Date: 07-01-2025
Location: ಬೆಂಗಳೂರು
ಬೆಂಗಳೂರು: ಸೌರವ್ ಪ್ರಕಾಶನದಿಂದ ಪ್ರಕಟಗೊಂಡ ಕೆ. ಸದಾಶಿವ ಶೆಣೈ ಅವರ ʻLovely But Lonely ಅಭಿನಯ ಶಾರದೆಯ ಜೀವನಗಾಥೆʼ ಕೃತಿ ಲೋಕಾರ್ಪಣೆ ಕಾರ್ಯಕ್ರಮವು 2025 ಜ. 07 ಮಂಗಳವಾರದಂದು ನಗರದ ಗಾಂಧಿಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಟ ರಮೇಶ್ ಅರವಿಂದ ಮಾತನಾಡಿ, “ನಟಿ ಜಯಂತಿ ಅವರ ಸಿನಿಮಾ ರಂಗದ ಹೊರತ ಅವರ ನೋವಿನ ದಿನಗಳ, ಬದುಕಿನ ಪರಿಪಾಠದ ಚಿತ್ರಣ ಇಲ್ಲಿದೆ. ನಾವೆಲ್ಲರೂ ಕೂಡ ಮನುಷ್ಯನಿಗೆ ಇರಬೇಕಾದ ಸಾಮಾನ್ಯ ಗುಣಲಕ್ಷಣವನ್ನು ಹೊಂದಿದ್ದೇವೆ. ಆದರೆ ನಮ್ಮನ್ನು ಒಬ್ರಿಗಿಂತ ಇನ್ನೋಬ್ರು ಬೇರ್ಪಡಿಸುವಂತ ವಿಷ್ಯ ಏನಂದ್ರೆ ಅದು ನಮ್ಮಲ್ಲಿನ ಕತೆಗಳು. ಹಾಗಾಗಿ ಈ ಕತೆಯನ್ನು ಹೊರತಂದಿರುವ ಕೆ. ಸದಾಶಿವ ಶೆಣೈ ಅವರಿಗೆ ನಿಜಕ್ಕೂ ಧನ್ಯವಾದ ಹೇಳೇಬೇಕು. ಜಯಂತಿ ಅಮ್ಮನ ಕತೆಯನ್ನು ಓದಲು ನಾನು ಕಾಯ್ತಿದ್ದೀನಿ ಹಾಗೆ ನೀವು ಕೂಡ ತಪ್ಪದೇ ಓದಬೇಕು,” ಎಂದರು.
ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಜಯಂತಿ ಅವರ ಪೂರ್ಣ ಬದುಕಿನ ಚಿತ್ರಣವನ್ನು ಈ ಕೃತಿಯ ಮೂಲಕ ನಮ್ಮ ಮುಂದಿಡುವ ಪ್ರಯತ್ನವನ್ನು ಸದಾಶಿವ ಪೈ ಮಾಡಿದ್ದಾರೆ. ಜಯಂತಿಯವರು ನನಗೆ ಆತ್ಮೀಯರು. ನನಗೂ ಅವರಿಗೂ ಬಹಳ ವರ್ಷಗಳ ಒಡನಾಟ, ಒಟ್ಟಿಗೆ ಕೆಲಸ ಮಾಡಿದ್ದೇವೆ. ನನ್ನನ್ನು ಯಾವಾಗಲೂ ಕೂಡ ಅವರು ಹಿರೋ ಎಂದೇ ಸಂಬೋಧಿಸುತ್ತಿದ್ದರು. ಸ್ನೇಹಮಯಿ ಜೀವನವನ್ನು ತಮ್ಮ ಜೀವನದುದ್ದಕೂ ನಡೆಸಿ, ನೋವನ್ನು ತೋರ್ಪಡಿಸುವ ಕೆಲಸವನ್ನು ಅವರು ಎಂದಿಗೂ ಮಾಡಿಲ್ಲ. ಅವರಿಗೆ ಮಾನವೀಯತೆ ಬಹಳಷ್ಟಿತ್ತು. ಅವರೊಬ್ಬ ಅದ್ಭುತ ಕಲಾವಿದೆ. ಆ ಕಾಲದಲ್ಲಿ ಜಯಂತಿ, ಲೀಲಾವತಿ, ಕಲ್ಪನಾ, ಭಾರತಿ ತಮ್ಮ ಅಭಿನಯದ ಮೂಲಕ ವಿಭಿನ್ನವಾದ ಛಾಪನ್ನು ಮೂಡಿಸಿದ್ದರು. ಜಯಂತಿ ಅವರ ಆತ್ಮಚರಿತ್ರೆ ಕುರಿತ ಈ ಕೃತಿಯನ್ನು ಓದಿ ನಿಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ಜಯಂತಿ ಅವರ ಹೆಸರಿನ ಪ್ರಶಸ್ತಿ ಸ್ಥಾಪನೆಗೆ ನಮ್ಮ ಸರಕಾರವು ಮುಂದಿನ ದಿನಗಳಲ್ಲಿ ಚಿಂತನೆ ನಡೆಸುತ್ತದೆ," ಎಂದು ಹೇಳಿದರು.
ಪತ್ರಕರ್ತ, ನಿರ್ದೇಶಕ, ಇಂದ್ರಜಿತ್ ಲಂಕೇಶ್ ಮಾತನಾಡಿ, “ನನ್ನ ಮತ್ತು ಜಯಂತಿ ಮೇಡಂ ಅವರ ಸಂಪರ್ಕ ನೇರವಿರದಿದ್ದರು, ನನ್ನ ತಂದೆ ತಾಯಿಯೊಂದಿಗೆ ಅವರ ಸಿನಿಮಾಗಳನ್ನು ನೋಡಲು ಥಿಯೇಟರಿಗೆ ಹೋಗುತ್ತಿದೆ. ಹಾಗೆ ನಾನು ಜಯಂತಿ ಅವರ ಸಿನಿಮಾಗಳನ್ನು ನೋಡಿ ಬೆಳೆದೆ. ಅವರು ನಮ್ಮೆಲ್ಲರಿಗೂ ಕೂಡ ಸ್ಪೂರ್ತಿಯಾಗಿದ್ದಾರೆ,” ಎಂದು ಹೇಳಿದರು.
ಕೃತಿಕಾರ ಸದಾಶಿವ ಶೆಣೈ ಮಾತನಾಡಿ, “ಜಯಂತಿ ಅವರ ಹೆಸರನ್ನು ಅಜರಾಮರ ಮಾಡಲು ಮುಖ್ಯಮಂತ್ರಿ ಕೈಯಲ್ಲಿ ಮಾತ್ರ ಸಾಧ್ಯ. ಅವರು ನುಡಿದಂತೆ ನಡೆಯುವವರು. ಇದಕ್ಕಾಗಿ ಅನೇಕ ಉದಾಹರಣೆಗಳಿವೆ. ಅವರ ಹೆಸರಿನಲ್ಲಿ ಚಿತ್ರರಂಗದಲ್ಲಿ ಪ್ರಶಸ್ತಿಯನ್ನು ಘೋಷಣೆ ಮಾಡಬೇಕು. ಈಗಾಗಲೇ ನೀವು ನಾರಿ ಶಕ್ತಿಯನ್ನು ಕರ್ನಾಟಕದಲ್ಲಿ ತೋರಿಸಿದ್ದೀರಿ ಅದು ಉದ್ಯಮವಾಗಿರಬಹುದು. ಯಾವುದೇ ರೀತಿಯಲ್ಲಾದರೂ ಜಯಂತಿ ಅವರ ಹೆಸರನ್ನು ಎಂದಿಗೂ ಮರೆಯದಿರೋ ಹಾಗೆ ಮಾಡಬೇಕು,” ಎಂದು ತಮ್ಮ ಮನವಿಯನ್ನು ಸಿದ್ಧರಾಮಯ್ಯ ಅವರ ಮುಂದಿಟ್ಟರು.
ಕಾರ್ಯಕ್ರಮದಲ್ಲಿ ನಿರ್ದೇಶಕಿ ಕವಿತಾ ಲಂಕೇಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಪತ್ರಕರ್ತೆ ಬೆಲಗೂರು ಸಮೀವುಲ್ಲಾ, ಜಯಂತಿ ಅವರ ಪುತ್ರ ಕೃಷ್ಣಕುಮಾರ್, ನಟಿ ಪ್ರೇಮಾ, ನಟಿ ಪೂಜಾಗಾಂಧಿ, ನಟಿ ಭಾವನ ಸೇರಿದಂತೆ ಸಾಹಿತಿಗಳು, ಚಿತ್ರರಂಗದ ಹಲವಾರು ಗಣ್ಯರು, ನಟರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬುಕ್ ಬ್ರಹ್ಮ ಯುಟ್ಯೂಬ್ ಚಾನೆಲ್ ನಲ್ಲಿ ಆನ್ ಲೈನ್ ಮೂಲಕ ನೋಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ
ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರವು ಡಿಸೆಂಬರ್ 20ರಂದು ಬಿಡುಗಡೆಯಾಗಿ, ಚಿತ್ರಕ್ಕೆ ...
ಕಳೆದ ವರ್ಷದ ಕೊನೆಯ ಶುಕ್ರವಾರದಂದು ರಾಜವರ್ಧನ್ ಅಭಿನಯದ ‘ಗಜರಾಮ’ ಚಿತ್ರವು ಬಿಡಗುಡೆಯಾಗಬೇಕಿತ್ತು. ...
‘ಹೊಂದಿಸಿ ಬರೆಯಿರಿ’ ಚಿತ್ರದ ನಂತರ ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಮತ್ತೊಂದು ಚಿತ್ರ ‘ತೀರ್ಥರ...
©2025 Book Brahma Private Limited.