ಅನಂತಮೂರ್ತಿಯವರ ‘ಸಂಸ್ಕಾರ’ : ಬದುಕಿನ ಭಿನ್ನ ಮುಖಗಳ ಅನಾವರಣ

Date: 31-07-2021

Location: ಬೆಂಗಳೂರು


ಸನಾತನ ಧರ್ಮದ ನಂಬಿಕೆಗಳೊಂದಿಗೆ ಘರ್ಷಣೆಗಳಿಗೆ ಇಳಿಯುತ್ತಲೇ ಸಂಕೀರ್ಣ ವ್ಯವಸ್ಥೆಯ ಚಿತ್ರಣ ನೀಡುವ ಕಾದಂಬರಿ-ಸಂಸ್ಕಾರ. ಸಿನಿಮಾ ಆದ ಈ ಕಾದಂಬರಿಯು, ಮಾಧ್ಯಮಗಳಲ್ಲಿಯ ವಾಗ್ವಾದಗಳ ಮಧ್ಯೆಯೂ ಅಪಾರ ಜನಮೆಚ್ಚುಗೆ ಪಡೆಯಿತು. ಕೃತಿ ರಚನೆಯ ವಸ್ತು, ವಿನ್ಯಾಸ ಕುರಿತು ಸ್ವತಃ ಲೇಖಕ ಡಾ. ಯು.ಆರ್. ಅನಂತಮೂರ್ತಿ ಅವರ ಅಭಿಪ್ರಾಯಗಳೂ ಒಳಗೊಂಡಂತೆ ಲೇಖಕ ಶ್ರೀಧರ ಹೆಗಡೆ ಭದ್ರನ್ ಅವರು ತಮ್ಮ ಬದುಕಿನ ಬುತ್ತಿ ಅಂಕಣದಲ್ಲಿ ವಿಶ್ಲೇಷಣೆಗೆ ಒಳಪಡಿಸಿದ ಪರಿ.

ಕಳೆದ ಶತಮಾನದ ಅರುವತ್ತರ ದಶಕದಲ್ಲಿ ಪ್ರಕಟವಾಗಿ ಹಲವು ವಾಗ್ವಾದ, ವಾಗ್ಯುದ್ಧಗಳಿಗೆ ಕಾರಣವಾದ ‘ಸಂಸ್ಕಾರ’ , ಡಾ. ಯು. ಆರ್. ಅನಂತಮೂರ್ತಿಯವರ ತುಂಬಾ ಪ್ರಭಾವಶಾಲಿ ಕಾದಂಬರಿ. ಅದುವರೆಗಿನ ಕಾದಂಬರಿಗಳಿಗಿಂತ ತೀವ್ರವಾದ ವೈಚಾರಿಕ ತೀಕ್ಷ್ಣತೆ ಹಾಗೂ ಘಟನೆಗಳ ಸಂಕೀರ್ಣತೆಗಳಿಂದ ಮೂಡಿಬಂದ ‘ಸಂಸ್ಕಾರ’ ಒಟ್ಟಾರೆ ಪರಿಣಾಮದಲ್ಲಿ, ಸಮಕಾಲೀನ ಸಾಹಿತ್ಯ ಜಗತ್ತಿನಲ್ಲಿ ವಿಶೇಷವಾದ ಸ್ಥಾನ ಪಡೆಯಲು ಸಾಧ್ಯವಾಯಿತು. ಕಾದಂಬರಿಯ ಹೆಸರೇ ಹೇಳುವಂತೆ ‘ಸಂಸ್ಕಾರ’ ಇಲ್ಲಿನ ಪ್ರಧಾನ ವಸ್ತು. ಸನಾತನ ಧರ್ಮವೇ ತನ್ನ ಜೀವನದ ಉಸಿರು ಎಂದು ಬಲವಾಗಿ ನಂಬಿದ್ದ ಪ್ರಾಣೇಶಾಚಾರ್ಯ ಹಾಗೂ ಧಾರ್ಮಿಕ ಅಂಧವಿಶ್ವಾಸಗಳನ್ನೆಲ್ಲ ಗಾಳಿಗೆ ತೂರಿ ಧರ್ಮ ಭ್ರಷ್ಟನಾಗಿ, ಲಂಪಟನಾಗಿ ಬದುಕಿದ ನಾರಣಪ್ಪ; ಈ ಇಬ್ಬರ ಸಂಸ್ಕಾರಗಳ ನಡುವೆ ನಡೆಯುವ ಸಂಘರ್ಷವೇ ಕೃತಿಯ ಜೀವಾಳ. ಮಲೆನಾಡಿನಿಂದ ಮೈಸೂರಿಗೆ, ಅಲ್ಲಿಂದ ಬರ್ಮಿಂಗ್ ಹ್ಯಾಮ್‌ಗೆ ಚಲಿಸಿದ್ದ ಅನಂತಮೂರ್ತಿಯವರು ಆ ವೇಳೆಗಾಗಲೇ ಪಾಶ್ಚಾತ್ಯ ಸಾಹಿತ್ಯದ ಆಳವಾದ ಅಧ್ಯಯನ ಮಾಡಿದ್ದರು. ಈ ಬೆಳಕಿನಲ್ಲಿ ಅವರು ಕಂಡುಕೊಂಡ ಸತ್ಯವನ್ನು ಹೀಗೆ ನಿರೂಪಿಸಿದ್ದಾರೆ; “ನಮ್ಮ ಸಾಹಿತ್ಯ ದೊಡ್ಡದಾಗಬೇಕಾದರೆ ಪಾಶ್ಚಾತ್ಯ ಪ್ರಭಾವದಿಂದ ದೂರವಾದ ನಮ್ಮ ಸ್ವಂತ ಅನುಭವಗಳನ್ನೇ ಆರಿಸಿಕೊಳ್ಳಬೇಕು. ಆಗ ಮಾತ್ರವೇ ಕೃತಿಯಲ್ಲಿ ಪ್ರಾಮಾಣಿಕತೆ ಸಾಧ್ಯ. ಆದ್ದರಿಂದಲೇ ನಾನು ನನ್ನ ಬಾಲ್ಯದ ಅನುಭವವನ್ನೇ ಅಂದಿನ ಪರಿಸರವನ್ನೇ ಈ ಕಾದಂಬರಿಗೆ ವಸ್ತುವಾಗಿ ಆರಿಸಿಕೊಂಡೆ” . ಹೀಗಾಗಿ ಕಾದಂಬರಿಯಲ್ಲಿ ಮೈಪಡೆದಿರುವುದು; ಮಲೆನಾಡಿನ ಸುಂದರ ಪ್ರಕೃತಿಯ ಒಂದು ಅಗ್ರಹಾರ; ಅಲ್ಲಿಯ ಬ್ರಾಹ್ಮಣಿಕೆ, ಮಡಿವಂತಿಕೆ, ಶಿಷ್ಟಾಚಾರ. ಜೊತೆಗೆ ಅಲ್ಲಿ ಎದುರು ಬದುರಾಗುವ ಧರ್ಮ-ಕರ್ಮಗಳ ತಾಕಲಾಟ– ಈ ಹಿನ್ನೆಲೆಯಲ್ಲಿ ‘ಸಂಸ್ಕಾರ’ ಕಾದಂಬರಿಗೆ ದಕ್ಕಿರುವ ಪ್ರಾದೇಶಿಕ ಸ್ಪರ್ಶ ಅನನ್ಯವಾದುದು. ದೂರ್ವಾಸಪುರ ಅಗ್ರಹಾರ - ಕಥನದ ಕೇಂದ್ರ. ಅದನ್ನು ಲೇಖಕರು ವರ್ಣಿಸುವುದು ಹೀಗೆ; “ಮಜ್ಜಿಗೆ ಬೀರಿನಲ್ಲಿ ಜಿರಳೆ, ಉಗ್ರಾಣದಲ್ಲಿ ಹೆಗ್ಗಣ; ನಡುಮನೆಯಲ್ಲಿ ಹಗ್ಗದ ಮೇಲೆ ಮಡಿ ಸೀರೆ-ಮಡಿವಸ್ತ್ರ; ಅಂಗಳದಲ್ಲಿ ಒಣಗಲೆಂದು ಚಾಪೆಯ ಮೇಲೆ ಹಾಕಿದ ಹಪ್ಪಳ, ಸಂಡಿಗೆ, ಬಾಳಕದ ಮೆಣಸಿನ ಕಾಯಿ; ಹಿತ್ತಲಿನಲ್ಲಿ ತುಳಸಿ - ಇವು ಅಗ್ರಹಾರದ ಮನೆ ಮನೆಗೂ ಸಾಮಾನ್ಯ”

‘ಸಂಸ್ಕಾರ’ ಕಾದಂಬರಿ ಮೂರು ಹಂತಗಳಲ್ಲಿ ಬೆಳೆಯುತ್ತದೆ; ದೂರ್ವಾಸಪುರ ಅಗ್ರಹಾರದಲ್ಲಿ ಸತ್ತುಬಿದ್ದಿರುವ, ಜಾತಿಯಿಂದ ಬ್ರಾಹ್ಮಣನಾದರೂ ವರ್ತನೆಯಿಂದ ಹಾಗಿರದ ನಾರಣಪ್ಪನ ಸಾವು ಮತ್ತು ಅವನ ಶವ ಸಂಸ್ಕಾರದ ಪ್ರಶ್ನೆ. ಒಂದು ಸಂದರ್ಭದಲ್ಲಿ ನಾರಣಪ್ಪನವಳಾಗಿದ್ದ ಚಂದ್ರಿಯೊಡನೆ ಸಮಾಗಮ ಹೊಂದುವ ಪ್ರಾಣೇಶಾಚಾರ್ಯರಲ್ಲಿ ಉಂಟಾಗುವ ಅನುಭವ ಕ್ರಾಂತಿ ಹಾಗೂ ಇದರ ಪ್ರವಾಹದಲ್ಲಿ ಸಿಕ್ಕು ಕೊಚ್ಚಿಹೋಗಬಹುದಾದರೂ ಹಾಗಾಗದೇ ತನ್ನ ಗತಿ-ಗುರಿಗಳನ್ನು ಕಂಡುಕೊಳ್ಳುವ ಸಾಧನೆ- ಇವು ಮೂರು ಹಂತಗಳು. ಹಾಗೂ ಕಾದಂಬರಿಯಲ್ಲಿ ಘಟಿಸುವ ಮುಖ್ಯ ಘಟನೆಗಳೂ ಹೌದು. ಇದಕ್ಕೆ ಪೂರಕವಾಗಿ ದೂರ್ವಾಸಪುರ ಅಗ್ರಹಾರದ ಬ್ರಾಹ್ಮಣರ ಪತನದ ಚಿತ್ರಣವನ್ನೂ ಕಾದಂಬರಿ ನೀಡುತ್ತಾ ಹೋಗಿದೆ.

ಈಗಾಗಲೇ ಸಿದ್ಧಪಟ್ಟಿರುವಂತೆ ಪ್ರಾಣೇಶಾಚಾರ್ಯ ಸಂಸ್ಕಾರದ ಕೇಂದ್ರ ಪ್ರಜ್ಞೆ ಹಾಗೂ ಕೇಂದ್ರ ಪ್ರತೀಕ. ರೋಗಿಷ್ಠ ಹೆಂಡತಿ ಭಾಗೀರಥಿಯ ಸೇವೆ ಮಾಡುವುದು, ಧರ್ಮಶಾಸ್ತ್ರದ ಅಧ್ಯಯನ, ಪುರಾಣ ಹೇಳುವುದು, ಮಾರುತಿಯ ಆರಾಧನೆ ಮುಂತಾದ ಸಾತ್ವಿಕ ಕ್ರಿಯೆಗಳಲ್ಲೇ ತೊಡಗಿಕೊಂಡಿರುವ ಪ್ರಾಣೇಶಾಚಾರ್ಯರು, ಅವನ್ನೇ ಬಾಳಿನ ಅಸ್ತಿವಾರವನ್ನಾಗಿಸಿಕೊಂಡವರು. ಫಲಾಪೇಕ್ಷೆಯಿಲ್ಲದ ಕರ್ಮ, ಮುಕ್ತಿಮಾರ್ಗ ಮುಂತಾದ ‘ನಿರ್ಜೀವ’ ನಂಬುಗೆಗಳಲ್ಲಿ ಹೂತುಹೋಗಿದ್ದಾರೆೆ. ಅವರಲ್ಲಿ; ಹೆಂಡ ಕುಡಿಯುವ, ಮಾಂಸ ತಿನ್ನುವ, ಸೂಳೆ ಚಂದ್ರಿಯೊಂದಿಗೆ ಇರುವ, ಒಟ್ಟಿನಲ್ಲಿ ಚಂಡಾಲನಾಗಿ ಬದುಕುತ್ತಿರುವ ನಾರಣಪ್ಪನನ್ನು ಗೆದ್ದೇ ತೀರುವೆನೆಂಬ ಅದಮ್ಯ ಹಠವಿದೆ. ವೈಯಕ್ತಿಕ ಮೌಲ್ಯವನ್ನು ಸಾರ್ವತ್ರೀಕರಿಸುವ ಭಯಂಕರ ಉತ್ಸಾಹವಿದೆ. ಇದಕ್ಕೆ ಪ್ರತಿಸ್ಪರ್ಧಿಯಾಗಿ ಒದಗಿರುವ ನಾರಣಪ್ಪನ ಮೂಲಕ ಸಮಾಜದ ಅವನತಿಯನ್ನು ಕಾಣಿಸುವ ಕಾರ್ಯವನ್ನು ಲೇಖಕರು ಮಾಡಿದ್ದಾರೆ. ಒಂದೆಡೆ, ನಾರಣಪ್ಪ ವ್ಯಂಗ್ಯವಾಗಿ ಪ್ರಾಣೇಶಾಚಾರ್ಯರಿಗೇ ಸವಾಲು ಹಾಕುವ ರೀತಿಯಲ್ಲಿ ಹೇಳುತ್ತಾನೆ; “ನನ್ನ ದುಃಖವೆಂದರೆ, ನಾಶ ಮಾಡೋಕ್ಕೆ ಅಗ್ರಹಾರದಲ್ಲಿ ಬ್ರಾಹ್ಮಣ್ಯವೇ ಉಳಿದಿಲ್ಲವಲ್ಲಾಂತ...ನಿಮ್ಮೊಬ್ಬರನ್ನು ಬಿಟ್ಟರೆ” ಇಲ್ಲಿ ನಾರಣಪ್ಪನಿಗಿದ್ದ ಬ್ರಾಹ್ಮಣ್ಯವನ್ನು ಹಾಳು ಮಾಡಲೇಬೇಕೆಂಬ ಉದ್ದೇಶ ಅನಾವರಣವಾಗುತ್ತದೆ. ಆದರೆ ಅದಕ್ಕೆ ಸವಾಲಾಗಿರುವವರು ಪ್ರಾಣೇಶಾಚಾರ್ಯರು. ಅವರು ಸಂಸ್ಕಾರದ ಪ್ರತೀಕವಾಗಿದ್ದಾರೆ. ಸ್ವಭಾವದ ಪ್ರತೀಕವಾಗಿ ನಾರಣಪ್ಪನಿದ್ದಾನೆ. ಕಾದಂಬರಿ ಆರಂಭವಾಗುವಾಗಲೇ ನಾರಣಪ್ಪ ಸತ್ತು ಹೋಗಿದ್ದರೂ ಇಡೀ ಕೃತಿಯ ತುಂಬ ಆತ ವ್ಯಾಪಿಸಿಕೊಳ್ಳುತ್ತಾನೆ.

ಸತ್ತು ಬಿದ್ದಿರುವ ನಾರಣಪ್ಪನ ಶವವನ್ನು ಯಾರು ಸಂಸ್ಕಾರ ಮಾಡಬೇಕು? ಧರ್ಮಶಾಸ್ತ್ರದಲ್ಲಿ ಇದಕ್ಕೆ ಪರಿಹಾರವಿದೆಯೇ? ಎಂಬ ಪ್ರಶ್ನೆಯಿಂದಲೇ ಕಾದಂಬರಿ ಪ್ರಾರಂಭವಾಗುತ್ತದೆ. ಪ್ರಾಣೇಶಾಚಾರ್ಯರಲ್ಲಿ ಹುಟ್ಟಿದ ಪ್ರಶ್ನೆಗೆ ಬಾಲ್ಯ ಸ್ನೇಹಿತ ಮಹಾಬಲನ ನೆನಪೂ ಸೇರಿ ಪ್ರಶ್ನೆ ಇನ್ನಷ್ಟು ಬಿಗಿಯಾಗುತ್ತದೆ. ಧರ್ಮಶಾಸ್ತ್ರಗಳಿಂದ, ಮಾರುತಿಯಿಂದ ಪ್ರಶ್ನೆಗೆ ಉತ್ತರ ಸಿಗದೆ ಆಚಾರ್ಯರು ತತ್ತರಿಸುತ್ತಾರೆ. ಅಲ್ಲಿಗೆ ಗೆದ್ದವನು ನಾರಣಪ್ಪನೇ. ಈ ವಿಚಾರ ಅವನಿಗೆ ಪರಮಾತ್ಮನ ಸ್ಪರ್ಶವಾಗಿರಬಹುದೇ ಎಂಬ ಊಹೆಯವರೆಗೆ, ಅವನ ಅಂತಃಪ್ರಾಣದ ಸಾಧನೆಯ ಬಗ್ಗೆ ಮಾತನಾಡುವವರೆಗೆ ಬೆಳೆಯುತ್ತದೆ. ಇಲ್ಲಿಯೇ ಮೂಲ ಪ್ರಶ್ನೆಗೆ ಇನ್ನೊಂದು ಆಯಾಮ ಹುಟ್ಟುವುದು; ಹಾಗಾದರೆ ಯಾರದು ನಿಜವಾದ ‘ಸಂಸ್ಕಾರ’?

ಕತೆಯ ಎರಡನೆಯ ಹಂತದಲ್ಲಿ; ಪ್ರಾಣೇಶಾಚಾರ್ಯ ಹಾಗೂ ನಾರಣಪ್ಪನ ವೇಶ್ಯೆ ಚಂದ್ರಿಯ ಸಮಾಗಮವಾಗುತ್ತದೆ. ಯಾರು ನಾರಣಪ್ಪನ ಶವ ಸಂಸ್ಕಾರ ಮಾಡಬೇಕು ಎಂಬ ಧಾರ್ಮಿಕ ಚರ್ಚೆ ನಡೆಯುತ್ತಲೇ ಇದೆ; ಗ್ರಂಥಗಳು ಕೈಕೊಟ್ಟಾಗ ಪ್ರಾಣೇಶಾಚಾರ್ಯರು ಜನಪದೀಯ ಆಚರಣೆಯಾಗಿ ಮಾರುತಿಯ ಮೊರೆ ಹೋಗಿದ್ದಾರೆ. ಹೂ ಬಲಕ್ಕೆ ಬರುತ್ತದೋ ಎಡಕ್ಕೋ ಎಂಬ ಜಿಜ್ಞಾಸೆಯಲ್ಲಿ ಮುಳುಗಿ ಅಲ್ಲಿಯೂ ಸೋಲುತ್ತಾರೆ. ಹನುಮ ತಟಸ್ಥನಾಗಿದ್ದಾನೆ. ‘ಧರ್ಮಶಾಸ್ತ್ರದಲ್ಲೂ ನನಗೆ ಉತ್ತರ ಸಿಗಲಿಲ್ಲ, ನಿನ್ನಿಂದಲೂ ಸಿಗಲಿಲ್ಲ-ನಾನು ಅಪಾತ್ರನೇನು ಹಾಗಾದರೆ’ ಎಂದು ಪ್ರಾಣೇಶಾಚಾರ್ಯರು ಆರ್ತರಾಗುತ್ತಾರೆ, ಸಂಶಯಪಡುತ್ತಾರೆ. ಹೆಂಡತಿಗೆ ಔಷಧ ನೀಡುವ ಸಮಯದ ನೆನಪಾಗಿ ಹೊರಡುತ್ತಾರೆ. ದಾರಿಯಲ್ಲಿ ನಾರಣಪ್ಪನ ಸೂಳೆ ಚಂದ್ರಿಯನ್ನು ಸಂಧಿಸುತ್ತಾರೆ. ಹಲವು ವರ್ಷಗಳಿಂದ ತಡೆದುಕೊಂಡಿದ್ದ ಲೈಂಗಿಕ ಸಂಯಮದ ಕಟ್ಟೆಯೊಡೆದು ಅವಳನ್ನು ಕೂಡುತ್ತಾರೆ. ಲೇಖಕರ ಗ್ರಹಿಕೆಯಂತೆ; ಪ್ರಾಣೇಶಾಚಾರ್ಯರ ಪ್ರಜ್ಞಾಪೂರ್ಣ ಹೊಸ ಹುಟ್ಟು ಆ ಕ್ಷಣದಿಂದಲೇ ಆರಂಭವಾಗುತ್ತದೆ. ತಾನೂ ನಾರಣಪ್ಪನ ಜ್ಞಾತಿಯಾದೆನೆಂಬ ಭಾವ ಬಲಿತು, ನಾರಣಪ್ಪನ ಶವ ಸಂಸ್ಕಾರವನ್ನು ತಾವೇ ಮಾಡಲು ಮುಂದಾಗುತ್ತಾರೆ. ಒಂದು ರೀತಿಯಲ್ಲಿ ಅಗ್ರಹಾರಕ್ಕೆ ದಾರಿ ತೋರುವ ಅರ್ಹತೆಯನ್ನು ತಾನೀಗ ಕಳೆದುಕೊಂಡಿದ್ದೇನೆ ಎಂಬ ಅರಿವು ಮೂಡುತ್ತದೆ. ಶವ ಸಂಸ್ಕಾರದ ತೀರ್ಮಾನವನ್ನು ತಮ್ಮ ಮಠದ ಗುರುಗಳಿಗೆ ಒಪ್ಪಿಸುವ ಮೂಲಕ ಪ್ರಾಣೇಶಾಚಾರ್ಯರು ತಮ್ಮ ಜವಾಬ್ದಾರಿಯಿಂದ ಮುಕ್ತರಾಗುತ್ತಾರೆ. ಹೀಗಿರುವಾಗಲೇ ಆ ಪಾಖಂಡಿ ಬ್ರಾಹ್ಮಣ ಮಿತ್ರನ ಶವವನ್ನು ಮುಸ್ಲಿಂ ಸ್ನೇಹಿತರು ಸೇರಿ ರಾತ್ರಿ ಗುಟ್ಟಾಗಿ ಒಯ್ದು ಯಾವ ವಿಧಾನವೂ ಇಲ್ಲದೇ ಸುಟ್ಟು ಹಾಕುತ್ತಾರೆ. ಅಲ್ಲಿಗೆ ಎರಡೂ ‘ಸಂಸ್ಕಾರ’ಗಳೂ ಈಡೇರಿದಂತಾಗಿದೆ.

ಚಂದ್ರಿಯೊಡನೆ ಕೂಡಿದ ಪ್ರಾಣೇಶಾಚಾರ್ಯ ಎಂದೂ ಕಾಣದ ಸುಖಾನುಭವ ಪಡೆಯುತ್ತಾನೆ. ಆ ಕ್ಷಣ ಅಲ್ಲಿ ಯಾವ ಪಾಪಪ್ರಜ್ಞೆಯೂ ಇಲ್ಲ. ಪಾಪಪ್ರಜ್ಞೆ ಮೂಡುವುದು ದೂರ್ವಾಸಪುರದಲ್ಲಿ ‘ವಿದ್ವಾಂಸ’ನೆನಿಸಿಕೊಂಡಿದ್ದು, ‘ಧರ್ಮ’ಪಾಲನೆ ಮಾಡುವ ತಮ್ಮ ‘ಕರ್ತವ್ಯ’ವನ್ನು ನೆನಸಿಕೊಂಡಾಗ. ಅಗ್ರಹಾರದಲ್ಲಿ ತಮಗಿದ್ದ ಗೌರವವನ್ನು ಕಳೆದುಕೊಳ್ಳಬೇಕಾದೀತೆಂಬ ಭಯದಿಂದ ಮನಸ್ಸಿನಲ್ಲಿ ದ್ವಂದ್ವ ಹುಟ್ಟುತ್ತದೆ. ಚಂದ್ರಿಯಲ್ಲಿಯೂ ಅಪರಾಧೀ ಭಾವವಿಲ್ಲ. ಬಹಳ ದಿನಗಳಿಂದ ನಿರೀಕ್ಷಿತ ವಾಸ್ತವವನ್ನು ತಲುಪಿದ ಸಮಾಧಾನವೇ ಇದ್ದಂತೆ. ಇಲ್ಲಿಂದ ಪ್ರಾಣೇಶಾಚಾರ್ಯರು ಬದುಕನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಚಂದ್ರಿಯ ಸಹವಾಸ ಅವರ ಮೇಲೆ ಎಷ್ಟು ಪ್ರಭಾವ ಬೀರಿದೆಯೆಂದರೆ; ಅವಳೊಡನೆ ಸಂಸಾರ ಹೂಡುವ ಆಸೆ ಬರುವಷ್ಟು! ಇದಕ್ಕೆ ಪೂರಕವೋ ಎಂಬಂತೆ; ಹೆಂಡತಿ ಭಾಗೀರಥಿ, ಪ್ಲೇಗ್ ಬಂದು ಸಾಯುತ್ತಾಳೆ. ಚಂದ್ರಿಯೊಡನೆ ಒಂದಾದ ಮೇಲೆ ಹೆಂಡತಿಯ ಅಸ್ತಿತ್ವವೇನು? ಎಂಬುದರ ಜೊತೆಗೆ; ಪ್ರಾಣೇಶಾಚಾರ್ಯರು ಒತ್ತಾಯಪೂರ್ವಕವಾಗಿ ಬಳಸಿಕೊಂಡು ಬಂದಿದ್ದ ಲೈಂಗಿಕ ಸಂಯಮವೂ ನಾಶವಾಗಿ ಅದೊಂದು ಸಾಂಕೇತಿಕ ಕ್ರಿಯೆಯಾಗುತ್ತದೆ.

ಕತೆಯ ಕೊನೆಯ ಭಾಗದಲ್ಲಿ ಪ್ರಾಣೇಶಾಚಾರ್ಯರ ಹೋರಾಟ ಮುಂದುವರಿಯುತ್ತದೆ. ಪ್ರಾಣೇಶಾಚಾರ್ಯರು ತೀವ್ರವಾಗಿ ಅನುಭವಿಸುತ್ತಿದ್ದ ಆಂತರಿಕ ಸಂಘರ್ಷದ ವ್ಯಕ್ತರೂಪ ಇಲ್ಲಿದೆ. ಪಟ್ಟಣಕ್ಕೆ ಹೋಗಿ ಚಂದ್ರಿಯೊಡನೆ ಇದ್ದುಬಿಡುವ ಬಗ್ಗೆ ಗಟ್ಟಿ ತೀರ್ಮಾನಕ್ಕೆ ಬರಬೇಕೆಂದು ಅಂದುಕೊಳ್ಳುತ್ತಾರೆ. ಆದರೆ ಚಂದ್ರಿ, ಆಚಾರ್ಯರ ಗಮನಕ್ಕೆ ಬರದಂತೆ ಊರುಬಿಟ್ಟು ಹೋಗಿಯಾಗಿದೆ. ತನ್ನ ಹಿಂದಿನ ಅಸ್ತಿತ್ವದ ಕಾಳಿಕೆಯನ್ನು ಕಳೆದುಕೊಳ್ಳುವುದು ಎಷ್ಟು ಕಷ್ಟ ಎಂಬ ಅರಿವು ಅವರಿಗೆ ಆಗುತ್ತದೆ. ಹೊರಲೋಕದ ಸೆಳೆತವೂ ಅವರನ್ನು ಆವರಿಸಿಕೊಂಡಿದೆ. ಯಾರಾದರೂ ತಮ್ಮನ್ನು ಗುರುತು ಹಿಡಿದರೆ ಎಂಬ ಆತಂಕವೂ ಕಾಡುತ್ತದೆ. ಅಲೆಮಾರಿ ಮಾಲೇರ ಪುಟ್ಟನ ಸಹವಾಸದಿಂದ ಅಗ್ರಹಾರದ ಕಟ್ಟುನಿಟ್ಟಿನ ಸಂಪ್ರದಾಯದ ಬಂಧನದಿಂದ ಬಿಡುಗಡೆ ಹೊಂದಿ ಹೊರಗಿನ ಸಮಾಜದ ಅನುಭವವನ್ನು ಪಡೆಯುವ ಅವಕಾಶ ದೊರೆಯುತ್ತದೆ. ಪದ್ಮಾವತಿ ಎಂಬ ಮಾಲೇರ ಹೆಣ್ಣಿನ ಪರಿಚಯವೂ ಆಗುತ್ತದೆ. ಹೀಗೆ ಪ್ರಾಣೇಶಾಚಾರ್ಯರು ಹೊಸ ‘ಸಂಸ್ಕಾರ’ ಧಾರಣೆಗೆ ಮುಂದಾಗುತ್ತಾರೆ. ಹೊರಗಿನ ಜಗತ್ತಿನಲ್ಲಿಯ ಕ್ರೌರ್ಯ, ಕಾಮ, ಉದ್ರೇಕಗಳ ಭಯಾನಕ ಅಧೋಲೋಕವನ್ನು ಕಂಡು ಅಪ್ರತಿಭರಾಗುತ್ತಾರೆ. ಈ ನರಕ ಯಾತ್ರೆಯ ಕೊನೆಯಲ್ಲಿ ಸೂತಕದಲ್ಲಿದ್ದುಕೊಂಡೂ ದೇವಸ್ಥಾನದ ಒಳಗೆ ಪ್ರವೇಶಿಸಿ, ಸಮಾರಾಧನೆಯ ಪಂಕ್ತಿಯಲ್ಲಿ ಬ್ರಾಹ್ಮಣರೊಂದಿಗೆ ಕೂತು ಊಟ ಮಾಡಿ ದೇವಾಲಯವನ್ನೂ ಬ್ರಾಹ್ಮಣರನ್ನೂ ಅಶೌಚಗೊಳಿಸುತ್ತಾರೆ. ಇದಾದ ಮೇಲೆ, ‘ಅಗ್ರಹಾರಕ್ಕೆ ಮರಳುತ್ತೇನೆ, ತನ್ನ ಹೊಸ ವ್ಯಕ್ತಿತ್ವದ ಸತ್ಯವನ್ನು ಬ್ರಾಹ್ಮಣರ ಮುಂದೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ’ ಎಂದು ನಿರ್ಧರಿಸುತ್ತಾರೆ. ಅಗ್ರಹಾರದ ಕಡೆಗೆ ಹೊರಟ ಒಂದು ಎತ್ತಿನ ಗಾಡಿಯಲ್ಲಿ ಮರು ಪಯಣ ಪ್ರಾರಂಭಿಸುತ್ತಾರೆ. ‘ನಾಲ್ಕೈದು ಗಂಟೆಗಳ ಪ್ರಯಾಣ...’ ಪ್ರಾಣೇಶಾಚಾರ್ಯರು ನಿರೀಕ್ಷೆ, ಆತಂಕದಲ್ಲಿ ಕಾದರು.

ಪ್ರಾಣೇಶಾಚಾರ್ಯರಲ್ಲಿ ಹೊಸ ಅರಿವು ಹುಟ್ಟುವುದರೊಂದಿಗೆ ಕಾದಂಬರಿ ಪರ್ಯವಸಾನಗೊಂಡಿದೆ. ಇದು ಎಂತಹ ಅರಿವೆಂದರೆ; ‘ಸ್ವೇಚ್ಛೆಯಿಂದ, ಎಚ್ಚರದಲ್ಲಿ, ಪರಿಪೂರ್ಣ ನಿಶ್ಚಯದಲ್ಲಿ ಮಾಡುವ ಕ್ರಿಯೆಯಲ್ಲಿ ಅರ್ಥವಿದೆ, ನಿಜವಾದ ಬಿಡುಗಡೆಯಿದೆ’ ಆಮೂರರು ಹೇಳುವಂತೆ; ಪ್ರೇತತ್ವ, ರಾಕ್ಷಸತ್ವವನ್ನು ದಾಟಿ ಪ್ರಾಣೇಶಾಚಾರ್ಯರು ಮಾನವತ್ವದ ಕಡೆಗೆ ಹೊರಳಿದ್ದಾರೆ.

‘ಸಂಸ್ಕಾರ’ದಲ್ಲಿ ಹಲವು ಸಾಂಕೇತಿಕ ಸಂಗತಿಗಳನ್ನು ಲೇಖಕ ಅನಂತಮೂರ್ತಿ ತಂದಿದ್ದಾರೆ. ನಾರಣಪ್ಪ ‘ಜಾತಿಗೆಟ್ಟ’ ಚಂದ್ರಿಯ ಸಹವಾಸ ಮಾಡುವುದು, ಮುಸ್ಲಿಮರ ಜೊತೆ ಸೇರಿ ಮಾಂಸಾಹಾರ ಮಾಡುವುದು ಬ್ರಾಹ್ಮಣ್ಯ ನಾಶದ ಸಂಕೇತವಾದರೆ; ಪ್ಲೇಗ್‌ನಿಂದ ಕೊಳೆತು ನಾರುತ್ತಿರುವ ಅಗ್ರಹಾರ ಗೊಡ್ಡು ನಂಬಿಕೆಗಳು, ಮೌಢ್ಯದ ಸಂಕೇತವಾಗಿದೆ. ದೂರ್ವಾಸಪುರದಲ್ಲಿ ಘಟಿಸುವ ಸಾವಿನ ಮೆರವಣಿಗೆ ಆ ಸಮುದಾಯದ ಪ್ರಾಧಾನ್ಯದ ನಾಶವನ್ನು ಸೂಚಿಸುವಂತಿದೆ. ಸ್ವತಃ ಪ್ರಾಣೇಶಾಚಾರ್ಯ-ನಾರಣಪ್ಪ ಸಂಸ್ಕಾರದ ಎರಡು ಧ್ರುವಗಳಾಗಿ ಕಾಣಿಸುತ್ತಾರೆ. ಬ್ರಾಹ್ಮಣ-ಬ್ರಾಹ್ಮಣ್ಯಗಳ ಚರ್ಚೆ ನಡೆಯುತ್ತಿರುವ ಸಮಕಾಲೀನ ಸಂದರ್ಭಕ್ಕೂ ‘ಸಂಸ್ಕಾರ’ ಅನನ್ಯವಾಗಿ ಸ್ಪಂದಿಸುತ್ತದೆ.

***

‘ಸಂಸ್ಕಾರ’ ಕಾದಂಬರಿಯ ಮೂಲಬೀಜ ದೂರ್ವಾಸಪುರದ ಅಗ್ರಹಾರದಲ್ಲಿ ಅನಂತಮೂರ್ತಿಯವರು ವಿದ್ಯಾರ್ಥಿಯಾಗಿದ್ದಾಗ ಬರೆದ ಕತೆಯೊಂದರಲ್ಲಿದೆ –ಎಂದಿದ್ದಾರೆ. ಆದರೆ ಆ ಕತೆ ಯಾವ ಸ್ವರೂಪದಲ್ಲಿತ್ತು ಎಂಬುದು ತಿಳಿದುಬರುವುದಿಲ್ಲ. ಈ ಕತೆ ಕಾದಂಬರಿಯಾಗಿ ಬೆಳೆಯುವುದಕ್ಕೆ ಅವರು ನೋಡಿದ ಇಂಗ್‌ಮಾರ್ ಬರ್ಗ್ಮನ್ ನಿರ್ದೇಶನದ ‘ಸೆವೆನ್ತ್ ಸೀಲ್’ ಎಂಬ ಸಿನಿಮಾ ಎಂದು ಅವರೇ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಈ ಕಾದಂಬರಿಯ ಬರಹದ ಬಗ್ಗೆ ಪ್ರಕಾಶಕರಾದ ಜಿ. ಬಿ. ಜೋಶಿಯವರಿಗೆ ಬರ್ಮಿಂಗ್ ಹ್ಯಾಮ್‌ನಿಂದ ಬರೆದ ಪತ್ರದಲ್ಲಿ ಅನಂತಮೂರ್ತಿಯವರು ಹೀಗೆ ತಿಳಿಸಿದ್ದಾರೆ; “ವಾರದ ಹಿಂದೊಂದು ದಿನ ಬೆಳಿಗ್ಗೆ ನಿದ್ದೆಯಿಂದ ಕಣ್ಣು ಬಿಟ್ಟೊಡನೆ ಅಕಸ್ಮಾತ್ ಎಂಬಂತೆ ಹೊಳೆದುಬಿಟ್ಟಿತು. ಎದ್ದವನೇ ಬರೆಯಲು ತೊಡಗಿದೆ. ಥೀಸಿಸ್ಸನ್ನು ಬದಿಗಿಟ್ಟು ಹಗಲು, ರಾತ್ರಿ ಬರೆದೆ, ಬರೆದೆ. ಎರಡು ಸಾರಿ ಬರೆದೆ. ಅಚ್ಚಿನಲ್ಲಿ ಸುಮಾರು ನೂರು ಪುಟಗಳಾಗುವ ಕಾದಂಬರಿಯೋ ನೀಳ್ಗತೆಯೋ ಅಂತೂ ಒಂದು ಕೃತಿ. ಇದು ನಾನು ಈತನಕ ಬರೆದಿದ್ದರಲ್ಲಿ ನನ್ನ ಪಾಲಿಗೆ ಅತ್ಯುತ್ತಮವಾದದ್ದು...ಸಿಂಬಲಿಸಂನಲ್ಲಿ ಮತ್ತು ಕಲೆಯ ಕಟ್ಟಡದಲ್ಲಿ ನನ್ನ ಪ್ರಯೋಗಗಳೆಲ್ಲ, ಅಲ್ಲದೆ ನನ್ನ ತಾತ್ವಿಕ ವಿಚಾರದ ಸರ್ವಸ್ವರೂಪವೆಲ್ಲ ಒಟ್ಟಿಗೆ ಕೂಡಿಬಿಟ್ಟಿತು ಇದರಲ್ಲಿ”-ಎಂದು ವಿವರಿಸಿದ್ದಾರೆ. ಜೊತೆಗೆ ‘ಸಂಸ್ಕಾರ’ವನ್ನು ಬರೆಯುವಾಗ ಇದ್ದ ಅವರ ತಾತ್ವಿಕ ಮಾದರಿಗಳು ಯಾವುವಾಗಿದ್ದವು? ಎಂಬುದಕ್ಕೂ ಒಂದೆಡೆ ಉತ್ತರಿಸಿದ್ದಾರೆ; “ಸಂಸ್ಕಾರವನ್ನು ಬರೆಯುವ ವೇಳೆಗೆ ನನ್ನ ಮೇಲೆ ಅನೇಕರು ಪ್ರಭಾವ ಬೀರಿದ್ದರು. ಜೀನ್ ಪಾಲ್ ಸಾರ್ತ್ರಾ ಒಬ್ಬರು. ನಮ್ಮವರೇ ಆದ ಜೆ. ಕೃಷ್ಣಮೂರ್ತಿ, ಪಾಶ್ಚಾತ್ಯ ತತ್ವಜ್ಞಾನಿಗಳಾದ ಹೆಗಲನೂ ಮಾರ್ಕ್ಸ್ ನೂ ಇನ್ನಿಬ್ಬರು. ಇವರೆಲ್ಲರ ವಿಚಾರ ಮಂಥನ ಮಾಡಿ, ಅದನ್ನು ಅನುಭವದ ಒರೆಗೆ ತಿಕ್ಕಿದಾಗ ಹುಟ್ಟಿದ್ದೇ ‘ಸಂಸ್ಕಾರ’ ಎಂಬುದು” - ವಿಮರ್ಶಕರು ಈ ಎಲ್ಲ ಪ್ರಭಾವಗಳ ಸಾಧ್ಯತೆಯನ್ನು ಕೃತಿಯ ಒಳಗಿನಿಂದಲೇ ಹೆಕ್ಕಿ ತೆಗೆದಿದ್ದಾರೆ.

ಕಾದಂಬರಿಯ ರಾಚನಿಕತೆಯ ಹಿನ್ನೆಲೆಯಲ್ಲಿರುವ ಇನ್ನೊಂದು ಕುತೂಹಲಕಾರೀ ಸಂಗತಿಯನ್ನೂ ಗಮನಿಸಬೇಕು. ಅದೆಂದರೆ; ಮೊದಲು ಹಸ್ತಪ್ರತಿಯನ್ನು ಓದಿದ ಅಡಿಗರ ಸೂಚನೆಯ ಮೇರೆಗೆ ಬೆಳೆಸಿದ ಎರಡನೆಯ ಭಾಗ. ಈ ಬಗ್ಗೆ ಅನಂತಮೂರ್ತಿಯವರು ಹೀಗೆ ಹೇಳಿದ್ದಾರೆ; “ಪ್ರಾಣೇಶಾಚಾರ್ಯರು ಚಂದ್ರಿಯ ಜೊತೆ ಕೂಡುತ್ತಾರೆ. ಅಲ್ಲಿಗೆ ಕಾದಂಬರಿ ಸಾಕು ಅನ್ನಿಸಿತ್ತು. ಆಮೇಲೆ ಎಲ್ಲಿಗೆ ಹೋಗಬೇಕು ಅಂತ ಗೊತ್ತಿಲ್ಲದೆ ಹೊರಡುತ್ತಾರೆ. ‘ನಡೆಯುತ್ತಾರೆ’ ಎಂದು ಬರೆದ ಕೂಡಲೇ ‘ಹಿಂದಿನಿಂದ ಹೆಜ್ಜೆಯ ಸಪ್ಪಳ ಕೇಳಿಸಿತು’ ಎನ್ನುವ ಸಾಲು ಬಹಳ ಅಪ್ರಜ್ಞಾಪೂರ್ವಕವಾಗಿ ಬಂದಿತು. ಬರೆದೆ. ಆಮೇಲೆ ಯೋಚನೆ ಮಾಡಿದೆ. ಹೀಗೆ ಪುಟ್ಟ ಕಥೆಯೊಳಗೆ ಬಂದ. ಬಂದ ಕೂಡಲೇ ಕಾದಂಬರಿ ಮ್ಯಾಜಿಕಲ್ ಆಗಿಬಿಟ್ಟಿತು”. ಈ ವಿವರಗಳು ಲೇಖಕನೊಬ್ಬನಲ್ಲಿ ಸೃಜನಶೀಲತೆ ಹೇಗೆ ಫಲಿಸುತ್ತದೆ ಎಂಬ ಸಂಗತಿಯನ್ನೂ ಸೂಚಿಸುತ್ತದೆ.

ಎ. ಕೆ. ರಾಮಾನುಜನ್ ಅವರಿಂದ ಇಂಗ್ಲಿಷ್ ಭಾಷೆಗೆ ಅನುವಾದಗೊಂಡ ‘ಸಂಸ್ಕಾರ’ ಅಂತಾರಾಷ್ಟ್ರೀಯ ಪ್ರಸಿದ್ಧಿಯನ್ನು ಪಡೆಯಿತು. ಕನ್ನಡದ ಎಲ್ಲ ಮುಖ್ಯ ವಿಮರ್ಶಕರೂ ಈ ಕೃತಿಯ ಬಗ್ಗೆ ಬರೆದಿದ್ದಾರೆ. ಹಲವು ಮಗ್ಗಲುಗಳ ವಿಶ್ಲೇಷಣೆ ನಡೆದಿದೆ. ‘ಸಂಸ್ಕಾರ’ ಹೊಸ ಚರ್ಚೆಗೆ ಹಾದಿಯಾದುದು 1969ರಲ್ಲಿ ಬೆಳ್ಳಿತೆರೆಯ ಮೇಲೆ ಬಂದಾಗ. ಸಂಸ್ಕಾರ ಚಿತ್ರದ ಸಾರ್ವತ್ರಿಕ ಪ್ರದರ್ಶನಕ್ಕೆ ಮದರಾಸಿನ ಪ್ರಾದೇಶಿಕ ಫಿಲ್ಮ್ ಸೆನ್ಸಾರ್ ಮಂಡಳಿ ಅನುಮತಿ ನಿರಾಕರಿಸಿತು. ನಂತರ ಮುಂಬಯಿಯ ಕೇಂದ್ರ ಸೆನ್ಸಾರ್ ಮಂಡಳಿಯೂ ಅದೇ ಅಭಿಪ್ರಾಯವನ್ನು ಎತ್ತಿ ಹಿಡಿಯಿತು. ಈ ಸಂದರ್ಭದಲ್ಲಿ ಉಂಟಾದ ವಾಗ್ವಾದ ಪತ್ರಿಕೆಗಳಲ್ಲಿ ಮುಂದುವರಿಯಿತು. ಈಗ ಕಾದಂಬರಿಯ ಕಡೆಗೆ ಸಮುದಾಯದ ದೃಷ್ಟಿ ಹರಿದು ಒಂದು ಜನ ಸಮುದಾಯವನ್ನು ಅವಹೇಳನ ಮಾಡುತ್ತದೆ ಎಂಬ ಗುಲ್ಲೆದ್ದಿತು. ಒಟ್ಟಿನಲ್ಲಿ ‘ಸಂಸ್ಕಾರ’ ಕಾದಂಬರಿಯ ಜನಪ್ರಿಯತೆಗೆ ಇವೆಲ್ಲವೂ ಪೂರಕವಾಗಿದ್ದು ಐತಿಹಾಸಿಕ ಸತ್ಯ.

ಈ ಅಂಕಣದ ಹಿಂದಿನ ಬರೆಹಗಳು:
ಕಾರ್ನಾಡರ ತುಘಲಕ್: ವರ್ತಮಾನವಾಗುವ ಇತಿಹಾಸದ ತುಣುಕು

ಎಂದಿಗೂ ಮುಪ್ಪಾಗದ ’ಹಸಿರು ಹೊನ್ನು’

ಪ್ರಾದೇಶಿಕತೆಯ ದಟ್ಟ ವಿವರಗಳ-ಮಲೆಗಳಲ್ಲಿ ಮದುಮಗಳು

ಗ್ರಾಮಾಯಣ ಎಂಬ ಸಮಕಾಲೀನ ಪುರಾಣ

ಬದುಕಿನ ದಿವ್ಯದರ್ಶನ ಮೂಡಿಸುವ `ಮರಳಿ ಮಣ್ಣಿಗೆ’

ಮಾಸ್ತಿಯವರ ಕತೆಗಾರಿಕೆಗೆ ಹೊಸ ಆಯಾಮ ದಕ್ಕಿಸಿಕೊಟ್ಟ ಕೃತಿ ‘ಸುಬ್ಬಣ್ಣ’

ಮೈಸೂರ ಮಲ್ಲಿಗೆ ಎಂಬ ಅಮರ ಕಾವ್ಯ

ಪುಸ್ತಕ ಲೋಕವೆಂಬ ಬದುಕಿನ ಬುತ್ತಿ

ಎ.ಆರ್. ಕೃಷ್ಣಶಾಸ್ತ್ರಿಯವರ 'ವಚನ ಭಾರತ'

ಅಂಬಿಕಾತನಯದತ್ತರ ಸಖೀಗೀತ

ಡಿ. ವಿ. ಜಿ.ಯವರ ಮಂಕುತಿಮ್ಮನ ಕಗ್ಗ

 

MORE NEWS

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...

ದಾವಣಗೆರೆ ರಂಗಾಯಣ : ಅಭಿನಯ ಸಂಗೀತದ ಅಮೃತಧಾರೆ

14-11-2024 ಬೆಂಗಳೂರು

"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...