‘ಹಳ್ಳಿಯ ಹತ್ತು ಸಮಸ್ತರು’ ಕೆ. ಶಿವರಾಮ ಕಾರಂತರು ಬರೆದ ಹರಟೆಗಳ ಸಂಕಲನ. ಇಲ್ಲಿಯ ಬರಹಗಳಲ್ಲಿ ಗ್ರಾಮೀಣ ವ್ಯಕ್ತಿಗಳ ಚಿತ್ರಗಳಿವೆ. ಸ್ವಾತಂತ್ರ್ಯದ ಬಾಗಿಲು ತೆರೆಯುವ ಹೊತ್ತಿಗೆ ಕೋಟ ಗ್ರಾಮ, ಸಮುದಾಯದ ಪರಿಸರ, ಪರಿಸ್ಥಿತಿ ಮತ್ತು ಜೀವನದ ಇಣುಕು ನೋಟವನ್ನು ಈ ಕೃತಿ ನೀಡುತ್ತದೆ.
ಈ ಬರಹಗಳು ‘ಸ್ವದೇಶಾಭಿಮಾನಿ” ವಾರಪತ್ರಿಕೆಯಲ್ಲಿ( 17-02-1939 ರಿಂದ 02-06-1939) ಪ್ರಕಟವಾಗಿದ್ದವು. ಚಿತ್ರ ವಾಸ್ತವಿಕವಾಗಲು ಅದರಲ್ಲಿ ಜಾತಿ, ರೀತಿಗಳ ಉಲ್ಲೇಖವಾಗಿದೆಯಾದರೂ, ಯಾವ ಜಾತಿಯವರನ್ನೂ ಕೀಳು ಎಂದು ತಿಳಿಯುವ ಮನೋಭಾವ ನನ್ನದಲ್ಲ ಎನ್ನುತ್ತಾರೆ ಲೇಖಕ ಕಾರಂತರು. ನಾವೆಲ್ಲರೂ ಭಾರತದ ಗ್ರಾಮಗಳಲ್ಲಿರುವ ಮನುಷ್ಯ ವರ್ಗಕ್ಕೆ ಸೇರಿದವರು. ಎಲ್ಲ ಜಾತಿಯವರಲ್ಲೂ ಕಾಣಿಸ ಬಹುದಾದ ಒಳಿತು, ಕೆಡಕುಗಳು ಇಲ್ಲಿವೆ ಎಂಬುದು ಅವರ ಮಾತು. ಒಳಿತು, ಸರಳತೆ, ಪ್ರಾಮಾಣಿಕತೆ - ಯಾರಲ್ಲಿದ್ದರೂ ಮಾನ್ಯ. ಕುಟೀಲತೆ, ಕಪಟ, ವಂಚನೆ ಯಾರಲ್ಲಿದ್ದರೂ ಅಮಾನ್ಯವೇ ಎನ್ನುತ್ತಾ, ತಾವು ಬದುಕಿದ ಕಾಲಘಟ್ಟದ ಗ್ರಾಮೀಣ ಬದುಕುಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಸೀತೈತಾಳರು, ನಾಗಯ್ಯ ಶೆಟ್ಟರು, ಜನ್ನ ಪೈಗಳು, ಮೀಸೆ ಸುಬ್ಬ, ಮೊಗೇರ ಅಣ್ಣ, ಅಕ್ಕಸಾಲಿ ತಿಮ್ಮಪ್ಪ, ಪಾಟಾಳಿ ಪರಮಯ್ಯ, ಅಕ್ಕಣಿ ಹೆಂಗಸು, ಚನ್ನ ಮಯ್ಯರು, ಗಾಣದ ಸಂಕಪ್ಪ, ಶ್ಯಾನುಭಾಗ ಭವಾನಿರಾಯರು, ಕೂಸ ಮಡೂರ, ಜುವಾಂ ಸೋಜರು, ಮೂಸೆ ಬ್ಯಾರಿ, ರೂರಲ್ ಆಸ್ಪತ್ರೆ ರಾಮರಾಯರು, ಪ್ರಸ್ತಾವನೆ ಅಥವಾ ಚುನಾವಣೆ ಹೀಗೆ 16 ಹರಟೆಗಳಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶಿವರಾಮ ಕಾರಂತರು ಈ ಕೃತಿಯನ್ನು 1944ರಲ್ಲಿ (ಪುಟ: 112) ಪ್ರಕಾಶಿಸಿದ್ದರು.
©2024 Book Brahma Private Limited.