ಅಜ್ಞಾತವೆಂಬುದು ಬಗೆದಷ್ಟೂ ಹಿರಿದಾಗುವ, ಅರಿತಷ್ಟೂ ಆಳವಾಗುವ ಕ್ರಿಯೆ


“ಅಜ್ಞಾತವೆಂಬುದು ಬಗೆದಷ್ಟೂ ಹಿರಿದಾಗುವ, ಅರಿತಷ್ಟೂ ಆಳವಾಗುವ, ಒಳಗೆ ಹೊಕ್ಕಷ್ಟೂ ವಿಸ್ತಾರವಾಗುವ ಅಚ್ಚರಿ ಎನ್ನುತ್ತಲೇ ಇಲ್ಲಿನ ಲೇಖನಗಳನ್ನು ಗಣೇಶಯ್ಯನವರು ಬರೆದಿರುವ ರೀತಿ ಸೊಗಸಾಗಿದೆ” ಎನ್ನುತ್ತಾರೆ ನವೀನಕೃಷ್ಣ ಎಸ್. ಅವರು ಡಾ. ಕೆ. ಎನ್. ಗಣೇಶಯ್ಯ ಅವರ ‘ಅಜ್ಞಾತ ಚಿತ್ತದತ್ತ ಒಂದು ಹೆಜ್ಜೆ’ ಲೇಖನ ಸಂಕಲನ ಕುರಿತು ಬರೆದ ವಿಮರ್ಶೆ ಇಲ್ಲಿದೆ.

ಪುಸ್ತಕ: ಅಜ್ಞಾತ ಚಿತ್ತದತ್ತ ಒಂದು ಹೆಜ್ಜೆ
ಲೇಖಕ: ಡಾ. ಕೆ. ಎನ್. ಗಣೇಶಯ್ಯ
ಪ್ರಕಾಶನ: ಅಂಕಿತ ಪುಸ್ತಕ

ಇಲ್ಲಿರುವ ಮೊದಲ ಲೇಖನ 'ಜೀವ ಜಗತ್ತಿನ ಮೂರು ಅದ್ಭುತಗಳು'. ನನಗೆ ಈ ಲೇಖನ ಬಹಳ ಇಷ್ಟವಾಯಿತು. ತನ್ನನ್ನು ತಾನೇ ಅರಿಯುವ ಶಕ್ತಿಯುಳ್ಳ ಮೂಕ ಶಕ್ತಿಯ ಮೂಲಕವೇ ಅದರ ಔಚಿತ್ಯ, ಪ್ರಭಾವವನ್ನು ಅರಿಯಲು ಸಾಧ್ಯವಾಗಿದೆ! ಅದುವೇ ಪ್ರಜ್ಞೆ. ಪ್ರಜ್ಞೆ ಜಾಗೃತಗೊಳ್ಳದಿದ್ದರೆ ಏನಾಗುತ್ತಿತ್ತು? ಪ್ರಜ್ಞೆ ಎಂಬುದು ಸತ್ಯವೋ ಅಥವಾ ಭ್ರಮೆಯೋ? ಪ್ರಜ್ಞೆ ನೆಲೆಯಾಗುವುದು ಎಲ್ಲಿ ಮತ್ತು ಹೇಗೆ? ಪ್ರಜ್ಞೆಯನ್ನರಿಯುವುದಕ್ಕೆ ವೈಜ್ಞಾನಿಕವಾಗಿ ನಡೆಸಿದ ಪ್ರಯೋಗಗಳಾವುವು? ಮುಂತಾದ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತಾ ಪ್ರಾಕೃತಿಕ ಶಕ್ತಿಯಾದ ವಿಕಾಸ ಕ್ರಿಯೆ, ಜೀವ, ಅಡಿನೋಸಿನ್, ಸೈಟೊಸಿನ್, ಗುಅನೈನ್ ಮತ್ತು ತೈಮಿನ್ ಎಂಬ ನಾಲ್ಕು ನ್ಯೂಕ್ಲಿಯೋಟೈಡ್‌ಗಳು ಜೀವದ ಉಗಮಕ್ಕೆ ಹೇಗೆ ನಾಂದಿ ಹಾಡಿದವು? ಎಂಬುದರ ಬಗ್ಗೆ ಅಪಾರ ಮಾಹಿತಿ ಇಲ್ಲಿ ಲಭ್ಯವಾಗುತ್ತದೆ. ವಿಕಾಸಕ್ರಿಯೆಯ ಬಗ್ಗೆ ಓದುವಾಗ ತೇಜಸ್ವಿಯವರ 'ಮಿಸ್ಸಿಂಗ್ ಲಿಂಕ್' ನೆನಪಾಯಿತು. ವಿಕಾಸವು ನಿರ್ದಿಷ್ಟ ಮಿತಿಗಳ ಪಾತ್ರವನ್ನು ಅನುಸರಿಸುತ್ತದೆ ಎಂಬುದು ಈ ಲೇಖನ ಓದಿದಾಗ ವೇದ್ಯವಾಗುತ್ತದೆ. ಈ ಮೂರೂ ಅದ್ಭುತಗಳು ಒಂದಕ್ಕೊಂದು ಹೇಗೆ ಸಂಬಂಧವನ್ನು ಹೊಂದಿವೆ ಎಂಬುದನ್ನು ಗಣೇಶಯ್ಯನವರು ಚೆನ್ನಾಗಿ ನಿರೂಪಿಸಿದ್ದಾರೆ.

'ವಿಜ್ಞಾನಿ ಕಂಡ ಸಾಹಿತ್ಯಲೋಕದ ಆಭಾಸಗಳು' ಎರಡನೇ ಲೇಖನ. ವಿಜ್ಞಾನಿಯ ನೆಲೆಯಿಂದ ಸಿನೆಮಾದ ಹಾಡುಗಳಲ್ಲಿ, ಸಾಹಿತ್ಯ ಕೃತಿಯಲ್ಲಿ ಬಳಸುವ ಉಪಮೆಗಳಲ್ಲಿರುವ ಆಭಾಸಗಳನ್ನು ಕಂಡುಕೊಂಡದ್ದು ಈ ಲೇಖನದ ವಸ್ತು. ಉದಾಹರಣೆಗೆ "ಹೇ ನವಿಲೇ..ಹೆಣ್ಣವಿಲೇ..ನವಿಲೇ..ನವಿಲೇ ಆ ಸೌಂದರ್ಯ ಲೋಕದಿಂದ ಜಾರಿದೆ" ಎಂಬ ಪದ್ಯದಲ್ಲಿ ಹೆಣ್ಣು ನವಿಲಿನ ಸೌಂದರ್ಯವನ್ನು ಕವಿ ವರ್ಣಿಸಿದ್ದಾನೆ. ವೈಜ್ಞಾನಿಕ ದೃಷ್ಟಿಯಿಂದ ನೋಡುವುದಿದ್ದರೆ ಇದು ಆಭಾಸವೇ. ಯಥಾರ್ಥಕ್ಕೂ ಹೆಣ್ಣು ನವಿಲುಗಳು ಆಕರ್ಷಕವಾಗಿರುವುದಿಲ್ಲ. ಗಂಡು ನವಿಲುಗಳು ಮಾತ್ರವೇ ಸ್ಫುರದ್ರೂಪಿಗಳಾಗಿ ಸುಂದರ ಗರಿಗಳನ್ನು ಹೊಂದಿ ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತವೆ. ಹಾಗೆ ಪಕ್ಷಿಸಂಕುಲದ ಯಾವುದೇ ಪ್ರಭೇದಗಳನ್ನು ನೋಡುವುದಿದ್ದರೂ ಗಂಡು ಪಕ್ಷಿಗಳು ಮಾತ್ರವೇ ಬಹಳ ಆಕರ್ಷಕವಾಗಿರುತ್ತವೆ. ಇದಕ್ಕೆ ಮುಖ್ಯಕಾರಣ ಜೀವಜಗತ್ತಿನಲ್ಲಿ ಏರ್ಪಟ್ಟ ಸ್ಪರ್ಧೆ. ಹೆಣ್ಣು ಹಕ್ಕಿಗಳನ್ನು ಆಕರ್ಷಿಸಲು ನಾ ಮುಂದು ತಾ ಮುಂದು ಎಂದು ಸ್ಪರ್ಧೆಗಳಿಯುವ ಭರದಲ್ಲಿ, ವಿಕಾಸದ ಹಾದಿಯಲ್ಲಿ ನಿಧಾನವಾಗಿ ಗಂಡು ಪಕ್ಷಿಗಳು ಸುಂದರವಾಗಿ ಮಾರ್ಪಾಡಾಗಿವೆ. ಇಂತಹ ಹಲವು ಆಭಾಸಗಳನ್ನು ಹೆಸರಿಸಿ, ಅದಕ್ಕೆ ಕಾರಣವೇನಿರಬಹುದು ಎಂಬುದನ್ನೂ ಗಣೇಶಯ್ಯನವರು ಚರ್ಚಿಸುತ್ತಾರೆ.

ವಿಜ್ಞಾನ ಪ್ರಪಂಚದಲ್ಲಿ ನಾನು ಎಂದರೆ ಯಾರು? ಎಂಬ ಬಗ್ಗೆ ಬಹಳ ಸಂಶೋಧನೆಗಳು ನಡೆದಿವೆ. ಅದಕ್ಕೆ ಸಂಬಂಧಪಟ್ಟಂತೆ ಇಲ್ಲಿರುವ ವಿವರಗಳನ್ನು ಓದುವಾಗ ಗಣೇಶಯ್ಯನವರದೇ 'ಹೊಕ್ಕಳ ಮೆದುಳು' ಪುಸ್ತಕ ನೆನಪಾಯಿತು. ಇಲ್ಲಿ ಸ್ಥೂಲ ಮಾಹಿತಿಯಿದ್ದರೆ ಅಲ್ಲಿ ವಿವರವಾದ ಚಿತ್ರಣವಿದೆ.

ಸ್ಪರ್ಧೆ, ಅಸೂಯೆ ಮತ್ತು ದ್ವೇಷಗಳೇಕೆ ನಮ್ಮನ್ನು ಕಾಡುತ್ತವೆ? ನೋವು ನೀಡುವ ನೆನಪುಗಳಿಗೇನು ಕೆಲಸ? ಎಂಬ ವಿಷಯಗಳ ಬಗೆಗೆ ಕುತೂಹಲಕರವಾದ ಲೇಖನಗಳಿವೆ. ಇಂದಿನ ಕನ್ನಡದ ಸಾಹಿತ್ಯ ಕೃಷಿ ಯಾವ ವಿಭಾಗದಲ್ಲಿ ಕಲಿತವರಿಂದ ಹೆಚ್ಚು ಆಗುತ್ತಿದೆ (ಕಲಾ, ವಿಜ್ಞಾನ, ವಾಣಿಜ್ಯ, ತಾಂತ್ರಿಕ, ವೈದ್ಯಕೀಯ)? ಎಂಬ ಬಗ್ಗೆ ವಿವರವಾದ ಸಮೀಕ್ಷೆ ನಡೆಸಿ ಕಂಡುಕೊಂಡ ಆಸಕ್ತಿಕರ ಮಾಹಿತಿ ಇಲ್ಲಿದೆ.

ನನಗೆ ಇಷ್ಟವಾದ ಮತ್ತೊಂದು ಲೇಖನ 'ಸರಳತೆಯತ್ತ ಸಾಗುತ್ತಿರುವ ಲಿಪಿಯ ಪಯಣ'. ಭಾಷೆ ಮತ್ತು ಲಿಪಿಗಳ ಉಗಮ ಮತ್ತು ವಿಕಾಸದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಲೇ ಸಂಕೀರ್ಣವಾಗಿದ್ದ ಲಿಪಿಯು ಕ್ರಮೇಣ ಹೇಗೆ ಸರಳತೆಯತ್ತ ಸಾಗುತ್ತಿದೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ. ಆದರೆ ಬ್ರಾಹ್ಮೀ ಲಿಪಿಯಿಂದ ಇತರೆ ದೇಶೀ ಲಿಪಿಗಳ ವಿಕಾಸ ಇದಕ್ಕೆ ಅಪವಾದವೆಂದು ತೋರುತ್ತದೆ. ಕಾರಣ ಬ್ರಾಹ್ಮೀ ಲಿಪಿ ಅತ್ಯಂತ ಸರಳ. ಹಾಗಾಗಿ ಅದರಿಂದ ಸರಳೀಕೃತಗೊಳ್ಳುವುದಕ್ಕೆ ಅವಕಾಶವಿಲ್ಲದೆ ನಾನಾ ಕಾರಣಗಳಿಂದ ವಿಕಾಸ ಹೊಂದುವಾಗ ಅವು ಸಂಕೀರ್ಣ ಲಿಪಿಗಳಾಗಿ ಬದಲಾಗಿವೆ. ನನಗೆ ಇಂತಹ ಲಿಪಿಗಳ ಇತಿಹಾಸದಲ್ಲಿ ಬಹಳ ಆಸಕ್ತಿ. ಈ ಲೇಖನದ ವಸ್ತು ಒಂದು ಪುಸ್ತಕ ಮಾಡುವಷ್ಟು ಸರಕು ಹೊಂದಿದ ವಿಷಯವಾಗಿದೆ. ಈ ಲೇಖನ ಮಾತ್ರವಲ್ಲ, ಈ ಪುಸ್ತಕದಲ್ಲಿರುವ ಬಹುತೇಕ ಲೇಖನಗಳ ವಿಷಯಗಳು ಒಂದೊಂದು ಪುಸ್ತಕ ಮಾಡುವಷ್ಟು ವಿಸ್ತರಿಸಬಹುದಾದ ಸಾಮರ್ಥ್ಯ ಹೊಂದಿವೆ ಎನ್ನುವುದು ವಿಶೇಷ.

ಕೊನೆಯ ಲೇಖನದಲ್ಲಿ ಗಣೇಶಯ್ಯನವರು ರಚಿಸಿರುವ ಸುಂದರವಾದ ಪದ್ಯವಿದೆ. ನಿಸರ್ಗದ ವಿಕಾಸಕ್ರಿಯೆ ರೂಪಿಸಿದ ನಡಾವಳಿಗಳನ್ನು ತಪ್ಪಾಗಿ ಅರ್ಥೈಸಿಕೊಂಡ ಮಾನವನ ಬಗ್ಗೆ ಚರ್ಚಿಸುತ್ತಾ, ಪ್ರಸಿದ್ಧ ಪದ್ಯವಾದ ಪುಣ್ಯಕೋಟಿಯಲ್ಲಿ ಏನೆಲ್ಲಾ ಬದಲಾವಣೆಗಳನ್ನು ತಂದು ವಿಜ್ಞಾನಕ್ಕೆ ನಿಷ್ಠವಾಗಿ ಕಥೆಯನ್ನು ಪದ್ಯದ ಮೂಲಕ ನಿರೂಪಿಸುವ ಸಾಧ್ಯತೆಗಳಿತ್ತು, ಯಾವ ಬದಲಾವಣೆಗಳನ್ನು ಅಳವಡಿಸಿಕೊಳ್ಳಬಹುದು ಎಂಬುದನ್ನು ತೋರಿಸುವ ಸಲುವಾದ ಬರೆದ ಪದ್ಯವಿದು. ಭಿನ್ನ ದೃಷ್ಟಿಕೋನದಿಂದ ಹೀಗೂ ಕಥೆಯನ್ನು ನಿರೂಪಿಸಬಹುದು ಎಂಬುದನ್ನು ಈ ಪದ್ಯ ತೋರಿಸಿಕೊಡುತ್ತದೆ.

ಇಲ್ಲಿರುವ ಲೇಖನಗಳೆಲ್ಲವೂ ಕನ್ನಡ ಸಾಹಿತ್ಯದಲ್ಲಿ ಅಷ್ಟಾಗಿ ಚರ್ಚೆಗೆ ಬಾರದ ವಿಷಯಗಳನ್ನು ಹೊಂದಿರುವಂತವುಗಳು. ಅಜ್ಞಾತವೆಂಬುದು ಬಗೆದಷ್ಟೂ ಹಿರಿದಾಗುವ, ಅರಿತಷ್ಟೂ ಆಳವಾಗುವ, ಒಳಗೆ ಹೊಕ್ಕಷ್ಟೂ ವಿಸ್ತಾರವಾಗುವ ಅಚ್ಚರಿ ಎನ್ನುತ್ತಲೇ ಇಲ್ಲಿನ ಲೇಖನಗಳನ್ನು ಗಣೇಶಯ್ಯನವರು ಬರೆದಿರುವ ರೀತಿ ಸೊಗಸಾಗಿದೆ.

- ನವೀನಕೃಷ್ಣ ಎಸ್. ಉಪ್ಪಿನಂಗಡಿ

MORE FEATURES

ಐದು ಭಾಷೆಗಳಲ್ಲಿ ಓದಬಹುದಾದ ಕಾದಂಬರಿ ಇದು

31-12-1899 ಬೆಂಗಳೂರು

“ಬದುಕಿನ ಹೊಡೆತಗಳನ್ನೇ ಕಥೆ, ಕಾದಂಬರಿಯಾಗಿಸಿ. ನೋಡಿದ್ದು, ಕೇಳಿದ್ದು, ಅನುಭವಿಸಿದ್ದನ್ನು ವಾಸ್ತವ ರೂಪದಲ್ಲಿಯೇ ...

ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ: ರಾಜಕುಮಾರ ಮಾಳಗೆ

23-09-2024 ಬೆಂಗಳೂರು

“ಜಿ.ಬಿ.ವಿಸಾಜಿ ಅವರು ಸಾಹಿತ್ಯದ ಜೊತೆಗೆ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಭಾಲ್ಕಿ ತಾಲೂಕು ವರದಿಗಾರ...

ಸಾವು ಯಾವಾಗಲೂ ಕಂಡ ಅನುಭವವೇ ಹೊರತು ಉಂಡ ಅನುಭವ ಅಲ್ಲ!

22-09-2024 ಬೆಂಗಳೂರು

“ಸಾವನ್ನು ಹಲವು ದಿಕ್ಕುಗಳಿಂದ ನೋಡಲು ಸಾಧ್ಯ. ಸ್ವಂತ ಸಾವಿನ ಆಚೆಗೂ ಹಲವು ಬಗೆಯ ಸಾವುಗಳಿವೆ. ಈ ಸಂಕಲನ ಅಂತಹ ಬಹು...