“ಪುಸ್ತಕದಲ್ಲಿ ಬಾಲ್ಯವಿದೆ, ಹರೆಯವಿದೆ, ಯೌವನವಿದೆ, ವೃದ್ಧಾಪ್ಯವೂ ಇದೆ. ಎಲ್ಲ ಕಾಲದಲ್ಲೂ ಮನುಷ್ಯನನ್ನು ಕಾಡುವ, ಸೆಳೆಯುವ ಮುಗ್ಧತೆ, ಅವಸರ, ರೋಷ, ವಿನಾಕಾರಣ ಸೇಡು ಎಲ್ಲವೂ ಇವೆ. ಅಲ್ಲಲ್ಲಿ ನವಿರು ಹಾಸ್ಯವಿದೆ, ಬಾಲ್ಯದ ನಂಬಿಕೆಗಳ ಮೋದವಿದೆ”, ಎನ್ನುತ್ತಾರೆ ಶಮಾ ನಂದಿಬೆಟ್ಟ ಅವರು ಮಂಜುನಾಥ್ ಕುಣಿಗಲ್ ಅವರ “ಶಿವಾಜಿ ಟೆಂಟ್" ಕೃತಿಗೆ ಬರೆದ ವಿಮರ್ಶೆ.
ಯಾವ ವಯಸ್ಸಿನಲ್ಲೂ ಅಪ್ಪ ಅಮ್ಮನ ಮುಚ್ಚಟೆಯಲ್ಲಿ ಬೆಳೆಯದ ನನಗೆ ಸಿನೆಮಾ ಟೆಂಟ್ ಇರಲಿ, ಸಂತೆ ಕೂಡ ಲಕ್ಷುರಿಯಾಗಿತ್ತು. ಮೊದಲ ಸಲ ಸಂತೆಯನ್ನು ದೂರದಿಂದ ಕಂಡಾಗ ನನ್ನ ವಯಸ್ಸು ಬಹುಶಃ ಹದಿನೇಳಿರಬಹುದು. ಸಂತೆಗೆ ಮೊದಲ ಸಲ ಕಾಲಿಟ್ಟಾಗ ಇಪ್ಪತ್ತೈದು ಇರಬಹುದು. ಅಷ್ಟು ಹೊತ್ತಿಗಾಗಲೇ ತಾಲೂಕು ಕೇಂದ್ರಗಳಿಗೆ ಥಿಯೇಟರ್ ಕಾಲಿಟ್ಟಾಗಿತ್ತು. ಸಿನೆಮಾ ಟೆಂಟ್ ಎಂಬುದು ನನ್ನ ಮಟ್ಟಿಗೆ ಕಲ್ಪನೆಯ ಚಿತ್ರವಷ್ಟೇ ಆಗುಳಿಯಿತು. ನಾನು ಆಗಿದ್ದ ವಾತಾವರಣದಲ್ಲಿ ಟೆಂಟು ಹೇಗಿರುತ್ತದೆ ಕೇಳಿದರೆ ಇನ್ನೇನು ಕಲ್ಪಿಸಿಕೊಂಡು ಕಥೆ ಕಟ್ಟುತ್ತಾರೋ ಎಂಬ ಆತಂಕವೇ ಹೆಚ್ಚಾಗಿ ಕುತೂಹಲದ ತಲೆಯ ಮೇಲೆ ಮೊಟಕಿ ಮೂಲೆಯಲ್ಲಿ ಕೂರಿಸುವುದು ಅನಿವಾರ್ಯವಾಗಿತ್ತು. ಕಾಲದ ಹರಿವಿನ ಜೊತೆಗೆ ಬದುಕೂ ಹರಿದು, ʼನಾನು ಬೆಳೆದಿದ್ದೇನೆʼ ಎಂಬ ಭಾವವಷ್ಟೇ ಉಳಿದು ಕುತೂಹಲಗಳು ಅಳಿದವು. ತನ್ನ ಪಾಡಿಗೆ ತಾನು ಮೂಲೆಯಲ್ಲಿದ್ದ ಆ ಅಮಾಯಕ ಕುತೂಹಲವನ್ನು ಸಣ್ಣಗೆ ಚಿವುಟಿ ಎಬ್ಬಿಸಿದ್ದು ಮಂಜುನಾಥ್ ಕುಣಿಗಲ್ ಎಂಬ ಕಥೆಗಾರ ಅಕ್ಷರಗಳಲ್ಲಿ ಕಟ್ಟಿದ ಶಿವಾಜಿ ಟೆಂಟ್.
ಕುಣಿಗಲ್ ಟು ಕಂದಹಾರ್ ಬರೆದು, ನಂತರದ ಎರಡು ವರ್ಷಗಳು ಆ ಪುಸ್ತಕಕ್ಕೆ ಬಂದ ಪ್ರಶಸ್ತಿಗಳನ್ನು ಸ್ವೀಕರಿಸುವುದರಲ್ಲಿ ವ್ಯಸ್ತರಾಗಿದ್ದ ಮಂಜುನಾಥ್ ಕುಣಿಗಲ್ ಅವರ ಎರಡನೆಯ ಪುಸ್ತಕ ಮತ್ತು ಮೊದಲ ಕಥಾ ಸಂಕಲನ #ಶಿವಾಜಿ_ಟೆಂಟ್. ಮಂಜುನಾಥ್ ಎಂಬ ಸಹೃದಯಿಯ ಮೊದಲ ಪುಸ್ತಕಕ್ಕೆ ಮೊದಲ ಪ್ರಶಸ್ತಿ ಬಂದಾಗ ತುಂಬಾ ಖುಷಿಪಟ್ಟವರಲ್ಲಿ, ಅವರ ವಾಟ್ಸಾಪ್ ಸ್ಟೇಟಸ್ಸಿಗೆ ಅಭಿನಂದನೆಗಳು ಎಂದುತ್ತರಿಸಿದವರಲ್ಲಿ ನಾನೂ ಒಬ್ಬಳು. ಬರಬರುತ್ತಾ ಈ ಕತೆಗಾರ ಇದರಲ್ಲೇ ಕಳೆದು ಹೋಗದಿರಲಿ ಎಂಬ ಆತಂಕ ಕಾಡಿ "ಇದಕ್ಕೆಷ್ಟು ಬೇಕೋ ಅಷ್ಟು ಪ್ರಶಸ್ತಿಗಳಾಯ್ತು; ಇದನ್ನು ಸಂಭ್ರಮಿಸುವುದು ಓಕೇ. ಆದರೆ ಇದರಲ್ಲೇ ಕಳೆದು ಹೋಗದೆ ಹೊಸದರ ಕಡೆ ಗಮನ ಹರಿಸುವುದೊಳಿತು" ಎಂದಿದ್ದೂ ಇತ್ತು. ಅದಾಗಿ ಕೆಲವೇ ದಿನಗಳಲ್ಲಿ ಸುದ್ದಿ ತಲುಪಿತ್ತು - ಶಿವಾಜಿ ಟೆಂಟ್ ಕಟ್ಟುವ ಕೆಲಸ ಜಾರಿಯಲ್ಲಿದೆ.
ಯುದ್ಧಭೂಮಿಯಲ್ಲಿ ಅಲೆದಾಡಿ ಆ ಕಥನಗಳ ಲೇಖಕ ಮಂಜುನಾಥ್ ಬೇರೆ; ಕಥೆಗಾರನಾಗಿ ಓದುಗರೆದುರು ನಿಂತ ಮಂಜುನಾಥ್ ಬೇರೆ. ಮೊದಲ ಪುಸ್ತಕದಲ್ಲಿ ತನ್ನೆದುರು ನಡೆಯುತ್ತಿದ್ದ ಎಲ್ಲವನ್ನೂ ಇವರು ಅಪ್ಪಟ ಮೂರನೇ ವ್ಯಕ್ತಿಯಾಗಿ (ತಾನು ಬಹುತೇಕ ಅವೆಲ್ಲವುಗಳ ಭಾಗವಾಗಿದ್ದಾಗ್ಯೂ) ನಿರ್ಲಿಪ್ತವಾಗಿ ಬರೆಯುತ್ತ ಹೋಗಿದ್ದರೆ, ಶಿವಾಜಿ ಟೆಂಟ್ ಒಳಗಿನ ಹತ್ತೂ ಕಥೆಗಳಲ್ಲಿ ಅವರೇ ಒಂದು ಪಾತ್ರ ಮತ್ತು ಅವಿಭಾಜ್ಯ ಅಂಗವೂ ಆಗಿದ್ದು ನಿರೂಪಿಸುವಂತೆ ಭಾಸವಾಯಿತು.
ಶಿವಾಜಿ ಟೆಂಟ್ʼನಲ್ಲಿ ನನ್ನನ್ನು ಬಹಳವಾಗಿ ಸೆಳೆದದ್ದು ಪದ ಬಳಕೆ. ಭಾಷೆಯ ಹದ ಕಂಡುಕೊಂಡು ಅದರ ಮೋದವನ್ನೂ ಅರ್ಥ ಮಾಡಿಕೊಂಡವರು ಮಾತ್ರ ಹೀಗೆ ಬಳಸಬಲ್ಲರು. ಜೊತೆಗೆ ಇಲ್ಲಿ ಬಳಸಿದ ಅಷ್ಟೂ ಹೆಸರುಗಳು ಇಂಥವೇ – ತೊಡ್ರ, ಕೊಯಕ್ಲ, ಮಿಣ್ಣ, ಪಸ್ಲಿ, ವೈದ್ಯ ಯಾಲಕ್ಕಯ್ಯ ಇಂಥ ಹೆಸರುಗಳೆಲ್ಲ ನಮ್ಮ ಬಾಲ್ಯದ ಹಳ್ಳಿಗಳಲ್ಲಿ ಕೇಳಿರುವಂಥವು. ಕತೆಗಳಿಗೆ ಸಹಜತೆಯನ್ನು ತಂದು ಕೊಡುವುದೇ ಇಂಥ ಬಳಕೆ. ನನ್ನ ಮಟ್ಟಿಗೆ ಇವೆಲ್ಲ ಥಟ್ಟನೆ ಆ ಕಾಲಕ್ಕೆ ಕರೆದೊಯ್ಯಬಲ್ಲ ಅಬ್ರಕಡಬ್ರ ಮಂತ್ರ. ಅದಕ್ಕೆ ಸರಿಯಾಗಿ ಬೊಂಬು, ಗಳ, ಸುತ್ಲಿಹುರಿ, ಸೂರಿ ಸಾಮಾನು ಇಂಥವೆಲ್ಲ ಪೋಷಕ ಪಾತ್ರಗಳಂತೆ ಕಥೆಗಳ ಕಾಲಕ್ಕೆ ಮೆರುಗೀಯುತ್ತವೆ.ʼ…. ಗೋಣಿತಾಟು. ಅವಷ್ಟೇ ಬಾಗಿಲು! ಟೆಂಟಿನಸುತ್ತಲೂ ಚೌಕಾಕಾರವಾಗಿಬಲೆಹೆಣೆದಂತೆ ಜೋಡಿಸಿದ್ದ ಬಿದಿರು ತಟ್ಟಿಯ ಪೌಳಿ. ಟಿಕೆಟ್ಟು ಕೊಡುವ ಮತ್ತು ಪ್ರವೇಶ ಸಾಲುಗಳ ಓಣಿಯೂ ಆ ಬಿದಿರು ತಟ್ಟಿಯದ್ದೇ.ʼ
‘ಬೀಡಿಯ ಕಮಟುವಾಸನೆ, ಮಣ್ಣಿನಧೂಳು, ಗೋಣಿತಾಟು ಸರಿಸಿದಾಗ ರಪ್ ಎಂದು ಕಣ್ರಾಚುತಿದ್ದ ಹೊರಬೆಳಕು, ಕರೆಂಟ್ ಹೋಗಿ ಜೆನೆರೇಟರ್ ‘ಆನ್’ ಆಗುವ ಮಧ್ಯದ ಅನಿರೀಕ್ಷಿತವಿರಾಮಗಳು, ಬೆವರುಕ್ಕಿಸುವ ಶೆಖೆ, ಕುಡುಕರು ಮಾಡುತ್ತಿದ್ದ ಗಲಾಟೆ, ಕಬ್ಬಿಣದ ಶೀಟಿನ ಛಾವಣಿಯ ತೂತಿಂದ ಬಂದೆರಗುತ್ತಿದ್ದ ಬಿಸಿಲಿನ ಕೋಲುಗಳು ಮತ್ತು ಮಳೆ ಬಂದಾಗ ಟಪಟಪನೆ ಬೀಳುವ ಹನಿಗಳು…’ ಎಲ್ಲವೂ ಆ ಸ್ವರ್ಗದ ಅನಪೇಕ್ಷಿತ ಅವಿಭಾಜ್ಯ ಅಂಗಗಳೇ! – ಇದನ್ನೋಉತ್ತಿರುವಂತೆಯೇ ಚಿತ್ರ ಕಣ್ಣ ಮುಂದೆ ಬರಬಹುದಾದ ಚಿತ್ರಕಶಕ್ತಿ ಕತೆಗಾರರಿಗಿದೆ. ಹಾಗಾಗಿಯೇ ಜೀವಮಾನದಲ್ಲೆಂದೂ ಸಿನೆಮಾ ಟೆಂಟ್ ನೋಡದ ನನ್ನ ಕಣ್ಣ ಮುಂದೂ ಟೆಂಟ್ ಸಿನೆಮಾ ಬರಲು ಸಾಧ್ಯವಾಯಿತು ಎಂದುಕೊಂಡಿದ್ದೇನೆ.
ಒಂದು ನಿರ್ದಿಷ್ಟ ಓಘದಲ್ಲಿ ಕಥೆ ಹರೀತಿದ್ದರೆ, ಅಲ್ಲಲ್ಲಿ ವಿಂಚಿನಂತೆ ವಾಹ್ ಎನಿಸುವ ವಾಕ್ಯಗಳಿವೆ.
ನಿಸರ್ಗದ ಆಗುಹೋಗು ಸೂಕ್ಷ್ಮಗಳಿಗೆ ಪ್ರಾಣಿ-ಪಕ್ಷಿಗಳು ಇನ್ನೂ ಅಂಟಿಕೊಂಡಿವೆ, ಮನುಷ್ಯನಂತೆ ಕೊಂಡಿ ಕಳಚಿಕೊಂಡಿಲ್ಲ ಎಂಬುದು ಆ ದಿನ ಸಾಬೀತಾಗಲಿಕ್ಕಿತ್ತೇ? ಗೊತ್ತಿಲ್ಲ!
ಅಲ್ಲಿ ಬದುಕಲು ಬೇಕಿದ್ದ ಎಲ್ಲಾ ಒರಟುತನವನ್ನು ರೂಢಿಸಿಕೊಂಡಿದ್ದರ ಕಾರಣಕ್ಕೆ ಅವನಿಗೆ ಅಲ್ಲಿ ಬದುಕುವುದು ನನ್ನಷ್ಟು ಕಷ್ಟವಾಗಲಿಲ್ಲ!
ಇಂಥವನ್ನು ಓದಿದ ನಂತರದ ಒಂದೆರಡು ಕ್ಷಣ ಯೋಚನೆಗೆ ಹಚ್ಚಿದ್ದು ಹೌದು.
ಅಷ್ಟೂ ಕಥೆಗಳಲ್ಲಿ ನನ್ನನ್ನು ಇನ್ನಿಲ್ಲದಂತೆ ಕಾಡಿದ್ದು ಪಾಳ್ಮನೆ ರಾಣಿ. ಮಾನಸಿಕ ಅಸ್ವಸ್ಥಳನ್ನು ಬಸುರು ಮಾಡಿದ ಜಗತ್ತು ಅವಳನ್ನು ನೋಡುವ ಪರಿಯ ಕಥೆಯಿದು. ‘ಹರಿದ ಈಚಲು ಚಾಪೆ, ಮಾಸಲು ಹೊದಿಕೆ, ಭತ್ತದ ತೌಡಿನ ಹೂರಣ ಕಿತ್ತು ಬಂದ ದಿಂಬು, ರಕ್ತದ ಕಲೆ ಅಂಟಿದ್ದ ಚಪ್ಪಡಿಗಲ್ಲು, ಟಪಟಪನೆ ಅತ್ತಿಂದಿತ್ತ ಹಾರಿದ ಒಂದೆರೆಡು ಕಪಟದ ಹಕ್ಕಿ’ ಅಷ್ಟೇ ಕಂಡದ್ದು. ಇಂಥ ಶಕ್ತ ರೂಪಕ ಓದುತ್ತಿದ್ದಂತೆ ಗುರುವಾಯನಕೆರೆಯಲ್ಲಿ ಹುಚ್ಚಿ ಎನಿಸಿಕೊಂಡ ಓರ್ವಳ ಮೇಲೆ ಅತ್ಯಾಚಾರದ ಘಟನೆ ನೆನಪಾಗಿ ಕಣ್ಣು ತೇವ. ಇದು ಕಥೆಯ ಶಕ್ತಿ ಮತ್ತು ಗೆಲುವು ಎಂದು ನಾನು ಭಾವಿಸುತ್ತೇನೆ.
ಎಲ್ಲ ಕಥೆಗಳಲ್ಲೂ ಇರುವ ಗಣಪನೆಂಬ ಹುಡುಗ ಇಡೀ ಪುಸ್ತಕವನ್ನು ಒಂದೇ ದಾರದಲ್ಲಿ ನೇಯ್ದಿಟ್ಟು ಒಂದು ಕಂಟಿನ್ಯುಟಿ ಕೊಡುವುದು ಸಂಕಲನದ ವಿಶೇಷ. ಇಂಥ ವಿಚಾರಗಳಿಂದಾಗಿ ಎಲ್ಲ ಕಥೆಗಳೂ ಒಂದೇ ಊರಿನ ಕತೆಯಂತೆ ಭಾಸವಾಗಿ ಓದುಗನನ್ನು ಹೊರಗೆ ಹಾರಲು ಬಿಡುವುದಿಲ್ಲ. ಅಂತೆಯೇ ಶಾಲೆಯೊಂದು ಪಾತ್ರವಾಗಿ ಇದೇ ರೀತಿಯ ಭಾವ ಕೊಡುವುದೂ ಹೌದು.
ಇಂದಿನ ಹಲವಾರು ಚಲನಚಿತ್ರಗಳಲ್ಲಿ ಬಳಸುವಂತೆ ನಿರೂಪಣೆಯ ಶೈಲಿ ಒಮ್ಮೆ ಹಿನ್ನೆಲೆಯನ್ನು, ಮತ್ತೊಮ್ಮೆ ಪ್ರಸ್ತುತ ಕಾಲವನ್ನು ನಮ್ಮ ಮುಂದಿಡುತ್ತ ಹೋದರೂ ಎಲ್ಲೂ ಕೊಂಡಿಕಳಚಿದಂತೆ ಅನಿಸುವುದಿಲ್ಲ.
ಕತೆಗಾರರು ಹೇಳಿದ ಕಾಲಕ್ಕೆ ಸೂಕ್ತವೇ ಆಗಿರುವ ಭಾಷೆಯಲ್ಲಿ ಬೈಗುಳಗಳನ್ನು ಬಳಸಿದ್ದು ಕತೆಗಳಿಗೆ ಸಹಜತೆಯನ್ನು ನೀಡಿದ್ದು ಹೌದಾದರೂ ಮಕ್ಕಳಿಗೆ, ಅದರಲ್ಲೂ ಈ ಕಾಲದ ಹದಿಹರೆಯದ ಮಕ್ಕಳ ಕೈಗೆ ಕೊಡುವ ಮುನ್ನ ಕೊಂಚ ಎಚ್ಚರವಿರಲಿ ಎನ್ನುವೆ.
ಪುಸ್ತಕದಲ್ಲಿ ಬಾಲ್ಯವಿದೆ, ಹರೆಯವಿದೆ, ಯೌವನವಿದೆ, ವೃದ್ಧಾಪ್ಯವೂ ಇದೆ. ಎಲ್ಲ ಕಾಲದಲ್ಲೂ ಮನುಷ್ಯನನ್ನು ಕಾಡುವ, ಸೆಳೆಯುವ ಮುಗ್ಧತೆ, ಅವಸರ, ರೋಷ, ವಿನಾಕಾರಣ ಸೇಡು ಎಲ್ಲವೂ ಇವೆ. ಅಲ್ಲಲ್ಲಿ ನವಿರು ಹಾಸ್ಯವಿದೆ, ಬಾಲ್ಯದ ನಂಬಿಕೆಗಳ ಮೋದವಿದೆ. ಒಟ್ಟಿನಲ್ಲಿ ಮನೋವ್ಯಾಪಾರದ ವಿವಿಧ ಮಜಲುಗಳಿವೆ. ಮಂಜುನಾಥ್ ಕುಣಿಗಲ್ ಅವರಿಗೆ ಕಥೆ ಎಂಬ ಮಾಯಾ ಮೋಹಿನಿ ಒಲಿದಿದ್ದಾಳೆ; ಈಕೆ ಎಂದೂ ಜೊತೆಗಿರಲಿ ಮತ್ತು ಇನ್ನೆರಡು ವರ್ಷ ಪ್ರಶಸ್ತಿಗಳಲ್ಲಿ ಮಗ್ನಳಾಗಿರಲಿ ಎಂಬ ಆಶಯ ನನ್ನದು.
- ಶಮಾ ನಂದಿಬೆಟ್ಟ
“ಕನ್ನಡದ ಮಟ್ಟಿಗೆ ಒಂದನೇ ಹಾಗೂ ಎರಡನೇ ಶತಮಾನದವರೆಗೆ ಹೋಗಿ ಒಂದು ಕಾದಂಬರಿಯನ್ನು ರಚಿಸಿರುವುದು ನಾನು ಮೊದಲು ಎಲ್...
“ಹೆಣ್ಣು ಮಗುವಿನ ಬಾಲ್ಯ ಮತ್ತು ಹದಿಹರೆಯದ ಸಂವೇದನಾಶೀಲತೆಗೆ ಸಿಕ್ಕ, ಸಂಕೀರ್ಣ ಸಮಾಜದ ಒಳನೋಟದ ಅನಾವರಣ ಇಲ್ಲಿದೆ....
"ನನಗೆ ತಿಳಿದ ಮಟ್ಟಿಗೆ ಕವಿತೆಯಲ್ಲಿ ಸೌಂದರ್ಯ ಮೀಮಾಂಸೆ (Aesthetics) ಇರಬೇಕು, ಜೊತೆಗೆ ವಿಚಾರ ಲಹರಿಯು ಸೇರಿರಬೇ...
©2024 Book Brahma Private Limited.