ಇಡೀ ಕಥಾನಕ ಬಿಚ್ಚಿಕೊಳ್ಳುವುದು ಅವಳ ಪ್ರಜ್ಞೆಯ ಮೂಲಕವೇ


“ಹೆಣ್ಣು ಮಗುವಿನ ಬಾಲ್ಯ ಮತ್ತು ಹದಿಹರೆಯದ ಸಂವೇದನಾಶೀಲತೆಗೆ ಸಿಕ್ಕ, ಸಂಕೀರ್ಣ ಸಮಾಜದ ಒಳನೋಟದ ಅನಾವರಣ ಇಲ್ಲಿದೆ. ಇದು ಒಂದರೊಳಗೊಂದು ಬೆಸೆದು ಕೊಂಡಿರುವುದು, ಇದನ್ನು ಬಿಡಿ ಬಿಡಿಯಾಗಿ ಬಿಡಿಸಿ ನೋಡುವುದು ತೊಡಕಿನ ಕೆಲಸ,” ಎನ್ನುತ್ತಾರೆ ರಘುನಾಥ್ ಕೃಷ್ಣಮಾಚಾರ್. ಅವರು ಪಿ. ಚಂದ್ರಿಕಾ ಅವರ ‘ಚಿಟ್ಟಿ’ ಕಾದಂಬರಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ..

ಕನ್ನಡ ಮಹಿಳಾ ಕಾದಂಬರಿ ಪರಂಪರೆಯ ಹಿನ್ನೆಲೆಯಲ್ಲಿ ನೋಡಿದಾಗ, ಈ ಕಾದಂಬರಿ ಅನನ್ಯ ಸ್ಥಾನ ಪಡೆದಿದೆ. ಇದಕ್ಕೆ ಕಾರಣ ಇದರಲ್ಲಿ, ಮೊದಲ ಬಾರಿಗೆ ಪ್ರಕಟಗೊಂಡ ಹೆಣ್ಣೊಳನೋಟ. ಹೆಣ್ಣು ಮಗುವಿನ ಬಾಲ್ಯ ಮತ್ತು ಹದಿಹರೆಯದ ಸಂವೇದನಾಶೀಲತೆಗೆ ಸಿಕ್ಕ, ಸಂಕೀರ್ಣ ಸಮಾಜದ ಒಳನೋಟದ ಅನಾವರಣ ಇಲ್ಲಿದೆ. ಇದು ಒಂದರೊಳಗೊಂದು ಬೆಸೆದು ಕೊಂಡಿರುವುದು, ಇದನ್ನು ಬಿಡಿ ಬಿಡಿಯಾಗಿ ಬಿಡಿಸಿ ನೋಡುವುದು ತೊಡಕಿನ ಕೆಲಸ. ಆದರೆ ಹೀಗೆ ಮಾಡುವುದಲ್ಲದೆ ಅಧ್ಯಯನಕ್ಕೆ ಬೇರೆ ಪರ್ಯಾಯ ಇಲ್ಲ.

ಇಲ್ಲಿನ ಕಥಾಹಂದರವನ್ನು ಹೀಗೆ ಸ್ಥೂಲವಾಗಿ ಗ್ರಹಿಸಬಹುದು. ಚಿಟ್ಟಿ ಎಂದು ಜನಪ್ರಿಯವಾಗಿರುವ ಈ ಕಥಾನಾಯಕಿಯ ಹೆಸರು ಸಿರೀಶ. ಅದು ಗೊತ್ತಾಗುವುದು ಕಾದಂಬರಿಯ ಕೊನೆಯಲ್ಲಿ, ಅವಳ ಮದುವೆಯಾದ ನಂತರ, ಅವಳ ಗಂಡ ಅವಳಿಗೆ ಇಷ್ಟವಿಲ್ಲದೆ, ಆ ಹೆಸರು ಹಿಡಿದು ಕರೆವಾಗ ಮಾತ್ರ.

ಇಡೀ ಕಥಾನಕ ಬಿಚ್ಚಿಕೊಳ್ಳುವುದು ಅವಳ ಪ್ರಜ್ಞೆಯ ಮೂಲಕವೇ.

ಅವರ ತಂದೆ ತಾಯಿಗಳಿಗೆ ಇವಳು ಸೇರಿ ಮೂರು ಮಕ್ಕಳ. ಇವಳೇ ಹಿರಿಯವಳು. ತಂಗಿ ಪುಟ್ಟಿ, ತಮ್ಮ ಸೀನು. ಇಬ್ಬರು ಬಂಡಾಯ ಪ್ರವೃತ್ತಿಯನ್ನು ಹೊಂದಿರುವವರು. ಅವರನ್ನು ಕಂಡರೆ ಇವಳಿಗೆ ಒಂದು ರೀತಿಯಲ್ಲಿ ಅಸೂಯೆ. ಅವರ ಅಮ್ಮ ಕಿರಿಯ ಮಗನೆಂದು ಅವನ ಪರ. ಸಾಂಪ್ರದಾಯಿಕ ಹೆಣ್ಣಿನ ಪ್ರತಿನಿಧಿಯಂತೆ ಇರುವ ಅವಳು, ಒಮ್ಮೊಮ್ಮೆ ಆಡುವ ಮಾತುಗಳು, ಇವಳಿಗೆ ಒಗಟು.ಏಕೆಂದರೆ ಅವು ಅನುಭವ ಜನ್ಯ. ತಂದೆ ತಾಯಿಗಳ ನಡುವೆ ನಿರಂತರ ಜಗಳಕ್ಕೆ ಕಾರಣ ತಂದೆಯ ಅನ್ಯಸಂಬಂಧ. ಇದೊಂದು ಇವಳಿಗೆ ಅರಗಿಸಿಕೊಳ್ಳಲು ಆಗದ ಸತ್ಯ. ಅವರ ಮನೆಯಲ್ಲಿ ಇರುವ ಅಜ್ಜಿ ,ಇವಳ ಮೇಲೆ ಸದಾ ಸವಾರಿ ಮಾಡುತ್ತಾರೆ. ಇರುವ ಒಬ್ಬಳೇ ಅತ್ತೆ,ಇವಳಿಗೆ ಕತೆಗಳ ಕಣಜ. ಇವಳ ಮುಂದಿನ ಬರಹಕ್ಕೆ ಅವಳದೇ ಪ್ರೇರಣೆ. ಅವಳ ಬೇಜವಾಬ್ದಾರಿ ಮಗನಿಗೆ ಇವಳನ್ನ ತಂದುಕೊಳ್ಳಲು ಆಸೆ. ಆದರೆ ಅವನು ಯಾರಿಗೂ ಇಷ್ಟವಿಲ್ಲ. ಅವಳ ಕೊನೆಗಾಲದಲ್ಲಿ ಕೂಡ, ಇವಳ ತಂದೆ ಅವಳ ಆಸೆಗೆ ಮಣಿಯುವುದಿಲ್ಲ. ಮಗಳ ಓದಿನ ಆಸೆ, ಸೈಕಲ್ ಆಸೆಗಳನ್ನು, ಇವಳ ತಂದೆ ಬೇರೆಯವರನ್ನು ಲೆಕ್ಕಿಸದೆ ಪೂರೈಸುವುದು, ಅವರಿಗೆ ಈ ಮಗಳ ಮೇಲೆ ಇದ್ದ ವಾತ್ಸಲ್ಯ ನಂಬಿಕೆಗಳ ದ್ಯೋತಕವಾಗಿದೆ. ಇವಳ ನಟನಾ ಸಾಮರ್ಥ್ಯವನ್ನು ಮೆಚ್ಚುವುದು, ಆ ಮನೆಯಲ್ಲಿ ಇವರೊಬ್ಬರೇ. ಹೀಗಾಗಿ ತಂದೆ ಮಗಳ ನಡುವಿನದು ಅಪೂರ್ವ ಬಾಂಧವ್ಯ. ಅವರ ತಂದೆಯ ಪ್ರಗತಿ ಪರ ದೃಷ್ಟಿಕೋನಕ್ಕೆ ಸಾಕ್ಷಿ. ಎಲ್ಲರ ಇಷ್ಟಕ್ಕೆ ವಿರುದ್ಧವಾಗಿ ಇವಳನ್ನು ಪದವಿಯ ತನಕ ಓದಿಸುತ್ತಾರೆ. ಇದು ಇವರ ಕೌಟುಂಬಿಕ ಲೋಕ. ಈ ಕೌಟುಂಬಿಕ ಲೋಕದಲ್ಲಿ ಅವರು ಸಾಕಿಕೊಂಡ ನಾಯಿ ಕೂಡ ಸ್ಥಾನ ಪಡೆದಿದೆ. ಅದು ಗೊತ್ತಾಗುವುದು ಅದು ತಪ್ಪಿಸಿಕೊಂಡು ಹೋದಾಗಲೆ. ಅದನ್ನು ಪತ್ತೆ ಮಾಡಿ ಕರೆದುಕೊಂಡು ಬರುವವರೆಗೆ ಯಾರಿಗೂ ನಿರಾಳವಿಲ್ಲ.

ಗೆಳತಿಯರ ಲೋಕ: ಇವರ ಗೆಳತಿಯರು. ಆರೋಗ್ಯ ಕ್ರೈಸ್ತ ಧರ್ಮಕ್ಕೆ ಸೇರಿದವರು. ನಕ್ಕಸ್ ಮುಸ್ಲಿಂ ಹೆಣ್ಣು, ಸರೋಜಾ, ಮುಂತಾದವರು... ಆದರೆ ಈ ಧಾರ್ಮಿಕ ಭಿನ್ನತೆ, ಅವರ ಗೆಳೆತನದ ಮಧ್ಯೆ ಎಂದೂ ಬರುವುದಿಲ್ಲ ಎನ್ನುವುದು ಮುಖ್ಯ. ಸದಾ ಒಟ್ಟಿಗೆ ಇರುವ ಇವರು ಮಾಡುವ, ತುಂಟತನಗಳಿಗೆ ಕೊನೆ ಮೊದಲಿಲ್ಲ. ಹುಣಸೆ ಹಣ್ಣಿನ ಮರ, ಹೂವಿನ ಗಿಡಗಳು, ಯಾರಾದದರೂ ಮನೆಯ ಕಿತಾಪತಿ ಹೀಗೆ ಎಲ್ಲಿ ನೋಡಿದರೂ ಇವರೇ.

ಅದರಲ್ಲಿ ಬೇಡದೆ ಇರುವುದರಲ್ಲೆಲ್ಲ ಮೂಗು ತೂರಿಸುವ, ಆ ಮೂಲಕ ಬೈಗುಳ ತಿನ್ನುವುದರಲ್ಲಿ ಇವಳೇ ಮೊದಲು. ಓದಿನಲ್ಲಿ ಸಾಧಾರಣ ಇದ್ದ ಇವಳು, ಒಮ್ಮೆ ಲೆಕ್ಕ ಮಾಡದೆ, ಸಹಪಾಠಿ ನಿಂಗರಾಜುವಿನಿಂದ ಕೆನ್ನೆಗೆ ಹೊಡೆಸಿ ಕೊಳ್ಳಬೇಕಾಗುತ್ತದೆ. ಅವನಿಗೆ ಇಷ್ಟ ಇಲ್ಲದಿದ್ದರೂ ಮೇಷ್ಟ್ರ ಬಲವಂತಕ್ಕೆ. ಅದಕ್ಕೆ ಕಾರಣ ಇವಳ ಮೇಷ್ಟ್ರು, ಅಲ್ಲಿನ ಮೇಡಂ ಜೊತೆಗೆ ಹೊಂದಿದ್ದ ಅನೈತಿಕ ಸಂಬಂಧದ ಕುರಿತು, ಅವರ ವಿರುದ್ಧ ಕಂಪ್ಲೇಂಟ್ ಪತ್ರ ಹೆಡ್ ಮಾಸ್ಟರ್ ಗೆ ಬರೆದುಕೊಟ್ಟು, ಅವರ ಮುನಿಸಿಗೆ ಕಾರಣವಾಗುವುದು.‌ ಮುಂದೆ ಅದೇ ನಿಂಗರಾಜು ಜೊತೆಗೆ, ಇವಳ ಸ್ನೇಹ ಸಂಬಂಧ ಬೆಳೆಯುತ್ತದೆ ತಾನು ಅವನನ್ನು ಪ್ರೀತಿಸುತ್ತೇನೆ, ಎಂದು ಹೇಳಿಕೊಳ್ಳುವ ಮಟ್ಟಕ್ಕೆ. ಆದರೆ ಅವನಿಗೆ ಯಾವುದೋ ಕಾಯಿಲೆ ಬಂದು ಸತ್ತಾಗ, ಇವಳಿಗೆ ಅದೊಂದು ಆಘಾತ ಉಂಟುಮಾಡುತ್ತದೆ.

ಅವಳ ಮನೋದೈಹಿಕ ಬೆಳವಣಿಗೆಗಳ ತಲ್ಲಣಗಳ ಅನಾವರಣ ಅತ್ಯಂತ ನೈಜವಾಗಿ ಮೂಡಿಬಂದಿದೆ. (ದೊಡ್ಡವಳಾಗುವಾಗಿನ, ಮುಟ್ಟಾದಾಗ, (ಪುಸ್ತಕದ ಮಾಹಿತಿಗೆ ಮನೆಯ ಆಚರಣೆಗೆ ಇರುವ ಅಂತರ ಕನ್ಯಾಪೊರೆ)

ಸಮಾಜ: ಸಂಕೀರ್ಣವಾದ ಸಮಾಜದ ಸ್ವರೂಪದ ಅನಾವರಣ: ಹೆಜ್ಜೆ ಹೆಜ್ಜೆಗೂ ಅವಳಿಗೆ ಸಮಾಜದಲ್ಲಿನ ನೈತಿಕ/ ಅನೈತಿಕ, ಮಾನವೀಯ/ ಅಮಾನವೀಯ, ಪುರುಷ ಪ್ರಧಾನ, ಜಾತಿ ನಿಷ್ಠ ಸಮಾಜದಲ್ಲಿ ಹೆಣ್ಣು ಗಂಡುಗಳು, ಎದುರಿಸಬೇಕಾದ ಸವಾಲುಗಳು, ಸೂಕ್ಷ್ಮ ಸಂವೇದನೆಯ ಅವಳು, ಬಗೆ ಬಗೆಯ ಅನುಭವಗಳನ್ನು ಪಕ್ಕಾಗುತ್ತಾಳೆ. ಛಿದ್ರ ಛಿದ್ರವಾದ ಸಮಾಜದ ವೈಪರೀತ್ಯಗಳು, ಅವಳಲ್ಲಿ ಹತ್ತು ಹಲವು ಭಾವನೆಗಳನ್ನು ಉಂಟುಮಾಡುತ್ತದೆ. ಯಾವುದು ಸರಿ ಯಾವುದು ತಪ್ಪು, ಎಂದು ತಿಳಿಯದೇ ದಿಗ್ಭ್ರಮೆ ಮೂಡಿಸುತ್ತದೆ.

ಜೀನತ್ ಅದ್ದುವಿನ ಮೊದಲನೇ ಹೆಂಡತಿ. ದರ್ಜಿಯಾಗಿ ಜೀವನ ನಡೆಸುವವಳು. ಅವಳು ಮಗು ಹೆರುವಾಗ ಇವಳು ಸಾಕ್ಷಿ. ಆಗ ಬಂದ ಎರಡನೇ ಹೆಂಡತಿ, ಇವಳು ಹೆತ್ತ ಮಗುವನ್ನು ತನ್ನದು ಎಂದು ಎತ್ತಿ ಕೊಂಡು ಹೋದಾಗ, ಇವಳಿಗೆ ತನ್ನ ಕಂದ ಎಲ್ಲಾದರೂ ಚೆನ್ನಾಗಿ ಇರಲಿ, ಎನ್ನುವುದೊಂದೇ ಉಳಿದ ದಾರಿ.

ಪದ್ದಮ್ಮಳ ಅವಳಿಗಿಂತ ಕಿರಿಯನ ಜೊತೆಗಿನ ಲೈಂಗಿಕ ಸಂಬಂಧಕ್ಕೆ ಇವಳೇ ಸಾಕ್ಷಿ. ಮನೆ ಪಾಲಿಗೆ ಬಂದ ತವರಿಗೆ ಬಂದ ಹೆಣ್ಣು, ಮೈದುನನ ಜೊತೆಗೆ ಅನೈತಿಕ ಸಂಬಂಧ ಬೆಳೆಸಿಕೊಳ್ಳುತ್ತಾಳೆ. ಅದನ್ನು ಬಾಯಿಬಿಟ್ಟಿದ್ದಕ್ಕೆ ಕೊಟ್ಟಿಗೆಯಲ್ಲಿ ಬಚ್ಚಿಟ್ಟುಕೊಂಡು, ರಾತ್ರಿ ಕಳೆದು, ಅಮ್ಮನ ಕೈಯಲ್ಲಿ ಒದೆ ತಿನ್ನಬೇಕಾಗುತ್ತದೆ.

ಮೇಲೆ ಉಲ್ಲೇಖಿಸಿದ ಎಲ್ಲಾ ಸಂಕೀರ್ಣವಾದ ಮಾನವ ಸಂಬಂಧಗಳು, ಇವಳಲ್ಲಿ ದಿಗ್ಭ್ರಮೆ ಮೂಡಿಸುವ, ಇವಳ ನಿದ್ದೆಗೆಡಿಸುವ ಸಾಧನಗಳಾಗುತ್ತವೆ.

ಆದರೆ ಈ ಎಲ್ಲವೂ ಅವಳ ಮೇಲೆ ಪ್ರಭಾವ ಬೀರಿದರು, ಅವಳನ್ನು ತನ್ನ ಶಿಕ್ಷಣದ ಮಹತ್ವಾಕಾಂಕ್ಷೆಯಿಂದ ವಿಚಲಿತಗೊಳಿಸುವುದಿಲ್ಲ. ಅದಕ್ಕೆ ಅವಳು ತನ್ನ ತಂದೆಯ ನೆರವಿನಿಂದ, ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎನ್ನುವುದು ಮುಖ್ಯ. ನಂತರದ ಅವಳ ವೈವಾಹಿಕ ಜೀವನ, ಅವಳು ಪಡೆದ ಪ್ರಬುದ್ಧತೆಗೆ ಸಾಕ್ಷಿ. ಎಲ್ಲರೂ ಬೆರಳುಕಚ್ಚುವಂತೆ, ಅವಳು ತನ್ನ ಸಂಸಾರದ ಸರಿಗಮದಲ್ಲಿ ತೊಡಗಿಸಿಕೊಳ್ಳುತ್ತಾಳೆ.

ದುಃಸ್ವಪ್ನದಂತಹ ಬದುಕಿನ ವಾಸ್ತವಗಳನ್ನು ಮೀರಲು ಕನಸುಗಳ, ಗಂಧರ್ವ ಲೋಕ ವಿಹಾರದಂತಹ, ರೂಪಕಗಳನ್ನು ಬಳಸಿರುವುದು ಲೇಖಕಿಯ ಕಥನ ಕಲೆಯ ಸಿಧ್ಧಿಯ ದ್ಯೋತಕವಾಗಿದೆ.

MORE FEATURES

ಕವಿತೆಯ ಓದು ಒಂದು ವಿಶೇಷ ಅನುಭವವನ್ನು ಒದಗಿಸಬೇಕು

24-11-2024 ಬೆಂಗಳೂರು

"ನನಗೆ ತಿಳಿದ ಮಟ್ಟಿಗೆ ಕವಿತೆಯಲ್ಲಿ ಸೌಂದರ್ಯ ಮೀಮಾಂಸೆ (Aesthetics) ಇರಬೇಕು, ಜೊತೆಗೆ ವಿಚಾರ ಲಹರಿಯು ಸೇರಿರಬೇ...

ಕಾದಂಬರಿಯ ಕಟ್ಟುವಿಕೆ ಮಹಾಭಾರತವನ್ನು ನೆನಪಿಸಿತು…

23-11-2024 ಬೆಂಗಳೂರು

“ನಾನು ಇದನ್ನು ಓದುತ್ತಾ ಅಚ್ಚರಿಗೊಂಡಿದ್ದೇನೆ; ದಿಗ್ಭ್ರಾಂತನಾಗಿದ್ದೇನೆ; ಕಣ್ಣಂಚನ್ನು ಒದ್ದೆಯಾಗಿಸಿಕೊಂಡಿದ್ದೇನ...

ಇಲ್ಲಿ ಭಿನ್ನವಾದ ಕಥೆಯಿದೆ- ಜೀವಾನುನಭವವಿದೆ

23-11-2024 ಬೆಂಗಳೂರು

“ಸ್ವಲ್ಪ ಎಡವಿದರೂ ಕಥೆ ಕಾಮದಿಂದ - ಪ್ರೇಮಕ್ಕೂ ಪ್ರೇಮದಿಂದ - ಕಾಮಕ್ಕೂ ಹೊರಳಿಕೊಳ್ಳಬಹುದೆಂಬ ಎಚ್ಚರಿಕೆಯಿಂದಲೇ ನ...