ಅನುವಾದಗಳು ಜಗತ್ತಿನ ಇತರ ಭಾಷಾ ಸಾಹಿತ್ಯಕ್ಕೆ, ಓದುಗರಿಗೆ ಇರುವ ದಾರಿಗಳು


“ಇದು ಲಾರೆನ್ಸನ ಪ್ರಸಿದ್ಧ ಕಥೆ. ಹಲವಾರು ಭಾಷೆಗಳಿಗೆ ಅನುವಾದಗೊಂಡಿರುವ ಕಥೆ. ಲಾರೆನ್ಸನ ಕಥೆಗಳು ಇಂದ್ರಿಯಾತ್ಮಕ ಅನುಭವದ ಮೂಲಕ ಅದರಾಚೆಗಿನದ್ದನ್ನು ಓದುಗರಿಗೆ ತೋರಲು ಪ್ರಯತ್ನಿಸುತ್ತವೆ,” ಎನ್ನುತ್ತಾರೆ ಸಿಂಧುರಾವ್ ಟಿ ಅವರು ವಿಕ್ರಂ ಚದುರಂಗ ಅವರ “ಟಿಕೆಟ್ ಪ್ಲೀಸ್” ಕೃತಿಗೆ ಬರೆದ ಮುನ್ನುಡಿ.

ಅನುವಾದಗಳು ಜಗತ್ತಿನ ಇತರ ಭಾಷಾ ಸಾಹಿತ್ಯಕ್ಕೆ ಓದುಗರಿಗೆ ಇರುವ ದಾರಿಗಳು. ಕನ್ನಡಕ್ಕೆ ಭಾರತೀಯೇತರ ಭಾಷೆಗಳಿಂದ ಬಂದ ಸಾಕಷ್ಟು ಅನುವಾದಗಳು ಮೊದಲು ಮೂಲಭಾಷೆಯಿಂದ ಇಂಗ್ಲಿಷಿಗೆ ಅನುವಾದವಾಗಿ ನಂತರ ಕನ್ನಡಕ್ಕೆ ಬಂದವು. ಕೆಲವು ಭಾರತೀಯ ಭಾಷೆಗಳ ಸಾಹಿತ್ಯ ಕೂಡಾ ಇಂಗ್ಲಿಷ್ ಅಥವಾ ಹಿಂದಿಗೆ ಅನುವಾದವಾಗಿ ನಂತರ ಕನ್ನಡಕ್ಕೆ ಬಂದಿವೆ. ಶ್ರೀಯುತ ವಿಕ್ರಮ್ ಚದುರಂಗ ಅವರು ಅನುವಾದಕ್ಕೆ ಆರಿಸಿಕೊಂಡವು ಇಂಗ್ಲಿಷ್, ರಷ್ಯನ್ ಮತ್ತು ಅಮೆರಿಕನ್ ಕಥೆಗಳು.

ಐರಿಷ್ ಲೇಖಕ ಆಸ್ಕರ್ ವೈಲ್ಡ್‌ನ 'ಹ್ಯಾಪಿ ಪ್ರಿನ್ಸ್' ಕಥೆ, ಬ್ರಿಟಿಷ್ ಲೇಖಕ ಡಿ.ಎಚ್. ಲಾರೆನ್ಸ್ ಬರೆದ 'ಟಿಕೆಟ್ ಫೀಸ್' ಕಥೆ ಮತ್ತು ರಷ್ಯನ್ ಲೇಖಕ ಮ್ಯಾಕ್ಸಿಂ ಗೋರ್ಕಿ ಬರೆದ ಆತ್ಮಕಥಾನಕ ರೂಪದ ಮೈ ಯೂನಿವರ್ಸಿಟೀಸ್ ನೀಳತೆ ಮತ್ತು ಓ ಹೆನ್ರಿಯ 'ದಿ ಲಾಸ್ಟ್ ಲೀಫ್' ಎಂಬ ಪುಟ್ಕಥೆ.

ಸಾಮಾನ್ಯವಾಗಿ ನನಗೆ ಓದಲು ಲಭ್ಯವಿರುವ ಇಂಗ್ಲಿಷ್ ಸಾಹಿತ್ಯವನ್ನು ನಾನು ಮೂಲದಲ್ಲಿ ಓದಬಯಸುತ್ತೇನೆ. ಹಾಗಾಗಿ ಈ ಕಥೆಗಳನ್ನು ವಿಕ್ರಮ್ ಅವರು ಓದಲು ಕೊಟ್ಟಾಗ ತುಸು ಅನುಮಾನದಿಂದಲೆ ತೆಗೆದುಕೊಂಡೆ. ಎಲ್ಲ ಕಥೆಗಳನ್ನೂ ಒಂದೊಂದಾಗಿ ಓದಿದೆ. ಎಲ್ಲವೂ ಓದಲೇಬೇಕಾದ ಕಥೆಗಳು. ಈ ಎಲ್ಲ ಕಥೆಗಳೂ ಮೊದಲು ಬೇರೆ ಬೇರೆಯವರ ಅನುವಾದದಿಂದ ಕನ್ನಡಕ್ಕೆ ಬಂದಿವೆ. ಅನುವಾದದ ಮೂಲ ಕಥೆಗಳು ಬದುಕಿನ ಹಲವು ಆಯಾಮಗಳನ್ನು ಸಾಕಷ್ಟು ಪರಿಶೋಧಿಸಿ ಯಶಸ್ವಿಯಾದ ಲೇಖಕರ ಅತ್ಯಂತ ಸಮರ್ಥ ಕಥೆಗಳು. ಮೂಲದಲ್ಲಿಯಾಗಲೀ ಅಥವಾ ಕನ್ನಡದಲ್ಲೇ ಆಗಲಿ ಓದಲೇಬೇಕಾದ ಅತ್ಯುತ್ತಮ ಕಥೆಗಳು. ಬದುಕಿನ ಹಲವಾರು ತಿರುವುಗಳಲ್ಲಿ ಎದುರಾಗುವ ಸಂದಿಗ್ಧಗಳು, ಅವುಗಳ ಪರಿಹಾರ ಮತ್ತು ಪರಿಣಾಮ ಎಲ್ಲವೂ ಈ ಕಥೆಗಳಲ್ಲಿ ಚಿತ್ರಕವಾಗಿ ಮೂಡಿಬಂದಿವೆ. ವಿಕ್ರಮ್ ಅವರು ಈ ಕಥೆಗಳ ಜೀವನಾಡಿಯನ್ನು ಗ್ರಹಿಸಿ ಅದನ್ನು ಕನ್ನಡದಲ್ಲಿಯೂ ಮಿಡಿಸಿದ್ದಾರೆ ಎಂಬುದು ನನ್ನ ಅಭಿಪ್ರಾಯ.

ಈ ನಾಲ್ಕೂ ಕಥೆಗಳು ನಮ್ಮ ಹೊರಜಗತ್ತಿನ ಮತ್ತು ದೈಹಿಕ ಅನುಭವದ ಮೂಲಕವೇ ತಲುಪಬಹುದಾದ ಒಳ ಅನುಭವಗಳನ್ನು, ಭಾವಲೋಕವನ್ನು ಓದುಗರಿಗೆ ತೆರೆದಿಡುತ್ತವೆ. ಈ ಕಾರಣದಿಂದಲೇ ಬಹುಶಃ ಈ ಕಥೆಗಳನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸುವ ಅನುವಾದದ ಪ್ರಯತ್ನ ಸಫಲವಾಗಿದೆ. ಸಾಮಾನ್ಯವಾಗಿ ಮೂಲಲೇಖಕರ ಭಾವಕೋಶವನ್ನು ಹಾಗೆ-ಹಾಗೆಯೇ ತಂದರೆ ಅನುವಾದಿಸಲ್ಪಡುತ್ತಿರುವ ಭಾಷೆಯ (ಇಲ್ಲಿ ಕನ್ನಡ) ಜಾಯಮಾನ, ನುಡಿಗಟ್ಟುಗಳು ಉಸಿರುಗಟ್ಟುತ್ತವೆ. ಹಾಗಂತ ಭಾವಾನುವಾದ ಮಾಡಲೂ ಆಗದು. ಇವೆರಡೂ ದಾರಿಗಳನ್ನು ಬಿಟ್ಟು ಕಥೆಯನ್ನು ಕನ್ನಡದ ಜಾಯಮಾನಕ್ಕೆ ಒಗ್ಗಿಸುತ್ತ, ನಮಗೆ ಪರಿಚಿತವಿರಬಹುದಾದ ನೆಲೆಗಳಿಂದ. ಸೂಕ್ಷ ಸಂವೇದಕ ನಿರೂಪಣೆಯಿಂದ ಕಥೆಯನ್ನು ನಮಗೆ ತಲುಪಿಸುವ ಪ್ರಯತ್ನವನ್ನು ಅನುವಾದಕರು ಮಾಡಿದ್ದಾರೆ. ಇವರ ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಹಿಡಿತ ಈ ಅನುವಾದಕ್ಕೆ ಬೆನ್ನೆಲುಬಾಗಿದೆ. ಇದಲ್ಲದೆ ನಾನು ಮೊದಲೇ ಹೇಳಿದಂತೆ ಈ ಕಥೆಗಳ ತಿರುಳೇ ನಮಗೆ ಒಳಗಿನ ಲೋಕವೊಂದನ್ನು ಅನಾವರಣ ಮಾಡುವುದಾಗಿರುವುದರಿಂದ, ಈ ಒಳಲೋಕಕ್ಕೆ ರಹದಾರಿಗಳು ದೇಶಾತೀತವಾಗಿ, ಕಾಲಾತೀತವಾಗಿ ಮತ್ತು ಭಾಷಾತೀತ ವಾಗಿ ನಮ್ಮ ತೆರೆದ ಮನಸ್ಸುಗಳ ಮೂಲಕ, ಹೊಸದನ್ನು ಪರಿಶೀಲಿಸಲು ಸಿದ್ಧವಿರುವ, ಕೇಳುವುದಕ್ಕೆ ಅನುವಾಗಿರುವ ಮನಸ್ಥಿತಿಯ ಮೂಲಕವೇ ಇರುತ್ತವೆ. ಆ ವಿಚಾರ ಇಲ್ಲಿನ ಅನುವಾದಗಳಿಗೆ ಹೆಚ್ಚು ಅರ್ಥಗಾರಿಕೆಯನ್ನು ದಯಪಾಲಿಸಿದೆ. ತಾಂತ್ರಿಕವಾಗಿ ಹೇಳುವುದಾದರೆ ಅನುವಾದವು ಮೂಲ ಆಕರದ ವಿಷಯ, ಭಾವ ಮತ್ತು ದನಿ, ಹಾಗೂ ಶಿಲ್ಪಕ್ಕೆ ನಿಷ್ಠವಾಗಿರಬೇಕು. ಹಾಗೆಂದು ಅನುವಾದಿಸಲ್ಪಡುವ ಭಾಷೆಗೆ ತೀರಾ ಪೆಡಸಾಗಿಯೂ ಇರಬಾರದು. ಈ ಎಲ್ಲವನ್ನೂ ಪ್ರಯತ್ನಪೂರ್ವಕವಾಗಿ ಮಾಡಿದಾಗ ಅನುವಾದ ತಾಂತ್ರಿಕವಾಗಿ ಸರಿಯಿದ್ದಾಗ್ಯೂ ಓದಲು ಹಿಡಿಸದೆ ಹೋಗಬಹುದು. ಅದಕ್ಕೆ ಕಾರಣ ಅನುವಾದಿಸುವವರಿಗೆ ಆ ಮೂಲ ಆಕರ ಎಷ್ಟು ಆಳದಲ್ಲಿ ಗ್ರಹಿಕೆಗೆ ಬಂದಿದೆ ಮತ್ತು ಅನುವಾದಕರ ಹಿಡಿತಕ್ಕೆ ಮೂಲ ಆಕರದ ಜೀವನಾಡಿ ಸಿಕ್ಕಿದೆಯೇ, ಅರ್ಥವಾಗಿದೆಯೇ ಎಂಬುದಾಗಿರುತ್ತದೆ. ಇದನ್ನು ನಮ್ಮ ನಡುವಿನ ಹಿರಿಯ ಮಾದರಿ ಅನುವಾದಕ ಎಸ್. ದಿವಾಕರ್ ಅವರು 'ಟೋನ್' ಎಂದು ಕರೆದಿದ್ದಾರೆ. ಮೂಲದ ದನಿ, ಭಾವ, ಏಕೆ ಆ ಕಥೆ ಹೇಳಲೇಬೇಕಿತ್ತು ಎಂಬ ತುರ್ತು ಅನುವಾದದಲ್ಲಿಯೂ ಪ್ರತಿಫಲಿಸದೆ ಇದ್ದರೆ ಆ ಕಥೆಯು ಮೂಲದಷ್ಟು ಸೊಗಯಿಸುವುದಿಲ್ಲ. ಓದಲು ಅಷ್ಟೊಂದು ಸುಲಭವೂ ಆಗುವುದಿಲ್ಲ. ಮೂಲದ ಟೋನ್ ವಿಕ್ರಮ್ ಚದುರಂಗ ಅವರಿಗೆ ಬಹು ಸುಲಭವಾಗಿ ದಕ್ಕಿದೆ. ಜೊತೆಗೆ ಕನ್ನಡ ಅನುವಾದದಲ್ಲಿ ಈ ಟೋನ್ ಪ್ರತಿಫಲಿತವಾಗಿದೆ.

ಹೆಚ್ಚಿನ ವಿವರಣೆಗಳು ಈ ಕಥೆಗಳಿಗಿರುವ ಸಾಂದ್ರತೆಯನ್ನು ದುರ್ಬಲಗೊಳಿಸ ಬಹುದು. ಏಕೆಂದರೆ ಈ ಕಥೆಗಳನ್ನು ಓದುವಾಗಲೆ ನಿಮಗೆ ಅವು ದಕ್ಕುವುದು. ಹಾಗಾಗಿ ಬಹಳ ಸ್ಕೂಲವಾಗಿ ಈ ಕಥೆಗಳ ಕುರಿತ ನನ್ನ ಮಾತುಗಳನ್ನು ದಾಖಲಿಸುತ್ತೇನೆ.

ಟಿಕೆಟ್ ಪ್ಲೀಸ್ : ಇದು ಲಾರೆನ್ಸನ ಪ್ರಸಿದ್ಧ ಕಥೆ. ಹಲವಾರು ಭಾಷೆಗಳಿಗೆ ಅನುವಾದಗೊಂಡಿರುವ ಕಥೆ. ಲಾರೆನ್ಸನ ಕಥೆಗಳು ಇಂದ್ರಿಯಾತ್ಮಕ ಅನುಭವದ ಮೂಲಕ ಅದರಾಚೆಗಿನದ್ದನ್ನು ಓದುಗರಿಗೆ ತೋರಲು ಪ್ರಯತ್ನಿಸುತ್ತವೆ. ಈ ಕಥೆಯೂ ಅದಕ್ಕೆ ಹೊರತಲ್ಲ. ಈ ಕಥೆಯಲ್ಲಿ ಹಲವಾರು ಆಸಕ್ತಿಕರ ಆಯಾಮಗಳು ಇವೆ. ಮೊದಲ ಮಹಾಯುದ್ಧಾನಂತರದ ಕಾಲದಲ್ಲಿ ಈ ಕಥೆ ನಡೆಯುವಾಗಿನ ಯುರೋಪಿನ ಪಟ್ಟಣದ ಸ್ಥಿತಿಗತಿಗಳು ಅಲ್ಲಿ ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಗಳು ಯುದ್ಧಾನಂತರದ ಯುವಕರ ಕೊರತೆಯಿಂದಾಗಿ ಕೆಲಸ, ಕೈಗಾರಿಕೆ, ನಗರ ವ್ಯವಸ್ಥೆ ಇತ್ಯಾದಿಗಳಲ್ಲಿ ಉಂಟಾದ ಬದಲಾವಣೆಗೆ ತೆರೆದುಕೊಳ್ಳುತ್ತ ಹೋದ ಸ್ತ್ರೀಯರ ವೃತ್ತಿ ವೈವಿಧ್ಯಗಳು ಮತ್ತು ಈ ಬದಲಾವಣೆಗಳು ಹೊಸಕಾಲದ ಯುವತಿಯರಿಗೆ ತಂದುಕೊಟ್ಟ ವಿಶ್ವಾಸದ ಮನಸ್ಥಿತಿ ಇವುಗಳೆಲ್ಲದರ ಮೂಲಕ ನಗರದಲ್ಲಿ ಚಲಿಸುವ ಟ್ರಾಮುಗಳಲ್ಲಿ ಕಂಡಕ್ಟರುಗಳಾದ ಯುವತಿಯರ ಕಥೆಯನ್ನು, ಅವರನ್ನು ಏಮಾರಿಸಿ ಸಿಕ್ಕಿಹಾಕಿಕೊಳ್ಳುವ ಗಂಡು ಹಮ್ಮಿನ ಯುವ ಇನ್ಸ್‌ಪೆಕ್ಟರಿನ ಕಥೆಯನ್ನು ಲಾರೆನ್ಸ್ ಹೇಳುತ್ತಾನೆ.

ಇದು ಈ ಕಥೆಯ ಲೌಕಿಕ ಚೌಕಟ್ಟು ಅಷ್ಟೆ. ಆದರೆ ಇಲ್ಲಿ ಬರುವ ಯುವತಿಯರ ಅಸಹಾಯಕತೆ, ಪ್ರೇಮಕ್ಕಾಗಿ ಕಾತರಿಸುವ ಯುವಾವಸ್ಥೆ, ಆರ್ಥಿಕವಾಗಿ ಅಂತಹ ಸದೃಢವಾಗಿಲ್ಲದ ಕುಟುಂಬಗಳ ಹಿನ್ನೆಲೆಯ ಈ ಯುವತಿಯರ ಹಿಂಜರಿಕೆ, ದೈಹಿಕವಾಗಿ ಮತ್ತು ಲೈಂಗಿಕವಾಗಿ ಉಕ್ಕುವ ಪ್ರಕೃತಿ ಸಹಜ ಬಯಕೆಗಳಿಗಾಗಿ ತೆರೆದುಕೊಳ್ಳುವ ಮನಸ್ಥಿತಿ ಇವುಗಳನ್ನು ಚಿತ್ರಪೂರ್ಣವಾಗಿ ವಿವರಿಸುತ್ತಲೆ ಕ್ಷಣಿಕವಾಗಿ ತಮ್ಮನ್ನು ಬಳಸಿಕೊಳ್ಳುವ ಯುವಕರ ಬಗ್ಗೆ ಅವರಿಗಿರುವ ಆಕ್ರೋಶವೂ ಚಿತ್ರಿತವಾಗಿದೆ.

ಆ ಆಕ್ರೋಶಕ್ಕೆ ಒಂದು ರೂಪಕೊಡುವ ಅನ್ಯ ಎಂಬ ತುಸು ಚುರುಕಾದ, ಸ್ವಲ್ಪ ದೃಢವಾಗಿ ಯೋಚಿಸಬಲ್ಲ, ಆಮಿಷಗಳಿಗೆ ಸುಲಭವಾಗಿ ಬಿದ್ದು ಬಿಡದ ಯುವತಿ ಈ ಕಥೆಯೆಂಬ ಬಾಣದ ಚೂಪುತುದಿಯಾಗಿ ಬರುತ್ತಾಳೆ. ಗಾಯ ಮಾಡಿದವಳಿಗೂ ಗಾಯವಾಗಿದ್ದನ್ನು ತೋರಿಸುತ್ತ ಕಥೆಗಾರ ಗೆಲುವು ಹೇಗೆ ಗೆಲುವಲ್ಲ ಎನ್ನುವುದನ್ನು ತೋರಿಸುತ್ತಾನೆ. ಹಾಗೆಯೇ ಹತಾಶ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡ ಟಿಕೆಟ್ ಕಲೆಕ್ಟರನಿಗೆ ತನ್ನ ಮಿತಿಯ ಅರಿವು ತನಗೇ ಆಗುತ್ತ ಅವನು ಕಣ್ಮರೆಯಾಗುವ, ಇಲ್ಲದಂತಾಗುವ ಕ್ಷಣಗಳನ್ನ ಅದ್ಭುತವಾಗಿ ಚಿತ್ರಿಸಲಾಗಿದೆ. ಪುಟ್ಟದಾದ ಆದರೆ ಬಲು ಶಕ್ತಿಯುತ ಕಥೆಯ ಅಷ್ಟೇ ಶಕ್ತಿಯುತ ಅನುವಾದಕ್ಕೆ ವಿಕ್ರಮ್ ಚದುರಂಗ ಅವರಿಗೆ ಅಭಿನಂದನೆಗಳು.

ಖುಷಿ ರಾಜಕುಮಾರ : ಇದು ಆಸ್ಕರ್ ವೈಲ್ಡ್ನ ಪ್ರಸಿದ್ಧ ಕಥೆ. ವೈಲ್ಡ್ ತನ್ನ ಚಿತ್ರಕ ಕಥಾನಕಗಳ ಮೂಲಕ ಮಾನವೀಯ ನಿಲುವುಗಳನ್ನ, ಆದ್ರ್ರ ಮನೋಭಾವವನ್ನ ಪ್ರತಿಪಾದಿಸುವ ಕಥೆಗಾರ, ಈ ಕಥೆ ನಮ್ಮ ಕಾಲದ (ಹಾಗೆ ನೋಡಿದರೆ ಎಲ್ಲ ಕಾಲಕ್ಕೂ ಲಗತ್ತಾಗುವ) ತಾಯ್ತಂದೆಯರು ತಮ್ಮ ಮಕ್ಕಳಿಗೆ ಓದಿ ಹೇಳಬೇಕಾದ ಕಥೆ. ಇದು ತಾಯ್ತಂದೆಯರಿಗೂ ಮಕ್ಕಳಿಗೂ ಏಕಕಾಲಕ್ಕೆ ಅವರವರ ಭಾವವಲಯಕ್ಕೆ ಸೇರಬೇಕಾದ ಕಥೆ. ಮೂಲಕಥೆಯನ್ನ ಕನ್ನಡದ ಜಾಯಮಾನಕ್ಕೆ ಒಗ್ಗಿಸುವಾಗ ಮೂಲಕಥೆಯಲ್ಲಿರುವ ಕೆಲವು ಹಕ್ಕಿವಲಸೆಯ ವಿವರಗಳನ್ನು ಇಲ್ಲಿ ಅಳವಡಿಸಿಕೊಂಡಿಲ್ಲ. ಬಹುಶಃ ಕಥೆಗಿಂತಲೂ ಕಥೆಯ ಪರಿಣಾಮದ ಕುರಿತು ಅನುವಾದಕರಿಗೆ ಇರುವ ಆಸ್ಥೆಯ ಕಾರಣ ಇರಬಹುದು. ಇದು ಕಥೆಗೆ ಯಾವುದೇ ಕುಂದನ್ನುಂಟು ಮಾಡುವುದಿಲ್ಲ. ಆದರೂ ವಿವರಗಳನ್ನು ಕಟ್ಟಿ ಕೊಡುವಾಗ ವೈಲ್ಡ್ ಉಪಯೋಗಿಸಿದ ವಿಡಂಬನೆ ಮತ್ತು ವಿಪರೀತ ಉಪಮೆಗಳು ಅನುವಾದವಾಗಿದ್ದರೂ ಚೆನ್ನಾಗಿತ್ತು ಅನಿಸಿದ್ದು ಹೌದು. (ಉದಾಹರಣೆಗೆ ವಲಸೆ ಹಕ್ಕಿಯು, ತಾನೀಗ ತನ್ನ ದಾರಿ ಹಿಡಿದು ಹೋಗಿದ್ದಿದ್ದರೆ ಅಲ್ಲಿ ತಾನೇನೇನು ಮಾಡುತ್ತಿರುತ್ತಿದ್ದೆ ಎಂದು ರಾಜಕುಮಾರನಿಗೆ ಹೇಳುವ ಪ್ರಸಂಗ, ಆ ಮಹಾಕಾರ್ಯದ ನಿರರ್ಥಕತೆಯು ನಮಗೆ ಕಥೆಯು ಮುಗಿಯುವಾಗ ಇಲ್ಲೇ ಉಳಿದ ಹಕ್ಕಿಯ ಉಪಯುಕ್ತತೆಯಲ್ಲಿ ನಿರೂಪಿತವಾಗುತ್ತದೆ).

ಅದೇನೇ ಆದರೂ ಒಂದು ಒಳ್ಳೆಯ ಓದಲೇಬೇಕಾದ ಕಥೆಯು ಓದಲು ಯಾವ ತೊಡರುವಿಕೆಯೂ ಇಲ್ಲದ ಹಾಗೆ ಅನುವಾದವಾಗಿದೆ.

ಈ ಕಥೆಯನ್ನು ಓದುವಾಗ ನನಗೆ ವಿಕ್ರಂ ಚದುರಂಗ ಅವರೇ ಅನುವಾದಿಸಿದ ಇನ್ನೊಂದು ಕಥೆಯ ನೆನಪು ಮತ್ತೆ ಮತ್ತೆ ಆಯಿತು. ಮರದ ಕುದುರೆ ಎಂಬ ಈ ಅನುವಾದಿತ ಕಥೆ ವಿಕ್ರಮರ ಇಂದ್ರಜಿತ್ ಸಂಕಲನದಲ್ಲಿ ಇದೆ. ಡಿ.ಎಚ್. ಲಾರೆನ್ಸ್ ಬರೆದ ರಾಕಿಂಗ್ ಹಾರ್ಸ್ ವಿನ್ನರ್ ಎಂಬ ಕಥೆಯ ಶಕ್ತ ಅನುವಾದ ಅದು. ಲಾರೆನ್ನನ ಕಥೆ, ಒಳಿತು-ಕೆಡುಕುಗಳ ಬಿಳಿ-ಕರಿ ಬಣ್ಣಗಳ ನಡುವಿನ ಹಲವಾರು ಶೇಡ್‌ಗಳನ್ನು ಓದುಗರಿಗೆ ದಾಟಿಸುವ ಕಥೆ. ತಪ್ಪುಗಳ ಹಿನ್ನೆಲೆ, ಅವುಗಳ ಕಾರ್ಯಕಾರಣ ಸಂಬಂಧ, ತದ್ದೊಂದು ಘಟಿಸುವುದಕ್ಕೆ ಮುನ್ನ ಮನದ ಕಡಲ ದಂಡೆಯಲ್ಲಿ ಬೀಸುವ ಹೆದ್ದೆರೆಗಳು, ದುರಂತವೊಂದಕ್ಕೆ ಕಾರಣವಾಗುವ ಸಾಮಾನ್ಯಕರಣದ ಹಲವಾರು ಮಗ್ಗುಲುಗಳು, ದುರಾಶೆ ಹೇಗೆ ಸಾಮರ್ಥ್ಯವನ್ನು ಕೈಲಾಗದ ಹಾಗೆ ಮಾಡಿಬಿಡುತ್ತದೆ ಎಂಬ ದಾರುಣ ಚಿತ್ರಣ..ಈ ಎಲ್ಲವೂ ಓದುಗರಿಗೆ ಇಂಥದೊಂದು ಸನ್ನಿವೇಶ ನಿಜ ಜೀವನದಲ್ಲಿ ಎದುರಾದರೆ ತಯಾರಾಗಲು ಸಹಾಯ ಮಾಡುತ್ತವೆ.

ಈ ಕಥೆಗಳ ಆಯ್ಕೆಯಲ್ಲಿ ವಿಕ್ರಮರ ವ್ಯಕ್ತಿತ್ವದ ಒಂದು ಕುಡಿನೋಟ ಸಿಗುತ್ತದೆ.

ಈಗ ಹುಡುಕಿದರೆ ಬಹಳ ಅಪರೂಪವೆನಿಸುವ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಸದಭಿರುಚಿ, ಸಹೃದಯತೆಯೇ ಮೈವೆತ್ತಿದಂತಿರುವ ಈ ಅಪರೂಪದ ವ್ಯಕ್ತಿಗೆ ಈ ಕಥೆಗಳ ಮೂಲ ಟೋನ್ ದಕ್ಕಲು ಬೇಕಾಗುವ ಸಮರ್ಥ ಪಾತಳಿಯಿದೆ ಎಂಬುದು ಗೊತ್ತಾಗುತ್ತದೆ.

ನನ್ನ ವಿಶ್ವವಿದ್ಯಾನಿಲಯ : ಇದು ರಷ್ಯನ್ ಲೇಖಕ ಮ್ಯಾಕ್ಸಿಂ ಗಾರ್ಕಿಯ ಆತ್ಮಕಥಾನಕದ ಮೂರನೆಯ ಭಾಗದ ಅನುವಾದ. ರಷ್ಯನ್ ಕ್ರಾಂತಿ ಮತ್ತು ಮೊದಲ ಮಹಾಯುದ್ಧ ಕೊನೆಗೊಂಡ ನಂತರದ ಕಾಲದಲ್ಲಿ (1923 ರ ಸುಮಾರಿಗೆ) ಬಂದ ಈ ಆತ್ಮಕಥಾನಕ ಮೂರು ಭಾಗಗಳಲ್ಲಿವೆ. ಮೈ ಚೈಲ್ಡ್ ಹುಡ್, ಇನ್ ದಿ ವರ್ಲ್ಡ್, ಮತ್ತು ಮೈ ಯುನಿವರ್ಸಿಟೀಸ್ ಎಂಬ ಭಾಗಗಳಲ್ಲಿ ಬಂದಿವೆ. ಪ್ರಸ್ತುತ ಅನುವಾದಕ್ಕೆ ಮೂರನೆ ಭಾಗವಾದ ಮೈ ಯುನಿವರ್ಸಿಟೀಸ್ ಅನ್ನು ಆಯ್ದುಕೊಂಡಿದ್ದಾರೆ. ರಷ್ಯನ್ ಕ್ರಾಂತಿಯ ನಂತರದ ಅಸಹನೀಯ ದಿನಮಾನಗಳನ್ನು ವಿರೋಧಿಸಿದ ಗಾರ್ಕಿ, ಮೊದಲ ಮಹಾಯುದ್ಧಾನಂತರ ಇಟಲಿಯಲ್ಲಿರುವಾಗ ಇವುಗಳನ್ನು ಬರೆದಿದ್ದು ಎನ್ನಲಾಗುತ್ತದೆ. ಈ ಭಾಗವು ನಡೆಯುವ ಕಾಲ, ದೇಶ, ಅಲ್ಲಿನ ದೈನಂದಿನ ಮತ್ತು ಆಗ ಅಲ್ಲಿದ್ದ ಸಾಮಾಜಿಕ ಪರಿಸ್ಥಿತಿ, ಅಲ್ಲಿನ ಹವಾಮಾನ, ಕೃಷಿ ಅಥವಾ ಕೈಗಾರಿಕೆ ಈ ಎಲ್ಲವೂ ನಮ್ಮ ಅಳವಿಗೆ ಬಹಳ ಭಿನ್ನವೇ ಆಗಿದ್ದರಿಂದ ಈ ಕೃತಿಯನ್ನು ಅನುವಾದ ಮಾಡುವುದು ಬಹಳ ಕ್ಲಿಷ್ಟಕರ. ಅಲ್ಲಿನ ಪರಿಸ್ಥಿತಿಯನ್ನು ಇಲ್ಲಿನದ್ದಾಗಿ ವರ್ಗಾಯಿಸಲು ಬರುವುದಿಲ್ಲ, ಅಲ್ಲಿನ ನಡಾವಳಿಗಳೂ ಬೇರೆಯೇ. ಹಾಗಾಗಿ ಒಬ್ಬ ಯುವಕನು ತನ್ನ ಹುಡುಕಾಟದ ಭಾಗವಾಗಿಸಿಕೊಂಡ ಈ ಅಧ್ಯಾಯವನ್ನು ಕನ್ನಡದ ಓದಿಗೆ ಒಗ್ಗಿಸಿ ಬರೆಯುವಾಗ ಅನುವಾದಿತ ಭಾಗವೂ ಓದುಗರ ಹೆಚ್ಚಿನ ಆಸ್ಥೆಯನ್ನು ಬೇಡುತ್ತದೆ. ಇದು ಅನುವಾದದ ಕೊರತೆಯಲ್ಲ. ಆರಿಸಿಕೊಂಡ ಸಾಹಿತ್ಯವೇ ಹಾಗಿದೆ. ಹಾಗಾಗಿ ಈ ನೀಳತೆಯನ್ನು ಓದುವಾಗ ಸ್ವಲ್ಪ ಹೆಚ್ಚು ಗಮನ ಕೇಂದ್ರೀಕರಿಸಬೇಕು. ಹಾಗೆ ಮಾಡಿದ್ದೇ ಆದರೆ ಒಂದು ಬಹಳ ಸೊಗಸಾದ ಖಂಡಾಂತರ ಅನುಭವ, ಹುಡುಕಾಟ ಮತ್ತು ಒಳ ನೋಟಗಳು ನಮ್ಮ ಓದಿಗೆ ದಕ್ಕುತ್ತವೆ. ವಿವರಗಳ ಮೂಲಕವೇ ಆ ಪ್ರಪಂಚಕ್ಕೆ ಹೊಗಬೇಕಾದ ಅನಿವಾರ್ಯತೆ ಓದುಗರಿಗೆ ಈ ಅನುವಾದದಲ್ಲಿದೆ. ಹೆಚ್ಚು ಓದದ, ಪ್ರಪಂಚಾನುಭವವೇ ವಿಶ್ವವಿದ್ಯಾನಿಲಯದ ಓದು ಎಂದು ಭಾವಿಸುವ ಲೇಖಕನ ಹುಡುಕಾಟಗಳು, ಅವನು ಬಯಸಿದ್ದು ಸಿಕ್ಕಿದಾಗ ಅದರಾಚೆಗೆ ನೋಡಲು ಹೊರಡ ಬೇಕಾದ ಅನಿವಾರ್ಯತೆಗಳನ್ನು ಈ ಭಾಗ ನಿರೂಪಿಸಿದೆ. ಅಲ್ಲದೆ ಆ ಕಾಲದ ಮಹಾದೇಶ ವೊಂದರ ಚಿತ್ರಣವೂ ಇಲ್ಲಿ ಹಲವು ಪದರಗಳ ಕೇಕೊಂದನ್ನು ಕತ್ತರಿಸಿದಾಗ ಅದರ ಒಳಗು ನೋಡಲು ಸಿಗುವಂತೆ ನಮ್ಮ ಓದಿಗೆ ಸಿಗುತ್ತದೆ. ಇದು ಪ್ರವಾಸದಲ್ಲಿ ಕಂಡ ರಷ್ಯಾವಲ್ಲ, ಚರಿತ್ರೆಯ ರಷ್ಯಾ. ಆ ಮೂಲಕ ಮಾನವಸಂವೇದನೆಗಳ ಚರಿತ್ರೆ, ವಿಕಾಸದ ಚರಿತ್ರೆ, ಪ್ರಗತಿಯೆಂಬ ಬಿಸಿಲುಗುದುರೆಯ ಚರಿತ್ರೆ ಎಲ್ಲವೂ ನಮ್ಮ ಓದಿಗೆ ಸಿಗುತ್ತದೆ. ಅದಕ್ಕೆ ಇದು ಬರಿಯ ಲೇಖಕನಿಗಷ್ಟೇ ಅಲ್ಲದೆ ಓದುಗರಿಗೂ ಕೂಡಾ ವಿಶ್ವವಿದ್ಯಾನಿಲಯ ಸ್ವರೂಪಿಯೇ ಆಗಿದೆ.

ಕೊನೆ ಎಲೆ : ಟಿಪಿಕಲ್ ಓ ಹೆನ್ರಿ ಕಥೆ. ಓ ಹೆನ್ರಿ ಕಥೆಗಳೆಂದರೆ ನೇರವಿರುವ ಹಾದಿಯ ನಿರೂಪಣೆಯ ಕೊನೆಯಲ್ಲಿ ಒಂದು ದಿಢೀರ್ ತಿರುವು. ಈ ಶೈಲಿಯ ಒಂದು ಮಿತಿಯೆಂದರೆ ನಾಲೈದು ಹೆನ್ರಿ ಕಥೆಗಳನ್ನು ನೀವು ಓದಿದ್ದರೆ, ಮೊದಲ ಸಾಲಿನಿಂದಲೆ ಆ ದಿಢೀ‌ರ್ ತಿರುವು ಇನ್ನೊಂಚೂರು ಮುಂದೆ ಸಿಗುತ್ತದೆ ಅನ್ನುವ ಅಂದಾಜು ಬಂದು ಬಿಡುತ್ತದೆ. ಈ ಮಿತಿಯ ಹೊರತಾಗಿಯೂ ಓ ಹೆನ್ರಿಯ ಕಥೆಗಳು ಯಾರೂ ಯಾವತ್ತಿಗೂ ಓದಬಹುದಾದ ಸೊಗಸಾದ ಕಥೆಗಳೆ. ಈ ಕಥೆಯಲ್ಲೂ ವಾಸಿಯಾಗದ ಕಾಯಿಲೆಯಿಂದ ಹಾಸಿಗೆ ಹಿಡಿದಿರುವ ಆದರೆ ಜೀವಚೈತನ್ಯ ತುಂಬಿರುವ ಬದುಕಿನ ಹಂಬಲದ ಯುವತಿ. ನಮಗೇ ಏಕೆ ಹೀಗಾಗಿದೆ, ಹೀಗಾಯಿತು ಎಂಬ ಲಾಜಿಕ್ಕು ಅರ್ಥವಾಗದೆ ನಾವು ಬಹಳ ಸಲ ನಲುಗುತ್ತೇವೆ. ಅಂತಹ ಸಮಯದಲ್ಲಿ ನಮ್ಮ ಮೇಲಿನ ನಂಬುಗೆ ನಮಗೇ ಹೋಗಿಬಿಡುವ ಯಾತನಾಮಯ ಕ್ಷಣದಲ್ಲಿ ಹುಲ್ಲು ಕಡ್ಡಿ ಸಿಕ್ಕಿದರೂ ಅದಕ್ಕೆ ಆತುಕೊಂಡು ಬದುಕಿಗೆ ಮೊಗ ಮಾಡುವ ಪ್ರಯತ್ನ ಮಾಡುತ್ತೇವೆ. ಬಹಳ ಸಲ ಆ ಹುಲ್ಲು ಕಡ್ಡಿ ನಮ್ಮನ್ನು ಭವಸಾಗರವನ್ನು ದಾಟಿಸುವ ಹಡಗಾಗಿ ಬಿಡುತ್ತದೆ. ಈ ಕಥೆಯಲ್ಲಿ ಹುಲ್ಲು ಕಡ್ಡಿಯ ಬದಲು ಬಳ್ಳಿಯ ಕೊನ ಎಲೆಯಿದೆ.

ಅದು ಮರಣೋನ್ಮುಖ ಜೋನ್ಸಿಗೆ ಹೇಗೆ ಜೀವವೂಡಿತು, ಕಲೆಯೆಂಬುದು ಸಾವಿನ ಬಲೆಗೆ ಸಿಲುಕಿದ ಜೀವಮೀನನ್ನು ಹೇಗೆ ಬಲೆಯಿಂದ ಹೊರತೆಗೆಯಿತು. ಎಂಬುದು ಇಲ್ಲಿ ಪುಟ್ಟದಾಗಿ ಸೊಗಸಾಗಿ ಬಂದಿದೆ. ಈ ಪುಟ್ಟ ಎಲೆಯ ಕಲಾಕೃತಿಯಂತಹ ಕಥೆ ವಿಕ್ರಮ್ ಅವರ ಅನುವಾದಕ್ಕೆ ಸುಲಭವಾಗಿ ದಕ್ಕಿದೆ.

ಈ ಅನುವಾದಿತ ಕಥೆಗಳ ಸೊಗಸಾದ ಓದನ್ನು ಒದಗಿಸಿ, ಈ ಕಿರಿಯಳ ಅನಿಸಿಕೆಯ ಕುರಿತು ವಿಶ್ವಾಸವಿಟ್ಟ ಹಿರಿಯರಾದ ವಿಕ್ರಮ್ ಚದುರಂಗ ಅವರಿಗೆ ನನ್ನ ಧನ್ಯವಾದಗಳು.

- ಸಿಂಧುರಾವ್ ಟಿ.

MORE FEATURES

ಕವನ ಸಂಕಲನವು ನನಗೊಂದು ಹೊಸ ಬಗೆಯ ಅನುಭವವನ್ನು ಮೂಡಿಸಿದೆ

17-12-2024 ಬೆಂಗಳೂರು

“ಜೀವನಾನುಭವಗಳಿಂದ ಕೂಡಿದ ಆಗುಹೋಗುಗಳ ಮತ್ತು ವೈಚಾರಿಕ ವಿಚಾರಗಳನ್ನು ಹೆಕ್ಕಿ ತೆಗೆದು ಹೃದಯದಿಂದ ಗೀಚಿ ಬರವಣಿಗೆಯ...

ಪಾರ್ವತಿ ಐತಾಳ್ ಒಂದು ದೊಡ್ಡ ಸಂದೇಶವನ್ನು ನೀಡುವ ಕೆಲಸ ಮಾಡಿದ್ದಾರೆ

17-12-2024 ಬೆಂಗಳೂರು

"ಒಂದು ಪ್ರದೇಶದಲ್ಲಿ ಒಂದು ಆಸ್ಪತ್ರೆ ಬರುವುದು ಪ್ರಗತಿಯ ಪ್ರತೀಕವಾಗಿ. ಆಸ್ಪತ್ರೆ ಬರುವುದ ಆ ಊರಿನ ಅಗತ್ಯ. ಯಾವುದ...

ಒಬ್ಬ ಕವಿಗೆ/ಕವಯಿತ್ರಿಗೆ ಬರೆಯಲು ಇಂತಹದ್ದೇ ಸಂದರ್ಭ ಬೇಕೆಂದಿಲ್ಲ

16-12-2024 ಬೆಂಗಳೂರು

“ಬದುಕಿನ ಪಯಣದಲ್ಲಿ ಗತಿಸಿದ ಅನೇಕ ಘಟನೆಗಳು, ನೋಡಿದ, ಕೇಳಿದ, ಅಂತರಂಗವನ್ನು ತಟ್ಟಿದ ಹಲವಾರು ಸಂದರ್ಭಗಳು ಆಂತರ್ಯ...