“ಕನಕದಾಸರು ಸ್ಥಾನಮಾನಗಳ ದೃಷ್ಟಿಯಿಂದ ಸಾಕಷ್ಟು ಶ್ರೀಮಂತ ಕುಟುಂಬವಾದರೂ ಹುಟ್ಟಿನ ದೃಷ್ಟಿಯಿಂದ ಸಮಾಜದ ಕೆಳವರ್ಗಕ್ಕೆ ಸೇರಿದವರು. ತಮ್ಮ ಅವಿರತವಾದ ಸಾಧನೆಯ ಫಲವಾಗಿ ಅವರು ಏರಿದ ಎತ್ತರ ಮಹತ್ವಪೂರ್ಣವಾದದ್ದಾಗಿದ್ದರೂ ಆ ಸಿದ್ಧಿಗಾಗಿ ಅವರು ಕ್ರಮಿಸಿದ ಹಾದಿ ಅತ್ಯಂತ ದುರ್ಗಮವಾದುದಾಗಿತ್ತು”, ಎನ್ನುತ್ತಾರೆ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರು ಕನಕದಾಸ ಜಯಂತಿಯ ಪ್ರಯುಕ್ತ ಬರೆದ ಲೇಖನ.
ಐದು ಶತಕಗಳ ಹಿಂದೆ, ವಿಜಯನಗರದ ಉಚ್ಛಾಯ ಕಾಲದಲ್ಲಿ ಆ ಚಕ್ರಾಧಿಪತ್ಯದ ಗಣ್ಯ ದಂಡನಾಯಕನಾಗಿದ್ದು, ಸಾಕಷ್ಟು ಶ್ರೀಮಂತ ಜೀವನದ ಸವಿಯುಂಡು, ತನ್ನ ದಾನ, ಔದಾರ್ಯ, ಜನಪ್ರೇಮ, ಸಜ್ಜನಿಕೆ, ಸಾಹಸಶೀಲತೆ, ದೇಶಭಕ್ತಿ, ದೈವಭಕ್ತಿ, ದಕ್ಷತೆ, ಸಾಹಿತ್ಯ, ಸಂಸ್ಕೃತಿ ಪ್ರಿಯತೆಗಳಿಂದ ಪ್ರಜೆಗಳ ಮನೋರಂಗದಲ್ಲಿ ಗೌರವ ಅಭಿಮಾನಗಳ ಸ್ಥಾನವನ್ನು ಸಂಪಾದಿಸಿ, ಯಾವುದೋ ಒಂದು ಕ್ಲಿಷ್ಟ ನಿರ್ಣಾಯಕ ಸಂದರ್ಭದಲ್ಲಿ ತನ್ನ ರಾಜ್ಯಕೋಶ ಪದವಿ ಪ್ರತಿಷ್ಠೆಗಳನ್ನೆಲ್ಲ ತೃಣಕ್ಕೆಣೆಯಾಗಿ ತ್ಯಜಿಸಿ ಪರಿವ್ರಾಜಕ ಜೀವನವನ್ನು ಸ್ವಇಚ್ಛೆಯಿಂದ ವರಿಸಿ, ಅಸಾಧಾರಣ ಅನುಭಾವಿಯಾಗಿ ಬೆಳಗಿದವರು ಕನಕದಾಸರು. ಭೋಗತ್ಯಾಗಗಳೆರಡರ ಸವಿಯನ್ನು ಸವಿದ, ಬದುಕಿನ ಏಳು ಬೀಳುಗಳನ್ನು, ಅಸಂಗತ ಅನರ್ಥಗಳನ್ನು, ಜನರ ಸಣ್ಣತನದೊಡ್ಡತನಗಳನ್ನು, ವಿರೋಧಾಭಾಸಗಳನ್ನು ಋಜು ವಕ್ರತೆಗಳನ್ನು ಟೊಳ್ಳುತನ ಗಟ್ಟಿತನಗಳನ್ನು ತೆರೆದ ಕಣ್ಣಿನಿಂದ ಮನಸ್ಸಿನಿಂದ ಕಂಡ, ನೊಂದ ಕೆಣಕಿದ ಕೆರಳಿದ ಚಿಂತಿಸಿದ ಶೋಧಿಸಿದ ದಾಸರು ಅವೆಲ್ಲಕ್ಕೂ ಅತಿಶಯವಾದ ವಾಗ್ರೂಪವನ್ನು ತಮ್ಮ ಪ್ರತಿಭಾಸ್ಪರ್ಶದಿಂದ ನೀಡಿದ್ದಾರೆ.
ಕನಕರ ಕಾವ್ಯಕ್ಕೆ ಎರಡು ಕಣ್ಣುಗಳು ಒಂದು ಭಗವಂತ, ಮತ್ತೊಂದು ಸಮಾಜ.ಕನಕದಾಸರು ಸ್ಥಾನಮಾನಗಳ ದೃಷ್ಟಿಯಿಂದ ಸಾಕಷ್ಟು ಶ್ರೀಮಂತ ಕುಟುಂಬವಾದರೂ ಹುಟ್ಟಿನ ದೃಷ್ಟಿಯಿಂದ ಸಮಾಜದ ಕೆಳವರ್ಗಕ್ಕೆ ಸೇರಿದವರು. ತಮ್ಮ ಅವಿರತವಾದ ಸಾಧನೆಯ ಫಲವಾಗಿ ಅವರು ಏರಿದ ಎತ್ತರ ಮಹತ್ವಪೂರ್ಣವಾದದ್ದಾಗಿದ್ದರೂ ಆ ಸಿದ್ಧಿಗಾಗಿ ಅವರು ಕ್ರಮಿಸಿದ ಹಾದಿ ಅತ್ಯಂತ ದುರ್ಗಮವಾದುದಾಗಿತ್ತು. ಆಚಾರವಂತಹ ಅವೈಚಾರಿಕತೆಯನ್ನು, ಜ್ಞಾನ ಸಂಪನ್ನರೆನಿಸಿದವರ ಅಜ್ಞಾನ ತಿಮಿರವನ್ನು, ಕರ್ಮಜಡರ ಅಂತಃಕರಣ ಹೀನತೆಯನ್ನು ತಮ್ಮೆಲ್ಲ ಸೂಕ್ಷö್ಮತೆ ತೀವ್ರತೆಯೊಡನೆ ಇವರ ಕೀರ್ತನೆಗಳಲ್ಲಿ ಮೈತಳೆದಿದೆ.
ಕನಕದಾಸರು ಹಲವು ಶಾಸ್ತçಗಳನ್ನು ಬಲ್ಲವರು. ಆದರೆ ಅನುಚಿತ ಅವೈಚಾರಿಕೆ ಎನಿಸಿದಾಗ ಅವುಗಳ ಕಬ್ಬಿಣದ ಕೋಟೆಯನ್ನು ದಾಟಿಯೂ ನಿಲ್ಲಬಲ್ಲರು. `ಅಪುತ್ರಸ್ಯ ಗತಿರ್ನಾಸ್ತಿ’ ಎಂಬ ವಾಕ್ಯ ಕಾಲದ ಕಟ್ಟುಗಳನ್ನು ಮೀರಿ ಇಂದೂ ಸಾಂಪ್ರದಾಯಿಕ ವಲಯಗಳಲ್ಲಿ ಅನುರಣಿತವಾಗುತ್ತಿದೆ. ಈ ನಂಬಿಕೆಯ ಬೇರನ್ನೇ ಇವರು ಅಲುಗಾಡಿಸುತ್ತಾ, `ಮಗನಿಂದ ಗತಿಯುಂಟೆ ಜಗದೊಳಗೆ ನಿಗಮಾರ್ಥ ತತ್ವವಿಚಾರದಿಂದಲ್ಲದೆ’ ಎಂದು ಪ್ರಶ್ನಿಸುತ್ತಾರೆ.
ಕನಕದಾಸರ ಕೃತಿಗಳಲ್ಲಿ ಧೀರತೆಯ ಸಂದೇಶವಿದೆ. ಉನ್ನತ ವ್ಯಕ್ತಿತ್ವ ನಿರ್ಮಾಣದ ಮಾರ್ಗದರ್ಶನವಿದೆ. ಪರಿಶುದ್ಧ ವ್ಯಕ್ತಿತ್ವವನ್ನು ಹೊಂದಲು ಪ್ರೇರಣೆಯಿದೆ. ಸಕಲ ಕಷ್ಟ ಸಂಕಟ-ವಿಪತ್ತುಗಳನ್ನು ಎದುರಿಸಿ ಮುನ್ನಡೆಯುವ ಕೆಚ್ಚನ್ನುಂಟುಮಾಡುವ ಶಕ್ತಿಯಿದೆ. ಪೂರ್ಣ ಜಗತ್ತನ್ನು ಕ್ರಾಂತಿ ಮಾಡಿ ಬದಲಿಸಬಲ್ಲ ಮತ್ತು ವಿಜ್ಞಾನ ಧರ್ಮದೊಳಗೆ ಸಾಮರಸ್ಯ ಮೂಡಿಸುವ ಚಿಂತನಧಾರೆಯಿದೆ. ಹುಲಿಯಾಗಿದ್ದರೂ ತನ್ನನ್ನು ತಾನು ಕುರಿಯೆಂದೇ ಬಾಳುತ್ತಿರುವ ನಮಗೆ ಎಚ್ಚರ ನೀಡುವ ಪ್ರಜ್ಞೆಯಿದೆ.
ಭಗವಂತನ ಸರ್ವವ್ಯಾಪಕತ್ವವನ್ನು ಅರಿತು ಯಾರೂ ಇಲ್ಲದೆಡೆ ದೊರೆಯಲಿಲ್ಲ. ಹಾಗಾಗಿ ಬಾಳೆಹಣ್ಣನ್ನು ತಿನ್ನಲು ಸ್ಥಳ ದೊರೆಯಲಿಲ್ಲ ಎಂದು ಗುರುಗಳಿಗೆ ತಿಳಿಸಿದರು. ನಾನು ಹೋದರೆ, ಮೋಕ್ಷಕ್ಕೆ ಹೋಗುವೆ ಎಂದು ಗೂಢಾರ್ಥವಾಗಿ ಹೇಳಿ ಅಹಂನ್ನು ತೊರೆದಾಗಲೇ ಮೋಕ್ಷ ಎಂದು ನುಡಿದರು. ಭಗವಂತನ ದರ್ಶನ ಮಾಡಿಸಬೇಕೆಂಬ ಸವಾಲನ್ನು ಅಂಗೀಕರಿಸಿ ಕನಕರು ಪರಮಾತ್ಮನ ಧ್ಯಾನ ಮಾಡಿ, ಕಾಡಿ ಬಏಡಿ ಕರೆದಾಗ ಬೇರೆಲ್ಲರಿಗೂ ಕಂಡದ್ದು ಒಮ್ಮೆ ಶ್ವಾನ, ಇನ್ನೊಮ್ಮೆ ಹಾವಾಗಿ, ಸತ್ಯವನ್ನರಿತಿದ್ದ ವ್ಯಾಸರಾಜರು ಹಾವಿಗೆ ಹಾಲು ಕುಡಿಸಿ ಕನಕರಿಗೆ ತೀರ್ಥ ನೀಡಿದರು.
ಭಕ್ತಿಮಾರ್ಗವನ್ನು ಸಾದರ ಪಡಿಸಿದ ಮಹಾನ್ ಚೇತನ ಶ್ರೀ ಕನಕದಾಸರು. ಕನಕದಾಸರ ಒಂದೊAದು ಕೃತಿಯೂ ಮೈನವಿರೇಳಿಸುವ, ಭಕ್ತಿಯಿಂದ ಕೂಡಿದ್ದು ಇಡೀ ಮನುಕುಲವೇ ಒಂದು ಎಂದು ಸಾರುತ್ತಿದೆ. ಕನಕದಾಸರು ದಾಸರಲ್ಲಿ `ಕವಿ ; ಕವಿಗಳಲ್ಲಿ ದಾಸ, ದೇಶಿಯತೆ ಹಾಗೂ ಗೇಯತೆಗಳೆರಡನ್ನೂ ಮೇಳೈಸಿಕೊಂಡು ಕನ್ನಡ ಸಾಹಿತ್ಯ ವಾಹಿನಿಗೆ ಹೊಸತನ ನೀಡಿ ಮನುಜಮತ, ಸಾಹಿತ್ಯ ಪಥ ಹಾಗೂ ಭಕ್ತಿ ಸಿದ್ಧಾಂತದ ತ್ರಿವೇಣಿ ಸಂಗಮ ಶ್ರೀ ಕನಕದಾಸರು.
ಸರ್ವಕಾಲಿಕ ಮಾನವೀಯ ಮೌಲ್ಯಗಳನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಿಸಿದ ಹಾಗೂ ಭಕ್ತಿ ಸಂಪದಗಳ ಸಾರ್ವತ್ರಿಕ ಹಬ್ಬುಗೆಗೆ ಕಾರಣವಾದ ಕನಕದಾಸರು ಕನ್ನಡಿಗರು. ಕನ್ನಡಿಗರೆಲ್ಲರೂ ಕನಕದಾಸರನ್ನು `ಇವ ನಮ್ಮವ’ ಎಂದು ಹೆಮ್ಮೆಯಿಂದ ಬೀಗುವಂತೆ ಮಾಡಿದ ವಿಶ್ವಮಾನವ.
ಕನಕದಾಸರು ವಿಜಯನಗರ ಸಾಮ್ರಾಜ್ಯ ಉಚ್ಛಾçಯಸ್ಥಿತಿಯಲ್ಲಿದ್ದಾಗ ಬಾಳಿ ಬದುಕಿದರು. ಕನಕದಾಸರು ರಚಿಸಿದ ಸಾಹಿತ್ಯ ಮೂಲದಿಂದ ಸಮಕಾಲೀನರಾದ ಪುರಂದರದಾಸರ ಕೀರ್ತನೆಗಳಿಂದ ಕನಕದಾಸರನ್ನು ಕುರಿತು ಬೆಳೆದು ಬಂದಿರುವ ಪವಾಡ ಪರಂಪರೆಗಳಿAದ ಕಡೆಯದಾಗಿ ಜನಮನದಲ್ಲಿ ಪರಂಪರಾನುಗತವಾಗಿ ಬೆಳೆದು ನಿಂತ ಭಾವನೆಗಳಿಂದ ಕನಕದಾಸರ ವೈಯಕ್ತಿಕ ಚರಿತ್ರೆಯನ್ನು ರೂಪಿಸಬೇಕಾಗಿದೆ. ಬದುಕಿನಲ್ಲಿ ಬೇಸರ ಬಂದು ಭಗವಂತನಲ್ಲಿ ಭಕ್ತಿ ಮೂಡಿದಾಗ, ಎಲ್ಲವನ್ನೂ ತೊರೆದು ಅವನ ದಾಸನಾದಾಗ, ಯಾರ ಹಂಗಿಗೂ ಒಳಗಾಗದ `ಅರಿಗಂಜದವ’ ನಾದ ಕನಕನನ್ನು ಸಂಸಾರದಲ್ಲಿರಿಸುವವರು ಯಾರೂ ಇರಲಿಲ್ಲವಾಗಿ, ನಿತ್ಯಜ್ಞಾನಿಯಾಗಲು ಬಯಸಿದ ಕನಕ ಸತ್ಯವಂತರ ಸಂಗವನ್ನರಸುತ್ತಲೇ ನಡೆದ. ಕನಕದಾಸರ ಧಾರ್ಮಿಕ ಪ್ರವೃತ್ತಿ ಶ್ರೀ ವೈಷ್ಣವ ಮತದಿಂದ ಪ್ರಾರಂಭವಾದರೂ ಅದು ಪಕ್ವವಾದದ್ದು ವ್ಯಾಸತೀರ್ಥರ ಸಂಪರ್ಕದಿAದ, ವಾದಿರಾಜರಲ್ಲಿ ಶಿಷ್ಯವೃತ್ತಿ, ಪುರಂದರದಾಸರ ಗೆಳೆತನ ಈ ನಾಲ್ಕು ಮಹಾತೀರ್ಥದಲ್ಲಿ ಮಿಂದ ಕನಕ ` ಕನಕತೀರ್ಥ’ನೇ ಆದ.
ಮನಸ್ಸು ಮಾರಮಣನಿಗೆ ಒಪ್ಪಿಸಿ, ಕೀರ್ತಿ ಕಾಮನೆಗಳೆಂಬ ಮನಸ್ಸಿನ ಹೊರೆಯನಿಳಿಸಿ, ಮನಸ್ಸನ್ನು ಬರಿದಾಗಿಸಿಕೊಂಡು, ` ಕನಕನಾಯಕ’ ಕನಕದಾಸರಾದರು. ದಾಸನಾಗಿ `ಮನವ ಬರಿದಾಗಿಸಿಕೊಳ್ಳುವ’ ಆನಂದವನ್ನು ತಾವು ಅನುಭವಿಸಿ, ಅದನ್ನು ಇತರರು ಅನುಭವಿಸಲು ಕರೆಕೊಟ್ಟಿದ್ದಾರೆ. ಸಲಭ ಉಪಾಯಗಳನ್ನು ಸೂಚಿಸಿದ್ದಾರೆ. `ದಾಸನಾಗೋಭವಪಾಶನೀಗೋ’ ಎಂಬ ಕೀರ್ತನೆಯಲ್ಲಿ. ಈ ವಿಶ್ವ, ಈ ವಿಶ್ವದ ಹಿಂದಿರುವ ವಿಷ್ಣುವನ್ನು ಅರಿಯಬೇಕೆಂಬ ತುಡಿತದಿಂದಾಗಿ ಕನಕ `ವಿದ್ಯೆಯ ಕನಕಗಂ’ ಯಾದ ಕನಕ ವಿನಯ ಅರಿವಿನಿಂದ ಒದಗಿದ್ದು ವಿಶ್ವದ ಬಗ್ಗೆ ಚಿಂತಿಸುತ್ತಾ, ಚಿಂತಿಸುತ್ತಾ ಅದರ ಆಳಕ್ಕೆ ಇಳಿದಂತೆಲ್ಲ ಅದರ ನಿಗೂಢತೆಗೆ ವಿಸ್ಮಿತನಾಗಿ ವಿಷ್ಣುವನರಿತಂತೆಲ್ಲ ಕನಕ ವಿನಯ ಸಂಪನ್ನನಾದ.
ಕನಕ ವನಸುಮದಂತೆ ಕಾಡಿನ ಪುಷ್ಪ, ಅರಳುವವರು ಕಂಪು ಸೂಸುವರು ಎಲ್ಲವೂ ಸ್ವಾಭಾವಿಕ. ಅಲ್ಲಿ ಕೀರ್ತಿ ಕಾಮನೆಗಳ ಸೋಂಕಿಲ್ಲ, ಅಲ್ಲಿ `ನಾನು’ ಅಳಿಸಿ ಹೋಗಿದೆ.ಕುಲದ ನೆಲೆಯ ಮೀರಿನಿಂತ ಕನಕದಾಸರ ಕುಲದ ಕುರಿತೆ ಜಿಜ್ಞಾಸೆ ನಡೆದಿದೆ. `ತಾಳಿದವನು ಬಾಳಿಯಾನು’ ಎಂಬAರ್ಥದಲ್ಲಿ `ಕನಕನ ತಾಳಾಗು ಇಲ್ಲದಿದ್ದರೆ ಹಾಳಾಗು!’ ಕಂಡಕAಡAತೆ ಹೇಳಾಕ ಕನಕದಾಸನೇನು? ಎಂಬ ಗಾದೆಯಲ್ಲಿ ಕನಕದಾಸರ ನಿರ್ಭಯತ್ವ ವ್ಯಕ್ತವಾಗುತ್ತದೆ. ಕನಕನಾಗಿ ಬದುಕಿ, ಸಂತನಾಗಿ ಸಾಯಬೇಕು. `ವ್ಯಾಸ-ಪುರಂದರ-ಕನಕ’ ಈ ಮೂವರಿಗೆ ಪ್ರೇರಕವಾದದ್ದು ಮತೀಯ ಭಾವನೆಗಳಲ್ಲ. ಯಾವುದೇ ತಾತ್ವಿಕ ನಿಲುವಲ್ಲ, ಮಾನವ ಕೋಟಿಯ ಉದ್ಧಾರದ ಕಲ್ಪನೆ. ಕನಕದಾಸರ ಮೇರು ಕೃತಿಯಾದ ಈಶ ನಿನ್ನ ಚರಣೆ ಭಜನೆ, ಆಸೆಯಿಂದ ಮಾಡುವೆ, ದೋಷರಾಶಿಗಳನು ನಾಶ ಮಾಡೋ ಶ್ರೀಹರಿ ಎಂಬ ೨೬ ನುಡಿಗಳ ಸುವ್ವಿಮಟ್ಟಿನ ಕೇಶವನಾಮವನ್ನು ಬೆಳಗಿನ ಜಾವ ಉದಯರಾಗದಲ್ಲಿ ನಿತ್ಯ ಹೇಳಿಕೊಳ್ಳುವ ಸಂಪ್ರದಾಯ ಪ್ರಾಯಶಃ ಇಡೀ ಕರ್ನಾಟಕದೆಲ್ಲೆಡೆ ಇದೆ ಎಂದರೆ ಅತಿಶಯೋಕ್ತಿಯಲ್ಲ.
ಪಾಂಡಿತ್ಯ, ಲೋಕಾನುಭವಗಳ ಹಿನ್ನಲೆಯಿಂದಾಗಿ ಆಡುಭಾಷೆಯ ಜನಪದ ಸಾಹಿತ್ಯ ಸೊಗಡಿನಿಂದಾಗಿ ಇವರು ನುಡಿದದ್ದೆಲ್ಲಾ ಹಾಡಾಯಿತು, ಸಾಹಿತ್ಯವಾಯಿತು, ಕಾವ್ಯವಾಯಿತು, ಗೇಯಗುಣವುಳ್ಳ ನೃತ್ಯಕ್ಕೆ ಅಳವಡಿಸುವ ಛಂದೋಬದ್ಧವಾದ ರೀತಿಯಲ್ಲಿ ಹೆಣೆದ ಇವರ ಸಾಹಿತ್ಯ ವೈಶಿಷ್ಠಪೂರ್ಣವಾದುದು. ಕನಕನ ಗುಟ್ಟು ಕನಕನೇ ಬಲ್ಲ ಎಂಬ ನಾಣ್ನುಡಿಯಂತೆ ಇವರ ಮುಂಡಿಗೆಗಳು ಗುಹ್ಯಾಭಾಷೆಯಿಂದ ಕೂಟ ಶ್ಲೋಕದಂತೆ ಇರುವ ಸೂಚನೆ ಅತ್ಯಂತ ರಮಣೀಯ.
ರಾಮಧ್ಯಾನ ಚರಿತ್ರೆ ಎಂಬ ರೂಪಕ ಕಾವ್ಯ, ರಾಮಾಯಣದ ಹಿನ್ನಲೆಯಲ್ಲಿ ಹೆಣೆದಿರುವ ವರ್ಗ ಸಂಘರ್ಷದ ಕತೆಯಿದು. ರಾಗಿ ಭತ್ತಗಳನ್ನು ಬಡವ ಬಲ್ಲಿದರ ಪ್ರತಿನಿಧಿಗಳನ್ನಾಗಿ ಕಲ್ಪಿಸಿಕೊಂಡು ಅವೆರಡರ ಮಾತಿನ ಚಕಮಕಿಯ ಮೂಲಕ ದಾಸರು ತಮ್ಮ ಆಲೋಚನೆ, ವಿಚಾರಗಳನ್ನು ಸಮರ್ಥವಾಗಿ ಬಿಚ್ಚಿಟ್ಟಿರುವರು. ಕನಕದಾಸರ ದೃಷ್ಟಿಯಲ್ಲಿ ಭಕ್ತಿಗಿರುವ ಸ್ಥಾನ ಮುಕ್ತಿಗಿಲ್ಲ. ಕನಕದಾಸರಂಥ ವೈಚಾರಿಕ ಸಂತರಿAದಾಗಿ ಸಮಾಜದ ಮೇಲು-ಕೀಳು, ಜಾತಿ-ಮತಗಳ ಸಿದ್ಧಾಂತ ಬದಿಗೆ ಸರಿಯಿತು. ದೇವಸ್ತುತಿಯೇ ಮುಖ್ಯವೆನಿಸಿದ ಭಕ್ತಿ ಪರಂಪರೆಯ ಕಾಲದಲ್ಲಿ ಧ್ರುವತಾರೆಯಂತೆ ಅವತರಿಸಿದ ಕನಕದಾಸರು. ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ನೆಲೆಗಟ್ಟಿನಿಂದ ದಾಸ ಸಾಹಿತ್ಯಕ್ಕೆ ವೈಚಾರಿಕ ಪ್ರಭೆಯನ್ನು ನೀಡಿದರು.
ನಾಲ್ಕು ಶತಮಾನಗಳ ಹಿಂದಿನ ಕನಕರ ಆತಂಕಗಳು ಇಂದಿನ ಜ್ವಲಂತ ಪ್ರಶ್ನೆಗಳಾಗಿ ಉಳಿದಿರುವುದು ಮಾತ್ರ ವಿಷಾಧನೀಯ. ಹರಿದಾಸರು ಸಾಮಾನ್ಯವಾಗಿ ಹರಿಕೀರ್ತನೆಗಳನ್ನು ರಚಿಸಿದರೇ ಹೊರತು ಇತರ ಸಾಹಿತ್ಯ ಕೃತಿಗಳ ಕಡೆಗೆ ಗಮನ ಹರಿಸಿದ್ದು ಕಡಿಮೆ. ಆದರೆ ಕನಕದಾಸರು ದೇವರ ನಾಮಗಳಿಗಿಂತಲೂ ಅಧಿಕ ಪ್ರಮಾಣದಲ್ಲಿ ಇತರ ಸಾಹಿತ್ಯ ಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶಿಷ್ಟವಾದ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.
ಕನಕದಾಸರು ಇಹವನ್ನು ತ್ಯಜಿಸಿ, ಪರದತ್ತ ದಾಪುಗಾಲು ಹಾಕುವ ದಾರಿಯಲ್ಲಿ ತಮ್ಮ ಅನುಭವ-ಅನುಭಾವದ ಹೆಜ್ಜೆಗಳನ್ನು ಸಾಹಿತ್ಯಕ ಕೃತಿಗಳಲ್ಲಿ ಮೂಡಿಸಿದ್ದಾರೆ. ವಿಡಂಬನೆಯೇ ಕನಕದಾಸರ ಕಾವ್ಯಶಕ್ತಿಯ ಜೀವನೆಲೆ ಎಂದರೆ ಉತ್ಪೆçÃಕ್ಷೆಯಲ್ಲ. ವ್ಯಕ್ತಿನಿಷ್ಠವಾದ ಕನಕದಾಸರ ಕೀರ್ತನೆಗಳು ಅವರ ಅಂತರAಗದ ತುಮುಲ, ಭಕ್ತಿಯ ತೀವ್ರತೆಗಳ ಸರಳ ಸುಂದರ ಅಭಿವ್ಯಕ್ತಿಗಳಾಗಿವೆ. ಅವರ ಕೀರ್ತನೆಗಳಲ್ಲಿ ಕಂಡು ಬರುವ ತಾರ್ಕಿಕತೆ ಅತ್ಯದ್ಭುತವಾದುದು. ದಾಸರಿಗೆ ತಮ್ಮ ಸುತ್ತಣ ಜನಜೀವನದ ಬಗ್ಗೆ ಇರುವಂತೆಯೇ ತಮ್ಮ ಜನರ ಭಾಷೆಯ ಬಗ್ಗೆಯೂ ಎಚ್ಚರವಿರುವುದು ಮೆಚ್ಚಬೇಕಾದ ಸಂಗತಿ. ಜೀವನವನ್ನು ಕಂಡಿರುವ ಪುರಂದರ ದಾಸರ ಸಮಗ್ರದೃಷ್ಟಿ ಅವರ ಸೌಮ್ಯ ಮನೋಭಾವ.
ಅತೀಯತೆಗಳು ಕನಕದಾಸರಲ್ಲಿ ಆ ಮಟ್ಟದಲ್ಲಿ ಕಾಣುವುದಿಲ್ಲವಾದರೂ ತಮಗೆ ಅನ್ನಿಸಿದಂತೆಯೇ ಹೇಳುವ ಕನಕದಾಸರ ಕೆಚ್ಚು, ಅನ್ಯಾಯವನ್ನು ಪ್ರತಿಭಟಿಸುವ ಅವರ ಧೈರ್ಯ, ಭಗವದ್ಭಕ್ತಿಯ ಔನ್ನತ್ಯ, ಅವರು ಅರಿತು ಸಾರಿರುವ ವೈರಾಗ್ಯದ ನಿಜವಾದ ಅರ್ಥ, ಮಾನವ ಸ್ವಭಾವಗಳ ಆಳವಾದ ಅವರ ಗ್ರಹಿಕೆ, ಮನುಷ್ಯನ ಸಣ್ಣಬುದ್ಧಿಗಳನ್ನು ಕಂಡಾಗಿನ ಅವರ ನೋವು, ಅಂತಹವರನ್ನು ತಿದ್ದುವತ್ತ ಅವರ ಕಳಕಳಿ. ಇವೆಲ್ಲವನ್ನೂ ಹಿಂಜಿ, ಹಿಂಜಿ ಮತ್ತೆ ಕೇಳಿ ಜನಸಾಮಾನ್ಯರಿಗೆ ಮನದಟ್ಟು ಮಾಡಿಕೊಡುವ ರೀತಿ ಕನಕದಾಸರಿಗೆ ವಿಶಿಷ್ಟವಾದುದು. ಈ ದೃಷ್ಟಿಯಲ್ಲಿ ಹರಿದಾಸರಲ್ಲಿ ಅದ್ವಿತೀಯರು.
ಜಾತಿಕುಲಗಳ ವಿಚಾರದಲ್ಲಿ ಬಹಳ ಉದಾತ್ತ ಮನೋಭಾವವನ್ನು ವ್ಯಕ್ತಪಡಿಸಿರುವ ಕನಕದಾಸರು ಅಬ್ರಾಹ್ಮಣರಾಗಿ ಹುಟ್ಟಿದ್ದರಿಂದ ಅವರ ಸಾಮಾಜಿಕ ಸ್ಥಾನಮಾನಗಳು ಹೇಗಿದ್ದಿರಬಹುದೆಂಬುದಕ್ಕೆ ಉಡುಪಿಯಲ್ಲಿರುವ `ಕನಕನ ಕಿಂಡಿ’ಯ ಐತಿಹ್ಯ ಜೀವಂತ ಸಾಕ್ಷಿ. ದಾಸರ ಹೆಸರಿನಲ್ಲಿರುವ ಇಂದಿಗೂ ನಮ್ಮಲ್ಲಿ ಪ್ರಚಲಿತವಿರುವ `ಬಾಳೆಹಣ್ಣಿನ ಕಥೆ’ `ದೇವರನ್ನು ತೋರಿಸಿದ್ದು’, `ಕೋಣ ಮಂತ್ರದ ಸಿದ್ಧಿ’ ಇತ್ಯಾದಿ ಪವಾಡಗಳ ಒಂದು ಮುಖ ದಾಸರ ಸತ್ಯ, ಶಕ್ತಿ, ಶ್ರದ್ಧೆಗಳ ಪ್ರತೀಕವಾದರೆ ಇನ್ನೊಂದು ಮುಖ ಕುಹಕಿಗಳು ಅವರಿಗೆ ಕೊಡುತ್ತಿದ್ದ ನಾನಾ ರೀತಿಯ ಕಿರುಕುಳಗಳನ್ನು ವ್ಯಾಸರಾಯರಂತಹವರು ಕನಕನನ್ನು ಅವರಿಗೆ ಪರಿಚಯಿಸುತ್ತಿದ್ದ ರೀತಿಯನ್ನು ತಿಳಿಸುತ್ತದೆ. ರಾಜಕಾರಣದಲ್ಲಿ ಪ್ರಮುಖ ವ್ಯಕ್ತಿಗಳು, ಪರಮಭಕ್ತರು, ಕವಿಗಳು, ಶಾಸ್ತçವೇತ್ತರೂ, ಜ್ಞಾನಿಗಳು ಆಗಿದ್ದಂತಹ ಕನಕದಾಸರದೇ ಈ ಪರಿಸ್ಥಿತಿ ಆದರೆ ಇನ್ನು ಸಾಮಾನ್ಯರ ಬಗ್ಗೆ ಕುಲದ ಕಟ್ಟುಕಟ್ಟಲೆಗಳು ಹೇಗಿದ್ದಿರಬಹುದು? ಜನ ಅವರನ್ನು ನಡೆಸಿಕೊಂಡಿರಬಹುದಾದ ರೀತಿಗೆ ದಾಸರ ಚುರುಕು ಮೆಣಸಿನಕಾಯಿಯಂತಿರುವ ಕೀರ್ತನೆಗಳೇ ಉತ್ತರವನ್ನು ಕೊಡಬಲ್ಲವು.
- ಡಾ. ಗುರುರಾಜ ಪೋಶೆಟ್ಟಿಹಳ್ಳಿ
“ಕನ್ನಡದ ಮಟ್ಟಿಗೆ ಒಂದನೇ ಹಾಗೂ ಎರಡನೇ ಶತಮಾನದವರೆಗೆ ಹೋಗಿ ಒಂದು ಕಾದಂಬರಿಯನ್ನು ರಚಿಸಿರುವುದು ನಾನು ಮೊದಲು ಎಲ್...
“ಹೆಣ್ಣು ಮಗುವಿನ ಬಾಲ್ಯ ಮತ್ತು ಹದಿಹರೆಯದ ಸಂವೇದನಾಶೀಲತೆಗೆ ಸಿಕ್ಕ, ಸಂಕೀರ್ಣ ಸಮಾಜದ ಒಳನೋಟದ ಅನಾವರಣ ಇಲ್ಲಿದೆ....
"ನನಗೆ ತಿಳಿದ ಮಟ್ಟಿಗೆ ಕವಿತೆಯಲ್ಲಿ ಸೌಂದರ್ಯ ಮೀಮಾಂಸೆ (Aesthetics) ಇರಬೇಕು, ಜೊತೆಗೆ ವಿಚಾರ ಲಹರಿಯು ಸೇರಿರಬೇ...
©2024 Book Brahma Private Limited.