ಅಘೋರಿಗಳೇನೂ ಅತೀತರಲ್ಲ 

Date: 28-02-2025

Location: ಬೆಂಗಳೂರು


“ತಮ್ಮ ಪ್ರಾಣದ ಹಂಗು ತೊರೆದು, ಮಾಹಿತಿಗಾಗಿ ಅದೆಷ್ಟೋ ವರ್ಷಗಳು ತಪಸ್ಸಿನಂತೆ ಕಾದು, ಅವರು ಕರೆದಾಗಲೆಲ್ಲಾ, ನಿಂತ ಕಾಲಲ್ಲೇ ಕೆಲಸ, ಕಾರ್ಯ, ಸಂಸಾರ ಬಿಟ್ಟು ಹೊರಟುಬಿಡುವುದು ಸುಮ್ಮನೆ ಅಲ್ಲ,” ಎನ್ನುತ್ತಾರೆ ನಳಿನಿ. ಟಿ. ಭೀಮಪ್ಪ. ಅವರು ಸಂತೋಷಕುಮಾರ ಮಹೆಂದಳೆ ಅವರ “ಅಘೋರಿಗಳ ಲೋಕದಲ್ಲಿ” ಕೃತಿ ಕುರಿತು ಬರೆದ ವಿಮರ್ಶೆ.

‘ಅಘೋರಿಗಳ ಲೋಕದಲ್ಲಿ’ 3ಡಿ ಕನ್ನಡಕ ಹಾಕೊಂಡು ಹಾರರ್ ಮೂವಿ ನೋಡುತ್ತಿರುವ ಅನುಭವ. ಸಸ್ಪೆನ್ಸ್, ಥ್ರಿಲ್ಲರ್, ಡಿಟೆಕ್ಟಿವ್, ಮಂತ್ರ, ತಂತ್ರ, ದೆವ್ವ, ಭೂತದ ಸಿನೆಮಾಗಳನ್ನು ಹೇಗೆ ಕುರ್ಚಿಯ ತುದಿಗೆ ಕುಳಿತು ಉಸಿರು ಬಿಗಿ ಹಿಡಿದು ವೀಕ್ಷಿಸುತ್ತೇವೆಯೋ, ಹಾಗಾಯಿತು ಓದುವಾಗಿನ ಪರಿಸ್ಥಿತಿ. ಅಲ್ಲಿ ಹೆದರಿಕೆಯಾದರೆ ಕಣ್ಣು, ಕಿವಿ ಮುಚ್ಚಿ ಕೂಡಬಹುದು, ಇಲ್ಲಿ ಮಾತ್ರ ಕಣ್ಣುಬಿಟ್ಟುಕೊಂಡು ಓದುತ್ತಾ ಸಾಗಿದಂತೆ ಕಣ್ಕಣ್ಣು ಬಿಡುವಂತೆ ಮಾಡಿಬಿಡುತ್ತದೆ. ಲೇಖಕರ ಬದಲಾಗಿ ನಾವೇ ಪ್ರತ್ಯಕ್ಷ ಅಲ್ಲಿ ಹಾಜರಾಗಿ ಪ್ರತಿಯೊಂದನ್ನೂ ಆವಾಹಿಸಿಕೊಳ್ಳುತ್ತಾ ಹೋಗುತ್ತೇವೆ. ನಿಷಿದ್ಧ ಲೋಕದ ಶುದ್ಧ ಅನುಭವ ನಮಗೆ ಅಸಹ್ಯ, ವಾಕರಿಕೆ, ಹೇವರಿಕೆ ತಂದರೂ ಕುತೂಹಲ ಗರಿಗೆದರುವಂತೆ ಮಾಡುತ್ತದೆ. ಆದರೆ ಇದೇನು ಕಟ್ಟುಕಥೆಯಲ್ಲವಲ್ಲ.. ತಮ್ಮದೇ ಲೋಕದಲ್ಲಿ ಜೀವಿಸುತ್ತಿರುವ ಅಘೋರಿಗಳ ಬಗ್ಗೆ ಇಷ್ಟು ಕೂಲಂಕುಷವಾದ ವಿವರಣೆ ಮತ್ತೆಲ್ಲೂ ಸಿಗದೆಂಬುದು ನನ್ನ ಅನಿಸಿಕೆ.

ತಮ್ಮ ಪ್ರಾಣದ ಹಂಗು ತೊರೆದು, ಮಾಹಿತಿಗಾಗಿ ಅದೆಷ್ಟೋ ವರ್ಷಗಳು ತಪಸ್ಸಿನಂತೆ ಕಾದು, ಅವರು ಕರೆದಾಗಲೆಲ್ಲಾ, ನಿಂತ ಕಾಲಲ್ಲೇ ಕೆಲಸ, ಕಾರ್ಯ, ಸಂಸಾರ ಬಿಟ್ಟು ಹೊರಟುಬಿಡುವುದು ಸುಮ್ಮನೆ ಅಲ್ಲ. ಹವಾಮಾನ ವೈಪರೀತ್ಯದ ನಡುವೆ ಊಟ, ನಿದ್ದೆಗೆ ಎಳ್ಳು ನೀರು ಬಿಟ್ಟು, ಅವರಿವರ ಕೈಕಾಲು ಹಿಡಿದು ಅವರಿಗೆ ಬೇಕಾದ ಹಣ ನ್ನು ಎಂದು ಪುಸಲಾಯಿಸಿ, ಅವರ ಅಸಹನೆಯನ್ನು, ಕಿರಿಕಿರಿಯನ್ನು ಸಹಿಸಿಕೊಂಡು, ಚಿಕ್ಕ ಚಿಕ್ಕ ಮಾಹಿತಿಯಿಂದ ಹಿಡಿದು, ದೊಡ್ಡ ದೊಡ್ಡ ಘಟನೆಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗುವುದಿದೆಯಲ್ಲಾ ಅದಕ್ಕೆ ಎಂಟೆದೆ ಬೇಕು. ಸುಮ್ಮನೆ ಕೇಳಿದ್ದನ್ನು ಬರೆಯುವುದೇ ಬೇರೆ, ಕೇಳಿ ತಿಳಿದುಕೊಂಡಿದ್ದರೂ ಸಹ, ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಗಾದೆ ಮಾತಿನಂತೆ ಪ್ರತಿಯೊಂದಕ್ಕೂ ತಾವೇ ಖುದ್ದಾಗಿ ಸಾಕ್ಷಿಯಾಗಿದ್ದುಕೊಂಡು, ಅಘೋರಿಗಳ ನಡುವೆ ನಂಬಿಕೆ ಗಿಟ್ಟಿಸಿಕೊಂಡು, ಅವರ ಹಾಗೇ ಕೆಲವೊಮ್ಮೆ ಒಲ್ಲದ ಪೂಜೆ ಸಲ್ಲಿಸಿ, ಚಿಲುಮೆ ಎಳೆದು ಅವರೊಳಗಿನ ಮಾಹಿತಿಯನ್ನು ಹೊರಗೆಡುವುದರಲ್ಲಿ ಯಶಸ್ವಿಯಾಗುವುದಕ್ಕೆ ತಾಳ್ಮೆ, ಸಹನೆ ಜೊತೆಗೆ ಭಂಢಧೈರ್ಯ ಬೇಕು. ಅದನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅವರಿಗೂ ವಿವರಣೆ ನೀಡಿ, ಓದುಗನಿಗೂ ಅರ್ಥವಾಗುವಂತೆ ಸರಳ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.

ಅಘೋರಿಗಳು ದೀಕ್ಷೆ ಪಡೆಯುವ ಪ್ರಹಸನ, ಕುಂಭಸ್ನಾನ, ಭಸ್ಮಧಾರಣೆ, ನಗ್ನತೆ, ಲೈಂಗಿಕತೆಗಳ ಔಚಿತ್ಯದ ನಡುವೆ ಸನ್ನಿ ಲಿಯೋನ್ ಮತ್ತು ಮಿಯಾ ಮಲ್ಖೋವಾ ಅವರೂ ನುಸುಳಿ ಬೆಚ್ಚಗಾಗಿಸುವ ನವಿರು ಹಾಸ್ಯಭರಿತ ವಿವರಣೆ ನಗೆಯುಕ್ಕಿಸುತ್ತದೆ. ಅಘೋರಿಗಳ ಜೀವನದ ಸತ್ಯ-ಮಿಥ್ಯ ಎರಡನ್ನೂ ದರ್ಶನ ಮಾಡಿಸಿದ್ದಾರೆ. ಅಘೋರಿಗಳಲ್ಲಿ ಸಾಕಷ್ಟು ವಿದ್ಯಾವಂತರಿರುವುದನ್ನು, ಜೊತೆಗೆ ಹೆಂಗಸರೂ ಈ ಲೋಕದಲ್ಲಿ ಪ್ರವೇಶಿಸಿ ಅಘೋರಿ ಮಾ ಆಗಿ ರೂಪುಗೊಂಡಿರುವುದನ್ನು ಓದುವಾಗ ದಿಗಿಲಾಗುತ್ತದೆ. ಮಾನವನ ಸಹಜ ದೌರ್ಬಲ್ಯಗಳಾದ ಹೆಣ್ಣು, ಹೆಂಡ, ಹಣದ ವ್ಯಾಮೋಹ ಅವರನ್ನು ಸಹಜವಾಗಿಯೇ ಆವರಿಸಿಕೊಂಡಿರುವುದು ತಿಳಿಯುತ್ತದೆ. ಮಾನವ ಸಮಾಜಕ್ಕೆ ತಮ್ಮ ಅನಾಗರೀಕ, ಅಸಹಜ, ಅಮಾನುಷ ಆಚರಣೆಗಳಿಂದ ಒಂದು ಭಯ ಮೂಡಿಸುವ ಹುನ್ನಾರ. ವಿಚಿತ್ರ ವೇಷ-ಭೂಷಣಗಳು, ಆಚಾರ-ವಿಚಾರಗಳು, ರೀತಿ-ನೀತಿಗಳು, ಶವಸಂಭೋಗ, ಸಹಸ್ರಬಲಿಯಂತಹ ಘೋರ ಆಚರಣೆಗಳು, ತಮ್ಮದೇ ಚಿತ್ರ, ವಿಚಿತ್ರ ತತ್ವ-ಸಿದ್ದಾಂತಗಳು, ಅವರ ಆಖಾಡ, ಸ್ಮಶಾನವಾಸ, ಪಂಥಗಳು, ಪೂಜೆ-ಪುನಸ್ಕಾರಗಳು ಮನುಕುಲಕ್ಕೆ ಸವಾಲೊಡ್ಡುತ್ತವೆ. ಕೆಲವು ಘನಘೋರ ದೈಹಿಕ ಕಸರತ್ತುಗಳು ಮನುಷ್ಯರನ್ನು ಮೋಡಿ ಮಾಡಿದರೂ, ಅವುಗಳು ಕೇವಲ ದುಡಿಮೆಗಾಗಿ ಎಂಬ ಸತ್ಯವನ್ನು ಅನಾವರಣಗೊಳಿಸಿದ್ದಾರೆ. ಅವರಲ್ಲಿಯೂ ಈಗೀಗ ಶೋಕಿ, ಪ್ರತಿಯೊಂದಕ್ಕೂ ಹಣ ಪೀಕುವ ಚಾಳಿ, ಅಘೋರಿಗಳೇನೂ ಅತೀತರಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಜೀವನ ಪೂರ್ತಿ ಸಾಧಿಸಿದರೂ ಸುಲಭವಾಗಿ ಸಾಧಿಸಲಾಗದ ಕುಂಡಲಿನಿ ಜಾಗೃತಿಯನ್ನು ಮೂರ್‍ನಾಲ್ಕು ದಿನಗಳಲ್ಲಿ ಜಾಗೃತಿಗೊಳಿಸುತ್ತೇವೆ ಎಂಬ ಬೋರ್ಡು ನೇತುಹಾಕಿಕೊಂಡಿರುವವರನ್ನು ಕಂಡಾಗ ಇದೂ ಸಹ ವಾಣಿಜ್ಯೀಕರಣಗೊಳ್ಳುತ್ತಿರುವ ಬಗ್ಗೆ ಲೇಖಕರು ಆತಂಕ ಪಡುತ್ತಾರೆ. ಅದೇ ರೀತಿ ಖೇಚರಿ ವಿದ್ಯೆ, ಮನ್ಮಥರೇಖೆ, ವಜ್ರೋಲಿಗಳ ಬಗ್ಗೆ ನಿಖರ ಮಾಹಿತಿ ಹಾಗೂ ಚಕ್ರಗಳು, ನಾಡಿಗಳು, ಮಂತ್ರ, ತಂತ್ರ, ಅವುಗಳು ಅಸ್ತ್ಯವ್ಯಸ್ತ ಆದಾಗ ನಿರ್ದಿಷ್ಟ ಬಣ್ಣಗಳ ಪರಿಸರದಲ್ಲಿ ಗುಣಪಡಿಸುವ ವಿಧಾನಗಳು ಸುಲಭವಾಗಿ ಅರ್ಥವಾಗುವಂತಿವೆ.

ವರ್ಣಗೋಲ ಎನ್ನುವುದು ಇದೆಯೇ? ಎಂಬ ಅಧ್ಯಾಯದಿಂದ ಅಘೋರಿಗಳ ಜೀವನದ ಧನಾತ್ಮಕ ಅಂಶಗಳು ಅನಾವರಣಗೊಳ್ಳತೊಡಗುತ್ತದೆ. ಲೇಖಕರ ನಾರಾಯಣ ಆಶ್ರಮ ಎಂಬಲ್ಲಿಗೆ ಭೇಟಿ, ಅಲ್ಲಿಯ ಬಾಬಾ ವಿಜಯ್ ಜೀ, ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದಕ್ಕೆ, ಹಾಗೂ ಸಾತ್ವಿಕ ಶಕ್ತಿಯ ಕ್ರೋಢೀಕರಣಕ್ಕೆ ಧನಾತ್ಮಕ ಚಿಂತನೆಯ ಅಘೋರಿಗಳ ಭೇಟಿ, ಓದುವಾಗ ಪೂಜ್ಯ ಭಾವನೆ ಹುಟ್ಟುತ್ತದೆ. ಅಲ್ಲಿ ನಿಜವಾಗಿಯೂ ತಮ್ಮ ಐಹಿಕ ಸುಖವನ್ನು ಕಡೆಗಣಿಸಿ, ಕೇವಲ ಮೋಕ್ಷದ ಕಡೆಗೆ ಗಮನವಿರಿಸಿ, ಮನುಕುಲದ ಒಳಿತಿಗಾಗಿ ಔಷಧೀಯ ಕ್ಷೇತ್ರ, ಧ್ಯಾನದ ಮೂಲಕ ಮಾನಸಿಕ ಸ್ಥಿತಿಗತಿಗಳ ನಿಯಂತ್ರಣ ಹಾಗೂ ಮೈಂಡ್ ರೀಡರ್ ಮುಂತಾದ ರೀತಿಯ ಸಾಧಕರು ಆಪ್ತರಾಗುತ್ತಾರೆ.

ಅದಕ್ಕೆ ಉದಾಹರಣೆಯಾಗಿ ಒಬ್ಬ ಸಾಧು ಮೂಲವ್ಯಾಧಿಯ ಔಷಧಿಯ ಬಗ್ಗೆ ತಿಳುವಳಿಕೆ ನೀಡಿ, ಲೋಕಕಲ್ಯಾಣಕ್ಕೆ ಬಳಸುವಂತೆ ಆದೇಶಿಸಿದ್ದು. ಅದನ್ನು ಈಗಲೂ ಮೆಹೆಂದಳೆಯವರು ಜನರ ಮೇಲೆ ಪರಿಣಾಮಕಾರಿಯಾಗಿ ಪ್ರಯೋಗ ಮಾಡುತ್ತಿರುವುದು. ಕಣ್ಣಿನ ಮೂಲಕ ಸಿಧ್ದಿ ಸಾಧಿಸಿ, ವರ್ಣಗೋಲ, ಆರತ್ಯುಂಗ ಬಗ್ಗೆ ಲೇಖಕರ ಪ್ರತಿಯೊಂದು ಸಂದೇಹಗಳಿಗೆ ಸೂಕ್ತವಾಗಿ ಉತ್ತರಿಸಿ, ಅವರಿಗೆ ಪ್ರಾಯೋಗಿಕವಾಗಿಯೂ ಮನನ ಮಾಡಿಸಿದ ವಿಜಯ್‌ಜೀ ಗುರುಗಳ ಜ್ಙಾನ ಹೆಚ್ಚಿನದು. ಓದುವಾಗ ಅವರಿಬ್ಬರ ಮಾತಿನ ಜುಗಲ್ಬಂದಿ, ಫೇಸ್ ರೀಡಿಂಗ್‌ನಿಂದ ಲೇಖಕರ ಮನಸ್ಥಿತಿ ಅರಿತು ಉತ್ತರಿಸುವ ಪರಿ, ಆರೋಗ್ಯಕರ ಜ್ಞಾನದ ಸ್ಫರ್ದೆ, ಅಂತಿಮವಾಗಿ ಸಾಧಕನಿಗೆ ನಂಬಿಕೆ ಮುಖ್ಯ, ಲೆಕ್ಕಾಚಾರವಲ್ಲ ಎಂಬ ಗುರುಗಳ ಮಾತು ಓದುಗರನ್ನು ಸೆಳೆಯುತ್ತದೆ. ನಿಜವಾದ ಅಘೋರಿಗಳು ಎಂದರೆ ಜಗತ್ತಿನಲ್ಲಿದ್ದೂ ಜಗಕ್ಕಂಟಿಕೊಳ್ಳದೆ, ತಮ್ಮದೇ ಜಗತ್ತನ್ನು ಸೃಷ್ಟಿಸಿಕೊಂಡು ಜಗತ್ತಿನ ಒಳಿತಿಗಾಗಿ ಸಾಧನೆಗೈಯ್ಯುತ್ತಿರುವ ಜಗದೇಕಮಲ್ಲರು ಎನಿಸದಿರದು.

ಅಘೋರಿಗಳ ಕ್ಷುದ್ರ ಆವಾಸಗಳ ಬಗ್ಗೆ ಜನರ ಕಲ್ಪನೆಯಲ್ಲಿ ಮೈದಳೆದ ಕಥೆಗಳನ್ನು ಓದುತ್ತಿದ್ದರೆ ಮೈ ಜುಂ ಎನ್ನಿಸುತ್ತದೆ. ಪುಸ್ತಕ ಓದಿದ ಮೇಲೆ ಕಾಡುವ ಕಟ್ಟ ಕಡೆಯ ಪ್ರಶ್ನೆ ‘ಶಿವಾ!ಶಿವಾ!...ಹೀಗೂ ಉಂಟೆ?’.

ಕೊನೆಯದಾಗಿ ಲೇಖಕರಿಗೆ ಹೇಳಬೇಕೆನಿಸಿದ್ದು:

ಅಘೋರಿಗಳಿಗಿಂತಲೂ ಹೆಚ್ಚಾಗಿ, ಪಾಂಡಿತ್ಯವುಳ್ಳ ಜ್ಞಾನಿಗಳ ಸಾಲಿನಲ್ಲಿ ನೀವೇ ಮೊದಲು ನಿಲ್ಲುವಿರಿ. ಇಂತಹ ಕೃತಿಯನ್ನು ಪರಿಚಯಿಸಿದ ತಮಗೊಂದು ಪ್ರೀತಿಯ ಧನ್ಯವಾದ.

MORE NEWS

‘ಈ ಹೊತ್ತಿಗೆ’ ೧೨ನೇ ವಾರ್ಷಿಕೋತ್ಸವ ‘ಹೊನಲು’ ಮಾರ್ಚ್ ೯ರಂದು ಬೆಂಗಳೂರಿನಲ್ಲಿ

07-03-2025 ಬೆಂಗಳೂರು

ಬೆಂಗಳೂರು: ‘ಈ ಹೊತ್ತಿಗೆ’ ಮಾಸಪತ್ರಿಕೆಯ ೧೨ನೇ ವಾರ್ಷಿಕೋತ್ಸವ ‘ಹೊನಲು’ ಕಾರ್ಯಕ್ರಮ ಜೆ ...

MBIFL-2025; ಅಫ್ಘಾನಿಸ್ತಾನ ಚೀನಾ ದೃಢ ಹೆಜ್ಜೆ; ಭಾರತದ ಪಾಲಿಗೆ ನುಂಗಲಾರದ ತುತ್ತು

08-02-2025 ತಿರುವನಂತಪುರ

`ಬುಕ್ ಬ್ರಹ್ಮ’ ವಿಶೇಷ ವರದಿ ತಿರುವನಂತಪುರ: ೨೦೨೧ರ ಆಗಸ್ಟ್ ೮ ರಿಂದ ೧೭ರ ಅವಧಿಯಲ್ಲಿ ಅಫ್ಘಾನಿಸ್ತಾನ ಸರ್ಕಾ...

ನೆನಪಿನ ಪುಟಗಳನ್ನು ಸದ್ದಿಲ್ಲದೆ ತಿರುವಿ ಹಾಕಿತು

25-01-2025 ಬೆಂಗಳೂರು

“ಈ ಕತೆಯನ್ನು ಹೇಳಲು ಲೇಖಕರು ಬಳಸಿದ ಬಾಷೆ ಅತ್ಯಂತ ಆಪ್ತವಾಗಿದೆ. ಬಹುತೇಕ ಪಾತ್ರಗಳ ನಡುವಿನ ಸಂವಾದಗಳಲ್ಲೇ ಸಾಗುವ...