Date: 12-12-2022
Location: ಬೆಂಗಳೂರು
''ಮಡಿವಾಳಪ್ಪನ ತತ್ವಪದಗಳನ್ನು ಅವರು ಭಾವಪೂರ್ವಕವಾಗಿ ಹಾಡುತ್ತಿರುವುದನ್ನು ನೋಡಿದ ಅನೇಕ ಹಿರಿಯರು ಈಗಲೂ ನಮ್ಮ ಕಡಕೋಳದಲ್ಲಿ ಇದ್ದಾರೆ. ಎಂಬತ್ತೈದರ ಏರುಪ್ರಾಯದ ಮತ್ತು ತತ್ವಪದಗಳ ಸೊಗಸಾದ ಗಾಯಕರೇ ಆಗಿರುವ ನಮ್ಮ ಕಡಕೋಳದವರೇ ಆದ ಮುದ್ದಾ ಭೀಮರಾಯ ತಾನು ಕಂಡ ಗೌಡಪ್ಪ ಸಾಧು ಕುರಿತು ಹೇಳುವುದು ಹೀಗೆ'' ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ, 'ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು' ಕುರಿತು ಬರೆದಿದ್ದಾರೆ.
ಅಣಜಿಗಿ ಗೌಡಪ್ಪ ಸಾಧು.
ಈ ಹೆಸರು ಕಡಕೋಳ ಮಡಿವಾಳಪ್ಪನವರ ಚಾರಿತ್ರಿಕ ಬದುಕು ಮತ್ತು ಸಾಧನೆಗಳನ್ನು ಪರಿಚಯಿಸುವ ಸಂದರ್ಭದಲ್ಲಿ ಅತ್ಯಂತ ಮಹತ್ವದ ಹೆಸರು. ಹೇಗೆಂದರೆ ಬಸವಣ್ಣ ಮತ್ತು ಇತರೆ ವಚನಕಾರರ ವಚನ ಸಾಹಿತ್ಯ
ಸಂಶೋಧನೆಯ ಸಂದರ್ಭದಲ್ಲಿ ವಚನ ಪಿತಾಮಹ ಫ. ಗು. ಹಳಕಟ್ಟಿ ಹೇಗೆ ಮುಖ್ಯವಾಗುತ್ತಾರೋ ಹಾಗೆಯೇ ಕಡಕೋಳ ಮಡಿವಾಳಪ್ಪನ ತತ್ವಪದಗಳನ್ನು ಸಾರೋದ್ದಾತ್ತವಾಗಿ ಸಂಗ್ರಹಿಸಿಕೊಟ್ಟ ಮಹಾನುಭಾವ ಗೌಡಪ್ಪ ಸಾಧು ಸಹಿತ ಅಷ್ಟೇ ಮುಖ್ಯವಾಗುತ್ತಾರೆ. ಹಾಗೆ ನೋಡಿದರೆ ಹಳಕಟ್ಟಿ ಅವರಾದರೂ ವಿದ್ಯಾವಂತರು, ಬಹುಶೃತ ಪಂಡಿತರು ಮತ್ತು ವಕೀಲರಾಗಿದ್ದವರು.
ನಮ್ಮ ಗೌಡಪ್ಪ ಸಾಧು ಮೊಗಲಾಯಿ ನೆಲದ ಹೆಬ್ಬೆಟ್ಟಿನವರು. ಅಂತಹ ಅನಕ್ಷರಸ್ಥನೊಬ್ಬ ತನಗೆ ದಕ್ಕಿದ ಅವಕಾಶಗಳ ನೆರವಿನಿಂದ ಗಾಂವಟಿ ಶೋಧನಾ ವಿಧಾನಗಳನ್ನು ಬಳಕೆ ಮಾಡಿಕೊಂಡು ಮಡಿವಾಳಪ್ಪನ ಸಾಹಿತ್ಯ ಮತ್ತು ಮಡಿವಾಳಪ್ಪನ ಚರಿತ್ರಾರ್ಹ ಬದುಕಿನ ಸಂಗತಿಗಳ ಮೇಲೆ ಚುಳುಕಾದ ಬೆಳಕು ಚೆಲ್ಲಿದ ಚಾರಿತ್ರಿಕ ಸಂಶೋಧಕನೇ ಹೌದು. ಅದನ್ನು ಗೌಡಪ್ಪ ಸಾಧು "ಮಡಿವಾಳ ಶಿವಯೋಗಿಗಳ ಸಂಕ್ಷಿಪ್ತ ಜೀವನ ಚರಿತ್ರೆ" ಹೆಸರಿನಲ್ಲಿ ಕೆಲವು ಚಾರಿತ್ರಿಕ ಸತ್ಯಗಳನ್ನು ದಾಖಲಿಸಿದ್ದಾರೆ. ಆಫ್ಕೋರ್ಸ್ ಅವರ " ಕೈವಲ್ಯ ವಾಕ್ಯಾಮೃತ " ಪುಸ್ತಕಕ್ಕೆ ಸುಶಿಕ್ಷಿತ ಬಗೆಯ ಶಾಸ್ತ್ರೀಯ ಶಿಸ್ತು, ಅಕೆಡಮಿಷಿಯನ್ ವಿಧಿ ವಿಧಾನಗಳು ಇರದೇ ಇರಬಹುದು. ಆದರೆ ಅದಕ್ಕೆ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಮಹತ್ವ ಇದೆ.
ತತ್ವಪದಗಳನು ಅವಜ್ಞೆಗೆ ತಳ್ಳಿದ ಚರಿತ್ರೆಕಾರರು
ಕನ್ನಡ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲಿ ವಚನ ವಾಙ್ಮಯಕ್ಕೆ ದೊರಕಿದ ಬೆಂಬಲ ತತ್ವಪದಗಳ ಮೌಖಿಕ ಪರಂಪರೆಗೆ ದಕ್ಕಲಿಲ್ಲ. ಎಲ್ಲಾ ಜಾತಿಯ ಹಚ್ಚ ಹಸಿರಿನ ಮರಗಳಿರುವ ನಿಸರ್ಗದ ಮಹಾ ಕಾನನದಂತಹ ತತ್ವಪದಗಳನ್ನು ಕೆಲವರು ಕತ್ತಲೆಯಲ್ಲಿಟ್ಟರು. ತತ್ವಪದಗಳ ಹುಟ್ಟಿನ ಕಾಲಘಟ್ಟವನ್ನು ಕತ್ತಲೆಯುಗವೆಂದು ಕರೆದ ಚರಿತ್ರೆಕಾರರನ್ನು ಕಂಡ ಚರಿತ್ರೆ ನಮ್ಮದು.
ಅಮಾವಾಸ್ಯೆಯ ಕತ್ತಲು ಮತ್ತು ಸತ್ತವರ ಮನೆಗಳಂತಹ ಸಾವಿನ ಸೂತಕದ ಸನ್ನಿಧಿಯಲಿ ತತ್ವಪದಗಳನ್ನು ಹಾಡುವ ವಾಡಿಕೆ. ಇವತ್ತಿಗೂ ಕಡಕೋಳ ಮಡಿವಾಳಪ್ಪನ ಶ್ರೀಮಠದಲ್ಲಿ ಪ್ರತಿ ಅಮಾವಾಸ್ಯೆಯ ರಾತ್ರಿಯನ್ನು ಯಾವುದೇ ಮಡಿವಂತಿಕೆ ಇಲ್ಲದೇ ಅತ್ಯಂತ ಪ್ರೀತಿ ಮತ್ತು ಭಕ್ತಿಯಿಂದ ತತ್ವಪದಗಳ ಗಾಯನ. ಭಜನೆ ಹಾಡುಗಳ ಉಪಾಸನೆಯ ಸಡಗರ, ಅದೊಂದು ಬಗೆಯ ಜವಾರಿ ಸಂಭ್ರಮ.
ಗ್ರಾಮೀಣ ಅನಕ್ಷರಸ್ಥರ ಧ್ವನಿ ಮಟ್ಟುಗಳ ಪರಂಪರಾಗತ ಭಜನಾ ಸಂವೇದನೆಯ ರಸದ ನೆಲೆಗಳನ್ನು ಪಂಡಿತಲೋಕ ಚಳವಳಿಯ ಭಾಗವಾಗಿ ಅಭಿವೃದ್ಧಿ ಪಡಿಸಲಿಲ್ಲ. ಅದಕ್ಕೆ ತಕ್ಕುದಾದ ಯಾವುದೇ ಪ್ರಮಾಣದ ಪ್ರಯತ್ನಗಳನ್ನು ವಿಶ್ವವಿದ್ಯಾಲಯಗಳು ಮಾಡಲಿಲ್ಲ. ಬಹುತೇಕ ವಿ.ವಿ.ಗಳು ಮೇಲ್ಜಾತಿ ನಾತದ ಮುಷ್ಟಿಯಲ್ಲಿದ್ದವು. ಎಲ್ಲ ಬಗೆಯ ದೇಶೀಯ ಕಲೆಗಳನ್ನು ಅವು ಹೆಚ್ಚೆಂದರೆ ಪಿ.ಎಚ್ಡಿ. ಮಹಾ ಪ್ರಬಂಧಗಳ ಬಳಕೆಗಾಗಿ ಬಳಸಿಕೊಂಡವು. ವಾಸ್ತವವಾಗಿ ಸರಕಾರ ಇಲ್ಲವೇ ಸಂಸ್ಕೃತಿ ಇಲಾಖೆ ಇದಕ್ಕೆಂದೇ ವಿಭಿನ್ನ ಚಿಂತನೆಗಳ ಯೋಜನೆ ರೂಪಿಸಬೇಕಿತ್ತು. ವಿಶೇಷವೆಂದರೆ ಬಹುಪಾಲು ಜನಪದರು, ತತ್ವಪದ ಹಾಡುವವರನ್ನು ವಕ್ತೃಗಳೆಂದು ಕರೆದು ಅವರ ಕೈಗೊಂದಿಷ್ಟು ಕಾಸು ಕೊಟ್ಟು ಪದಗಳ ಸಂಗ್ರಹಕ್ಕೆ ಮಾತ್ರ ಎಂಬಂತೆ ತತ್ವಪದಗಳಂತಹ ಬಹುದೊಡ್ಡ ಸಾಂಸ್ಕೃತಿಕ ಪ್ರಕಾರವನ್ನು ಸೀಮಿತ ಮಾಡಿಕೊಳ್ಳಲಾಯಿತು.
ಇಂತಹ ತರತಮ ಜಗತ್ತಿನ ಸಾಂಸ್ಕೃತಿಕ ರಾಜಕಾರಣದ ನಡುವೆ ಅನಕ್ಷರಸ್ಥ ಅಣಜಿಗಿ ಗೌಡಪ್ಪ ಸಾಧು ಮಾಡಿದ ಸಾರಸ್ವತ ಲೋಕದ ಕೈಂಕರ್ಯ ಅಕ್ಷರಶಃ ಶ್ಲಾಘನೀಯ. ಮೊದಲ ಬಾರಿಗೆ ಮಡಿವಾಳಪ್ಪನವರ ಅತ್ಯಧಿಕ ಸಂಖ್ಯೆಯ ತತ್ವಪದಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ ಹೆಗ್ಗಳಿಕೆ ಗೌಡಪ್ಪ ಸಾಧುಗೆ ಸಲ್ಲುತ್ತದೆ. ಇನ್ನೂರಾ ಒಂಬತ್ತು ತತ್ವಪದಗಳನ್ನು ಶೋಧಿಸಿ ಪ್ರಕಟಿಸಿದ ಮೊದಲ ಮೇರುಕೀರ್ತಿ ಅವರಿಗೆ ದಕ್ಕಬೇಕಿದೆ.
ಹಾಗೆಂದು ಗೌಡಪ್ಪ ಸಾಧುಗಿಂತ ಪೂರ್ವದಲ್ಲಿ ಮಡಿವಾಳಪ್ಪನವರ ತತ್ವಪದಗಳು ಪ್ರಕಟವಾಗಿಲ್ಲ ಎಂದರ್ಥವಲ್ಲ. ಕ್ರಿ.ಶ. 1915 ರ ಸುಮಾರಿಗೆ ಗೋಲಗೇರಿ ಹುಚ್ಚಪ್ಪಜ್ಜ, ೧೯೧೮ ರ ಸುಮಾರಿಗೆ ಹಂದಿಗನೂರ ಪಾಟೀಲ,1927 ರ ಸುಮಾರಿಗೆ ಜೇರಟಗಿ ಗುಂಡಪ್ಪ, ಹಿತಚಿಂತಕ ಮುದ್ರಣಾಲಯ ಮತ್ತು 1928ರ ಸುಮಾರಿಗೆ ಇಂಚಗೇರಿ ಮಠವು ಕಡಕೋಳ ಮಡಿವಾಳಪ್ಪ ಸೇರಿದಂತೆ ಅನೇಕ ತತ್ವಪದಕಾರರ ಬಿಡಿ ಬಿಡಿಯಾದ ಅನುಭಾವ ಪದಗಳನ್ನು ಪ್ರಕಟಿಸಿದ ದಾಖಲೆಗಳಿರುವ ಹೇಳಿಕೆಗಳಿವೆ. ಆದರೆ ಇನ್ನೂರಾ ಒಂಬತ್ತು ಪದಗಳು ಮತ್ತು ನೂರೆಂಟು ನಾಮಾವಳಿ, ಗಾಳಿಪೂಜೆ ವಚನಗಳನ್ನು ಒಟ್ಟಾಗಿ ಪ್ರಕಟಿಸಿದ ಹಿರಿಮೆ ಗೌಡಪ್ಪ ಸಾಧುವಿಗೆ ಸಲ್ಲುತ್ತದೆ.
ಇವತ್ತಿನ ಯಡ್ರಾಮಿ ತಾಲೂಕಿಗೆ ಸೇರಿದ ಅಣಜಿಗಿ ಗ್ರಾಮದ ಗೌಡಪ್ಪ ಸಾಧು ಕುಟುಂಬದವರು, ಅವರ ತಾತನ ಕಾಲದಿಂದಲೇ ಶಹಾಪುರ ತಾಲೂಕಿನ ಅಳ್ಳೊಳ್ಳಿ ಎಂಬ ಹಳ್ಳಿಗೆ ವಲಸೆ ಹೋದವರು. ಅಲ್ಲಿನ ಪರಮಣ್ಣಗೌಡ ಮತ್ತು ಶರಣಮ್ಮ ಗೌಡತಿ ಇವರ ಅಪ್ಪ ಅಮ್ಮ. ಪೂರ್ವಕಾಲದ ಅಣಜಿಗಿ ಗ್ರಾಮ 'ಮೂಲ'ದಿಂದಾಗಿ ಅದು ಅವರ ಅಡ್ಡಹೆಸರು ಆಗಿದೆ.
ಅಣಜಿಗಿ ಗೌಡಪ್ಪ ಸಾಧು ತರುವಾಯ ಕಡಕೋಳ ಮಡಿವಾಳಪ್ಪನವರ ತತ್ವಪದಗಳಿಗಾಗಿ ವಿಶ್ವವಿದ್ಯಾಲಯಗಳು, ಸರಕಾರ ಪ್ರಣೀತ ಪಂಡಿತರು, ಸಂಶೋಧನಾರ್ಥಿಗಳು, ನನ್ನ ಹಾಗೆ ಖಾಸಗಿಯಾಗಿ ಆಸಕ್ತಿಯುಳ್ಳ ನಾವುಗಳೆಲ್ಲಾ ಎಷ್ಟೇ ತಿಣುಕ್ಯಾಡಿ ಹುಡುಕಿದರೂ ಹೆಚ್ಚಿಗೆ ದೊರಕಿದ ಪದಗಳು ನೂರಾ ಮುವತ್ತಾರು ಮಾತ್ರ. ಅಂದರೆ ಇದುವರೆಗೆ ನಮಗೆ ದೊರಕಿದ ಕಡಕೋಳ ಮಡಿವಾಳಪ್ಪನವರ ಒಟ್ಟು ಪದಗಳ ಸಂಖ್ಯೆ ಮುನ್ನೂರಾ ನಲವತ್ತೈದು ಮಾತ್ರ. ಈಗಿನ ನಾವುಗಳು ಎಲ್ಲ ಬಗೆಯ ಸಾರಿಗೆ ಸೌಲಭ್ಯ, ವಿದ್ಯುನ್ಮಾನ ಮಾಧ್ಯಮಗಳ ಕ್ರಾಂತಿಕಾರಕ ಸವಲತ್ತುಗಳನ್ನು ಬಳಸಿಕೊಂಡು ಅಮ್ಮಮ್ಮ ಅಂದರೆ ಗೌಡಪ್ಪ ಸಾಧು ಸಂಗ್ರಹಿಸಿದ ಅದರ ಅರ್ಧದಷ್ಟು ಹೆಚ್ಚಿನದಾದ ಮಡಿವಾಳಪ್ಪನವರ ತತ್ವಪದಗಳನ್ನು ತಲಾಷ್ ಮಾಡಲು ಸಾಧ್ಯವಾಗಿದ್ದು.
ಮಡಿವಾಳಪ್ಪ ಬರೆದ ಪದಗಳೆಷ್ಟು
ಹಾಗಿದ್ದರೆ ಮಡಿವಾಳಪ್ಪನವರು ರಚಿಸಿದ ಪದಗಳು ಇಷ್ಟೇನಾ.? ಹನ್ನೊಂದು ನೂರು ತತ್ವಪದ, ಹನ್ನೊಂದು ನೂರು ಮಂಗಳಾರತಿ ಪದ, ಹನ್ನೊಂದು ನೂರು ಮಂದಿ ಶಿಷ್ಯರು ಎಂಬ ಜನಜನಿತ ಜನಗಾದೆಯಂತಹ ಪ್ರತೀತಿ ಸುಳ್ಳೇ ಎಂಬ ಜಿಜ್ಞಾಸೆ. ಖಂಡಿತಾ ಸುಳ್ಳಾಗಿರಲು ಸಾಧ್ಯವಿರದು. ಅದಕ್ಕೆ ಬದಲು ಗೌಡಪ್ಪ ಸಾಧುವಿನಂತಹ ಪರಮ ಬದ್ಧತೆ ಮತ್ತು ಕಳ್ಳುಬಳ್ಳಿಯುಳ್ಳ ಸಂಶೋಧಕರ ಕೊರತೆ ಇರುವುದು ಮಾತ್ರ ಸುಳ್ಳಲ್ಲ. ಆದರೆ ನಾಲ್ಕು ದಶಕಗಳ ಹಿಂದೆ ಸನ್ಯಾಸಿಯೊಬ್ಬರ ಬಳಿ ಮಡಿವಾಳಪ್ಪ ರಚಿಸಿದ ಹದಿನೇಳು ನೂರಾ ಐವತ್ತು ತತ್ವಪದಗಳ ಹಸ್ತಪ್ರತಿ ತಾನು ಖುದ್ದು ಕಂಡಿರುವುದಾಗಿ ಡಾ. ಶಿವಪುತ್ರಪ್ಪ ಮಹಾಂತಪುರ ಹೇಳುತ್ತಾರೆ.
ಅಂದು ಯಾವುದೇ ತೆರನಾದ ಸಾರಿಗೆ, ಸಂಪರ್ಕ, ಸಂವಹನಗಳಿಲ್ಲದ ಕಾಲಮಾನ. ಅಷ್ಟಕ್ಕೂ ಅದೇನು ಸಾವಿರಾರು ಇಲ್ಲವೇ ನೂರಾರು ವರುಷಗಳ ಹಿಂದಿನ ಗತೇತಿಹಾಸದ ಜಮಾನಾ ಆಗಿರಲಿಲ್ಲ. ಕೇವಲ ಎಪ್ಪತ್ತೆಂಬತ್ತು ವರುಷಗಳ ಹಿಂದಿನ ಕಾಲಘಟ್ಟವಷ್ಟೇ. ಆದರೆ ಹೈದ್ರಾಬಾದ ಕರ್ನಾಟಕದಲ್ಲಿ ಆಗ ಯಾವುದೇ ಅನುಕೂಲಗಳಿಲ್ಲದ ದಿನಮಾನಗಳು ಅದಾಗಿದ್ದವು. ಅಂತಹ ದುರಿತ ಕಾಲದಲ್ಲಿ ಗೌಡಪ್ಪ ಸಾಧು ಗುಡಿಸಲು, ಕೊಂಪೆ, ಗುಂಪಾಗಳನು ಸುತ್ತಾಡಿ, ಊರೂರು ತಿರುಗಾಡಿ ಮಡಿವಾಳಪ್ಪನ ತತ್ವಪದಗಳನ್ನು ಹಾಡುವ ವ್ಯಕ್ತಿಗಳು ಮತ್ತು ಭಜನೆಗಳ ಮೇಳಗಳನ್ನು ಹುಡುಕಿ, ಹುಡುಕಿ ಪದಗಳನ್ನು ಪಡೆದರು. ತಾನು ಹಿಡಿದ ಹಾದಿಯಲ್ಲಿ ಯಶಸ್ಸನ್ನು ಕಂಡರು.
ಗೌಡಪ್ಪ ಸಾಧುಗೆ ಅಚಲ ವಿಶ್ವಾಸವಿತ್ತು. ಮಡಿವಾಳಪ್ಪನ ತತ್ವಪದಗಳನ್ನು ಸಂಗ್ರಹಿಸಿಯೇ ತೀರುವ ಛಲವಿತ್ತು. ಅದಕ್ಕಾಗಿ ತನ್ನ ಬದುಕನ್ನು ಪಣವಾಗಿರಿಸಿದರು. ಅದನ್ನು ಅವರು ತಪಸ್ಸಿನೋಪಾದಿಯಲ್ಲಿ ಸವಾಲಿನಂತೆ ಸ್ವೀಕರಿಸಿದ್ದರು. ಅದಕ್ಕೆಂದೇ ಸದಾ ಜಾಗ್ರತವಾಗಿದ್ದು ದೇಹ ದಂಡಿಸುವಂತೆ ದಿನಕ್ಕೊಂದೇ ರೊಟ್ಟಿ ಉಂಡು ಮಡಿವಾಳ ಪದಗಳ ಪ್ರಪಂಚದಲ್ಲಿ ತನ್ನನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ತತ್ವಪದಗಳ ಜತೆಗೆ ಶರಣಬಸಪ್ಪನ ಕುರಿತು ಮಡಿವಾಳಪ್ಪ ಭಾಮಿನಿ ಷಟ್ಪದಿಯಲ್ಲಿ ಬರೆದ ಪುರಾಣದ ಹುಡುಕಾಟ. ಹೂಗಾರ ಮನೆತನದ ಜೀರ ರಾಮಪ್ಪ ರಚಿಸಿದ ಮಡಿವಾಳಪ್ಪನ ಕುರಿತಾದ ಅಸಲೀ ಪುರಾಣದ ಶೋಧನೆಯು ಸಾಧುವಿನ ಸತ್ಸಂಕಲ್ಪ ಆಗಿತ್ತು. ಅದೊಂದು ರೀತಿಯಲ್ಲಿ ಮಡಿವಾಳಪ್ಪನ ಬದುಕಿನ ಆತ್ಮಶೋಧನೆಯ ಕಾರ್ಯದಂತಿತ್ತು.
ಇಂಗ್ರೇಜಿ ನಾಡಿನ ಅಂದಿನ ಬಿಜಾಪುರ ಜಿಲ್ಲೆಯ ಕೋರವಾರ, ಚಬನೂರು, ತುಂಬಿಗಿ ಹೀಗೆ ಯಾವುದ್ಯಾವುದೋ ಊರುಗಳಲ್ಲಿ ಅದ್ಯಾರ್ಯಾರದೋ ಮನೆಗಳಲ್ಲಿ ಪುರಾಣ ಇರಬಹುದೆಂಬ ಅಂತೆ ಕಂತೆಗಳು. ಒಂದಲ್ಲ ಎರಡಲ್ಲ ಬರೋಬ್ಬರಿ ಹನ್ನೆರಡು ವರುಷಗಳ ಕಾಲ ಅವಿರತವಾಗಿ ಇಂತಹ ಅನೇಕ ದಂತಕತೆ ವದಂತಿಗಳ ಬೆನ್ನುಬಿದ್ದರು. ಶೋಧನ ಕಾರ್ಯಕ್ಕೆ ಅವಿರತ ಹೋರಾಟದಂತೆ ತಿರುಗಾಟ ನಡೆಸಿದರು. ಅದಕ್ಕಾಗಿ ಹಗಲು ರಾತ್ರಿಗಳೆನ್ನದೇ ಅಪರಿಚಿತ ಊರುಗಳ ಗುಡಿ ಗುಂಡಾರಗಳಲ್ಲಿ ಉಪವಾಸ ವನವಾಸ ಬೀಳುವುದು ಅವರಿಗೆ ರೂಢಿಯಾಗಿ ರಾಟಿ ಬಿದ್ದಿತ್ತು.
ಅನಕ್ಷರಸ್ಥರಾಗಿದ್ದ ಗೌಡಪ್ಪ ಸಾಧುಗೆ ಮಡಿವಾಳಪ್ಪನ ಪದಗಳ ಮೇಲಿನ ಹುಡುಕಾಟದ ಆಸ್ಥೆ ಮತ್ತು ಶ್ರದ್ಧೆ ಅಮೋಘವಾಗಿತ್ತು. ಎಲ್ಲ ಬಗೆಯ ದೈಹಿಕ ದಣಿವು ಮರೆತ ಅವರದು ಬೆವರು ಮತ್ತು ಭಕ್ತಿಯ ಅನನ್ಯ ನಡೆಯಾಗಿತ್ತು. ಮಡಿವಾಳ ಪ್ರೀತಿಯಿಂದ ಹೀಗೆ ಗೌಡಪ್ಪ ಸಾಧು ತತ್ವಪದಗಳ ಸಂಗ್ರಹಕ್ಕೆ ಅಹರ್ನಿಶಿಯಾಗಿ ತೊಡಗಿಸಿಕೊಂಡಿದ್ದರು. ಮಡಿವಾಳಪ್ಪನ ಮಹಾಸಾಧನೆಯ ಇಂತಹದ್ದೊಂದು ಹುಡುಕಾಟಕ್ಕೆ ಮುಡಿಪಾಗಿ ದುಡಿದವರು. ಹಾಗೇ ಊರೂರು ತಿರುಗಾಟದಲ್ಲಿ ದೊರಕಿದ ಮಡಿವಾಳಪ್ಪನ ತತ್ವಪದ ಹಾಡುವ ಪದಕಾರರನ್ನು ಕಂಡಾಗ ಅವರಿಗೆ ಸಾಕ್ಷಾತ್ ಮಡಿವಾಳಪ್ಪನೇ ಸಿಕ್ಕಷ್ಟು ಸಂತಸ ಪಡುತ್ತಿದ್ದರು. ಹೌದು ಗೌಡಪ್ಪ ಸಾಧುವಿನದು ಸಹೃದಯ ಮಾದರಿಗೆ ಹೇಳಿ ಮಾಡಿಸಿದ ವ್ಯಕ್ತಿತ್ವ. ಅಕ್ಷರಪದ, ಅನ್ನ, ಜ್ಞಾನಗಳ ಸಂಗ್ರಹ ಮತ್ತು ದಾಸೋಹ ಭಾವಗಳ ತವನಿಧಿ ಆಗಿದ್ದರು. ತಾನು ಬೇಡಿ ತಂದ ಪದಗಳನ್ನು ತನ್ನ ಜೋಳಿಗೆಯ ಅನ್ನದಂತೆ ಉಂಡು ಇತರರಿಗೂ ಉಣಿಸುವ ದಾಸೋಹಿಯಾದ.
ಪತ್ನಿಗೂ ಪದಗಳ ಸೋಬತಿ
ಅಂತಹ ದಾಸೋಹದ ಕಾಯಕ ಪ್ರೀತಿಯನ್ನು ತನ್ನಪತ್ನಿ ಭೀಮಾಬಾಯಿ ಅವರಿಗೂ ಪ್ರಮಾಣ ಮಾಡಿಸಿದ ಅವಧೂತಪ್ರಜ್ಞೆ ಗೌಡಪ್ಪ ಸಾಧುವಿನದು. ಅವರದು ಅಕ್ಷರಶಃ ಸತಿಪತಿಗಳೊಂದಾದ ಶರಣಧರ್ಮದ ಭಕುತಿ. ಸಹಜವಾಗಿ ಅದು ಹಿತವಾಗಿಪ್ಪುದು ಶಿವಂಗೆ ಎಂಬುದು. ಭವದ ಎಲ್ಲ ಆಗುಗಳಿಗೂ ಬಾಳಸಂಗಾತಿ ಭೀಮಬಾಯಿಗೂ ಪಾಲು. ತಾನು ಶೋಧಿಸಿ ಸಂಗ್ರಹಿಸುತ್ತಿದ್ದ ಮಡಿವಾಳ ಶಿವಯೋಗಿಗಳ ಚಾರಿತ್ರಿಕ ಬದುಕು ಸಾಧನೆಗಳ ಒಂದೊಂದು ಸಣ್ಣ ಸಣ್ಣ ವಿವರಗಳನ್ನು ಪತ್ನಿಗೆ ವಿವರಿಸಿದಾಗಲೇ ಸಾಧುಗೆ ಸಮಾಧಾನ. ಅಂತೆಯೇ ಊರೂರು ತಿರುಗಾಡಿ ಸಂಗ್ರಹಿಸುತ್ತಿದ್ದ ಮಡಿವಾಳಪ್ಪನ ಪದಗಳನ್ನು ತಾನು ಕಲಿಯುವುದಲ್ಲದೇ ಪತ್ನಿ ಭೀಮಬಾಯಿಗೂ ಕಲಿಸುತ್ತಿದ್ದರು. ಅಂತೆಯೇ ಭೀಮಬಾಯಿ ತಕ್ಕಮಟ್ಟಿಗೆ ಹಾಡುತ್ತಿದ್ದಳು.
ಪರಿಚಿತರು ಮಾತ್ರವಲ್ಲ ಯಾರೇ ಅಪರಿಚಿತರು ಸಹಿತ ಮಡಿವಾಳಪ್ಪನ ತತ್ವಪದಗಳನ್ನು ಹಾಡುತ್ತಿದ್ದರೆ ಗೌಡಪ್ಪ ಸಾಧು ಮೈಯೆಲ್ಲ ಕಿವಿಯಾಗಿಸಿಕೊಂಡು ಆಲಿಸುತ್ತಿದ್ದರು. ಅನಕ್ಷರಸ್ಥನಾಗಿದ್ದ ತನಗೆ ಪದಗಳನ್ನು ಬರೆದು ಕೊಳ್ಳಲು ಸಾಧ್ಯವಾಗದಿದ್ದಾಗ ಧೃತಿಗೆಡದೆ ಖುದ್ದು ತಾನೇ ಹಾಡುವುದನ್ನು ಕಲಿಯುತ್ತಿದ್ದರು. ಆ ರೀತಿಯಾಗಿ ಅವರು ಎರಡುನೂರಾ ಒಂಬತ್ತು ಪದಗಳನ್ನು ಹಾಡಲು ಕಲಿತರು. ಅದರ ಜತೆಗೆ ನೂರೆಂಟು ನಾಮಾವಳಿ ಮತ್ತು ಗಾಳಿಪೂಜೆ ವಚನಗಳನ್ನು ಬಾಯಿಪಾಠ ಮಾಡಿದ್ದರು.
ಬೆಳಗಿನ ಜಾವ ಅವುಗಳನ್ನೆಲ್ಲ ಸ್ತುತಿಸುವುದು ಅವರ ನಿತ್ಯದ ಬದುಕಿನ ಭಾಗವೇ ಆಗಿತ್ತು. ತಾನು ಮನಃಪೂರ್ವಕವಾಗಿ ಹಾಡಲು ಕಲಿತ ತತ್ವಪದಗಳನ್ನು ಮತ್ತೆ ಮತ್ತೆ ಭಾವತುಂಬಿ ಹಾಡುತ್ತಿದ್ದರು. ಸೊಂಟಕ್ಕೆ ಕಾವಿ ಬಣ್ಣದ ಶಲ್ಯ ಕಟ್ಟಿಕೊಂಡು ಎಡಗೈಯಲ್ಲಿ ಚಿಟಿಕೆ ಬಲಗೈಯಲ್ಲಿ ಏಕತಾರಿ ನುಡಿಸುತ್ತಾ ತತ್ವ ಆವಾಹಿಸಿಕೊಂಡು ಮಡಿವಾಳಪ್ಪನ ಪದಗಳನ್ನು ಮನೋಜ್ಞವಾಗಿ ಹಾಡುತ್ತಿದ್ದರು. ಹೌದು ಅದು ಅವರ ದೇಹ ಮತ್ತು ಧ್ವನಿಗಳನ್ನೊಳಗೊಂಡ ಭಾವಾಭಿನಯದ ಅನುಸಂಧಾನವೇ ಆಗಿರುತ್ತಿತ್ತು. ಅದು ಅವರ ಫಿಲಾಸಫಿಕಲ್ ಸಿದ್ಧಾಂತದ ಜತೆಗಿನ ತಾದಾತ್ಮ್ಯಗೊಂಡ ಜೀವನ ಶೈಲಿಯೇ ಆಗಿತ್ತು.
ಮಡಿವಾಳಪ್ಪನ ತತ್ವಪದಗಳನ್ನು ಅವರು ಭಾವಪೂರ್ವಕವಾಗಿ ಹಾಡುತ್ತಿರುವುದನ್ನು ನೋಡಿದ ಅನೇಕ ಹಿರಿಯರು ಈಗಲೂ ನಮ್ಮ ಕಡಕೋಳದಲ್ಲಿ ಇದ್ದಾರೆ. ಎಂಬತ್ತೈದರ ಏರುಪ್ರಾಯದ ಮತ್ತು ತತ್ವಪದಗಳ ಸೊಗಸಾದ ಗಾಯಕರೇ ಆಗಿರುವ ನಮ್ಮ ಕಡಕೋಳದವರೇ ಆದ ಮುದ್ದಾ ಭೀಮರಾಯ ತಾನು ಕಂಡ ಗೌಡಪ್ಪ ಸಾಧು ಕುರಿತು ಹೇಳುವುದು ಹೀಗೆ :
ಸೊಂಟಕ್ಕೆ ಕಾವಿ ಬಣ್ಣದ ಶಲ್ಯ ಸುತ್ಗೊಂಡು, ಬಲಗೈಯಾಗ ಕರಿ ಕುಂಬ್ಳ ಕಾಯಿಯ ಏಕ್ತಾರಿ, ಎಡಗೈಯಲ್ಲಿ ಚಿಟಕಿ ಹಿಡಕೊಂಡು ಗೌಡಪ್ಪ ಸಾಧು ಭಾಳ ಚೆಂದ ಹಾಡ್ತಿದ್ದ. ಮಠ ಮತ್ತ ಗವೀ ಮುಂದ ಮಡಿವಾಳಪ್ಪನ ಪದಗಳನ್ನ ಮಯೀ ಮರ್ತು ಹಾಡತಿದ್ರ ಜನ್ರು ಸಂತಿ ಸೇರಿದಂಗ ಸೇರತಿದ್ರು. ಆ ಸಂತಿ ಬೆಳದು ಜನ ಜಾತ್ರೀನೇ ಆಗ್ತಿತ್ತು. ಆಗ ನಾವೆಲ್ಲ ಸಣ್ಣ ಚುಕ್ಕೋಳು. ನಮಗ ಅದೆಲ್ಲ ಭಾಳ ಖುಷಿ ಕೊಡ್ತಿತ್ತು. ಗವುಡಪ್ಪ ಸಾಧು ಮನಸು ಬಿಚ್ಚಿದ ಸ್ವರಗಳಲ್ಲಿ ಮುತ್ಯಾನ ಪದಗೋಳು ಹಾಡ್ತಿದ್ದ. ಮಠದ ಮುಂದ, ಭೀಮಾಶಂಕರ ಗವಿಯೊಳಗ ಮತ್ತ ಗವಿ ಮುಂದ ಪದ ಹಾಡುತ್ತಾ ಮೈ ಮರಿತಿದ್ದ. ಪದಗಳಿಗೆ ಟೀಕಾ ಹೇಳ್ತಿದ್ದ.
* * *
ಗವಿ ಭೀಮಾಶಂಕರ ಮತ್ತು ಗೌಡಪ್ಪ ಸಾಧು
ಕಡಕೋಳದ ಗವಿ ಭೀಮಾಶಂಕರ ಮತ್ತು ಗೌಡಪ್ಪ ಸಾಧು ಇಬ್ಬರೂ ಸಮಕಾಲೀನರು. ಕನ್ನಡ, ಮರಾಠಿ, ಮೋಡಿ, ಉರ್ದು ಮತ್ತು ದಖನಿ ಭಾಷೆಗಳ ಪರಿಚಯವಿದ್ದ ವಯೋ ಅನುಭಾವದಲ್ಲಿ ಅಕ್ಷರಸ್ಥ ಗವಿ ಭೀಮಾಶಂಕರ ಅವಧೂತರು ಹಿರೀಕರು. ಇಬ್ಬರಲ್ಲೂ ತುಂಬಿ ತುಳುಕುವ ಮನುಷ್ಯ ಪ್ರೀತಿಯಿತ್ತು. ಇಬ್ಬರೂ ಜಡೆ ಮತ್ತು ಗಡ್ಡಧಾರಿಗಳು. ಇಬ್ಬರೂ ಕಡಕೋಳದ ಅಳಿಯಂದಿರು. ಭೀಮಾಶಂಕರರು ಕಡಕೋಳದ ಹಿರೇಗೋಳ (ಸಾಧು ಶಿವಣ್ಣ ಭೀಮಣ್ಣ ವಂಶಾವಳಿ) ಮನೆತನದ ಸೀತಮ್ಮ ತಾಯಿಯ ಮಗ. ಸೀತಮ್ಮ ತಾಯಿಯ ಗಂಡನಮನೆ ಸುರಪುರದ ಬಳಿಯ ವನದುರ್ಗ ಎಂಬ ಮಸಬಿನ ಗ್ರಾಮ. ಪ್ರಸ್ತುತ ಗವಿ ಭೀಮಾಶಂಕರ ಗುಡಿ ಮತ್ತು ಆಸ್ತಿ ಕಡಕೋಳ ಶ್ರೀಮಠದ ಸುಪರ್ದಿಯಲ್ಲಿದೆ.
ಕಾಲಾನಂತರ ಸೀತಮ್ಮ ತಾಯಿಯ ಗಂಡ ದೈವಾದೀನರಾದ ಮೇಲೆ ಮಗ ಭೀಮಾಶಂಕರ ಜತೆಯಲ್ಲಿ ಆಕೆ ತನ್ನ ತವರುಮನೆ ಕಡಕೋಳದಲ್ಲೇ ಬಂದು ನೆಲೆಸುತ್ತಾಳೆ. ತನ್ನ ಬದುಕಿನ ಬಹುಪಾಲು ಸಂಧ್ಯಾಕಾಲವನ್ನು ಗಿಡಮೂಲಿಕೆ ಶಾಸ್ತ್ರ, ದೈವಿಕ ಮತ್ತು ಸ್ತ್ರೀಶಕ್ತಿ ಆರಾಧನೆ, ಅಧ್ಯಾತ್ಮದ ಸಾಹಚರ್ಯದಲ್ಲಿ ತೊಡಗಿಸಿಕೊಂಡಿದ್ದಳು. ಹೆಗ್ಗಣದೊಡ್ಡಿ ಧರ್ಮರ ತಾಯಿಯ ಶಾಕ್ತ ಪ್ರಭಾವ ಸೀತಮ್ಮ ತಾಯಿಗೆ ಆಗಿತ್ತೆಂದು ಕಡಕೋಳ ದೊರೆಸಾನಿ ಕೃಷ್ಣಮ್ಮಾಯಿ ಶೃತ ಪಡಿಸಿದ್ದಳು. ಅದನ್ನು ನನ್ನ ತಂದೆ ಸಾಧು ಶಿವಣ್ಣ ಮತ್ತು ನನ್ನ ತಾಯಿ ನಿಂಗಮ್ಮ ಹೇಳುತ್ತಿದ್ದುದನ್ನು ನಾನು ಅನೇಕ ಬಾರಿ ಆಲಿಸಿದ ಸ್ಪಷ್ಟವಾದ ನೆನಪುಗಳು ನನಗಿವೆ. ಕೃಷ್ಣಮ್ಮಾಯಿ ಗತಿಸಿಹೋದ ಅದೆಷ್ಟೋ ವರ್ಷಗಳ ತರುವಾಯ ಮಾತಿಗೊಮ್ಮೆ " ಕೃಷ್ಣಮ್ಮತ್ತೆ ಹೀಂಗ ಹೇಳ್ತಿದ್ಳು " ಅಂತ ಚಾರಿತ್ರಿಕ ಕಡಕೋಳದ ನೂರಾರು ಉಲ್ಲೇಖನೀಯ ಕಥನಗಳನ್ನು ನನ್ನವ್ವ ಕೃತಜ್ಞತೆಯ ಸ್ವರಗಳಲ್ಲಿ ದ್ಯಾಸಮಾಡಿ ಕೊಳ್ಳುತ್ತಿದ್ದುದನ್ನು ನನ್ನ ಬಾಲ್ಯ ಖುದ್ದು ಕಂಡಿದೆ.
ಅಷ್ಟಕ್ಕೂ ದೊರೆಸಾನಿ ಕೃಷ್ಣಮ್ಮಾಯಿ ಸೀತಮ್ಮಾಯಿಯ ಮೂಲಕ ಮನುಷ್ಯರ ದೇಹಾರೋಗ್ಯಕ್ಕೆ ಸಂಬಂಧಿಸಿದ ಗಿಡಮೂಲಿಕೆ ಔಷಧಗಳ ದಟ್ಟ ಪರಿಚಯ ಮಾಡಿಕೊಂಡಿದ್ದರೆಂಬುದು ಆ ಕಾಲದಲ್ಲಿ ಜನಜನಿತ ಆಗಿತ್ತು. ಇದನ್ನು ಕಡಕೋಳದಲ್ಲೇ ಹತ್ತಾರು ವರ್ಷಗಳ ಕಾಲ ಗಾಂವಟಿ ಸಾಲಿ ಮಾಸ್ತರನಾಗಿದ್ದ ಕಡಕಲ್ ರಾಮಚಂದ್ರರಾಯರು ಹೇಳಿದ್ದನ್ನು ಸ್ವತಃ ನಾನೇ ಕೇಳಿದ್ದೇನೆ. ಕಡಕಲ್ಲ ರಾಮಚಂದ್ರರಾಯ ಇನ್ನೂ ಬದುಕಿದ್ದು, ಅವರೀಗ ನೂರರ ಮುಪ್ಪಿನಲ್ಲಿದ್ದು ಅನಾರೋಗ್ಯ ಪೀಡಿತರಾಗಿದ್ದಾರೆ. ರಾಮಚಂದ್ರಾಯ ಮಾಸ್ತರ ಹತ್ತಾರು ಸಾರಿ ಕಡಕೋಳ ಅವಧೂತ ಪರಂಪರೆ ಕುರಿತು ಸಂದರ್ಭೋಚಿತವಾಗಿ ಹೇಳಿದ್ದಾರೆ. ಆಗೆಲ್ಲಾ ಬೆಂಚಿಯ ಭೀಮರಾಯ ಸಾಧು, ಗವಿ ಭೀಮಾಶಂಕರ, ಅಣಜಿಗಿ ಗೌಡಪ್ಪ ಸಾಧು ಕುರಿತು ಹೇಳದೇ ಇರಲು ಸಾಧ್ಯವಿರುತ್ತಿರಲಿಲ್ಲ. ರಾಮಚಂದ್ರಾಯ ಮಾಸ್ತರ ನಾಟಿ ಔಷಧ ಮತ್ತು ವಾಮಾಚಾರ ವಿದ್ಯದ ಪಂಡಿತರು.
ಭೀಮಾಶಂಕರ ಅವಧೂತರು ಶಾಕ್ತ ಮತ್ತು ಆರೂಢ ಪರಂಪರೆಯನ್ನು ಆವಾಹಿಸಿಕೊಂಡವರು. ಅವರೊಬ್ಬ ಶಾಕ್ತೇಯ ನೆಲೆಯ ವಿಸ್ಮಯದ ಯೋಗಿ. ದೇವಿಯ ನೆನೆಯಿರಿ ಭಾವ ಶುದ್ಧದಲಿ/ ಪಾವನ ಚರಿತೆ ಪಾರ್ವತಿಯೆ// ವಾಸ್ತವವಾಗಿ ಇದು ಗವಿ ಭೀಮಾಶಂಕರರ ಕೃತಿ. ಆದರೆ ಅದು ಗೌಡಪ್ಪ ಸಾಧುಗಳ ಕೈವಲ್ಯ ವಾಕ್ಯಾಮೃತದಲ್ಲಿ ಸೇರ್ಪಡೆಯಾಗಿದೆ. ಇನ್ನೂ ಮುಂದುವರೆದು ಬಗಳಾಮುಖಿ ಮತ್ತು ಬಗಳಾಂಬಿಕೆ ಉಲ್ಲೇಖದ ಅಂಕಿತವಿರುವ ಗವಿ ಭೀಮಾಶಂಕರರ ಒಂದೆರಡು ಪದಗಳನ್ನು ನಾನು ಬಾಲ್ಯದಲ್ಲೇ ಯತ್ನಾಳದ ತತ್ವಪದ ಗಾಯಕರಾದ ನಿಂಗವ್ವ ಭೀಮಶಾ ದಂಪತಿ ಹಾಡುತ್ತಿದ್ದುದನ್ನು ಕೇಳಿದ್ದೇನೆ. ಈ ದಲಿತ ದಂಪತಿ ಭೀಮಾಶಂಕರರ ಶಿಶುಮಕ್ಕಳು ಆಗಿದ್ದವರು.
ಅಷ್ಟು ಮಾತ್ರವಲ್ಲ ಭೀಮಾಶಂಕರರ ಪಟ್ಟದ ಶಿಷ್ಯನಂತಿದ್ದ ಮಹಾಂತಪ್ಪ ಸಾಧು "ಅನುಬಾರದೇನಂದೀನಿ ಅಂಬಾ ನಿನಗ ಅಂಬಾ ಜಗದಂಬೆ ಅಂದೀನೆ" ಎಂಬ ಪದ ಸೇರಿದಂತೆ ಅಂತಹದ್ದೇ ಹತ್ತಾರು ಪದಗಳನ್ನು ಹೆಚ್ಚು ಹೆಚ್ಚಾಗಿ ಹಾಡುತ್ತಿದ್ದುದನ್ನು ನಾನೇ ಅನೇಕ ಸಲ ಕೇಳಿದ್ದೇನೆ. ಅಷ್ಟೇ ಯಾಕೆ ಗವಿ ಭೀಮಾಶಂಕರರ ಕನ್ಯಶಿಷ್ಯಯಂತಿದ್ದ ಲಕ್ಷ್ಮೀಬಾಯಿ ಹಾಡುತ್ತಿದ್ದುದನ್ನು ನಾನು ಕೇಳಿದ್ದೇನೆ. ಲಕ್ಷ್ಮೀಬಾಯಿ ಗಾಂಜಾ ಸೇವಿಸಿ ಶಾಕ್ತೇಯಳಾಗಿಯೇ ತಾಳ ಏಕತಾರಿಗಳ ನಾದದಲಿ ಆನಂದ ತುಂದಲಿತಳಾಗಿ ಹಾಡುವುದನ್ನು ನೋಡುವುದೇ ಬಾಲ್ಯದ ನನಗಾಗ ಸಂಭ್ರಮ ಆಗಿರುತ್ತಿತ್ತು. ಭೀಮಾಶಂಕರ ಗವಿ ಪರಿಸರದ ಸಿದ್ಧಿ ಸಾಧನೆ ಕುರಿತು ಹತ್ತಾರು ವಾಂಛಲ್ಯಭರಿತ ವಾಚಿಕೆಗಳ ಸಡಗರಗಳು ಪ್ರಚಲಿತವಾಗಿದ್ದುದನ್ನು ಬಾಲ್ಯದಲ್ಲಿ ಕಂಡಿದ್ದೇನೆ.
ದೇವಿ ಉಪಾಸನೆ
ಗವಿ ಭೀಮಾಶಂಕರರ ತಾಯಿ ಸೀತಮ್ಮ ಮಗ ಭೀಮಾಶಂಕರನಿಗೆ ದೇವಿ ಉಪಾಸನೆ ಇತರೆ ಕಾಠ್ಯಶಾಕ್ತ್ಯದ ವಿಧಿಗಳನ್ನು ಧಾರೆ ಎರೆದವರು. ಆದರೆ ಇವರೆಲ್ಲರಿಗೂ ಮಡಿವಾಳಪ್ಪನ ಬದುಕು ಮತ್ತು ಸಾಧನೆಗಳ ಮೇಲೆ ಅಮೋಘ ಭಕ್ತಿ ಮತ್ತು ಅಪಾರ ಪ್ರೀತಿ. ಸೀತಮ್ಮತಾಯಿ ತನ್ನ ಬದುಕಿನ ಕೊನೆಯ ದಿನಗಳನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಕಳೆಯುತ್ತಾರೆ. ಸೊಲ್ಲಾಪುರದಲ್ಲೇ ಸಮಾಧಿಸ್ಥರಾಗುತ್ತಾರೆ. ಸೀತಮ್ಮಾಯಿ ಸಮಾಧಿಸ್ಥರಾದ ಕತೆ ಅತ್ಯಂತ ರೋಚಕವಾದುದು. ಅದನ್ನು ಸಂದರ್ಭೋಚಿತವಾಗಿ ಇನ್ನೊಮ್ಮೆ ಹೇಳುವೆ.
ಮೇಲ್ಕಂಡ ಸೀತಮ್ಮಾಯಿ ಮತ್ತು ಅವರ ಸುಪುತ್ರ ಗವಿ ಭೀಮಾಶಂಕರ ಅವರ ಈ ಪ್ರಸಂಗ ಅಣಜಿಗಿ ಗೌಡಪ್ಪ ಸಾಧು ಬದುಕು ಮತ್ತು ಸಾಧನೆಗಳ ಸಂಬಂಧ ಆನುಷಂಗಿಕವಾದುದು, ಅದಕ್ಕೆಂದೇ ಅದನ್ನಿಲ್ಲಿ ಪ್ರಸ್ತಾಪಿಸಲೇ ಬೇಕಾಯಿತು. ಇವರಿಬ್ಬರೂ ಮಡಿವಾಳಪ್ಪನ ತತ್ವಪದಗಳನ್ನು ತಮ್ಮ ಬದುಕಿನ ಆದ್ಯಕರ್ತವ್ಯದಂತೆ ಆಚರಣೆಗಳ ಮೂಲಕ ಪದಸಂಪತ್ತು ಗಳಿಸಿದವರು. ಅವುಗಳನ್ನು ತಮ್ಮ ಶಿಶುಮಕ್ಕಳಿಗೆ ಅತ್ಯಂತ ಶ್ರದ್ಧೆಯಿಂದ ಧಾರೆ ಎರೆದವರು. ವಿಶೇಷವಾಗಿ ಗವಿ ಭೀಮಾಶಂಕರರಿಗೆ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದಲ್ಲಿ ಶಿಸುಮಕ್ಕಳ ಸಂಪ್ರದಾಯ ಪರಂಪರೆಯಾಗಿ ಬೆಳೆದಿದೆ. ಸೊಲ್ಲಾಪುರದಲ್ಲಿ ಕಡಕೋಳ ಮಡಿವಾಳಪ್ಪನ ಮಠವನ್ನೇ ಭೀಮಾಶಂಕರ ಅವಧೂತರು ಸ್ಥಾಪಿಸಿದ್ದಾರೆ.
ಹಾಡು ಪರಂಪರೆಯ ಮುಂದುವರಿಕೆ
ಲೋಕವಂದಿತ ಮಡಿವಾಳಪ್ಪನ ತತ್ವಪದಗಳನ್ನು ಸೊಗಸಾಗಿ ಆವಾಹಿಸಿಕೊಂಡು ಹಾಡುವುದನ್ನು ನಮ್ಮೂರಲ್ಲಿ ಪರಂಪರೆಯನ್ನಾಗಿಸಿದ್ದು ಮೊದಲಿಗೆ ಬೆಂಚಿಯೊಳಗಿನ ಭೀಮರಾಯ ಸಾಧು. ಹೌದು ಅವರು ಕಡಕೋಳದಲ್ಲಿ ತತ್ವಪದಗಳ ಹಾಡುಗಾರಿಕೆಯ ಸಾಧು ಪರಂಪರೆಯ ಉಗಮಕ್ಕೆ ಕಾರಣರಾದವರು. ಈ ಪರಂಪರೆಯ ಮುಂದುವರಿಕೆಯು ಗವಿ ಭೀಮಾಶಂಕರ ಮತ್ತು ಗೌಡಪ್ಪ ಸಾಧುಗಳೊಂದಿಗೆ ಪ್ರವರ್ಧಮಾನಕ್ಕೆ ಬರುತ್ತದೆ. ಮಾತ್ರವಲ್ಲದೇ ಮಡಿವಾಳಪ್ಪನ ತತ್ವಪದಗಳ ಸಂಗ್ರಹ ಮತ್ತು ಭಜನೆಗಳ ಗಾಯನವು ಸುದೀರ್ಘ ಪರಂಪರೆ ಕಡಕೋಳ ನೆಲದ ನಡೆಯಾಗಿ ವರ್ತಮಾನವನ್ನು ಸಹಿತ ಜೀವಂತವಾಗಿರಿಸಿದೆ. ಅದೊಂದು ಜಾತ್ಯಾತೀತ ಜನಸಂಸ್ಕೃತಿಯಾಗಿ ಬೆಳೆದಿರುವುದು ಗಮನಾರ್ಹ. ಪ್ರಸ್ತುತ ಆ ಪರಂಪರೆಗೆ ಆಧುನಿಕತೆಯ ಸ್ಪರ್ಶವು ದೊರಕುತ್ತಲಿದೆ. ಹೀಗಾಗಿ ಮಡಿವಾಳಪ್ಪನ ತತ್ವಪದಗಳನ್ನು ಸುಗಮ ಮತ್ತು ಶಾಸ್ತ್ರೀಯ ಸಂಗೀತ ಸೇರಿದಂತೆ ಸಿನೆಮಾ ಮತ್ತು ಗಝಲ್ ಗಾಯನದ ಶೈಲಿಯಲ್ಲಿ ಹಾಡುವುದನ್ನು ಮನಗಾಣ ಬಹುದಾಗಿದೆ.
ಅಂತೆಯೇ ಕಡಕೋಳದಲ್ಲಿ ಇವತ್ತಿಗೂ ಹಾಡು ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಹಿಂಡು ಹಿಂಡು ಹಾಡುಗಾರರಿದ್ದಾರೆ. ಗೌಡಪ್ಪ ಸಾಧು ಪತ್ನಿ ಭೀಮಾಬಾಯಿಯ ಮನೆತನಕ್ಕೆ ಸೇರಿದ ಅನೇಕರು ತತ್ವಪದಗಳನ್ನು ಸೊಗಸಾಗಿ ಹಾಡುವವರಿದ್ದಾರೆ. ದಿ. ರಾಯಪ್ಪಗೌಡ, ದಿ. ಶಿವರಾಯಗೌಡ ಉತ್ತಮ ಗಾಯಕರೇ ಆಗಿದ್ದರು. ಪ್ರಸ್ತುತ ಅದೇ ಮನೆತನದ ಗೌಡಪ್ಪಗೌಡ (ಗೌಡಪ್ಪ ಸಾಧು ಜ್ಞಾಪಕಾರ್ಥ) ಎಂಬ ಹೆಸರಿನ ಅಂಧ ಗಾಯಕ ಅತ್ಯಂತ ಲೀಲಾಜಾಲವಾಗಿ ಹಾರ್ಮೋನಿಯಂ ನುಡಿಸುತ್ತಾ ಮಡಿವಾಳಪ್ಪನ ಪದಗಳನ್ನು ಮೂಲ ಮಟ್ಟುಗಳಲ್ಲಿ ಇವತ್ತಿಗೂ ಹಾಡುತ್ತಾನೆ. ಕಡಕೋಳದಲ್ಲಿ ಜಾತಿ ಕುಲವೆನ್ನದೇ ಮುಸ್ಲಿಂ, ದಲಿತರಾದಿಯಾಗಿ ಎಲ್ಲಾ ಜಾತಿಗಳಲ್ಲೂ ಎಲ್ಲಾ ಓಣಿ ಓಣಿಗಳಲ್ಲೂ ಮಡಿವಾಳಪ್ಪನ ಹಾಡು ಪರಂಪರೆಯನ್ನು ಭಜನೆಗಳ ಮೂಲಕ ವರ್ತಮಾನೀಕರಿಸಿರುವುದು ಅಕ್ಷರಶಃ ಹೆಮ್ಮೆಯ ವಿಷಯ.
ಕಡಕೋಳದಲ್ಲಿ ಮ್ಯಾಲಿಮನಿ ಅಂತಲೇ ಹೆಸರುಳ್ಳ ಪೋಲಿಸ್ ಗೌಡರ ಮನೆತನದ ಭೀಮಾಬಾಯಿ ಎಂಬ ಹೆಣ್ಣುಮಗಳನ್ನು ಗೌಡಪ್ಪ ಸಾಧು ಮದುವೆ ಆಗಿದ್ದರು. ಭೀಮಾಬಾಯಿಯನ್ನು ಹಳ್ಳಿಯ ಮಾತುಗಳಲ್ಲಿ ಭೀಂಬಾಯಿ ಅಂತಲೇ ಕರೆಯಲಾಗುತ್ತಿತ್ತು. ಕಡಕೋಳದ ಬಲವಂತ್ರಾಯಗೌಡ ಮತ್ತು ಗಂಗವ್ವಗೌಡ್ತಿ ಇವರು ಭೀಮಾಬಾಯಿಯ ಅಪ್ಪ ಅವ್ವ. ನಾನು ಚಿಕ್ಕವನಿದ್ದಾಗ ಭೀಂಬಾಯಿಯನ್ನು ನೋಡಿದ್ದೇನೆ. ಬಿಳಿಸೀರೆ ಧರಿಸುತ್ತಿದ್ದ ಭೀಂಬಾಯಿ ಗುರುಪುತ್ರಿ ಆಗಿದ್ದರು. ಸದಾ ತುಂಬಿ ತುಳುಕುವ ಅನ್ನ ಮತ್ತು ಅಕ್ಷರ ಜೋಳಿಗೆ. ಅದು ಸಾಧು ಸದ್ಧರ್ಮದ ಸತ್ಸಂಕಲ್ಪ ಈಡೇರಿಸುವ ದಾಸೋಹ ಸಂತೃಪ್ತಿಯ ಸೂಕ್ಷ್ಮ ಸಂವೇದನೆಯ ಸೋಬತಿ. ಅದು ಶರಣ ಪರಂಪರೆಯು ಆಗಿತ್ತು. ಗೌಡಪ್ಪ ಸಾಧು ಭೀಂಬಾಯಿ ಗಂಡ ಹೆಂಡತಿ ಇಬ್ಬರದು ಶರಣ ಭಕುತಿಯ ದಾಂಪತ್ಯ ಬದುಕು.
ಕೈವಲ್ಯ ವಾಕ್ಯಾಮೃತ ಎಂಬ ಗೌಡಪ್ಪ ಸಾಧುಗಳ ಸಂಪಾದಿತ ಕೃತಿಗೆ ಅನುಭಾವ ಸಾಹಿತ್ಯ ಲೋಕದಲ್ಲಿ ಮಹತ್ವದ ಸ್ಥಾನ ಸಿಗಬೇಕಿದೆ. ಅನಕ್ಷರಸ್ಥನೋರ್ವ ಮೊಟ್ಟ ಮೊದಲ ಬಾರಿಗೆ ತತ್ವಪದ ಸಾಹಿತ್ಯ ಸಂಗ್ರಹದ ಸಾಹಸ ಮೆರೆದಿರುವುದು ಸಾಧಾರಣ ಕಾರ್ಯವೇನಲ್ಲ. ಅಂತೆಯೇ ಅನಕ್ಷರಸ್ಥ ಗೌಡಪ್ಪ ಸಾಧು ಅನುಭಾವಿ ಶರಣನಾಗಿದ್ದನೆಂಬುದು ವಿದ್ವಾಂಸರು ಮರೆಯಬಾರದು. ತತ್ವಪದಗಳ ಸ್ಥಲಕಟ್ಟು ವಿವರ ಮತ್ತು ಹಾಡು ಹುಟ್ಟಿಕೊಂಡ ಸಂದರ್ಭೋಚಿತ ಸನ್ನಿವೇಶಗಳನ್ನು ಗೌಡಪ್ಪ ಸಾಧು ಗುರುತಿಸಿರುವುದು ಉಲ್ಲೇಖನೀಯ.
ಗೌಡಪ್ಪ ಸಾಧು ಮತ್ತು ರಾಮೇಶ್ವರ ಒಡನಾಟ
ಶ್ರೀವೀರೇಶ್ವರ ದೇವರು ಆಗ ಕಡಕೋಳ ಶ್ರೀಮಠದ ಗುರುಗಳಾಗಿದ್ದರು. ಗೌಡಪ್ಪ ಸಾಧು ಕಡಕೋಳದಲ್ಲಿರುವಾಗ ಹೆಚ್ಚುಕಾಲ ಶ್ರೀಮಠದ ಪೌಳಿಯಲ್ಲೇ ಕಳೆಯುತ್ತಿದ್ದರು. ಹಗಲು ರಾತ್ರಿ ಮಡಿವಾಳಪ್ಪನ ಪದಗಳ ಹುಡುಕಾಟ ಮತ್ತು ಹಾಡುಗಾರಿಕೆ ಅವರ ನಿತ್ಯ ಮತ್ತು ನಿರಂತರ ನೆನಪಿನ ಕಾಯಕವಾಗಿತ್ತು. ಅವು ಐವತ್ತರ ದಶಕದ ದಿನಮಾನಗಳು. ಹತ್ತಾರು ಊರುಗಳನ್ನು ತಿರುಗಿ ತಿರುಗಿ ಕಲಿತು ತಂದ ಜ್ಞಾನಭಿಕ್ಷೆಯ ಪದಗಳು ಗೌಡಪ್ಪ ಸಾಧುವಿನ ಜೋಳಿಗೆ ತುಂಬಾ ತುಂಬಿ ತುಳುಕುತ್ತಿದ್ದವು. ಮಡಿವಾಳಪ್ಪನ ಮಠದ ಪೌಳಿಯೊಳಗೆ ಆನಂದದಿಂದ ಅವುಗಳನ್ನು ಹಾಡಿದಾಗ ಗೌಡಪ್ಪ ಸಾಧುಗೆ ಸಿಗುವ ಪರಾತ್ಪರ ಸಂತೃಪ್ತಿ ಅಸೀಮವಾದುದು. ಹೀಗೊಮ್ಮೆ ಹಾಡುತ್ತಿರುವಾಗ ಸಾಲಿಮಾಸ್ತರರೊಬ್ಬರ ಪರಿಚಯವಾಗುತ್ತದೆ.
ಆ ಮಾಸ್ತರರ ಹೆಸರು ಎ. ಕೆ. ರಾಮೇಶ್ವರ. ಅವರು ಕಡಕೋಳಕ್ಕೆ ಹತ್ತಿರದ ಕಣಮೇಶ್ವರ ಗ್ರಾಮದಲ್ಲಿ ಸರಕಾರಿ ಶಾಲೆಯ ಮಾಸ್ತರ. ರಾಮೇಶ್ವರ ವಾರಕ್ಕೊಮ್ಮೆ ಯಡ್ರಾಮಿಗೆ ಹೋಗಿ ತಮ್ಮ ಶಾಲೆಯ ವರದಿಗಳನ್ನು ನೀಡುವುದು ನಿಗದಿಯಾಗಿತ್ತು. ಅವರು ಕಡಕೋಳದ ಮೂಲಕವೇ ನಡಕೊಂಡು ಯಡ್ರಾಮಿಗೆ ಹೋಗುವುದು ರೂಢಿಯಾಗಿತ್ತು. ಹಾಗೆ ಹೋಗುವಾಗ ಕಡಕೋಳ ಶ್ರೀಮಠಕ್ಕೆ ಭೆಟ್ಟಿಕೊಟ್ಟು ಮುರ್ನಾಲ್ಕು ತಾಸು ಒಮ್ಮೊಮ್ಮೆ ಒಂದೆರಡು ದಿನದ ಮಟ್ಟಿಗೆ ವಸ್ತಿ ಮಾಡುತ್ತಿದ್ದರು. ಮಡಿವಾಳಪ್ಪನ ಗದ್ದುಗೆಗೆ ನಮಸ್ಕರಿಸಿ ಚಣಕಾಲ ಅಲ್ಲೇ ಕುಂತರೆ ಅವರಿಗೊಂದು ಬಗೆಯ ಸಮಾಧಾನ. ಮಠದ ದಾಸೋಹದಲ್ಲಿ ಪ್ರಸಾದ ಸೇವಿಸಿ ಶ್ರೀಮಠದ ಗುರುವರ್ಯರಾದ ಶ್ರೀವೀರೇಶ್ವರ ಮಹಾ ದೇವರ ಆಶೀರ್ವಾದ ಪಡಕೊಂಡು ಹೋಗುವುದು ವಾಡಿಕೆಯಾಗಿತ್ತು. ಹಾಗಿರುವಾಗ ಗೌಡಪ್ಪ ಸಾಧು ಹಾಡುತ್ತಿದ್ದ ಪದಗಳನ್ನು ಆಸ್ಥೆಯಿಂದ ಕೇಳುತ್ತಿದ್ದ ರಾಮೇಶ್ವರ ಅವರಿಗೆ ಸಾಧು ಕುರಿತು ಸಹಜ ಆಸಕ್ತಿ ಬೆಳೆಯುತ್ತದೆ.
ಒಂದೆರಡು ತಿಂಗಳಲ್ಲಿ ಗೌಡಪ್ಪ ಸಾಧು ಸಂಕಲ್ಪದ ದಟ್ಟ ಪರಿಚಯವಾಗುತ್ತದೆ. ಸಾಹಿತ್ಯದ ಒಲವನ್ನು ಹೊಂದಿದವರಲ್ಲದೇ ಸಾಹಿತಿಯೇ ಆಗಿದ್ದ ರಾಮೇಶ್ವರರು ಗೌಡಪ್ಪ ಸಾಧುಗಳ ಬದ್ಧತೆಗೆ ಮಾರು ಹೋಗುತ್ತಾರೆ. ಅಕ್ಷರಗಳ ಪರಿಚಯವಿಲ್ಲದ ಸಾಧುವಿನ ಪದಗಳ ಸಂಗ್ರಹ ಕಾರ್ಯದ ವೈಖರಿ ಅಗಾಧವೆನಿಸಿ ಅವರಿಗೆ ಅಕ್ಷರಗಳ ಕಲಿಸುವಿಕೆಯಿಂದ ಅದು ಸರಳವಾಗಬಹುದೆಂದು ಕಾರ್ಯ ಪ್ರವೃತ್ತರಾಗುತ್ತಾರೆ. ತನ್ಮೂಲಕ ಗೌಡಪ್ಪ ಸಾಧು ಸಾಕ್ಷರಲೋಕಕ್ಕು ಕಾಲಿಡುತ್ತಾರೆ. ಅವರ ಹಸ್ತಾಕ್ಷರಗಳು ಇವತ್ತಿಗೂ ಶ್ರೀಮಠದ ಡಾ. ರುದ್ರಮುನಿ ಶಿವಾಚಾರ್ಯ ಬಳಿ ದೊರಕುತ್ತವೆ.
ಅಷ್ಟೊತ್ತಿಗಾಗಲೇ ಇನ್ನೂರಕ್ಕೂ ಹೆಚ್ಚು ತತ್ವಪದಗಳು ಗೌಡಪ್ಪ ಸಾಧುಗಳ ಸಿರಿ ಕಂಠದ ಜೋಳಿಗೆಯಲ್ಲಿ ಜಮಾ ಆಗಿರುತ್ತವೆ. ಹೇಗಾದರೂ ಮಾಡಿ ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಸದಿಚ್ಛೆ ಇಬ್ಬರಲ್ಲೂ ಉಂಟಾಗುತ್ತದೆ. ಕೆಲವು ಪದಗಳನ್ನು ರಾಮೇಶ್ವರ ಮಾಸ್ತರ ಗೌಡಪ್ಪ ಸಾಧು ಹಾಡುವುದನ್ನು ಕೇಳುತ್ತಲೇ ಅಕ್ಷರ ರೂಪಕ್ಕೆ ತರುತ್ತಾರೆ. ಆ ಕಾಲದಲ್ಲೇ ಯಾದಗಿರಿಯಲ್ಲಿ ಮೊಳೆ ಜೋಡಿಸುವ ಕೈ ಬೆರಳಚ್ಚಿನ ಮುದ್ರಣಾಲಯ ಇರುವುದನ್ನು ರಾಮೇಶ್ವರ ಮಾಸ್ತರ ತಿಳಿದಿದ್ದರು.
ಶಹಾಪುರ ತಾಲೂಕಿನ ನಾಯ್ಕಲ್ ಮೂಲದವರಾದ ರಾಮಗಿರಿ ಹಿರೇಮಠದ ಪಂಡಿತ ಜಿ. ಎಂ. ಗುರುಸಿದ್ಧಶಾಸ್ತ್ರಿಗಳು ೧೯೨೬ ರ ಸುಮಾರಿಗೆ ಯಾದಗಿರಿಯಲ್ಲಿ ಶಂಕರಾನಂದ ಮುದ್ರಣಾಲಯ ಮತ್ತು ಸಂಸ್ಕೃತ ಪಾಠಶಾಲೆ ನಡೆಸುತ್ತಿದ್ದರು. ಅಷ್ಟಕ್ಕೂ ಗೌಡಪ್ಪ ಸಾಧು ಅದೇ ತಾಲೂಕಿನ ಅಳ್ಳೊಳ್ಳಿ ಎಂಬ ಹಳ್ಳಿಯವರು. ಪ್ರಾಯಶಃ ಶಾಸ್ತ್ರೀಯವರ ಪರಿಚಯ ಸಾಧುಗೆ ಇದ್ದಿರಬಹುದು. ಇವತ್ತಿಗೂ ಯಾದಗಿರಿಯಲ್ಲಿ ಶಾಸ್ತ್ರಿಗಳು ಸ್ಥಾಪಿಸಿದ ಮುದ್ರಣಾಲಯವಿದ್ದು ಇನ್ನೇನು ಕೇವಲ ಮೂರು ವರ್ಷ ಕಳೆದರೆ ಅದಕ್ಕೆ ನೂರು ವರ್ಷ ತುಂಬುವ ಶತಮಾನೋತ್ಸವದ ಸಂಭ್ರಮ. ಕಡಕೋಳ ಮಡಿವಾಳಪ್ಪನವರ ಅತ್ಯಧಿಕ ಸಂಖ್ಯೆಯ ತತ್ವಪದಗಳನ್ನು ಮೊದಲ ಸಲ ಮುದ್ರಿಸಿದ ಮೇರುಕೀರ್ತಿ ಶತಮಾನದ ಶಂಕರಾನಂದ ಮುದ್ರಣಾಲಯಕ್ಕೆ ಸಲ್ಲುತ್ತದೆ.
ಈಡೇರಿದ ಸಾಧುಸಂಕಲ್ಪ
ರಾಮೇಶ್ವರ ಮಾಸ್ತರ ಮತ್ತು ಗೌಡಪ್ಪ ಸಾಧು ಇಬ್ಬರೂ ಸೇರಿಕೊಂಡು ಯಾದಗಿರಿಗೆ ಬರುತ್ತಾರೆ. ಗುರುಸಿದ್ದಶಾಸ್ತ್ರಿಗಳಿಗೆ ಭೆಟ್ಟಿಮಾಡಿ ಮಡಿವಾಳಪ್ಪನ ತತ್ವಪದಗಳ ಪುಸ್ತಕ ಪ್ರಕಟಣೆಗೆ ಭಿನ್ನವಿಸಿಕೊಳ್ಳುತ್ತಾರೆ. ಹತ್ತಾರು ವರ್ಷಗಳಿಂದ ಕಷ್ಟಪಟ್ಟು ಕೂಡಿಟ್ಟಿದ್ದ ಎರಡು ನೂರಾ ಎಂಬತ್ತು ರೂಪಾಯಿಗಳನ್ನು ಗುರುಸಿದ್ದಶಾಸ್ತ್ರಿಗಳ ಉಡಿಗೆ ಹಾಕಿ ಅವರಿಗೆ ಸಾಷ್ಟಾಂಗ ಹಾಕಿದ ಗೌಡಪ್ಪ ಸಾಧು " ನನ್ನ ಬಲ್ಲೇಕ ಇದ್ದುದು ಇಷ್ಟೇ ರೊಕ್ಕ ಈ ಪುಸ್ತಕ ಮುದ್ರಿಸಿ ಕೊಡಬೇಕೆಂದು " ಸೆರಗೊಡ್ಡಿದಂತೆ ಬೇಡಿಕೊಳ್ಳುತ್ತಾರೆ. ಶಾಸ್ತ್ರಿಗಳಿಗೆ ಗೌಡಪ್ಪ ಸಾಧುಗಳ ಹಾಲತ್ ಅರ್ಥವಾಗುತ್ತದೆ. ಅವರ ಕಾಳಜಿ ಶಾಸ್ತ್ರೀಯವರಲ್ಲಿ ಪ್ರೀತಿಯ ಬುಗ್ಗೆ ಹುಟ್ಟಿಸುತ್ತದೆ.
ಶಾಸ್ತ್ರಿಗಳು ಅದು ತನ್ನ ಸಾಂಸ್ಕೃತಿಕ ಕರ್ತವ್ಯ ಎಂಬಂತೆ ಪುಸ್ತಕಕ್ಕೆ "ಕೈವಲ್ಯ ವಾಕ್ಯಾಮೃತ" ಎಂಬ ಹೆಸರಿಡುತ್ತಾರೆ. ಅಂದಿನ ತಮ್ಮ ವಿವೇಚನೆಗೆ ಒಪ್ಪ ಓರಣವೆನಿಸುವ ಮತ್ತು ಅರ್ಥಪೂರ್ಣವಾದ ಮುನ್ನುಡಿ ಬರೆದು ವಿದ್ವಜ್ಜನ ವಿಧೇಯ ಎಂಬ ತಮ್ಮ ಹೆಸರಿನ ಮೇಲೆ ಬರೆದು ವಿನಯವಂತಿಕೆ ತೋರುತ್ತಾರೆ. ಅದು ಅವರು ಮಡಿವಾಳ ಶಿವಯೋಗಿಗಳ ಕುರಿತು ಹೊಂದಿದ ಅಪಾರ ಪ್ರೀತಿ ಗೌರವಗಳ ಪ್ರತೀಕ ವಾಗಿದೆ. ಗೌಡಪ್ಪ ಸಾಧು ಸಂಗ್ರಹಿಸಿದ ಪದಗಳ ಮೇಲಿನ ಪ್ರೀತಿಯ ದ್ಯೋತಕವೂ ಹೌದು. ತತ್ವಪದಗಳ ಶ್ರೇಣಿಕರಣ ಮತ್ತು ಸ್ಥಲಕಟ್ಟುವಿವರ, ಮಂಗಳಾರತಿ ಹಾಗೂ ನಾಮಾವಳಿ, ಗಾಳಿಪೂಜೆ ವಚನಗಳನ್ನು ಪ್ರಕಟಿಸುವಾಗ ಪರಿವಿಡಿಯಂತೆ ಅಂದಿನ ರೀತಿ ರಿವಾಜುಗಳನ್ನು ಅನುಸರಿಸಿರಬಹುದು. ಇವತ್ತಿಗೂ ಈ ಎಲ್ಲ ಸವಿವರಗಳನ್ನು ತೊಂಬತ್ತರ ಏರುಪ್ರಾಯದ ಎ. ಕೆ. ರಾಮೇಶ್ವರ ಮಾಸ್ತರರು ತಮ್ಮ ನೆನಪಿನ ಬುತ್ತಿಯಂತೆ ಸ್ಮರಿಸಿಕೊಳ್ಳುತ್ತಾರೆ.
ಗೌಡಪ್ಪ ಸಾಧುಗೆ ತಮ್ಮಬದುಕಿನ ಮಹತ್ತರ ಕಾರ್ಯ "ಕೈವಲ್ಯ ವಾಕ್ಯಾಮೃತದ" ಮೂಲಕ ಈಡೇರಿದ ಸಂತಸ. ಪ್ರಾಯಶಃ ತನ್ನ ಕೆಲಸ ಮುಗಿದಾದ ಮೇಲೆ ಬಹಳ ಕಾಲ ಅವರು ಬದುಕಲಿಲ್ಲ. ಮಡಿವಾಳಪ್ಪನವರು ಮೊಟ್ಟಮೊದಲ ಬಾರಿಗೆ ಬಂದು ಕೆಲಕಾಲ ವಿರಮಿಸಿದ ಜೆಂಬೇರಾಳದ ಜಂಬುಲಿಂಗನ ನೆಲದೆಡೆಗೆ ಅವರ ಹಂಬಲ ಹೆಚ್ಚುತ್ತದೆ. ಮಡಿವಾಳಪ್ಪನ ಕಾಲದ ರಘುವಪ್ಪಗೌಡರ ಊರು ಬೇರೆ. ಅಲ್ಲಿ ಗೌಡಪ್ಪ ಸಾಧು ಹೊಲವನ್ನು ಪಡೆದಿರುತ್ತಾರೆ. ತಾವು ಬದುಕಿರುವಾಗಲೇ ತಮ್ಮ ಸಿದ್ದಿ ಸಾಧನೆಯ ನೆಲಗವಿಯನ್ನು ಕಟ್ಟಿಸಿ ಕೊಳ್ಳುತ್ತಾರೆ.
ಶರಣ ಬಾಳಿನ ಸಾರ್ಥಕ್ಯ ಬದುಕಿದ ಸಮಾಧಾನದೊಂದಿಗೆ ಗೌಡಪ್ಪ ಸಾಧುಗಳು ದಿನಾಂಕ : 13-07-1958 ರಂದು ಶಿವಾಧೀನರಾಗುತ್ತಾರೆ. ಅವರ ತರುವಾಯ ಅವರ ಪತ್ನಿ ಭೀಮಾಬಾಯಿ 1974ರಲ್ಲಿ ಶಿವೈಕ್ಯರಾಗುತ್ತಾರೆ. ಅವರು ಸಮಾಧಿಸ್ಥರಾದ ಗವಿ ಕಡಕೋಳದಿಂದ ಹರದಾರಿ ದೂರದ ಜೆಂಬೇರಾಳದಲ್ಲಿದೆ. ನಿವೃತ್ತ ಪೊಲೀಸ್ ಉದ್ಯೋಗಿ ಶಿವರಾಯಗೌಡ ಅವರ ಪತ್ನಿ ಶರಣಮ್ಮ, ಗೌಡಪ್ಪ ಸಾಧು ಅವರ ದತ್ತುಪುತ್ರಿ. ಸಾಧುಗಳ ತರುವಾಯ ಶಿವರಾಯಗೌಡ ತಾನು ಬದುಕಿರುವತನಕ ಸಾಧು ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನೆರವೇರಿಸುತ್ತಿದ್ದುದನ್ನು ಅವರ ಸುಪುತ್ರ ದಶರಥರಾಯ ಸ್ಮರಿಸಿಕೊಳ್ಳುತ್ತಾರೆ.
ಗೌಡಪ್ಪ ಸಾಧು ವಿರಚಿತ "ಕೈವಲ್ಯ ವಾಕ್ಯಾಮೃತ" ಕೃತಿಯ ಮರು ಮುದ್ರಣವನ್ನು ಕಡಕೋಳ ಶ್ರೀಮಠದ ಪೂಜ್ಯರಾದ ಡಾ. ಷ. ಬ್ರ. ರುದ್ರಮುನಿ ಶಿವಾಚಾರ್ಯರು1994 ಮತ್ತು 2003 ರಲ್ಲಿ ಎರಡು ಆವೃತ್ತಿಗಳನ್ನು ಶ್ರೀವೀರೇಶ್ವರ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಅನೇಕ ಮಂದಿ ಸಂಶೋಧನಾರ್ಥಿಗಳಿಗೆ ಗೌಡಪ್ಪ ಸಾಧು ಸಂಪಾದಿಸಿದ ಕೈವಲ್ಯ ವಾಕ್ಯಾಮೃತ ಆಕರ ಗ್ರಂಥವಾಗಿದೆ. ಅಷ್ಟು ಮಾತ್ರವಲ್ಲದೆ ಅನೇಕ ಮಂದಿ ಪ್ರಕಾಶಕರು ಗೌಡಪ್ಪ ಸಾಧು ಸಂಗ್ರಹಿಸಿದ ಕೈವಲ್ಯ ವಾಕ್ಯಾಮೃತದ ಕಡಕೋಳ ಮಡಿವಾಳಪ್ಪನವರ ತತ್ವಪದಗಳನ್ನು ಮರು ಮುದ್ರಣ ಮಾಡಿದ್ದಾರೆ. ಆ ಮೂಲಕ ಗೌಡಪ್ಪ ಸಾಧುಗಳು ಹಾಕಿಕೊಟ್ಟ ಭಜನಾ ಪರಂಪರೆಯನ್ನು ಕಲ್ಯಾಣ ಕರ್ನಾಟಕ ಮಾತ್ರವಲ್ಲದೇ ಸಮಗ್ರ ಕರ್ನಾಟಕದಾದ್ಯಂತ ಕಡಕೋಳ ನೆಲಮೂಲದ ಭಜನಾ ಪರಂಪರೆಯ ಜನಸಂಸ್ಕೃತಿ ಮೆರೆಯಲಾಗಿದೆ.
ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
"ಮನುಶ್ಯ ಪ್ರಾಣಿಗೆ ಯಾವುದೊ ಒಂದು ಕಾಲದಲ್ಲಿ ಬಾಶೆ ಎಂಬ ಶಕ್ತಿ ದಕ್ಕಿತು. ಹೀಗಾಗಿ ಬಾಶೆ ಪ್ರಾಕ್ರುತಿಕವೂ ಅಹುದು ಅ...
"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿ...
©2024 Book Brahma Private Limited.