ಗಾಢ ಅನುಭವ ಕಟ್ಟಿಕೊಡುವ ’ಎನ್ನ ಭವದ ಕೇಡು’


ಲೇಖಕ, ಕಾದಂಬರಿಕಾರ ಎಸ್. ಸುರೇಂದ್ರನಾಥ್ ಅವರ ಎನ್ನ ಭವದ ಕೇಡು ಕಾದಂಬರಿಯ ಬಗ್ಗೆ ಲೇಖಕ ಜಯರಾಮಚಾರಿ ಅವರು ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ...

ಮೊನ್ನೆ ಓದಿ ಮುಗಿಸಿದ್ದು "ಎನ್ನ ಭವದ ಕೇಡು".

ಓದಿದ ಕೂಡಲೇ ಅದರ ಬಗ್ಗೆ ಬರೆದು ಸುಮ್ಮನಾಗುವುದು ವಾಡಿಕೆ. ಆದರೆ ಈ ಪುಸ್ತಕ ಓದಿದ ಮೇಲೆ ಏನು ಬರೆಯಲು ಮನಸಾಗಲೇ ಇಲ್ಲ. ಒಂದು ತರದ ತಳಮಳ.ಸಾವಿನಾಚೆ ನಿಂತ ಸೂತಕದ ತರ. ಸುರೇಂದ್ರನಾಥರ ಹುಚ್ಚು ತಟ್ಟಿದ್ದು ಬಂಡಲ್ ಕತೆಗಳಿಂದ. ನನಗಿಷ್ಟವಾದ ಕತಾ ಸಂಕಲನ ಅದು. ಅದಾದ ಮೇಲೆ ಅವರ ಎರಡು ನಾಟಕ ನೋಡಿದೆ ಹುಚ್ಚು ಇನ್ನು ಹೆಚ್ಚಾಗಿ ಅವರ ಎಲ್ಲ ಪುಸ್ತಕ ಖರೀದಿಸಿಬಿಟ್ಟೆ.ಮುರಕಮಿ ನಂತರ ನನ್ನ ಜಾಸ್ತಿ ಕಾದಿದ್ದು ಸುರೇಂದ್ರನಾಥರು ಅವರ ಬರಹ. ಯಾವ ಬರಹಗಾರನನ್ನು ಜಾಸ್ತಿ ಹಚ್ಕೋಬಾರ್ದು ಅಂತ ಗೊತ್ತು.

ತಮಾಷೆ ಅಂದ್ರೆ ಭವ ಅಂದ್ರೆ ಇರುವಿಕೆ ಅಸ್ತಿತ್ವ, ಎನ್ನ ಭವದ ಕೇಡು ಅನ್ನೋದು ಬಸವಣ್ಣನವರ ಒಂದು ವಚನದ ಸಾಲು. ಇದಕ್ಕೂ ಮೊದಲು ಓದಿದ ಕಾದಂಬರಿ ಕರಣಂ ರ ಸತ್ತು. ಸತ್ತು ಅಂದರೂ ಕೂಡ ಅಸ್ತಿತ್ವ ,ಇರುವಿಕೆ ಎಂದೇ ಅರ್ಥ. ಒಂದೇ ಅರ್ಥದ ಎರಡು ಬೇರೆ ಕಾಲಘಟ್ಟದ ಬೇರೆ ಶೈಲಿಯ ಎರಡು ಕನ್ನಡ ಕಾದಂಬರಿ ಓದುವುದೇ ಒಂದು ವಿಶಿಷ್ಟ ಅನುಭವ.

ಎನ್ನ ಭವದ ಕೇಡು ಒಂದು ಕ್ಲಾಸಿಕ್ . ಕ್ಲಾಸಿಕ್ ಕೃತಿಗೆ ಯಾವ ಅರ್ಹತೆ ಅಥವಾ ಮಾನದಂಡ ಇರಬೇಕೋ ನನ್ನ ಲಿಮಿಟೆಡ್ ಓದಿನಲ್ಲಿ ಗೊತ್ತಿಲ್ಲ. ಆದರೆ ಕ್ಲಾಸಿಕ್ ಎನ್ನಬಹುದಾದ ಕೃತಿಗಳನ್ನು ಓದಿದಾಗ ನನಗಾದ ಅನುಭವ ಅವುಗಳು ನನಗೆ ಕೊಟ್ಟ ವಿಶಿಷ್ಟ ಜ್ಞಾನದ ಆಧಾರದ ಮೇಲೆ ಇದೊಂದು ಪಕ್ಕ ಕ್ಲಾಸಿಕ್ .ಮೂಕಜ್ಜಿ ಮುಟ್ಟಿ ಭೂತ ಭವಿಷ್ಯ ಹೇಳಿದರೆ ಇಲ್ಲಿ ಬರುವ ಮಾಮಿ ಘಮವನ್ನು ಆಘ್ರಾಣಿಸಿಯೇ ಎಲ್ಲವನ್ನು ಹೇಳಬಲ್ಲಳು. ಕತ್ತಲಲ್ಲಿ ಕರಗಿಹೋದವಳು.ಕತ್ತಲಿಗೆ ಬೆಳಕದವಳು, ಬೆಳಕಿಗೆ ಕತ್ತಲಾದವಳು.ಇದೊಂದು ಕುಟುಂಬದ ಕತೆ ಕುಟುಂಬ ಅಳಿದು ಹೋದ ಕತೆ, ಅಲ್ಲಿ ಊರ ದೇವರಂತ ಗೋವರ್ಧನರಾಯರಿದ್ದಾರೆ ಅವರಿಗೆ ನಾಲ್ಕು ಹೆಣ್ಣು ಮಕ್ಕಳ ಕೊಟ್ಟ ಎರಡನೇ ಹೆಂಡತಿ ರಾಧಾ ಇದ್ದಾಳೆ, ಅಮ್ಮನಂತ ಗೌರಕ್ಕ ಇದ್ದಾಳೆ ಗೆಳತಿಯಂತ ಅಂಬಕ್ಕ ಇದ್ದಾಳೆ, ನಿಷ್ಠೆಗೆ ಪಂಪಾವತಿ ಕೃಷ್ಣಮೂರ್ತಿ ಇದ್ದಾರೆ ಇಲ್ಲಿ ಎಲ್ಲರು ಇದ್ದಾರೆ ಬದುಕಿನ ಎಲ್ಲ ಮಗ್ಗುಲು ಗೋಚರಿಸುವ ಎಲ್ಲವೂ ಇದೆ, ತುಳಸಿಬನದಲ್ಲಿ ಜೀವ ಬಿಡದ ಮುದುಕಿಗೆ ನೀರು ಕುಡಿಸಿ ಮುಕ್ತಿ ಕೊಡಿಸುವ ವಾಸ್ತವ ಮಾಯವಾದವೂ ಇದೆ. ನಾಗಬನವಿದೆ ಲಿಂಗಪುಷ್ಪವಿದೆ ಮಿಥುನದಲ್ಲಿ ಅರಳಿ ನಿಂತ ನೇರಳೆ ಬಣ್ಣವಿದೆ. ಎಲ್ಲವನ್ನು ಮೀರಿ ಅವರಿಸೋದು ಸರಸ್ವತಿ ಮತ್ತು ಮಾಮಿ. ಕೊನೆಯವರೆಗೂ ಹಗ್ಗ ಜಗ್ಗಾಟ ಮಾಡುತ್ತಾ ಇವರಿಬ್ಬರು ಈ ಕಾದಂಬರಿಯ ಆತ್ಮ.ಇನ್ನು ಹೆಚ್ಚು ಹೇಳುವದಕ್ಕಿಂತ ಇನ್ನೊಂದು ಸಲ ಓದಿ ಅನುಭವಿಸೋದೇ ಉತ್ತಮ.

ಕಾದಂಬರಿಯಲ್ಲಿ ಕಾಡಿದ ಎಷ್ಟೋ ಘಟನೆಗಳಲ್ಲಿ ಒಂದು ಘಟನೆ ಮಾತ್ರ ಹೇಳಿಬಿಡುತ್ತೇನೆ : ಅಡುಗೆಮನೆಯಲ್ಲೇ ಹುಟ್ಟಿ ಅಡುಗೆಮನೆಯಲ್ಲೇ ಬೆಳೆದು ಅಡುಗೆಯೇ ಆಗಿ ಹೋದಂತಹ ಸರಸ್ವತಿ ವಾಸುವಿನ ಪ್ರೀತಿ ಸಿಗಲಾರದೆ, ಅದೇ ವಾಸು ತನ್ನ ತಂಗಿಯನ್ನು ಮದುವೆಯಾಗುವ ದಿನ ಮಾಮಿಯಿಂದ ಇನ್ನೇನೂ ಸಾಯುವ ಹಂತದಲ್ಲಿ ಇದ್ದಾಗ ಜ್ವರ ಬೀಳುತ್ತಾಳೆ ಕೆಂಡದಂತ ಜ್ವರ ಮೂರನೇ ದಿನಕ್ಕೆ ಗೌರಕ್ಕ ಅವಳ ಬಳಿ ಕೂತು ನಾನಿದ್ದೀನಿ ಏನು ಆಗೋಲ್ಲ ಎಂದು ಧೈರ್ಯ ತುಂಬುತ್ತಾಳೆ.ಹುಷಾರಾದ ಸರಸ್ವತಿ ಎದ್ದು ಗೌರಕ್ಕ ಎಂದು ಕೇಳಿದಾಗ ಮೂರು ದಿನದ ಹಿಂದೆಯೇ ಗೌರಕ್ಕ ತೀರಿಕೊಂಡಿರುತ್ತಾಳೆ. ಹಾಗಾದರೆ ಸರಸ್ವತಿ ಪಕ್ಕ ಕೂತು ತಡವಿದ ಮಾತೆ ಯಾರು ?

ತುಂಬಾ ದಿನಗಳಾದ ಮೇಲೆ ಕನ್ನಡದಲ್ಲಿ ಒಂದು ಒಳ್ಳೆ ಕಾದಂಬರಿ ಓದಿದ ಅನುಭವ.
ಇದು ಎನ್ನ ಭವದ ಕೇಡು.

ಜಯರಾಮಚಾರಿ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

MORE FEATURES

ಇಲ್ಲಿನ ಚೌಪದಿಗಳನ್ನು ಬರೆಯುವಾಗ ನನಗಾದ ಸಂತೋಷ ಅವರ್ಣನೀಯ

04-12-2024 ಬೆಂಗಳೂರು

“ಇಲ್ಲಿನ ಚೌಪದಿಗಳನ್ನು ಬರೆಯುವಾಗ ನನಗಾದ ಸಂತೋಷ ಅವರ್ಣನೀಯ, ಪದಬಣ್ಣನೆಗೆ ನಿಲುಕದ ಸಂಗತಿ. ಅದೊಂದು ಆನಂದದ ರಸಯಾತ...

ಬೆಟ್ಟದ ಜೀವಕ್ಕೆ ಮರು ಜೀವ..

04-12-2024 ಬೆಂಗಳೂರು

"ಚಲನಚಿತ್ರಕ್ಕೆ ನಿರ್ದೇಶನ ಮಾಡುವುದೆಂದರೆ, ಕಲೆ ಹಾಗೂ ತಂತ್ರಜ್ಞಾನ ಇವೆರಡನ್ನೂ ಮೀರಿದ ವಿಶೇಷವಾದ ಕೌಶಲ್ಯವನ್ನು ಬ...

ವಿವಾಹಿತರ ಸೀಮಿತ ಚೌಕಟ್ಟಿನೊಳಗಿನ ಬದುಕಿನ ಚಿತ್ರಣವಿದು

04-12-2024 ಬೆಂಗಳೂರು

"ತಮ್ಮದೇ ಅನುಭವಗಳ ಪರಿಧಿಯಲ್ಲಿ ಬರುವ ಮೆಟ್ರೊ ನಿಲ್ದಾಣ ಮತ್ತದರ ಕಾರ್ಯಚಟುವಟಿಕೆ, ಬೆಂಗಳೂರು ನಗರ ಮತ್ತು ಕೋಲ್ಕತಾ...