ಸಾಹಿತ್ಯವೆಂಬುದು ಕೇವಲ ಭಾವನೆಗಳು, ರಂಜನೆಯ ವಿಷಯವಲ್ಲ; ಅದು ಬದುಕನ್ನು ಅರಿತು ಬೋಧಿಸುವ ಕಲ್ಪವೃಕ್ಷ ಎಂಬ ಸತ್ಯವನ್ನು ಲೇಖಕರು ಈ ಕೃತಿಯ ಮೂಲಕ ಧೃಡೀಕರಿಸಿದ್ದಾರೆ ಎನ್ನುತ್ತಾರೆ ಲೇಖಕ, ಪ್ರಕಾಶಕ ಶ್ರೀಧರ ಬನವಾಸಿ. ಲೇಖಕ ಮಹಾದೇವ ಬಸರಕೋಡ ಅವರ ಆರದಿರಲಿ ಬೆಳಕು ಕೃತಿಯಲ್ಲಿ ಬರೆದಿರುವ ಪ್ರಕಾಶಕರ ಮಾತು..
`ಆತ್ಮಶಕ್ತಿಯ ತೇಜ ಪ್ರಜ್ವಲಿಸಿ ಚಲಿಸುತಿಹ
ವಜ್ರವೀರ್ಯದ ಕ್ಷೀಣದೇಹಿಯನು ನೀನೋಡು!
ಇರುಳೆದೆಯ ಸೀಳಿ ನಡೆಯುವ ಸೊಡರ ಕುಡಿಯಂತೆ,
ಊರುಗೋಲಾಧಾರವಾಗಿ ಸಾಗುವ ಮುಂತೆ-
ಮುನ್ನಡೆಸುತಿಹನು ಜನಗಣವ ಮಾಂತ್ರಿಕನಂತೆ!”
ನಾಡಿನ ಹಿರಿಯ ಕವಿಗಳಾದ ಕಯ್ಯಾರ ಕಿಞ್ಞಣ್ಣ ರೈ ಅವರ ಕವಿತೋಕ್ತಿಯ ಈ ನುಡಿಯು ಬದುಕಿನ ಅಧ್ಯಾತ್ಮವನ್ನು ತಿಳಿಸುತ್ತದೆ. ಈ ಜಗತ್ತಿನಲ್ಲಿ ಈವರೆಗೆ ಜನ್ಮವೆತ್ತಿದ ಎಲ್ಲ ದಾರ್ಶನಿಕರು ಬದುಕನ್ನು ಸಾರ್ಥಕಗೊಳಿಸುವ ಹಲವು ಸೂತ್ರಗಳನ್ನು, ವಿಧಾನವನ್ನೇ ಹೆಚ್ಚು ಬೋಧನೆ ಮಾಡಿದ್ದಾರೆ. ವೇದಾಂತಿಗಳು ಶಾಸ್ತ್ರಗಳ ಮೂಲಕ ಪ್ರತಿಪಾದನೆ ಮಾಡಿದ್ದನ್ನೇ ಶಿವಶರಣರು ವಚನಗಳ ಮೂಲಕ ಸರಳವಾಗಿ ಇನ್ನೊಂದು ರೀತಿ ಜನಸಾಮಾನ್ಯರಿಗೆ ತಿಳಿಸಿದ್ದಾರೆ. `ಇರುವದೊಂದನ್ನೇ ತಿಳಿದವರು ಬಗೆಬಗೆಯಿಂದ ಕರೆಯುತ್ತಿರುವವರು’ -ಋಗ್ವೇದದ ಈ ಮಾತಿನಂತೆ ಮಾನವನು ಹುಟ್ಟಿದಾಗಿನಿಂದ ತನ್ನ ಸುತ್ತಮುತ್ತಲಿನ ಪ್ರಪಂಚದೊಳಗಿನ ಸತ್ಯಗಳ ಹುಡುಕಾಟದ ಪಾರಮಾರ್ಥಿಕ ನೆಲೆಯಲ್ಲೇ ಕಳೆಯುತ್ತಾನೆ, ಇಲ್ಲವೆ ಇಹಲೋಕದ ಸತ್ಯ ಸೌಂದರ್ಯಗಳ ಲಾಲನೆ ಪಾಲನೆಯಲ್ಲಿ ಲೌಕಿಕ ಜೀವನವನ್ನು ಕಳೆದುಬಿಡುತ್ತಾನೆ.
ಹೀಗೆ ಜಗತ್ತಿನ ಇರುವಿಕೆಗೂ ಅದನ್ನು ಬೆಳಗುತ್ತಿರುವ ಸತ್ಯದ ಆಳದಲ್ಲಿ ಒಂದು ಬಹುದೊಡ್ಡ ಜ್ಞಾನಭಂಡಾರವಿದೆ. ಆ ಸುಜ್ಞಾನವನ್ನು ಅರಿತವರು ಒಂದೊಂದು ರೀತಿ ವಿಚಾರ ಮಂಡನೆಗಳ ಮೂಲಕ ತಿಳಿಸುತ್ತಾ ಲೌಕಿಕ ಹಾಗೂ ಪಾರಮಾರ್ಥಿಕ ಬದುಕನ್ನು ನಂಬಿದ ಜನರಲ್ಲಿ ಸಣ್ಣ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಹೀಗೆ ತನ್ನೊಳಗೆ ಜ್ಞಾನವನ್ನು ವಿಚಾರ ಮಂಥನ ಮಾಡುತ್ತಾ, ತನಗೆ ಹೊಳೆದದ್ದನ್ನು ಇನ್ನೊಬ್ಬನಿಗೆ ತಿಳಿಸುವ ಪ್ರಕ್ರಿಯೆ ನಿರಂತರವಾದದ್ದು. ಈ ಒಂದು ಸಿಹಿ ಒರತೆಯ ಸಾಲಿಗೆ ಮಹಾದೇವ ಬಸಕರೋಡ ಅವರ `ಆರದಿರಲಿ ಬೆಳಕು’ ಕೃತಿಯು ಕೂಡ ಸೇರುತ್ತದೆ.
ಲೇಖಕ ಮಿತ್ರರಾದ ಮಹಾದೇವ ಬಸರಕೋಡ ತಮ್ಮ ಬರವಣಿಗೆಯ ಮೂಲಕ ಲೌಕಿಕ ಜಗತ್ತನ್ನು ಬಣ್ಣಿಸುವುದಿಲ್ಲ, ಅವರು ಈ ಜಗತ್ತಿನಲ್ಲಿ ಉದಯಿಸಿದ ದಾರ್ಶನಿಕರ ಮಾತುಗಳನ್ನು, ಬೋಧನೆಗಳನ್ನು ಅರಿತು ಅವುಗಳನ್ನು ಅಧ್ಯಯನ ಮಾಡಿ ಅದನ್ನು ಸರಳವಾಗಿ ಹೇಳುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದಾರೆ . ತಾವೊಬ್ಬ ಶಿಕ್ಷಕರಾಗಿ ತಮ್ಮ ಕೋಣೆಯೊಳಗಿನ ಮಕ್ಕಳಿಗೆ ಬೋಧನೆ ಮಾಡದೇ, ತಮ್ಮ ಲೇಖನಗಳ ಮೂಲಕ ಬೌದ್ಧಿಕ ಶಿಕ್ಷಣವನ್ನು ತಿಳಿಸುತ್ತಿದ್ದಾರೆ. ಈ ಮಾತಿಗೆ ಅವರ ಈ ಹಿಂದಿನ ಕೃತಿಗಳು, ಕವಿತೆಗಳು ಸಾಕ್ಷಿಯಾಗುತ್ತವೆ.
ಸಾಹಿತ್ಯವೆಂಬುದು ಕೇವಲ ಭಾವನೆಗಳು, ರಂಜನೆಯ ವಿಷಯವಲ್ಲ; ಅದು ಬದುಕನ್ನು ಅರಿತು ಬೋಧಿಸುವ ಕಲ್ಪವೃಕ್ಷ ಎಂಬ ಸತ್ಯವನ್ನು ಲೇಖಕರು ಈ ಕೃತಿಯ ಮೂಲಕ ಧೃಡೀಕರಿಸಿದ್ದಾರೆ. ಈ ಕೃತಿಯಲ್ಲಿನ ಎಲ್ಲ ಲೇಖನಗಳು ಕನ್ನಡದ ಜನಪ್ರಿಯ ದಿನಪತ್ರಿಕೆಗಳಾದ ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ತನ್ಮೂಲಕ ಓದುಗರ ಮನೋಲ್ಲಾಸವು ಇನ್ನಷ್ಟು ಘಮಘಮಿಸಿ ಅರಳುವಂತೆ ಮಾಡಲು ಇವರ ಜೀವನ ದರ್ಶನದ ಲೇಖನಗಳು ಈಗ ಕೃತಿ ಸ್ವರೂಪದಲ್ಲಿ ಬರುತ್ತಿರುವುದು ಸಂತಸದ ವಿಷಯ. ಬದುಕನ್ನು ಅರಿತು ಪ್ರೀತಿಸುವವನಿಗೆ ಈ ಕೃತಿಯು ಮೌಲ್ಯಯುತ ನೆಲೆಗಟ್ಟನ್ನು ಒದಗಿಸುತ್ತದೆ.
-ಶ್ರೀಧರ ಬನವಾಸಿ
“ಇಲ್ಲಿನ ಚೌಪದಿಗಳನ್ನು ಬರೆಯುವಾಗ ನನಗಾದ ಸಂತೋಷ ಅವರ್ಣನೀಯ, ಪದಬಣ್ಣನೆಗೆ ನಿಲುಕದ ಸಂಗತಿ. ಅದೊಂದು ಆನಂದದ ರಸಯಾತ...
"ಚಲನಚಿತ್ರಕ್ಕೆ ನಿರ್ದೇಶನ ಮಾಡುವುದೆಂದರೆ, ಕಲೆ ಹಾಗೂ ತಂತ್ರಜ್ಞಾನ ಇವೆರಡನ್ನೂ ಮೀರಿದ ವಿಶೇಷವಾದ ಕೌಶಲ್ಯವನ್ನು ಬ...
"ತಮ್ಮದೇ ಅನುಭವಗಳ ಪರಿಧಿಯಲ್ಲಿ ಬರುವ ಮೆಟ್ರೊ ನಿಲ್ದಾಣ ಮತ್ತದರ ಕಾರ್ಯಚಟುವಟಿಕೆ, ಬೆಂಗಳೂರು ನಗರ ಮತ್ತು ಕೋಲ್ಕತಾ...
©2024 Book Brahma Private Limited.