ಬಾಶೆ ಅರಿವ ಹರವು

Date: 17-03-2022

Location: ಬೆಂಗಳೂರು


ಲೇಖಕ, ಭಾಷಾ ವಿಶ್ಲೇಷಣಾಕಾರ ಡಾ.ಬಸವರಾಜ ಕೋಡಗುಂಟಿ ಅವರ ಹೊಸ ಅಂಕಣ ‘ತೊಡೆಯಬಾರದ ಲಿಪಿಯ ಬರೆಯಬಾರದು’. ಬುಕ್ ಬ್ರಹ್ಮಕ್ಕಾಗಿ ಬರೆಯುತ್ತಿರುವ ಈ ವಿಶೇಷ ಅಂಕಣದ ಮೂಲಕ ಭಾಷೆ ಕುರಿತಾದ ಹಲವು ಆಯಾಮಗಳನ್ನು ಅರಿತುಕೊಳ್ಳುವುದಕ್ಕೆ ಸಹಾಯಕವಾಗುವಂತಹ ಬರಹಗಳನ್ನು ನಿಮ್ಮ ಮುಂದಿಡಲಿದ್ದಾರೆ. ಅಂಕಣದ ಮೊದಲ ಭಾಗವಾಗಿ ‘ಬಾಶೆ ಅರಿವ ಹರವು’ ಲೇಖನ ನಿಮ್ಮ ಓದಿಗಾಗಿ

ಬಾಶೆ ಮನುಶ್ಯ ಮಾನಸಿಕತೆಯ ಮತ್ತು ಮನುಶ್ಯ ಸಮಾಜದ ಬಾಗವಾಗಿ ಇರುವಂತದ್ದು, ಅವುಗಳು ಬಾಶೆಯ ರಚನೆಯೊಂದಿಗೆ ಹತ್ತಿರದ ನಂಟನ್ನು ಹೊಂದಿವೆ. ಬಾಶೆಯ ಬಗೆಗೆ ತಿಳಿದುಕೊಳ್ಳುವುದು ಎಂದರೆ ಬದುಕಿನ ಮತ್ತು ಸಮಾಜದ ಎಲ್ಲ ಆಯಾಮಗಳ ಅನ್ವೇಶಣೆಯೆ ಸರಿ. ಒಂದು ಬಾಶೆಯ ತುಣುಕನ್ನು ತೆಗೆದುಕೊಂಡಾಗ ಅದು ಒಟ್ಟೊಟ್ಟಿಗೆ ಮನುಶ್ಯರ ಮಾನಸಿಕತೆಯನ್ನೂ, ಸಾಮಾಜಿಕತೆಯನ್ನೂ, ಪರಿಸರವನ್ನೂ ಅದರೊಟ್ಟಿಗೆ ತಾತ್ವಿಕತೆಯನ್ನೂ ಕನ್ನಡಿಸುತ್ತಿರುತ್ತದೆ.

ಬಾಶೆ ಕುರಿತು ಹಲವು ಆಯಾಮಗಳನ್ನು ಅರಿತುಕೊಳ್ಳುವುದಕ್ಕೆ ಸಹಾಯಕವಾಗುವಂತ ಬರಹಗಳನ್ನು ಈ ಅಂಕಣದಲ್ಲಿ ಬರೆಯಲಾಗುವುದು. ಮೊದಲಿಗೆ ಇಲ್ಲಿ ಬಾಶೆ ಮತ್ತು ಇನ್ನಿತರ ಕೆಲವು ಸಂಬಂದಿತ ಪದಗಳನ್ನು ತುಸುವಾಗಿ ಪರಿಚಯಿಸಿಕೊಳ್ಳಬಹುದು. ಬಾಶೆ ಎಂದರೇನು ಎಂಬುದು ತುಸು ಗೊಂದಲದ ವಿಚಾರ. ಬಾಶಾವಿಗ್ನಾನದಲ್ಲಿ ನಿರ್‍ದಿಶ್ಟವಾದ ರೀತಿಯಲ್ಲಿ ಮುಕದ ಕೆಲವು ಅಂಗಗಳಿಂದ ಉಚ್ಚರಿಸುವ ದ್ವನಿಗಳನ್ನು ನಿಯತ ಅನುಕ್ರಮದಲ್ಲಿ ಹೊಂದಿಸಿ ಪದ, ವಾಕ್ಯ ಮೊದಲಾದ ಗಟಕಗಳನ್ನು ತಯಾರಿಸಿ, ಅದಕ್ಕೆ ಸಮಾಜದಿಂದ ಅರ‍್ತವನ್ನು ಆರೋಪಿಸಿ ಬದುಕಿನ, ಸಮಾಜದ ವ್ಯವಹಾರಗಳಿಗೆ ಬಳಸುವಂತದ್ದು ಬಾಶೆ ಎಂದು ಹೇಳಲಾಗುತ್ತದೆ. ಆದರೆ, ಬಾಶೆಗೆ ಇರುವ ವಿವಿದ ಆಯಾಮಗಳಿಂದಾಗಿ ಇದನ್ನು ಸರಳವಾಗಿ ಅರ‍್ತ ಮಾಡಿಕೊಳ್ಳಲು ಆಗುವುದಿಲ್ಲ.

ಬಾಶೆಯನ್ನು, ಬಾಶೆಯ ಬಗೆಗೆ ತಿಳಿದುಕೊಳ್ಳಲು ಬಾಶೆಗೆ ಸಂಬಂದಿಸಿದ ಕೆಲವು ಪರಿಕಲ್ಪನೆಗಳನ್ನು ಅರಿತುಕೊಳ್ಳುವುದು ಅವಶ್ಯ. ವ್ಯಕ್ತಿಯೊಬ್ಬರು ಬಾಶೆಯನ್ನು ಬಳಸುವುದು ಎಂದರೆ ಅದು ವ್ಯಕ್ತಿಯೊಬ್ಬರ ಬಾಶೆ. ಒಂದು ಬಾಶೆಯನ್ನು ಮಾತಾಡುವ ಕೋಟ್ಯಂತರ ಮಂದಿ ಇರುವರಾದರೂ ಯಾವ ಇಬ್ಬರೂ ಒಂದೆ ರೀತಿಯ ಬಾಶೆಯನ್ನು ಬಳಸಲು ಸಾದ್ಯವಿರದು. ದ್ವನಿಚಹರೆಯಲ್ಲಿ, ಪದ-ವಾಕ್ಯ ರಚನೆಯಲ್ಲಿ, ಅರ‍್ತರಚನೆಯಲ್ಲಿ, ರೀತಿ-ಶಯ್ಲಿಯಲ್ಲಿ ಹೀಗೆ ಎಲ್ಲ ಹಂತಗಳಲ್ಲಿಯೂ ಒಬ್ಬರು ಉಳಿದೆಲ್ಲರಿಗಿಂತ ಬಿನ್ನವಾಗಿರುತ್ತಾರೆ. ಇದನ್ನು ನಾವು ನಮ್ಮ ಬದುಕಿನಲ್ಲಿಯೂ ಗಮನಿಸಲು ಸಾದ್ಯ. ಇದನ್ನು, ಅಂದರೆ ವ್ಯಕ್ತಿಯೊಬ್ಬ ಬಳಸುವ ಬಾಶೆಯನ್ನು ವ್ಯಕ್ತಿಬಾಶೆ ಎಂದೆ ಕರೆಯಲಾಗುವುದು. ದಿನವೂ ನಿಕಟ ಸಂಪರ್‍ಕದಲ್ಲಿ ಇರುವ, ಮತ್ತೆ ಮತ್ತೆ ಎದುರಾಗುವ ವ್ಯಕ್ತಿಗಳ ಒಂದು ಗುಂಪು ಹೆಚ್ಚಾಗಿ ಬಾಶೆಯ ಹೆಚ್ಚಿನ ಸಮಾನ ಅಂಶಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಇಂತಾ ಗುಂಪನ್ನು ಒಂದು ಪ್ರಬೇದ ಬಾಶೆ ಎನ್ನಲಾಗುವುದು. ಈ ಗುಂಪಿನಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯ ಬಾಶೆಯೂ ವ್ಯಕ್ತಿ ನೆಲೆಯಲ್ಲಿ ಬಿನ್ನವೆ ಆದರೂ ಆ ಬಿನ್ನತೆ ರಾಚನಿಕ ನೆಲೆಯಲ್ಲಿ ಸಹಜವಾಗಿ ಗುರುತಿಸಲು ಆಗುವುದಿಲ್ಲ. ಇಂತಾ ಕೆಲವು ಪ್ರಬೇದಗಳ ಒಂದು ಗುಂಪನ್ನು ಒಳನುಡಿ ಎಂದು ಕರೆಯಬಹುದು. ಉಚ್ಚರಣೆ ಮೊದಲಾಗಿ ಬಾಶೆಯ ಕೆಲವು ಹಂತಗಳಲ್ಲಿ ಈ ಪ್ರಬೇದಗಳ ನಡುವೆ ಗುರುತಿಸಬಹುದಾದ, ಆದರೆ ಪರಸ್ಪರ ಅರ‍್ತ ಮಾಡಿಕೊಳ್ಳುವುದಕ್ಕೆ ಸಮಸ್ಯೆ ಆಗಲಾರದಂತ ಸಣ್ಣಪುಟ್ಟ ವ್ಯತ್ಯಾಸಗಳು ಇರುತ್ತವೆ. ಇಂತ ಹಲವು ಒಳನುಡಿಗಳು ಸೇರಿ ಒಂದು ಬಾಶೆ ಆಗುತ್ತದೆ. ಪರಸ್ಪರ ಒಳನುಡಿಗಳ ನಡುವೆ ಗುರುತಿಸಬಹುದಾದ ವ್ಯತ್ಯಾಸಗಳು ಇರುತ್ತವೆ. ಇವು, ಹಲವು ಬಾರಿ ಪರಸ್ಪರ ಅರ‍್ತ ಮಾಡಿಕೊಳ್ಳುವುದಕ್ಕೆ ಆಗದಂತ ವ್ಯತ್ಯಾಸಗಳೂ ಆಗಿರುತ್ತವೆ. ಕೆಲವೊಮ್ಮೆ ರಾಚನಿಕ ವ್ಯತ್ಯಾಸಗಳೂ ಆಗಿರಬಹುದು. ಈ ಎಲ್ಲ ವ್ಯತ್ಯಾಸಗಳ ಆಚೆಗೂ ಸ್ವಲ್ಪ ಪ್ರಯತ್ನ ಮಾಡಿದರೆ ಪರಸ್ಪರ ಬಗೆಗಳನ್ನು ಅರ‍್ತ ಮಾಡಿಕೊಳ್ಳಲು ಸಾದ್ಯವಾಗುತ್ತಿರುತ್ತದೆ. ಇನ್ನೂ ಮುಂದುವರೆದು ಬಾಶೆ ಎಂಬ ಹಲವು ಗುಂಪುಗಳನ್ನು ಒಂದು ಬಾಶಾ ಮನೆತನ ಎಂದು ಗುರುತಿಸಲಾಗುತ್ತದೆ. ಇದರಲ್ಲಿ ಸೇರಿರುವ ಬಿನ್ನ ಬಾಶೆಗಳು ಪರಸ್ಪರ ಅರ‍್ತವಾಗುವ ತೀರಾ ಕಡಿಮೆ ಸಾದ್ಯತೆಯನ್ನು ಹೊಂದಿರುತ್ತವೆ. ರಾಚನಿಕವಾಗಿಯೂ ಅವು ಬಿನ್ನತೆಯನ್ನು ತೋರಿಸಬಹುದು. ಆದರೆ, ಆಳಹಂತದ ರಾಚನಿಕ ಸಾಮ್ಯತೆಯನ್ನು ಅವು ಹೊಂದಿರಬಹುದು. ಮೂಲಬೂತವಾದ ಸಮಾನತೆಯನ್ನು ಹೊಂದಿದ್ದು, ಇಂದು ಕಾಣುವ ವ್ಯತ್ಯಾಸಗಳನ್ನು ಇತಿಹಾಸಿಕವಾಗಿ ಬೆಳೆದಿವೆ ಎಂದು ತೋರಿಸಲು ಸಾದ್ಯವಿರುವಂತವಾಗಿರುತ್ತವೆ. ಆದರೆ, ಒಳನುಡಿಗಳು, ಬಾಶೆಗಳು ಎಂದು ಗುಂಪಿಸಲು ಅವುಗಳ ನಡುವೆ ಬಿನ್ನತೆಗಳು ಎಶ್ಟುಮಟ್ಟಿಗೆ ಇರಬೇಕು ಎಂಬ ಸೂಕ್ತ ತಿಳುವಳಿಕೆ ಜಗತ್ತಿನಲ್ಲಿ ಇಲ್ಲ.

ಎಶ್ಟೊ ಬಾರಿ ಬಿನ್ನ ಬಾಶೆಗಳೆಂದು ಪರಿಗಣಿಸಿದವುಗಳ ನಡುವೆ ಅರ‍್ತವಾಗುವ ಸಾಮರ‍್ತ್ಯ ಇರುತ್ತದೆ, ಕೆಲವೊಮ್ಮೆ ಒಂದೆ ಬಾಶೆ ಎಂದು ಪರಿಗಣಿಸಿರುವವುಗಳಲ್ಲಿ ಅರ‍್ತವಾಗುವ ಸಾಮರ‍್ತ್ಯ ಕಡಿಮೆ ಇರುತ್ತದೆ. ಬೀದರ ಕನ್ನಡ, ಚಾಮರಾಜನಗರ ಕನ್ನಡ, ಮತ್ತು ನೀಲಗಿರಿ ಕನ್ನಡ (ಬಡಗ) ಇವುಗಳನ್ನು ಈ ಎರಡೂ ನೆಲೆಯಲ್ಲಿ ಅವಲೋಕಿಸಿದಾಗ ಇವುಗಳ ನಡುವೆ ರಾಚನಿಕವಾಗಿ ಪರಿಗಣಿಸುವಶ್ಟು ಬಿನ್ನವೂ, ಪರಸ್ಪರ ಅರ‍್ತವಾಗುವಿಕೆ ಸಾದ್ಯತೆ ಕಡಿಮೆಯೂ ಇವೆ. ಆದರೆ, ಬಡಗವನ್ನು ಹಲವರು ಸ್ವತಂತ್ರ ಬಾಶೆ ಎನ್ನುತ್ತಾರೆ, ಆದರೆ ಬೀದರ ಕನ್ನಡ ಮತ್ತು ಚಾಮರಾಜನಗರ ಕನ್ನಡ ಇವುಗಳನ್ನು ಕನ್ನಡ ಎಂಬ ಒಂದು ಬಾಶೆ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಯಾವ ಯಾವ ಒಳನುಡಿಗಳನ್ನು ಒಂದು ಬಾಶೆ ಎನ್ನಲಾಗುತ್ತದೆ ಎಂಬುದು ಬಾಶಿಕ ವಿಚಾರಕ್ಕಿಂತ ಹೆಚ್ಚು ಸಮಾಜೊ-ರಾಜಕೀಯವಾಗಿರುತ್ತದೆ.

ಅದ್ಯಯನದ ಅನುಕೂಲಕ್ಕೆಂದು, ಇಲ್ಲವೆ ಇನ್ನಾವುದೊ ಕಾರಣಕ್ಕೆ ಬೆಳೆದು ಇಂದು ಸಹಜವಾಗಿ ಬಳಕೆಯಲ್ಲಿರುವ ಕೆಲವು ಪಾರಿಬಾಶಿಕ ಪದಗಳು ಬಾಶೆಯನ್ನು ಅರಿತುಕೊಳ್ಳುವುದಕ್ಕೆ ಮತ್ತು ಬಾಶೆಯ ಬಗೆಗೆ ತಿಳಿದುಕೊಳ್ಳುವುದಕ್ಕೆ ಅವಶ್ಯವಾಗುತ್ತವೆ. ಅಂತಾ ಕೆಲವು ಪದಗಳನ್ನು ಇಲ್ಲಿ ತುಸು ಪರಿಚಯಿಸಿಕೊಳ್ಳಬಹುದು.

ವ್ಯಕ್ತಿಯ ವಯಕ್ತಿಕ ನೆಲೆಯಲ್ಲಿ ಸಾರರೂಪಿಯಾಗಿರುವ, ವ್ಯಕ್ತಿಯೊಬ್ಬರ ಸಾಮರ‍್ತ್ಯವನ್ನು ಪ್ರತಿನಿದಿಸುವಂತದ್ದಕ್ಕೆ ಮಾತು (ಲಾಂಗ್) ಎಂದೂ ಹಲವು ವ್ಯಕ್ತಿಗಳ ಸಾಮರ‍್ತ್ಯದ ಮೊತ್ತವಾದ ಮತ್ತು ಒಟ್ಟು ಸಾಮಾಜಿಕವೆನಿಸಿಕೊಳ್ಳುವ ಹಂತವನ್ನು ಬಾಶೆ (ಪೆರೋಲ್) ಎಂದೂ ಕರೆಯಬಹುದು. ಬಾಶೆಯಲ್ಲಿ ಸಾದ್ಯವಿರುವ ಎಲ್ಲ ರಚನೆಗಳು ಎಲ್ಲ ವ್ಯಕ್ತಿಗಳಿಗೆ ಸಾದ್ಯವಾಗುವುದಿಲ್ಲವಾದರೂ ವ್ಯಕ್ತಿಗಳು ಅವುಗಳನ್ನು ಅರ‍್ತ ಮಾಡಿಕೊಳ್ಳುವ ಸಾದ್ಯತೆಯನ್ನು ಹೊಂದಿರುತ್ತವೆ. ತಾಯ್ಮಾತು ಎನ್ನುವ ಪದ ಸಹಜವಾಗಿ ಬಳಕೆಯಲ್ಲಿದೆ. ಇದು ಹೆಚ್ಚು ಬಾವುಕವಾಗಿ, ಅಲ್ಲದೆ ಸರಕಾರದ ದಾಕಲೆಗಳಲ್ಲಿಯೂ ಬಳಕೆಯಾಗುತ್ತದೆ. ಮಗು ಬಾಲ್ಯದಲ್ಲಿ ಕಲಿಯುವ, ಹೆಚ್ಚು ಪಳಗಿರುವ, ಬದುಕಿನಲ್ಲಿ ಹೆಚ್ಚು ಬಳಸುವ ಬಾಶೆಯನ್ನು ವ್ಯಕ್ತಿಯೊಬ್ಬರ ತಾಯ್ಮಾತು ಎಂದು ಕರೆಯಬಹುದು ಎಂದು ಅಂದಾಜಾಗಿ ವಿಶ್ವಸಂಸ್ತೆ ಕರೆಯುತ್ತದೆ. ಇವುಗಳ ಜೊತೆಗೆ ಮೊದಲ ಬಾಶೆ, ಎರಡನೆ ಬಾಶೆ ಮೊದಲಾದ ಗುಂಪಿಕೆಯೂ ಇದೆ. ವ್ಯಕ್ತಿ ಬಾಲ್ಯದಲ್ಲಿ ಕಲಿಯುವ, ಹೆಚ್ಚು ಪಳಗಿರುವ ಬಾಶೆ(ಗಳು) ಮೊದಲ ಬಾಶೆ ಆದರೆ, ಆನಂತರ ಕಲಿಯುವ, ಸೀಮಿತ ವಲಯದಲ್ಲಿ ಬಳಸುವಂತವು ಎರಡನೆ ಬಾಶೆ. ತಾಯ್ಮಾತು ಅಲ್ಲದಿರುವುದನ್ನು ಪೆರಮಾತು ಎನ್ನಲಾಗುವುದು. ಪರಸ್ಪರರ ಬಾಶೆಗಳು ಬಿನ್ನವಾಗಿರುವ ಇಬ್ಬರು ಸಂಪರ್‍ಕಕ್ಕೆ ಬಳಸುವ ಬಾಶೆ ಸಂಪರ್‍ಕ ಬಾಶೆ. ಆಡಳಿತ ಬಾಶೆ, ವಿದೇಶಿ ಬಾಶೆ ಎಂಬುದು, ಪ್ರದಾನ ಬಾಶೆ, ಸಣ್ಣ ಬಾಶೆ, ಬುಡಕಟ್ಟು ಬಾಶೆ, ಅಳಿವಿನಂಚಿನ ಬಾಶೆ ಇವೂ ಇವೆ. ಇವುಗಳ ಜೊತೆಗೆ ಕ್ಲಾಸಿಕಲ್ ಬಾಶೆ, ಸತ್ತ ಬಾಶೆ, ಕ್ರುತಕ ಬಾಶೆ, ಸಂಕೇತ ಬಾಶೆ, ಆಡು ಬಾಶೆ, ಬರಹದ ಬಾಶೆ, ಶಿಶ್ಟ ಬಾಶೆ ಹೀಗೆ ಹಲವು ಇವೆ. ಒಂದೆ ಬಾಶೆಯು ವಯಕ್ತಿಕ ಹಂತದಂತೆ ಪ್ರಾದೇಶಿಕ, ಸಾಮಾಜಿಕ, ವಲಯ ಹಂತದಲ್ಲಿ ಬಿನ್ನವಾಗುತ್ತದೆ. ಬಾರತದಲ್ಲಿ ಸಾಮಾಜಿಕ ಎಂದರೆ ಹೆಚ್ಚಾಗಿ ಜಾತಿ. ಜಾತಿಗಳ ನಡುವೆ ಬಾಶೆ ಬಿನ್ನವಾಗುತ್ತದೆ. ಬಾಶೆಯನ್ನು ಬರಹದ ರೂಪಕ್ಕೆ ಇಳಿಸುವುದು ಲಿಪಿ.

ಬಾಶೆಯು ಮಾನಸಿಕವೂ ಸಾಮಾಜಿಕವೂ ಒಟ್ಟೊಟ್ಟಿಗೆ ಆಗಿರುವುದರಿಂದ ಸಮಾಜದ ಎಲ್ಲ ಆಯಾಮಗಳನ್ನು ಅದು ಒಳಗೊಂಡಿರುತ್ತದೆ. ಬಾಶೆಯ ಮೂಲಕ ಸಮಾಜವನ್ನು, ಇತಿಹಾಸವನ್ನು ಅರಿತುಕೊಳ್ಳುವ ಪ್ರಯತ್ನಗಳು ಅರಿವಿನ ವಿಸ್ತರಣೆಯನ್ನು ಮಾಡುತ್ತವೆ. ಒಂದು ಸಮಾಜವನ್ನು, ಇತಿಹಾಸವನ್ನು ಹೆಚ್ಚು ಹತ್ತಿರದಿಂದ ಅರಿಯುವುದಕ್ಕೆ ಇದು ಹೆಚ್ಚು ಸಹಾಯಕ.

MORE NEWS

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...

ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ

14-11-2024 ಬೆಂಗಳೂರು

"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...