ಕೆ.ಆರ್.ಉಮಾದೇವಿ ಉರಾಳ 

Date: 18-04-2025

Location: ಬೆಂಗಳೂರು


"ವೆಂಕಣ್ಣಯ್ಯನವರಿಗೆ ಪ್ರಥಮ ರಾಷ್ಟ್ರ ಕವಿ ಕುವೆಂಪುರವರು ತಮ್ಮ ರಾಮಾಯಣ ದರ್ಶನಂಅನ್ನು ಅರ್ಪಣೆ ಮಾಡಿದ್ದರೆ, ತ.ಸು.ಶಾಮರಾಯರ ಶಿಷ್ಯ ಮತ್ತೋರ್ವ ರಾಷ್ಟ್ರಕವಿ ಜಿಎಸ್‌ಎಸ್‌ರವರು ತಮ್ಮ ಸುಪ್ರಸಿದ್ಧ ಭಾವಗೀತೆ "ಎದೆ ತುಂಬಿ ಹಾಡಿದೆನು..." ಇದನ್ನು ತಮ್ಮ ಗುರುಗಳ ಸನ್ನಿಧಿಗೆ ಸಮರ್ಪಿಸಿದ್ದಾರೆ. ಅಣ್ಣತಮ್ಮ ಇಬ್ಬರು ಕೂಡ ಇಬ್ಬರು ರಾಷ್ಟ್ರಕವಿಗಳಿಗೆ ಪ್ರೇರಕ ಶಕ್ತಿಯಾಗಿದ್ದವರು," ಎನ್ನುತ್ತಾರೆ ಕೆ.ಆರ್.ಉಮಾದೇವಿ ಉರಾಳ. ಅವರು ಟಿ.ಎಸ್ ಲಕ್ಷ್ಮೀದೇವಿ ಅವರ ‘ಸೃಜನಶೀಲರು’ ಕೃತಿ ಕುರಿತು ಬರೆದ ವಿಮರ್ಶೆ.

ಕನ್ನಡ ಸಾಹಿತ್ಯದ ಅಶ್ವಿನೀದೇವತೆಗಳಲ್ಲೊಬ್ಬರೆಂದು ಖ್ಯಾತರಾದವರು ಪ್ರೊ.ಟಿ.ಎಸ್.ವೆಂಕಣ್ಣಯ್ಯನವರು. ಅವರ ಸೋದರ ಪ್ರೊ.ತ.ಸು.ಶಾಮರಾಯರು ಕೂಡ ತಮ್ಮ ಹಿರಿಯಣ್ಣನ ಬಗ್ಗೆ ಅಪಾರವಾದ ಭಕ್ತಿ ಗೌರವಗಳನ್ನಿಟ್ಟುಕೊಂಡು ಅವರ ಜೀವನ ಪಥದಲ್ಲೇ ತಾವೂ ಸಾಗಿ ಬಂದವರು. ಈ ಸೋದರದ್ವಯರು ನುಡಿದಂತೆ ನಡೆದವರು. ಬರೆದಂತೆ ಬಾಳಿದವರು. ಮನ:ಶುದ್ಧಿಯ ಬಾಳು ಸಾಗಿಸಿದವರು. ಸಾಹಿತ್ಯದ ಓದು ನಮ್ಮನ್ನು ಇದ್ದ ಸ್ಥಿತಿಗಿಂತ ಮೇಲೆತ್ತುತ್ತದೆ, ನಮ್ಮ ಬುದ್ಧಿ, ಭಾವ, ಬಾಳನ್ನು ಪರಿಷ್ಕರಿಸುತ್ತದೆ ಎಂಬುದನ್ನು ನಾವು ನಂಬುವಾಗ, ಸಾಹಿತ್ಯದಲ್ಲಿ ಅಭಿವ್ಯಕ್ತಿಸಲು ಕೂಡ ಕಷ್ಟವೆನಿಸುವಂತಹ ಋಜುತ್ವದ ಬಾಳನ್ನು ಬಾಳಿದವರು ಈ ಸೋದರದ್ವಯರು. ಅಂದರೆ ಇವರ ಬದುಕು ಸಾರ್ವಕಾಲಿಕ ಚಿರಂತನ ಮೌಲ್ಯಗಳ ಅಭಿವ್ಯಕ್ತಿಯಾಗಿತ್ತು. ಲೇಖಕಿ ಶ್ರೀಮತಿ ಟಿ.ಎಸ್. ಲಕ್ಷ್ಮೀದೇವಿ ತಮ್ಮ ತಂದೆ ತ.ಸು.ಶಾಮರಾಯರು ಮತ್ತು ತಾಯಿ ಸುಬ್ಬುಲಕ್ಷ್ಮೀಯವರ ಕುರಿತು ಬರೆದ ಕೃತಿ "ಸೃಜನಶೀಲರು". ಇದಕ್ಕೆ "ಇದು ಥಳಕಿನ ಕಥೆಯಲ್ಲ, ತಳುಕಿನವರ ಕಥೆ" ಎಂಬ ಅಡಿ ಸಾಲು ಇದೆ. ಇದು ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯಿಂದ 2024ರಲ್ಲಿ ಪ್ರಕಟವಾದ 120 ಪುಟಗಳ ಕೃತಿ.

ವೆಂಕಣ್ಣಯ್ಯನವರಿಗೆ ಪ್ರಥಮ ರಾಷ್ಟ್ರ ಕವಿ ಕುವೆಂಪುರವರು ತಮ್ಮ ರಾಮಾಯಣ ದರ್ಶನಂಅನ್ನು ಅರ್ಪಣೆ ಮಾಡಿದ್ದರೆ, ತ.ಸು.ಶಾಮರಾಯರ ಶಿಷ್ಯ ಮತ್ತೋರ್ವ ರಾಷ್ಟ್ರಕವಿ ಜಿಎಸ್‌ಎಸ್‌ರವರು ತಮ್ಮ ಸುಪ್ರಸಿದ್ಧ ಭಾವಗೀತೆ "ಎದೆ ತುಂಬಿ ಹಾಡಿದೆನು..." ಇದನ್ನು ತಮ್ಮ ಗುರುಗಳ ಸನ್ನಿಧಿಗೆ ಸಮರ್ಪಿಸಿದ್ದಾರೆ. ಅಣ್ಣತಮ್ಮ ಇಬ್ಬರು ಕೂಡ ಇಬ್ಬರು ರಾಷ್ಟ್ರಕವಿಗಳಿಗೆ ಪ್ರೇರಕ ಶಕ್ತಿಯಾಗಿದ್ದವರು. ತಮ್ಮ ಕುಟುಂಬವನ್ನು ಬಂಧುಬಾಂಧವರಿಗೆ, ಕಷ್ಟ ಎಂದು ಬಂದವರಿಗೆ, ವಿಶೇಷವಾಗಿ ವಿದ್ಯಾರ್ಥಿ ವರ್ಗಕ್ಕೆ ತರತಮ ರಹಿತವಾಗಿ ಆಶ್ರಯ ತಾಣವಾಗಿಸಿದವರು. ತ.ಸು.ಶಾಮರಾಯರು ಬರೆದ "ಮೂರು ತಲೆಮಾರು" ಕೃತಿ 'ಕಂಡದ್ದು', ಕೇಳಿದ್ದು' ಹಾಗೂ 'ಅನುಭವಿಸಿದ್ದು' ಎಂಬ ಮೂರು ಭಾಗಗಳೊಂದಿಗೆ ಶ್ರೇಷ್ಠ ಮಾನವೀಯ ಗುಣಗಳ ಗಣಿಯೆಂಬಂತಿದ್ದ ಈ ಕುಟುಂಬದ ಮೂರು ತಲೆಮಾರುಗಳ ಜೀವನ ಚಿತ್ರಣ ಕಟ್ಟಿಕೊಡುವ ಅಪೂರ್ವ ಕೃತಿ. ಲಕ್ಷ್ಮೀದೇವಿ ಈಗಾಗಲೇ "ಗೌರಿ ಕಲ್ಯಾಣ' ಎಂಬ ಕಾದಂಬರಿಯನ್ನು ತೆಲುಗಿನಿಂದ ಕನ್ನಡಕ್ಕೆ ಸಮರ್ಥವಾಗಿ ಅನುವಾದ ಮಾಡಿ ಪ್ರಕಟಿಸಿರುವವರು. ಸಾಹಿತ್ಯ ಸಾಂಸ್ಕೃತಿಕ ಪರಂಪರೆಯ ಕುಡಿಯಾಗಿರುವ ಇವರ ನೆಚ್ಚಿನ ಹವ್ಯಾಸವೇ ಸಾಹಿತ್ಯದ ಓದು. ಇದರ ಫಲಶೃತಿಯಾಗಿ ತಣ್ಣಗೆ ಶಾಂತವಾಗಿ ಹರಿವ ತಿಳಿನೀರ ಹೊಳೆಯಂತೆ ಸುಲಲಿತವಾದ ಭಾಷಾ ಶೈಲಿಯಲ್ಲಿ ಈ ಕೃತಿಯಲ್ಲಿ ತಮ್ಮ ತಂದೆ ತಾಯಿ ದೊಡ್ಡಪ್ಪ- ಚಿರಂತನ ಮಾನವೀಯ ಮೌಲ್ಯಗಳನ್ನು ಯಾವುದೇ ಹೊರೆಯ ಭಾರವಿಲ್ಲದೆ, ಸಹಜ ಪ್ರೀತಿಯಿಂದ ಒಪ್ಪಿ ಅಪ್ಪಿ ಬಾಳಿದಂತಹ ಮರೆಯಬಾರದ ಮಹನೀಯರುಗಳನ್ನು ಲೇಖಕಿ ಎಲ್ಲೂ ಅತಿರಂಜಿತ ವರ್ಣನೆಗೆಡೆಗೊಡದೆ, ವಸ್ತುನಿಷ್ಠತೆಯಿಂದ ಅವರ ವ್ಯಕ್ತಿತ್ವ ಚಿತ್ರಣ ಕಡೆದಿರಿಸಿದ್ದಾರೆ.

ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ರವರ ಮುನ್ನುಡಿ ಹೊಂದಿರುವ 115 ಪುಟಗಳ ಈ ಕೃತಿಯಲ್ಲಿ ಮೊದಲಿಗೆ "ನನ್ನ ತಂದೆ ನಾ ಕಂಡಂತೆ" ಹಾಗೂ ಎಂಬತ್ತನೇ ಪುಟದಿಂದ "ನನ್ನ ಅಮ್ಮ" ಎಂಬ ಎರಡೇ ಅಧ್ಯಾಯಗಳು ಬಿಟ್ಟರೆ ಶೀರ್ಷಿಕೆ ಹೊತ್ತಿರುವ ಪ್ರತ್ಯೇಕ ಅಧ್ಯಾಯಗಳಿಲ್ಲ ಎಂಬುದೇ ನಿರಾಭರಣ ಸಹಜ ಸುಂದರಿಯಂತೆ ಈ ಪುಸ್ತಕದ ನಿರೂಪಣೆ ಇದೆ ಎಂಬುದಕ್ಕೊಂದು ನಿದರ್ಶನ. ಲೇಖಕಿ ತಮ್ಮ ಬಾಲ್ಯದಿಂದ ತಮ್ಮ ಅರಿವಿನ ವ್ಯಾಪ್ತಿಗೆ ಬಂದ ಕುಟುಂಬದ ಚಿತ್ರಣಗಳನ್ನು, ಕುಟುಂಬಸ್ಥರ ವಿವರಗಳನ್ನು, ವಿಶೇಷವಾಗಿ ತಂದೆ ಹಾಗೂ ತಾಯಿಯ ವ್ಯಕ್ತಿತ್ವ ಚಿತ್ರಣಗಳನ್ನು ಬಗೆಬಗೆಯ ಸನ್ನಿವೇಶ ಸಂದರ್ಭಗಳ ವಿವರಣೆಯ ಮೂಲಕ ಕಣ್ಣಿಗೆ ಕಟ್ಟಿದಂತೆ ಕಂಡರಿಸಿದ್ದಾರೆ. ಶಾಮರಾಯರ ಧಾರ್ಮಿಕ ಶ್ರದ್ಧೆ, ಎರಡನೇ ವಯಸ್ಸಿಗೇ ಪೋಲಿಯೋ ಪೀಡಿತಳಾದ ತನ್ನ ಬಗ್ಗೆ ಅವರಿಗಿದ್ದ ಅತಿಶಯ ಒಲವು, ತಾನು ಓದಿದ ಶಾಲೆಗಳು, ತಂದೆಯವರು ತನಗೆ ಒದಗಿಸಿದ್ದ ಸಂಗೀತಾಭ್ಯಾಸ, ಅನವಶ್ಯಕ ಖರ್ಚಿಗೆ ದುಂದು ವೆಚ್ಚಕ್ಕೆ ಯಾವುದೇ ಕಾರಣದಿಂದಲೂ ಕೈಬಿಚ್ಚಿ ದುಡ್ಡು ಕೊಡದ ನಿಷ್ಠುರ ಸ್ವಭಾವದ ಅದೇ ತಂದೆ ಯಾರೋ ಕಷ್ಟದಲ್ಲಿರುವವರಿಗೋ, ಶಿಷ್ಯರಿಗೋ ಸಹಾಯ ಮಾಡಬೇಕಿದ್ದಲ್ಲಿ ಹಿಂದುಮುಂದು ಯೋಚಿಸದೇ ತಕ್ಷಣವೇ ಮಾಡುವುದು, ಶ್ರೀರಾಮಕೃಷ್ಣರ ತತ್ವೋಪದೇಶಗಳಿಗೆ ಮಾರುಹೋದ ಅವರ ಭಕ್ತಿ, ಮನೆಗೆ ಬರುತ್ತಿದ್ದ ಅತಿಥಿಗಳಿಗೆ ಔತಣದೂಟ ಹಾಕಿಸುತ್ತಿದ್ದ ಆದರಾತಿಥ್ಯ, ಅವರ ಜಾತ್ಯತೀತ ಮನೋಭಾವವನ್ನು ಸ್ಪಷ್ಟಪಡಿಸುವ ಹಲವು ಪ್ರಸಂಗಗಳು ಇವನ್ನೆಲ್ಲ ಶಾಮರಾಯರ ಮತ್ತೊಂದು ಪ್ರಾಣದಂತೆ ಅವರಿಗೆ ಪ್ರಿಯಳಾಗಿದ್ದ ಮಗಳು ಲಕ್ಷ್ಮೀದೇವಿ ಸಮತೋಲನದ ನಿರೂಪಣಾ ಶೈಲಿಯಲ್ಲಿ ಅಭಿವ್ಯಕ್ತಿಸುತ್ತಾ ಹೋಗುತ್ತಾರೆ.

ಇಲ್ಲಿ ಕೇವಲ ತಮ್ಮ ತಂದೆಯವರ ಕುರಿತ ಪ್ರಶಂಸಾ ಮಹಾಪೂರ ಮಾತ್ರ ಇಲ್ಲ. ತಮ್ಮ ಮಡದಿ ಸುಬ್ಬುಲಕ್ಷ್ಮೀಯವರ ಕಷ್ಟಸುಖಗಳಿಗೆ ಸ್ಪಂದಿಸದಿರುವ ಅವರ ದೌರ್ಬಲದ ಕುರಿತೂ ನೊಂದುಕೊಂಡೇ ಹೇಳಿದ್ದಾರೆ. ಹಾಗೆಂದು ಪತ್ನಿಯ ಮೇಲೆ ಪ್ರೀತಿ ಇರಲಿಲ್ಲವೆಂದೂ ಅರ್ಥವಲ್ಲ. ಅವರ ಅನಾರೋಗ್ಯದ ಸಂದರ್ಭಗಳಲ್ಲಿ ಅವರಿಗೆ ತಕ್ಷಣವೇ ಚಿಕಿತ್ಸೆ ಕೊಡಿಸುವುದು, ತಾವೂ ನೋವು ಅನುಭವಿಸುವುದು, ಅವರ ಸೇವೆ ಮಾಡುವುದು ಮಾಡುತ್ತಿದ್ದರು. ಆಧ್ಯಾತ್ಮಿಕ ಶ್ರದ್ಧೆ ಹೊಂದಿದ್ದ ಶಾಮರಾಯರು ತಾವು ಕುಟುಂಬ ಸಮೇತ ಗುಬ್ಬಿಯ ಚಿದಂಬರಾಶ್ರಮಕ್ಕೆ ಹೋಗಿ ಅಲ್ಲಿ ನಿ:ಸ್ಪೃಹ ಸೇವೆ ಸಲ್ಲಿಸುತ್ತಾ ತಮ್ಮ ವಾನಪ್ರಸ್ಥಾಶ್ರಮ ಕಳೆಯಬೇಕೆಂದು ನಿಶ್ಚಯಿಸುತ್ತಾರೆ. ಆ ಸಂದರ್ಭದಲ್ಲಿ ಕುಟುಂಬದ ಹಲವು ಶುಭ ಸಂದರ್ಭಗಳಿಗೆ ಸಾಕ್ಷಿಯಾಗಿ, ಕುಟುಂಬಸ್ಥರೆಲ್ಲರ ಪ್ರೀತಿಗೆ ಪಾತ್ರವಾಗಿದ್ದ ಸ್ವಂತ ಮನೆಯನ್ನು ಮಾರಲು ಹೊರಟಾಗ, ಪತ್ನಿಯ ಪರಿಪರಿಯ ನಿವೇದನೆಗಳಿಗೂ ಕಿವುಡಾಗಿ ಮನೆಯನ್ನು ಮಾರಿ ಗುಬ್ಬಿಯ ಆಶ್ರಮದಲ್ಲಿ ನೆಲೆ ನಿಲ್ಲುತ್ತಾರೆ. ಆದರೆ ಹಾಲು ಮನದ ಇವರಿಗೆ ಅಲ್ಲಿನ ಹಾಲಾಹಲದ ಸಂಗತಿಗಳು ಅಲ್ಲಿಗೆ ಹೋದ ಮೇಲೆಯೇ ಅರಿವಿಗೆ ಬರುತ್ತವೆ. ಮುಂದೆ ಅಲ್ಲಿ ಇರಲಾಗದೆ ಮೈಸೂರಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸ ಪ್ರಾರಂಭಿಸುತ್ತಾರೆ. ತಂದೆಯವರ ಇಂತಹ ದುಡುಕು ನಿರ್ಧಾರಗಳ ಕುರಿತು ಕೂಡ ಲಕ್ಷ್ಮೀದೇವಿ ಯಥಾವತ್ ಚಿತ್ರಣದಂತೆ ಬರೆದಿದ್ದಾರೆ.

ಇವರ ಮನೆಗೆ ಬಂದು ಹೋಗುತ್ತಿದ್ದ ಸುಪ್ರಸಿದ್ಧರು ಅದೆಷ್ಟೋ ಮಂದಿ. ಡಾ.ಪ್ರಭುಶಂಕರ ಇವರಿಗೆ ಅತ್ಯಾಪ್ತರು. ಮೈಸೂರು ಬ್ರದರ್ಸ್ ಎಂದು ಖ್ಯಾತರಾಗಿದ್ದ ಸಂಗೀತ ವಿದ್ವಾಂಸರು ನಾಲ್ವರು, ಹರಿಕಥೆ ದಾಸರುಗಳು, ಇವರಿಂದ ರಾಜೋಪಚಾರ ಬಯಸಿ ವಾರಗಟ್ಟಳೇ ಉಳಿದು, ಹೋಗುವಾಗಲೂ ಕೈ ತುಂಬ ಕಾಣಿಕೆ ಬಯಸುತ್ತಿದ್ದ ಮುಂಗೋಪಿ ಸ್ವಾಮಿಯೊಬ್ಬರು, ಅಗಡಿ ಶೃಂಗೇರಿ ಗುಬ್ಬಿಯ ಸ್ವಾಮಿಗಳು ಬಂದು ಉಳಿಯುವುದು, ಶಾಮರಾಯರ ಶಿಷ್ಯರಾದ ಮಂತ್ರಿ ನಜೀರ್ ಸಾಬರು ಮನೆಗೆ ಬಂದು ತಮ್ಮ ಗುರುಗಳಿಗೆ ಸಲ್ಲಿಸುತ್ತಿದ್ದ ಗೌರವ, ಇನ್ನೋರ್ವ ಶಿಷ್ಯ ಮುಖ್ಯಮಂತ್ರಿ ಬಂಗಾರಪ್ಪನವರು ಮನೆಗೆ ಬಂದುದು, ಬೇಂದ್ರೆಯವರು, ವಿಶ್ವವಿದ್ಯಾಲಯಗಳ ಪ್ರೊಫೆಸರ್‌ಗಳು ಬರುತ್ತಿದ್ದುದು ಎಂದು ಇವರ ಮನೆಯೊಂದು ಅತಿಥಿ ಸತ್ಕಾರದ ತಾಣ. ಎಲ್ಲಾ ಹಬ್ಬಗಳ ಸಡಗರದ ಆಚರಣೆ.

ತ.ಸು.ಶಾಮರಾಯರ ಸಾಹಿತ್ಯ ಕೃಷಿಯ ಕುರಿತೂ ಲಕ್ಷ್ಮೀದೇವಿ ದಾಖಲಿಸಿದ್ದಾರೆ. ಇವರ ಕನ್ನಡ ನಾಟಕ ಮಹಾ ಪ್ರಬಂಧ ಓದಿದ ಕುವೆಂಪುರವರು ಈ ಕೃತಿಗೆ ಎರಡು ಡಾಕ್ಟರೇಟ್ ಕೊಡಬಹುದು ಎಂದರಂತೆ. ಇನ್ನೊಂದು ಮಹತ್ವಪೂರ್ಣ ಕೃತಿ "ಶಿವಶರಣರ ಕಥಾ ರತ್ನ ಕೋಶ". ಇವರು ಬರೆದ ಮಕ್ಕಳ ಸಾಹಿತ್ಯ, ವ್ಯಕ್ತಿಚಿತ್ರಗಳು, ಸಂಪಾದನೆ, ಕಾದಂಬರಿ ಎಲ್ಲವುಗಳನ್ನು ದಾಖಲಿಸಿದ್ದಾರೆ.

ಲೇಖಕಿ ಲಕ್ಷ್ಮೀದೇವಿಯವರ ತಾಯಿ ಸುಬ್ಬುಲಕ್ಷ್ಮಿಯವರು ತಮ್ಮ ಹತ್ತನೇ ವಯಸ್ಸಿಗೇ ತಮ್ಮ ಸೋದರಮಾವ ಶಾಮರಾಯರ ಪತ್ನಿಯಾಗಿ ಬಂದವರು. ಬಡತನ ಸಿರಿತನಗಳನ್ನು ಸಮಾನವಾಗಿ ಸ್ವೀಕರಿಸಿದವರು. ಬೀಸಿ ಕುಟ್ಟಿ ಉರಿವ ಒಲೆ ಮೇಲೆ ಅಡುಗೆ ಮಾಡುವ ದಿನಚರಿ. ಅತ್ಯಂತ ರುಚಿಕರವಾದ ಹಲವು ಖಾದ್ಯಗಳ ತಯಾರಿಯಲ್ಲಿ ನಿಷ್ಣಾತರಾದವರು. ಹಬ್ಬಹರಿದಿನಗಳು ಅತಿಥಿ ಸತ್ಕಾರ ಮಕ್ಕಳು ಮೊಮ್ಮಕ್ಕಳ ಲಾಲನೆ ಪಾಲನೆ ಎಂದು ತಮ್ಮ ತಾಯಿ ಅಡುಗೆ ಮನೆಯನ್ನೇ ವಿವಾಹವಾದವರು ಎನ್ನುತ್ತಾರೆ ಲೇಖಕಿ ಮಗಳು. ಇಷ್ಟಾದರೂ ಸದಾ ಹಸನ್ಮುಖಿ ತಾಯಿಯಿಂದ ಯಾವುದರ ಕುರಿತೂ ಆಕ್ಷೇಪವಿಲ್ಲ. ಯಾರೊಬ್ಬರನ್ನೂ ದೂರಿಯೇ ಗೊತ್ತಿಲ್ಲದವರು. ಕಷ್ಟ ಸಹಿಷ್ಣುತೆ, ಔದಾರ್ಯ, ನಿಷ್ಪಕ್ಷಪಾತಿ ಮನೋಭಾವ, ಪರೇಂಗಿತಜ್ಞತೆ ಅವರ ನೈಜ ಗುಣಗಳು ಎನ್ನುತ್ತಾರೆ ಮಗಳು. ನಿಜ, ಬಾಳಿನ ಒಲೆಯಲ್ಲಿ ಪ್ರಜ್ವಲಿಸುವ ಬೆಂಕಿಯೇ ತಾನಾಗಿ ಉರಿದು ಬೇಯಿಸಿದ ಪಕ್ವಾನ್ನಗಳನ್ನು ಪರರಿಗೆ ಬಡಿಸಿದಂತಹ ನಿ:ಸ್ಪೃಹ ವ್ಯಕ್ತಿತ್ವದವರವರು.

ಕೃತಿಯಲ್ಲಿ ಒಂದೆಡೆ "ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ"ಯ ಸಾವಿರಾರು ಪುಸ್ತಕಗಳನ್ನು ಮಾರಿಸಿ ಕೊಟ್ಟಿದ್ದ ತಮ್ಮ ತಂದೆಯ ಸ್ನೇಹಿತರ ಕುರಿತು "ಆಗ ಜನಗಳಿರುತ್ತಿದ್ದುದೇ ಹಾಗೆ. ಉದಾರತನ, ಪ್ರೀತಿ, ವಾತ್ಸಲ್ಯ, ಗೌರವ, ಉಪಕಾರ ಸ್ಮರಣೆ ಇತ್ಯಾದಿಗಳು ಆಗಿನ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು." ಎನ್ನುತ್ತಾರೆ ಲೇಖಕಿ. ಕಳೆದ ಶತಮಾನದ ಒಂದು ಕಾಲಘಟ್ಟದ ಜನರು ಪೋಷಿಸಿಕೊಂಡು ಬಂದಿದ್ದ ಮಾನವೀಯ ಮೌಲ್ಯಗಳ ಅನಾವರಣ ಇಂತಹ ಸಂದರ್ಭಗಳಲ್ಲಿ ಈ ಕೃತಿಯಲ್ಲಿ ಮೇಲಿಂದಮೇಲೆ ಆಗುತ್ತದೆ. ಇದರ ಓದು ಮನ:ಶುದ್ಧಿಯ ಭಾವ ಕೊಡುತ್ತದೆ. ಇಂದು ಅಂದಿನ ಜನ, ದಿನ, ಮನ ಇಲ್ಲದಿರಬಹುದು. ಚಿರಸ್ಥಾಯಿಯಾದ ಆ ಮೌಲ್ಯಗಳನ್ನು ನಮ್ಮ ಕೈಲಾದಮಟ್ಟಿಗಾದರೂ ನಾವೂ ಮಾಡಲಾರೆವೇ ಎಂಬ ಭಾವ ಈ ಪುಸ್ತಕದ ಓದಿನಿಂದ ಮೂಡದಿರದು.

 

 

MORE NEWS

‘ಈ ಹೊತ್ತಿಗೆ’ ೧೨ನೇ ವಾರ್ಷಿಕೋತ್ಸವ ‘ಹೊನಲು’ ಮಾರ್ಚ್ ೯ರಂದು ಬೆಂಗಳೂರಿನಲ್ಲಿ

07-03-2025 ಬೆಂಗಳೂರು

ಬೆಂಗಳೂರು: ‘ಈ ಹೊತ್ತಿಗೆ’ ಮಾಸಪತ್ರಿಕೆಯ ೧೨ನೇ ವಾರ್ಷಿಕೋತ್ಸವ ‘ಹೊನಲು’ ಕಾರ್ಯಕ್ರಮ ಜೆ ...

MBIFL-2025; ಅಫ್ಘಾನಿಸ್ತಾನ ಚೀನಾ ದೃಢ ಹೆಜ್ಜೆ; ಭಾರತದ ಪಾಲಿಗೆ ನುಂಗಲಾರದ ತುತ್ತು

08-02-2025 ತಿರುವನಂತಪುರ

`ಬುಕ್ ಬ್ರಹ್ಮ’ ವಿಶೇಷ ವರದಿ ತಿರುವನಂತಪುರ: ೨೦೨೧ರ ಆಗಸ್ಟ್ ೮ ರಿಂದ ೧೭ರ ಅವಧಿಯಲ್ಲಿ ಅಫ್ಘಾನಿಸ್ತಾನ ಸರ್ಕಾ...

ನೆನಪಿನ ಪುಟಗಳನ್ನು ಸದ್ದಿಲ್ಲದೆ ತಿರುವಿ ಹಾಕಿತು

25-01-2025 ಬೆಂಗಳೂರು

“ಈ ಕತೆಯನ್ನು ಹೇಳಲು ಲೇಖಕರು ಬಳಸಿದ ಬಾಷೆ ಅತ್ಯಂತ ಆಪ್ತವಾಗಿದೆ. ಬಹುತೇಕ ಪಾತ್ರಗಳ ನಡುವಿನ ಸಂವಾದಗಳಲ್ಲೇ ಸಾಗುವ...