"ಹೊಸ ತಲೆಮಾರಿನ ಲೇಖಕರೊಬ್ಬರು ತಮ್ಮ ಆರಂಭಿಕ ಸಾಹಿತ್ಯ ತೊಡಗಿಸಿಕೊಳ್ಳುವಿಕೆಯನ್ನು ಕ್ರಿಯಾಶೀಲ ಸಾಹಿತ್ಯದ ಪ್ರಕಾರದ ಮೂಲಕವೇ ಆರಂಭಿಸುವುದು ರೂಢಿ. ಸಾಹಿತ್ಯವನ್ನು ಒಂದು ಶಿಸ್ತಾಗಿ ಅಧ್ಯಯನ ಮಾಡಿದವರು ಮತ್ತು ಇತರ ಕ್ಷೇತ್ರಗಳಿಂದ ಸಾಹಿತ್ಯಕ್ಕೆ ವಲಸೆ ಬಂದವರು ಹೀಗೆ ಎರಡೂ ವರ್ಗದ ಲೇಖಕರಿಗೆ ಈ ಮಾತು ಅನ್ವಯ" ಎನ್ನುತ್ತಾರೆ ಕಥೆಗಾರ ಕೇಶವ ಮಳಗಿ. ಅವರು ಲೇಖಕ ವಿನಯ ನಂದಿಹಾಳ ಅವರ "ಕಣ್ಣಂಚಿನ ಕಿಟಕಿ" ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...
ಹೊಸ ತಲೆಮಾರಿನ ಲೇಖಕರೊಬ್ಬರು ತಮ್ಮ ಆರಂಭಿಕ ಸಾಹಿತ್ಯ ತೊಡಗಿಸಿಕೊಳ್ಳುವಿಕೆಯನ್ನು ಕ್ರಿಯಾಶೀಲ ಸಾಹಿತ್ಯದ ಪ್ರಕಾರದ ಮೂಲಕವೇ ಆರಂಭಿಸುವುದು ರೂಢಿ. ಸಾಹಿತ್ಯವನ್ನು ಒಂದು ಶಿಸ್ತಾಗಿ ಅಧ್ಯಯನ ಮಾಡಿದವರು ಮತ್ತು ಇತರ ಕ್ಷೇತ್ರಗಳಿಂದ ಸಾಹಿತ್ಯಕ್ಕೆ ವಲಸೆ ಬಂದವರು ಹೀಗೆ ಎರಡೂ ವರ್ಗದ ಲೇಖಕರಿಗೆ ಈ ಮಾತು ಅನ್ವಯ. ಕಾವ್ಯ, ಕಾದಂಬರಿ, ಕಥೆ ನಾಟಕ, ಅನುವಾದ, ಸಿನಿಮಾ ನಿರ್ಮಾಣ, ಚಿತ್ರಕಥೆ ರಚನೆ, ಸಂಭಾಷಣೆ ಬರೆಯುವುದು, ಮತ್ತಿತರ ಪ್ರಕಾರಗಳು ಅಂತಹ ಬರಹಗಾರರಿಗೆ ತಕ್ಷಣದ ಜನಪ್ರಿಯತೆ, ಮಾನ್ಯತೆ ತಂದು ಕೊಡಬಲ್ಲವು ಎಂಬುದು ಮುಖ್ಯ ಕಾರಣವೆಂದು ಊಹಿಸೋಣ. ಮೇಲಿನ ಪಟ್ಟಿಯಲ್ಲಿ ನಾನು ವಿಮರ್ಶೆಯನ್ನು ಬೇಕೆಂದೇ ಸೇರಿಸದಿರಲು ಅದೊಂದು ಅತ್ಯಂತ ಸಂಕೀರ್ಣವಾದ, ವಿವಾದಾತ್ಮಕವಾದ, ಅಪಾರವಾದ ಒತ್ತಡವನ್ನು ಸಹಿಸುತ್ತಲೇ ಸಾಂಸ್ಕೃತಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕಾದ ಇಕ್ಕಟ್ಟಿನ ಸ್ಥಿತಿಗೆ ಸಿಲುಕಿಸುವ ಸಾಧ್ಯತೆಯಿರುತ್ತದೆ, ಎಂಬುದು ಕಾರಣವಾಗಿದೆ. ಸಾಹಿತ್ಯ ವಲಯದಲ್ಲಿ ವಿಮರ್ಶೆಯನ್ನು ಎಲ್ಲರೂ ಮೆಚ್ಚುತ್ತಾರೆ, ಗೌರವಿಸುತ್ತಾರೆ ಹಾಗೂ ತಮ್ಮ ಕುರಿತು ವಿಮರ್ಶಕರು ಬರೆಯಲಿ ಎಂದು ನಿರೀಕ್ಷಿಸುತ್ತಾರೆಂಬುದು ನಿಜವಾದರೂ, ಆ ವ್ಯವಸಾಯದಲ್ಲಿ ತೊಡಗಿರುವ ವಿಮರ್ಶಕ ಮಾತ್ರ- ‘ಇದೊಂದು ಕೃತಜ್ಞತೆಯೇ ಇಲ್ಲದ ವ್ಯರ್ಥ ವ್ಯವಹಾರ’ವೆಂದು ಕೈಚೆಲ್ಲುತ್ತಾರೆ. ಕನ್ನಡ ಹಿರಿಯರೆಂದು ಪರಿಗಣಿಸಲಾಗುವ ಅನೇಕ ವಿಮರ್ಶಕರು ಸಾಮಾನ್ಯವಾಗಿ ಮಾತನಾಡುವಾಗ, ‘ಕನ್ನಡದ ವಿಮರ್ಶಕರು ಈ ಮಹತ್ವದ ಅಂಶವನ್ನು ಗಮನಿಸಿಯೇ ಇಲ್ಲ’, ಎಂದು ಹೇಳುವಾಗ ನಾನು ಅಚ್ಚರಿಗೊಂಡಿದ್ದೇನೆ. ಹಾಗಿದ್ದರೆ, ಆ ಪ್ರಕಾರದ ಪ್ರಮುಖ ಭಾಗವಾಗಿರುವ ಇವರೇಕೆ ತಮ್ಮ ನಿಲುವನ್ನು ಲಿಖಿತವಾಗಿ ದಾಖಲಿಸುತ್ತಿಲ್ಲವೆಂದು ಬೆರಗಾಗಿದ್ದೇನೆ. ವಿವಾದಕ್ಕೆ ಸಿಲುಕುವುದು ತಮಗೆ ಬೇಕಿಲ್ಲವೆಂಬ ಸಮರ್ಥನೆ ಅದೇ ವಿಮರ್ಶಕರಿಂದಲೇ ಬಂದಾಗ ಇನ್ನಷ್ಟು ಖತಿಗೊಂಡಿದ್ದೇನೆ. ಹಾಗಿದ್ದರೆ, ಅಧ್ಯಯನ ಶಿಸ್ತಾಗಿ ಸಾಹಿತ್ಯವನ್ನು ಓದುವಾಗ ಕಲಿತ ಮೌಲ್ಯಗಳ ಗತಿಯೇನು? ಎಂದು ಚಿಂತಿತನಾಗಿದ್ದೇನೆ.
ತಾತ್ಪರ್ಯವೆಂದರೆ ಸಾಹಿತ್ಯ ವಲಯದಲ್ಲಿರುವ ಎಲ್ಲರಿಗೂ ವಿಮರ್ಶೆಬೇಕು. ಆದರೆ, ಆ ಕೂಸನ್ನು ನಿಸ್ವಾರ್ಥ ಪ್ರೇಮದಿಂದ, ಸಾಹಿತ್ಯದ ಕುರಿತಿರುವ ಅಸೀಮ ಕಾಳಜಿಯಿಂದ ಪೊರೆಯುವ ಜವಾಬ್ದಾರಿ ಮಾತ್ರ ಯಾರಿಗೂ ಬೇಡ. ಇಂಥದ್ದೊಂದು ಇಕ್ಕಟ್ಟಾದ, ಹೋದರೆ ಮರಳಿ ಬರಲು ತಾವೇ ಸೃಷ್ಟಿಸಿಕೊಂಡ ಕಿರು ಓಣಿಗಳಿಲ್ಲದ ವಿಮರ್ಶೆಯನ್ನು ಯುವ ತಲೆಮಾರು ಹೇಗೆ ತಾನೇ ಆಯ್ಕೆ ಮಾಡಿಕೊಂಡಿತು? ಈ ಕ್ಷೇತ್ರದ ಸಮಸ್ಯೆ, ಗಹನತೆ ಸಹ ಅತ್ಯಂತ ಸಂಕೀರ್ಣವಾಗಿದೆ ಎಂದು ಮೊದಲೇ ಹೇಳಿದೆ. ಕಳೆದ ಕೆಲವು ದಶಕಗಳಿಂದ ಕನ್ನಡ ವಿಮರ್ಶೆಯಲ್ಲಿ ಸೃಷ್ಟಿಯಾಗಿರುವ ಕಂದಕಗಳ ಆಳಗಲವನ್ನು ಕಂಡಾಗ ಯುವ ಪೀಳಿಗೆಯಲ್ಲಿ ಉಂಟಾಗುವ ಭಯ ಕೂಡ ಅವುಗಳಲ್ಲೊಂದಾಗಿರಬಹುದು. ನವೋದಯದ ಬಳಿಕ ಕನ್ನಡ ವಿಮರ್ಶೆಯಲ್ಲಿ ಉಂಟಾಗಿರುವ ಅಸಾಧ್ಯ ಶೂನ್ಯ ‘ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ’ ಎಂಬಂತೆಯೇ ಕಂಡಿತು. ನವ್ಯ ಮತ್ತು ನವ್ಯೋತ್ತರ(ಬಂಡಾಯ-ದಲಿತ-ಸ್ತ್ರೀ ವಾದ ಇತ್ಯಾದಿ)ಗಳಲ್ಲಿ ಪ್ರಸ್ತಾಪಗೊಂಡ ವಿಚಾರಗಳು ಪಕ್ವತೆಯನ್ನು ಸಾಧಿಸಿವೆ ಎಂಬAತಿಲ್ಲ. ಕೆಲವೊಮ್ಮೆ ವಿಚಾರಗಳ ಮುಂದುವರೆಸುವ ಚಲನಶೀಲತೆಯ ಗೈರುಹಾಜರಿಯಲ್ಲಿ ಸ್ಥಗಿತ ಪ್ರಸ್ತಾವನೆಗಳು ಎನ್ನುವಂತೆಯೇ ಕಾಣುತ್ತವೆ.
ಕಾಲಕಾಲಕ್ಕೆ ಇಲ್ಲಿ ಹುಟ್ಟುತ್ತಿರುವ ಸಾಹಿತ್ಯ ಭಿನ್ನಮತ ಇಲ್ಲವೇ ತಕರಾರುಗಳಲ್ಲಿ ಕೂಡ ಒಂದು ಅರ್ಥಪೂರ್ಣ ಸಾವಯವ ಭೂಮಿಕೆಯಲ್ಲಿ ನಿರ್ಮಾಣಗೊಂಡಿಲ್ಲ. ಅಥವ, ನೆಲದಾಳದಲ್ಲಿ ಬೇರಿಳಿದ ಮರಗಳಂತೆ ಮಣ್ಣಿನ ಋಣದ ಪ್ರಜ್ಞೆ ರೂಪಿಸಿದ ವೈಚಾರಿಕ ಬುನಾದಿಯನ್ನೂ ಪಡೆದಿಲ್ಲ. ಅವುಗಳ ಬೀಸುತನದಿಂದಾಗಿಯೇ ಸಾಂಸ್ಕೃತಿಕ ಪ್ರಮೇಯಗಳಾಗಿ ವಿಕಾಸಗೊಳ್ಳುವ ಸಾಮರ್ಥ್ಯವನ್ನು ಪಡೆದಿಲ್ಲವೇನೂ. ಮೇಲಾಗಿ ಹಳೆಯ ವಿಮರ್ಶಕರು ಇನ್ನೂ ಕುವೆಂಪು, ಬೇಂದ್ರೆ, ಕೆಎಸ್‌ಎನ್, ಅಡಿಗ ಎಂಬಲ್ಲಿಯೇ ಉಳಿದಿದ್ದರೂ, ಇದ್ದಕ್ಕಿದಂತೆ ದೇವನೂರರವರೆಗೆ ಜಿಗಿತ ಸಾಧಿಸಿ ಅಸಮಾನತೆಯನ್ನು ಒರೆಸಿ ಹಾಕಬಲ್ಲರು. ಮಾಸ್ತಿ ಪರಂಪರೆ ಕುರಿತು ಮಾತನಾಡುತ್ತಲೇ ತೀರ ಇತ್ತೀಚಿಗೆ ಬರೆಯುವ, ಜನಪ್ರಿಯ ಸಂಸ್ಕೃತಿಯನ್ನು ಪ್ರತಿನಿಧಿಸುವ ಅತಿ ಸಾಮಾನ್ಯ ಲೇಖಕರನ್ನು ಆ ಪರಂಪರೆಯ ಕೊನೆಯ ಕೊಂಡಿ ಎಂದು ಹೇಳಿಬಿಡಬಲ್ಲರು. ಮಾತ್ರವಲ್ಲ, ಸಾಮಾಜಿಕ ಚಲನಶೀಲತೆಯಲ್ಲಿ ಮುಂಚೂಣಿಯಲ್ಲಿರುವ ಜನಪ್ರಿಯ ಪ್ರಸ್ತಾಪಿತ ವಿಷಯಗಳ ಕುರಿತು ಬರೆಯುವವರನ್ನೇ ಮಹತ್ವದ ಲೇಖಕರು, ಎಂದು ಶಿಷ್ಟ-ಪರಿಶಿಷ್ಟ ಪಟ್ಟಿಯನ್ನು ಪ್ರಕಟಿಸಿ ಬಿಡಬಲ್ಲರು. ಆ ಮೂಲಕ ಸಾಹಿತ್ಯ ಸಾಂಸ್ಕೃತಿಕ ಹೊಣೆಗಾರಿಕೆಯಿಂದ ಹೊರತಾಗಿಲ್ಲ ಎಂಬ ಚರ್ಚೆಯ ಮುಂಚೂಣಿಯಲ್ಲಿ ಇರಬಲ್ಲರು. ಸದಾ ಸ್ಥಿತ್ಯಂತರದಲ್ಲಿರುವ, ತಲ್ಲಣಗೊಂಡ ಸಮಾಜವೊಂದರ ಸಾಹಿತ್ಯ ಸಂಕಥನದ ವಿಮರ್ಶಾ ವಿಭಾಗದಲ್ಲಿ ತೊಡಗಿಸಿಕೊಳ್ಳುವುದಾದರೆ ಎಲ್ಲಿಂದ ಆರಂಭಿಸಬೇಕು ಎಂಬ ಗೊಂದಲಕ್ಕೆ ಈ ತರುಣ-ತರುಣಿಯರು ಸಿಲುಕಿದರೆ ಅದು ಸಹಜವೇ. ಸರಳವಾದ ವಿಧಾನವೆಂದರೆ, ಇದರಿಂದ ಹೋಳಾಗಿ ಬೇರೆ ಪ್ರಕಾರಗಳಲ್ಲಿ ವ್ಯಸ್ತರಾಗುವುದು.
ಆದರೆ, ಎಲ್ಲ ತಲೆಮಾರುಗಳಲ್ಲಿಯೂ ಕೊಂಚ ಜಿಗುಟಾದ ತರುಣ-ತರುಣಿಯರು ಇದ್ದೆ ಇರುತ್ತಾರೆ. ಇವರು ಕಡಿದಾದ ಶ್ರಮದ, ಅಪ್ರಿಯವಾದ ಸತ್ಯದ ದಾರಿಗಳನ್ನು ಆಯ್ಕೆ ಮಾಡಿಕೊಳ್ಳಬಲ್ಲರು. ಕೊಂಚ ಹಿಂದೆ ಸರಿದು ನೋಡಿದರೆ ಗೂಳಿಯ ಉತ್ಸಾಹದಲ್ಲಿ ಸದಾ ಮುನ್ನುಗ್ಗುತ್ತಿದ್ದ ಡಿ. ಆರ್. ನಾಗರಾಜ್ ಈ ಹಾದಿಯ ಪ್ರವರ್ತಕರಂತೆ ಕಂಡಾರು! ಅನಂತರದ ತಲೆಮಾರಿನಲ್ಲಿ ಸುರೇಶ ನಾಗಲಮಡಿಕೆ, ರಂಗನಾಥ ಕಂಟನಕುಂಟೆ, ಅರುಣ್ ಜೋಳದಕೂಡ್ಲಿಗಿ, ಸುಧೀಂದ್ರ ಕುಮಾರ್ ಆರ್, ಸುಭಾಶ್ ರಾಜಮಾನೆ, ರವಿಕುಮಾರ ನೀಹ, ಆನಂದ ಋಗ್ವೇದಿಯಂಥವರನ್ನು ಕಾಣಬಹುದಾದರೂ ವಿಮರ್ಶೆಯನ್ನು ಸಾಂಸ್ಕೃತಿಕ ಅಧ್ಯಯನದ ಭಾಗವನ್ನಾಗಿಸಿ, ಹೊಸ ನೆಲೆಯಲ್ಲಿ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಸುರೇಶ ನಾಗಲಮಡಿಕೆ ಹೆಚ್ಚು ಗಂಭೀರವಾಗಿದ್ದಾರೆ. ಹಾಗೂ ವಿಮರ್ಶೆಯ ಸಾಧ್ಯತೆಗಳನ್ನು ವಸ್ತುನಿಷ್ಠವಾಗಿ ಪರಿಶೀಲಿಸುತ್ತಿದ್ದಾರೆಂದು ನನಗನ್ನಿಸುತ್ತದೆ.
ಇಂಥ ಉಪಕ್ರಮದ ಮುಂದುವರಿಕೆಯಾಗಿ ಹೊಸ ತಲೆಮಾರಿನ ಆರ್. ದಿಲೀಪ್‌ಕುಮಾರ, ಮಧು ಬಿರಾದಾರ, ಮಂಜುಳ ಗೋನಾಳ್‌ರಂಥವರು ಕಾಣಬಲ್ಲರು. ಇದೀಗ ಪುಸ್ತಕ ಪ್ರಕಟಿಸುವ ಮೂಲಕ ಈ ತರುಣ ಗುಂಪಿಗೆ ವಿನಯ ನಂದಿಹಾಳ ಸೇರುತ್ತಿದ್ದಾರೆ. ಇದೊಂದು ಸಂತಸ ಸುದ್ದಿ. ವಿನಯರನ್ನು ನಾನು ವಿದ್ಯಾರ್ಥಿ ದೆಸೆಯಿಂದ ಬಲ್ಲೆ. ಸಾಹಿತ್ಯದ ಅನೇಕ ವಿಷಯಗಳ ಕುರಿತು ನಾವು ಮಾತನಾಡಿದ್ದೇವೆ. ಚರ್ಚಿಸಿದ್ದೇವೆ. ಸಾಹಿತ್ಯದ ಕುರಿತು ಅವರಿಗಿರುವ ಅಪಾರ ಪ್ರೀತಿ, ಕಳಕಳಿ, ಪೂರ್ವಗ್ರಹ ರಹಿತ ನೋಟಗಳನ್ನು ನಾನು ಬಹುವಾಗಿ ಮೆಚ್ಚಿದ್ದೇನೆ. ಅವರ ವ್ಯಕ್ತಿತ್ವದ ಭಾಗವೇ ಆಗಿರುವ ಸೌಜನ್ಯ, ವಸ್ತುನಿಷ್ಠತೆ ಮತ್ತು ವಿನಯಗಳು ಅವರ ಬರಹದಲ್ಲಿಯೂ ಪ್ರತಿಫಲಿಸಿವೆ. ಸಾಹಿತ್ಯ ವಿಮರ್ಶೆಯ ಅಡಿಪಾಯವೇ ಈ ಮೌಲ್ಯಗಳಾಗಿರುವುದರಿಂದ ಅವರು ಮುಂದೆ ಸವೆಸಲಿರುವ ದಾರಿಯಲ್ಲಿ ಇವು ಅವರನ್ನು ಕಾಯಲಿವೆ.
ವಿನಯ ನಂದಿಹಾಳ ಹೊಸಕೃತಿ ‘ಕಣ್ಣಂಚಿನ ಕಿಟಕಿ’ ವಿನಯವನ್ನು ಒಳಗೊಂಡ ಧ್ವನಿಪೂರ್ಣ ಶೀರ್ಷಿಕೆಯಾಗಿದೆ. ಇದು ಏಕಕಾಲಕ್ಕೆ ಪುಸ್ತಕದ ಶಕ್ತಿ ಮತ್ತು ಮುಂದೆ ನಡೆಯಬೇಕಾದ ದಾರಿ ಎರಡನ್ನೂ ಅರುಹುವುದು. ವಿನಯರು ಪುಸ್ತಕವನ್ನು ವಿಶಾಲವಾಗಿ ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ. ಆದರೆ, ನಾನಿದನ್ನು ಮೂರು ಅಥವ ಅದಕ್ಕಿಂತ ಹೆಚ್ಚಿನ ಭಾಗವಾಗಿ ವಿಂಗಡಿಸಿ ನೋಡಲು ಬಯಸುತ್ತೇನೆ. ಅದರಿಂದ ಓದಿಗೊಂದು ನಿರ್ದುಷ್ಟತೆ, ಸ್ಪಷ್ಟತೆ ಹಾಗೂ ಆಯಾಮ ದೊರಕಿದಂತಾಗುವುದು. ಈ ಕೃತಿಯ ಅತ್ಯಂತ ಸಕಾರಾತ್ಮಕ ಗುಣವೆಂದರೆ ಹೊಸ ತಲೆಮಾರಿನ ಬರಹಗಾರನೊಬ್ಬ ಸಾಹಿತ್ಯವನ್ನು ಪ್ರವೇಶಿಸಲು ಆಯ್ದುಕೊಂಡ ದಾರಿಯಾಗಿದೆ. ಇದರರ್ಥ, ಪರಂಪರೆ, ಅಲ್ಲಿ ಸ್ಪೂಟಗೊಂಡ ಭಿನ್ನತೆ, ಚಲನಶೀಲತೆ ಮತ್ತು ಹೊಸ ಪ್ರಸ್ತಾವನೆಗಳನ್ನು ಅರಿಯಲು ವಿನಯ ಅವರು ಬಳಸಿರುವ ಪಠ್ಯಗಳು. ಸದ್ಯದ ಜನಪ್ರಿಯ ಸಂಸ್ಕೃತಿ ಸೃಷ್ಟಿಸುವ ಸಂಕಥನಗಳ ಬಗೆಗೆ ಅತಿಯಾಗಿ ತೊಡಗಿಕೊಂಡಿರುವ ಓದುಗನೊಬ್ಬ ಖಂಡಿತ ಹೀಗೆ ಯೋಚಿಸಲಾರ. ಆದರೆ ಸಾಹಿತ್ಯ ಪ್ರವೇಶಕ್ಕೆ ಪರಂಪರೆಯ ಅರಿವು ಹೊಂದುವುದು ಅತ್ಯಂತ ಅಪೇಕ್ಷಣೀಯವಾಗಿರುವ ಹಿನ್ನಲೆಯಲ್ಲಿ ವಿನಯರ ಈ ದಾರಿ ನನಗೆ ಬಹಳ ಮೆಚ್ಚುಗೆಯಾಯಿತು.
ಈ ಕೃತಿಯ ಲೇಖನಗಳನ್ನು ವಿಶಾಲವಾಗಿ ಮೂರು ಭಾಗಗಳಲ್ಲಿ ವಿಂಗಡಿಸಿ ನೋಡುವುದಾದರೆ, ಶಾಸನಗಳ ನಂತರ ಕನ್ನಡ ಸಾಹಿತ್ಯಕ್ಕೆ ಸ್ಪಷ್ಟ ಹೊಸ ದಾರಿಯನ್ನು ರೂಪಿಸಿದ್ದು ಜೈನ ಸಾಹಿತ್ಯ ಸೃಷ್ಟಿ. ಇದು ಬಹಳ ವಿಶಾಲವಾದ ಗುರುತಿಸುವಿಕೆಯಾಯಿತು. ಇನ್ನಷ್ಟು ನಿರ್ದಿಷ್ಟವಾಗಿ ಹೇಳುವುದಾದರೆ, ವಿನಯ ಅವರಿಗೆ ಮಧ್ಯಯುಗದ ಜೈನಸಾಹಿತ್ಯ, ಅದರಲ್ಲೂ ‘ವಡ್ಡಾರಾಧನೆ’ ಪ್ರಸ್ತಾವಿಸ ಹೊರಟಿರುವ ಮೌಲ್ಯಗಳ ನಿಷ್ಕರ್ಷೆಯನ್ನು ಮಾಡುವ ಲೇಖನಗಳು ಇಲ್ಲಿವೆ. ಆರಂಭಿಕ ತರುಣ ವಿಮರ್ಶಕ ಸರಿಯಾದ ದಾರಿಯಲ್ಲಿದ್ದಾರೆ ಎಂಬುದರ ಗುರುತಾಗಿ ವಿಷಯಗಳು ಕಂಗೋಳಿಸುತ್ತವೆ. ನಾನು ಓದಿನ ಅನುಕೂಲಕ್ಕಾಗಿ ಮಾಡಿಕೊಂಡ ಎರಡನೆಯ ವಿಭಾಗದಲ್ಲಿ ಸಮಕಾಲೀನ ಸಾಹಿತ್ಯದ ಚರ್ಚೆಗಳಿವೆ. ಕೆಲವು ವಿಸ್ತೃತವಾಗಿವೆ. ಇನ್ನು ಕೆಲವು ಹೊಳಹುಗಳನ್ನು ನೀಡಿ ಸಂವಾದ ಮುಂದುವರೆಸಬಹುದಾದ ಸಾಧ್ಯತೆಗಳಿಗೆ ಅವಕಾಶ ಒದಗಿಸಿಕೊಡುತ್ತವೆ. ಇಲ್ಲಿ ‘ಆ ಮನಿ’ ‘ರಸಗಂಗಾಧರ’ ನಾಟಕಗಳು; ‘ಅಕಥಾ ಕಥಾ’ ‘ಟೈಪಿಸ್ಟ್ ತಿರಸ್ಕರಿಸಿದ ಕತೆೆ” ಕಥಾ ಸಂಕಲನಗಳು ಮತ್ತು ‘ಕಾಮನ ಹುಣ್ಣಿಮೆ’ ‘ಹಾಣಾದಿ’ ಕಾದಂಬರಿಗಳು ಚರ್ಚೆಯಾಗಿವೆ. ಜಾಕ್ ಲಂಡನ್‌ನ ‘ಸ್ಕಾರ್ಲೆಟ್ ಪ್ಲೇಗ್’ ಮತ್ತು ಆಯನ್ ರ‍್ಯಾಂಡ್ ಅವರ ‘ದಿ ಫೌಂಟೇನ್‌ಹೆಡ್’ ಅನುವಾದಿತ ಕಾದಂಬರಿಗಳ ವಿಶ್ಲೇಷಣೆಗಳಿವೆ. ಮೂರನೆಯ ವಿಭಾಗದಲ್ಲಿ ಸುಮಾರು ಹನ್ನೆರಡು ಚಲನಚಿತ್ರಗಳ ವಿಮರ್ಶೆ, ವಿಶ್ಲೇಷಣೆ ಅಥವ ಮುಕ್ತ ಚರ್ಚೆಗಳಿವೆ. ಒಂದು ಸಾಹಿತ್ಯ ಸಮಾಜವನ್ನು ಆವರಿಸಿಕೊಂಡಿರುವ ವಿಷಯಗಳನ್ನು ಈ ಲೇಖನಗಳು ಹೊಂದಿರುವುದರಿಂದ ವಿಷಯ ವೈವಿಧ್ಯತೆ ಅತಿ ಸಹಜವಾಗಿ ಮೂಡಿಬಂದಿದೆ. ನಾವು ಗಮನಿಸಬೇಕಾದ ಅಂಶವೆಂದರೆ, ವಿನಯರ ಆಸಕ್ತಿಗಳು ಈ ವಿಷಯ ವೈವಿಧ್ಯತೆಯನ್ನು ರೂಪಿಸಿವೆ ಎನ್ನುವುದು.
ವಿನಯ ನಂದಿಹಾಳರ ಈ ಕೃತಿಯಲ್ಲಿ ಕಾಣಬಹುದಾದ ಒಂದು ಸಾಮಾನ್ಯ ಅಂಶ ವಿಷಯ ವೈವಿಧ್ಯತೆಯೆಂದು ಹೇಳಿದೆ. ಇದರೊಂದಿಗೆ ಒಂದು ಕೇಂದ್ರ ವಿಚಾರವನ್ನಿಟ್ಟುಕೊಂಡು ಕೃತಿಯ ಪ್ರವೇಶ ಪಡೆಯುವುದು ಇನ್ನೊಂದು ಅಂಶವಾಗಿದೆ. ವಿಮರ್ಶೆಯಲ್ಲಿ ಇದೇನೂ ಹೊಸ ಅಂಶವಲ್ಲ, ಆದರೆ ವಿನಯರು ಆಯ್ಕೆ ಮಾಡಿಕೊಂಡಿರುವ ವಿಶ್ಲೇಷಣಾ ವಿಧಾನ, ಪ್ರಸ್ತುತ ಪಡಿಸುವ ರೀತಿ ಮತ್ತು ವಿಸ್ತೃತತೆ ಹೊಸತಾಗಿವೆ. ಇದು ಅವರ ಬೌದ್ಧಿಕ ಪರಿಶ್ರಮದ ಫಲವೆಂದೇ ನಾನು ಭಾವಿಸುವೆ.
ಕನ್ನಡ ನವ್ಯೋತರ ವಿಮರ್ಶೆಯು ಚಲನಚಿತ್ರಗಳನ್ನು ಗಂಭೀರ ಅಧ್ಯಯನದ ಭಾಗವೆಂದು ಪರಿಗಣಿಸಿದ್ದು ಅಷ್ಟಾಗಿ ಕಾಣೆವು. ನಿಜ, ಕನ್ನಡ ಕಾದಂಬರಿಗಳು ಚಲನಚಿತ್ರಗಳಾಗಿವೆ. ಅನೇಕ ಸಾಹಿತಿಗಳ ನಿರ್ಮಾಣ, ನಿರ್ದೇಶನ, ಚಲನಚಿತ್ರ ವಿವಿಧ ವಿಭಾಗಗಳಲ್ಲಿ ಕಾರ್ಯಪ್ರವೃತರಾದುದನ್ನು ಕಾಣುತ್ತೇವೆ. ಆದರೆ ಭಾರತೀಯ ಸಮಕಾಲೀನ ಭಾರತೀಯ ಚಿತ್ರಗಳ ಕುರಿತಾಗಲಿ, ಸಾಧ್ಯತೆಗಳ ಬಗೆಗಾಗಲಿ, ಸೈದ್ಧಾಂತಿಕವಾಗಿ ಬರೆದಿದು ಕಡಿಮೆಯೇ. ಪಿ. ಲಂಕೇಶ್, ಕೆ. ವಿ. ಸುಬ್ಬಣ್ಣ, ಕೆಲವೊಮ್ಮೆ ಗಿರೀಶ ಕಾರ್ನಾಡ ಅದಕ್ಕೊಂದು ಅಪವಾದದಂತೆ ಕಾಣಬಹುದಷ್ಟೇ. ಈ ನಿಟ್ಟಿನಲ್ಲಿ ಜನಪ್ರಿಯ ಸಿನಿಮಾಗಳ ಕಲಾಮೀಮಾಂಸೆಯನ್ನು ಹುರುಪಿನಲ್ಲಿ ರೂಪಿಸ ಹೊರಟ ಡಿ. ಆರ್. ನಾಗರಾಜ್ ಅವರಿಗೆ ಈ ಕೆಲಸ ಕೈಗೆತ್ತಿಕೊಳ್ಳಲು ಪ್ರೇರೇಪಿಸಿರಬೇಕು. ಇರಲಿ, ವಿನಯ ನಂದಿಹಾಳರು ಕೂಡ ಅದೇ ಉತ್ಸುಕತೆಯಲ್ಲಿ ಸಿನಿಮಾ ಮೀಮಾಂಸೆಯಂತಹ ಬರಹಗಳನ್ನು ಮೂರನೆಯ ವಿಭಾಗದಲ್ಲಿ ರಚಿಸಿದ್ದಾರೆ. ಈ ಆರಂಭಿಕ ಪ್ರಯತ್ನಗಳು ಚೇತೋಹಾರಿಯಾಗಿವೆ. ಈ ವಿಭಾಗದಲ್ಲಿ ಕನ್ನಡ, ಕಂಗ್ಲೀಶ್, ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳ ವಿಶ್ಲೇಷಣೆ ಇರುವುದು ಕೂಡ ಗಮನಾರ್ಹವಾಗಿದೆ.
ಸಾಹಿತ್ಯ ಅಧ್ಯಯನದಲ್ಲಿಯೇ ಸಾರ್ಥಕತೆಯನ್ನು, ಅರ್ಥಪೂರ್ಣತೆಯನ್ನು ಕಂಡುಕೊಳ್ಳುವ ಪ್ರಯತ್ನಿಸುತ್ತಿರುವ ಒಬ್ಬ ಉತ್ಸಾಹಿ ತರುಣನ ಪುಸ್ತಕವಾಗಿ ‘ಕಣ್ಣಂಚಿನ ಕಿಟಕಿ’ ಓದುಗರನ್ನು ಬರಸೆಳೆಯುತ್ತದೆ. ಇಲ್ಲಿನ ಭಾಷೆ, ಶೈಲಿ ಆಕರ್ಷಕವಾಗಿದೆ. ವಿಷಯವನ್ನು ಪ್ರಸ್ತುತಪಡಿಸುವ ವಿಧಾನದಲ್ಲಿ ಲವಲವಿಕೆ, ಸಹಜ ರೀತಿಯಲ್ಲಿ ತೆರೆದಿಡುವ ಒಳನೋಟ ಮತ್ತು ದೃಷ್ಟಿಕೋನದಲ್ಲಿ ಸಕರಾತ್ಮಕತೆ ಈ ಪುಸ್ತಕವನ್ನು ಆಹ್ಲಾದಕರ ಓದನ್ನಾಗಿ ಮಾಡಬಲ್ಲದು, ಸಾಹಿತ್ಯ ವಿಮರ್ಶೆಯಂತಹ ಪೆಡುಸಾದ ಬೆಣಚುಕಲ್ಲುಗಳ ದಾರಿಯಲಿ ನಡೆಯುವ ತರುಣ-ತರುಣಿಯರಿಗೆ ಮಿತಿಗಳ ಇರಲಿಕ್ಕಿಲ್ಲವೆ? ಇದ್ದಾವು. ದಾರಿಗಳನ್ನು ಸವೆಸುತ್ತ ಆ ಇತಿಮಿತಿಗಳನ್ನು ಅವರೇ ಕಂಡುಕೊಳ್ಳಬಲ್ಲರು. ಹೊಸ ಲೇಖಕರ ಕುರಿತು ಸಿನಿಕತನ, ಕಟುತ್ವ ಮತ್ತು ರೊಕ್ಷತೆ ಹಿರಿಯ ವಿಮರ್ಶಕರಿಗೆ ಘನತೆಯನ್ನೇನೂ ತರುವುದಿಲ್ಲ. ಏಕೆಂದರೆ ವಿಮರ್ಶೆಯ ಮೊದಲ ಗುಣವೇ ‘ವಿನಯ’ವೆಂದು ನಾನು ಬಹುವಾಗಿ ಮೆಚ್ಚುವ ಹಿರಿಯ ವಿದ್ವಾಂಸ ಜಿ. ಎಚ್. ನಾಯಕರು ಹೇಳಿದ್ದಾರೆ. ನೀವೂ ಈ ಅಂಶವನ್ನು ಗಮನದಲ್ಲಿಡಿ.
- ಕೇಶವ ಮಳಗಿ
ಕೇಶವ ಮಳಗಿ ಅವರ ಲೇಖಕ ಪರಿಚಯಕ್ಕಾಗಿ
“ಇದು ಲಾರೆನ್ಸನ ಪ್ರಸಿದ್ಧ ಕಥೆ. ಹಲವಾರು ಭಾಷೆಗಳಿಗೆ ಅನುವಾದಗೊಂಡಿರುವ ಕಥೆ. ಲಾರೆನ್ಸನ ಕಥೆಗಳು ಇಂದ್ರಿಯಾತ್ಮಕ ...
“ಜೀವನಾನುಭವಗಳಿಂದ ಕೂಡಿದ ಆಗುಹೋಗುಗಳ ಮತ್ತು ವೈಚಾರಿಕ ವಿಚಾರಗಳನ್ನು ಹೆಕ್ಕಿ ತೆಗೆದು ಹೃದಯದಿಂದ ಗೀಚಿ ಬರವಣಿಗೆಯ...
"ಒಂದು ಪ್ರದೇಶದಲ್ಲಿ ಒಂದು ಆಸ್ಪತ್ರೆ ಬರುವುದು ಪ್ರಗತಿಯ ಪ್ರತೀಕವಾಗಿ. ಆಸ್ಪತ್ರೆ ಬರುವುದ ಆ ಊರಿನ ಅಗತ್ಯ. ಯಾವುದ...
©2024 Book Brahma Private Limited.