"ಮನಸೇ ನನ್ನ ಮನಸೇ" ಇದೊಂದು ಅದ್ಭುತ ಪ್ರಬಂಧ ಸಂಕಲನ : ದೀಕ್ಷಿತ್ ನಾಯರ್ 


"ಗೆಳೆಯರಿರಲಿ ಕೊನೆತನಕ" ಪ್ರಬಂಧದಲ್ಲಿ ಬಿ ಆರ್ ಎಲ್ ಅಮೂಲ್ಯವಾದ ಗೆಳೆತನಕ್ಕಾಗಿಯೇ ಮಿಡಿಯುವವರು ಮತ್ತು ತುಡಿಯುವವರು ಎಂಬುದು ತಿಳಿಯುತ್ತದೆ. ಹೀಗೆ ಪ್ರತಿಯೊಂದು ಪ್ರಬಂಧಗಳಲ್ಲೂ ಬಿ ಆರ್ ಎಲ್ ಬೇಕಾದ್ದನ್ನೆ ಕೊಡುವಲ್ಲಿ ಯಶಸ್ವಿಯಾಗುತ್ತಾ ಸಾಗಿದ್ದಾರೆ. ಯಾವ ಪ್ರಬಂಧಗಳನ್ನು ಪಕ್ಕಕ್ಕೆ ಸರಿಸುವಂತಿಲ್ಲ. ಮಾಗಿದ ಅನುಭವಗಳಿಂದ ಕೂಡಿರುವ ರಸವತ್ತಾದ ಬರಹಗಳನ್ನು ನಾವು ಅನುಭವಿಸಬೇಕು ಅಷ್ಟೇ" ಎನ್ನುತ್ತಾರೆ ವಿಮರ್ಶಕ ದೀಕ್ಷಿತ್ ನಾಯರ್ . ಅವರು ಕವಿ ಬಿ ಆರ್ ಲಕ್ಷ್ಮಣ್ ರಾವ್ ಅವರ "ಮನಸೇ ನನ್ನ ಮನಸೇ" ಪ್ರಬಂಧ ಮಾಲೆ ಪುಸ್ತಕಕ್ಕೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ಕವಿ ಬಿ ಆರ್ ಲಕ್ಷ್ಮಣ್ ರಾವ್ ಅವರು ತಮ್ಮ ಕವಿತೆಗಳ ಮೂಲಕವೇ ಜನ ಮಾನಸ ತಲುಪಿ ಕೇವಲ ಕವಿತೆಗಳಿಂದಲೇ ಒಂದು ತಲೆಮಾರಿನ ಜನರ ಮನೆತನವನ್ನು ಶ್ರೀಮಂತಗೊಳಿಸಿದವರು. ಪ್ರತಿಯೊಬ್ಬರನ್ನೂ ಮುದಗೊಳಿಸುವ ಅಪಾರ ಕವಿತ್ವದ ಶಕ್ತಿ ಬಿ ಆರ್ ಎಲ್ ಅವರಿಗೆ ಜನ್ಮತಃ ಸಿದ್ಧಿಸಿದೆ. ಕವಿತೆಗಳೊಂದಿಗೆಯೇ ಬದುಕುವ, ಕವಿತೆಗಳ ಮುಖೇನವೇ ಮಾತಿಗಿಳಿಯುವ, ಕವಿತೆಯನ್ನೇ ತಮ್ಮ ಪುರುಷಾರ್ಥವಾಗಿಸಿಕೊಂಡು ಸದಾ ಜೀವನೋತ್ಸಾಹಿಯಾಗಿ ಇರುವ ಬಿ ಆರ್ ಎಲ್ ಕವಿತೆಯಂತೆಯೇ ಕಥೆ,ನಾಟಕ ಮತ್ತು ಇನ್ನಿತರ ಸಾಹಿತ್ಯ ಪ್ರಕಾರಗಳಲ್ಲೂ ಸಮರ್ಥವಾಗಿ ಬರೆಯಬಲ್ಲರು. ಆದರೆ ಕನ್ನಡ ಸಾರಸ್ವತ ಲೋಕ ಬಿ ಆರ್ ಎಲ್ ಅವರನ್ನು 'ಅಪ್ಪಟ ಕವಿ' ಎಂದೇ ಗುರುತಿಸಿ ಸತ್ಕರಿಸಿದೆ. ಸಿಟ್ರಿಕ್ ಕವಿ ಎಂದು ಕರೆಯುವುದರ ಮೂಲಕ ಅವರ ಕಾವ್ಯ ಕೃಷಿಯನ್ನು ಅಭಿಮಾನದಿ ಗೌರವಿಸಿದೆ.

ಅದೆಲ್ಲಾ ಇರಲಿ; ಇಂದಿಗೂ ಓದಿಸಿಕೊಳ್ಳುವ ಮತ್ತು ಹೊಸ ತಲೆಮಾರಿನವರಿಗೂ ಇಷ್ಟವಾಗುವ ಬಿ ಆರ್ ಎಲ್ ಇತ್ತೀಚಿಗೆ 'ಮನಸೇ ನನ್ನ ಮನಸೇ' ಎಂಬ ತಮ್ಮ ಪ್ರಬಂಧಗಳ ಸಂಕಲನವನ್ನು ಹೊರತಂದಿದ್ದಾರೆ. 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಪ್ನ ಬುಕ್ ಹೌಸ್ ಆ ಕೃತಿಯನ್ನು ಪ್ರಕಟಿಸಿದೆ.

ಅರೆ! ಒಬ್ಬ ತಾಜಾ ಕವಿ ಪ್ರಬಂಧಗಳನ್ನು ಹೇಗೆ ಬರೆಯಬಲ್ಲರು? ಎಂಬ ಪ್ರಶ್ನೆ ಸಾಮಾನ್ಯವಾಗಿ ಹುಟ್ಟುಕೊಳ್ಳುತ್ತದೆ. ಆದರೆ ಪ್ರತಿಯೊಂದು ಪ್ರಬಂಧಗಳನ್ನು ಗಂಭೀರವಾಗಿ ಓದಲು ಶುರುವಿಟ್ಟಾಗ ಬಿ ಆರ್ ಎಲ್ ಅವರೊಳಗಿನ ಮತ್ತೊಂದು ಪ್ರತಿಭೆಯು ಅನಾವರಣಗೊಳ್ಳುತ್ತದೆ. ಬಿ ಆರ್ ಎಲ್ ಅವರದ್ದು ಕವಿತೆಯಂತೆಯೇ ಗದ್ಯ ಬರಹಗಳಲ್ಲೂ ಪಳಗಿದ ಕೈ ಎಂಬುದು ತಿಳಿಯುತ್ತದೆ. ತಮ್ಮದೇ ಜೀವನಾನುಭವ ಮತ್ತು ವಾಸ್ತವತೆಗೆ ತಕ್ಕುದಾದ ಬಿಡಿ ಬರಹಗಳನ್ನು ಓದುಗರ ಎದುರಿಗಿಟ್ಟು ಬಿ ಆರ್ ಎಲ್ ಆಪ್ತರಾಗಿದ್ದಾರೆ.

ದಶಕಗಳ ಕಾಲ ಕಾವ್ಯವನ್ನೇ ಧ್ಯಾನಿಸಿದ ಬಿ ಆರ್ ಎಲ್ ಅವರ ಗದ್ಯಶೈಲಿಯ ಬರಹವೂ ಓದುಗರನ್ನು ಒಗ್ಗಿಕೊಳ್ಳುತ್ತದೆ.

ಲಘು ಹಾಸ್ಯ, ವಿಡಂಬನೆ, ವಿಷಾದ ಮತ್ತು ಜೀವನ ತತ್ವವನ್ನು ಸಾರುವ ಪ್ರಬಂಧಗಳ ಒಟ್ಟು ಹೂರಣವಾದ ಈ ಕೃತಿಯನ್ನು ಒಂದೇ ಕಂತಿನಲ್ಲಿ ಓದಿ ಮುಗಿಸಬೇಕೆಂಬ ಪ್ರೇರಣೆ ಸಿಗುತ್ತದೆ. ಕೃತಿಯಲ್ಲಿನ 27 ಪ್ರಬಂಧಗಳು ಕೂಡ ಒಂದಕ್ಕಿಂತ ಒಂದು ಭಿನ್ನವಾಗಿಯೂ ಮತ್ತು ವಿಶೇಷವಾಗಿಯೂ ಕಾಣಸಿಗುತ್ತದೆ. ಬಿ ಆರ್ ಎಲ್ ಅವರ ಕವಿಯಾತ್ಮ ಪ್ರತಿಯೊಂದು ಪ್ರಬಂಧಗಳಲ್ಲೂ ಇಣುಕಿ ನೋಡಿರುವುದರಿಂದ ಓದುಗರಿಗೆ ಮತ್ತಷ್ಟು ಮಜಾ ಸಿಗುತ್ತದೆ. ತಮ್ಮ ದಾಂಪತ್ಯದ ಸಖ್ಯತೆ ಮತ್ತು ಪತ್ನಿಯ ಬಗೆಗೆ ತಾವು ಇಟ್ಟುಕೊಂಡಿರುವ ಗೌರವವನ್ನು ಕೆಲವು ಬರಹದಲ್ಲಿ ದಾಖಲಿಸಿರುವುದರಿಂದ ಬಿ ಆರ್ ಎಲ್ ನಮಗೆ ಮತ್ತಷ್ಟು ಹತ್ತಿರವಾಗುತ್ತಾರೆ.

'ವೈಪ್ ಅಫ್ರಿಯೇಶನ್ ಡೇ' ಎಂಬ ಪ್ರಬಂಧದಲ್ಲಿ ಪತ್ನಿಯನ್ನು ಗುಣಗಾನ ಮಾಡುವುದರೊಂದಿಗೆ ಕನ್ನಡ ಕಾವ್ಯ ಲೋಕದ ಪರಂಪರೆಯ ಕವಿಗಳು ತಮ್ಮ ಹೆಂಡತಿಯರನ್ನು ಹೊಗಳಿದ ಸನ್ನಿವೇಶ ಮತ್ತು ಕವಿತೆಗಳನ್ನು ಅಲ್ಲಲ್ಲಿ ಸೇರಿಸುತ್ತಾ ಪತ್ನಿಯ ಬಗೆಗೆ ತಮಗಿರುವ ಅಪಾರ ಕಕ್ಕುಲತೆ ಮತ್ತು ಒಲವನ್ನು ತಮ್ಮದೇ ಕವಿತೆಯ ಮೂಲಕ ಹೀಗೆ ತೋರಗೊಟ್ಟಿದ್ದಾರೆ;

"ಇವಳಿದ್ದಾಳೆ
ಬಹುತೇಕ ಎಲ್ಲರ
ಮನೆಯಲ್ಲಿ
ತನ್ನ ಪಾಡಿಗೆ ತಾನು
ಕಾಣದ ಪ್ರಾಣ ವಾಯುವಿನಂತೆ"

ವಾರೆ ವ್ಹಾ! ಬಿ ಆರ್ ಎಲ್ ದಾಂಪತ್ಯದ ಕವಿ ಎಂಬುದಕ್ಕೆ ಮತ್ತೇನು ಬೇಕು? ಮುಂದುವರೆದಂತೆ 'ಪದ್ಯವಂತರಿಗಿದು ಕಾಲವಲ್ಲ' ಎಂಬ ಪ್ರಬಂಧದಲ್ಲಿ ಇಂದಿನ ಯುವ ಬರಹಗಾರರು ಕಾವ್ಯದ ಬಗೆಗೆ ತೋರುತ್ತಿರುವ ಅಸಡ್ಡೆ ಮತ್ತು ಬರೆದದ್ದನ್ನೇ ಶ್ರೇಷ್ಠ ಎಂದುಕೊಳ್ಳುತ್ತಾ ಭ್ರಮೆಯಲ್ಲಿರುವ ಸ್ಥಿತಿಯ ಬಗ್ಗೆ ವಿಷಾದವನ್ನು ವ್ಯಕ್ತಪಡಿಸಿದ್ದಾರೆ. ಓದುಗರು ಅದನ್ನು ಸಣ್ಣ ಗದರಿಕೆ ಅಥವಾ ಎಚ್ಚರಿಕೆ ಅಂತಲೂ ತಿಳಿದುಕೊಳ್ಳಬಹುದು.

"ಫೇಸ್ಬುಕ್ಕಿನಲ್ಲಿ ಕಿಕ್ಕಿರಿದ ಚಿಳ್ಳೆಪಿಳ್ಳೆ
ನಿರ್ಗುಳ್ಳೆ ಪದ್ಯಕಾಲ|
ಧ್ಯಾನಸ್ಥ ಮನಸ್ಸಿನ ಗಂಭೀರ ಕಾವ್ಯಕ್ಕೆ
ಇಂಬೇ ಇರದಂತ ಹುಂಬಕಾಲ?"

ಈ ಮೇಲಿನ ಸಾಲುಗಳನ್ನು ನೋಡಿದಾಗ ಹಿರಿ ಕವಿಯಾಗಿ ಬಿ ಆರ್ ಎಲ್ ಅವರಿಗೆ ಸದ್ಯದ ಬರಹಗಾರರ ಬಗೆಗಿರುವ ವಿಷಾದವನ್ನು ಕಾಣಬಹುದು.

"ಗೆಳೆಯರಿರಲಿ ಕೊನೆತನಕ" ಪ್ರಬಂಧದಲ್ಲಿ ಬಿ ಆರ್ ಎಲ್ ಅಮೂಲ್ಯವಾದ ಗೆಳೆತನಕ್ಕಾಗಿಯೇ ಮಿಡಿಯುವವರು ಮತ್ತು ತುಡಿಯುವವರು ಎಂಬುದು ತಿಳಿಯುತ್ತದೆ. ಹೀಗೆ ಪ್ರತಿಯೊಂದು ಪ್ರಬಂಧಗಳಲ್ಲೂ ಬಿ ಆರ್ ಎಲ್ ಬೇಕಾದ್ದನ್ನೆ ಕೊಡುವಲ್ಲಿ ಯಶಸ್ವಿಯಾಗುತ್ತಾ ಸಾಗಿದ್ದಾರೆ. ಯಾವ ಪ್ರಬಂಧಗಳನ್ನು ಪಕ್ಕಕ್ಕೆ ಸರಿಸುವಂತಿಲ್ಲ. ಮಾಗಿದ ಅನುಭವಗಳಿಂದ ಕೂಡಿರುವ ರಸವತ್ತಾದ ಬರಹಗಳನ್ನು ನಾವು ಅನುಭವಿಸಬೇಕು ಅಷ್ಟೇ. ಬಿ ಆರ್ ಎಲ್ ಎಂಬ ಅದ್ಭುತ ಬರಹಗಾರನಿಗೆ ದೀರ್ಘ ದಂಡ ನಮಸ್ಕಾರ. ಇಂತಹ ಅದ್ಭುತ ಸಂಕಲನವನ್ನು ನಮ್ಮ ಕೈಗಿರಿಸಿದ್ದಕ್ಕೆ ವಂದನೆ. ಬರೆಯುವ ಕಾಯಕ ಅವರಿಗಿರಲಿ. ಓದುವ ಪುಣ್ಯ ನಮಗಿರಲಿ.

- ದೀಕ್ಷಿತ್ ನಾಯರ್

ದೀಕ್ಷಿತ್ ನಾಯರ್ ಅವರ ಲೇಖಕ ಪರಿಚಯಕ್ಕಾಗಿ

 

MORE FEATURES

ಅಜ್ಞಾತವೆಂಬುದು ಬಗೆದಷ್ಟೂ ಹಿರಿದಾಗುವ, ಅರಿತಷ್ಟೂ ಆಳವಾಗುವ ಕ್ರಿಯೆ

23-09-2024 ಬೆಂಗಳೂರು

“ಅಜ್ಞಾತವೆಂಬುದು ಬಗೆದಷ್ಟೂ ಹಿರಿದಾಗುವ, ಅರಿತಷ್ಟೂ ಆಳವಾಗುವ, ಒಳಗೆ ಹೊಕ್ಕಷ್ಟೂ ವಿಸ್ತಾರವಾಗುವ ಅಚ್ಚರಿ ಎನ್ನುತ...

ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ: ರಾಜಕುಮಾರ ಮಾಳಗೆ

23-09-2024 ಬೆಂಗಳೂರು

“ಜಿ.ಬಿ.ವಿಸಾಜಿ ಅವರು ಸಾಹಿತ್ಯದ ಜೊತೆಗೆ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಭಾಲ್ಕಿ ತಾಲೂಕು ವರದಿಗಾರ...

ಸಾವು ಯಾವಾಗಲೂ ಕಂಡ ಅನುಭವವೇ ಹೊರತು ಉಂಡ ಅನುಭವ ಅಲ್ಲ!

22-09-2024 ಬೆಂಗಳೂರು

“ಸಾವನ್ನು ಹಲವು ದಿಕ್ಕುಗಳಿಂದ ನೋಡಲು ಸಾಧ್ಯ. ಸ್ವಂತ ಸಾವಿನ ಆಚೆಗೂ ಹಲವು ಬಗೆಯ ಸಾವುಗಳಿವೆ. ಈ ಸಂಕಲನ ಅಂತಹ ಬಹು...