Date: 06-01-2023
Location: ಹಾವೇರಿ
ನಮ್ಮ ಮುಂದಿರುವ ಬೃಹತ್ ಪ್ರಶ್ನೆ ಎಂದರೆ ಕನ್ನಡದಲ್ಲಿಯೇ ಉನ್ನತ ಶಿಕ್ಷಣವನ್ನು ನೀಡಲು, ಪಡೆಯಲು ನಮಗೇಕೆ ಸಾಧ್ಯವಾಗಿಲ್ಲ ಎನ್ನುವುದು? ಒಂದೊಮ್ಮೆ ಅದು ಸಾಧ್ಯವಿಲ್ಲ ಎನ್ನುವ ಭಾವನೆಯನ್ನು ಹೇಡಿಗಳಾರಾದರೂ ತುಂಬಿದ್ದರೆ ಅವರನ್ನು ಕನ್ನಡಿಗರು ಎಂದಾದರೂ ಕರೆಯಲಾದೀತೇ?
ಕನ್ನಡದಲ್ಲಿಯೂ ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣ ನೀಡಿಯೇ ತೀರುತ್ತೇವೆ ಎನ್ನುವ ಪಣ ತೊಡಿ ಎಂದು ಸಮ್ಮೇಳನದ ಅಧ್ಯಕ್ಷರಾದ ಸಾಹಿತಿ ದೊಡ್ಡರಂಗೇಗೌಡ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಯುವಪೀಳಿಗೆ ತಮ್ಮ ಜೀವನದಲ್ಲಿ ಒಂದಕ್ಷರವನ್ನೂ ಕೇಳಿರದ ಒಂದು ಭಾಷೆಯಾದ ಜರ್ಮನ್, ಜಪಾನೀಸ್, ಸ್ಪ್ಯಾನಿಷ್, ರಷಿಯನ್, ಮ್ಯಾಂಡರೀನ್ ಮುಂತಾದ ಯಾವುದೇ ಆಗಿರಲಿ, ಆ ಭಾಷೆಗಳನ್ನಾಡುವ ದೇಶಗಳಿಗೆ ಶಿಕ್ಷಣಕ್ಕೆಂದು ತೆರಳಿದಾಗ ಅಲ್ಪ ಅವಧಿಯಲ್ಲಿಯೇ ಆ ಭಾಷೆಗಳನ್ನು ಅರೆಬರೆಯಾಗಿ ಕಲಿಯುತ್ತಾರೆ.
ಆ ಭಾಷೆಗಳ ಶಿಕ್ಷಣ ಮಾಧ್ಯಮದಲ್ಲಿಯೇ ವೈದ್ಯಕೀಯ ಶಿಕ್ಷಣವನ್ನೂ, ಇಂಜಿನಿಯರಿಂಗ್ ಶಿಕ್ಷಣವನ್ನೋ ಅಥವಾ ಮತ್ತಾವುದೋ ಉನ್ನತ ಶಿಕ್ಷಣ, ಪದವಿಗಳನ್ನೋ ನಿರಾಯಾಸವಾಗಿ ಪಡೆಯುತ್ತಾರೆ. ಹೀಗೆ ಆ ಭಾಷೆಗಳನ್ನೇ ತಿಳಿಯದ ಇಲ್ಲಿಂದ ಹೋದವರು ವರ್ಷಗಟ್ಟಲೆ ವಿವಿಧ ವಿಷಯಗಳಲ್ಲಿ ಸಂಶೋಧನೆಗಳನ್ನು ನಡೆಸಿ ಆ ಭಾಷೆಗಳಲ್ಲಿ ಪ್ರಬಂಧಗಳನ್ನು ಮಂಡಿಸಿದವರಿದ್ದಾರೆ. ಹೀಗಿರುವಾಗ ಹುಟ್ಟಾರಭ್ಯ ತಾವು ಆಡಿರುವ, ನಲಿದಾಡಿರುವ ತಮ್ಮದೇ ಭಾಷೆಯಲ್ಲಿ ವೈದ್ಯಕೀಯ, ತಂತ್ರಜ್ಞಾನ ಮುಂತಾದ ವೃತ್ತಿಪರ ಶಿಕ್ಷಣಗಳನ್ನಾಗಲಿ, ವಿವಿಧ ಉನ್ನತ ಶಿಕ್ಷಣಗಳನ್ನಾಗಲಿ ತಮ್ಮದೇ ಭಾಷೆಯಲ್ಲಿ ಪಡೆಯುವ ಸಾಧ್ಯತೆ ಇದ್ದರೆ ಅವರು ಅದನ್ನು ನಿರಾಕರಿಸುವರೇ?
ಈ ಹಿನ್ನೆಲೆಯಲ್ಲಿ ನಮ್ಮ ಮುಂದಿರುವ ಬೃಹತ್ ಪ್ರಶ್ನೆ ಎಂದರೆ ಕನ್ನಡದಲ್ಲಿಯೇ ಉನ್ನತ ಶಿಕ್ಷಣವನ್ನು ನೀಡಲು, ಪಡೆಯಲು ನಮಗೇಕೆ ಸಾಧ್ಯವಾಗಿಲ್ಲ ಎನ್ನುವುದು? ಒಂದೊಮ್ಮೆ ಅದು ಸಾಧ್ಯವಿಲ್ಲ ಎನ್ನುವ ಭಾವನೆಯನ್ನು ಹೇಡಿಗಳಾರಾದರೂ ತುಂಬಿದ್ದರೆ ಅವರನ್ನು ಕನ್ನಡಿಗರು ಎಂದಾದರೂ ಕರೆಯಲಾದೀತೇ?
ಸಮಸ್ತ ಕನ್ನಡಿಗರ ಪರವಾಗಿ ಒಂದು ಗಟ್ಟಿ ನಿರ್ಧಾರ ಮಾಡಿ ನಾನು ಓರ್ವ ಸಾಹಿತಿಯಾಗಿ ಆಗಲಿ, ಓರ್ವ ಕನ್ನಡ ಭಾಷಾ ಪ್ರಾಚಾರ್ಯನಾಗಿ ಆಗಲಿ, ಕನ್ನಡದ ಮೇಲಿನ ಅಭಿಮಾನಕ್ಕಾಗಿಯಾಗಲಿ ನಿಮ್ಮ ಮುಂದೆ ಈ ಮಾತು ಹೇಳುತ್ತಿಲ್ಲ. ಬದಲಿಗೆ, ಶಿಕ್ಷಣ ವ್ಯವಸ್ಥೆಯನ್ನು ಬಹುಕಾಲ ಕಂಡಿರುವ, ಅದರ ಒಳಹೊರಗನ್ನು ಅರಿತವನಾಗಿ ಹೇಳುತ್ತಿದ್ದೇನೆ. ಕನ್ನಡದಲ್ಲಿಯೂ ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣ ನೀಡಿಯೇ ತೀರುತ್ತೇವೆ ಎನ್ನುವ ಪಣ ತೊಡಿ ಎಂದು ದೊಡ್ಡರಂಗೇಗೌಡರು ಆಗ್ರಹಿಸಿದ್ದಾರೆ.
ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣಗಳಲ್ಲಿ ಕನ್ನಡ ಒಂದು ಶಿಕ್ಷಣ ಮಾಧ್ಯಮವಾಗಿ ರಾರಾಜಿಸುವಂತೆ ಮಾಡಲು ನಾವು ಪಣ ತೊಡಬೇಕು. ಇಂಗ್ಲಿಷ್ನಲ್ಲಿಯೇ ಉನ್ನತ ಶಿಕ್ಷಣವನ್ನು ಪಡೆಯುತ್ತೇನೆ ಎನ್ನುವವರು ಅದರಲ್ಲಿಯೇ ಪಡೆಯಲಿ, ಅವರ ನಿರ್ಧಾರದ ಬಗ್ಗೆ ನನಗೆ ತಕರಾರಿಲ್ಲ. ಆದರೆ, ಕನ್ನಡದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ ಎನ್ನುವ ಕೊರಗು ಯಾವುದೇ ಕನ್ನಡಿಗನಿಗೆ ಇರಬಾರದು. ವಿಜ್ಞಾನದ ವಿಷಯಗಳನ್ನು ಕನ್ನಡದಲ್ಲಿ ಕಲಿಯಲು ಸಾಧ್ಯವಾಗದ ಕಾರಣಕ್ಕೆ ಈ ನಾಡಿನ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ತನಗಿಷ್ಟವಿಲ್ಲದ ಮತ್ತಾವುದೋ ಶಿಕ್ಷಣವನ್ನು ಪಡೆಯುವಂತಾಗಬಾರದು.
ಈ ನಿಟ್ಟಿನಲ್ಲಿ ಮೊದಲಿಗೆ ನಾವು ಪರಿಹರಿಸಿಕೊಳ್ಳಬೇಕಾದ ವಿಷಯವೆಂದರೆ, ವೃತ್ತಿಪರ ಶಿಕ್ಷಣ, ವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷ್ ಭಾಷೆಯಲ್ಲಿಯೇ ನೀಡಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿಯಮಾವಳಿ ಇದೆ. ಒಂದು ವೇಳೆ ಇಂತಹ ನಿಯಂತ್ರಣಗಳಿದ್ದರೆ ಅವು ಕನ್ನಡವನ್ನು ಮಾತ್ರವೇ ಅಲ್ಲ ಯಾವುದೇ ಭಾರತೀಯ ಭಾಷೆಯ ಮಹತ್ವಾಕಾಂಕ್ಷೆಯನ್ನು ಚಿವುಟಿ ಹಾಕುವಂಥದ್ದು. ಇಂತಹ ನಿಯಮಗಳು, ನಿಯಂತ್ರಣಗಳನ್ನು ನಾವು ರಾಜಕೀಯ ಇಚ್ಛಾಶಕ್ತಿಯಿಂದಲೇ ಪರಿಹರಿಸಿಕೊಳ್ಳಬೇಕು. ಆದರೆ, ಯಾವುದೇ ಕಾರಣಕ್ಕೂ ಇಂತಹ ನಿಯಂತ್ರಣ ಗಳನ್ನು ನೆಪವಾಗಿರಿಸಿಕೊಂಡು ನಮ್ಮ ಗುರಿಯಿಂದ ಹಿಂದೆಗೆಯಬಾರದು.
ನಮ್ಮ ರಾಜ್ಯದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣವನ್ನು ಕನ್ನಡ ಭಾಷೆಯಲ್ಲಿಯೇ ನೀಡುವ ತಲಾ ಒಂದೊಂದು ಕಾಲೇಜನ್ನಾದರೂ ಮುಂದಿನ ಮೂರು ವರ್ಷದ ಅವಧಿಯಲ್ಲಿ ನಾವು ಆರಂಭಿಸಬೇಕು ಎಂದು ಸಲಹೆ ನೀಡಿದರು.
ಕನ್ನಡದಲ್ಲಿ ಉನ್ನತ, ವೃತ್ತಿಪರ ಶಿಕ್ಷಣ ನೀಡುವ ವಿಚಾರವಾಗಿ ಆರಂಭಿಕ ವರ್ಷಗಳಲ್ಲಿ ಪ್ರಸ್ತುತ ಇರುವ ಆಯ್ದ ಕೆಲ ಪ್ರತಿಷ್ಠಿತ ಸರ್ಕಾರಿ ವೈದ್ಯಕೀಯ, ವಿಜ್ಞಾನ, ಇಂಜಿನಿಯರಿಂಗ್ ಕಾಲೇಜುಗಳ ಕಟ್ಟಡ, ಮೂಲಸೌಕರ್ಯವನ್ನೇ ಬಳಸಿಕೊಂಡು ಅಲ್ಲಿನ ಸಿಬ್ಬಂದಿ ಹಾಗೂ ಪಠ್ಯಕ್ರಮವನ್ನು ಸೂಕ್ತ ರೀತಿಯಲ್ಲಿ ಅಣಿಗೊಳಿಸುವ ಮೂಲಕ ಹಾಗೂ ಕನ್ನಡದಲ್ಲಿ ಕಲಿಸಬೇಕೆನ್ನುವ ಇಚ್ಛಾಶಕ್ತಿ ಇರುವ ಉತ್ಸಾಹಶೀಲ, ನುರಿತ ಬೋಧಕ ಸಿಬ್ಬಂದಿಯನ್ನು ಅಲ್ಲಿಗೆ ತರುವ ಮೂಲಕ ಕನ್ನಡದಲ್ಲಿಯೇ ಈ ಶಾಸ್ತಗಳನ್ನು ಕಲಿಯಲು ಮುಂದಾಗುವ ವಿದ್ಯಾರ್ಥಿಗಳ ಒಂದು ಪ್ರತ್ಯೇಕ ತಂಡ ಆರಂಭಿಸಬಹುದು. ಹೀಗೆ, ಕನ್ನಡದಲ್ಲಿಯೇ ವೃತ್ತಿಪರ ಶಿಕ್ಷಣವನ್ನು ಪಡೆಯಲು ಮುಂದಾಗುವ ಪ್ರತಿಭಾವಂತ ಮಕ್ಕಳ ಸಂಪೂರ್ಣ ಖರ್ಚುವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳುವ ಮೂಲಕ ವೃತ್ತಿಪರ ಕೋರ್ಸ್ಗಳನ್ನು, ಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ಕಲಿಯುವುದಕ್ಕೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಬೇಕು. ಈ ಮಕ್ಕಳಿಗೆ ವ್ಯಾವಹಾರಿಕ ಬಳಕೆಗೆ ಅಗತ್ಯವಾದ ರೀತಿಯಲ್ಲಿ, ಯಾವುದೇ ಕೀಳರಿಮೆಗೆ ಅವಕಾಶವಿಲ್ಲದಂತೆ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ, ಸಂವಹನ ಮಾಧ್ಯಮವಾಗಿ ಕಲಿಸಿದರೆ ಸಾಕು.
ಹೀಗೆ ಕಲಿತು ಪದವೀಧರ, ಸ್ನಾತಕೋತ್ತರ ಪದವೀಧರರಾದ ಮಕ್ಕಳಿಗೆ ಸರ್ಕಾರದ ಉದ್ಯೋಗಾವಕಾಶಗಳಲ್ಲಿ ವಿಶೇಷ ಪ್ರಾಶಸ್ತ್ಯವನ್ನು ನೀಡಬೇಕು. ಅವರ ಸೇವೆಯನ್ನು ಈ ನಾಡಿನ ಮೂಲೆಮೂಲೆಗಳಿಗೆ ಲಭ್ಯವಾಗುವಂತೆ ಮಾಡಬೇಕು. ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಪಾಸು ಮಾಡಿದವರು ಎಂದು ಹೇಳುತ್ತಿದ್ದ ರೀತಿಯಲ್ಲಿ, ಕನ್ನಡದಲ್ಲಿಯೇ ವೈದ್ಯಕೀಯ ಶಿಕ್ಷಣ, ಎಂಜಿನಿಯರಿಂಗ್ ಶಿಕ್ಷಣವನ್ನುಪಡೆದವರು ಇವರು ಎಂದು ಈ ನಾಡಿನ ಜನ ಇವರನ್ನು ಹೆಮ್ಮೆಯಿಂದ ಗುರುತಿಸುವಂತಾಗಬೇಕು ಎಂದು ಅವರು ನುದಿದರು.
ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...
ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...
ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...
©2025 Book Brahma Private Limited.