ಲೇಖಕಿ ನಳಿನಿ ಟಿ. ಭಿಮಪ್ಪ ಅವರ ’ಒಂದು ಕಪ್ ಕಾಫಿ’ ಕೃತಿಯು ಅಂಕಣ ಬರಹವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಸಂತೋಷಕುಮಾರ ಮೆಹೆಂದಳೆ ಅವರು, ಪ್ರತೀ ಬರಹವೂ ಒಂದು ಅಕ್ಷರಕಾವ್ಯ. ಈ ಪುಸ್ತಕದಲ್ಲಿ ಎಲ್ಲ ಲೇಖನಗಳೂ ಆಯಾ ವಿಷಯದ ಜೊತೆಗೆ ಆಯಾ ಕಾಲಘಟ್ಟದ ಕಥಾನಕವನ್ನೂ ಪರಿಚಯಿಸುವ ಅಚ್ಚರಿಯೊಂದಿಗೆ, ಬರಹದ ಹರವು ಚಿಕ್ಕ ಚಿಕ್ಕ ಸಾಲುಗಳಲ್ಲೂ ಅವಿರತವಾದ ವಸ್ತು ನಿಷ್ಠತೆಯನ್ನು ಹೊಂದಿರುವುದು ಮತ್ತು ಓದುವಾಗ ದೃಶ್ಯ ಮಾಧ್ಯಮದಲ್ಲಿ ಕಣ್ಣೆದುರಿಗೆ ಚಲಿಸುವಂತೆ ಬರೆದಿರುವುದು ಗಮನೀಯ ಅಂಶವಾಗಿದೆ.
ವೃತ್ತಿಪರರಂತೆ ಗಟ್ಟಿಯಾಗಿ ಬರಹದ ಮೇಲೆ ಹಿಡಿತ ಸಾಧಿಸಿ ಬರೆಯುತ್ತ ಬರೆಯುತ್ತಾ ವಿಷಯವನ್ನೆಲ್ಲ ಆವಾಹಿಸಿಕೊಳ್ಳುವಂತೆ ಆಳಕ್ಕಿಳಿದು ಬಿಡಬಲ್ಲ ಬರಹಗಾರ್ತಿ ನಳಿನಿ ಭೀಮಪ್ಪ, ಬರಲಿರುವ ದಿನಗಳಲ್ಲಿ ಬರಹದ ಕಸುಬುದಾರಿಕೆಯ ಸ್ಪಷ್ಟ ಸೂಚನೆಯನ್ನು ಇಲ್ಲಿನ ಬರಹಗಳಲ್ಲಿ ತೋರಿದ್ದಾರೆ. ಸಹಜ ಬರವಣಿಗೆಗೆ ಇಳಿದಿದ್ದರೂ ವೃತ್ತಿಪರ ಬರಹಗಾರರ ಸೆಳಕುಗಳು ಇಲ್ಲಿವೆ. ಮನುಷ್ಯನ ಪ್ರತಿ ನಡೆಯೂ ಅನುಭವ ಜನ್ಯವೇ. ಮನಸ್ಸಿನ ಗಾಢತೆಯ ಮೇಲೆ ಅಚ್ಚೊತ್ತಿದ್ದನ್ನು ಅನಾವರಣಗೊಳಿಸುತ್ತಾ ಅಭಿವ್ಯಕ್ತಿಸುವ ಕಲೆ ಇವರಿಗೆ ಒಲಿದಿದೆ. ಶಬ್ದ ದಾರಿದ್ರವಿಲ್ಲದ, ನಿರಂತರವಾಗಿ ಬರಹವನ್ನು ಪ್ರವಹಿಸುವಂತೆ ಬರೆಯಬಲ್ಲ ಹಿಡಿತ ಸಾಧಿಸಿದೆ. ವಿಷಯವೊಂದನ್ನು ಕ್ಯಾನ್ವಾಸಿನಂತೆ ಹರಡಿಕೊಂಡು ಅಕ್ಷರ ಚಿತ್ತಾರ ರೂಪಿಸುವಲ್ಲಿ ವಹಿಸುವ ಆಸ್ಥೆ ಬರಹಗಳನ್ನು ಚೆಂದಗೊಳಿಸುತ್ತವೆ. ಹಾಗಾಗಿ, ನಿರ್ದಿಷ್ಟ ವಿಷಯಕ್ಕೆ ಬರೆಯಲು ಕ್ರಮಿಸುತ್ತಿದ್ದಂತೆ ವಿಷಯವನ್ನು ವಿಷದೀಕರಿಸುವ ಪರಿ ಚೆಂದ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.