31 ದಿನಗಳಲ್ಲಿ ನಡೆಯುವ ಹೈವೋಲ್ಟೇಜ್‍ ಪ್ರೇಮಕಥೆ

Date: 04-01-2025

Location: ಬೆಂಗಳೂರು


‘ಇದು ಹೈ ವೋಲ್ಟೇಜ್ ಪ್ರೇಮಕಥೆ …’ ಎಂಬ ಅಡಿಬರಹದೊಂದಿಗೆ ಬರುತ್ತಿದೆ ನಿರಂಜನ್‍ ಶೆಟ್ಟಿ ಅಭಿನಯದ ಮತ್ತು ನಿರ್ಮಾಣದ ‘31 Days’. ಈ ಹಿಂದೆ ‘ಜಾಲಿ ಡೇಸ್‍’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ನಿರಂಜನ್‍, ಇದೀಗ ಹೊಸ ಪ್ರೇಮಕಥೆಯೊಂದಿಗೆ ವಾಪಸ್ಸಾಗುತ್ತಿದ್ದಾರೆ. ಈ ಚಿತ್ರವನ್ನು ರಾಜ ರವಿಕುಮಾರ್ ಎನ್ನುವವರು ನಿರ್ದೇಶನ ಮಾಡಿದ್ದು, ನಿರಂಜನ್‍ ಪತ್ನಿ ನಾಗವೇಣಿ, NSTAR ಪ್ರೊಡಕ್ಷನ್ಸ್ ಎಂಬ ಸಂಸ್ಥೆಯಡಿ ನಿರ್ಮಾಣ ಮಾಡಿದ್ದಾರೆ.

‘31 Days’ ಚಿತ್ರದ ‘ಓ ಸೆನೋರಿಟಾ’ ಎಂಬ ಅಪೇರಾ ಹಾಡು ಇತ್ತೀಚೆಗೆ ಬಿಡುಗಡೆ ಆಗಿದೆ. ಅಪೇರಾ (ಕಥನ ಗೀತೆ) ಶೈಲಿಯ ಈ ಹಾಡಿಗೆ ವಿ. ಮನೋಹರ್‍ ಸಂಗೀತ ಸಂಯೋಜಿಸುವುದರ ಜೊತೆಗೆ ಸಾಹಿತ್ಯವನ್ನು ರಚಿಸಿದ್ದಾರೆ. ಜೊತೆಗೆ ಹಾಡುವುದರ ಜೊತೆಗೆ ಅದರಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಇದು ವಿ. ಮನೋಹರ್ ಸಂಗೀತ ಸಂಯೋಜಿಸಿರುವ 150ನೇ ಚಿತ್ರ. ಈ ಹಾಡು ವೇದಸ್ಯ ಮ್ಯೂಸಿಕ್‍ ಚಾನಲ್‍ನಲ್ಲಿ ಬಿಡುಗಡೆಯಾಗಿದೆ.

‘31 Days’ ಚಿತ್ರದ ಕುರಿತು ಮಾತನಾಡುವ ನಿರಂಜನ್‍, ‘ಇದೊಂದು 31 ದಿನಗಳಲ್ಲಿ ನಡೆಯುವ ಈಗಿನ ಕಾಲಘಟ್ಟದ ಪ್ರೇಮಕಥೆ. ಹಾಗಾಗಿ ‘31 Days’ ಎಂದು ಹೆಸರಿಟ್ಟಿದ್ದೇವೆ. ಮಧ್ಯಂತರಕ್ಕೂ ಮುನ್ನ 15 ದಿನಗಳು ಹಾಗೂ ನಂತರ 15 ದಿನಗಳ ಕಥೆ ಸಾಗುತ್ತದೆ. 15ನೇ ದಿನಕ್ಕೆ ಮಧ್ಯಂತರ ಬರುತ್ತದೆ. 31ನೇ ದಿನ ಚಿತ್ರದ ಕ್ಲೈಮ್ಯಾಕ್ಸ್ ನಡೆಯಲಿದೆ. ಯಾರು ಊಹಿಸದ ಕ್ಲೈಮ್ಯಾಕ್ಸ್ ಚಿತ್ರದಲ್ಲಿದೆ. ಇವತ್ತಿನ ತಲೆಮಾರಿನವರು ಐಟಿ-ಬಿಟಿ ಉದ್ಯೋಗಗಳನ್ನು ಮಾಡಿಕೊಂಡು ಚೆನ್ನಾಗಿ ಸಂಪಾದನೆ ಮಾಡುತ್ತಿದ್ದಾರೆ. ಆದರೆ, ಅವರು ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವುದಿಲ್ಲ. ಸಣ್ಣ ವಿಷಯಗಳಿಗೂ ಜಗಳ ಆಡುತ್ತಾರೆ. ಐದು ನಿಮಿಷ ಕೂತು ತಾವು ಮಾಡಿದ್ದು ಸರಿಯೋ, ತಪ್ಪೋ ಎಂಬುದರ ಕುರಿತು ಅವಲೋಕಿಸುವುದಿಲ್ಲ. ಈ ವಿಷಯವನ್ನು ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಈ ಚಿತ್ರ ಬರೀ ಪ್ರೇಮಿಗಳಿಗಷ್ಟೇ ಅಲ್ಲ, ಮದುವೆ ಆದವರು, ಆಗದವರು ಎಲ್ಲರೂ ನೋಡಬಹುದು’ ಎಂದರು.

‘ಓ ಸೆನೊರಿಟಾ’ ಹಾಡಿನ ಕುರಿತು ಮಾತನಾಡಿದ ನಿರಂಜನ್‍, ‘ನಾನು ವಿ. ಮನೋಹರ್‍ ಅವರ ಮನೆಯಲ್ಲಿ ಬೆಳೆದವನು. ಅವರ ಸಂಗೀತ ಸಂಯೋಜನೆಯ 150 ನೇ ಚಿತ್ರ ನನಗೆ ದೊರಕಿದ್ದು ನನ್ನ‌ ಪುಣ್ಯ. ಅವರು ಈ ಹಾಡಿಗೆ ಧ್ವನಿಯಾಗಿದ್ದರು. ಈ ಹಾಡಿನಲ್ಲಿ ನೀವೇ ಕಾಣಿಸಿಕೊಳ್ಳಬೇಕು ಎಂದು ಹಠ ಹಿಡಿದು, ಅವರಿಂದಲೇ ಪಾತ್ರ ಮಾಡಿಸಿದೆವು’ ಎಂದರು.

ಈ ಹಾಡಿನ ಕುರಿತು ಮಾಡನಾಡುವ ವಿ. ಮನೋಹರ್, ‘ಈ ಅಪೇರಾ (ಕಥನ ಗೀತೆ) ಶೈಲಿಯ ಹಾಡು ಕನ್ನಡದಲ್ಲಿ ಇದೇ  ಮೊದಲು ಎನ್ನುವುದು ನನ್ನ ಅಭಿಪ್ರಾಯ. ನಿರಂಜನ್ ಅವರ ಒತ್ತಾಯಕ್ಕೆ ಮಣಿದು ಈ ಹಾಡಿನಲ್ಲಿ ಅಭಿನಯ ಕೂಡ ಮಾಡಿದ್ದೇನೆ. ಒಟ್ಟಾರೆ ಈ ಚಿತ್ರದಲ್ಲಿ ಹತ್ತು ಹಾಡುಗಳಿದೆ. ಎಂ.ಡಿ.ಪಲ್ಲವಿ, ರವೀಂದ್ರ ಸೊರಗಾವಿ ಸೇರಿದಂತೆ ನಾಡಿನ ಅನೇಕ ಜನಪ್ರಿಯ ಗಾಯಕರು ಹಾಡುಗಳನ್ನು ಹಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

‘31 Days’ ಚಿತ್ರವು ಸೆನ್ಸಾರ್‍ ಅಂಗಳದಲ್ಲಿದ್ದು, ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

MORE NEWS

ಜಯಂತಿ ಹೆಸರಿನ ಪ್ರಶಸ್ತಿ ಸ್ಥಾಪನೆಗೆ ಸರಕಾರ ಶೀಘ್ರವೇ ಚಿಂತನೆ ನಡೆಸುತ್ತದೆ: ಸಿದ್ಧರಾಮಯ್ಯ

07-01-2025 ಬೆಂಗಳೂರು

ಬೆಂಗಳೂರು: ಸೌರವ್ ಪ್ರಕಾಶನದಿಂದ ಪ್ರಕಟಗೊಂಡ ಕೆ. ಸದಾಶಿವ ಶೆಣೈ ಅವರ ʻLovely But Lonely ಅಭಿನಯ ಶಾರದೆಯ ಜೀವನಗಾಥೆʼ...

ತಂದೆ-ಮಗನಾದ ವಿಜಯ್ ರಾಘವೇಂದ್ರ; ‘ರುದ್ರಾಭಿಷೇಕಂ’ನಲ್ಲಿ ವೀರಗಾಸೆ ಕಲಾವಿದ

07-01-2025 ಬೆಂಗಳೂರು

ವಿಜಯ್‍ ರಾಘವೇಂದ್ರ ತಮ್ಮ 20 ಪ್ಲಸ್ ವರ್ಷಗಳ ಚಿತ್ರಜೀವನದಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ...

ನಾಯಕ ವಿಷ್ಣು, ನಾಯಕಿ ಪ್ರಿಯಾ; ಫೆ. 21ಕ್ಕೆ ‘ವಿಷ್ಣು ಪ್ರಿಯ’

07-01-2025 ಬೆಂಗಳೂರು

ಬಹಳ ಸಮಯದಿಂದ ಬಿಡುಗಡೆಗೆ ಕಾದಿದ್ದ ಕೆ. ಮಂಜು ಮಗ ಶ್ರೇಯಸ್‍ ಮಂಜು ಅಭಿನಯದ ‘ವಿಷ್ಣು ಪ್ರಿಯ’ ಚಿತ್ರಕ...