. ‘ಪ್ರವಾಸವೆಂಬ ವಿಸ್ಮಯಲೋಕ’ ಎಂಬ ಲೇಖನದಲ್ಲಿ ಮಕ್ಕಳ ಮುಗ್ಧತೆ ಮತ್ತು ತಿಳಿ-ಅಜ್ಞಾನದಿಂದಾದ ಪ್ರಮಾದಗಳು ಮತ್ತು ಅದರಿಂದ ಹೆಚ್ಚು ಹಾನಿಯಾಗದಂತೆ ನೋಡಿಕೊಂಡ ಶಿಕ್ಷಕರ ಸಮಯಪ್ರಜ್ಞೆ ಕೂಡ ನನ್ನ ಶಾಲಾದಿನಗಳ ಪ್ರವಾಸವನ್ನು ನೆನಪಿಸಿತು. ಹಾಗೆಯೇ ಪ್ರತಿಯೊಂದು ಲೇಖನದಲ್ಲೂ ಸೆರೆಹಿಡಿದು ಕಟ್ಟಿಕೊಡಬಹುದಾದ ಒಂದಲ್ಲ ಒಂದು ಉತ್ತಮ ಉದಾಹರಣೆಗಳಿವೆ. ನೀವು ಕೃತಿಯನ್ನು ಓದಿಯೇ ತಿಳಿಯಬೇಕು, ಅನುಭವಿಸಬೇಕು.
ಶಿಕ್ಷಕ ವೃತ್ತಿಯ ಕಠಿಣ ಸವಾಲುಗಳ ಹಲವು ಆಯಾಮಗಳ ಸುಂದರ ಚಿತ್ರಣ ಇಲ್ಲಿ ಸಿಗುತ್ತದೆ. ಕೇವಲ ಮಕ್ಕಳಿಗೆ ಕಲಿಸುವುದಲ್ಲದೆ ಅವರ ಪೋಷಕರು ಮತ್ತು ಊರಿನ ಜನಕ್ಕೂ ಒಂದಲ್ಲ ಒಂದು ರೀತಿಯಲ್ಲಿ ವಿದ್ಯೆ ಕಲಿಸಬೇಕಾಗುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ ಎಂಬ ಸಂಗತಿ ತಿಳಿಯಲು ಈ ಪುಸ್ತಕವನ್ನು ಓದಬೇಕು. ಕಿಶೋರಿ ತರಬೇತಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಏನೇನನ್ನೋ ಕಲಿಸುತ್ತಿದ್ದಾರೆ ಎಂದು ಗಾಬರಿಗೊಂಡು ಶಾಲೆಗೆ ಬಂದ ಪೋಷಕರ ಅವ್ಯಕ್ತ ಭೀತಿಯನ್ನು ದೂರಮಾಡುವಲ್ಲಿ ಹೆಣಗುವ ಶಿಕ್ಷಕಿಯ ಪರಿಸ್ಥಿತಿ ಒಂದು ಉತ್ತಮ ಉದಾಹರಣೆ.
ಮಕ್ಕಳು, ಪೋಷಕರು, ಸಹಶಿಕ್ಷಕರು, ಶಾಲೆಯ ಆಡಳಿತ, ಊರು, ಊರಿನ ಆಡಳಿತ, ತನ್ನ ಬದುಕು ಮತ್ತು ಇವೆಲ್ಲದರೊಟ್ಟಿಗೆ ಸೇರಿಕೊಂಡ ಅವ್ಯಕ್ತ ಸಮಸ್ಯೆಗಳ ಗಂಟನ್ನೆಲ್ಲ ಸಮನ್ವಯ ಭಾವದಿಂದ ಸಂಭಾಳಿಸಿಕೊಂಡು ಹೋಗುವ ಶಿಕ್ಷಕಿಯ ಬದುಕು ಈಗಿನ ಎಲ್ಲಾ ಶಿಕ್ಷಕರಿಗೂ ಆದರ್ಶವಾಗಿ ನಿಲ್ಲುತ್ತದೆ. ಪ್ರತಿ ಶಾಲೆಗೂ, ಶಿಕ್ಷಕರಿಗೂ ಮತ್ತು ಪೋಷಕರಿಗೂ ಈ ಪುಸ್ತಕ ತಲುಪಲಿ; ಇಂದಿನ ಮತ್ತು ಮುಂದಿನ ಶಿಕ್ಷಕರಿಗೆ ಇದೊಂದು ಕೈಪಿಡಿಯಾಗಲಿ ಎಂಬ ಆಶಯ ನನ್ನದು. ನಮಗೆ ಸಿಕ್ಕ ಆ ಕೆಟ್ಟ ಶಿಕ್ಷಕರೊಬ್ಬರಿಗೆ ಈ ಪುಸ್ತಕ ಸಿಕ್ಕಿದ್ದಿದ್ದರೆ ಒಂದಿಡೀ ತಲೆಮಾರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿರಲಿಲ್ಲವೇನೋ!
"ಒಂದು ನಾಟಕೀಯ ಲಾಜಿಕ್, ಅದರಲ್ಲಿ ಯಾವುದೇ “ಗ್ರೇ ಏರಿಯಾಗಳಿಗೆ ಅವಕಾಶ ಇಲ್ಲದಂತೆ” 0 ಮತ್ತು 1ಗಳು (...
"ಪ್ರವಾಸ ಕಥನವನ್ನು ಓದುವ ಮೊದಲು ಲೇಖಕರ ಮಾತನ್ನು ಅಷ್ಟಾಗಿ ಗಮನಿಸದೆ ನೇರವಾಗಿ ವಿಷಯಕ್ಕೇ ಹೋಗಿದ್ದೆ. ಬರವಣಿಗೆಯಲ್...
"ಇತಿಹಾಸದಲ್ಲಿ ದಾಖಲಾಗುವ ಈ ಶತಮಾನದ ಮಹಾ ತಲ್ಲಣಗಳಲ್ಲಿ ಒಂದಾದ ಕರೋನಾ ಮಹಾಮಾರಿಯನ್ನು ಒಬ್ಬ ಗುತ್ತಿಗೆ ವೈದ್ಯನ ಪರ...
©2025 Book Brahma Private Limited.